ಅವಳ ಹೆಸರು ಅವನಿ ಲೇಖರ (Avani Lekhara). ಮಗಳಿದ್ದರೆ ಅವಳ ಹಾಗೆಯೇ ಇರಬೇಕು ಎಂದು ಇಂದು ನೂರಾರು ಅಪ್ಪಂದಿರು ಕನಸು ಕಾಣುತ್ತಿದ್ದಾರೆ! ಆಕೆ ತನ್ನ ದೈಹಿಕ ಅಸಾಮರ್ಥ್ಯದ ನಡುವೆ ಕೂಡ ಆಕೆ ಪಾರಾ ಒಲಿಂಪಿಕ್ಸ್‌ನಲ್ಲಿ (Para Olympics) ಅವಳಿ ಪದಕ ಗೆದ್ದಿದ್ದಾರೆ! ಮಹಿಳಾ ವಿಶ್ವಕಪ್ ಶೂಟಿಂಗ್ (women World cup Shooting) ವಿಭಾಗದಲ್ಲಿ ಎರಡು ಚಿನ್ನ, ಒಂದು ಬೆಳ್ಳಿ ಪದಕ ಅವರ ಮುಡಿಗೆ ಏರಿದೆ! (ರಾಜ ಮಾರ್ಗ ಅಂಕಣ)
2020ರ ಟೋಕಿಯೋ ಪಾರಾ ಒಲಿಂಪಿಕ್ಸ್ (2020 Tokyo Para olympics) ನಡೆಯುವವರೆಗೂ ಈ ಸ್ಮಾರ್ಟ್ ಹುಡುಗಿ ಯಾರೆಂದು ಯಾರಿಗೂ ಗೊತ್ತಿರಲಿಲ್ಲ! ಆದರೆ ಇಂದು ಪ್ರತಿಯೊಬ್ಬ ತಂದೆ ಕೂಡ ಮಗಳಿದ್ದರೆ ಅವಳ ಹಾಗೆ ಇರಬೇಕು ಎಂದು ಆಸೆ ಪಡಲು ಆರಂಭ ಮಾಡಿದ್ದಾರೆ!
ನಮಗೆಲ್ಲ ತಿಳಿದಿರುವಂತೆ 2020ರ ಟೋಕಿಯೋ ಒಲಿಂಪಿಕ್ಸ್ ಕೂಟವು ಮುಗಿದು ಹತ್ತು ದಿನಗಳ ಅಂತರದಲ್ಲಿ ಅದೇ ಕ್ರೀಡಾಂಗಣದಲ್ಲಿ ಪಾರಾ ಒಲಿಂಪಿಕ್ಸ್ ಕೂಟವು ಆರಂಭ ಆಗಿತ್ತು. ನಿಜಕ್ಕಾದರೆ ವಿಶೇಷ ಚೇತನ ಸಾಧಕರ ಕ್ರೀಡಾ ಅನುಪಮ ಸಾಧನೆಗಳು ಮಾಧ್ಯಮಗಳಲ್ಲಿ ತುಂಬಾ ಪ್ರಚಾರವನ್ನು ಪಡೆಯಬೇಕಿತ್ತು.
ಆದರೆ ಅದು TRP ಸರಕು ಅಲ್ಲದ ಕಾರಣ ಪಾರಾ ಕ್ರೀಡೆಗೆ ಪ್ರಚಾರವು ದೊರೆಯಲಿಲ್ಲ! ಅಂತಹ ಸಾಧಕರ ದೊಡ್ಡ ದೊಡ್ಡ ಸಾಧನೆಗಳು ಯಾರ ಗಮನವನ್ನು ಕೂಡ ಸೆಳೆಯಲಿಲ್ಲ! ಹಾಗೆ ನಿರ್ಲಕ್ಷ ಮಾಡಿದವರ ಧಿಮಾಕು ಕರಗಿಸುವ ರೀತಿ ಅವನಿ ಗೆದ್ದು ಬಂದಿದ್ದಾರೆ!
ಹೇಗಿದ್ದ ಹುಡುಗಿ ಇವಳು!
