(ನಿನ್ನೆಯ ಸಂಚಿಕೆಯಿಂದ ಮುಂದುವರಿದಿದೆ).
ಸಣ್ಣ ಸಣ್ಣ ಮಕ್ಕಳ ಮನೋವಿಕಾಸಕ್ಕೆ (Psychological Development) ಪೂರಕವಾಗಿ ಯಾವ ರೀತಿಯ ಪುಸ್ತಕಗಳನ್ನು ಓದಿಸಬೇಕು ಎಂದು ನಿನ್ನೆಯ ಸಂಚಿಕೆಯಲ್ಲಿ (ನವೆಂಬರ್ 25) ವಿವರವಾಗಿ ಬರೆದಿದ್ದೆ. ಇಂದು 10-14 ವಯಸ್ಸಿನ ಮಕ್ಕಳಿಗೆ ಸುಲಭವಾಗಿ ಅರ್ಥ ಆಗುವ ಪುಸ್ತಕಗಳ ಬಗ್ಗೆ ನಾನು ಬರೆಯಬೇಕು. ಈ ವಯಸ್ಸಿನ ಮಕ್ಕಳು ತಮ್ಮ ಕಲ್ಪನಾ ಲೋಕವನ್ನು ವಿಸ್ತಾರ ಮಾಡುತ್ತ ನಿಧಾನವಾಗಿ ವಾಸ್ತವದ ಕಡೆಗೆ ಹೆಜ್ಜೆ ಹಾಕುತ್ತಿರುತ್ತಾರೆ. ಅವರಲ್ಲಿ ಸ್ವಅರಿವು ದಟ್ಟವಾಗಿ ಮೂಡುವ ವಯಸ್ಸದು. ಅಂತಹ ಮಕ್ಕಳಿಗೆ ವಾಸ್ತವದ ಪರಿಕಲ್ಪನೆ ಮೂಡಿಸುವ ಪುಸ್ತಕಗಳನ್ನು ಓದಿಸಬಹುದು. ಮಕ್ಕಳು ತಮ್ಮ ಸ್ವಂತ ಆಸಕ್ತಿಯಿಂದ ಓದಬೇಕು ಅನ್ನುವುದು ಆಶಯ. ಎಲ್ಲ ಮಕ್ಕಳ ಗ್ರಹಿಸುವ ಸಾಮರ್ಥ್ಯವು ನಾವು, ನೀವು ಅಂದಾಜು ಮಾಡಿದ್ದಕ್ಕಿಂತ ಹೆಚ್ಚಿದೆ ಎಂದು ನನಗೆ ನೂರಾರು ಬಾರಿ ಕನ್ವಿನ್ಸ್ ಆಗಿದೆ. (Raja Marga Column)
1. ವಿಜ್ಞಾನಿಗಳ ಬದುಕಿನ ಕತೆಗಳು
ಆ ವಯಸ್ಸಿನ ಮಕ್ಕಳಿಗೆ ಹೆಚ್ಚು ಇಷ್ಟ ಆಗುವುದು ಮೇರು ವಿಜ್ಞಾನಿಗಳ ಸಂಶೋಧನೆಯ ಕತೆಗಳು. ಎಡಿಸನ್ ಬಲ್ಬ್ ಹೇಗೆ ಕಂಡು ಹಿಡಿದನು? ಲೂಯಿ ಪ್ಯಾಶ್ಚರ್ ರೇಬಿಸ್ ರೋಗಕ್ಕೆ ಲಸಿಕೆ ಹೇಗೆ ಕಂಡುಹಿಡಿದನು? ಮೈಕೆಲ್ ಫ್ಯಾರಡೆ ಡೈನಮೋ ಹೇಗೆ ಆವಿಷ್ಕಾರ ಮಾಡಿದನು? ಜಗತ್ತಿನ ಮೊಟ್ಟ ಮೊದಲ ಎಣಿಕೆಯ ಯಂತ್ರವನ್ನು ಚಾರ್ಲ್ಸ್ ಬ್ಯಾಬೇಜ್ ಹೇಗೆ ಸಂಶೋಧನೆ ಮಾಡಿದನು? ಜಗತ್ತಿನ ಮೊದಲ ತೆರೆದ ಹೃದಯದ ಸರ್ಜರಿಯನ್ನು ಯಾರು, ಹೇಗೆ ಮಾಡಿದರು? ರೈಟ್ ಸೋದರರು ಜಗತ್ತಿನ ಮೊದಲ ವಿಮಾನವನ್ನು ಹೇಗೆ ತಯಾರು ಮಾಡಿದರು?….
