Site icon Vistara News

Raja Marga Column : ಎಲ್ಲಿಯ ಸಂಗೀತ, ಎಲ್ಲಿಯ ಎಂಜಿನಿಯರ್; ಕಾಣದಾ ಕಡಲಿಗೆ ಹಂಬಲಿಸಿದ ಸಿ. ಅಶ್ವತ್ಥ್‌‌!

C Ashwath memory

ಭಾರತದ ಹಲವು ರಾಜ್ಯಗಳಿಗೆ ಹೋಲಿಸಿದರೆ ಕನ್ನಡದ ಭಾವಗೀತೆಗಳು (Kannada Bhavageethegalu) ಬಹಳ ಎತ್ತರದ ಸ್ಥಾನವನ್ನು ಪಡೆಯುತ್ತವೆ. ಅದಕ್ಕೆ ಕಾರಣ ಬಹಳ ಸ್ಪಷ್ಟ. ಕವಿಗಳು ಯಾವ ಭಾವನೆಯಿಂದ ತಮ್ಮ ಭಾವಗೀತೆಗಳನ್ನು ಬರೆದರೋ ಅದೇ ಭಾವನೆಯನ್ನು ಮನದಲ್ಲಿ ಇಟ್ಟುಕೊಂಡು ರಾಗ ಸಂಯೋಜನೆ ಮಾಡಿ ಮತ್ತು ಹಾಡಿದ ಅನೇಕ ಗಾಯಕರು ಆ ಹಾಡುಗಳಿಗೆ ಅಮರತ್ವ ನೀಡಿದರು. ಅದರಲ್ಲಿಯೂ ಈ ವಿಭಾಗದಲ್ಲಿ ಬಹು ದೊಡ್ಡ ಕೀರ್ತಿಯು ಖಂಡಿತವಾಗಿ ಸಿ.ಅಶ್ವತ್ಥ್ (C Ashwath) ಅವರಿಗೆ ಸಲ್ಲುತ್ತದೆ! ಅವರು ‘ಸುಗಮ ಸಂಗೀತ ಕ್ಷೇತ್ರದ ಧ್ರುವತಾರೆ’ (Eternal Shining star of Sugama Sangeetha) ಎಂದರೆ ಅದು ಉತ್ಪ್ರೇಕ್ಷೆ ಆಗಲಾರದು (Raja Marga Column).

27 ವರ್ಷ ಎಂಜಿನಿಯರ್ ಆಗಿದ್ದರು!

ಸಿ. ಅಶ್ವತ್ಥ್ ಅವರು ಹುಟ್ಟಿದ್ದು ಚೆನ್ನರಾಯ ಪಟ್ಟಣದಲ್ಲಿ (ಡಿಸೆಂಬರ್ 29, 1939). ಬಾಲ್ಯದಲ್ಲಿ ಸಂಗೀತದ ಪ್ರಭಾವ ದಟ್ಟವಾಗಿತ್ತು. ಹಿಂದುಸ್ಥಾನಿ ಸಂಗೀತದ ಮಹಾಗುರುಗಳಾದ ದೇವಗಿರಿ ಶಂಕರ ರಾವ್ ಅವರಿಂದ ಸಂಗೀತ ಅಭ್ಯಾಸವು ನಡೆಯಿತು. ನಂತರ ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜು ಮೂಲಕ ‌ ಬಿಎಸ್‌ಸಿ ಪದವಿಯನ್ನು ಪಡೆದರು. ಆಮೇಲೆ 27 ವರ್ಷಗಳಷ್ಟು ಸುದೀರ್ಘ ಕಾಲ ಇಂಡಿಯನ್ ಟೆಲಿಫೋನ್ ಇಂಡಸ್ಟ್ರಿಯಲ್ಲಿ ಉದ್ಯೋಗವನ್ನು ಮಾಡಿದರು. ಕೊನೆಗೆ ಎಕ್ಸಿಕ್ಯೂಟಿವ್ ಎಂಜಿನಿಯರ್ ಆಗಿ ನಿವೃತ್ತರಾದರು.

