ನಿನ್ನೆ ನಾನು ನೋಡಿದ ಒಂದು ವಿಡಿಯೋ ನನ್ನನ್ನು ಅಲ್ಲಾಡಿಸಿ ಬಿಟ್ಟಿತು. ನನ್ನ ನಿದ್ದೆಯು ಹಾರಿ ಹೋಯಿತು. ಅದು ಮೊನ್ನೆ ಹುತಾತ್ಮನಾದ ಸೈನಿಕ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ (Captain MV Pranjal) ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರದ ವಿಡಿಯೊ. ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರ ಅಪ್ಪ ಎಂ. ವೆಂಕಟೇಶ್ ಮಂಗಳೂರಿನ ಎಂಆರ್‌ಪಿಎಲ್ ಎಂಬ ಮಹಾನ್ ಕೈಗಾರಿಕಾ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ (MD in MRPL) ಆಗಿ ನಿವೃತ್ತರಾದವರು. ತಮ್ಮ ಒಬ್ಬನೇ ಮಗನನ್ನು ಆತನ ಆಸೆಯಂತೆ ಸೈನ್ಯಕ್ಕೆ ಕಳುಹಿಸಿ ಕೊಟ್ಟಿದ್ದರು. ವೀರ ಮರಣವನ್ನು ಹೊಂದಿದ ಕ್ಯಾಪ್ಟನ್ ಪ್ರಾಂಜಲ್ ಹುತಾತ್ಮ ಆಗಿದ್ದರು (Raja Marga Column).
ತ್ರಿವರ್ಣ ಧ್ವಜವನ್ನು ಹೊದ್ದು ಮಗನ ಶವ ಮನೆಯ ಅಂಗಳಕ್ಕೆ ಬಂದಾಗ ಅಪ್ಪ ಎಂ ವೆಂಕಟೇಶ್ ಕಾಲಿಗೆ ಚಪ್ಪಲಿ ಹಾಕದೆ ಭಾರವಾದ ಹೆಜ್ಜೆಗಳನ್ನು ಜೋಡಿಸಿ ತನ್ನ ಪತ್ನಿಯ ಜತೆ ನಡೆದು ಬಂದಿದ್ದರು. ಮಗನ ಮುಖವನ್ನು ನೋಡಿದಾಗ ಒಳಗೆ ದುಃಖ ಸ್ಫೋಟ ಆಗಿತ್ತು. ಅಮ್ಮ ಒಂದರೆ ಕ್ಷಣ ಸೆರಗಿನಿಂದ ಮುಖ ಮುಚ್ಚಿಕೊಂಡರು. ಆದರೆ ಅವರಿಬ್ಬರೂ ಕಣ್ಣೀರು ಹಾಕಲಿಲ್ಲ! ಅದೇ ಹೊತ್ತಿಗೆ ಪ್ರಾಂಜಲ್ ಪತ್ನಿ ಪತಿಯ ಶವಪೆಟ್ಟಿಗೆಯ ಹತ್ತಿರ ನಡೆದು ಬಂದರು. ಪತಿಯ ಮುಖವನ್ನೇ ದಿಟ್ಟಿಸಿ ತುಂಬಾ ಹೊತ್ತು ನಿಂತರು. ಆಕೆಗಿನ್ನೂ ಎಳೆಯ ಪ್ರಾಯ. ಸಂಪ್ರದಾಯದಂತೆ ಹುತಾತ್ಮ ಪತಿಯ ಶವಕ್ಕೆ ಹೊದ್ದ ತ್ರಿವರ್ಣ ಧ್ವಜವನ್ನು ಚಂದವಾಗಿ ಮಡಚಿ ಸೇನಾ ಮುಖ್ಯಸ್ಥರು ಆಕೆಯ ಕೈಗೆ ನೀಡಿದರು. ಆಗಲೂ ಆಕೆಯ ಮುಖದಲ್ಲಿ ಅಗಾಧವಾದ ಪ್ರಶಾಂತತೆ. ಒಂದು ಬಿಕ್ಕಳಿಕೆ ಕೂಡ ಇಲ್ಲ. ಸೇನಾ ಗೌರವ ಸಲ್ಲಿಕೆ ಆಗಿ ಶವ ಪೆಟ್ಟಿಗೆ ಹೊರಡುವ ತನಕವೂ ಆಕೆಯ ಮುಖದಲ್ಲಿ ಅದೇ ಪ್ರಶಾಂತ ಭಾವ! ಆಕೆ ತನ್ನ ಅತ್ತೆ ಮಾವನಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದರು! ಆಕೆ ತೋರಿದ ಧೈರ್ಯ, ತಾಳ್ಮೆಗಳನ್ನು ದೇಶವು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.
ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಬಗ್ಗೆ, ಅವರ ದೇಶಪ್ರೇಮದ ಬಗ್ಗೆ ಈಗಾಗಲೇ ಸಾಕಷ್ಟು ಜನ ಬರೆದಿದ್ದಾರೆ. ಮಾಧ್ಯಮಗಳೂ ವರದಿ ಮಾಡಿವೆ. ಆದರೆ ಅಂತಹ ಸೈನಿಕರ ಕುಟುಂಬದ ಬಗ್ಗೆ, ಅವರ ಪತ್ನಿಯ ಬಗ್ಗೆ ಯಾರೂ ಹೆಚ್ಚು ಬರೆದಿಲ್ಲ. ಅವೆಲ್ಲವೂ ಸೈನಿಕರ ತ್ಯಾಗ ಮತ್ತು ಬಲಿಗಾನಗಳಷ್ಟೆ ಪ್ರಖರವಾದ ಕಥೆಗಳು.
ಹುತಾತ್ಮ ಸೈನಿಕರ ಪತ್ನಿ ಮತ್ತು ತಾಯಂದಿರು ಅಳುವುದಿಲ್ಲ!
ನಾನು ಪರಮವೀರ ಚಕ್ರ, ಶೌರ್ಯ ಚಕ್ರ ಮೊದಲಾದ ಸೈನ್ಯದ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳ ಪ್ರಸಾರವನ್ನು ಟಿವಿ ಪರದೆಯ ಮೇಲೆ ನೋಡಿದ್ದೇನೆ. ಅಲ್ಲಿ ಕೂಡ ಸೈನಿಕರ ತಾಯಂದಿರು ಮತ್ತು ಹೆಂಡತಿಯರು ಬಹಿರಂಗವಾಗಿ ಅಳುವುದಿಲ್ಲ. ಹಾಗೆಂದು ಅವರಿಗೆ ಭಾವನೆಗಳು ಇಲ್ಲ, ಪ್ರೀತಿ ಇಲ್ಲ ಎಂದರ್ಥ ಅಲ್ಲ. ಅಳಬಾರದು ಎಂಬ ನಿಯಮವೂ ಇಲ್ಲ. ಆದರೆ ಕಣ್ಣೀರು ಹಾಕಿದರೆ ಹುತಾತ್ಮ ಯೋಧರಿಗೆ ಅಪಮಾನ ಎಂದು ಅವರು ಮಾನಸಿಕವಾಗಿ ಸ್ಟ್ರಾಂಗ್ ಆಗುತ್ತಾರೆ. ಆ ಕ್ಷಣಗಳು ನಮ್ಮ ಕಣ್ಣನ್ನು ಒದ್ದೆ ಮಾಡುತ್ತವೆ. ಆದರೆ ಅವರು ತಪ್ಪಿಯೂ ಆಳುವುದಿಲ್ಲ. ಉಜ್ವಲ ರಾಷ್ಟ್ರಪ್ರೇಮದ ಪರಾಕಾಷ್ಠೆ ಅದು. ಮುಂದೆ ಸರಕಾರವು ಅವರಿಗೆ ಪಿಂಚಣಿ ನೀಡುತ್ತದೆ ಎಂದು ನಾವು ಯೋಚನೆ ಮಾಡಿ ಅವರನ್ನು ಮರೆತೇ ಬಿಡುತ್ತೇವೆ. ಆದರೆ ಅವರ ಬದುಕು ಮುಂದೆ ಎಷ್ಟು ಶೂನ್ಯ ಆಗಿರುತ್ತದೆ, ಅವರೆಷ್ಟು ನೋವು ಪಡುತ್ತಾರೆ ಅನ್ನುವುದು ನಮ್ಮ ಕಲ್ಪನೆಗೆ ಮೀರಿದ್ದು. ಅವರ ಬಗ್ಗೆ ಯೋಚನೆ ಮಾಡಿದಾಗ ನಮ್ಮ ಎದೆ ಭಾರವಾಗುತ್ತದೆ.
