ಉತ್ತಮ ಸಂಬಂಧವನ್ನು (Good Realationship) ಪ್ರತಿಯೊಬ್ಬರೂ ಹೊಂದಲು ಆಸೆ ಪಡುತ್ತಾರೆ. ಆರೋಗ್ಯಪೂರ್ಣ ಸಂಬಂಧಗಳು (Healthy Relationship) ನಮ್ಮೆಲ್ಲರ ಬದುಕನ್ನು ಸುಂದರವಾಗಿ ಮಾಡುತ್ತವೆ. ಆದರೆ ಒಂದು ಸದೃಢವಾದ ದೋಣಿಯಲ್ಲಿ ಸಣ್ಣ ಬಿರುಕು ಉಂಟಾದ ಹಾಗೆ, ಒಂದು ತೊಟ್ಟು ಹುಳಿಯು ಒಂದು ಪಾತ್ರೆ ಹಾಲನ್ನು ಕೆಡಿಸಿದ ಹಾಗೆ, ಒಂದು ಬಿಂದು ವಿಷವು ನಮ್ಮನ್ನು ಪೂರ್ತಿ ಸಾಯಿಸುವ ಹಾಗೆ ಒಮ್ಮೆ ಸಣ್ಣ ಅಪನಂಬಿಕೆಯು ಉಂಟಾದರೆ ಆ ಸಂಬಂಧಗಳು ನಿಧಾನವಾಗಿ ಮೌಲ್ಯವನ್ನು ಕಳೆದುಕೊಳ್ಳುತ್ತವೆ. ಇದರಿಂದ ನಮ್ಮ ಬದುಕು ಅರ್ಥಹೀನ ಆಗುತ್ತದೆ. ಉತ್ತಮ ಸಂಬಂಧವನ್ನು ಕದಡುವ ಈ ಕೆಳಗಿನ ಅಂಶಗಳು ನಮ್ಮ ಗಮನದಲ್ಲಿ ಇರಲಿ (Raja Marga Column).
1. ಫೇಕ್ ವ್ಯಕ್ತಿತ್ವ ಸಂಬಂಧಗಳಿಗೆ ಕೊಡಲಿ ಏಟು (Fake Personality)
ನಮ್ಮ ನಡೆ, ನುಡಿಯಲ್ಲಿ ಅಗಾಧವಾದ ವ್ಯತ್ಯಾಸಗಳು ನಮ್ಮ ಸಂಬಂಧಗಳಿಗೆ ಕೊಡಲಿಯ ಏಟು ಆಗುತ್ತವೆ. ನಮ್ಮ ನಡೆ, ನುಡಿ ಮತ್ತು ಭಾವನೆಗಳು ಒಂದೇ ಆಗಿಸುವ ಪ್ರಯತ್ನವನ್ನು ಮಾಡಿ ನೋಡಿ. ಅದೆಷ್ಟು ಕಷ್ಟ ಎಂದು ನಮ್ಮ ಗಮನಕ್ಕೆ ಬರುತ್ತವೆ. ಮುಖವಾಡ ಹಾಕಿದ ಬದುಕು ದೀರ್ಘ ಕಾಲ ಉಳಿಯಲು ಸಾಧ್ಯವೇ ಇಲ್ಲ!
2. ಬೇಜವಾಬ್ದಾರಿತನದಿಂದ ನಿರ್ಲಕ್ಷ್ಯ ಮಾಡ್ತೀರಾ? (Irresponsible Behaviour)
ತನ್ನ ಪ್ರೀತಿ ಪಾತ್ರರನ್ನು ಪದೇಪದೆ ನಿರ್ಲಕ್ಷ್ಯ ಮಾಡುವ, ಅವರ ಭಾವನೆಗಳನ್ನು ಅವಗಣನೆ ಮಾಡುವ ನಮ್ಮ ವರ್ತನೆಗಳು ತುಂಬಾ ಅಪಾಯಕಾರಿ. ನಮ್ಮ ಪ್ರೀತಿಯ ವ್ಯಕ್ತಿಗಳನ್ನು ನಮ್ಮ ಆದ್ಯತೆಯ ಪಟ್ಟಿಯಲ್ಲಿ ಇರಿಸುವ ಕೆಲಸವೂ ತುಂಬಾ ಮುಖ್ಯ. ಈ ವಿಷಯದಲ್ಲಿ ಮೈ ಮರೆವು ಖಂಡಿತ ಸಮರ್ಥನೀಯ ಅಲ್ಲ!
