ನನ್ನ ಒಂದು ಅನುಭವದಿಂದ ಆರಂಭ ಮಾಡುತ್ತೇನೆ. ಅಂದಾಜು ಒಂದು ದಶಕದ ಹಿಂದೆ ಒಂದು ಸಂಸ್ಥೆಯವರು ಮಂಗಳೂರಿನಲ್ಲಿ ನನ್ನನ್ನು ಒಂದು ಧಾರ್ಮಿಕ ಭಾಷಣಕ್ಕೆ (Spiritual Speach) ಕರೆದಿದ್ದರು. ನಾನು ನನ್ನ ತಣ್ಣಗಿನ 30 ನಿಮಿಷಗಳ ಭಾಷಣ ಮಾಡಿ ಕುಳಿತುಕೊಂಡೆ. ನಾನು ಹಿಂದೂ ಧರ್ಮದ ನಂಬಿಕೆಗಳು (Hindu religious faiths) ಎಷ್ಟು ವೈಜ್ಞಾನಿಕ? ಭಾರತದ ಋಷಿ ಪರಂಪರೆ ನೀಡಿದ ಕೊಡುಗೆಗಳು ಏನು? ಭಾರತದ ಧರ್ಮ ಸಹಿಷ್ಣುತೆ (Religious Tolerance) ಎಷ್ಟು ಗಟ್ಟಿಯಾಗಿದೆ? ಇಂತಹ ಥೀಮ್ (Raja Marga Column) ಮೇಲೆ ಮಾತಾಡಿದ್ದೆ.
ಆರಂಭ ಆಯಿತು ನೋಡಿ ಉರಿ ಬೆಂಕಿಯ ಭಾಷಣ!
ನನ್ನ ನಂತರ ಕರ್ನಾಟಕದ ಒಬ್ಬ ಪ್ರಖರ ಭಾಷಣಕಾರರು ಮಾತಾಡಲು ಎದ್ದರು. ಅದು ಬೆಂಕಿ ಉಗುಳುವ ಭಾಷಣ (Fire brand Speakers) ಆಗಿತ್ತು. ಅವರು ಆರಂಭ ಮಾಡಿದ್ದೇ ಭಾರತದ ಧರ್ಮ ಸಹಿಷ್ಣುತೆ ತಪ್ಪು (Hate speach) ಎಂದು!
ಅವರು ಹಾಗೆ ಮಾಡಿದ್ದಾರೆ, ಇವರು ಹೀಗೆ ಮಾಡಿದ್ದಾರೆ. ನಾವೀಗ ಸೇಡು ತೀರಿಸಿಕೊಳ್ಳುವ ಕಾಲ ಬಂದಿದೆ. ಅವರ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ, ಇವರನ್ನು ಮತಾಂತರ ಮಾಡಿ, ಇವುಗಳನ್ನು ಒಡೆದು ಹಾಕಿ, ಇವುಗಳನ್ನು ಒಡೆದು ಹಾಕಿ… (ನನಗೆ ಅವುಗಳನ್ನು ಇಲ್ಲಿ ಬರೆಯಲು ನಾಚಿಕೆ ಆಗುತ್ತದೆ) ಹೀಗೆ ಮುಂದುವರಿಯಿತು ಅವರ ಮಹಾ ಉಗ್ರ ಭಾಷಣ! ಭಾಷಣದ ಮಧ್ಯೆ ಕರೆಂಟ್ ಹೋಯಿತು. ಆದರೂ ಅವರ ಪ್ರಹಾರವು ನಿಲ್ಲಲಿಲ್ಲ! ಅವರ ಮಾತು ಮಾತಿಗೂ ಸಭಾಂಗಣದಲ್ಲಿ ‘ಹರ ಹರ ಮಹಾದೇವ’ ಎಂದು ಗಟ್ಟಿಯಾಗಿ ಕಿರುಚುವ ಯುವ ಪಡೆ ಮುಂದಿತ್ತು. ನಾನು ವೇದಿಕೆಯಲ್ಲಿ ಮೈ ಮುದ್ದೆ ಮಾಡಿ ಕುಳಿತಿದ್ದೆ.
