Site icon Vistara News

Raja Marga Column : ಬೇಕಿರುವುದು ಅನುಕಂಪವಲ್ಲ, ಸಹಾನುಭೂತಿ; ಏನೀ ಪ್ರೀತಿ ಮಂತ್ರ?

Raja Marga Column Empathy

Raja Marga Column: ಒಂದು ಕಥೆಯಿಂದ ಆರಂಭ ಮಾಡುತ್ತೇನೆ. ಒಂದೂರಲ್ಲಿ ಒಂದು ನಾಯಿಗಳ ಪ್ರದರ್ಶನ (Dog Show) ಮತ್ತು ಮಾರಾಟ ಮಾಡುವ ಕಾರ್ಯಕ್ರಮ ಏರ್ಪಾಡಾಗಿತ್ತು. ಬೇರೆ ಬೇರೆ ಜಾತಿಯ, ಬೇರೆ ಬೇರೆ ಬಣ್ಣದ ಚಂದ ಚಂದದ ನಾಯಿಗಳು. ಬೆಳಗ್ಗೆಯಿಂದ ಜನಸಾಗರ ಹರಿದು ಬಂದು ನಾಯಿಗಳನ್ನು ನೋಡುತ್ತ ತಮಗೆ ಇಷ್ಟವಾದ ನಾಯಿಗಳನ್ನು ಖರೀದಿ ಮಾಡುತ್ತಿದ್ದರು.

ಆದರೆ ಒಂದು ನಾಯಿ ಮೇಜಿನ ಕೆಳಗೆ ಧೂಳಲ್ಲಿ ಬಿದ್ದು ಒದ್ದಾಡುತ್ತಿತ್ತು. ಅದಕ್ಕೆ ಬೊಗಳಲು ಕೂಡ ತ್ರಾಣ ಇರಲಿಲ್ಲ. ಅದು ಯಾರಿಗೂ ಬೇಡವಾದ ನಾಯಿ ಆಗಿತ್ತು. ಯಾರೂ ಅದರ ಮೈದಡವಲೂ ಹೋಗಲಿಲ್ಲ.

ಆದರೆ ಮಧ್ಯಾಹ್ನದ ನಂತರ ಒಬ್ಬ ಹುಡುಗ ಆ ಪ್ರದರ್ಶನಕ್ಕೆ ಬಂದ. ಎಲ್ಲ ನಾಯಿಗಳನ್ನು ನೋಡುತ್ತಾ, ಮೈದಡವುತ್ತ ಮುಂದೆ ಬಂದ. ಕೊನೆಗೆ ಆ ನಾಯಿಯ ಹತ್ತಿರ ಬಂದು ನಿಂತ. ಅದರ ಬೆನ್ನು ಸವರಿದ. ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿದ. ಆ ನಾಯಿಯ ರೇಟ್ ಎಷ್ಟು ಎಂದು ಕೇಳಿದ. ಆ ಪ್ರದರ್ಶನದ ಸಂಘಟಕರು “ಆ ನಾಯಿಗೆ ರೇಟ್ ಫಿಕ್ಸ್ ಮಾಡಿಲ್ಲ. ಅದರ ಒಂದು ಕಾಲು ಮೊನ್ನೆ ಮುರಿದಿದೆ. ಎಷ್ಟು ಬೇಕಾದರೂ ದುಡ್ಡು ಕೊಟ್ಟು ಈ ನಾಯಿ ಖರೀದಿ ಮಾಡಬಹುದು. ಫ್ರೀ ಬೇಕಾದರೂ ಕೊಡಲು ನಾವು ರೆಡಿ ಇದ್ದೇವೆ!” ಎಂದರು. ಹುಡುಗ ಮತ್ತೆ ಆ ನಾಯಿಯ ಮೈ ಸವರಿದ. ತನ್ನ ಕಿಸೆ ಎಲ್ಲ ಹುಡುಕಿದ. ನೂರೋ, ಇನ್ನೂರೋ ರೂಪಾಯಿ ಅವನ ಕೈಗೆ ಬಂತು. ಅದನ್ನು ಕೊಟ್ಟು ಅದೇ ನಾಯಿ ಬೇಕು ಎಂದು ಹಠ ಹಿಡಿದು ಆ ನಾಯಿಯನ್ನು ಖರೀದಿ ಮಾಡಿ ಮನೆಗೆ ತೆಗೆದುಕೊಂಡು ಹೋದ!

