Site icon Vistara News

Raja Marga Column : ಬದುಕಿದರೆ ಬದುಕಬೇಕು ಇವರ ಹಾಗೆ..; ಪುರಾಣದಲ್ಲಿವೆ ನೂರಾರು ಮಾದರಿ

Rama Krishna Purana kathegalu

ನಾವು ಹೇಗೆ ಬದುಕಬೇಕು ಎನ್ನುವುದಕ್ಕೆ ಪೂರಕವಾದ ಸಾವಿರಾರು ನಿದರ್ಶನಗಳು ನಮ್ಮ ಪುರಾಣದಲ್ಲಿವೆ (Epics of India). ಬದುಕನ್ನು ಸಾಗಿಸಬೇಕಾದ ದಾರಿಗೆ ಇವು ಮಾರ್ಗ ಸೂಚಿಗಳು (Guide to the life). ಅದಕ್ಕಿಂತಲೂ ಹೆಚ್ಚಾಗಿ ಇವು ನಮ್ಮನ್ನು ಔನ್ನತ್ಯಕ್ಕೆ ಕರೆದೊಯ್ಯಬಲ್ಲ ಪವರ್‌ ಫುಲ್‌ ಉದಾಹರಣೆಗಳು. ನಾವು ಭಾರತದ ಶ್ರೇಷ್ಠವಾದ ಪುರಾಣಗಳನ್ನು ಓದುತ್ತ ಹೋದಂತೆ ಇಂತಹ ನೂರಾರು ಮಾದರಿಗಳನ್ನು ಪಡೆಯಲು ಸಾಧ್ಯ. ಆ ಪುರಾಣಗಳೇ ನಮ್ಮ ಭಾರತದ ಶ್ರೇಷ್ಠ ಆಸ್ತಿಗಳು. ಅವುಗಳು ನಮ್ಮ ಭಾರತದ ಭವಿಷ್ಯವಾದ ಮಕ್ಕಳಿಗೆ ಓದಲು ಸಿಗಬೇಕು ಎನ್ನುವ ಕಾಳಜಿ ನನ್ನದು. ಅದಕ್ಕಾಗಿ ಇಲ್ಲಿ 25 ಉದಾಹರಣೆಗಳನ್ನು ಪೋಣಿಸಿದ್ದೇನೆ (Raja Marga Column)

1. ಸೋತರೂ, ಸತ್ತರೂ ಪಕ್ಷಾಂತರ ಮಾಡಲಾರೆ. ಸ್ಥಾನಮಾನ ನೀಡಿದ ಧನಿಯ ನಿಷ್ಠೆಯನ್ನು ಅಧಿಕಾರಕ್ಕಾಗಿ ಮಾರಿಕೊಳ್ಳಲಾರೆ ಎಂದು ನುಡಿದು ಅದರ ಹಾಗೆ ಬದುಕಿದ ಮಹಾಭಾರತದ ಕರ್ಣನ ಹಾಗೆ!
2. ಒಂದು ಸರ್ಪದ ಪ್ರಾಣವನ್ನು ಉಳಿಸಲು ತನ್ನ ದೇಹವನ್ನು ಹದ್ದಿಗೆ ಆಹಾರವಾಗಿಟ್ಟ ಜೀಮೂತವಾಹನನ ಹಾಗೆ!
3. ದೇವತೆಗಳು ರಕ್ಷಣೆಗಾಗಿ ಕೊಟ್ಟ ಆಯುಧದ ಋಣಕ್ಕಾಗಿ ತನ್ನ ಬೆನ್ನುಮೂಳೆಯನ್ನೇ ಕಿತ್ತು ವಜ್ರಾಯುಧವಾಗಿ ನೀಡಿದ ದಧೀಚಿಯ ಹಾಗೆ!
4. ಮಹಾಭಾರತದ ಯುದ್ಧವನ್ನು ನಿಲ್ಲಿಸಲು ಶತಪ್ರಯತ್ನ ಮಾಡಿದ, ಅದು ಸಾಧ್ಯವಾಗದೇ ಹೋದಾಗ ಸರಳ ಮಂಚದ ಮೇಲೆ ಮಲಗಿ ಪ್ರಾಯಶ್ಚಿತ್ತ ಮಾಡಿಕೊಂಡ ಭೀಷ್ಮ ಪಿತಾಮಹನ ಹಾಗೆ!
5. ಮುನಿಗೆ ಕೊಟ್ಟ ಮಾತನ್ನು ಉಳಿಸಲು ಸತ್ಯವೃತನಾದ, ಕೊನೆಗೆ ತನ್ನನ್ನು, ಮಗನನ್ನು, ಹೆಂಡತಿಯನ್ನು ಸಂತೆಯಲ್ಲಿ ಮಾರಾಟ ಮಾಡಿ ಸ್ಮಶಾನ ಕಾಯುವ ಕೆಲಸವನ್ನೂ ಮಾಡಿದ ಮಹಾರಾಜಾ ಹರಿಶ್ಚಂದ್ರನ ಹಾಗೆ!