ಅದೇ ದಿನ ನಡೆಯಬಾರದ ಕೆಲವು ಘಟನೆಗಳು ನಡೆದುಹೋದವು!
ಕಾರ್ಯಕ್ರಮವು ಮುಗಿದು ಹೊರಬರುವಾಗ ಸಭಾಂಗಣದ ಹೊರಗೆ ಭಾರೀ ಪೊಲೀಸರ ಜಮಾವಣೆ ಆಗಿತ್ತು. ಬಿಸಿ ಬಿಸಿ ವಾತಾವರಣ. ಕಾರಣ ಕೇಳಿದಾಗ ನಾನು ಬೆಚ್ಚಿ ಬಿದ್ದೆ. ಏಕೆಂದರೆ ಸ್ವಲ್ಪ ಹೊತ್ತಿನ ಮೊದಲು ಮಂಗಳೂರಿನ ಕೆಲವು ಚರ್ಚುಗಳಿಗೆ ಕಲ್ಲು ತೂರಾಟ ನಡೆದಿತ್ತು. ಇಡೀ ನಗರದಲ್ಲಿ ಕರ್ಫ್ಯೂ ಜಾರಿ ಆಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರು ಅಂದು ಕೆಟ್ಟ ಕಾರಣಕ್ಕೆ ಸುದ್ದಿ ಆಯಿತು.
ಆ ಚರ್ಚ್ ದಾಳಿ ಘಟನೆ ಮತ್ತು ಆ ಉಗ್ರ ಭಾಷಣಗಳು ಕಾಕತಾಳೀಯ ಆಗಿರಬಹುದು, ಅಥವಾ ಚರ್ಚ್ ದಾಳಿಗೆ ಬೇರೆ ಏನಾದರೂ ಪ್ರಚೋದನೆ ಇರಬಹುದು. ಅದು ನನ್ನ ಯೋಚನೆಗೆ ಮೀರಿದ ಸಂಗತಿ. ಆದರೆ ನಾನಿನ್ನು ಅಂತಹ ಭಾಷಣಕಾರರ ಜೊತೆ ವೇದಿಕೆಯಲ್ಲಿ ಇರಬಾರದು ಎಂದು ಅಂದೇ ನಿರ್ಧಾರ ಮಾಡಿದ್ದೆ.
ಅಂತಹ ಉಗ್ರ ಭಾಷಣಕಾರರು ಇಂದು ಎಲ್ಲ ಧರ್ಮಗಳಲ್ಲಿಯೂ ಇದ್ದಾರೆ
ಅವರ ಉದ್ದೇಶ ಸಮಾಜವನ್ನು ಒಡೆಯುವುದು. ಮುಗ್ಧವಾದ ಯುವಜನತೆಯನ್ನು ದಾರಿ ತಪ್ಪಿಸುವುದು ಮತ್ತು ರಾಜಕೀಯ ಪಕ್ಷಗಳಿಗೆ ಲಾಭವನ್ನು ತಂದು ಕೊಡುವುದು. ಅವುಗಳ ಹಿಂದೆ ಬಹು ದೊಡ್ಡ ಡೀಲ್ ಕೂಡ ಇರುತ್ತದೆ. ಅಂತವರು ಹೇಳುವ ಜಂಬದ ಮಾತು ಎಂದರೆ ನನ್ನ ಮೇಲೆ ಅಷ್ಟು ಕೇಸ್ ಇದೆ, ಇಷ್ಟು ಕೇಸ್ ಇದೆ ಎನ್ನುವುದು! ಅದನ್ನು ಅವರು ತಮಗೆ ದೊರೆತ ಪ್ರಶಸ್ತಿಗಳ ಹಾಗೆ ಬಹಳ ಜಂಬದಲ್ಲಿ ಹೇಳಿಕೊಳ್ಳುತ್ತಾರೆ.