ಕಾರಣ ಕೇಳಿದರೆ ನೀವು ದಂಗಾಗಬಹುದು. ಆ ನಾಯಿಯ ಒಂದು ಕಾಲು ಮುರಿದಿತ್ತು ಮತ್ತು ಆ ಹುಡುಗನಿಗೂ ಒಂದು ಕಾಲು ಇರಲಿಲ್ಲ! ಆ ನಾಯಿಯ ಕಷ್ಟ ಅವನಿಗಿಂತ ಚೆನ್ನಾಗಿ ಬೇರೆ ಯಾರಿಗೂ ಅರ್ಥವಾಗುವ ಚಾನ್ಸ್ ಇರಲಿಲ್ಲ!

Raja Marga Column : ಸಿಂಪೆಥಿ vs ಎಂಪಥಿ!

ಈ ಗುಣಕ್ಕೆ ಸಹಾನುಭೂತಿ (Empathy) ಎಂದು ಕರೆಯುತ್ತೇವೆ. Putting ourself in other person’s shoes is empathy ಅನ್ನುತ್ತದೆ ಶಬ್ದಕೋಶ. ಅಂದರೆ ನಾವು ನಮ್ಮನ್ನು ಬೇರೆಯವರ ಜಾಗದಲ್ಲಿ ಕೂರಿಸಿ ಫೀಲ್ ಮಾಡುವುದು ಸಹಾನುಭೂತಿ! ಇದು ಅನುಕಂಪಕ್ಕಿಂತ (Sympathy) ಒಂದು ಹೆಜ್ಜೆ ಮುಂದೆ ಇರುತ್ತದೆ. ಯಾರದಾದರೂ ಬಗ್ಗೆ ಅಯ್ಯೋ ಪಾಪ ಎಂದು ಅಲ್ಲಿಗೆ ಬಿಟ್ಟುಬಿಡುವುದು ಅನುಕಂಪ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆ ವ್ಯಕ್ತಿಗಳ ಜಾಗದಲ್ಲಿ ಕೂತು ಅವರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವುದು ಸಹಾನುಭೂತಿ! ಅದೇ ನಮ್ಮನ್ನು ಸದಾಕಾಲ ಗೆಲ್ಲಿಸುತ್ತ ಹೋಗುತ್ತದೆ!

ಇದನ್ನೂ ಓದಿ : Raja Marga Column : ಯುವಜನತೆ ಹಾದಿ ತಪ್ಪುತ್ತಿದೆ ಅನ್ನೋದು ಸುಳ್ಳು, ಅವರ ರೂಟ್‌ ಸರಿ ಇದೆ!

Raja Marga Column : ಮಾನವೀಯ ಸಂಬಂಧಗಳ ಪಂಚಾಂಗ ಇದು!

1. ಒಬ್ಬ ಹುಡುಗ ತನ್ನ ಅಪ್ಪ ಹಾಗೆ, ಅಪ್ಪ ಹೀಗೆ ಎಂದು ದಿನವೂ ಬೈತಾ ಇದ್ದ. ಒಂದು ದಿನ ಅಪ್ಪನ ಜಾಗದಲ್ಲಿ ಅವನು ಕೂತು ಯೋಚನೆ ಮಾಡಿದರೆ ಅವನು ಮುಂದೆ ಖಂಡಿತ ಬಯ್ಯುವುದಿಲ್ಲ!

2. ಒಂದು ದಂಪತಿ ಜಗಳ ಮಾಡಿಕೊಂಡು ನನ್ನ ಬಳಿಗೆ ಬಂದಿದ್ದರು. “ನಾನು ಇಷ್ಟೊಂದು ದುಡಿದು ಸುಸ್ತಾಗಿ ಮನೆಗೆ ಬರ್ತೇನೆ. ಅವಳು ಮನೆಯ ಕೆಲಸ ಬಿಟ್ಟರೆ ಬೇರೇನು ಮಾಡ್ತಾಳೆ?” ಎನ್ನುವುದು ಗಂಡನ ದೂರು.
“ನನ್ನ ಕಷ್ಟ ಯಾರ ಹತ್ತಿರ ಹೇಳಲಿ? ನನ್ನ ಕೆಲಸಕ್ಕೆ ಯಾರು ಸಂಬಳ ಕೊಡುತ್ತಾರೆ? ಒಂದು ಮೆಚ್ಚುಗೆಯ ಮಾತು ಕೂಡ ಇವರಿಂದ ಬರುವುದಿಲ್ಲ!” ಎನ್ನುವುದು ಹೆಂಡತಿಯ ಆರೋಪ.
“ಒಂದು ದಿನದ ಮಟ್ಟಿಗೆ ನಿಮ್ಮ ಕೆಲಸಗಳನ್ನು ಅದಲು ಬದಲು ಮಾಡಿ ನೋಡಿ. ಮತ್ತೆ ನನ್ನ ಬಳಿ ಬನ್ನಿ” ಎಂಬುದು ನಾನು ಕೊಟ್ಟ ಪರಿಹಾರ. ಒಪ್ಪಿಕೊಂಡ ದಂಪತಿಗಳು ಹಿಂದೆ ಹೋದರು. ಮತ್ತೆ ಅವರು ನನ್ನ ಹತ್ತಿರ ಸಲಹೆ ಕೇಳಲು ಬರಲಿಲ್ಲ. ಯಾಕೆಂದರೆ ಅವರು ಜಗಳ ಮಾಡುವುದನ್ನು ಪೂರ್ತಿ ಬಿಟ್ಟಿದ್ದಾರೆ ಅನ್ನುವುದು ನನ್ನ ಚಾಲೆಂಜ್!