ಇದ್ಯಾವುದೂ ಕಟ್ಟು ಕಥೆ ಅಲ್ಲ!
ಹುತಾತ್ಮ ಯೋಧರ ಕುಟುಂಬದ ಬಗ್ಗೆ ಅಧ್ಯಯನ ಮಾಡುತ್ತ ಮುಂದುವರೆದಾಗ ನನಗೆ ಅಂಥ ನೂರಾರು ಕಥೆಗಳು ದೊರೆತವು. ಅದ್ಯಾವುದೂ ಕಟ್ಟುಕಥೆಗಳು ಅಲ್ಲ. ಸಿನೆಮಾ ಕಥೆಗಳು ಅಲ್ಲ. ಅವುಗಳ ಹಿಂದೆ ಭಾವ ಸ್ಪರ್ಶದ ಕಣ್ಣೀರು ಇದೆ. ತ್ಯಾಗದ, ಬಲಿದಾನದ, ರಾಷ್ಟ್ರಪ್ರೇಮದ ಶಿಖರಗಳು ಇವೆ. ಅವುಗಳಲ್ಲಿ ಕೆಲವನ್ನು ನಾನು ತಮ್ಮ ಮುಂದೆ ಇಡಬೇಕು. ಅವರು ಎದುರು ಸಿಕ್ಕರೆ ಖಂಡಿತವಾಗಿ ಅವರ ಪಾದ ಸ್ಪರ್ಶ ಮಾಡಬೇಕು ಎಂದು ನನಗೆ ಅನ್ನಿಸುತ್ತದೆ.
1. ಹರಿಯಾಣದ ರಾಣಾ ಸಿಂಘ್ ನಿವೃತ್ತ ಸೈನಿಕ. ಆತನ ಮಗ ಹವಾಲ್ದಾರ್ ಜೈಪ್ರಕಾಶ್ ಸಿಂಘ್ ಯುದ್ಧದಲ್ಲಿ ಹುತಾತ್ಮ ಆದಾಗ ಶವವು ಗುರುತು ಸಿಗದಷ್ಟು ವಿಕಾರ ಆಗಿತ್ತು. ಯುದ್ಧ ಭೂಮಿಯಲ್ಲಿಯೇ ದಹನ ನಡೆಸಿ ಮನೆಗೆ ಚಿತಾಭಸ್ಮ ಮಾತ್ರ ಬಂದಿತ್ತು. ಆಗ ಅಪ್ಪ ನಿವೃತ್ತ ಸೈನಿಕ ಅಳಲಿಲ್ಲ. ಚಿತಾಭಸ್ಮ ತಂದವರಿಗೆ ‘ನನ್ನ ಮಗ ಎದೆಗೆ ಗುಂಡೇಟು ತಿಂದು ಸತ್ತನಲ್ಲ, ಅಷ್ಟು ಸಾಕು. ಅವನ ಬೆನ್ನಿಗೆ ಗುಂಡೇಟು ಬಿದ್ದಿದ್ದರೆ ಅವನು ನನ್ನ ಮಗನೇ ಅಲ್ಲ ಎನ್ನುತ್ತಿದ್ದೆ!’ ಎಂದು ಬಿಟ್ಟಿದ್ದರು. ಅಳುತ್ತಿದ್ದ ಹೆಂಡತಿಯನ್ನು ಅಪ್ಪಿಕೊಂಡು ಅವರು ಹೇಳುತ್ತಿದ್ದರು – ಅಳಬೇಡ ಇವಳೇ, ಧೀರರು ಮಾತ್ರ ದೇಶಕ್ಕಾಗಿ ಹುತಾತ್ಮರಾಗುವ ಅವಕಾಶ ಪಡೆಯುತ್ತಾರೆ!