Samudra Mathana Purana Kathegalu

6. ಒಬ್ಬ ಸಾಮಾನ್ಯ ಪ್ರಜೆಯಾದ ಅಗಸನ ಮಾತಿಗೆ ಮನ್ನಣೆ ಕೊಟ್ಟು ತನ್ನ ಪತ್ನಿಗೆ ಅಪವಾದದ ಕಳಂಕ ನಿವಾರಿಸಲು ಕಾಡಿಗೆ ಕಳುಹಿಸಿದ ರಾಜಾರಾಮನ ಹಾಗೆ!
7. ತನಗೆ ಅರಸನಾಗುವ ಎಲ್ಲ ಅವಕಾಶಗಳು ತನ್ನ ಕಾಲ ಬುಡಕ್ಕೆ ಬಂದರೂ ಬೇರೆಯವರಿಗೆ ಪಟ್ಟ ಕಟ್ಟಿ ತಾನು ‘ಕಿಂಗ್ ಮೇಕರ್’ ಆಗಿ ಮರೆಯಲ್ಲಿ ನಿಂತ ಶ್ರೀ ಕೃಷ್ಣ ದೇವರ ಹಾಗೆ!
8. ಸೇತುವೆ ಕಟ್ಟುವ ಮಹಾ ಅಭಿಯಾನದಲ್ಲಿ ತನ್ನ ಹವಿರ್ಭಾಗ ಇರಲಿ ಎಂದು ಸಂಕಲ್ಪ ಮಾಡಿ ಮೈ ಒದ್ದೆ ಮಾಡಿ ಮರಳು ಸಂಗ್ರಹ ಮಾಡಿದ ಅಳಿಲಿನ ಹಾಗೆ!
9. ತನ್ನ ಗುರುಗಳಾದ ದ್ರೋಣರು ಕುತಂತ್ರ ಮಾಡಿ ತನ್ನ ಹೆಬ್ಬೆರಳನ್ನು ಗುರುದಕ್ಷಿಣೆಯನ್ನಾಗಿ ಕೇಳಿದಾಗ, ಅದರ ಹಿಂದೆ ಇರುವ ಷಡ್ಯಂತ್ರದ ಅರಿವಾದರೂ ಒಂದಿಷ್ಟೂ ವಿಚಲಿತ ಆಗದೇ ಹೆಬ್ಬೆರಳು ಕತ್ತರಿಸಿ ನೀಡಿದ ಏಕಲವ್ಯನ ಹಾಗೆ!
10. ಸ್ಮಶಾನ ಭೂಮಿಯಲ್ಲಿ ಅಭಿಮನ್ಯುವಿನ ಶವವನ್ನು ತಬ್ಬಿಕೊಂಡು ‘ನಿನ್ನ ವೀರಗಾಥೆಯ ಕೊನೆಯ ಹಂತವಾದ ಮರಣ ಎನಗೆ ಬರಲಿ ‘ಎಂದು ಕಣ್ಣೀರು ಸುರಿಸಿದ ದುರ್ಯೋಧನನ ಹಾಗೆ!

