500ಕ್ಕೂ ಅಧಿಕ ವರ್ಷ ನಡೆದ ರಾಮಜನ್ಮಭೂಮಿ ಹೋರಾಟದಲ್ಲಿ (Ramajanmabhumi Movement) ಸಾವಿರಾರು ರಾಮಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ. ಈ ಹೋರಾಟದ ಹಿಂದೆ ಹಿಂಸಾತ್ಮಕವಾದ ಮಾರಣ ಹೋಮಗಳೇ ನಡೆದುಹೋಗಿವೆ. ಈ ಹೋರಾಟಕ್ಕೆ ಒಂದು ನಿರ್ಣಾಯಕ ತಿರುವು ನೀಡಿದ ಒಂದು ರಾಷ್ಟ್ರಮಟ್ಟದ ಘಟನೆ ಇದ್ದರೆ ಅದು ಎಲ್.ಕೆ. ಅಡ್ವಾಣಿ (LK Advani) ಅವರು ಕೈಗೊಂಡ ‘ಅಯೋಧ್ಯಾ ರಥಯಾತ್ರೆ’ (Ayodhya Rathayatra) ಎಂದು ಖಚಿತವಾಗಿ ಹೇಳಬಹುದು. ಇಡೀ ಭಾರತದಲ್ಲಿ ಅದಾಗಲೇ ರಾಮಜನ್ಮಭೂಮಿಯ ಪರವಾದ ಅಲೆಯು ಎದ್ದಿದ್ದು ಅದರ ಮೂರ್ತ ರೂಪವೇ ಅಯೋಧ್ಯಾ ರಥಯಾತ್ರೆ ಎಂದು ಖಚಿತವಾಗಿ ಹೇಳಬಹುದು (Raja Marga Column).
ಯೋಜನೆಯನ್ನು ರೂಪಿಸಿದವರು ಪ್ರಮೋದ್ ಮಹಾಜನ್
ಈ ಮಹಾರಥಯಾತ್ರೆಯ ಯೋಜನೆಯನ್ನು ರೂಪಿಸಿದವರು ಆಗಿನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗಿದ್ದ ಪ್ರಮೋದ್ ಮಹಾಜನ್. ಮೊದಲು ಕಾರಿನಲ್ಲಿ ಹೋಗುವ ಯೋಜನೆ ಇತ್ತು. ನಂತರ ತೆರೆದ ಜೀಪು ಬಗ್ಗೆ ಮಾತುಕತೆ ನಡೆಯಿತು. ಕೊನೆಗೆ ಪ್ರಭು ರಾಮನ ಯಾತ್ರೆ ಆದ ಕಾರಣ ರಥವೇ ಸೂಕ್ತ ಎಂದು ಯೋಚನೆ ಮಾಡಿ ಸಾಲಂಕೃತ ರಥವನ್ನು ನಿರ್ಮಿಸಲಾಯಿತು.
ಗುಜರಾತಿನ ಸೋಮನಾಥ ದೇವಾಲಯದಿಂದ ಆರಂಭ ಮಾಡಿ 12 ರಾಜ್ಯಗಳನ್ನು ಹಾದು 10,000 ಕಿಲೋಮೀಟರ್ ದೂರಕ್ಕೆ ಸಾಗುವ ಯೋಜನೆ ರೂಪಿಸಲಾಯಿತು. ಒಂದು ದಿನಕ್ಕೆ ಹತ್ತಾರು ಸ್ಥಳಗಳನ್ನು ಹಾದು ಹೋಗಬೇಕು. ದಿನಕ್ಕೆ ಕನಿಷ್ಠ 300 ಕಿಲೋಮೀಟರ್ ಹಾದುಹೋಗುವ ಪ್ಲಾನ್ ರೂಪಿಸಲಾಯಿತು.
