Site icon Vistara News

Raja Marga Column : ಸ್ಯಾಮ್‌ ಬಹಾದೂರ್;‌ ಭಾರತೀಯರು ನೋಡಲೇಬೇಕಾದ ಮಾಣೆಕ್‌ ಷಾ ಬಯೋಪಿಕ್

Sam Manek Shaw

ಸ್ವತಂತ್ರ ಭಾರತದ ಮೊಟ್ಟ ಮೊದಲ ಫೀಲ್ಡ್ ಮಾರ್ಷಲ್ ಎಂಬ ಕೀರ್ತಿ ಒಂದೆಡೆ! 1971ರ ಭಾರತ- ಪಾಕ್ ಯುದ್ಧವನ್ನು (Indo-pak war 1971) ಮುಖ್ಯಸ್ಥ ಎಂಬ ಶ್ರೇಯಸ್ಸು ಇನ್ನೊಂದೆಡೆ! ಏಳು ದಶಕಗಳ ಕಾಲ ಸೈನಿಕನಾಗಿ ಭಾರತವನ್ನು ಸೇವೆ ಮಾಡಿದ ದಾಖಲೆ ಮತ್ತೊಂದೆಡೆ! ತನ್ನ ಬದುಕಿನಲ್ಲಿ ಐದು ಯುದ್ಧಗಳಲ್ಲಿ ಭಾಗವಹಿಸಿದ ಸಾಹಸ ಇನ್ನೊಂದೆಡೆ. ಅದು ಫೀಲ್ಡ್ ಮಾರ್ಷಲ್‌ ಮಾಣೆಕ್ ಷಾ (Field Marshal Manek Shaw) ವ್ಯಕ್ತಿತ್ವ! (Raja Marga Column)

1914ರಲ್ಲಿ ಅಮೃತಸರದ ಪಾರ್ಸಿ ಕುಟುಂಬದಲ್ಲಿ ಹುಟ್ಟಿದ ಅವರ ತಂದೆ ವೈದ್ಯರಾಗಿದ್ದರು. ಮಗನಿಗೂ ಡಾಕ್ಟರ್‌ ಆಗುವ ಆಸೆ. ತನ್ನ 15ನೆ ವರ್ಷದಲ್ಲಿ ಅಪ್ಪನ ಮುಂದೆ ನಿಂತು ಗಟ್ಟಿಯಾಗಿ ‘ನನ್ನನ್ನು ಲಂಡನಿಗೆ ಕಳುಹಿಸಿಕೊಡಿ. ಮೆಡಿಸಿನ್ ಓದಿ ಬರುತ್ತೇನೆ’ ಎಂದಾಗ ಅಪ್ಪ ‘ ಹುಡುಗ, ನಿನಗೆ ಪ್ರಾಯ ತುಂಬಾ ಕಡಿಮೆ. ಅವಸರ ಮಾಡಬೇಡ’ ಅಂದರು.

ಸಿಟ್ಟಿನಲ್ಲಿ ಹುಡುಗನ ರಕ್ತ ಬಿಸಿ ಆಯ್ತು. ಅಪ್ಪನ ಮೇಲೆ ಸೇಡು ತೀರಿಸಿಕೊಳ್ಳಲು ಹುಡುಗ ಆರಿಸಿದ ದಾರಿ ಎಂದರೆ ಅಪ್ಪನಿಗೆ ಹೇಳದೆ ಹೋಗಿ ಸೈನ್ಯಕ್ಕೆ ಸೇರುವುದು! ಹಾಗೆ ಭಾರತೀಯ ಸೇನಾ ಕಾಲೇಜಿನ ತರಬೇತಿಗೆ ಹೋಗಿ ಸೇರಿದಾಗ ಸಾಮ್ ವಯಸ್ಸು ಬರೇ 18! ಅಲ್ಲಿಂದ ಆರಂಭಿಸಿ 94ನೇ ವಯಸ್ಸಲ್ಲಿ ತೀರಿ ಹೋಗುವತನಕ ಅವರು ತನ್ನ ಇಡೀ ಬದುಕನ್ನು ಸೇನೆಯ ಸೇವೆಯಲ್ಲಿಯೇ ಕಳೆದರು ಅಂದರೆ ಅದು ಭಾರತದ ಭಾಗ್ಯ. ಅವರದ್ದು ಅತ್ಯುನ್ನತ ದೇಶಪ್ರೇಮ ಮತ್ತು ಹೋರಾಟದ ಯಶೋಗಾಥೆ!