ಅವನಿ ಜೈಪುರದಲ್ಲಿ ಹುಟ್ಟುವಾಗ ನಮ್ಮ ನಿಮ್ಮ ಹಾಗೆ ಇದ್ದರು. ಛಬ್ಬಿ ಛಬ್ಬಿ ಕ್ಯೂಟ್ ಗರ್ಲ್! ಮಧ್ಯಮ ವರ್ಗದ ಕುಟುಂಬ ಆದರೂ ಪ್ರೀತಿಯ ಕೊರತೆ ಒಂದಿಷ್ಟು ಕೂಡ ಇರಲಿಲ್ಲ. ಒಂದಿಷ್ಟು ಗೆಳೆಯರು, ಗೆಳತಿಯರು, ರಾಶಿ ರಾಶಿ ಕನಸುಗಳು, ಪುಟಿಯುವ ಉತ್ಸಾಹ ಅಂದ್ರೆ ಅದು ಅವನಿ! ಆದರೆ ಹನ್ನೊಂದನೇ ವಯಸ್ಸಿಗೆ ಆದ ಒಂದು ಕಾರು ಅಪಘಾತವು ಅವಳ ಉತ್ಸಾಹವನ್ನು ಖಾಲಿ ಮಾಡಿತು!
ಅದು ಪಾರಾಪ್ಲೇಜಿಯ ಸ್ಥಿತಿ! ಕಲ್ಪನೆ ಮಾಡಲು ಕೂಡ ಭಯ ಪಡುವ ದೈಹಿಕ ಸ್ಥಿತಿ! ಬೆನ್ನು ಮೂಳೆಗೆ ತೀವ್ರ ಘಾಸಿ ಆದಾಗ ದೇಹದ ಒಂದು ಭಾಗದ ನಿಯಂತ್ರಣ ತಪ್ಪಿ ಹೋಗುತ್ತದೆ. ಹಾಗೆ ಅವನಿಗೆ ಸೊಂಟದ ಕೆಳಗಿನ ಭಾಗವು ಪೂರ್ತಿಯಾಗಿ ಜೀವ ಕಳೆದುಕೊಂಡಿತ್ತು. ವಾಶ್ ರೂಮಿಗೆ ಹೋಗುವಾಗ ಕೂಡ ಅವಳ ಅಮ್ಮ ಹೊತ್ತುಕೊಂಡು ಹೋಗಬೇಕಾದ ಅಸಹಾಯಕ ಪರಿಸ್ಥಿತಿ!
ಮುಂದಿನ ಬದುಕು ವೀಲ್ ಚೇರ್ ಮೇಲೆ ಎಂದು ವೈದ್ಯರು ಶರಾ ಬರೆದಾಗ ಆವನಿ ನೋವಿನಲ್ಲಿ ಅವರನ್ನೇ ಕೇಳಿದ ಒಂದೇ ಪ್ರಶ್ನೆ – ಡಾಕ್ಟರ್, ಎಲ್ಲಿಯವರೆಗೆ?
ವೈದ್ಯರು ಹೇಳಿದರು – Treatment can help. But this condition can’t be cured. ಅಂದರೆ ಚಿಕಿತ್ಸೆ ಸಹಾಯ ಮಾಡಬಹುದು. ಆದ್ರೆ ದೇಹಸ್ಥಿತಿ ಸುಧಾರಣೆ ಆಗುವುದಿಲ್ಲ!
ಮೂರು ದಿನಗಳ ಕಾಲ ಆಕೆಯು ಜೋರಾಗಿ ಅಳುತ್ತಲೇ ಇದ್ದಳು. ಚಿಕ್ಕಂದಿನಿಂದಲೂ ಅಪ್ಪ ಅವಳ ಬೆಸ್ಟ್ ಫ್ರೆಂಡ್! ಆಗಲೂ ಧೈರ್ಯ ತುಂಬಿದ್ದು ಅವಳ ಅಪ್ಪನೇ. ಅವಳಿಗಾಗಿ ಒಂದು ವಿಶೇಷವಾದ ವೀಲ್ ಚೇರ್ ಸಿದ್ಧವಾಯಿತು. ಎರಡು ವರ್ಷಗಳ ನಂತರ ಅವಳು ಮತ್ತೆ ಶಾಲೆಗೆ ವೀಲ್ ಚೇರ್ ಮೇಲೆ ಬಂದಾಗ ಅವಳ ಎಲ್ಲಾ ಫ್ರೆಂಡ್ಸ್ ಎದ್ದು ನಿಂತು ಚಪ್ಪಾಳೆ ಸುರಿದು ಅವಳನ್ನು ಸ್ವಾಗತ ಮಾಡಿದ್ದರು!