ಇಂಥ ಪ್ರಶ್ನೆಗಳಿಗೆ ಉತ್ತರ ನೀಡುವ ಸರಳ ಭಾಷೆಯ ಸಣ್ಣ ಗಾತ್ರದ ಪುಸ್ತಕಗಳು ಬೇಕಾದಷ್ಟು ಸಿಗುತ್ತವೆ. ಅವುಗಳನ್ನು ಓದುವುದರಿಂದ ಮಕ್ಕಳಲ್ಲಿ ವಿಜ್ಞಾನದ ಮೇಲೆ ಪ್ರೀತಿಯು ಹೆಚ್ಚಾಗುವುದರ ಜೊತೆಗೆ ವೈಜ್ಞಾನಿಕ ಮನೋಭಾವ ಕೂಡ ರೂಪುಗೊಳ್ಳಲು ಸಹಕಾರಿ ಆಗುತ್ತದೆ.
2. ವ್ಯಕ್ತಿ ಚಿತ್ರಣದ ಕತೆಗಳು
40-50 ಪುಟಗಳ ವ್ಯಾಪ್ತಿಯ ವ್ಯಕ್ತಿ ಚಿತ್ರಣದ ಕತೆಗಳ ಕಿರು ಪುಸ್ತಕಗಳು ಈ ವಯಸ್ಸಿನ ಮಕ್ಕಳನ್ನು ತಟ್ಟನೆ ತಮ್ಮ ಕಡೆಗೆ ಸೆಳೆಯುತ್ತವೆ. ಆ ಪ್ರಾಯದ ಮಕ್ಕಳ ಧಾರಣ ಶಕ್ತಿಯು ಆಗ ಹೆಚ್ಚು ವಿಕಸಿತ ಆಗಿರುವ ಕಾರಣ ಮಕ್ಕಳು ಅಂತಹ ಸರಳ ಪುಸ್ತಕಗಳನ್ನು ಒಂದೇ ದಿನದಲ್ಲಿ ಓದಿ ಮುಗಿಸುತ್ತಾರೆ. ಶ್ರೇಷ್ಟ ವ್ಯಕ್ತಿಗಳ ಬದುಕನ್ನು ಮಕ್ಕಳು ಓದುವ ಕಾರಣ ಅವರಲ್ಲಿ ಬದುಕಿನ ಸ್ಫೂರ್ತಿ ಮತ್ತು ಪ್ರೇರಣೆಯನ್ನು ತುಂಬಲು ಈ ಪುಸ್ತಕಗಳು ಸಹಾಯ ಮಾಡುತ್ತವೆ.
3. ಮೌಲ್ಯಾಧಾರಿತ ನೀತಿಕಥೆಗಳು
ಮಕ್ಕಳು ಹುಟ್ಟುತ್ತಾ ಮೌಲ್ಯಗಳನ್ನು ಪಡೆದು ಈ ಪ್ರಪಂಚಕ್ಕೆ ಬಂದಿರುತ್ತಾರೆ. ಅಂತಹ ಮಕ್ಕಳಿಗೆ ಮತ್ತೆ ಮೌಲ್ಯಗಳನ್ನು ಬೋಧನೆ ಮಾಡುವ ಅಗತ್ಯ ಇಲ್ಲ. ಆದರೆ 10-14 ವರ್ಷ ವಯಸ್ಸಿನ ಮಕ್ಕಳು ಮೌಲ್ಯವನ್ನು ತಮ್ಮೊಳಗೆ ಗುರುತಿಸುವ ವಯಸ್ಸಿಗೆ ಬಂದಿರುವ ಕಾರಣ ಅವರು ಮೌಲ್ಯಾಧಾರಿತ ಪುಸ್ತಕಗಳನ್ನು ತುಂಬಾ ಪ್ರೀತಿಯಿಂದ ಸ್ವೀಕರಿಸುತ್ತಾರೆ.