ಆ ರಥದಲ್ಲಿಯೇ ಒಂದು ಎತ್ತರವಾದ ವೇದಿಕೆ ಇದ್ದು ಸೇರಿದ ಜನರನ್ನು ಉದ್ದೇಶಿಸಿ 10 ನಿಮಿಷ ಆಡ್ವಾಣಿ ಮಾತಾಡಬೇಕು ಎಂದು ನಿರ್ಧಾರ ಆಯಿತು. ಜನರನ್ನು ಸೆಳೆಯಲು ಲತಾ ಮಂಗೇಶ್ಕರ್ ಹಾಡಿದ ಒಂದು ಅದ್ಭುತವಾದ ಹಾಡು (ರಾಮನಾಮ ಜಾದೂ ಐಸಾ) ರಥಯಾತ್ರೆಯುದ್ದಕ್ಕೂ ಸೂಜಿಗಲ್ಲಿನಂತೆ ಕೆಲಸ ಮಾಡಿತು.
ಮಂದಿರ್ ವಹಿ ಬನಾಯೆಂಗೆ
ಗುಜರಾತ್ ರಾಜ್ಯದ ಸೋಮನಾಥದಿಂದ 1990ರ ಸೆಪ್ಟೆಂಬರ್ 25ರಂದು ರಥಯಾತ್ರೆ ಆರಂಭ ಆಯಿತು. ಗಜನಿ ಮಹಮ್ಮದ್ 17 ಬಾರಿ ದಾಳಿ ಮಾಡಿ ಸರ್ವನಾಶ ಮಾಡಿದ್ದ ಸೋಮನಾಥ್ ದೇವಾಲಯವು ಸರ್ದಾರ್ ಪಟೇಲ್ ಮತ್ತು ಕೆ ಎಂ ಮುನಿಷಿ ಅವರ ತೀವ್ರ ಪ್ರಯತ್ನದಿಂದ ಜೀರ್ಣೋದ್ಧಾರ ಆಗಿತ್ತು. ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಆ ನೂತನ ದೇವಸ್ಥಾನವನ್ನು ಹಿಂದೆ ಉದ್ಘಾಟನೆ ಮಾಡಿದ್ದರು. ಆ ದೇವಸ್ಥಾನದಿಂದ ಹೊರಟ ರಥಯಾತ್ರೆಯು ಗುಜರಾತಿನ 600 ಗ್ರಾಮಗಳು ಮತ್ತು ನಗರಗಳ ಹಾದುಹೋಗುವಾಗ ಸಮುದ್ರದ ಅಲೆಗಳನ್ನು ಎಬ್ಬಿಸಿತ್ತು. ಮಂದಿರ್ ವಹಿ ಬನಾಯೆಂಗೇ ಮತ್ತು ಜೈ ಶ್ರೀರಾಮ್ ಘೋಷಣೆಗಳು ಮುಗಿಲು ಮುಟ್ಟಿದ್ದವು.
ರಾಮಭಕ್ತರ ಅಭೂತಪೂರ್ವ ಸ್ಪಂದನೆ.
ರಥಯಾತ್ರೆ ಗುಜರಾತ್ ಮುಗಿಸಿ ಮಹಾರಾಷ್ಟ್ರಕ್ಕೆ ಬಂದಾಗ ಜನಸಾಗರವೇ ಹರಿದು ಬಂತು. ಸ್ವತಃ ಅಡ್ವಾಣಿ ಮತ್ತು ಪ್ರಮೋದ್ ಮಹಾಜನ್ ಕೂಡ ಆ ರೀತಿಯ ಸ್ಪಂದನೆ ನಿರೀಕ್ಷೆ ಮಾಡಿರಲಿಲ್ಲ. ಜನರ ಹೃದಯದಲ್ಲಿ ಗಟ್ಟಿಯಾಗಿದ್ದ ರಾಮದೇವರ ಭಕ್ತಿ ಮತ್ತು ಪ್ರೀತಿ ಉಕ್ಕಿಹರಿದವು. ಹೋದಲ್ಲೆಲ್ಲ ಪುಷ್ಪ ವೃಷ್ಟಿಯ ಸ್ವಾಗತ, ಕೇಸರಿ ಪತಾಕೆಗಳ ಅಬ್ಬರ, ಜೈ ಶ್ರೀರಾಮ್ ಉದ್ಘೋಷ, ಜನರು ರಥಕ್ಕೆ ಆರತಿ ಎತ್ತಿ ಸಂಭ್ರಮಿಸುವುದು, ರಥಕ್ಕೆ ನಮಸ್ಕಾರ ಮಾಡುವುದು, ಹಳ್ಳಿಯ ಮೂಲೆ ಮೂಲೆಗಳಿಂದ ಜನ ಸಾಗರ ಹರಿದು ಬರುವುದು ರೋಮಾಂಚನದ ಅಲೆಗಳನ್ನು ಸೃಷ್ಟಿಸಿತು. ಮಹಾರಾಷ್ಟ್ರದಲ್ಲಿ ಶಿವಸೇನೆಯ ನಾಯಕ ಬಾಳಾ ಠಾಕ್ರೆ ರಥಯಾತ್ರೆಯಲ್ಲಿ ಸೇರಿಕೊಂಡರು. ಜಾತಿ, ಮತ, ಭಾಷೆ, ರಾಜಕೀಯ ಪಕ್ಷಗಳ ಭೇದ ಮರೆತು ಜನರು ಈ ರಥಯಾತ್ರೆಯಲ್ಲಿ ಕೂಡಿಕೊಂಡರು.