ನೋವು ಮರೆತು ಹೊರಗೆ ಬರಲು ಅದರಿಂದ ನನಗೆ ಸಾಧ್ಯ ಆಯಿತು ಎಂದು ಆಕೆ ಹೇಳುತ್ತಾರೆ. ಪೂರ್ತಿ ಬಾಡಿಹೋದ ಆಕೆಯ ಮುಖದಲ್ಲಿ ಮತ್ತೆ ಅದೇ ನಗು ತುಳುಕಲು ಆಕೆಯ ಫ್ರೆಂಡ್ಸ್ ಸಹಾಯ ಮಾಡಿದರು.
ಬದುಕಿನ ಏಕತಾನತೆಯನ್ನು ಕಳೆಯಲು ಅವಳ ಅಪ್ಪ ಮಗಳಿಗೆ ಆಯ್ಕೆ ಮಾಡಲು ಹೇಳಿದ್ದು ಎರಡು ಕ್ಷೇತ್ರಗಳನ್ನು. ಒಂದು ಮ್ಯೂಸಿಕ್. ಇನ್ನೊಂದು ಕ್ರೀಡೆ. ಅವಳ ಅಪ್ಪನಿಗೆ ಪಾರಾ ಒಲಿಂಪಿಕ್ಸ್ ಬಗ್ಗೆ ಹೆಚ್ಚು ಮಾಹಿತಿ ಗೊತ್ತಿತ್ತು. ಅದಕ್ಕೆ ಪೂರಕವಾಗಿ ಮಗಳಿಗೆ ಪರಿಣತರಾದ ಕೋಚ್ ಮೂಲಕ ಬಿಲ್ವಿದ್ಯೆಯ (ಆರ್ಚರಿ) ತರಬೇತಿ ಆರಂಭ ಆಯಿತು. ಆದರೆ ಕೇವಲ ಮೂರು ತಿಂಗಳ ಒಳಗೆ ಅವಳ ಆಸಕ್ತಿಯು ಆರ್ಚರಿಯಿಂದ ಶೂಟಿಂಗ್ ಕಡೆಗೆ ಹೊರಳಿತು.
ಅದು ಭಾರತದ ಸೌಭಾಗ್ಯ ಎಂದೇ ಹೇಳಬಹುದು!
ಅವಳಿಗೆ ಸುಮಾ ಸಿದ್ಧಾರ್ಥ್ ಶಿರೂರು ಎಂಬ ಬೆಸ್ಟ್ ಕೋಚ್ ದೊರೆತರು. ಅವರು ನನ್ನ ಬೆಸ್ಟ್ ಫ್ರೆಂಡ್ ಆಗಿ ತನಗೆ ಗೈಡ್ ಮಾಡುತ್ತಿದ್ದರು ಎಂದು ಅವನಿ ಹೇಳುತ್ತಾರೆ. Go Sports Foundation ಎಂಬ ಒಂದು NGO ಆಕೆಯ ತರಬೇತಿಯ ಪ್ರಾಯೋಜಕತ್ವ ವಹಿಸಿತು. ಪ್ರತೀ ದಿನಕ್ಕೆ ಆರು ಗಂಟೆಗೆ ಕಡಿಮೆ ಆಗದ ಹಾಗೆ 6-7 ವರ್ಷಗಳ ಕಾಲ ಕಠಿಣ ತರಬೇತು ಆಕೆಯನ್ನು ಟೋಕಿಯೋ ಪಾರಾ ಒಲಿಂಪಿಕ್ಸ್ ಕೂಟದವರೆಗೆ ಕರೆದುಕೊಂಡು ಹೋಯಿತು. ಪಾರಾ ಇವೆಂಟ್ ಆರಂಭ ಆಗುವಾಗ ಆಕೆಯು ವಿಶ್ವ ರಾಂಕಿಂಗ್ ಪಟ್ಟಿಯಲ್ಲಿ ಐದನೇ ರಾಂಕಲ್ಲಿ ಇದ್ದರು.