ನೀವು ಮೂರನೇ ಅಥವ ನಾಲ್ಕನೇ ತರಗತಿಯಲ್ಲಿ ಓದಿರುವ ಪುಣ್ಯಕೋಟಿ ಕತೆಯು ನಮಗೆ ಜೀವನಪೂರ್ತಿ ನೆನಪು ಇರುತ್ತದೆ ಅಲ್ವಾ? ಅದಕ್ಕೆ ಕಾರಣವೆಂದರೆ ಅದರಲ್ಲಿ ಇರುವ ಮೌಲ್ಯಗಳು ಮತ್ತು ಭಾವಸ್ಪರ್ಶ. ಸತ್ಯ ಹರಿಶ್ಚಂದ್ರ ನಾಟಕ ನೋಡಿ ಬಾಲಕನಾದ ಮೋಹನದಾಸ ಕರಮಚಂದ ಗಾಂಧಿ ಜೀವನಪೂರ್ತಿ ಸತ್ಯ ಹೇಳುವ ಸಂಕಲ್ಪ ಮಾಡಿದ್ದು ನಮಗೆ ನೆನಪಿದೆ ಅಲ್ವಾ? ಕೇವಲ ಬೋಧನೆಯ ಸ್ತರದಲ್ಲಿ ಉಳಿದು ಹೋಗದ ಇಂತಹ ನೀತಿಕತೆಗಳು ಈ ವಯಸ್ಸಿನ ಮಕ್ಕಳಿಗೆ ಹೆಚ್ಚು ಪ್ರಸ್ತುತ ಆಗುತ್ತವೆ.
4. ವಿಕಸನದ ಲಘು ಅಂಕಣಗಳು ಮತ್ತು ಸಣ್ಣ ಕತೆಗಳು
ಹೆಚ್ಚು ಭಾರವಾದ ವೈಚಾರಿಕತೆ ಮತ್ತು ಬೌದ್ಧಿಕತೆ ಇಲ್ಲದ ಲಘು ಅಂಕಣಗಳು ಆ ಪ್ರಾಯದ ಮಕ್ಕಳಿಗೆ ಹೆಚ್ಚು ಇಷ್ಟ ಆಗುತ್ತವೆ. ಆ ಅಂಕಣಗಳು ಹೇಗಿರಬೇಕು ಎಂದರೆ ಕಡಿಮೆ ಮಾಹಿತಿ ಮತ್ತು ಹೆಚ್ಚು ಪ್ರೇರಣೆಯನ್ನು ಇರಬೇಕು. ಷಡಕ್ಷರಿ ಬರೆದಿರುವ ‘ಕ್ಷಣ ಹೊತ್ತು ಆಣಿ ಮುತ್ತು’ ಅಂಕಣ ತುಂಬಾ ಜನಪ್ರಿಯ ಆಗಲು ಈ ಗುಣವೇ ಕಾರಣ. ನಾನು ಬರೆದಿರುವ ‘ ರಾಜ ಮಾರ್ಗ ‘ ಅಂಕಣ ಪುಸ್ತಕ ಇದೇ ಉದ್ದೇಶದಿಂದ ಬರೆದಿರುವುದು.
ರವಿ ಬೆಳಗೆರೆ ಅವರ ಖಾಸ್ ಬಾತ್ ಅಂಕಣಗಳು,ವಿಶ್ವೇಶ್ವರ ಭಟ್ಟರ ಹಲವು ಸಂಪಾದಕೀಯ ಬರಹಗಳು ಮತ್ತು ಶ್ರೇಷ್ಠವಾದ ಅಂಕಣಗಳು, ಖ್ಯಾತ ಲೇಖಕಿ ನೇಮೀಚಂದ್ರರ ‘ಬದುಕು ಬದಲಿಸಬಹುದು’ ಸರಣಿ ಬರಹಗಳು,ಲೇಖಕ ಮಣಿಕಾಂತ್ ಅವರು ಬರೆದ ‘ಅಪ್ಪ ಅಂದರೆ ಆಕಾಶ ‘ ಮತ್ತು ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಮೊದಲಾದ ಸಣ್ಣ ಕತೆಗಳು ಮಕ್ಕಳನ್ನು ಸುಲಭವಾಗಿ ತಲುಪುತ್ತವೆ ಮತ್ತು ಸದಾ ಕಾಲ ನೆನಪಿನಲ್ಲಿ ಉಳಿಯುತ್ತವೆ. ಇವುಗಳು ವ್ಯಕ್ತಿತ್ವದ ವಿಕಸನದ ಮಹಾ ಉದ್ದೇಶವನ್ನು ಹೊಂದಿರುತ್ತವೆ.
