Site icon Vistara News

Raja Marga column : ಜನ ಮನ ಅವರಿಸಿದ ಪೀಪಲ್ಸ್‌ ಪ್ರೆಸಿಡೆಂಟ್;‌ ಕಲಾಂ ಸರ್‌ ಪ್ರೀತಿಸಲು ನೂರಾರು ಕಾರಣ

APJ Abdul Kalam birthday on October 15

ನನಗೆ ಚೆನ್ನಾಗಿ ನೆನಪಿದೆ ಆ ದಿನಾಂಕ ಮತ್ತು ಘಟನೆ. ಜುಲೈ 27, 2015. ನಾನು ಆ ದಿನ ಸಂಜೆ ಮಣಿಪಾಲದ ಮಲ್ಟಿಪ್ಲೆಕ್ಸ್ ಒಂದರಲ್ಲಿ ಬಾಹುಬಲಿ 2 ಫಿಲ್ಮ್ ನೋಡುತ್ತಿದ್ದೆ. ಸಿನಿಮಾ ನೋಡಿ ಹೊರಬರುವಾಗ ನನ್ನ ಮೊಬೈಲ್ ತುಂಬಾ ಮಿಸ್ ಕಾಲ್‌ಗಳು. ಅದರಲ್ಲಿ ನನ್ನ ಟಿವಿ ಆಂಕರ್ ಗೆಳೆಯ ಅವಿನಾಶ್ ಕಾಮತ್ ಅವರ ಹೆಚ್ಚು ಕಾಲ್ ಇದ್ದವು. ತಕ್ಷಣ ಅವರಿಗೆ ಕಾಲ್ ಮಾಡಿದಾಗ ಅವರ ಧ್ವನಿಯಲ್ಲಿ ಆತಂಕ ತುಂಬಿತ್ತು – ಸರ್, ನಿಮಗೆ ಗೊತ್ತಾ, ಕಲಾಂ ಸರ್ (Dr APJ Abdul Kalam) ನೋ ಮೋರ್! ಟಿವಿ ಲೈವ್ ಪ್ರೋಗ್ರಾಂ ಮಾಡ್ತಾ ಇದ್ದೇನೆ. ಸ್ಟುಡಿಯೋಗೆ ಬರಬಹುದಾ?

ಮುಂದಿನ 15 ನಿಮಿಷದಲ್ಲಿ ನಾನು ಅವಸರದಲ್ಲಿ ಓಡುತ್ತ ಟಿವಿ ಕ್ಯಾಮೆರಾ ಮುಂದೆ ಬಂದು ಕೂತಿದ್ದೆ. ನಮಗಿಬ್ಬರಿಗೂ ಅಬ್ದುಲ್ ಕಲಾಂ ಕಾರ್ಯಕ್ರಮಕ್ಕೆ ಯಾವ ಸ್ಕ್ರಿಪ್ಟ್ ಅಥವಾ ಯಾವ ಸಿದ್ಧತೆಯೂ (Raja Marga Column) ಬೇಕಾಗಿರಲಿಲ್ಲ!

ಆ ಕಾರ್ಯಕ್ರಮ ಎರಡು ಘಂಟೆಯವರೆಗೆ ಮುಂದುವರಿಯಿತು. ಆ ಅವಧಿಯಲ್ಲಿ ನೂರಾರು ಪ್ರೇಕ್ಷಕರ ಕಾಲ್‌ಗಳು ಎಲ್ಲೆಲ್ಲಿಂದಲೋ ಬಂದವು. ಎಲ್ಲರೂ ಗದ್ಗದಿತರಾಗಿದ್ದರು. ಬ್ಲಾಸ್ಟ್ ಆಗಿದ್ದರು. ಎಲ್ಲರಿಗೂ ತಮ್ಮ ಕುಟುಂಬದ ಯಾರನ್ನೋ ಒಬ್ಬರನ್ನು ಕಳೆದುಕೊಂಡಷ್ಟು ನೋವಾಗಿತ್ತು. ಅದು ಭಾರತದ ಹನ್ನೊಂದನೇ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಪವರ್.