C Ashwath songs

ಶ್ರೇಷ್ಠ ಕವಿಗಳ ಭಾವ ಗೀತೆಗಳಿಗೆ ರಾಗಸಂಯೋಜನೆ

ಆರಂಭದಲ್ಲಿ ಕನ್ನಡ ನಾಟಕಗಳಿಗೆ ಸಂಗೀತ ನಿರ್ದೇಶನವನ್ನು ಮಾಡುತ್ತಿದ್ದ ಅಶ್ವತ್ಥ ಅವರು ಬಹು ಬೇಗ ಕನ್ನಡದ ಭಾವಗೀತೆ ಮತ್ತು ಜಾನಪದ ಗೀತೆಗಳಿಂದ ಆಕರ್ಷಿತರಾದರು. ಕುವೆಂಪು, ಬೇಂದ್ರೆ, ನರಸಿಂಹ ಸ್ವಾಮಿ, ಲಕ್ಷ್ಮಣ್ ರಾವ್, ಶಿವರುದ್ರಪ್ಪ , ವೆಂಕಟೇಶ ಮೂರ್ತಿ, ಲಕ್ಷ್ಮಿನಾರಾಯಣ ಭಟ್ಟ ಮೊದಲಾದವರ ಶ್ರೇಷ್ಟ ಭಾವಗೀತೆಗಳನ್ನು ಚಂದವಾಗಿ ಅಧ್ಯಯನ ಮಾಡಿ ಸಂಗೀತ ಸಂಯೋಜನೆ ಮಾಡಲು ತೊಡಗಿದರು. ಸಾಹಿತ್ಯದ ಆಳವಾದ ಪ್ರಜ್ಞೆ ಇದ್ದರೆ ಮಾತ್ರ ಅದಕ್ಕೆ ಸರಿಯಾದ ರಾಗ ಸಂಯೋಜನೆಯನ್ನು ಮಾಡಲು ಸಾಧ್ಯ ಮತ್ತು ಅದನ್ನು ಸುಲಲಿತವಾಗಿ ಹಾಡಲು ಸಾಧ್ಯ ಎಂದು ಬಲವಾಗಿ ನಂಬಿದರು. ಪ್ರತೀ ಭಾವಗೀತೆಗೂ ಆತ್ಮ ಇದೆ ಎನ್ನುವುದು ಅವರ ನಂಬಿಕೆ. ಅವರ ಸುವರ್ಣ ಸ್ಪರ್ಶ ಪಡೆದ ಗೀತೆಗಳು ಅಮರತ್ವವನ್ನು ಪಡೆಯುತ್ತ ಹೋದವು.

C Ashwath songs

ಮೈಸೂರು ಮಲ್ಲಿಗೆಯ ಘಮಘಮ

ಕೆ.ಎಸ್. ನರಸಿಂಹ ಸ್ವಾಮಿ ಅವರ ಮೈಸೂರು ಮಲ್ಲಿಗೆಯ ಹಾಡುಗಳು ಸರಸ, ವಿರಸ, ವಿರಹ ಮತ್ತು ಸಮರಸದ ರಸ ಪಾಕಗಳು. ಅಂತಹ ಹಾಡುಗಳನ್ನು ಸಿ. ಅಶ್ವತ್ಥ್ ಅವರ ಸಂಯೋಜನೆ ಮತ್ತು ಧ್ವನಿಯಲ್ಲಿಯೇ ಕೇಳಬೇಕು. ಮೈಸೂರು ಮಲ್ಲಿಗೆಯ ಹಾಡುಗಳನ್ನು ಕರ್ನಾಟಕದ ಮನೆ ಮನಗಳಿಗೆ ತಲುಪಿಸಿದ ಕೀರ್ತಿ ಅದು ಅಶ್ವತ್ಥ್ ಅವರಿಗೆ ಸಲ್ಲಬೇಕು. ಶಿಶುನಾಳ ಶರೀಫರ ನೂರಾರು ತತ್ವ ಪದಗಳು, ಕುವೆಂಪು ಅವರ ಶ್ರೇಷ್ಟ ಗೀತೆಗಳು, ಬೇಂದ್ರೆಯವರ ನಾದ ಇರುವ ಗೀತೆಗಳು ಅಶ್ವತ್ಥ ಅವರಿಂದ ಬಹು ಜನಪ್ರಿಯವಾದವು.