ಸಂತ ಮಹಾಂತರ ಆಶೀರ್ವಾದ.
ಈ ರಥಯಾತ್ರೆಯು ಅದ್ಭುತವಾದ ಜನಜಾಗೃತಿ ಮೂಡಿಸಲು ಕಾರಣ ಆದದ್ದು ಯಾತ್ರೆಯ ಉದ್ದಕ್ಕೂ ದೊರೆತ ಸಂತ ಮಹಾಂತರ ಆಶೀರ್ವಾದ. ವಿಶ್ವ ಹಿಂದೂ ಪರಿಷದ್ ಸಂಸ್ಥೆಯ ಆಗಿನ ನಾಯಕ ಅಶೋಕ್ ಸಿಂಘಾಲ್ ಅವರು ಯಾತ್ರೆಯ ಆಶಯಕ್ಕೆ ಬೆಂಬಲ ನೀಡಿದರು. ಜೆಟಪುರ್ ಎಂಬಲ್ಲಿ ಊರಿನ ಯುವಕರೆಲ್ಲ ಸೇರಿಕೊಂಡು ಒಂದು ತಂಬಿಗೆಯಲ್ಲಿ ತಮ್ಮ ರಕ್ತವನ್ನು ಬಸಿದು ಅಡ್ವಾಣಿ ಅವರಿಗೆ ನೀಡಿದರು. ಜನರು ಆಡ್ವಾಣಿಯವರ ಕಿರು ಭಾಷಣವನ್ನು ತಾಳ್ಮೆಯಿಂದ ಆಲಿಸಿದರು. ಅವರನ್ನು ಎಲ್ಲ ಕಡೆಯಲ್ಲಿ ಸನ್ಮಾನ ಮಾಡಲಾಯಿತು. ಯಾತ್ರೆಯು ಆಂಧ್ರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನಗಳನ್ನು ಹಾದು ಬಿಹಾರಕ್ಕೆ ಬಂದಾಗ ಅಲ್ಲಿನ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ಆಡ್ವಾಣಿ ಅವರನ್ನು ಬಂಧಿಸಿ ಅಜ್ಞಾತ ಸ್ಥಳದಲ್ಲಿ ಬಂಧಿಸಿ ಇಟ್ಟರು (ಅಕ್ಟೋಬರ್ 20). ಆದರೆ ದೇಶದ ಉದ್ದಗಲಕ್ಕೆ ನಡೆದ ಪ್ರತಿಭಟನೆಗೆ ಲಾಲು ಪ್ರಸಾದ್ ಯಾದವ್ ಸರಕಾರ ಮಣಿಯಲೆ ಬೇಕಾಯಿತು. ಆಡ್ವಾಣಿ ಬಿಡುಗಡೆಯಾಗಿ ರಥಯಾತ್ರೆ ಮತ್ತೆ ಮುಂದುವರೆಯಿತು.
ಉತ್ತರ ಪ್ರದೇಶದಲ್ಲಿ ಮತ್ತೆ ರಥಯಾತ್ರೆಗೆ ತಡೆ ಉಂಟಾಯಿತು. ಉತ್ತರ ಭಾರತದಲ್ಲಿ ಆಗ ಹೊತ್ತಿ ಉರಿಯುತ್ತಿದ್ದ ಮೀಸಲಾತಿ ಹೋರಾಟ ಕೂಡ ರಥಯಾತ್ರೆಗೆ ತೊಂದರೆ ಕೊಟ್ಟಿತ್ತು. ಆದರೆ ಲಕ್ಷಾಂತರ ಕರಸೇವಕರ ಪಡೆ ದೇಶದ ಮೂಲೆ ಮೂಲೆಗಳಿಂದ ಅಯೋಧ್ಯೆಯ ಕಡೆಗೆ ಹೊರಟಾಗಿತ್ತು.