ಆದರೆ 10 ಮೀಟರ್ ಏರ್ ರೈಫಲ್ ಶೂಟಿಂಗ್‌ನ ಫೈನಲ್ ಪಂದ್ಯದಲ್ಲಿ ಆಕೆ ಸಂಪಾದನೆ ಮಾಡಿದ್ದು ಬರೋಬ್ಬರಿ ವಿಶ್ವದಾಖಲೆಯ 249.6 ಅಂಕಗಳನ್ನು! ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಆಕೆಯ ಕೊರಳಿಗೆ ಚಿನ್ನದ ಪದಕ ಒಲಿಯಿತು! ರಾಷ್ಟ್ರಗೀತೆ ಜನ ಗಣ ಮನ ಸ್ಟೇಡಿಯಂನಲ್ಲಿ ರಿಬೌಂಡ್ ಆದಾಗ ಆಕೆಯ ಕಣ್ಣಲ್ಲಿ ತುಂಬಿ ತುಳುಕಿದ್ದ ಸಾರ್ಥಕ್ಯದ ನಗುವನ್ನು ಒಮ್ಮೆ ನೀವು ನೋಡಬೇಕಿತ್ತು! ಅದು ಪಾರಾ ಒಲಿಂಪಿಕ್ಸ್ ಕೂಟದಲ್ಲಿ ಆ ವಿಭಾಗದಲ್ಲಿ ಭಾರತಕ್ಕೆ ದೊರಕಿದ ಮೊತ್ತ ಮೊದಲ ಚಿನ್ನದ ಪದಕ ಆಗಿತ್ತು!
ಮೂರೇ ದಿನಗಳಲ್ಲಿ ಆವನಿ ಮತ್ತೆ 50 ಮೀಟರ್ ರೈಫಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು. ಅವಳಿ ಪದಕಗಳನ್ನು ಗೆದ್ದ ಆವನಿ ಆ ಸಾಧನೆಯನ್ನು ಮಾಡಿದ ಮೊತ್ತ ಮೊದಲ ಭಾರತೀಯ ಸಾಧಕಿ ಅಂದಾಗ ಆ ಅಪ್ಪನ ಖುಷಿಯನ್ನು ಒಮ್ಮೆ ಫೀಲ್ ಮಾಡಿ ನೋಡಿ! ನಿಮಗೆ ಅವರ ಬದ್ಧತೆ, ಪ್ರೀತಿ, ತ್ಯಾಗ ಕಣ್ಣು ಮುಂದೆ ಬರಬಹುದು.
ಈ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಆಕೆ ಭಾರತದ ಧ್ವಜಧಾರಿಯಾಗಿ ವೀಲ್ ಚೇರ್ ಮೇಲೆ ನಗುತ್ತ ವಿಹಾರ ಮಾಡುವ ದೃಶ್ಯವು ಮುಂದಿನ ಹತ್ತಾರು ವರ್ಷಗಳ ಕಾಲ ಪಾರಾ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಭಾರತಕ್ಕೆ ಇನ್ನಷ್ಟು ಪದಕಗಳನ್ನು ಮೊಗೆದು ತರುವ ಶಕ್ತಿ ಹೊಂದಿತ್ತು.
ಮುಂದೆ 2022ರಲ್ಲಿ ಫ್ರಾನ್ಸಿನಲ್ಲಿ ಮಹಿಳಾ ಶೂಟಿಂಗ್ ವಿಶ್ವಕಪ್ ನಡೆಯಿತು. ಅದರಲ್ಲಿ ಭಾಗವಹಿಸಿದ ಅವನಿ ಎರಡು ಚಿನ್ನ, ಒಂದು ಬೆಳ್ಳಿ ಪದಕಗಳನ್ನು ಗೆದ್ದು ಬೀಗಿದ್ದಾರೆ. ಈ ಸಾಧನೆ ಇದುವರೆಗೆ ಬೇರೆ ಯಾರೂ ಮಾಡಿಲ್ಲ ಅನ್ನುವುದು ಅವನಿ ಹೆಗ್ಗಳಿಕೆ.