ಭಾವಗೀತೆಗಳ 150 ಆಲ್ಬಂ ಹೊರತಂದ ಕೀರ್ತಿ ಅವರದ್ದು

ಸುಮಾರು 150ಕ್ಕಿಂತ ಅಧಿಕ ಭಾವಗೀತೆಗಳ ಆಲ್ಬಂಗಳಿಗೆ ಸಂಗೀತ ಸಂಯೋಜನೆ ಮಾಡಿ, ಹಾಡಿದ ಕೀರ್ತಿ ಅವರಿಗೆ ಸಲ್ಲಬೇಕು. ಅದರಲ್ಲೂ ಮೈಸೂರು ಮಲ್ಲಿಗೆ, ಶಿಶುನಾಳ ಶರೀಫರ ಗೀತೆಗಳು, ಶ್ರಾವಣ (ಬೇಂದ್ರೆ), ದೀಪಿಕಾ (ಲಕ್ಷ್ಮೀ ನಾರಾಯಣ ಭಟ್ಟ), ಸುಬ್ಬಾ ಭಟ್ಟರ ಮಗಳೆ (ಲಕ್ಷ್ಮಣ್ ರಾವ್), ಕೈಲಾಸಂ ಗೀತೆಗಳು, ತೂಗು ಮಂಚ (ಎಚ್.ಎಸ್. ವೆಂಕಟೇಶ್ ಮೂರ್ತಿ), ನನ್ನವಳು (ಲಕ್ಷ್ಮಣ್ ರಾವ್), ಎಲ್ಲಾದರೂ ಇರು (ಕುವೆಂಪು), ಮಾವು ಬೇವು (ದೊಡ್ಡ ರಂಗೆ ಗೌಡ), ನೇಸರ ನೋಡು (ರಂಗ ಭೂಮಿಯ ಗೀತೆಗಳು) ತುಂಬಾನೇ ಜನಪ್ರಿಯವಾದವು. ಅದರಲ್ಲೂ ಡಾಕ್ಟರ್ ರಾಜಕುಮಾರ್ ಹಾಡಿದ ‘ಎಲ್ಲಾದರೂ ಇರು ಎಂತಾದರೂ ಇರು’ ಗೀತೆ ಕನ್ನಡದ ಭಾವನೆಗಳನ್ನು ಮೀಟಿತು. ರತ್ನಮಾಲಾ ಪ್ರಕಾಶ್, ಬಿ. ಆರ್. ಛಾಯಾ, ಮಂಜುಳಾ ಗುರುರಾಜ್ ಮೊದಲಾದ ಹೊಸ ಪೀಳಿಗೆಯ ಹಾಡುಗಾರರನ್ನು ಬೆಳೆಸಿದ ಕೀರ್ತಿ ಕೂಡ ಸಿ ಅಶ್ವತ್ಥ ಅವರಿಗೆ ಸಲ್ಲುತ್ತದೆ.

