Site icon Vistara News

ರಾಜ ಮಾರ್ಗ ಅಂಕಣ : ಅಪೂರ್ವ ರಾಗಂಗಳ್‌ ಟು ಜೈಲರ್‌; ರಜನಿಕಾಂತ್‌ ಬಂದರು ದಾರಿಬಿಡಿ!

Rajani jailor

ಸೂಪರ್ ಸ್ಟಾರ್ ರಜನಿಕಾಂತ್ (Super star Rajinikanth) ಅಭಿನಯದ ಜೈಲರ್ ಸಿನಿಮಾ (Jailor Cinema) ಈ ವಾರ ಬಿಡುಗಡೆ ಆಗಿ ಭಾರತೀಯ ಸಿನಿಮಾದ ಹಿಂದಿನ ಎಲ್ಲ ರೆಕಾರ್ಡ್ ಮುರಿದು ಮುನ್ನುಗ್ಗುತ್ತಿದೆ. ಎರಡು ವರ್ಷಗಳಿಂದ ತಲೈವಾ ಅವರ ಸಿನಿಮಾಕ್ಕೆ ಕಾದು ಕೂತ ಅಭಿಮಾನಿಗಳಿಗೆ ಇದು ಫುಲ್ ಮೀಲ್ಸ್ ಕೊಟ್ಟಿದೆ (ರಾಜ ಮಾರ್ಗ ಅಂಕಣ).

-1975ರಲ್ಲಿ ಬಿಡುಗಡೆಯಾದ ‘ಅಪೂರ್ವ ರಾಗಂಗಳ್’ ‌ ಚಿತ್ರದಿಂದ ಆರಂಭಿಸಿ 2023ರ ಜೈಲರ್‌ವರೆಗೆ (Apoorva Ragangal to Jailor) ಅವರು ನಟಿಸಿದ 169 ಮಹಾ ಮಹಾ ಸಿನಿಮಾಗಳು ಒಂದೆಡೆ!
-ರಜನೀಕಾಂತ್ ಅವರ ಮಾನವೀಯ ಸೇವೆ ಮತ್ತು ಸಜ್ಜನಿಕೆಗಳ ಮುಖಗಳು ಇನ್ನೊಂದೆಡೆ!
-ಮನಸು ಗೊಂದಲವಾದಾಗ ಯಾರಿಗೂ ಹೇಳದೆ ಹಿಮಾಲಯ ಪರ್ವತಕ್ಕೆ ಹೋಗಿ ಧ್ಯಾನದಲ್ಲಿ ಮುಳುಗುವ ಬಾಬಾ ಇನ್ನೊಂದೆಡೆ!
-ಸ್ಟಾರ್ ನಟ ಆಗುವ ಮೊದಲು ಬೆಂಗಳೂರಿನಲ್ಲಿ ಸರಕಾರಿ ಬಸ್ ಕಂಡಕ್ಟರ್ ಆಗಿ ಪ್ರಯಾಣಿಕರಿಗೆ ರಂಜನೆ ಕೊಡುತ್ತಿದ್ದ ಶಿವಾಜಿ ರಾವ್ ಗಾಯಕವಾಡ್‌ (Shivaji Rao Gaikwad) ಇನ್ನೊಂದೆಡೆ!
-ಜಗತ್ತಿನಾದ್ಯಂತ ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿದ್ದರೂ ನಾನೇನೂ ಸಾಧನೆ ಮಾಡಿಲ್ಲ ಎಂದು ಮುಗ್ಧವಾಗಿ ನಗುವ ತಲೈವಾ ಇನ್ನೂ ಒಂದೆಡೆ!