3. ವಿಪರೀತವಾದ ಇಗೋವನ್ನು ಯಾರು ಒಪ್ತಾರೆ? (Ego kills relationship)
ಊಟದ ರುಚಿಗೆ ತಕ್ಕ ಉಪ್ಪು ಇರುವ ಹಾಗೆ ಇಗೋ ಇಲ್ಲದೆ ನಾವ್ಯಾರೂ ಬದುಕಲು ಸಾಧ್ಯ ಇಲ್ಲ. ಆದರೆ ಬೇರೆ ಯಾರನ್ನೂ ಒಪ್ಪದೇ ಇರುವ ಮನಸ್ಥಿತಿಯು ತುಂಬಾ ಅಪಾಯಕಾರಿ. ನಾನು ಹೇಳಿದ ಹಾಗೆ ಎಲ್ಲರೂ ಇರಬೇಕು ಎನ್ನುವ ಮೈಂಡ್ ಸೆಟ್ ನಮ್ಮನ್ನು ಅಪಾಯದ ಅಂಚಿಗೆ ದೂಡಬಲ್ಲದು.
4. ಸಂಬಂಧಗಳ ಅಸ್ಪಷ್ಟತೆ ಗೊಂದಲಕ್ಕೆ ತಳ್ಳುತ್ತದೆ (Conflict in relationship)
ನಾವು ಯಾರ ಜೊತೆಗಾದರೂ ಎರಡೇ ರೀತಿಯ ಸಂಬಂಧ ಹೊಂದಿರುವುದು ಸಾಧ್ಯ ಇದೆ. ಒಂದು ಆಫಿಷಿಯಲ್ ಮತ್ತು ಇನ್ನೊಂದು ಭಾವನಾತ್ಮಕ! ಯಾರ ಜೊತೆ ಯಾವ ಸಂದರ್ಭದಲ್ಲೆಲ್ಲಾ ಆಫಿಶಿಯಲ್ ಆಗಿರಬೇಕು ಮತ್ತು ಯಾವ ಸಂದರ್ಭದಲ್ಲಿ ಎಮೋಷನಲ್ ಆಗಿರಬೇಕು ಎಂದು ನಿರ್ಧಾರ ಮಾಡುವವರು ನಾವೇ! ಇಲ್ಲಿ ಎಡವಿದರೆ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತವೆ.
5. ತಪ್ಪುಗಳ ಸಮರ್ಥನೆ ಮಾಡುವುದು ಡೇಂಜರ್ (Mistakes and argument)
ತಪ್ಪು ಮಾಡುವುದು ಅತ್ಯಂತ ಸಹಜ. ತಪ್ಪನ್ನು ನಾವೆಲ್ಲರೂ ಮಾಡುತ್ತೇವೆ. ಆದರೆ ತಪ್ಪನ್ನು ಒಪ್ಪಿಕೊಳ್ಳದೆ ಸಮರ್ಥನೆ ಮಾಡಲು ಹೊರಡುವುದು ಅಥವಾ ತಪ್ಪನ್ನು ಬೇರೆಯವರ ಮೇಲೆ ಹೊರಿಸುವುದು ಅಥವಾ ತಪ್ಪುಗಳನ್ನು ರಿಪೀಟ್ ಮಾಡುವುದು ನಮ್ಮ ಸಂಬಂಧಗಳನ್ನು ತೇಪೆ ಹಾಕಲೂ ಆಗದಷ್ಟು ಕೆಡಿಸಿಬಿಡುತ್ತವೆ. ಒಮ್ಮೆ ಕ್ಷಮೆಯನ್ನು ಕೇಳುವುದರಿಂದ ನಮ್ಮ ಸಂಬಂಧಗಳು ಉಳಿಯುತ್ತವೆ ಅಂತಾದರೆ ನಾನು ತಪ್ಪು ಮಾಡದಿದ್ದರೂ ಎಷ್ಟೋ ಬಾರಿ ಸಾರಿ ಕೇಳಿ ನಮ್ಮ ಸಂಬಂಧ ಉಳಿಸಿಕೊಂಡಿದ್ದೇನೆ.
6. ವಿಪರೀತ ಮೋಹ ಮತ್ತು ಅವಲಂಬನೆ ಬೇಕಾ? (Over Possessiveness)
ತಾನು ಪ್ರೀತಿಸುವವರು ತನ್ನನ್ನು ಮಾತ್ರ ಪ್ರೀತಿಸಬೇಕು ಎನ್ನುವ ಮೋಹ ಮತ್ತು ಭಾವನಾತ್ಮಕ ಅವಲಂಬನೆಯು ನಮ್ಮ ಸಂಬಂಧಗಳಿಗೆ ಅಪಾಯಕಾರಿ. ವಿಪರೀತ ಎನಿಸುವ ಅವಲಂಬನೆಯು ನಮ್ಮನ್ನು ದೂರ ಮಾಡುತ್ತದೆ.