2. ಕ್ಯಾಪ್ಟನ್ ಅಮೋಲ್ ಕಾಲಿಯಾ ಶವ ಪೆಟ್ಟಿಗೆ ಮನೆಗೆ ಬಂದಿದ್ದಾಗ ಆತನ ಅಪ್ಪ ‘ಮಗು, ನಿನ್ನನ್ನು ನಾನು ಕಿರಿಯ ಮಗ ಎಂದು ಕೊಂಡಿದ್ದೆ. ಆದರೆ ನೀನು ಇಷ್ಟೊಂದು ವೀರ ಎಂದು ಗೊತ್ತಿರಲಿಲ್ಲ. ಇಂದು ನೀನು ದೇಶಕ್ಕೇ ಹಿರಿಯ ಮಗ ಆಗಿದ್ದೀಯಾ ‘ ಎಂದು ಹೇಳಿ ಸೆಲ್ಯೂಟ್ ಹೊಡೆದಿದ್ದರು.
3. ಗ್ರೆನೇಡಿಯರ್ ಅಮರ್ ದೀಪ್ ಸಿಂಘ್ ದೇಶಕ್ಕಾಗಿ ಹುತಾತ್ಮ ಆಗಿದ್ದ. ಅವನ ಪಾರ್ಥಿವ ಶರೀರ ತ್ರಿವರ್ಣ ಧ್ವಜವನ್ನು ಹೊದ್ದು ಮನೆಗೆ ಬಂದಾಗ ಅಪ್ಪ ಹೇಳಿದ್ದು – ನನ್ನ ಮಗ ಯಾವಾಗಲೂ ಸೂಚನೆ ಕೊಡದೆ ಮನೆಗೆ ಬಂದು ನಮಗೆಲ್ಲ ಶಾಕ್ ಕೊಡುತ್ತಿದ್ದ. ಈ ಬಾರಿಯೂ ಸೂಚನೆ ಕೊಡದೆ ಬಂದಿದ್ದಾನೆ. ಆದರೆ ಹೀಗೆ ಬರುತ್ತಾನೆ ಎಂದು ಗೊತ್ತಿರಲಿಲ್ಲ.
4. ಸಿಖ್ ರೆಜಿಮೆಂಟ್ ಸೈನಿಕ ಜಸ್ವಿಂದರ್ ಸಿಂಘ್ ತನ್ನ ಕುರುಡು ಅಪ್ಪನಿಗೆ ಮತ್ತು ಅಮ್ಮನಿಗೆ ಧೈರ್ಯ ಹೇಳಿ ಯುದ್ಧಕ್ಕೆ ತೆರಳಿದ್ದ. ಹುತಾತ್ಮ ಆಗುವ ಹಿಂದಿನ ದಿವಸ ಆತ ಅಮ್ಮನಿಗೆ ಫೋನ್ ಮಾಡಿ ‘ಅಮ್ಮ, ಧೈರ್ಯ ಕೆಡಬೇಡಿ. ಇಂತಹ ನೂರಾರು ಸೈನಿಕರ ಜೊತೆಗೆ ಕಾಶ್ಮೀರದಲ್ಲಿ ಮೂರು ವರ್ಷ ಹೋರಾಡಿ ಬಂದವನು ನಾನು. ಆತಂಕ ಮಾಡಬೇಡಿ’ ಅಂದಿದ್ದ. ಅಂತಹ ಮಗನ ಪಾರ್ಥಿವ ಶರೀರವು ಮನೆಯ ಅಂಗಳಕ್ಕೆ ಬಂದಾಗ ಆಕೆಯ ಸ್ಥಿತಿ ಹೇಗಿರಬಹುದು?
ಆಕೆಯ ಕುರುಡು ಗಂಡ ತನ್ನ ಹೆಂಡತಿಗೆ ‘ಅಳಬೇಡ. ಶತ್ರುಗಳನ್ನು ತಡೆಯಲು ಯಾರಾದರೂ ಸಾಯಲೇ ಬೇಕು. ನಮ್ಮ ಮಗನಿಗೆ ಅಂತಹ ಅವಕಾಶ ಸಿಕ್ಕಿದೆ!’ ಎಂದು ಹೇಳಿ ಸಮಾಧಾನ ಮಾಡಿದ್ದರು.