ಬೆಂಕಿಗೆ ಬಿದ್ದು ರೆಕ್ಕೆಗಳನ್ನು ಸುಟ್ಟು ಕೊಳ್ಳುವ ಹಾತೆಗಳು!
ಇತರ ಧರ್ಮಗಳ ಲೋಪ, ದೋಷ ಎತ್ತಿ ಹಿಡಿದು ಅವರು ಪ್ರಚೋದನಾಕಾರಿ ಭಾಷಣಗಳನ್ನು ಮಾಡುತ್ತಿದ್ದರೆ ದಾರಿ ತಪ್ಪುವುದು ಯಾರ್ಯಾರ ಮನೆಯ ದುಡಿಯುವ ಮಕ್ಕಳು. ಬೆಂಕಿಯಲ್ಲಿ ತಮ್ಮ ರೆಕ್ಕೆಗಳನ್ನು ಸುಟ್ಟು ಪ್ರಾಣ ಕಳೆದುಕೊಳ್ಳುವ ಹಾತೆಗಳು ಇಂದು ಎಲ್ಲ ಧರ್ಮಗಳಲ್ಲಿಯೂ ಇದ್ದಾರೆ.
ಯಾವ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ. ಯಾವುದೇ ಧರ್ಮಗ್ರಂಥದಲ್ಲೂ ರಕ್ತದ ಕಲೆಗಳು ಇಲ್ಲ. ಯಾವುದೇ ಧರ್ಮವೂ ಮತಾಂತರ ಅಥವಾ ಭಯೋತ್ಪಾದನೆಯನ್ನು ಖಂಡಿತ ಬೆಂಬಲಿಸುವುದಿಲ್ಲ ಎನ್ನುವುದು ನನ್ನ ಆಳವಾದ ಅಧ್ಯಯನದ ಫಲಿತಾಂಶ.
ಆದರೆ ಎಲ್ಲ ಧರ್ಮಗಳಲ್ಲಿಯೂ ಇರುವ 2% ಇಂತಹ ವಿಷಬೀಜಗಳು ಉಳಿದ 98% ಸಜ್ಜನರನ್ನು ನಿಯಂತ್ರಿಸುತ್ತವೆ ಅನ್ನೋದೇ ದುಃಖದ ಸಂಗತಿ. ಅವರಿಗೆ ತಿಂಗಳಿಗೊಂದು ಪ್ರತಿಭಟನೆ ಮಾಡಲು ಅಜೆಂಡಾ ಬೇಕು. ಸಮಾಜದಲ್ಲಿ ನಡೆಯುತ್ತಿರುವ ಪ್ರತೀ ಒಂದು ಅಪರಾಧದಲ್ಲಿ ದುರ್ಬೀನು ಹಿಡಿದುಕೊಂಡು ಧರ್ಮವನ್ನು ಹುಡುಕುವವರು ಇವರು. ಅತ್ಯಾಚಾರ, ಕೊಲೆ, ದರೋಡೆ ಎಲ್ಲದರಲ್ಲಿಯೂ ಅವರಿಗೆ ಧರ್ಮವೇ ಮೊದಲು ಕಾಣುತ್ತದೆ.
ಅವರ ಭಾಷಣಕ್ಕೆ ಮತ್ತು ಬದುಕಿಗೆ ತಾಳೆಯೇ ಇರುವುದಿಲ್ಲ!
