Site icon Vistara News

ರಾಜ ಮಾರ್ಗ ಅಂಕಣ : ಮಕ್ಕಳ ಮೇಲೆ ಜಾಸ್ತಿ ನಂಬಿಕೆ ಇಡಬೇಡಿ; ಮೊಬೈಲ್‌ ಬಂದ ಮೇಲೆ ಯಾವ ಮಗುವೂ ಇನ್ನೋಸೆಂಟ್‌ ಅಲ್ಲ!

dont believe children

ಮಾನಭಂಗವನ್ನು (Sexual assault) ಯಾವ ನಾಗರಿಕ ಸಮಾಜ ಕೂಡ ಸಮರ್ಥನೆ ಮಾಡಬಾರದು. ಮಾನಭಂಗ ಪ್ರಕರಣಗಳು ಒಮ್ಮೆ ನಡೆದು ಸ್ಫೋಟಕ ಪ್ರಚಾರವನ್ನು ಪಡೆಯುವುದು, ಆರೋಪಿಗಳು ಅರೆಸ್ಟ್ ಆಗುವುದು, ಮಾಧ್ಯಮಗಳು ಸರಣಿಯ ಡಿಬೇಟ್ ಮಾಡುವುದು, ಮುಂದೆ ಆರೋಪಿಯ ಮತ್ತು ಸಂತ್ರಸ್ತೆಯ ಜಾತಿ, ಧರ್ಮಗಳನ್ನು ಹುಡುಕುವುದು, ಅಲ್ಲಿಗೆ ಎಲ್ಲವೂ ನಿಧಾನಕ್ಕೆ ತಣ್ಣಗಾಗುವುದು…….!

ಇದು ದಿನವೂ ನಡೆಯತ್ತಿರುವ ಘಟನೆಗಳು! ಮುಂದಕ್ಕೇ ಏನಾಯಿತು? ವಿಚಾರಣೆ ಮುಗಿದು ಆರೋಪಿಗಳಿಗೆ ಶಿಕ್ಷೆ ಆಯಿತಾ? ಆ ಹುಡುಗಿಯ ಕತೆ ಏನಾಯಿತು? ಇದನ್ನೆಲ್ಲ ಯಾರೂ ಗಮನಿಸುವುದಿಲ್ಲ. ಇಂಥ ಪ್ರಕರಣಗಳು ನಡೆದಾಗಲೆಲ್ಲ ಒಮ್ಮೆ ಸಮಾಜ, ಸರಕಾರ, ಮಾಧ್ಯಮಗಳು ಅಲರ್ಟ್ ಆಗುತ್ತವೆ. ಮತ್ತೆ ಕೆಲವೇ ದಿನಗಳಲ್ಲಿ ಮರೆತೇಬಿಡುತ್ತವೆ. ಇದು ಈವರೆಗೆ ಆಗಿರುವುದು!