5. ಕೇವಲ 24ರ ಹರೆಯದಲ್ಲಿ ಪ್ರಾಣ ಕಳೆದುಕೊಂಡು ಹುತಾತ್ಮನಾದ ಸೈನಿಕ ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆಯ ಅಪ್ಪ ಮಗನನ್ನು ಯುದ್ಧದಲ್ಲಿ ಕಳೆದುಕೊಂಡಿದ್ದರು. ನಂತರ ಮಗನಿಗೆ ‘ಈಗ ನೀನು ನನ್ನ ಮಾರ್ಗದರ್ಶಕ. ನನಗೆ ಸಮಸ್ಯೆಗಳು ಬಂದಾಗ ನಿನ್ನ ಫೋಟೋ ಮುಂದೆ ನಿಂತು ನಿನ್ನ ನಗು ಮುಖ ನೋಡುತ್ತೇನೆ. ತಕ್ಷಣ ನನಗೆ ಸಮಸ್ಯೆ ಎದುರಿಸುವ ಶಕ್ತಿ ಬರುತ್ತದೆ!’ ಎನ್ನುತ್ತಿದ್ದರು.
6. ‘ಬುಲೆಟ್ ಮೇಲೆ ನನ್ನ ಹೆಸರು ಬರೆದಿದ್ದರೆ ನನ್ನನ್ನು ಯಾರೂ ಉಳಿಸಲು ಸಾಧ್ಯ ಇಲ್ಲ!’ ಎಂದು ಯಾವಾಗಲೂ ಹೇಳುತ್ತಿದ್ದ ಗ್ರೇನೆಡಿಯರ್ ನಾಯಕ್ ರಾಜಕುಮಾರ್ ಪೂನಿಯಾ ತೀರಿ ಹೋದಾಗ ಆತನ ಹೆಂಡತಿಯ ಪ್ರಾಯ ಕೇವಲ 19 ವರ್ಷ. ಆಕೆಯೂ ಸೈನಿಕರ ಕುಟುಂಬದಿಂದ ಬಂದವಳು. ನನ್ನ ಗಂಡನ ಸಾವಿಗೆ ಕಣ್ಣೀರು ಸುರಿಸುವುದೇ ಇಲ್ಲ ಎಂದು ಹೇಳಿ ಎದೆ ಗಟ್ಟಿ ಮಾಡಿಕೊಂಡಳು .ಆಕೆ ಈಗ ಗಂಡನ ಕೃಷಿ ಭೂಮಿಯಲ್ಲಿ ಟ್ರಾಕ್ಟರ್ ಓಡಿಸಿ ಕೃಷಿಯನ್ನು ಮಾಡುತ್ತಿದ್ದಾರೆ. ತನ್ನ ಅತ್ತೆ, ಮಾವನಿಗೆ ಆಧಾರ ಆಗಿದ್ದಾಳೆ!
7. ರೈಫಲ್ ಮ್ಯಾನ್ ಯೋಗಿಂದ್ರ ಸಿಂಘ್ ಭಯೋತ್ಪಾದಕರ ಜೊತೆ ಹೋರಾಡಿ ಪ್ರಾಣವನ್ನು ಕಳೆದುಕೊಂಡಾಗ ಆತನ ವಯಸ್ಸು ಕೇವಲ 23! ಆತನಿಗೆ ಮದುವೆ ನಿಶ್ಚಯ ಆಗಿತ್ತು. ಮದುಮಗನಾಗಿ ದಿಬ್ಬಣ ತೆಗೆದುಕೊಂಡು ಬರಬೇಕಾಗಿದ್ದ ಆತ ತ್ರಿವರ್ಣ ಧ್ವಜ ಸುತ್ತಿಕೊಂಡು ಬಂದಿದ್ದ. ಆತನಿಗೆ ನಿಶ್ಚಯ ಆಗಿದ್ದ ಹುಡುಗಿಯು ಅಲ್ಲಿಗೆ ಬಂದು ಕಣ್ಣೀರು ಹಾಕದೆ ಬಳೆ ಒಡೆದುಕೊಂಡು ಹೋಗಿದ್ದಳು. ಮುಂದೆ ಆಕೆ ಮದುವೆಯೇ ಆಗಲಿಲ್ಲ!