Sam Bahadur film Vicky kaushal

ಒನ್ಸ್ ಅ ಸೋಲ್ಜರ್ ಇಸ್ ಆಲ್ವೇಸ್ ಅ ಸೋಲ್ಜರ್

ಫೀಲ್ಡ್ ಮಾರ್ಷಲ್ ಸಾಮ್ ಮಾಣೆಕ್ ಷಾ ಅವರ ಪ್ರಸಿದ್ಧ ಮಾತಿದು: ಒನ್ಸ್ ಅ ಸೋಲ್ಜರ್ ಇಸ್ ಆಲ್ವೇಸ್ ಅ ಸೋಲ್ಜರ್. ಅವರು ಬದುಕಿದ್ದೆ ಹಾಗೆ! ತನ್ನ ಸೇನಾ ಕರ್ತವ್ಯದ ಅವಧಿಯಲ್ಲಿ ಐದು ಯುದ್ಧಗಳಲ್ಲಿ ಹೋರಾಡಿದ ಇನ್ನೊಬ್ಬ ಸೈನಿಕ ಜಗತ್ತಿನಲ್ಲಿಯೇ ದೊರೆಯುವುದಿಲ್ಲ!

ಸ್ವಾತಂತ್ರ್ಯಕ್ಕೂ ಮೊದಲು ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ಅವರು ಎರಡನೇ ವಿಶ್ವ ಯುದ್ಧದಲ್ಲಿ ಹೋರಾಡಿದರು. ಅವರ ಸಾಹಸವನ್ನು ಮೆಚ್ಚಿದ ಇಂಗ್ಲೆಂಡ್ ರಾಣಿ ಅವರಿಗೆ ಆಗಲೇ ಅತ್ಯುನ್ನತವಾದ ‘ಮಿಲಿಟರಿ ಕ್ರಾಸ್’ ಗೌರವ ನೀಡಿ ಸನ್ಮಾನಿಸಿದರು.

ಮುಂದೆ ಭಾರತವು ಸ್ವಾತಂತ್ರ್ಯ ಪಡೆದ ತಕ್ಷಣ ನಡೆದ ಭಾರತ- ಪಾಕ್ ಯುದ್ಧ, ಮುಂದೆ ನಡೆದ ಇಂಡಿಯಾ -ಚೀನಾ ಯುದ್ಧ, 1965ರ ಇಂಡಿಯಾ- ಪಾಕಿಸ್ತಾನ್ ಯುದ್ಧ ಮತ್ತು 1971ರ ಭೀಕರವಾದ ಭಾರತ- ಪಾಕಿಸ್ತಾನದ ಯುದ್ಧ ಇವುಗಳನ್ನು ಅವರು ಭಾರತಕ್ಕಾಗಿ ಹೋರಾಡಿದರು. ಅದರಲ್ಲಿಯೂ ಅವರು ಆರ್ಮಿ ಮುಖ್ಯಸ್ಥರಾಗಿ ಹೋರಾಡಿದ 1971ರ ಯುದ್ಧವು ಅವರನ್ನು ರಾಷ್ಟ್ರೀಯ ಹೀರೋ ಆಗಿ ಮಾಡಿತು.

