ಕೃಷ್ಣ ಭಟ್ ಅಳದಂಗಡಿ- motivational story
ಒಬ್ಬರು ಪ್ರಕಾಂಡ ವಿದ್ವಾಂಸರಿದ್ದರು. ಹತ್ತಾರು ಊರುಗಳಲ್ಲಿ ಅವರ ಪ್ರವಚನಗಳಿಗೆ ಭಾರಿ ಬೆಲೆ ಇತ್ತು. ಜನರು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಿದ್ದರು. ಪುರಾಣಗಳ ಕಥೆಗಳನ್ನು ಸಮಕಾಲೀನ ನೆಲೆಗಳಿಗೆ ವಿಸ್ತರಿಸಿ ಜನರಿಗೆ ಒಳಿತು-ಕೆಡುಕಿನ ಬಗ್ಗೆ ಬೋಧನೆ ಮಾಡುವುದು ಅವರ ವಿಶೇಷ. ಸಾಲದ್ದಕ್ಕೆ ತಾವು ಕೂಡಾ ಉನ್ನತ ಮೌಲ್ಯಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು.
ಒಂದು ಸಾರಿ ಅವರಿಗೆ ಪಟ್ಟಣದ ಸಮೀಪದ ಒಂದು ಊರಿನಿಂದ ಪ್ರವಚನಕ್ಕೆ ಕರೆಬಂದಿತ್ತು. ಹೀಗೆ ಪ್ರವಚನಕ್ಕೆ ಕರೆಬಂದರೆ ದೊಡ್ಡ ಮೊತ್ತ ಕೇಳುವವರಲ್ಲ ಅವರು. ಹಾಗಾಗಿ ಬಸ್ಸಿನಲ್ಲೇ ಹೋಗಿಬಿಡುತ್ತಿದ್ದರು. ಹಾಗೆ ಬಸ್ಸು ಹತ್ತಿ ಸೀಟೊಂದನ್ನು ಹಿಡಿದು ಕುಳಿತರು. ಸ್ವಲ್ಪಹೊತ್ತಿನಲ್ಲಿ ಬಸ್ಸು ಹೊರಟಿತು. ಕಂಡಕ್ಟರ್ ಟಿಕೆಟ್ ಕೊಡಲು ಆರಂಭಿಸಿದ. ಆಚಾರ್ಯರು ಹಣ ನೀಡಿದರು. ಕಂಡಕ್ಟರ್ ಟಿಕೆಟ್ ಮತ್ತು ಬಾಕಿ ಹಣವನ್ನು ವಾಪಸ್ ನೀಡಿದ.
ಆಚಾರ್ಯರು ಎಣಿಸಿ ನೋಡಿದರೆ ಹತ್ತು ರೂಪಾಯಿ ಹೆಚ್ಚು ಬಂದಿತ್ತು. ಕಂಡಕ್ಟರ್ ಟಿಕೆಟ್ ಮಾಡಿಕೊಂಡು ವಾಪಸ್ ಬರುವಾಗ ಕೊಡಬೇಕು ಎಂದುಕೊಂಡರು ರಾಯರು.
ಆದರೆ, ಸ್ವಲ್ಪ ಹೊತ್ತು ಹಾಗೇ ಕುಳಿತಿದ್ದಾಗ ಮತ್ತೆ ಯೋಚನೆ ಮಾಡಿದರು: `ʻನಾನು ಸಣ್ಣ ಹತ್ತು ರೂಪಾಯಿಯ ಬಗ್ಗೆ ಅನಗತ್ಯವಾಗಿ ಯೋಚನೆ ಮಾಡುತ್ತಿದ್ದೇನೆ ಅಲ್ವಾ? ಅಷ್ಟಕ್ಕೂ ಈ ಬಸ್ ಕಂಪನಿಗಳು ದೊಡ್ಡ ಲಾಭ ಮಾಡುತ್ತವೆ. ಕಂಡಕ್ಟರ್ ಗಳೇನು ದುಡ್ಡು ಹೊಡೆಯೋದು ಕಡಿಮೇನಾ’ ಎಂದೆಲ್ಲ ಯೋಚಿಸಿ, ದುಡ್ಡು ಹಿಂದಿರುಗಿಸದಿದ್ದರೆ ಏನಾಗ್ತದೆ ಎಂದು ಲೆಕ್ಕ ಹಾಕಿದರು.