ಕಲಾಂ ಅವರನ್ನು ಪ್ರೀತಿಸಲು ನೂರಾರು ಕಾರಣಗಳು

1. ಅಬ್ದುಲ್ ಕಲಾಂ ಅವರು ಹುಟ್ಟಿದ್ದು ತಮಿಳುನಾಡಿನ ರಾಮೇಶ್ವರದ ಒಂದು ಬೀದಿಯಲ್ಲಿ. ಅವರ ಬೀದಿಯಲ್ಲಿ ಮಾರು ದೂರಗಳಲ್ಲಿ ಮಂದಿರ, ಮಸೀದಿ ಮತ್ತು ಚರ್ಚ್ ಇದ್ದವು. ಬಾಲಕ ಕಲಾಂ ಬೆಳಿಗ್ಗೆ ಮನೆಯಿಂದ ಹೊರಟವರು ಅವೆಲ್ಲ ಧರ್ಮ ಕೇಂದ್ರಗಳಿಗೆ ಭೇಟಿ ಕೊಟ್ಟು, ಪ್ರಾರ್ಥನೆ ಮಾಡಿ, ಪ್ರಸಾದ ತೆಗೆದುಕೊಳ್ಳುತ್ತಿದ್ದರು. ಕುರಾನ್, ಬೈಬಲ್, ಭಗವದ್ಗೀತೆ ಎಲ್ಲವನ್ನೂ ಓದಿಕೊಂಡಿದ್ದರು.

2. ಅವರು ನಿಜವಾದ ಅರ್ಥದಲ್ಲಿ ಭಾರತದ ಧರ್ಮ ನಿರಪೇಕ್ಷತೆಯ ಸಂಕೇತ ಆಗಿದ್ದರು. ಅವರು ತಮ್ಮ ಇಡೀ ಜೀವನದಲ್ಲಿ ತಾವೊಬ್ಬ ಮುಸ್ಲಿಂ ಎಂದು ಎಲ್ಲಿಯೂ ತೋರಿಸಿಕೊಡಲಿಲ್ಲ. ಅವರು ಎಲ್ಲಾ ಧರ್ಮಗಳನ್ನು, ಧರ್ಮದವರನ್ನು ಪ್ರೀತಿ ಮಾಡುತ್ತಿದ್ದರು.

3. ಅವರಿಗೆ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಪಾಠ ಮಾಡಿದ ವಿಜ್ಞಾನ ಶಿಕ್ಷಕ ಶಿವ ಸುಬ್ರಮಣ್ಯ ಅಯ್ಯರ್ ಅವರನ್ನು ಕಲಾಂ ಎಂದಿಗೂ ಮರೆಯಲಿಲ್ಲ. ಕಲಾಂ ರಾಷ್ಟ್ರಪತಿ ಆಗಿದ್ದಾಗ ಕೂಡ ರಾಷ್ಟ್ರಪತಿ ಭವನದಲ್ಲಿ ಅದೇ ಮೇಷ್ಟ್ರ ಫೋಟೋ ಹಾಕಿ ತನ್ನ ಗುರುಗಳಿಗೆ ಗೌರವ ಕೊಟ್ಟಿದ್ದರು.

4. ಅವರು ಪೈಲಟ್ ಆಗುವ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು. ಅದಕ್ಕೆ ಕಾರಣ ದೈಹಿಕ ಫಿಟ್ನೆಸ್ ಕೊರತೆ.

APJ Abdul Kalam birthday on October 15

5. ಅವರ ಅತ್ಯಂತ ಸರಳವಾದ ಸಸ್ಯಾಹಾರಿ ಊಟ, ತಿಂಡಿ ಇಷ್ಟಪಡುತ್ತಿದ್ದರು. ಡ್ರೆಸ್ ಕೋಡ್ ಕೂಡ ತುಂಬಾ ಸರಳ. ಪ್ರಧಾನಿ ವಾಜಪೇಯಿ ಅವರು ಎಷ್ಟು ಒತ್ತಾಯ ಮಾಡಿದರೂ ಕಲಾಂ ಕೋಟ್ ಧರಿಸಲು ಸಂಕೋಚ ಮಾಡುತ್ತಿದ್ದರು.

6. ಅಬ್ದುಲ್ ಕಲಾಂ ಅವರು ಹಿಂದೂ ದೇವಸ್ಥಾನಗಳಿಗೆ ಸಂಕೋಚ ಮಾಡದೆ ಸಂದರ್ಶನ ಮಾಡುತ್ತಿದ್ದರು. ಆಗ ಸಾಂಪ್ರದಾಯಕ ಪಂಚೆ ಮತ್ತು ಅಂಗಿ ತೊಟ್ಟು ಹೋಗುತ್ತಿದ್ದರು.

7. ಒಮ್ಮೆ ಭುವನೇಶ್ವರ ನಗರದಲ್ಲಿ ಒಂದು ಕಾರ್ಯಕ್ರಮಕ್ಕೆ ರಾಷ್ಟ್ರಪತಿ ಹೋಗಿದ್ದಾಗ ವಿಐಪಿಗಳು ಮುಂದೆ ಕೂತಿದ್ದರು. ವಿದ್ಯಾರ್ಥಿಗಳು ಹಿಂದೆ ಕೂತಿದ್ದರು. ಅವರು ಪ್ರೋಟೋಕಾಲ್ ಆಫೀಸರ್ ಅವರನ್ನು ಹತ್ತಿರ ಕರೆದು ಹೇಳಿದ್ದು – ಇನ್ನು ಮುಂದೆ ವಿದ್ಯಾರ್ಥಿಗಳೇ ಮುಂದೆ ಕೂರುವ ವ್ಯವಸ್ಥೆ ಮಾಡಿ!