7. ಕೃತಘ್ನತೆಯಿಂದ ಬೀಳುತ್ತೆ ಹೊಡೆತ (Ingratitude perosonality)
ನಮ್ಮ ಜೀವನದಲ್ಲಿ ಸಣ್ಣ ಸಣ್ಣ ಸಹಾಯ ಮಾಡಿದವರು ಮತ್ತು ಕೊಡುಗೆಗಳನ್ನು ನೀಡಿದವರು ನಮ್ಮ ಭಾವಕೋಶದಲ್ಲಿ ಶಾಶ್ವತ ಸ್ಥಾನ ಪಡೆಯಬೇಕು. ನಮಗೆ ಐದು ನಿಮಿಷ ಹ್ಯಾಪಿನೆಸನ್ನು ಕೊಟ್ಟವರು ಕೂಡ ನಮ್ಮ ಪ್ರೀತಿಯ ಹಕ್ಕುದಾರರು ಆಗಿರಬೇಕು. ಅಂತವರನ್ನು ಮರೆತರೆ ಸಂಬಂಧ ಬಿರುಕು ಬಿಡುವುದು ಖಂಡಿತ.
8. ಪದೇಪದೆ ಬದಲಾಗುವ ನಿಷ್ಠೆಯಿಂದ ಅಪಾಯ (Loyalty must)
ನಮ್ಮ ಆದ್ಯತೆಗಳು ಪದೇಪದೆ ಬದಲಾಗುತ್ತ ಹೋದಂತೆ ನಮ್ಮ ಸಂಬಂಧಗಳ ಒಳಗೆ ಒಡಕು ಉಂಟಾಗಬಹುದು. ತುಂಬಾ ಪ್ರೀತಿಪಾತ್ರರಿಗೆ ನಾವು ಕೊಡುವ ಸಮಯ, ಪ್ರೀತಿ ಮತ್ತು ಭಾವನೆಗಳಲ್ಲಿ ಕೊರತೆ ಉಂಟಾದಾಗ ಉತ್ತಮ ಸಂಬಂಧಗಳು ನಮ್ಮಿಂದ ದೂರ ಆಗುತ್ತವೆ.
9. ಸಂವಹನದ ಕೊರತೆ ಮಾಡಿಕೊಳ್ಳಬೇಡಿ (Communication problem)
ನಮ್ಮಲ್ಲಿ ಎಷ್ಟೋ ತಪ್ಪು ಕಲ್ಪನೆ ಉಂಟಾಗಲು ಕಾರಣ ಸಂವಹನದ ಕೊರತೆ. ನಮ್ಮ ಪ್ರೀತಿ ಪಾತ್ರರ ಜೊತೆಗೆ ಉತ್ತಮ ಸಂವಹನ ನಡೆಯದೆ ಹೋದರೆ ತಪ್ಪು ಕಲ್ಪನೆಗಳು ಉಂಟಾಗಿ ಸಂಬಂಧಗಳು ಅರ್ಥವನ್ನೇ ಕಳೆದುಕೊಳ್ಳುತ್ತವೆ. ಪ್ರೀತಿ ಪಾತ್ರರೊಂದಿಗೆ ಮನಸು ಬಿಚ್ಚಿ ಮಾತಾಡುವ ಸಮಯ ಮತ್ತು ಸಂದರ್ಭಗಳನ್ನು ನಾವೇ ಸೃಷ್ಟಿ ಮಾಡಿಕೊಳ್ಳಬೇಕು.
10. ಸುಳ್ಳು ಹೇಳಿದರೆ ಸಾವಿರ ಸಂಕಷ್ಟ (Lies prove dangerous)
ಪದೇಪದೆ ಸುಳ್ಳು ಹೇಳುವವರಿಗೆ ಹೆಚ್ಚು ಮೆಮೊರಿಯ ಪವರ್ ಇರಬೇಕು ಅನ್ನುತ್ತದೆ ಒಂದು ಚೈನೀಸ್ ಗಾದೆ! ಒಂದೆರಡು ಸುಳ್ಳುಗಳು ನಮ್ಮನ್ನು ಆ ಕಾಲಕ್ಕೆ ಸೇಫ್ ಮಾಡಬಹುದು. ಆದರೆ ಮುಂದೆ ಅದೇ ಸುಳ್ಳುಗಳು ಬಯಲಾಗುತ್ತ ಹೋದಂತೆ ನಮ್ಮ ವಿಶ್ವಾಸಾರ್ಹತೆಯು ಕಡಿಮೆ ಆಗುತ್ತದೆ. ನಾವು ಸವಕಲು ನಾಣ್ಯ ಆಗಿಬಿಡುತ್ತೇವೆ.