ಅತ್ಯಾಚಾರ ಪ್ರಕರಣಗಳಿಗೆ ತ್ವರಿತ ವಿಚಾರಣೆ ನಡೆಯಬೇಕು

ಅತ್ಯಾಚಾರಕ್ಕೆ ಒಳಗಾಗಿರುವ ಹುಡುಗಿಯು ತನ್ನ ಜೀವನ ಪೂರ್ತಿಯಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಜರ್ಜರಿತವಾಗಿ ಬದುಕುವಾಗ ಅದಕ್ಕೆ ಕಾರಣರಾದವರು 5-7 ವರ್ಷ ಮಾತ್ರ ಜೈಲುವಾಸ ಅನುಭವಿಸುವುದು, ಮತ್ತೆ ಹೊರಬಂದು ತಮ್ಮ ಹಳೆಯ ಚಾಳಿ ಮುಂದುವರಿಸುವುದು ಖಂಡಿತವಾಗಿ ಸರಿಯಲ್ಲ. ಅತ್ಯಾಚಾರದ ಪ್ರಕರಣಗಳನ್ನು ನ್ಯಾಯಾಲಯವು ಇತರ ಸಾಮಾನ್ಯ ಪ್ರಕರಣಗಳ ಹಾಗೆ ವಿಚಾರಣೆ ಮಾಡಬಾರದು. ತ್ವರಿತ ವಿಚಾರಣೆ ಆಗಬೇಕು ಮತ್ತು ಅಪರಾಧಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ಆಗಬೇಕು ಎನ್ನುವುದು ನಮ್ಮೆಲ್ಲರ ಹಕ್ಕೊತ್ತಾಯವೇ ಆಗಬೇಕು. ಅತ್ಯಾಚಾರ ಮಾಡಿದವರು ಎಷ್ಟೇ ಪ್ರಭಾವಶಾಲಿ ಆದರೂ ಅವರು ತಪ್ಪಿಸಿಕೊಳ್ಳಲು ಅವಕಾಶ ಇರಬಾರದು.

ಅವರನ್ನು ಎನ್ಕೌಂಟರ್ ಮಾಡಿ ಉಡಾಯಿಸಿ ಬಿಡಿ ಹೀಗೆಲ್ಲ ಹೇಳಿಕೆಯನ್ನು ಕೊಡುವವರು ನಮ್ಮ ನಡುವೆ ಇದ್ದಾರೆ. ದೇಶದ ಕಾನೂನನ್ನು ಗೌರವಿಸುವವರು ಹಾಗೆಲ್ಲಾ ಹೇಳುವುದಿಲ್ಲ!

ಅತ್ಯಾಚಾರಗಳ ಹಿಂದೆ ಇರುವ ಮಾನಸಿಕತೆ ಯಾವುದು?

ಅತ್ಯಾಚಾರಗಳು ನಮ್ಮ ಸಮಾಜದ ಪುರುಷ ಪ್ರಧಾನ ಮಾನಸಿಕತೆಯ ಪ್ರತೀಕ ಎನ್ನುವವರು ಕೂಡಾ ಇದ್ದಾರೆ. ಅದನ್ನು ಕೂಡ ನಾನು ಒಪ್ಪುವುದಿಲ್ಲ. ಅವುಗಳು ಕೇವಲ ವಿಕೃತ ಮನಸ್ಸಿನ ಪ್ರತೀಕಗಳು! ಕುಡಿತ, ಡ್ರಗ್ಸ್ ಮೊದಲಾದ ವ್ಯಸನಗಳು, ಜಾಲತಾಣಗಳು ಹರಡುವ ವಿಕೃತ ಮನಸ್ಥಿತಿ, ಸ್ವೇಚ್ಛೆಯ ಹೆಸರಿನಲ್ಲಿ ದಾರಿತಪ್ಪುತ್ತಿರುವ ಯುವಜನತೆ, ಮಕ್ಕಳು ಮಾಡಿದ ಎಲ್ಲವನ್ನೂ ಸಮರ್ಥಿಸಲು ಹೊರಡುವ ಪೋಷಕರು ಇವರೆಲ್ಲರೂ ಅತ್ಯಾಚಾರದ ಪ್ರಕರಣಗಳಿಗೆ ಪರೋಕ್ಷವಾಗಿ ಕಾರಣರಾಗುತ್ತಾರೆ.

ಕ್ಯಾರೆಕ್ಟರ್ ಅನ್ನುವುದು ಹೆಣ್ಣು ಮಕ್ಕಳಿಗೆ ಮಾತ್ರವಲ್ಲ, ಅದು ಗಂಡು ಮಕ್ಕಳಿಗೆ ಕೂಡ ಅನ್ವಯ ಆಗುತ್ತದೆ.

ಹೆಣ್ಣು ಮಕ್ಕಳಿಗೆ ಮಾತ್ರ ಬಿಗಿಯಾದ ನಿಯಮಗಳು ಯಾಕೆ?