ಇಂದಿರಾ ಗಾಂಧಿ ಅವರ ಜತೆ ಮಾಣೆಕ್‌ ಷಾ

ಅದು 1971ರ ಬಾಂಗ್ಲಾ ವಿಮೋಚನಾ ಯುದ್ಧ

1971ರ ಭಾರತ ಪಾಕ್ ಯುದ್ಧವು ಮುಂದೆ ಬಾಂಗ್ಲಾದೇಶ ಎಂಬ ರಾಷ್ಟ್ರದ ಸ್ಥಾಪನೆಗೆ ಕಾರಣವಾಯಿತು ಎಂದು ನಾವೆಲ್ಲ ಓದಿಕೊಂಡ ಇತಿಹಾಸ. ಆ ಯುದ್ಧದ ಸಂದರ್ಭದಲ್ಲಿ ಪ್ರಧಾನಿ ಆಗಿದ್ದವರು ಇಂದಿರಾ ಗಾಂಧಿ. ಅವರು ಸೇನೆಯ ಅಭಿಪ್ರಾಯ ಕೇಳದೆ ಯುದ್ಧದ ಘೋಷಣೆಗೆ ಹೊರಟಾಗ ಎದ್ದು ನಿಂತು ಪ್ರತಿಭಟನೆ ಮಾಡಿದವರು ಸ್ಯಾಮ್.‌ ‘ನಮ್ಮ ಸೇನೆ ಯುದ್ಧಕ್ಕೆ ಮಾನಸಿಕವಾಗಿ ಸಿದ್ಧವಾಗಿಲ್ಲ. ತರಬೇತಿಯ ಕೊರತೆ ಇದೆ. ಈಗ ಯುದ್ಧ ಮಾಡಲು ಹೊರಟರೆ ನಾವು ಸೋಲುವುದು ಖಂಡಿತ. ನನಗೆ ಸಮಯ ಬೇಕು. ನನ್ನ ಯೋಜನೆಯ ಪ್ರಕಾರ ಯುದ್ಧವು ನಡೆಯಬೇಕು. ನಾನು ಭಾರತವನ್ನು ಗೆಲ್ಲಿಸಿಕೊಡುತ್ತೇನೆ. ಇಲ್ಲಾಂದರೆ ನನ್ನ ರಾಜೀನಾಮೆ ತೆಗೆದುಕೊಳ್ಳಿ!’ ಎಂದು ಗುಡುಗಿದರು.

ಅವರ ಹಟಕ್ಕೆ ಉಕ್ಕಿನ ಮಹಿಳೆ ಎಂದು ಆಗ ಕರೆಸಿಕೊಂಡ ಇಂದಿರಾ ಗಾಂಧಿ ಕೂಡ ಕರಗಿದರು. ಸ್ಯಾಮ್‌ ಯೋಜನೆಯ ಪ್ರಕಾರ ಯುದ್ಧವು ನಡೆದು ಭಾರತವು ಆ ಯುದ್ಧವನ್ನು ಭಾರೀ ದೊಡ್ಡದಾಗಿ ಗೆದ್ದಿತು. 12 ದಿನಗಳ ಯುದ್ಧದಲ್ಲಿ ಭಾರತವು ಗೆದ್ದು 94,000 ಪಾಕ್ ಸೈನಿಕರು ಅರೆಸ್ಟ್ ಆದರು. ಹತ್ತು ಮಿಲಿಯನ್ ನಿರಾಶ್ರಿತರ ಬಾಂಗ್ಲಾ ದೇಶದ ಸ್ಥಾಪನೆಗೆ ಕಾರಣವಾದ ಯುದ್ಧ ಅದು.

ಸ್ಯಾಮ್‌ ಮಾಣೆಕ್‌ ಷಾ ಮತ್ತು ವಿಕ್ಕಿ ಕೌಶಲ್

ಬೇಗಂ ಕಂಡಾಗ ನನ್ನ ನೆನಪು ಮಾಡಿ!

ವಿಜಯದ ಉನ್ಮಾದದಲ್ಲಿ ಮೈಮರೆತ ಭಾರತೀಯ ಸೈನಿಕರು ಎದುರಾಳಿ ಗ್ರಾಮಗಳಿಗೆ ಹೊಂಚು ಹಾಕಿ ನುಗ್ಗುವ ಅಪಾಯ ಆಗ ಎದುರಾಗಿತ್ತು. ಆಗ ಸ್ಯಾಮ್‌ ತನ್ನ ಸೈನಿಕರಿಗೆ ಹೇಳಿದ ಮಾತು ತುಂಬಾ ಅದ್ಭುತ ಆಗಿತ್ತು.