ಹಾಗಾಗಿ, ʻಇದು ದೇವರೇ ಕೊಟ್ಟ ಹಣ ಅಂತ ಇಟ್ಕೊಳ್ತೇನೆ. ಇದನ್ನು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಬಳಸಿದರೆ ಆಯಿತು ಅಷ್ಟೇ ಅಲ್ವಾ?’ ಎಂದು ಯೋಚಿಸುತ್ತಾ ಕೈಯಲ್ಲಿದ್ದ 10 ರೂ. ನೋಟನ್ನು ಜೇಬಿಗೆ ತುರುಕಿಕೊಡರು.
ಅಷ್ಟು ಹೊತ್ತಿಗೆ ಬಸ್ಸು ಅವರು ಇಳಿಯಬೇಕಾಗಿದ್ದ ಊರಿನ ಬಸ್ ನಿಲ್ದಾಣವನ್ನು ತಲುಪಿತು. ಕಂಡಕ್ಟರ್ ಯಾರ‍್ರೀ ಇಳಿಯೋರು ಅಂದ. ರಾಯರು ತಮ್ಮ ಧೋತರವನ್ನು ಸರಿ ಮಾಡಿಕೊಂಡು ಜುಬ್ಬಾವನ್ನೊಮ್ಮೆ ಸವರಿಕೊಂಡು ಇಳಿದರು. ಎರಡೇ ಹೆಜ್ಜೆ ಇಟ್ಟದ್ದು, ಅವರ ಮನಸ್ಸು ಒಮ್ಮೆಲೇ ಜಗ್ಗಿದಂತಾಯ್ತು. ಕೂಡಲೇ ಅವರು ಜುಬ್ಬಾದ ಜೇಬಿಗೆ ಕೈ ಹಾಕಿ ಹತ್ತು ರೂಪಾಯಿ ತೆಗೆದರು. ಅಷ್ಟು ಹೊತ್ತಿಗೆ ಬಸ್ ಮುಂದಿನ ಪಯಣಕ್ಕೆ ಹೊರಟಿತ್ತು. ಆದರೂ ಆಚಾರ್ಯರು ಕಂಡಕ್ಟ್ರೇ ಎಂದು ಕೂಗಿ ಕರೆದರು. `ʻನೋಡಿ ಸ್ವಾಮಿ.. ನೀವು ಹತ್ತು ರೂ. ಹೆಚ್ಚು ಕೊಟ್ಟಿದ್ದೀರಿ. ವಾಪಸ್ ತಗೊಳ್ಳಿ” ಅಂತ ಹೇಳುತ್ತಾ ಬಸ್ಸಿನ ಕಡೆಗೆ ಹೋದರು.
ಅವರತ್ತ ಬಂದವನೇ ಕಂಡಕ್ಟರ್ ಅವರ ಕಾಲಿಗೆ ಬಿದ್ದ. ಎದ್ದು ನಿಂತು ಕೇಳಿದ: ನೀವು ಪ್ರವಚನ ನೀಡುವ ವಿಶ್ವನಾಥ ಆಚಾರ್ಯರಲ್ಲವೇ?
ಆಚಾರ್ಯರು: ಹೌದಪ್ಪಾ ಎಂದರು.