Samudra Mathana Purana Kathegalu

11. ತನಗೆ ಅಪಮಾನ ಮಾಡಿದ ಕೌರವರ ರಕ್ತದಿಂದ ತನ್ನ ತುರುಬನ್ನು ತೋಯಿಸದೇ ಜಡೆ ಕಟ್ಟಲಾರೆ ಎಂದು ಪ್ರತಿಜ್ಞೆ ಮಾಡಿ ಅದನ್ನು ತನ್ನ ಅಣ್ಣ ಶ್ರೀ ಕೃಷ್ಣ ದೇವರ ಮೂಲಕ ಪೂರ್ತಿ ಮಾಡಿದ ಅಗ್ನಿಕನ್ಯೆ ದ್ರೌಪದಿಯ ಹಾಗೆ!
12. ಒಂದು ಪುಟ್ಟ ಹಕ್ಕಿಯ ಪ್ರಾಣ ಉಳಿಸಲು ತನ್ನ ದೇಹದ ಮಾಂಸಖಂಡಗಳನ್ನು ಆಹಾರವಾಗಿ ತೆರೆದಿಟ್ಟ ಶಿಬಿ ಚಕ್ರವರ್ತಿಯ ಹಾಗೆ.
13. ತನ್ನ ಪುತ್ರರ ದುರ್ನಡತೆ ಹಾಗೂ ಕ್ರೌರ್ಯಗಳನ್ನು ನೋಡಲಾಗದೇ, ತನ್ನ ಪತಿಯ ಕುರುಡುತನವನ್ನು ನೆಪ ಮಾಡಿಕೊಂಡು ಕಣ್ಣಿಗೆ ಪಟ್ಟಿ ಕಟ್ಟಿಕೊಂಡ ಗಾಂಧಾರಿಯ ಹಾಗೆ!
14. ವಾಮನ ತನ್ನನ್ನು ಪಾತಾಳಕ್ಕೆ ಅದುಮುತ್ತಾನೆ ಎಂದು ಗೊತ್ತಿದ್ದರೂ ತನ್ನ ಮಾತನ್ನು ಉಳಿಸಿಕೊಳ್ಳಲು ತಲೆಯೊಡ್ಡಿ ನಿಂತ ಬಲಿ ಚಕ್ರವರ್ತಿಯ ಹಾಗೆ!
15. ಸ್ತ್ರೀ ವ್ಯಾಮೋಹ ತನ್ನ ನಾಶಕ್ಕೆ ಹೇತುವಾಗುತ್ತಾ ಇದೆ ಎಂದು ಅರಿವಾದರೂ ಶ್ರೀ ರಾಮ ದೇವರ ಶರದಿಂದ ಸಾವು ಬಂದರೆ ಮೋಕ್ಷ ಪ್ರಾಪ್ತಿ ಎಂದು ತಿಳಿದು, ಅದರಂತೆ ಬದುಕಿದ, ಅದರಂತೆ ಮಡಿದ ಮಹಾಬ್ರಾಹ್ಮಣ ರಾವಣನ ಹಾಗೆ!

Samudra Mathana Purana Kathegalu

16. ಎಂಜಲು ಎಂಬ ಕಲ್ಪನೆಯೇ ಇಲ್ಲದೇ ಕಾಡಿನ ಹಣ್ಣುಗಳನ್ನು ಕಚ್ಚಿ ಕಚ್ಚಿ ದೇವರಿಗೆ ಪ್ರಸಾದವಾಗಿ ನೀಡಿದ ಮುಗ್ಧೆ ಶಬರಿಯ ಹಾಗೆ!
17. ತನ್ನ ಪಾತಿವ್ರತ್ಯವನ್ನು ಮುರಿಯಲು ಬಂದ ದೇವತೆಗಳನ್ನು ಮಕ್ಕಳಾಗಿ ಮಾಡಿ ತಾನು
ವಿವಸ್ತ್ರಳಾಗಿ ನಿಂತು ಲಜ್ಜೆ ಇಲ್ಲದೇ ಅವರಿಗೆ ಉಣಬಡಿಸಿದ ಅನಸೂಯೆಯ ಹಾಗೆ!
18. ಶ್ರೀ ಕೃಷ್ಣ ತನಗಿನ್ನು ಯಾವತ್ತೂ ದೊರೆಯಲಾರ ಎಂಬ ಅರಿವಿದ್ದೂ ಕೃಷ್ಣನನ್ನು ಮುಗ್ಧವಾಗಿ ಪ್ರೇಮಿಸಿ ವಿರಕ್ತ ಭಾವದಿಂದ ದ್ವಾರಕೆಗೆ ಕಳುಹಿಸಿಕೊಟ್ಟ ವಿರಹಿತೆ ರಾಧೆಯ ಹಾಗೆ!
19. ಅಯಾಚಿತವಾಗಿ ಬಂದ ಅಯೋಧ್ಯೆಯ ಅಧಿಕಾರವನ್ನು ತ್ಯಾಗ ಮಾಡಿ ನಂದೀ ಗ್ರಾಮದಲ್ಲಿ ರಾಮದೇವರ ಪಾದುಕೆಗಳನ್ನು ಸಿಂಹಾಸನದ ಮೇಲೆ ಇರಿಸಿ ಹದಿನಾಲ್ಕು ವರ್ಷ ಕಾದು ಕೂತ ಭರತನ ಹಾಗೆ!
20. ಶ್ರೀಕೃಷ್ಣ ದೇವರ ವಿಶ್ವ ರೂಪವನ್ನು ನೋಡಿ ‘ದೇವಾ, ನನ್ನನ್ನು ಕುರುಡನಾಗಿ ಮಾಡಿ ಬಿಡು. ನಿನ್ನ ಈ ರೂಪವನ್ನು ಕಂಡ ಕಣ್ಣುಗಳಿಂದ ನಾನು ಬೇರೇನೂ ನೋಡಲು ಬಯಸುವುದಿಲ್ಲ!’ ಎಂದು ಶಸ್ತ್ರಗಳನ್ನು ಎತ್ತಿಕೊಂಡು ಯುದ್ಧಕ್ಕೆ ಸನ್ನದ್ಧನಾದ ಅರ್ಜುನನ ಹಾಗೆ!