ಹೆಣ್ಣುಮಕ್ಕಳಿಗೆ ಬಿಗಿಯಾದ ಬಂಧನಗಳನ್ನು ಹಾಕಿ ಗಂಡು ಮಕ್ಕಳಿಗೆ ಹೆಚ್ಚು ಸ್ವಾತಂತ್ರ್ಯ ಕೊಡುವ ಪೋಷಕರನ್ನು ನಾನು ನೋಡಿದ್ದೇನೆ. ಗಂಡುಮಕ್ಕಳು ಮಾತ್ರ ವಂಶೋದ್ಧಾರಕರು ಅಂತಾದರೆ ಹೆಣ್ಣು ಮಕ್ಕಳು ಏನು? ಅದು ಖಂಡಿತ ತಪ್ಪು. ತಡವಾಗಿ ಮನೆಗೆ ಬರುವ ಮಗಳನ್ನು ನಿಲ್ಲಿಸಿ ನೂರು ಕಾರಣ ಕೇಳುವ ಹೆತ್ತವರು ಗಂಡು ಮಕ್ಕಳಿಗೆ ಕೂಡ ಕಾರಣವನ್ನು ಕೇಳಬೇಕು ಅಲ್ವಾ?

ಗೆಳೆಯ, ಗೆಳತಿಯರಾಗಲಿ, ಪ್ರೇಮಿಗಳಾಗಲಿ ಕತ್ತಲಾಗುವ ನಂತರ ನಿರ್ಜನವಾದ ಪ್ರದೇಶ ಹುಡುಕಿಕೊಂಡು ಹೋಗುವ ಅಗತ್ಯ ಇದೆಯಾ? ಇಡೀ ಜಗತ್ತಿಗೆ ಸಿಸಿ ಕ್ಯಾಮರಾಗಳನ್ನು ಹಾಕಿಕೊಂಡು ಪೊಲೀಸರು ಕಾವಲು ಕಾಯಲು ಸಾಧ್ಯ ಇದೆಯಾ?

ಮುಗ್ಧತೆ ಕಾಣೆಯಾಗಿದೆ.

ಜಗತ್ತಿನ ಎಲ್ಲಿ ಅತ್ಯಾಚಾರಗಳು ನಡೆದರೂ ಅದನ್ನು ನಾನು ಬಲವಾಗಿ ಖಂಡಿಸುತ್ತೇನೆ, ಸಂತ್ರಸ್ತೆಗೆ ಸಿಗಬೇಕಾದ ನ್ಯಾಯ ನಾನು ಕೊಡಿಸುತ್ತೇನೆ ಎಂದು ಮಂತ್ರಿಗಳು, ಶಾಸಕರು ತುಂಬಾ ಗಟ್ಟಿಯಾಗಿ ಹೇಳಬೇಕು.

ಅದನ್ನು ಬಿಟ್ಟು ಸಮಾಜವನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡಬಾರದು. ರೇಪ್ ನಡೆದಾಗ ಅದರಲ್ಲಿ ರಾಜಕೀಯ ಲಾಭವನ್ನು ಪಡೆಯಲು ಪ್ರಯತ್ನಿಸುವವರು ಕೂಡ ಅಷ್ಟೇ ಅಪರಾಧಿಗಳು ಅಲ್ಲವೇ?

ಮಾಡರ್ನ್ ಪೋಷಕರು ಮತ್ತು ಅಲ್ಟ್ರಾ ಮಾಡರ್ನ್ ಮಕ್ಕಳು

ಇನ್ನು ಒಂದು ಸ್ಟ್ರಾಂಗ್ ಮಾತನ್ನು ಹದಿಹರೆಯದ ಮಕ್ಕಳ ಅಪ್ಪನಾಗಿ ನಾನು ಹೇಳಬೇಕು. ಸ್ವಾತಂತ್ರ್ಯ ಮತ್ತು ಸ್ವೇಚ್ಛೆಗಳ ನಡುವೆ ತುಂಬಾ ದೊಡ್ಡ ವ್ಯತ್ಯಾಸ ಇದೆ.