ಅಂದ ಹಾಗೆ 22 ವರ್ಷದ ಅವನಿ ಜೈಪುರದಲ್ಲಿ ಕಾನೂನು ಶಿಕ್ಷಣವನ್ನು ಪಡೆದಿದ್ದಾರೆ. ಅವರಿಗೆ ರಾಜಸ್ಥಾನ್ ಸರಕಾರವು ACF ಹುದ್ದೆಯನ್ನು ನೀಡಿದೆ. 2021ರಲ್ಲಿ ಆಕೆಗೆ ಭಾರತದ ಮಹಾ ಕ್ರೀಡಾಪಟುವಿಗೆ ನೀಡುವ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿಯು ದೊರಕಿದೆ.
ಇದನ್ನೂ ಓದಿ: ಗುರುಕುಲ ಪದ್ಧತಿಯ ಉತ್ತುಂಗ ಮತ್ತು ಅವನತಿಯ ಸರಣಿ ಲೇಖನಗಳು
1.ರಾಜ ಮಾರ್ಗ ಅಂಕಣ : ನೀವು ನಂಬಲೇಬೇಕು! 7 ಸಾವಿರ ವರ್ಷದ ಹಿಂದೆಯೇ ಭಾರತದಲ್ಲಿ 7,32,000 ಗುರುಕುಲಗಳಿದ್ದವು!
2.ರಾಜ ಮಾರ್ಗ ಅಂಕಣ : ಗುರು ಅಂದರೆ ನಮ್ಮ Identity, ಯಾರ ಶಿಷ್ಯ ಅನ್ನೋದೇ ಒಂದು ಹೆಮ್ಮೆ
3.ರಾಜ ಮಾರ್ಗ ಅಂಕಣ : ಗುರು ಶಿಷ್ಯ ಸಂಬಂಧದಲ್ಲಿ ಬೆಳಗಿದ ದೇಶ ಭಾರತ; ಆರುಣಿಯು ಉದ್ಧಾಲಕನಾದ ಕಥೆ
4. ರಾಜ ಮಾರ್ಗ ಅಂಕಣ : ಹಾಗಿದ್ದರೆ ನಮ್ಮ ಗುರುಕುಲ ಪರಂಪರೆಗೆ ಕೊನೆಯ ಮೊಳೆ ಹೊಡೆದವರು ಯಾರು?
2022ರಲ್ಲಿ ಭಾರತ ಸರಕಾರವು ಆಕೆಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 2022ರಲ್ಲಿ ಬಿಬಿಸಿಯು ಅವರಿಗೆ ‘ಚೇಂಜ್ ಮೇಕರ್ ಆಫ್ ದ ಇಯರ್ ‘ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
5 ಅಡಿ ಮೂರು ಇಂಚು ಎತ್ತರದ ಅವನಿ ಮುಂದಿನ ಪಾರಾ ಒಲಿಂಪಿಕ್ ಕೂಟಕ್ಕಾಗಿ ಗಂಭೀರವಾಗಿ ತಯಾರಿ ನಡೆಸುತ್ತಿದ್ದಾರೆ. ಈ ವರ್ಷದ ಆರಂಭದವರೆಗೂ ಆಕೆ 10 ಮೀಟರ್ ಏರ್ ರೈಫಲ್ (10 Metre Air Rifle) ವಿಭಾಗದಲ್ಲಿ ವಿಶ್ವಮಟ್ಟದ ನಂಬರ್ ಒನ್ ರ‍್ಯಾಂಕ್ ಹೊಂದಿದ್ದಾರೆ.
ಹ್ಯಾಟ್ಸಾಫ್ ಅವನಿ ಲೇಖರ! We are so proud of you.