ಇದನ್ನೂ ಓದಿ : Raja Marga Column : ಶ್ರೀನಿವಾಸ್‌ ರಾಮಾನುಜನ್‌ ಬರೆದ ಪ್ರೇಮಪತ್ರಗಳ ದುರಂತ ಕಥೆ!

21. ವೇದವ್ಯಾಸರು ಹೇಳಿದ ವೇಗದಲ್ಲಿ ಮಹಾಭಾರತವನ್ನು ಬರೆದು ಜಗತ್ತಿನ ಮಹಾಕಾವ್ಯವನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿದ ಗಣೇಶನ ಹಾಗೆ!
22. ತನ್ನ ಶತ್ರುವಾದರೂ ರಾವಣನ ಅಂತಿಮ ಕ್ರಿಯೆಯನ್ನು ಗೌರವಯುತವಾಗಿ ನಡೆಸಿದ ‘ಮರಣದ ನಂತರ ಶತ್ರುತ್ವ ಇಲ್ಲ ‘ ಎಂದು ಲೋಕಕ್ಕೆ ಅರ್ಥ ಮಾಡಿಸಿದ ಶ್ರೀರಾಮನ ಹಾಗೆ!
23. ತಾನು ವಿರಾಗಿ ಋಷಿ ಆದರೂ ಒಂದು ಕ್ರೌಂಚಪಕ್ಷಿಯ ವಧೆಗೆ ಮರುಗಿದ, ಆ ನೋವಿನಿಂದ ವ್ಯಾಕುಲನಾಗಿ ರಾಮಾಯಣ ಮಹಾಕಾವ್ಯವನ್ನು ಬರೆದ ವಾಲ್ಮೀಕಿಯ ಹಾಗೆ!
24. ಜಗತ್ತಿನ ಸುವಸ್ತುಗಳನ್ನು ತನ್ನ ಬಸಿರಲ್ಲಿ ಇಟ್ಟುಕೊಂಡು ಮುಂದೆ ಸಮುದ್ರ ಮಥನ ನಡೆದಾಗ ಲೋಕ ಕಲ್ಯಾಣಕ್ಕಾಗಿ ಅವುಗಳನ್ನು ಹಿಂದೆ ನೀಡಿದ ಸಾಗರದ ಹಾಗೆ!
25. ತಾನು ದಲಿತನಾದರೂ ಒಂದಿಷ್ಟೂ ಅಳುಕದೆ ರಾಮ ದೇವರನ್ನು ತನ್ನ ದೋಣಿಯಲ್ಲಿ ಕೂರಿಸಿಕೊಂಡು ಗಂಗಾ ನದಿಯನ್ನು ದಾಟಿಸಿದ ಅಂಬಿಗ ಗುಹನ ಹಾಗೆ!

Samudra Mathana Purana Kathegalu
Exit mobile version