3. ಇಲ್ಲೊಬ್ಬ ತಾಯಿ, ಮಗಳ ನಿತ್ಯ ಜಗಳ. ತಾಯಿಯು ಹಳೆಯ ಕಾಲದವರು. ಮಗಳು ಅಲ್ಟ್ರಾ ಮಾಡರ್ನ್! ಅವರಿಬ್ಬರ ಮಧ್ಯೆ ಒಂದು ದೊಡ್ಡ ಜನರೇಶನ್ ಗ್ಯಾಪ್ ಇದೆ. ಮಗಳ ಡ್ರೆಸ್ ಕೋಡ್ ಬಗ್ಗೆ ಅಮ್ಮನದ್ದು ಆಕ್ಷೇಪ. ಇಡೀ ದಿನ ಮೊಬೈಲ್ ಹಿಡಿದುಕೊಂಡೆ ಇರುತ್ತಾಳೆ, ನಮ್ಮ ಕಾಲದಲ್ಲಿ ಹೀಗೆ ಇತ್ತಾ? ಎನ್ನುವುದು ಅಮ್ಮನ ದೂರು!
ಕಾಲ ಬದಲಾಗಿದೆ. ಅಮ್ಮ ಯಾಕೆ ಅವರ ಕಾಲದ ಯೋಚನೆ ಮಾಡುತ್ತಾರೆ? ನನಗೆ ವೈಚಾರಿಕ ಸ್ವಾತಂತ್ರ್ಯ ಬೇಡವಾ? ಅನ್ನುವುದು ಮಗಳ ಆಕ್ಷೇಪ!
ಅವರಿಬ್ಬರನ್ನು ಕೂರಿಸಿ ನಾನು ಹೇಳಿದ ಎಂಪಥಿಯ ಪಾಠವು ತುಂಬಾ ವರ್ಕ್ ಆಯ್ತು! ಈಗ ಅವರಿಬ್ಬರೂ ಅವರವರ ನಿಲುವುಗಳಲ್ಲಿ ಖುಷಿ ಆಗಿದ್ದಾರೆ, ಬೇರೆಯವರ ನಿಲುವುಗಳನ್ನು ಪ್ರಶ್ನೆ ಮಾಡಲು ಹೋಗುವುದಿಲ್ಲ! ಆದ್ದರಿಂದ ಜಗಳ ಇಲ್ಲ!

ಇದನ್ನೂ ಓದಿ : Raja Marga Column : ಯಾವ ಕೆಲಸವೇ ಇರಲಿ, ಗಂಡನ್ನು ಮೀರಿಸಬಲ್ಲ ಪವರ್‌ ಹೌಸ್‌ ಹೆಣ್ಣು!

5. ಜಗತ್ತಿನ ಅತ್ಯಂತ ಕ್ಲಿಷ್ಟ ಸಂಬಂಧ ಅಂದರೆ ಅತ್ತೆ ಸೊಸೆಯರ ಸಂಬಂಧ!
“ನಾನು ನನ್ನ ಮಗ ಚೆನ್ನಾಗಿದ್ದೆವು. ಇವಳೊಬ್ಬಳು ಮಾಟಗಾತಿ ಬಂದು ಬಿಟ್ಟಳು! ಈಗ ನನ್ನ ಮಗ ಅವಳ ಹಿಂದೆ ಓಡಾಡುತ್ತಾನೆ. ಅಮ್ಮನ ಬಗ್ಗೆ ಗೊಡವೆಯೇ ಇಲ್ಲ!” ಇದು ಅತ್ತೆಯ ದೂರು.
“ನಾನು ನನ್ನ ತಾಯಿಯ ಮನೆಯನ್ನು ಬಿಟ್ಟು ಗಂಡನ ಮನೆಗೆ ಬಂದವಳು. ನನಗೆ ನನ್ನ ಗಂಡನ ಪ್ರೀತಿ ಬೇಡವಾ? ಅತ್ತೆ ನನ್ನ ಪ್ರತಿಯೊಂದು ನಡೆಯನ್ನು ಪ್ರಶ್ನೆ ಮಾಡಿದರೆ ನಾನೇನು ಮಾಡಲಿ? ” ಇದು ಸೊಸೆಯ ವರಸೆ!
“ನನಗೆ ಉಭಯ ಸಂಕಟ ಆಗ್ತಾ ಇದೆ. ನಾನು ಯಾರ ಪಕ್ಷ ವಹಿಸಲಿ?” ಅನ್ನುತ್ತಾನೆ ಮಗರಾಯ!