‘ಅಡ್ವಾಣಿಯವರ ಬ್ಲಡ್ ಯಾತ್ರೆ ‘ ಎಂದರು ವಿರೋಧಿಗಳು
ಅಡ್ವಾಣಿ ಅವರ ರಥಯಾತ್ರೆಯ ವಿರುದ್ಧವಾಗಿ ಒಂದು ಒಡಕು ಧ್ವನಿ ಕೂಡ ಅಲ್ಲಲ್ಲಿ ಕಂಡು ಬಂದಿತ್ತು. ಈ ಯಾತ್ರೆಯನ್ನು ‘ಅಡ್ವಾಣಿಯವರ ಬ್ಲಡ್ ಯಾತ್ರೆ’ ಎಂದು ಕೆಲವರು ಕರೆದರು. ಆದರೆ ರಥಯಾತ್ರೆಯ ದಾರಿಯಲ್ಲಿ ಎಲ್ಲಿಯೂ ಕೋಮು ಗಲಭೆ ನಡೆದಿಲ್ಲ ಎಂದು ಅಡ್ವಾಣಿ ತಮ್ಮ ಆತ್ಮಚರಿತ್ರೆಯ ಪುಸ್ತಕದಲ್ಲಿ ಬರೆದಿದ್ದಾರೆ.
ಆದರೆ ದೇಶದ ಹಲವು ಕಡೆಯಲ್ಲಿ ಸ್ಥಳೀಯ ಸರಕಾರಗಳು ರಾಮ ಭಕ್ತರ ಭಾವನೆಗಳಿಗೆ ನೋವು ಮಾಡಿದಾಗ ಕೋಮು ಗಲಭೆಗಳು ನಡೆದವು. ನೂರಾರು ಜನರು ಪ್ರಾಣ ಕಳೆದುಕೊಂಡರು. ಅಯೋಧ್ಯೆಯಲ್ಲಿ 1992 ಡಿಸೆಂಬರ್ ಆರರಂದು ನಡೆದ ಘಟನೆಯು (ವಿವಾದಿತ ಕಟ್ಟಡದ ಪತನ) ಅತ್ಯಂತ ದುರ್ದೈವಕರ ಘಟನೆ ಎಂದು ಅಡ್ವಾಣಿ ಬರೆದಿದ್ದಾರೆ. ಆದರೆ ಇಡೀ ದೇಶದಲ್ಲಿ ಹಿಂದೂ ಜಾಗೃತಿ ಮೂಡಿಸಿದ ಅಯೋಧ್ಯಾ ರಥಯಾತ್ರೆಯನ್ನು ನಡೆಸಿದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : Raja Marga Column : ಅಯೋಧ್ಯೆ ಹೋರಾಟದ ಕಣ್ಮಣಿ ಆಡ್ವಾಣಿ; ಅವರ ಕನ್ನಡ ಪ್ರೀತಿಯೂ ಅನನ್ಯ
ಭರತವಾಕ್ಯ
ಡಿಸೆಂಬರ್ ಆರರ ಘಟನೆಯ ಕಾರಣಕ್ಕೆ ಅಡ್ವಾಣಿ ತನ್ನ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ಕೋರ್ಟು ವ್ಯಾಜ್ಯಗಳನ್ನು ಕೂಡ ಎದುರಿಸಬೇಕಾಯಿತು. ಈ ಎಲ್ಲ ಅಗ್ನಿ ದಿವ್ಯಗಳನ್ನು ಅವರು ಮುಂದೆ ಗೆದ್ದುಬಂದರು. ಅಂತಹ ಆಡ್ವಾಣಿ ಅವರಿಗೆ ಈಗ 96 ವರ್ಷ. ರಾಮನ ಜನ್ಮಭೂಮಿಗೆ ಹೋರಾಡಿದ ಹಿರಿ ಜೀವ ಅದು.