ನನ್ನ ದಾರಿ, ವಿಭಿನ್ನ ದಾರಿ – ರಜನೀಕಾಂತ್

ರಜನೀಕಾಂತ್ ಬಗ್ಗೆ ಒಂದು ಮಹಾ ಗ್ರಂಥವನ್ನು ಬರೆದು ಮುಗಿಸುವಷ್ಟು ಮಾಹಿತಿ ಕಲೆಹಾಕಿ ಇಂದು ನಿಮ್ಮ ಮುಂದೆ ಇದ್ದೇನೆ. ಅವರ ಬಗ್ಗೆ ಎ.ಎನ್. ಪ್ರಹ್ಲಾದ್ ರಾವ್ ಬರೆದ ‘ನನ್ನ ದಾರಿ, ವಿಭಿನ್ನ ದಾರಿ’ ಪುಸ್ತಕವನ್ನು ಹಲವು ಬಾರಿ ಓದಿದ್ದೇನೆ. ನಮನ ರಾಮಚಂದ್ರ ಅವರು ರಜನಿ ಬಗ್ಗೆ ಬರೆದ ಬೃಹತ್ ಆತ್ಮಚರಿತ್ರೆಯ ಪುಸ್ತಕ ಓದಿ ರೋಮಾಂಚನ ಪಟ್ಟಿದ್ದೇನೆ. ರಜನಿ ಕಾಂತ್ ಅವರ ಜೀವನದ ಸಾರ್ಥಕ 73 ವರ್ಷಗಳ ಪ್ರಯಾಣದ ಹೆಜ್ಜೆ ಗುರುತುಗಳು ಆ ಎರಡೂ ಪುಸ್ತಕಗಳಲ್ಲಿ ಇವೆ.

ನಾನಿಂದು ಅವರ ಸಿನಿಮಾಗಳ ಬಗ್ಗೆ ಹೆಚ್ಚು ಬರೆಯುವುದಕ್ಕಿಂತ ಅವರ ಬದುಕಿನ ಹೋರಾಟಗಳ ಬಗ್ಗೆ ಮತ್ತು ಅವರು ನಂಬಿದ ಮೌಲ್ಯಗಳ ಬಗ್ಗೆ ಒಂದೆರಡು ಕಂತುಗಳಲ್ಲಿ ಬರೆಯಬೇಕು. ಯಾಕೆಂದರೆ ಅವರ ಹೆಚ್ಚಿನ ಸಿನಿಮಾಗಳನ್ನು ನೀವು ಖಂಡಿತ ನೋಡಿರುತ್ತೀರಿ.

48 ವರ್ಷಗಳ ಸಿನಿ ಪ್ರಯಾಣ, 169 ಅದ್ಭುತ ಸಿನಿಮಾಗಳು, ಆರು ಫಿಲ್ಮ್ ಫೇರ್ ಪ್ರಶಸ್ತಿಗಳು, ಒಂದು ರಾಷ್ಟ್ರ ಪ್ರಶಸ್ತಿ, ಪದ್ಮಭೂಷಣ, ಪದ್ಮವಿಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಅವರಿಗೆ ಈಗಾಗಲೇ ದೊರೆತಿವೆ. ಭಾರತ ರತ್ನ ಪ್ರಶಸ್ತಿಗೂ ಅವರು ಅರ್ಹರು ಎಂದು ಅವರ ಅಭಿಮಾನಿಗಳು ಹೇಳುತ್ತಾರೆ. ಜಗತ್ತಿನಾದ್ಯಂತ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸೂಪರ್ ಸ್ಟಾರ್ ಅಂದರೆ ಅದು ರಜನೀಕಾಂತ್.

ಚೆನ್ನೈಯ ವುಡ್ ಲ್ಯಾಂಡ್ಸ್ ಹೋಟೆಲಿನ ಘಟನೆ

1970ರ ಇಸವಿಯ ಒಂದು ದಿನ ನಡೆದ ಘಟನೆ ಇದು. ರಜನೀಕಾಂತ್ ಇದನ್ನು ಒಂದು ಟಿವಿ ಸಂದರ್ಶನದಲ್ಲಿ ಶೇರ್ ಮಾಡಿದ್ದಾರೆ. ಆ ದಿನಗಳಲ್ಲಿ ಚೆನ್ನೈಯಲ್ಲಿ ವುಡ್ ಲ್ಯಾಂಡ್ಸ್ ಬಹಳ ಪ್ರಸಿದ್ಧ ಹೋಟೆಲು ಆಗಿತ್ತು. ಒಂದು ದಿನ ಹೊಟೇಲಿನ ಮಾಲೀಕರು ಹೋಟೆಲಿನ ಕಿಚನ್ ರೂಮ್ ಕಡೆಗೆ ಬಂದಾಗ ಒಬ್ಬ ಕಪ್ಪು ಚರ್ಮದ ಹದಿಹರೆಯದ ಹುಡುಗನನ್ನು ಗಮನಿಸಿದರು. ಆತನು ಅಡಿಗೆ ಮನೆಯ ಪಾತ್ರೆಗಳಿಂದ ಉಳಿದ ಒಂದಿಷ್ಟು ಅನ್ನ ಮತ್ತು ಸಾಂಬಾರುಗಳನ್ನು ಪೊಟ್ಟಣ ಕಟ್ಟಿ ಕದಿಯುವುದನ್ನು ನೋಡಿದರು. ಅವರಿಗೆ ಭಾರೀ ಸಿಟ್ಟು ಬಂದಿತು.

