Site icon Vistara News

Raja Marga Column : ಅವಕಾಶಗಳ ಬಾಗಿಲು ತಾನಾಗಿ ತೆರೆಯಲ್ಲ, ನಾವೇ ಒದ್ದು ತೆಗೀಬೇಕು!

Opportunity

ಘಟನೆ 1: ನನ್ನ ಯುವ ಗೆಳೆಯನೊಬ್ಬ 20 ವರ್ಷಗಳ ಹಿಂದೆ ನನ್ನ ತರಬೇತಿಯಲ್ಲಿ (Training Programme) ನಿರಂತರ ಭಾಗವಹಿಸಿದ್ದ. ಒಂದು ದಿನ ಬೆಳಿಗ್ಗೆ ಬೆಳಿಗ್ಗೆ ಆತನದ್ದೇ ಫೋನ್ ಬಂತು. ಅವನು ತುಂಬಾ ಎಕ್ಸೈಟ್ ಆಗಿದ್ದ.
“ಸರ್, ಇವತ್ತಿನ ಉದಯವಾಣಿ ಪತ್ರಿಕೆ ಓದಿದ್ದೀರಾ? ಎರಡನೇ ಪುಟ ಮೂರನೇ ಪಾರಾಗ್ರಾಫ್?”
“ಏನು ವಿಶೇಷ ಇದೆ ಮಾರಾಯ?” ಎಂದು ನಾನು ಕೇಳಿದೆ.
ಅವನು ಹೇಳುತ್ತ ಹೋದ: ಸರ್, ನನ್ನ ಮಟ್ಟಿಗೆ ವಿಶೇಷ ಸುದ್ದಿ ಅದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಎಲ್ಲ ಪೋಲಿಸ್ ಸಿಬ್ಬಂದಿಗೆ ಕರ್ನಾಟಕ ಸರಕಾರವು ಮೋಟಾರ್ ಬೈಕ್ ಕೊಡಲು ಹೊರಟಿದೆ. ನಾನು ಬೈಕ್ ಮೆಕ್ಯಾನಿಕ್ (Bike Mechanic). ಇಡೀ ಬಂಟ್ವಾಳ ತಾಲೂಕಿನಲ್ಲಿ ಒಂದೇ ಒಂದು ಬೈಕ್ ಗ್ಯಾರೇಜ್ ಇಲ್ಲ. ನಾನು ಬೈಕ್ ಗ್ಯಾರೇಜ್ ಹಾಕಲು ಸಾಲ ಪಡೆಯಲು ಬ್ಯಾಂಕಿಗೆ ಈಗಲೇ ಹೋಗುತ್ತ ಇದ್ದೇನೆ. (Raja Marga Column)

ಆತ ಅವಕಾಶಗಳನ್ನು ಕಾಯುತ್ತ ಕುಳಿತುಕೊಳ್ಳದೆ ಅವಕಾಶಗಳನ್ನು ಸೃಷ್ಟಿಸಲು ಹೊರಟಿದ್ದ. ಮುಂದೆ ಆತ ಸಕ್ಸಸ್ ಕೂಡ ಆದ!

ಘಟನೆ 2: ನನ್ನ ಇನ್ನೊಬ್ಬ ಯುವ ಗೆಳೆಯ ನನ್ನ ಬಳಿ ಸಲಹೆ ಕೇಳಲು ಬಂದಿದ್ದ. “ಸರ್, ನನಗೆ ಅಪ್ಪನ ಆಸ್ತಿಯಲ್ಲಿ ಸ್ವಲ್ಪ ಹಣ ಬಂದಿದೆ. ನಮ್ಮ ಊರಲ್ಲಿ ಸ್ವಲ್ಪ ಜಾಗ ಕೂಡ ಇದೆ. ಏನಾದರೂ ಇಂಡಸ್ಟ್ರಿ ಮಾಡಬೇಕು ಎಂದು ಆಸೆ ಇದೆ. ಸ್ವಲ್ಪ ಗೈಡ್ ಮಾಡಿ” ಎಂದು ಕೇಳಿದ.

ನನ್ನ ಹತ್ತಿರ ಉಡುಪಿ ಜಿಲ್ಲೆಯ ಬಿಸಿನೆಸ್ ಡೈರೆಕ್ಟರಿ ಇತ್ತು. ಅದನ್ನು ಅವನಿಗೆ ಕೊಟ್ಟು “ನೋಡಪ್ಪ, ಉಡುಪಿಯಲ್ಲಿ ಇಷ್ಟೊಂದು ಬಿಸಿನೆಸ್ ಸಂಸ್ಥೆಗಳು ಇವೆ. ಇದರಲ್ಲಿ ಯಾವುದು ಬೇಕಾದರೂ ಮಾಡು” ಎಂದು ಹೇಳಿದೆ.