ನಾನು ಅತ್ತೆಗೆ ಹೇಳಿದ ಎಂಪಥಿಯ ಪಾಠ ಹೀಗಿತ್ತು “ನೋಡಿ ಅಮ್ಮ. ನೀವು ಹೊಸದಾಗಿ ಮದುವೆಯಾಗಿ ಗಂಡನ ಮನೆಗೆ ಬಂದಾಗ ನಿಮಗೂ ಗಂಡನ ಪ್ರೀತಿಯು ತುಂಬಾ ಬೇಕಿತ್ತು ತಾನೇ? ಮತ್ತೆ ಈಗ ಯಾವ ಕಾರಣಕ್ಕೆ ನೊಂದುಕೊಳ್ಳುತ್ತೀರಿ? ಸ್ವಲ್ಪ ದಿನ ಮಗ ಸೊಸೆ ಖುಷಿ ಆಗಿರಲಿ”
ಸೊಸೆಗೆ ನಾನು ಹೇಳಿದ ಎಂಪಥಿಯ ಪಾಠ – “ನೋಡಮ್ಮ, ನಿಮ್ಮ ಗಂಡನನ್ನು ಬಾಲ್ಯದಿಂದ ಜೋಪಾನ ಮಾಡಿ ಸಾಕಿದವರು ನಿಮ್ಮ ಅತ್ತೆ ತಾನೇ? ನೀವು ಹೊಸದಾಗಿ ಮದುವೆಯಾಗಿ ಬಂದವರು. ಈಗಲೇ ಯಾಕೆ ಅಮ್ಮ, ಮಗನನ್ನು ಸಪರೇಟ್ ಮಾಡುತ್ತೀರಿ? ಸ್ವಲ್ಪ ದಿನ ತಾಳ್ಮೆ ತೆಗೆದುಕೊಳ್ಳಿ. ಮುಂದೆ ಅವರೇ ನಿಮ್ಮನ್ನು ಮಗಳಾಗಿ ತೆಗೆದುಕೊಳ್ಳುತ್ತಾರೆ!”

ಗಂಡನಿಗೆ ನಾನು ಹೇಳಿದ ಎಂಪಥಿಯ ಪಾಠ – ” ನೋಡಪ್ಪ ಮಗರಾಯ. ಮದುವೆಗಿಂತ ಮೊದಲು ನೀನು ಬರುವಾಗ ಎಷ್ಟು ರಾತ್ರಿ ಆದರೂ ನಿಮಗಾಗಿ ಹಸಿವೆಯಿಂದ ಕಾದು ಊಟ ಬಡಿಸುತ್ತ ಇದ್ದದ್ದು ಅಮ್ಮ ತಾನೇ? ಈಗ ಮನೆಗೆ ಬಂದ ಕೂಡಲೇ ಹೆಂಡತಿಯನ್ನು ಕರೆದು ಊಟ ಬಡಿಸು ಎಂದು ಯಾಕೆ ಹೇಳುತ್ತೀ? ಸ್ವಲ್ಪ ದಿನ ಅಮ್ಮ ಊಟ ಬಡಿಸಲಿ ಬಿಡು! ಅವರು ಹಳೆಯ ಕಾಲದವರು. ಹೊಂದಾಣಿಕೆ ಆಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಮುಂದೆ ನಿನ್ನ ಹೆಂಡತಿಯೇ ನಿನಗೆ ಕೈತುತ್ತು ಕೊಡಲಿ ಬಿಡು!”

ಈಗ ಮೂರೂ ಜನ ಅವರವರ ಕಂಫರ್ಟ್ ವಲಯದಲ್ಲಿ ಸುಖವಾಗಿದ್ದಾರೆ. ಈಗ ಅವರದ್ದು ಸುಖೀ ಸಂಸಾರ.

ಈ ಎಂಪಥಿ ನಿಮ್ಮನ್ನು ನಿತ್ಯವೂ ಗೆಲ್ಲಿಸುವ ಮಂತ್ರ ಎಂದು ನಿಮಗೆ ಇಷ್ಟು ಹೊತ್ತಿಗೆ ಅರ್ಥ ಆಗಿರಬೇಕು!

Exit mobile version