ಇನ್ನೂ ಕೆಲವು ಮಾಡರ್ನ್ ಪೋಷಕರು ಇದ್ದಾರೆ. ನಮ್ಮ ಮಕ್ಕಳ ಮೇಲೆ ನಮಗೆ ಪೂರ್ತಿ ನಂಬಿಕೆ ಇದೆ, ಅವರು ಎಲ್ಲಿ ಬೇಕಾದರೂ ಹೋಗಬಹುದು, ಎಷ್ಟು ಲೇಟ್ ಆದರೂ ಮನೆಗೆ ಬರಬಹುದು, ನನ್ನ ಮಕ್ಕಳ ನಿಜವಾದ ಅಗತ್ಯಕ್ಕಿಂತ ಹೆಚ್ಚು ಪಾಕೆಟ್ ಮನಿ ಕೊಡ್ತೇವೆ, ನನ್ನ ಮಗ, ಮಗಳು ಮಧ್ಯರಾತ್ರಿ ಕಳೆದು ಎಷ್ಟು ಲೇಟ್ ಆದ್ರೂ ಆನ್ಲೈನ್ ಇರುತ್ತಾರೆ, ಅದನ್ನು ಪ್ರಶ್ನೆ ಮಾಡಲು ನೀವ್ಯಾರು? ತನ್ನ ಇಷ್ಟಪಡುವ ಗೆಳೆಯ, ಗೆಳತಿಯರ ಜೊತೆಗೆ ಬಾರ್, ಪಬ್, ರೆಸಾರ್ಟ್ಸ್, ಡ್ಯಾನ್ಸಿಂಗ್ ಬಾರ್, ಹುಕ್ಕಾ ಬಾರ್‌ಗಳಿಗೆ ಅವರು ಹೋದರೆ ಏನು ತಪ್ಪು? ಅವರು ನಮ್ಮ ಕಾಲದವರ ಹಾಗೆ ಮನೆಯ ಮೂಲೆಯಲ್ಲಿ ಕಳೆದುಹೋಗಬೇಕೆ? ಹೀಗೆಲ್ಲ ಪ್ರಶ್ನೆ ಮಾಡುವ ಪೋಷಕರು ಸ್ವತಃ ತಮ್ಮ ಮಕ್ಕಳನ್ನು ಗುಂಡಿಗೆ ನೂಕುತ್ತಾರೆ.

ಅಂತವರು ಕಾಲ ಮಿಂಚಿದ ನಂತರ ಅಯ್ಯೋ! ಎಂದು ಕಣ್ಣೀರನ್ನು ಸುರಿಸುತ್ತಾ ಸರಕಾರವನ್ನು, ಪೊಲೀಸರನ್ನು ಬಯ್ಯಬಾರದು ಅಲ್ಲವೇ? ನಮ್ಮ ಮಾಧ್ಯಮಗಳಿಗೂ ಅತ್ಯಾಚಾರವು ಒಂದು ಪ್ರಮುಖವಾದ TRP ಸರಕು ಆಗಬಾರದು.

ನೈತಿಕ ಮೌಲ್ಯಗಳ ಕೊರತೆಯು ಎದ್ದು ಕಾಣುತ್ತಿದೆ

ತುಂಬಾ ವರ್ಷಗಳ ಹಿಂದೆ ನನ್ನ ಟಿವಿ ಕಾರ್ಯಕ್ರಮಕ್ಕೆ ಬಂದಿದ್ದ ಕಾಲೇಜು ಹುಡುಗಿ ಒಬ್ಬಳು ‘ವಿಚ್ಛೇದನ ಅನ್ನುವುದು ಸ್ತ್ರೀ ಸ್ವಾತಂತ್ರ್ಯದ ಪ್ರತೀಕ’ ಅಂದಿದ್ದಳು! ಅದನ್ನಾದರೂ ಒಪ್ಪೋಣ.