ವೇದಿಕೆಯಲ್ಲಿ ಅವರು ಮಾಡುವ ಭಾಷಣಕ್ಕೂ ಅವರ ಬದುಕಿನ ರೀತಿಗೂ ಒಂದಿಷ್ಟೂ ತಾಳೆ ಆಗುವುದಿಲ್ಲ. ವೇದಿಕೆಯಲ್ಲಿ ಬೆಂಕಿ ಉಗುಳುವ ಭಾಷಣ ಮಾಡಿ ಎದ್ದು ಹೋಗುವ ಮಂದಿ ಅದರ ಪರಿಣಾಮಗಳ ಬಗ್ಗೆ ಎಂದಿಗೂ ಯೋಚನೆ ಮಾಡುವುದಿಲ್ಲ. ನುಡಿದಂತೆ ಅವರು ನಡೆಯುವುದಿಲ್ಲ. ಅನುಷ್ಠಾನ, ಬದ್ಧತೆ ಮೊದಲೇ ಇಲ್ಲ.
ನಾನು ಅತೀ ಹೆಚ್ಚು ಓಡಾಡಿದ್ದು ರಾಜೀವ್ ದೀಕ್ಷಿತ್ ಅವರ ಹಿಂದೆ. ಅವರು ವೇದಿಕೆಯಲ್ಲಿ ಏನು ಹೇಳುತ್ತಿದ್ದರೋ ಅದನ್ನು ತನ್ನ ಬದುಕಿನಲ್ಲಿ ನೂರಕ್ಕೆ ನೂರರಷ್ಟು ಅನುಸರಣೆ ಮಾಡುತ್ತಿದ್ದರು. ಈಗಿನ ಮಹೋಗ್ರ ಭಾಷಣಕಾರರಲ್ಲಿ ಆ ಬದ್ಧತೆ ಹುಡುಕಿ ನೋಡೋಣ.
ಅವರೇ ಬೆಳೆಸಿರುವ ಭಟ್ಟಂಗಿಗಳು ಅವರಿಗೆ ಹಿಂದುತ್ವದ ಬೆಂಕಿ ಚೆಂಡು, ಕಾಳಿಕಾ ಮಾತೆ, ಶಹನಶಾ, ಬಾದಶಾ, ಮಸೀಹಾ……ಹೀಗೆಲ್ಲ ಬಿರುದು ಕೊಡುತ್ತಾರೆ. ಅವರನ್ನು ಬೆಂಬಲಿಸುವ ಭಾರೀ ದೊಡ್ಡ ಫ್ಯಾನ್ ಫಾಲೋ, ಸೋಶಿಯಲ್ ನೆಟ್ ವರ್ಕ್, ಯುಟ್ಯೂಬ್ ಚಾನೆಲ್ಗಳು ಕೂಡ ಇವೆ. ಅಂತಹ ಉಗ್ರ ಭಾಷಣಕಾರರು ಒಬ್ಬ ಭಯೋತ್ಪಾದಕನಿಗಿಂತ ಸಮಾಜಕ್ಕೆ ಹೆಚ್ಚು ಡ್ಯಾಮೇಜ್ ಮಾಡುತ್ತಾರೆ. ಈಗ ಅಂತಹವರ ಒಬ್ಬೊಬ್ಬರ ಮುಖವಾಡಗಳು ಕಳಚಿ ಬೀಳುತ್ತಿವೆ. ರಾಜಕೀಯ ಉದ್ದೇಶಕ್ಕಾಗಿ ಸನಾತನ ಹಿಂದೂ ಧರ್ಮವನ್ನು ಬೈಯುವವರು ಇದೇ ಕೆಟಗರಿಗೆ ಸೇರುತ್ತಾರೆ.
ಅಂತವರನ್ನು ಸಮಾಜವೇ ಒದ್ದು ಬುದ್ದಿ ಕಲಿಸುವ ದಿನಗಳು ದೂರವಿಲ್ಲ ಎಂದು ನನಗೆ ಅನ್ನಿಸುತ್ತದೆ.
ಇದನ್ನೂ ಓದಿ: Raja Marga Column : ಕುರುಡಿ, ಕಿವುಡಿ ಶಿಷ್ಯೆ ಮತ್ತು ಕುರುಡಿ ಟೀಚರ್! ; ಇದು ಜಗತ್ತಿನ ಬೆಸ್ಟ್ ಶಿಕ್ಷಕಿಯ ಕತೆ