5. ಪುರಾಣಗಳ ಸಣ್ಣ ಕತೆಗಳ ದೊಡ್ಡ ಕ್ಯಾನ್ವಾಸ್!
ರಾಮಾಯಣ, ಮಹಾಭಾರತ, ಭಾಗವತ ಮೊದಲಾದ ಭಾರತೀಯ ಮೌಲ್ಯಗಳ ಮಹಾಕಾವ್ಯಗಳು ಸರಳವಾದ ಗದ್ಯಭಾಷೆಯಲ್ಲಿ ದೊರೆತರೆ ಮಕ್ಕಳು ತುಂಬಾ ಇಷ್ಟಪಟ್ಟು ಪಡುತ್ತಾರೆ.
ಉದಾಹರಣೆಗೆ ಮಕ್ಕಳಿಗೆ ಬಾಲ ರಾಮಾಯಣ, ಬಾಲ ಭಾಗವತ, ಬಾಲ ಭಾರತ, ಕಿಷ್ಕಿಂಧಾ ಕಾಂಡ, ಕಾರ್ಟೂನ್ ರಾಮಾಯಣ, ಎಳೆಯರಿಗಾಗಿ ಭಾರತ, ಸಚಿತ್ರ ಭಾರತ, ಸಚಿತ್ರ ರಾಮಾಯಣ, ಪುರಾಣ ಬಾಲರು, ಭಾರತದ ಪುಣ್ಯ ನದಿಗಳ ಕತೆ, ಧ್ರುವನ ಕತೆ,……. ಇತ್ಯಾದಿ ಭಾರತದ ಮೌಲ್ಯ ಹೆಚ್ಚಿಸುವ ಕಿರುಪುಸ್ತಕಗಳು ಮಕ್ಕಳ ಕೈ ಸೇರಿದರೆ ಅವುಗಳು ಪೂರ್ತಿಯಾಗಿ ಓದಲ್ಪಟ್ಟ ನಂತರ ಕಪಾಟನ್ನು ಸೇರುತ್ತವೆ. ಅದರ ಜೊತೆಗೆ ನಿಮ್ಮ ಮಕ್ಕಳ ವಿಕಸನದ ಹಾದಿ ಸುಗಮ ಆಗುತ್ತದೆ.
ಇದನ್ನೂ ಓದಿ: Raja Marga Column : ಮಕ್ಕಳು ಬಾಲ್ಯದಲ್ಲಿ ಎಂತಹ ಪುಸ್ತಕ ಓದಬೇಕು? ಹೇಗೆ ಓದಬೇಕು?
ಮಕ್ಕಳಲ್ಲಿ ಓದುವಿಕೆಯನ್ನು ಉದ್ದೀಪನ ಮಾಡಲು ಕೆಲವು ಟಿಪ್ಸ್‌ಗಳು ಇಲ್ಲಿವೆ
1. ಶಾಲೆಗಳಲ್ಲಿ ಗ್ರಂಥಾಲಯದ ಉಪಯೋಗ ಸರಿಯಾಗಿ ಆಗಬೇಕು. ಮಕ್ಕಳಿಗೆ ಪುಸ್ತಕ ಮನೆಗೆ ಎರವಲು ಕೊಡುವ ವ್ಯವಸ್ಥೆ ಕೂಡ ಆಗಬೇಕು.
2. ವಾರಕ್ಕೆ ಒಂದು ಅಥವಾ ಎರಡು ಅವಧಿ ಗ್ರಂಥಾಲಯ ಪೀರಿಯಡ್ ಎಂದು ಇರಬೇಕು. ಅದನ್ನು ಮಕ್ಕಳು ಶಿಕ್ಷಕರ ಜೊತೆ ಗ್ರಂಥಾಲಯದಲ್ಲಿ ಕಳೆಯಬೇಕು.