8. ಅವರು ಒಬ್ಬ ಗಣಿತ ಪ್ರೊಫೆಸರ್‌ರಿಂದ ರುದ್ರ ವೀಣೆ ನುಡಿಸುವುದನ್ನು ಕಲಿತಿದ್ದರು. ಹಲವು ಸಂಗೀತ ಕಾರ್ಯಕ್ರಮ ಕೂಡ ನೀಡಿದ್ದರು.

9. ಅವರು ಬೆಂಗಳೂರಿನ DRDOದಲ್ಲಿ ವಿಜ್ಞಾನಿಗಳ ಜೊತೆ ಸೇರಿ ಸಿದ್ಧಪಡಿಸಿದ ಕ್ಷಿಪಣಿಗಳಿಗೆ ಭಾರತೀಯ ಸಂಸ್ಕೃತಿಯ ಪ್ರತೀಕವಾದ ಆಕಾಶ್, ಪ್ರಥ್ವಿ, ಅಗ್ನಿ, ತ್ರಿಶೂಲ್, ಬ್ರಹ್ಮೋಸ್, ಪ್ರಹಾರ್….. ಹೀಗೆ ನಾಮಕರಣ ಮಾಡಿದರು.

10. PSLV ರಾಕೆಟ್ ಸೋತು ಹೋದಾಗ ಅಬ್ದುಲ್ ಕಲಾಂ ಅವರು ಎಲ್ಲ ವಿಜ್ಞಾನಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು.

11. ಈರೋಡಿನ ಒಂದು ಕಾರ್ಯಕ್ರಮದಲ್ಲಿ ಅವರಿಗೆ ಆಯೋಜಕರು ಒಂದು ಗ್ರೈಂಡರ್ ಉಡುಗೊರೆ ಕೊಟ್ಟಿದ್ದರು. ಕಲಾಂ ಅದನ್ನು ತೆಗೆದುಕೊಳ್ಳಲು ಒಪ್ಪಲಿಲ್ಲ. ಕೊನೆಗೆ ಆಯೋಜಕರು ತುಂಬಾ ಒತ್ತಾಯ ಮಾಡಿದಾಗ ಸ್ವೀಕಾರ ಮಾಡಿದರು. ಮರುದಿನ ಆ ಗ್ರೈಂಡರ್ ರೇಟ್ ವಿಚಾರಣೆ ಮಾಡಿ ಅಷ್ಟು ಬೆಲೆಯ (ತಮ್ಮ ಸ್ವಂತ ಖಾತೆಯಿಂದ) ಚೆಕ್ ಬರೆದು ಗ್ರೈಂಡರ್ ಕಂಪೆನಿಗೆ ಕಳುಹಿಸಿ ಕೊಟ್ಟವರು ಕಲಾಂ!

12. ಅವರಿಗೆ ಭಾರತರತ್ನ ಪ್ರಶಸ್ತಿ ಬಂದಾಗ ಅವರು ಹೇಳಿದ ಮಾತು – ನನಗೆ ದುಃಖ ಆಗ್ತಾ ಇದೆ. ಏಕೆಂದರೆ ನನಗಿಂತ ಮೊದಲು ನನ್ನ ಗುರುಗಳಾದ ವಿಕ್ರಂ ಸಾರಾಭಾಯಿ ಅವರಿಗೆ ಸಿಗಬೇಕಿತ್ತು ಅಂದಿದ್ದರು!

13. ಅವರು ಪ್ರಧಾನಿ ವಾಜಪೇಯಿ ಅವರಿಗೆ ವೈಜ್ಞಾನಿಕ ಸಲಹೆಗಾರ ಆಗಿ ಒಂದು ಅವಧಿಗೆ ಕೆಲಸ ಮಾಡಿದ್ದರು. ಆಗ ಭಾರತವು ಪೋಖ್ರಾನ್‌ ಎಂಬಲ್ಲಿ ಯಶಸ್ವೀ ಅಣು ಪರೀಕ್ಷೆ ಮಾಡಿತು. ಅದರ ಕ್ರೆಡಿಟ್ ಕೂಡ ಕಲಾಂ ಅವರು ಭಾರತದ ವಿಜ್ಞಾನಿಗಳಿಗೆ ಕೊಟ್ಟರು.