“ಬೇಗಂ ಎದುರು ಸಿಕ್ಕರೆ ಅವರನ್ನು ಗೌರವಿಸಿ. ನಿಮ್ಮ ಮನಸ್ಸು ಚಂಚಲ ಆದರೆ ಎರಡೂ ಕೈಗಳನ್ನು ನಿಮ್ಮ ಪಾಂಟ್ ಕಿಸೆಯಲ್ಲಿ ಇಟ್ಟುಕೊಳ್ಳಿ ಮತ್ತು ಸ್ಯಾಮ್‌ ನೆನಪು ಮಾಡಿ!”

ಅವರ ಹಾಸ್ಯ ಪ್ರವೃತ್ತಿ, ರಾಷ್ಟ್ರಪ್ರೇಮ ಮತ್ತು ಹೋರಾಟದ ಮನೋವೃತ್ತಿಗೆ ನಮಗೆ ನೂರಾರು ನಿದರ್ಶನಗಳು ಅವರ ಬದುಕಿನಲ್ಲಿ ದೊರೆಯುತ್ತವೆ. ಆಗಿನ ಕಾಲದಲ್ಲಿ ಪ್ರಧಾನಿ ಇಂದಿರಾ ಗಾಂಧಿ ಜೊತೆಗೆ ಸಲಿಗೆಯಿಂದ ಮಾತಾಡುವ ಗಟ್ಸ್ ಹೊಂದಿದ್ದ ಏಕೈಕ ವ್ಯಕ್ತಿ ಅಂದರೆ ಅದು ಸ್ಯಾಮ್‌ ಮಾಣೆಕ್ ಷಾ ಮಾತ್ರ!

ಭಾರತದ ಮೊಟ್ಟ ಮೊದಲ ಫೀಲ್ಡ್ ಮಾರ್ಷಲ್

ಮುಂದೆ ಭಾರತ ಸರಕಾರವು ಮೂರೂ ಸೇನೆಗಳ ಸಮನ್ವಯ ಮತ್ತು ಆಧುನಿಕತೆಗೆ ಮುಂದಾದಾಗ ಅತ್ಯುನ್ನತ ‘ಫೀಲ್ಡ್ ಮಾರ್ಷಲ್ ‘ ಎಂಬ ರ‍್ಯಾಂಕ್ ಸೃಷ್ಟಿಸಲು ಮುಂದಾಯಿತು. ಆಗ ಎಲ್ಲಾ ಅರ್ಹತೆ ಮತ್ತು ಅನುಭವಗಳ ಮೇಲೆ ಆಯ್ಕೆ ಆದದ್ದು ಇದೇ‌ ಸ್ಯಾಮ್‌ ಮಾಣೆಕ್ ಷಾ. ಆ ಪದವಿಗೆ ಏರಿದ ಮೊದಲ ಭಾರತೀಯ ಅಂದರೆ ಅದು ಅವರೇ. ಆಗ ಅವರು ಭಾರತೀಯ ಸೇನೆಯ ಆಧುನಿಕತೆಗೆ ಕೈಗೊಂಡ ಕ್ರಮಗಳು ಮತ್ತು ಪ್ರೇರಣಾ ಶಿಬಿರಗಳು ಮುಂದೆ ಭಾರತವನ್ನು ಗೆಲ್ಲಿಸುತ್ತಾ ಹೋದವು. ಸೇನಾ ಸಮವಸ್ತ್ರ ಧರಿಸಿ ಕೈಯ್ಯಲ್ಲಿ ಬಂಗಾರದ ಹಿಡಿ ಇರುವ ಊರು ಗೋಲು ಹಿಡಿದು ಅವರು ತರಬೇತಿಗೆ ಬಂದು ನಿಂತರೆ ಸೇನಾ ವಲಯದಲ್ಲಿ ಸಹಜವಾದ ಶಿಸ್ತು ಬಂದು ಬಿಡುತ್ತಿತ್ತು.

ಹೋರಾಟ, ಹೋರಾಟ ಮತ್ತು ಹೋರಾಟ!