ಸಿನಿಮಾ ನಟಿ ಒಬ್ಬಳು ಮೂರು ಮದುವೆಯಾದಳು ಅಂದಾಗ ಇನ್ನೊಬ್ಬಳು ಮಾಡರ್ನ್ ಹುಡುಗಿ ‘ಅದು ಅವಳ ಪರ್ಸನಲ್ ಲೈಫ್ ಅಲ್ವಾ? ಅವಳದ್ದು ಏನೂ ತಪ್ಪಿಲ್ಲ’ ಅಂದಿದ್ದಳು! ಅದನ್ನು ಕೂಡ ಸ್ವಲ್ಪಮಟ್ಟಿಗೆ ಒಪ್ಪಬಹುದು.

ಮೂರು ಮದುವೆಯಾಗಿ ಎಲ್ಲ ಸುಖವನ್ನು ಅನುಭವಿಸಿದ ದಕ್ಷಿಣ ಭಾರತದ ಒಬ್ಬ ಖ್ಯಾತ ನಟ ಕಮಲಹಾಸನ್. ಆತ ಮುಂದೆ ನಾಲ್ಕನೇ ಹೆಂಗಸಿನ ಸೆರಗನ್ನು ಹಿಡಿದುಕೊಂಡು ಲಿವಿಂಗ್ ಟುಗೆದರ್ ರಿಲೇಶನ್ ಹೊಂದುತ್ತಾನೆ. ಅವನ ಮಗಳು (ಅವಳು ಕೂಡ ಸಿನಿಮಾ ನಟಿ) ನನಗೆ ಅಪ್ಪನ ಹಾಗೆ ಮದುವೆಗಳಲ್ಲಿ ನಂಬಿಕೆಯೇ ಇಲ್ಲ ಎಂದು ಹೇಳುತ್ತಾಳೆ! ಅವರೆಲ್ಲರೂ ಸೆಲೆಬ್ರಿಟಿಗಳು, ಅವರನ್ನು ಫಾಲೋ ಮಾಡುವ ಬಹುದೊಡ್ಡ ಯುವಪಡೆ ಇದೆ ಅನ್ನುವುದನ್ನು ಅವರು ಮರೆಯಬಾರದು. ಇಂಥವರ ನಡೆ,ನುಡಿಗಳನ್ನು ಸಮರ್ಥನೆ ಮಾಡುವ ಮತ್ತು ಅವರನ್ನು ಅನುಕರಣೆ ಮಾಡುವ ಯುವಕ, ಯುವತಿಯರು ನಮಗೆ ಇಂದು ಎಲ್ಲಾ ಕಾಲೇಜುಗಳಲ್ಲಿ ಸಿಗುತ್ತಾರೆ!

ಇನ್ನೂ ಒಬ್ಬ ಕಾಲೇಜು ಹುಡುಗ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಕಾಲೇಜು ವೇದಿಕೆಯಲ್ಲಿ ಹೀಗೆ ಹೇಳಿ ಚಪ್ಪಾಳೆ ಗಿಟ್ಟಿಸಿದ್ದ- ನನ್ನ ಅಪ್ಪ, ನನ್ನ ಅಮ್ಮ ಮೂವತ್ತು ವರ್ಷಗಳ ಕಾಲ ಅದು ಹೇಗೆ ಜೊತೆಯಾಗಿ ಬದುಕಿದರೋ? ನನಗೆ ಅವರ ಬಗ್ಗೆ ಅಯ್ಯೋ ಪಾಪ ಅನ್ನಿಸುತ್ತದೆ ಎಂದು ಹೇಳಿದ್ದ!