11. ವಿಪರೀತ ಸಿಟ್ಟು ಮತ್ತು ಸಿಡುಕುವುದು (Anger Management)
ಸಿಟ್ಟು ಎಷ್ಟೋ ಬಾರಿ ಒಳ್ಳೆಯ ಉದ್ದೇಶಕ್ಕೆ ಬಂದರೂ ಕೆಟ್ಟದಾದ ಪರಿಣಾಮವನ್ನು ಬಿಟ್ಟು ಹೋಗುತ್ತದೆ. ನಮ್ಮ ಪ್ರೀತಿ ನಿಜ ಎಂದಾದರೆ, ನಮ್ಮಲ್ಲಿ ಅವರನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ ಎಂದಾದರೆ, ನಾವು ಅವರ ಸ್ಥಳದಲ್ಲಿ ಕುಳಿತು ಯೋಚನೆ ಮಾಡುತ್ತೇವೆ ಅಂತಾದರೆ ನಮಗೆ ಸಿಟ್ಟು ಬರಲು ಸಾಧ್ಯವೇ ಇಲ್ಲ!
ಇದನ್ನೂ ಓದಿ: Raja Marga : ಜಗತ್ತು ನೆನಪಿಡುವುದು ಮೊದಲಿಗರನ್ನು ಮಾತ್ರ! ನಿಮಗೂ ಹಲವು ಕ್ಷೇತ್ರಗಳು ಕಾದಿವೆ
12. ವಿಪರೀತವಾದ ನಿರೀಕ್ಷೆ ಇಟ್ಟುಕೊಳ್ತೀರಾ? (Over Expectations)
ನಮ್ಮ ಪ್ರೀತಿಯ ವ್ಯಕ್ತಿಗಳ ಬಗ್ಗೆ ನಮ್ಮ ಅತಿಯಾದ ನಿರೀಕ್ಷೆಗಳು ಎಲ್ಲ ಬಣ್ಣ ಮಸಿ ನುಂಗಲು ಕಾರಣ ಆಗುತ್ತದೆ. ನಾವು ನಿರೀಕ್ಷೆ ಮಾಡಿದ ಹಾಗೆ ಎಲ್ಲರೂ ಇರಬೇಕು ಎನ್ನುವ ಹಠ ತುಂಬಾ ಅಪಾಯಕಾರಿ. ನಮ್ಮ ಪ್ರೀತಿಯ ವ್ಯಕ್ತಿಗಳನ್ನು ಬದಲಾವಣೆ ಮಾಡಲು ಹೋಗದೆ ಹಾಗೆಯೇ ಪ್ರೀತಿಸುವುದು ಉತ್ತಮ ನಿರ್ಧಾರ. ನಮ್ಮದಾದ ಅಭಿಪ್ರಾಯಗಳನ್ನು ಬೇರೆಯವರ ಮೇಲೆ ಹೇರುವುದು ಖಂಡಿತ ಸರಿ ಅಲ್ಲ.
ಉತ್ತಮವಾದ ಆರೋಗ್ಯಪೂರ್ಣ ಸಂಬಂಧಗಳು ನಮ್ಮನ್ನು ಖಂಡಿತವಾಗಿ ಬೆಳೆಸುತ್ತವೆ ಅನ್ನುವುದು ನೂರಕ್ಕೆ ನೂರು ನಿಜ. ನಮ್ಮನ್ನು ಪ್ರೀತಿ ಮಾಡುವವರ ಬಗ್ಗೆ ಸ್ವಾರ್ಥ ಇಲ್ಲದ ಪ್ರೀತಿ, ಒಂದು ಹಿಡಿಯಷ್ಟು ಕಾಳಜಿ, ಸದಾ ಜಾಗೃತವಾದ ನಂಬಿಕೆ ಮತ್ತು ಅವುಗಳ ಜೊತೆಗೆ ಒಂದಿಷ್ಟು ಕೊರತೆ ಆಗದ ಗೌರವವೂ ಇದ್ದರೆ ನಮಗೆ ಅಪರಿಮಿತವಾದ ಯಶಸ್ಸು ದೊರೆಯುವುದು ಖಂಡಿತ. ಏನಂತೀರಿ?
ಈ ಲೇಖನದ ಬಗ್ಗೆ ನಿಮಗೆ ಏನನಿಸುತ್ತದೆ? ಕಮೆಂಟ್ ಮಾಡಿ ತಿಳಿಸಿ