ಯುದ್ಧ ಭೂಮಿಯಲ್ಲಿ ಮಾತ್ರ ಅವರು ಹೋರಾಟ ಮಾಡದೆ ಅವರು ಬದುಕಿನಲ್ಲಿ ಕೂಡ ಹಲವು ಹೋರಾಟಗಳನ್ನು ಮಾಡಿದರು. ಫೀಲ್ಡ್ ಮಾರ್ಷಲ್ ಹುದ್ದೆ ನೀಡಿದ ಭಾರತ ಸರಕಾರವು ಅದರ ಸಂಭಾವನೆ ನೀಡಲು ತಾರಮ್ಮಯ್ಯ ಮಾಡಿದಾಗ ಮೂರು ದಶಕಗಳ ಕಾಲ ಹೋರಾಡಿದರು. ಮುಂದೆ 2007ರಲ್ಲಿ ಆಗಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಸ್ಯಾಮ್‌ ಅವರನ್ನು ವೆಲ್ಲಿಂಗ್ಟನ್ ನಗರದಲ್ಲಿ ಭೇಟಿ ಆಗಿ ಸಂಭಾವನೆಯ ಬಾಕಿ 1.3 ಕೋಟಿಯ ಚೆಕ್ ನೀಡಿದ ನಂತರವೇ ಜ್ವಾಲಾಮುಖಿ ತಣ್ಣಗಾದದ್ದು! 2008ರಲ್ಲಿ ತನ್ನ 94ನೆ ವಯಸ್ಸಿನಲ್ಲಿ ಅವರು ನಿಧನರಾದರು.

ಇದನ್ನೂ ಓದಿ : Raja Marga Column : ಎಷ್ಟೊಂದು ಕಷ್ಟ ಆ ಜೀವಕ್ಕೆ; ಲೀಲಮ್ಮನಿಗೆ ಸ್ವರ್ಗದಲ್ಲಾದರೂ ಸುಖ ಸಿಗಲಿ!

‘ಸ್ಯಾಮ್‌ ಬಹದ್ದೂರ್’ ಅವರದ್ದೇ ಬಯೋಪಿಕ್ ಸಿನೆಮಾ ಬಂದಿದೆ

Sam Bahadur film Vicky kaushal

ಫೀಲ್ಡ್ ಮಾರ್ಷಲ್ ಸ್ಯಾಮ್‌ ಮಾಣೆಕ್ ಷಾ ಅವರ ಬದುಕಿನ ಹೋರಾಟದ ಕಥೆಗಳನ್ನು ಆಧಾರವಾಗಿ ಇಟ್ಟುಕೊಂಡು
‘ಸ್ಯಾಮ್‌ ಬಹಾದ್ದೂರ್’ ಎಂಬ ಹಿಂದೀ ಸಿನಿಮಾ ಈಗ ತೆರೆಗೆ ಬಂದಿದೆ. ಮೇಘನಾ ಗುಲ್ಜಾರ್ ಈ ಸಿನೆಮಾ ನಿರ್ದೇಶನ ಮಾಡಿದ್ದಾರೆ. ಈ ರೀತಿಯ ಪಾತ್ರಗಳಿಗೆ ತುಂಬಾ ಚೆನ್ನಾಗಿ ಸೂಟ್ ಆಗುವ ವಿಕ್ಕಿ ಕೌಶಲ್ ಎಂಬ ನಟ ಸ್ಯಾಮ್‌ ಪಾತ್ರ ಮಾಡಿದ್ದಾರೆ. ಭಾರತೀಯ ಮಿಲಿಟರಿ ಇತಿಹಾಸದ ಅದ್ಭುತ ಅನಾವರಣವು ಈ ಸಿನಿಮಾದಲ್ಲಿ ಆಗಿದೆ. ಹಾಗೆಯೇ ಫೀಲ್ಡ್ ಮಾರ್ಷಲ್ ಸಾಮ್ ಮಾಣೆಕ್ ಷಾ ಅವರ ವ್ಯಕ್ತಿತ್ವ ಕೂಡ. ಭಾರತೀಯರು ನೋಡಲೇ ಬೇಕಾದ ಸಿನಿಮಾ ಅದು.

Exit mobile version