ಆಚಾರ್ಯರೇ ನಾನು ನಿಮ್ಮ ಬಗ್ಗೆ ತುಂಬ ಕೇಳಿದ್ದೇನೆ. ನಿಮ್ಮ ಪ್ರವಚನಗಳನ್ನು ನೇರವಾಗಿ ಮತ್ತು ಯೂಟ್ಯೂಬ್‍ಗಳಲ್ಲಿ ನೋಡಿದ್ದೇನೆ. ನಿಮ್ಮ ಬಗ್ಗೆ ಗೌರವಾದರ ನಂಗೆ. ಇವತ್ತು ಬಸ್ಸಿಗೆ ಹತ್ತಿದಾಗಲೇ ನೀವೇ ಅನಿಸಿತು. ಅದರ ನಡುವೆಯೇ ಒಂದು ಸಣ್ಣ ಬುದ್ಧಿ ತೋರಿಸಿದೆ. ನಿಮಗೆ ಹತ್ತು ರೂಪಾಯಿ ಜಾಸ್ತಿ ಕೊಡೋಣ. ಪ್ರಾಮಾಣಿಕತೆಯ ಬಗ್ಗೆ ತುಂಬ ಚೆನ್ನಾಗಿ ಹೇಳುತ್ತಾರಲ್ಲಾ.. ಏನು ಮಾಡುತ್ತಾರೆ ನೋಡೋಣ ಅಂತ ಅಂದುಕೊಂಡೆ. ಈಗ ನೀವು ಅದನ್ನು ಹಿಂದೆ ಕೊಟ್ಟಿದ್ದು ನೋಡಿ ನಿಮ್ಮ ಮೇಲಿನ ಅಭಿಮಾನ ಇನ್ನೂ ಹೆಚ್ಚಾಯಿತು. ನೀವು ಕೇವಲ ಮಾತಿನಲ್ಲಿ ಏನೋ ಹೇಳಿ, ಹೇಗೋ ಬದುಕುವವರಲ್ಲ ಎನ್ನುವುದು ನಂಗೆ ಸ್ಪಷ್ಟವಾಯಿತು. ನಿಮ್ಮನ್ನು ಪರೀಕ್ಷೆ ಮಾಡಿದ ಸಣ್ಣಬುದ್ಧಿಯನ್ನು ಕ್ಷಮಿಸಬೇಕು ಗುರುಗಳೇ: ಕಂಡಕ್ಟರ್ ಹೇಳಿದ.
ಆಚಾರ್ಯರಿಗೆ ನಿಂತಲ್ಲೇ ಬೆವರಲು ಆರಂಭವಾಯಿತು, ಕೈಕಾಲು ನಡುಗಿತು. ಎರಡೂ ಕೈಗಳನ್ನು ಎತ್ತಿ ದೇವರಿಗೆ ನಮಸ್ಕರಿಸಿದರು. ದೇವರೇ ನಾನು ಹತ್ತು ರೂಪಾಯಿ ಅಲ್ವಾ ಅಂತ ಎಷ್ಟು ಕ್ಷುಲ್ಲಕವಾಗಿ ಯೋಚಿಸಿದೆ. ಅದುವೇ ನನ್ನ ಗೌರವದ ಮಾನದಂಡವಾಗಿ ಹೋಯ್ತಲ್ಲ. ದೇವರೆ ನನಗೆ ಸರಿಯಾದ ಹೊತ್ತಿನಲ್ಲಿ ಜ್ಞಾನೋದಯ ಆಗುವಂತೆ ಮಾಡಿದೆಯಲ್ಲ.. ನಿನ್ನ ಮಹಿಮೆ ಅಪಾರ ತಂದೆ ಎಂದು ಹೇಳುತ್ತಾ ದೇವಸ್ಥಾನದತ್ತ ನಡೆದರು.
ಕಂಡಕ್ಟರ್ ಇಡೀ ಬಸ್ಸಿಗೆ ಕೇಳುವಂತೆ ಹೇಳುತ್ತಿದ್ದ: ಆ ಆಚಾರ್ಯರಿದ್ದಾರಲ್ಲಾ.. ಭಾರಿ ಪ್ರಾಮಾಣಿಕ ಮನುಷ್ಯ..
ಇದನ್ನೂ ಓದಿ | Motivational story | ಒಂದಿಡೀ ತಿಂಗಳು ಸತ್ಸಂಗದ ಪ್ರವಚನ ಕೇಳಿದ ಅವರಿಗೆ ಕಿವಿಯೇ ಕೇಳಿಸುತ್ತಿರಲಿಲ್ಲ!