Rajinikanth as Jailor

ಅವರು ಆ ಹುಡುಗನ ಕಾಲರ್ ಹಿಡಿದು ಬೈದರು. ತಾನು ಹಸಿವೆಯಿಂದ ಆಹಾರವನ್ನು ತೆಗೆದುಕೊಂಡೆ ಎಂದು ಆತ ಗೋಗರೆದು ಹೇಳಿದರೂ ಅವರು ಬಿಡಲಿಲ್ಲ. ಒಂದೆರಡು ಏಟು ಕೊಟ್ಟು ಅವನನ್ನು ಬಿಟ್ಟರು.

ಮುಂದೆ 1990ರ ಹೊತ್ತಿಗೆ ಅದೇ ಹೋಟೆಲು ದೊಡ್ಡ ಮಟ್ಟದಲ್ಲಿ ಬೆಳೆದು ಹೊಸ ರೆಸ್ಟಾರೆಂಟ್ ತೆರೆಯಿತು. ಅದರ ಉದ್ಘಾಟನೆಗೆ ಸೂಪರ್ ಸ್ಟಾರ್ ರಜನಿ ಆಮಂತ್ರಿತ ಆಗಿದ್ದರು. ಆಗ ರಜನೀ ವೇದಿಕೆಯಲ್ಲಿ ಮೈಕ್ ಹಿಡಿದು ನೇರವಾಗಿ ಹೋಟೆಲಿನ ಮಾಲೀಕರನ್ನು ಉದ್ದೇಶಿಸಿ ‘ನೀವು 30 ವರ್ಷಗಳ ಹಿಂದೆ ಒಬ್ಬ ಕಪ್ಪು ಚರ್ಮದ ಹುಡುಗನು ಆಹಾರವನ್ನು ಕದ್ದದ್ದಕ್ಕೆ ಬೈದದ್ದು ನೆನಪಿದೆಯಾ? ಅವನು ಹಸಿವೆಯಿಂದ ಕಳ್ಳತನ ಮಾಡಿದ್ದ. ಆ ಹುಡುಗ ನಾನೇ. ಅಂದು ನೀವು ಮಾಡಿದ್ದು ತಪ್ಪು. ಇನ್ನು ಮಧ್ಯಾಹ್ನ ಊಟದ ಹೊತ್ತಿಗೆ ಹಸಿದು ಬಂದ ಬಡವರಿಗೆ ನೀವು ಉಚಿತ ಊಟ ಕೊಡುತ್ತೀರಿ ಎಂದು ಪ್ರಾಮಿಸ್ ಕೊಟ್ಟರೆ ಮಾತ್ರ ನಾನು ಉದ್ಘಾಟನೆ ಮಾಡುತ್ತೇನೆ ‘ ಎಂದು ಹಟಕ್ಕೆ ಕೂತರು.

ಆಗ ಹೋಟೆಲು ಮಾಲೀಕರು ಕ್ಷಮಾಪಣೆ ಕೇಳಿ ಅವರ ಷರತ್ತು ಒಪ್ಪಿದರು. ರಜನೀಕಾಂತ್ ನೂತನ ರೆಸ್ಟುರಾ ಉದ್ಘಾಟನೆ ಮಾಡಿದರು! ಇದು ರಜನೀಕಾಂತ್ ಅವರು ಸಾಗಿ ಬಂದ ದಾರಿಗೆ ಮತ್ತು ಮಾನವೀಯ ಮುಖಕ್ಕೆ ಕನ್ನಡಿ ಹಿಡಿದ ಘಟನೆ!