ಒಂದು ಘಂಟೆ ಅದರ ಎಲ್ಲ ಪೇಜ್ ತಿರುವಿ ಹಾಕಿದ ಆತನ ಮುಖದಲ್ಲಿ ಝಗ್ ಎಂದು ಬೆಳಕು ಕಂಡಿತು! ಆತ ಹೇಳುತ್ತ ಹೋದನು. “ಸರ್, ಉಡುಪಿ ಜಿಲ್ಲೆಯಲ್ಲಿ ಬೇರೆ ಎಲ್ಲ ಫ್ಯಾಕ್ಟರಿ ಇದೆ. ಬೆಲೂನ್ ಫ್ಯಾಕ್ಟರಿ ಇಲ್ಲ! ನಾನು ಅದನ್ನು ಮಾಡಿಯೇ ಮಾಡುತ್ತೇನೆ” ಎಂದು ಹೊರಟ. ಅವನೂ ಮುಂದೆ ಸಕ್ಸಸ್ ಆಗಿದ್ದಾನೆ. ಏಕೆಂದರೆ ಅವನು ಕೂಡ ಅವಕಾಶವನ್ನು ಸೃಷ್ಟಿಸಿದವನು!

ಯಾವುದೇ ಅವಕಾಶಗಳಿಗೆ ಕಾಯದೇ ತಮ್ಮ ಅವಕಾಶಗಳನ್ನು ತಾವೇ ಸೃಷ್ಟಿಸಿದ ನೂರಾರು ವ್ಯಕ್ತಿಗಳ ಪಟ್ಟಿಯು ನನ್ನ ಹತ್ತಿರ ಇದೆ. ಅದರಲ್ಲಿ ಕೆಲವರನ್ನು ಮಾತ್ರ ನಿಮಗೆ ನಾನು ಪರಿಚಯ ಮಾಡಬೇಕು.

1. ಕನ್ನಡ ಸಿನೆಮಾ ಸಂಗೀತದಲ್ಲಿ ಎಷ್ಟೊಂದು ಅವಕಾಶಗಳು ಇವೆ ಎಂದು ತೋರಿಸಿಕೊಟ್ಟವರು ಹಂಸಲೇಖ! ಅವರೊಬ್ಬ ಟ್ರೆಂಡ್ ಸೆಟ್ಟರ್!

ಇದನ್ನೂ ಓದಿ : Raja Marga Column : ಮಕ್ಕಳನ್ನು ಎಷ್ಟು ಬೇಕೋ ಅಷ್ಟೇ ನಂಬಿ, ವಿಪರೀತ ನಂಬಿಕೆ ಬೇಡ!

2. ಉದ್ಯಮ ರಂಗದಲ್ಲಿ ಎಷ್ಟೊಂದು ಅವಕಾಶಗಳನ್ನು ಕ್ರಿಯೇಟ್ ಮಾಡಲು ಸಾಧ್ಯ ಎಂದು ತೋರಿಸಿಕೊಟ್ಟವರು ಜೆ ಆರ್ ಡಿ ಟಾಟಾ! ಅವರಿಗೆ ಅವರೇ ಸಾಟಿ!

3. ಕೆಲವೇ ಗೆರೆಗಳಲ್ಲಿ ಎಷ್ಟೊಂದು ಅವಕಾಶಗಳನ್ನು ಹುಡುಕಲು ಸಾಧ್ಯ ಎಂದು ತೋರಿಸಿಕೊಟ್ಟವರು ಖ್ಯಾತ ಕಾರ್ಟೂನಿಸ್ಟ್ ಆರ್. ಕೆ ಲಕ್ಷ್ಮಣ್! ಅವರನ್ನು ಮರೆಯಲು ಸಾಧ್ಯವೇ ಇಲ್ಲ!

4. ಭಾರತೀಯ ಸಂಗೀತ ಕ್ಷೇತ್ರದಲ್ಲಿ ಎಷ್ಟೊಂದು ಅವಕಾಶಗಳು ಮುಕ್ತವಾಗಿವೆ ಎಂದು ತೋರಿಸಿಕೊಟ್ಟವರು ಎ ಆರ್ ರೆಹಮಾನ್! ಹೀ ಈಸ್ ಎ ಲೆಜೆಂಡ್!

5. ಭಾರತೀಯ ಬೈಕ್ ನಿರ್ಮಾಣ ಕ್ಷೇತ್ರದಲ್ಲಿ ಎಷ್ಟೊಂದು ಅವಕಾಶಗಳು ದೊರೆಯುತ್ತವೆ ಎಂದು ತೋರಿಸಿಕೊಟ್ಟವರು ಬಜಾಜ್ ಚೇತಕ್! ಅವರು ನಿಜವಾದ ಸ್ಫೂರ್ತಿ ಐಕಾನ್!

6. ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಎಷ್ಟೊಂದು ಅವಕಾಶಗಳು ಇವೆ ಎಂದು ಮೊದಲು ತೋರಿಸಿಕೊಟ್ಟವರು ಬಿಲ್ ಗೇಟ್ಸ್! ಅವರು ಅದನ್ನು ಮಾಡದೇ ಇದ್ದಿದ್ದರೆ?

7. ಫ್ಯಾಂಟಸಿ ಸಿನಿಮಾ ರಂಗದಲ್ಲಿ ಎಷ್ಟೊಂದು ಅವಕಾಶಗಳು ಕಾಲು ಮುರಿದು ಬಿದ್ದಿವೆ ಎಂದು ಮೊದಲು ತೋರಿಸಿಕೊಟ್ಟವರು ಎಸ್ ಎಸ್ ರಾಜಮೌಳಿ! ಅವರು ಕ್ರಿಯೇಟ್ ಮಾಡಿದ್ದು ಎಂತಹ ಅದ್ಭುತ ಸಿನೆಮಾಗಳನ್ನು!

8. ಸಿನಿಮಾ ಸ್ಟುಡಿಯೋ ನಿರ್ಮಾಣದ ಮೂಲಕ ಹೇಗೆ ಅವಕಾಶಗಳನ್ನು ಸೃಷ್ಟಿಸಲು ಸಾಧ್ಯ ಎಂದು ಮೊತ್ತಮೊದಲು ತೋರಿಸಿಕೊಟ್ಟವರು ಹೈದರಾಬಾದ್‌ನ ರಾಮೋಜಿ ಸ್ಟುಡಿಯೋ ಸ್ಥಾಪಕರಾದ ರಾಮೋಜಿ ರಾವ್! ಅವರ ಕೊಡುಗೆ ಎಷ್ಟೊಂದು ದೊಡ್ಡದು ಅಲ್ಲವೇ?

9. ಕನ್ನಡ ಪತ್ರಿಕೋದ್ಯಮದಲ್ಲಿ ಮೊದಲ ಬಾರಿಗೆ ನೂರಾರು ಅವಕಾಶಗಳನ್ನು ಸೃಷ್ಟಿಸಿದವರು ರವಿ ಬೆಳಗೆರೆ! ಅವರು ಬದುಕಿದ್ದಾಗಲೇ ದಂತಕಥೆ ಆದವರು!

10. ಉದ್ಯಮ ರಂಗದಲ್ಲಿ ಎಷ್ಟೊಂದು ಉದ್ಯೋಗಾವಕಾಶ ಸೃಷ್ಟಿಸಲು ಸಾಧ್ಯ ಎಂದು ಜಗತ್ತಿಗೆ ತೋರಿಸಿಕೊಟ್ಟವರು ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರು! ಅವರನ್ನು ಮರೆಯಲು ಸಾಧ್ಯವೇ?

11. ಹೋಟೆಲ್ ಉದ್ಯಮದಲ್ಲಿ ಏನೆಲ್ಲ ಅವಕಾಶವನ್ನು ಸೃಷ್ಟಿಸಲು ಸಾಧ್ಯ ಎಂದು ಸಾಬೀತು ಪಡಿಸಿದವರು ಕಾಮತ್ ಸರಣಿ ಹೋಟೆಲ್‌ಗಳ ಸ್ಥಾಪಕರಾದ ವಿಠ್ಠಲ ಕಾಮತರು! ಅವರ ಕನಸುಗಳಿಗೆ ಬಣ್ಣ ಅವರೇ ತುಂಬಿದ್ದರು.

12. ಯಕ್ಷಗಾನದ ಭಾಗವತಿಕೆಯಲ್ಲಿ ಏನೆಲ್ಲ ಸಾಧ್ಯತೆಗಳಿವೆಯೋ, ಅದನ್ನೆಲ್ಲ ಹುಡುಕಿ ತಂದು ಗೆದ್ದವರು ಯಕ್ಷಗಾನ ಭಾಗವತರಾದ ಕಾಳಿಂಗ ನಾವಡರು! ಅವರನ್ನು ಯುಗಪ್ರವರ್ತಕ ಅನ್ನೋದು ಅದಕ್ಕೇ!

ಅವಕಾಶಗಳನ್ನು ಹುಡುಕಿಕೊಂಡು ಹೋಗುವ ಕಾಲ ಹಳತಾಯಿತು! ಅವಕಾಶಗಳು ಬಂದು ನಮ್ಮ ಮನೆ ಬಾಗಿಲು ಬಡಿಯಲಿ ಎಂದು ಕೂಡ ಕಾಯುತ್ತಾ ಕೂರುವ ಕಾಲ ಇದಲ್ಲ! ಈಗೇನಿದ್ದರೂ ಅವಕಾಶಗಳನ್ನು ಸೃಷ್ಟಿಸುವವವರ ಕಾಲ!

Exit mobile version