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಕೃಷ್ಣ ಮತ್ತು ಕೃಷ್ಣಾ ಸಂಬಂಧವೇ ಮಹಾಭಾರತದ ಪಂಚಾಂಗ; ದ್ರೌಪದಿ ಕಟ್ಟಿದ ಸೆರಗಿನ ತುಂಡೇ ರಕ್ಷಾಬಂಧನ!

ಮದುವೆಯಾದ ಗಂಡ, ಹೆಂಡತಿಯರು ಪರಸ್ಪರ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಮೆಟ್ಟಿನಿಂತು 30-40 ವರ್ಷ ಜೊತೆಯಾಗಿ ಬದುಕಿದ ನೂರಾರು ಉದಾಹರಣೆಗಳು ನನ್ನ ಮುಂದೆ ಇವೆ!

ಅದ್ದೂರಿಯಾಗಿ ಮದುವೆ ಮಾಡಿಕೊಟ್ಟ ಅಪ್ಪ ಅಮ್ಮನ ಮುಂದೆ ಬಂದು (ಮದುವೆಯಾದ ಕೇವಲ ಒಂದೆರಡು ತಿಂಗಳಲ್ಲಿ) ಅವನ ಬಗ್ಗೆ ಇಷ್ಟುದ್ದ ಚಾಡಿ ಹೇಳಿ ಮದುವೆ ಮುರಿಯಲು ಸಿದ್ದರಾಗುವ ಕೆಲವು ಹೆಣ್ಮಕ್ಕಳು ಈಗ ನಮ್ಮ ನಡುವೆ ಇದ್ದಾರೆ!

ಮಕ್ಕಳಲ್ಲಿ ಇಂಥ ಜೀವನ ಪ್ರೀತಿ, ಮುಗ್ಧತೆ ಇದ್ದರೆ ಎಷ್ಟು ಚಂದ ಅಲ್ವಾ?

ಇಷ್ಟವಾಗದ ಗಂಡನ ಜೊತೆಗೆ ಜೀವನಪೂರ್ತಿಯಾಗಿ ಬದುಕಲು ನಾನು ನನ್ನ ಅಮ್ಮ ಅಲ್ಲ ಎಂದು ಧಿಮಾಕು ತೋರುವ ಮಾಡರ್ನ್ ಹುಡುಗಿಯರೂ ಕೂಡ ಇದ್ದಾರೆ!

ಐವತ್ತು ವರ್ಷಗಳ ದಾಂಪತ್ಯವನ್ನು ಯಶಸ್ವಿಯಾಗಿ ಪೂರೈಸಿದ ಹೆಂಡತಿ ತೀರಿಹೋದಾಗ ಪುಟ್ಟ ಮಗುವಿನ ಹಾಗೆ ಜೋರಾಗಿ ಕಣ್ಣೀರು ಸುರಿಸಿದ ಗಂಡ ಕೂಡ ನಮ್ಮ ನಡುವೆ ಇದ್ದಾರೆ.

ಮದುವೆಯ ಮೊದಲ ರಾತ್ರಿಯೇ ನನ್ನ ಮೈ ಮುಟ್ಟಿದರೆ ಜಾಗ್ರತೆ, ನಾನು ಬೇರೆ ಒಬ್ಬನನ್ನು ಪ್ರೀತಿ ಮಾಡ್ತಾ ಇದ್ದೇನೆ. ಹೆತ್ತವರ ಒತ್ತಾಯಕ್ಕೆ ಕಟ್ಟುಬಿದ್ದು ನಾನು ಈ ಮದುವೆ ಆಗಬೇಕಾಯಿತು. ನನಗೆ ಡೈವೋರ್ಸ್ ಬೇಕು ಎಂದು ಕೇಳುವ ಹುಡುಗಿ ಇನ್ನೊಂದೆಡೆ! ನಮ್ಮ ಸಮಾಜದ ನೈತಿಕತೆಯು ಯಾವ ಕಡೆ ಹೋಗ್ತಾ ಇದೆ?

Exit mobile version