C Ashwath songs

27 ಸಿನಿಮಾಗಳಿಗೆ ಸಂಗೀತ ನಿರ್ದೇಶನ

‘ಕಾಕನ ಕೋಟೆ’ ಸಿನಿಮಾಕ್ಕೆ ಸಂಗೀತವನ್ನು ನಿರ್ದೇಶನವನ್ನು ಮಾಡುವ ಮೂಲಕ ಅವರು ಮತ್ತೊಂದು ಮಜಲನ್ನು ತಲುಪಿದರು. ಆ ಸಿನಿಮಾದ ‘ ನೇಸರ ನೋಡು’ ಹಾಡು ಇಂದಿಗೂ ಮರೆತು ಹೋಗುವುದಿಲ್ಲ. ಅದರ ನಂತರ ಎಲ್. ವೈದ್ಯನಾಥನ್ ಅವರನ್ನು ಸೇರಿಕೊಂಡು ‘ ಅಶ್ವತ್ಥ – ವೈದಿ’ ಎಂಬ ಹೆಸರಿನೊಂದಿಗೆ 27 ಸಿನೆಮಾಗಳಿಗೆ ಸಂಗೀತ ನಿರ್ದೇಶನ ಮಾಡಿದರು. ಚಿನ್ನಾರಿ ಮುತ್ತ, ಸಂತ ಶಿಶುನಾಳ ಶರೀಫ, ಮೈಸೂರು ಮಲ್ಲಿಗೆ, ನಾಗಮಂಡಲ, ಕೊಟ್ರೇಶಿ ಕನಸು, ಬಾಡದ ಹೂವು, ಸ್ಪಂದನ, ಅನುಪಮಾ, ನಾರದ ವಿಜಯ, ಆಲೆಮನೆ (ನಮ್ಮೂರ ಮಂದಾರ ಹೂವೇ ಹಾಡು ನೆನಪಾಯಿತಾ?), ಕಾಂಚನ ಮೃಗ, ಸಿಂಗಾರೆವ್ವ…ಈ ಸಿನಿಮಾಗಳ ಹಾಡುಗಳನ್ನು ಯಾರು ಕೂಡ ಮರೆಯಲು ಸಾಧ್ಯವಿಲ್ಲ. ಸ್ಪಂದನ ಮತ್ತು ಚಿನ್ನಾರಿ ಮುತ್ತ ಸಿನಿಮಾಗಳಿಗೆ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶನ ರಾಜ್ಯ ಪ್ರಶಸ್ತಿಯು ಬಂದರೆ, ಮೈಸೂರು ಮಲ್ಲಿಗೆ ಸಿನಿಮಾವು ಫಿಲ್ಮ್ ಫೇರ್ ಪ್ರಶಸ್ತಿ ಗೆದ್ದು ಕೊಟ್ಟಿತು.

ರೇ ರೇ ರೇ ರಾ…

ರಾಜ್ಯ ಸರ್ಕಾರದ ವಿನಂತಿಯ ಮೇರೆಗೆ ರೈತಗೀತೆ (ಕುವೆಂಪು ಅವರ ನೇಗಿಲ ಯೋಗಿ)ಯನ್ನು ಸಂಗೀತ ನಿರ್ದೇಶನ ಮಾಡಿ ಸಮರ್ಪಣೆ ಮಾಡಿದ್ದು ಕೂಡ ಅವರೇ. ತಮ್ಮ ಸುಗಮ ಸಂಗೀತದ ತಂಡವನ್ನು ಕಟ್ಟಿಕೊಂಡು ಕರ್ನಾಟಕ ರಾಜ್ಯದ ಮೂಲೆ ಮೂಲೆಯಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ಅವರು ನೀಡಿದರು. ಅವರ ಹಲವಾರು ಸುಗಮ ಸಂಗೀತದ ಕಾರ್ಯಕ್ರಮಗಳನ್ನು ಎದುರು ಕೂತು ನಾನು ಕೇಳಿ ಮೈ ಮರೆತಿದ್ದೇನೆ. ರೇ ರೇ ರೇ ರಾ ಎಂದು ನಾಭಿಯಿಂದ ಆಲಾಪನೆ ತೆಗೆದು ಅವರು ಬಾಯಿ ತೆರೆದು ಹಾಡುವ ಶೈಲಿ ಅದು ತುಂಬಾ ಅದ್ಭುತ. ಆ ಶೈಲಿ ಮುಂದೆ ಹಲವಾರು ಗಾಯಕರು ಅನುಕರಣೆ ಮಾಡಿದರೂ ಅವರ್ಯಾರೂ ಸಿ. ಅಶ್ವಥ್ ಆಗಲೇ ಇಲ್ಲ.