14. ಅವರ ಆತ್ಮಚರಿತ್ರೆಯ ಪುಸ್ತಕ Wings of fire ಇದರಲ್ಲಿ ಅವರು 2020ರಲ್ಲಿ ಭಾರತ ಹೇಗಿರಬೇಕು? (ವಿಷನ್ 2020) ಎಂದು ವಿಸ್ತಾರವಾಗಿ ಬರೆದು ಪ್ರಕಟ ಮಾಡಿದ್ದರು. ಅದರಲ್ಲಿ ಅವರು ಭಾರತದ ಯುವಕರ ಬಗ್ಗೆ ಬರೆದ ವಾಕ್ಯಗಳು ಬೆರಗು ಮೂಡಿಸುತ್ತವೆ.

15. ಅವರು ರಾಷ್ಟ್ರಪತಿ ಆಗಿದ್ದಾಗ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಸೇರಿದ ಕಾರ್ಯಕ್ರಮಗಳಿಗೆ ಆದ್ಯತೆ ಕೊಟ್ಟರು. ಅಲ್ಲಿ ಭಾಷಣಗಳನ್ನು ಮಾಡದೆ ಸಂವಾದಗಳನ್ನು ನಡೆಸಿದರು.

16. ಅವರ ಮಾತು, ಕೃತಿ, ಬರವಣಿಗೆ ಎಲ್ಲಿಯೂ ಒಂದು ಹಿಡಿ ಅಹಂ ನನಗೆ ಕಂಡು ಬರಲೇ ಇಲ್ಲ.

17. ಅವರು ಹಲವು ಅದ್ಭುತ ಪುಸ್ತಕ ಬರೆದಿದ್ದಾರೆ. ಅದರಲ್ಲಿ Wings of fire, Ignited Minds ಎರಡೂ ಅದ್ಭುತವಾಗಿವೆ.

18. ಅವರು ರಾಷ್ಟ್ರಪತಿಯ ಹುದ್ದೆಗೆ ಎರಡನೇ ಬಾರಿಗೆ ಸ್ಪರ್ಧೆ ಮಾಡಿ ಗೆಲ್ಲಬಹುದಾಗಿತ್ತು. ಆದರೆ ಅವರು ಅದನ್ನು ಆಸೆ ಪಡಲೇ ಇಲ್ಲ. ಹುದ್ದೆಯಿಂದ ಇಳಿದ ಮರುದಿನ ಅವರು ರಾಮೇಶ್ವರಕ್ಕೆ ಬಂದು, ಚಾಕ್ ಹಿಡಿದು ವಿದ್ಯಾರ್ಥಿಗಳಿಗೆ ವಿಜ್ಞಾನ ಪಾಠ ಮಾಡಲು ತೊಡಗಿದ್ದರು.

ಇದನ್ನೂ ಓದಿ: Raja Marga Column : ಐಕಾನ್ ವ್ಯಕ್ತಿಗಳು ಎರಡೆರಡು ಬಾರಿ ಹುಟ್ಟುತ್ತಾರೆ! ಅದು ಹೇಗೆ?

19. ಅವರು ರಾಷ್ಟ್ರಪತಿ ಆಗಿದ್ದಾಗ ರಾಷ್ಟ್ರಪತಿ ಭವನದ ಭದ್ರತೆಯನ್ನು ಸಡಿಲಿಸಿ ಎಲ್ಲರಿಗೂ ಭೇಟಿ ಮಾಡುವ ಅವಕಾಶ ನೀಡಿದ್ದರು. ಹಾಗೆ ಭೇಟಿ ಮಾಡಿದವರ ಆತಿಥ್ಯದ ಬಗ್ಗೆ ಕೂಡ ಅವರು ಕಾಳಜಿ ಮಾಡಿದ್ದರು.

20. ಅವರಿಗೆ ಪ್ರಪಂಚದ ಮೂವತ್ತಕ್ಕೂ ಅಧಿಕ ವಿವಿಗಳು ಗೌರವ ಡಾಕ್ಟರೇಟ್ ನೀಡಿದ್ದವು. ಆದರೆ ಅಬ್ದುಲ್ ಕಲಾಂ ಎಂದಿಗೂ ತಮ್ಮ ಹೆಸರಿನ ಮುಂದೆ ಡಾಕ್ಟರ್ ಎಂದು ಹಾಕಿಕೊಳ್ಳಲೆ ಇಲ್ಲ!

ಇನ್ನೂ ಇಂತಹ ನೂರಾರು ಉದಾಹರಣೆ ಕೊಡುತ್ತ ಹೋಗಬಹುದು. ಅಬ್ದುಲ್ ಕಲಾಮ್ ‘ಪೀಪಲ್ಸ್ ಪ್ರೆಸಿಡೆಂಟ್’ ಆದದ್ದು ಸುಮ್ಮನೆ ಅಲ್ಲ!

Exit mobile version