3. ಶಾಲೆಗಳಲ್ಲಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳ ಬಹುಮಾನ ಕೊಡುವಾಗ ಪುಸ್ತಕ ಬಹುಮಾನ ಕೊಡಬೇಕು.
4. ‘ಪುಸ್ತಕ ಓದಿ ಬಹುಮಾನ ಗೆಲ್ಲಿ ‘ ಎಂಬ ಅರ್ಥಪೂರ್ಣ ಸ್ಪರ್ಧೆ ಉಡುಪಿಯ ಒಳಕಾಡು ಸರಕಾರಿ ಪ್ರೌಢಶಾಲೆಯಲ್ಲಿ ಪ್ರತೀ ವರ್ಷವೂ ನಡೆಯುತ್ತಿದೆ. (ಅದರ ಬಗ್ಗೆ ವಿವರವಾಗಿ ಮುಂದೆ ಬರೆಯುತ್ತೇನೆ). ಅದನ್ನು ಎಲ್ಲ ಶಾಲೆಗಳು ಖಂಡಿತ ಅನುಷ್ಠಾನ ಮಾಡಬಹುದು.
5. ಶಾಲೆಯಲ್ಲಿ ಗೋಡೆಪತ್ರಿಕೆ (Wall Magazine)ಯಲ್ಲಿ ಮಕ್ಕಳ ಬರವಣಿಗೆಗಳು ಪ್ರಕಾಶಿಸಬೇಕು.
6. ತರಗತಿಯಲ್ಲಿ ಅಧ್ಯಾಪಕರು ತಮ್ಮ ಪಾಠದ ನಡುವೆ ಪಾಠಕ್ಕೆ ಪೂರಕವಾಗಿ ಬೇರೆ ಬೇರೆ ಪುಸ್ತಕಗಳ ಉಲ್ಲೇಖ ಕೊಡಬೇಕು.
7. ಮಕ್ಕಳು ದಿನಪತ್ರಿಕೆಯ ವಾರ್ತೆಗಳನ್ನು ದಿನವೂ ಬೆಳಿಗ್ಗೆ ಅಸೆಂಬ್ಲಿಯಲ್ಲಿ ಓದುವ ವ್ಯವಸ್ಥೆ ಮಾಡಬೇಕು.
8. ಹೆತ್ತವರು ತಮ್ಮ ಮಕ್ಕಳಿಗಾಗಿ ಬಾಲ್ಯದಿಂದಲೇ ಒಂದು ಮನೆ ಲೈಬ್ರೆರಿ ಮಾಡಬೇಕು. ವಿಶೇಷವಾದ ಸಂದರ್ಭದಲ್ಲಿ ಮಕ್ಕಳಿಗೆ ಉತ್ತಮ ಪುಸ್ತಕಗಳ ಉಡುಗೊರೆ ಕೊಡಬೇಕು.
9. ಮಕ್ಕಳಲ್ಲಿ ಓದುವ ಜೊತೆಗೆ ಬರೆಯುವ ಹವ್ಯಾಸವನ್ನು ಉತ್ತೇಜನ ಮಾಡಬೇಕು. ಮಕ್ಕಳು ಪತ್ರಿಕೆಗೆ ಲೇಖನ ಬರೆಯುವ ಅಂಕಣಗಳು ಇವೆ. ಅವುಗಳನ್ನು ಮಕ್ಕಳಿಗೆ ಪರಿಚಯ ಮಾಡುವುದು ಒಳ್ಳೆಯದು.
10. ಎಲ್ಲಕ್ಕಿಂತ ಮುಖ್ಯವಾಗಿ ಹೆತ್ತವರು ಮತ್ತು ಶಿಕ್ಷಕರು ಪುಸ್ತಕ ಓದಲು ಆರಂಭ ಮಾಡಬೇಕು.
ಪುಸ್ತಕಗಳನ್ನು ಓದುವ, ಓದಿಸುವ ನಿಮ್ಮ ಅಭಿಯಾನವು ಇಂದಿನಿಂದಲೇ ಆರಂಭ ಆಗಲಿ.