ಆಸ್ಟ್ರೇಲಿಯಾದ ಮೆಲ್ಬರ್ನ್ ನಗರ, ಅಮೆರಿಕ ಮತ್ತು ಲಂಡನ್ ನಗರದಲ್ಲಿ ಕೂಡ ಅವರು ಕಾರ್ಯಕ್ರಮ ನೀಡಿದ್ದಾರೆ. ಅಮೆರಿಕಾದಲ್ಲಿ ಒಂದು ಕಾರ್ಯಕ್ರಮಕ್ಕೆ ಅಂತ ಹೋದ ಅವರನ್ನು ಒಂದು ತಿಂಗಳು ಅಮೆರಿಕಾದ ಕನ್ನಡಿಗರು ಹಿಂದೆ ಕಳುಹಿಸಿ ಕೊಡಲಿಲ್ಲ.

2005ರಲ್ಲಿ ಅವರು ಬೆಂಗಳೂರಿನ ಪ್ಯಾಲೇಸ್ ಗ್ರೌಂಡಿನಲ್ಲಿ ನಡೆಸಿಕೊಟ್ಟ ‘ ಕನ್ನಡವೇ ಸತ್ಯ’ ಸಂಗೀತ ಕಾರ್ಯಕ್ರಮಕ್ಕೆ 1,50,000 ಸಂಗೀತದ ಮಹಾ ಅಭಿಮಾನಿಗಳು ಸೇರಿದ್ದು ಒಂದು ಅದ್ಭುತವಾದ ದಾಖಲೆ. ಅವರಿಗೆ 1986ರಲ್ಲೀ ರಾಜ್ಯಸರ್ಕಾರವು ‘ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಗೌರವಿಸಿದೆ. ಸಿ. ಅಶ್ವತ್ಥ ಅವರು 2009ರ ಇಸವಿ ತಮ್ಮ ಹುಟ್ಟುಹಬ್ಬದಂದು ನಮ್ಮನ್ನು ಅಗಲಿ ಹೋದರು. ಅವರಿಗೆ ಆಗ 70 ವರ್ಷ ತುಂಬಿತ್ತು.

ಇದನ್ನೂ ಓದಿ : Raja Marga Column : ಕಿರಣ್‌ ಬೇಡಿ IPS ; ವರ್ಷ 74 ಆದರೂ ಇಂದಿಗೂ ಅವರು ಯೂತ್ ಐಕಾನ್!

ಭರತ ವಾಕ್ಯ

ಇಂದಿಗೂ ಕೂಡ ನೀ ಹೀಂಗ ನೋಡಬ್ಯಾಡ ನನ್ನ, ಕಾಣದ ಕಡಲಿಗೆ, ಕುರುಡು ಕಾಂಚಾಣ, ಎಲ್ಲೋ ಹುಡುಕಿದೆ ಇಲ್ಲದ ದೇವರ, ಹೇಳಿ ಹೋಗು ಕಾರಣ, ಬಾ ಇಲ್ಲಿ ಅವತರಿಸು, ಬಾರೆ ನನ್ನ ದೀಪಿಕಾ, ನಿನ್ನ ಪ್ರೇಮದ ಪರಿಯ, ತೂಗು ಮಂಚದಲ್ಲಿ ಕೂತು, ಶ್ರಾವಣ ಬಂತು ಕಾಡಿಗೆ, ರಾಯರು ಬಂದರು ಮಾವನ ಮನೆಗೆ, ಕೋಡಗನ ಕೋಳಿ ನುಂಗಿತ್ತಾ, ಒಳಿತು ಮಾಡು ಮನುಷಾ……. ಮೊದಲಾದ ಚಿರಂಜೀವಿಯಾದ ಹಾಡುಗಳನ್ನು ಕೇಳುವಾಗ ಅಶ್ವತ್ಥ ಅವರು ಕಣ್ಣು ಮುಂದೆ ಬರುತ್ತಾರೆ. ಅವರ ಹಾಡುಗಳ ಹಾಗೆ ಅವರೂ ಚಿರಂಜೀವಿ.

Exit mobile version