Rajinikanth as Jailor

ರಜನೀಕಾಂತ್ ಬಸ್ ಕಂಡಕ್ಟರ್ ಆಗಿ

1950ರ ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ಜನಿಸಿದ ಶಿವಾಜಿ ರಾವ್ ಗಾಯಕವಾಡ ಅವರ ತಂದೆ ಒಬ್ಬ ಪೊಲೀಸ್ ಪೇದೆ ಆಗಿದ್ದರು. ಒಂಬತ್ತು ವರ್ಷದಲ್ಲಿ ಅಮ್ಮನನ್ನು ಕಳೆದುಕೊಂಡವರು ಅವರು. ಕಲಿಯುವುದರಲ್ಲಿ ಚುರುಕಾಗಿದ್ದರೂ ತುಂಟತನ ಹೆಚ್ಚಿತ್ತು. ನಾಟಕಗಳ ಸೆಳೆತ ಹೆಚ್ಚಿತ್ತು. ರಾಮಕೃಷ್ಣಾಶ್ರಮದ ಪ್ರಭಾವದಿಂದ ಆಧ್ಯಾತ್ಮದ ಸೆಳೆತ ಹೆಚ್ಚಿತ್ತು. ಆಗ ಬೆಂಗಳೂರು ನಗರ ಸಾರಿಗೆಯ ಬಸ್ಸಿನಲ್ಲಿ ಕಂಡಕ್ಟರ್ ಆಗಿ ಜನಪ್ರಿಯತೆ ಪಡೆದರು. ಪ್ರಯಾಣಿಕರು ಅವರ ಬಸ್ಸಿಗೆ ಕಾಯುತ್ತಿದ್ದರು ಅಂದರೆ ಅವರ ಪ್ರಭಾವ ಅರ್ಥ ಆಗುತ್ತದೆ. ಆಗ ಚೆನ್ನೈಯಲ್ಲಿ ಫಿಲ್ಮ್ ಇನ್ಸ್ಟಿಟ್ಯೂಟ್ ಆರಂಭ ಆದ ಒಂದು ಜಾಹೀರಾತು ಪತ್ರಿಕೆಯಲ್ಲಿ ನೋಡಿ ಗೊಂದಲಕ್ಕೆ ಒಳಗಾದರು. ಆಗ ಅವರ ಗೊಂದಲ ಪರಿಹಾರ ಮಾಡಿ ಅವರಿಗೆ ದುಡ್ಡಿನ ವ್ಯವಸ್ಥೆ ಮಾಡಿ ಅವರನ್ನು ಚೆನ್ನೈಗೆ ಕರೆದುಕೊಂಡು ಹೋಗಿ ಅಡ್ಮಿಷನ್ ಮಾಡಿದವರು ಅವರ ಜೀವದ ಗೆಳೆಯ ರಾಜ್ ಬಹಾದ್ದೂರ್. ಅವರು ಮಾಡಿದ ಉಪಕಾರವನ್ನು ರಜನೀಕಾಂತ್ ಇಂದಿಗೂ ಮರೆತಿಲ್ಲ!

ಕೆ. ಬಾಲಚಂದರ್ ಎಂಬ ಮಹಾ ಗುರು

ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ರಜನಿಗೆ ದೊರೆತ ಮಹಾಗುರುಗಳಲ್ಲಿ ಕೆ. ಬಾಲಚಂದರ್ ಅವರು ಒಬ್ಬರು. ಅವರು ಮೊದಲ ನೋಟದಲ್ಲಿಯೇ ಈ ಹುಡುಗನ ಪ್ರತಿಭೆಯನ್ನು ಗುರುತಿಸಿದರು. ‘ ಆ ಹುಡುಗನ ಕಣ್ಣಲ್ಲಿ ಬೆಂಕಿ ಇರುವುದನ್ನು ನಾನು ಕಂಡೆ’ ಎಂದಿದ್ದಾರೆ ಬಾಲಚಂದರ್. ಅವರ ಮುಂದಿನ ತಮಿಳು ಸಿನಿಮಾ ಅಪೂರ್ವ ರಾಗಂಗಳಲ್ಲಿ ರಜನಿಗೆ ಪ್ರಮುಖ ಪಾತ್ರ ಅವರು ನೀಡಿದರು. ರಜನೀಕಾಂತ್ ಎಂದು ನಾಮಕರಣ ಮಾಡಿದ್ದು ಕೂಡ ಅವರೇ.