8. ಸಿಪಾಯಿ ಯಶವಂತ್ ಸಿಂಘ್ ಹುತಾತ್ಮನಾದಾಗ ಆತನ ವಯಸ್ಸು ಕೇವಲ 20 ವರ್ಷ! ‘ನನ್ನ ಮಗ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾನೆ. ನಾನು ಅಳಬಾರದು. ನನಗೆ ಅವನ ಬಗ್ಗೆ ಹೆಮ್ಮೆ ಇದೆ ‘ ಎನ್ನುತ್ತಿದ್ದರು ಆತನ ಅಪ್ಪ ಮತ್ತು ಅಮ್ಮ. ತಾವು ಸೈನಿಕನ ಹೆತ್ತವರು ಎನ್ನುವ ಹೆಮ್ಮೆ ಅವರ ಕಣ್ಣಲ್ಲಿ ಯಾವಾಗಲೂ ಇಣುಕುತ್ತಿತ್ತು.9
9. ಕಾರ್ಗಿಲ್ ಹೋರಾಟದ ವೇಳೆ ಕಕ್ಸಾರ್ ಪ್ರದೇಶದಲ್ಲಿ ಹೋರಾಡುತ್ತಿದ್ದ ಒಂದೇ ಮನೆಯ ನಾಲ್ಕು ಜನ ಸೈನಿಕರು ಹುತಾತ್ಮ ಆಗಿದ್ದರು. ಅಂತಹ ಸೈನಿಕರ ತಾಯಿಯ ಹೃದಯವನ್ನು ಸಂತೈಸುವವರು ಯಾರು?
ಇದನ್ನೂ ಓದಿ: Raja Marga Column : ಕನ್ನಡ ಶಾಲೆಗಳೆಂಬ ಭೂಲೋಕದ ಸ್ವರ್ಗಗಳು!
ಹಾಳೆಕಟ್ಟೆ( ಕಲ್ಯ) ಶಾಲೆಯಲ್ಲಿ ಪ್ರಾಂಜಲ್ ಸ್ಮಾರಕಕ್ಕೆ ಸಿದ್ಧತೆ
ಯಾವುದೇ ಸೈನಿಕ ಹುತಾತ್ಮ ಆದಾಗ ಆತನ ಕುಟುಂಬ ಮಾತ್ರವಲ್ಲ ಇಡೀ ದೇಶವೇ ಆತನ ಪರವಾಗಿ ನಿಲ್ಲುವುದು ನಮ್ಮ ಭಾರತದ ಸಂಸ್ಕೃತಿ. ಈ ಬಾರಿಯೂ ಹಾಗೇ ಆಗಿದೆ. ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಬಲಿದಾನದ ಬಗ್ಗೆ ಇಡೀ ದೇಶ, ಅದರಲ್ಲಿಯೂ ಕನ್ನಡ ನಾಡು ದುಃಖತಪ್ತ ಆಗಿದೆ. ದೇಶದಾದ್ಯಂತ ಸಂಸ್ಮರಣ ಕಾರ್ಯಕ್ರಮಗಳು ನಡೆಯುತ್ತಿವೆ.
ನನ್ನ ಕಾರ್ಕಳ ತಾಲೂಕಿನ ಹಾಳೆಕಟ್ಟೆಯ ಸರಕಾರಿ ಪ್ರಾಥಮಿಕ ಶಾಲೆಯು ಈ ವರ್ಷ ಶತಮಾನೋತ್ಸವ ಆಚರಣೆ ಮಾಡುತ್ತಿದೆ. ಆ ಶತಮಾನೋತ್ಸವ ಆಚರಣಾ ಸಮಿತಿಯು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಅವರ ಸ್ಮಾರಕವನ್ನು ಶಾಲಾ ಮುಂಭಾಗದಲ್ಲಿ ಸ್ಥಾಪಿಸಲು ನಿರ್ಧರಿಸಿದೆ. ಇಂದು (ನವೆಂಬರ್ 29) ಸಂಜೆ ನಾಲ್ಕು ಗಂಟೆಗೆ ಅದರ ಭೂಮಿ ಪೂಜೆ. ಕಾರ್ಕಳದ ಶಾಸಕ ವಿ ಸುನೀಲ್ ಕುಮಾರ್ ಮತ್ತು ಇಬ್ಬರು ನಿವೃತ್ತ ಸೈನಿಕರು ಈ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದ್ದಾರೆ. ಈ ಭಾಗದ ಶಾಲೆಗಳಲ್ಲಿ ಇದು ಮೊದಲನೆಯ ಪ್ರಯತ್ನ. ಅದಕ್ಕಾಗಿ ಅವರನ್ನು ಅಭಿನಂದಿಸೋಣ. ಏನಂತೀರಿ?