ಪುಟ್ಟಣ್ಣ ಕಣಗಾಲರ ಕಥಾ ಸಂಗಮ

ಮುಂದಿನ ವರ್ಷ ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲರ ಕಥಾ ಸಂಗಮ ಸಿನಿಮಾದಲ್ಲಿ ಅವರು ಹೀರೋ ಆದರು. ಬಾಲಚಂದರ್ ಅವರ ತಪ್ಪಿದ ತಾಳ ಸಿನಿಮಾ ಕೂಡ ಬಂದಿತು. ರಜನೀಕಾಂತ್ ಕನ್ನಡದ ಒಟ್ಟು 12 ಸಿನಿಮಾಗಳಲ್ಲಿ ಸ್ಮರಣೀಯ ಅಭಿನಯ ಮಾಡಿದ್ದಾರೆ. ಅವುಗಳಲ್ಲಿ ಸಹೋದರರ ಸವಾಲ್, ಕಿಲಾಡಿ ಕಿಟ್ಟು, ಪ್ರಿಯಾ, ಕುಂಕುಮ ರಕ್ಷೆ ಪ್ರಮುಖವಾದವು. ತಮಿಳಿನಲ್ಲಿ ಸೂಪರ್ ಸ್ಟಾರ್ ಆದ ನಂತರ ಅವರು ಯಾವುದೇ ಕನ್ನಡದ ಸಿನಿಮಾಗಳಲ್ಲಿ ಅಭಿನಯ ಮಾಡಿಲ್ಲ.

Rajinikanth as Jailor

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ನಾನು ಆಜಾದ್‌, ಇನ್ನೆಂದೂ ನಿಮ್ಮ ಕೈಗೆ ಸಿಗಲಾರೆ; ಆ ಕ್ರಾಂತಿಕಾರಿ ಸಾವಿನಲ್ಲೂ ಮಾತು ಉಳಿಸಿಕೊಂಡಿದ್ದ!

ಅವರು ಅಮಿತಾಬ್ ಬಚ್ಚನ್ ಅಭಿಮಾನಿ

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರ ದೊಡ್ಡ ಅಭಿಮಾನಿ ಆದವರು ರಜನಿಕಾಂತ್. ಅಮಿತಾಬ್ ಅವರ 11 ಜನಪ್ರಿಯ ಹಿಂದೀ ಸಿನಿಮಾಗಳನ್ನು ತಮಿಳಿಗೆ ರಿಮೇಕ್ ಮಾಡಿ ಅವುಗಳಲ್ಲಿ ರಜನಿ ತನ್ನ ಸ್ಫೂರ್ತಿ ಅಮಿತಾಬ್ ಪಾತ್ರಗಳನ್ನು ಮಾಡಿದ್ದಾರೆ. ರಜನಿ ಅವರು ಮಾಡಿದ್ದು ಜನಸಾಮಾನ್ಯರ ಪಾತ್ರಗಳನ್ನು. ರಿಕ್ಷಾ ಡ್ರೈವರ್, ಮೆಕಾನಿಕ್, ಬೀದಿ ಬದಿಯ ರೌಡಿ, ಹಮಾಲಿ, ಕೂಲಿ ಕಾರ್ಮಿಕ, ಪೊಲೀಸ್, ಪಿಕ್ ಪಾಕೆಟ್ ಕಳ್ಳ, ಡಾನ್, ಪೋರ್ಟರ್ ಮೊದಲಾದ ಪಾತ್ರಗಳು ತಮಿಳಿಗರಿಗೆ ಮೋಡಿ ಮಾಡಿದವು. ಅವರ ಸಿಗರೇಟ್ ಬಾಯಿಗೆ ಎಸೆದು ಬೆಂಕಿ ಹಚ್ಚುವ ಸ್ಟೈಲ್, ನಡೆಯುವ, ನಗುವ ಶೈಲಿ, ಪವರ್ ಫುಲ್ ಸಂಭಾಷಣೆ, ಆಳವಾದ ಕಣ್ಣುಗಳು, ಹಲ್ಲು ಕಚ್ಚಿ ಫೈಟ್ ಮಾಡುವ ಶಕ್ತಿ ಇವುಗಳು ರಜನೀಕಾಂತ್ ಅವರನ್ನು (ಭಾರತದ) ಸೂಪರ್ ಸ್ಟಾರ್ ಮಾಡಿಬಿಟ್ಟವು.

Rajinikanth as Jailor

ರಜನೀಕಾಂತ್ ಅವರು ತಮಿಳು, ತೆಲುಗು, ಮಲಯಾಳಂ, ಹಿಂದೀ, ಬಂಗಾಳಿ, ಕನ್ನಡ ಭಾಷೆಯ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಬ್ಲಡ್ ಸ್ಟೋನ್ ಎಂಬ ಹಾಲಿವುಡ್ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ!

(ಬುಧವಾರಕ್ಕೆ ಮುಂದುವರೆಯುತ್ತದೆ)

Exit mobile version