1999ರಲ್ಲಿ ಒರಿಸ್ಸಾದಲ್ಲಿ ನಡೆದ ಒಂದು ಘಟನೆಯು ಭಾರಿ ಸುದ್ದಿ ಮಾಡಿತ್ತು. ಅಲ್ಲಿ ದಟ್ಟವಾದ ಕಾಡಿನ ನಡುವೆ ಒಂದು ಸಣ್ಣ ಗುಡಿಸಲು ಕಟ್ಟಿಕೊಂಡು ಒಬ್ಬ ಆಸ್ಟ್ರೇಲಿಯಾದ ಧರ್ಮಗುರು (Australian priest) ವಾಸವಾಗಿದ್ದನು. ಆತನ ಹೆಸರು ಗ್ರಹಾಂ ಸ್ಟೈನ್ಸ್ (Graham Staines). ಆತನ ಹೆಂಡತಿಯ ಹೆಸರು ಗ್ಲಾಡಿಸ್ ಸ್ಟೈನ್ಸ್ (Gladis Staines) . ಅವರಿಗೆ ಮೂರು ಮುದ್ದು ಮುದ್ದಾದ ಮಕ್ಕಳು. ಕಾಡಿನಲ್ಲಿ ವಾಸವಾಗಿದ್ದ ಆದಿವಾಸಿಗಳ ಸೇವೆ ಮಾಡುವುದು ಆ ಕುಟುಂಬಕ್ಕೆ ತುಂಬಾ ಖುಷಿ ಕೊಡುವ ಕಾಯಕ. ಆ ಆದಿವಾಸಿಗಳನ್ನು ಶಿಕ್ಷಿತರಾಗಿ ಮಾಡಲು, ಅವರ ಕುಷ್ಠ ರೋಗಕ್ಕೆ ಶುಶ್ರೂಷೆ ನೀಡಲು ಆ ಕುಟುಂಬವು ಶ್ರಮಿಸುತ್ತಿತ್ತು (Raja Marga Column).
ದಾರಾಸಿಂಗ್ ಎಂಬ ಮತಾಂಧ ಮಾಡಿದ್ದೇನು?
ಆ ಧರ್ಮಗುರು ಮತಾಂತರ (Accusation of Conrversion) ಮಾಡುತ್ತ ಇದ್ದಾರೆ ಎಂಬ ಆರೋಪವು ಕೆಲವು ಮತಾಂಧ ವ್ಯಕ್ತಿಗಳಿಂದ ಮೊದಲ ಬಾರಿ ಕೇಳಿ ಬಂದಿತು. ಧರ್ಮಗುರುವಿನ ಕುಟುಂಬಕ್ಕೆ ರಾತ್ರಿ ಹೊತ್ತು ಬೆದರಿಕೆಯ ಕರೆಗಳು ಬರಲು ಆರಂಭ ಆದವು. ಅದಕ್ಕೆಲ್ಲ ಆ ಕುಟುಂಬವು ಸೊಪ್ಪು ಹಾಕದೆ ತಮ್ಮ ಕಾಯಕವನ್ನು ಮುಂದುವರೆಸಿತು. ಆಗ ದಾರಾ ಸಿಂಗ್ ಎಂಬ ಮತಾಂಧ ಅಲ್ಲಿಗೆ ಬಂದು ಆ ಧರ್ಮಗುರುವಿನ ಕುಟುಂಬದ ಮೇಲೆ ಆಕ್ರಮಣ ಮಾಡುತ್ತಾನೆ. ಧರ್ಮಗುರುವನ್ನು ಕೊಂದು ಹಾಕುತ್ತಾನೆ. ಆತನ ಇಬ್ಬರು ಮಕ್ಕಳನ್ನು ಗುಡಿಸಲ ಒಳಗೆ ಬಂಧಿಸಿ ಆ ಗುಡಿಸಲಿಗೆ ಬೆಂಕಿ ಕೊಡುತ್ತಾನೆ. ಕೆಲವೇ ಕ್ಷಣದಲ್ಲಿ ಆ ಮುಗ್ಧ ಮಕ್ಕಳ ಮಾರಣ ಹೋಮ ನಡೆದು ಹೋಯಿತು. ಇದೆಲ್ಲವೂ ನಡೆದದ್ದು ಪತ್ನಿ ಗ್ಲಾಡಿಸ್ ಕಣ್ಣ ಮುಂದೆ! ಆಕೆಯ ಗಂಡ ಮತ್ತು ಇಬ್ಬರು ಗಂಡು ಮಕ್ಕಳು ಅರ್ಧ ಕ್ಷಣದಲ್ಲಿ ಸಜೀವ ದಹನ ಆಗಿದ್ದರು.
ಆತನನ್ನು ಕ್ಷಮಿಸಿದ್ದೇನೆ ಎಂದರು ಆ ಗ್ಲಾಡಿಸ್!
ಒರಿಸ್ಸಾದ ಪೊಲೀಸರು ಕೂಡಲೇ ಕೇಸ್ ದಾಖಲಿಸಿ ಆ ದಾರಾ ಸಿಂಗ್‌ನನ್ನು ಬಂಧಿಸುತ್ತಾರೆ. ಸಾಕ್ಷಿ ಸಂಗ್ರಹ ಮಾಡಲು ಪೊಲೀಸರು ಗ್ಲಾಡಿಸ್ ಮುಂದೆ ಬಂದು ನಿಲ್ಲುತ್ತಾರೆ. ಆಗ ಆಕೆ ಹೇಳಿದ ಮಾತು – ನಾನು ಆ ಕೊಲೆಗಾರರನ್ನು ಕ್ಷಮಿಸಿದ್ದೇನೆ. ಕ್ಷಮೆಯೆ ನಾನು ಆತನಿಗೆ ಕೊಡುವ ಅತೀ ದೊಡ್ಡ ಶಿಕ್ಷೆ!
ಮುಂದೆ ಐದು ವರ್ಷ ಗ್ಲಾಡಿಸ್ ಭಾರತದಲ್ಲಿಯೇ ಇದ್ದು ತನ್ನ ಗಂಡನ ಕಾಯಕವನ್ನು ಮುಂದುವರೆಸಿದರು. 2004ರಲ್ಲಿ ಗ್ಲಾಡಿಸ್ ತನ್ನ ಮಗಳ ಜೊತೆಗೆ ಭಾರವಾದ ಹೃದಯದಿಂದ ಆಸ್ಟ್ರೇಲಿಯಾಕ್ಕೆ ಹಿಂದಿರುಗಿದರು.
ಮುಂದೆ ಕೋರ್ಟಿನಲ್ಲಿ ದೀರ್ಘ ಕಾಲ ವಿಚಾರಣೆ ನಡೆದು ದಾರಾ ಸಿಂಗ್ ತೀವ್ರ ಶಿಕ್ಷೆಯನ್ನು ಪಡೆದ. ಆದರೆ ಆ ಗ್ಲಾಡಿಸ್ ಹೇಳಿದ ಆ ಮಾತು ಯಾವ ಮಾಧ್ಯಮದಲ್ಲಿ ಕೂಡ ಹೆಚ್ಚು ಪ್ರಚಾರ ಪಡೆಯಲಿಲ್ಲ!
ಹಿಲರಿ ಕ್ಲಿಂಟನ್ ತನ್ನ ಗಂಡನ ಅಪರಾಧವನ್ನು ಕ್ಷಮಿಸಿದ್ದೇಕೆ?
ಅಮೆರಿಕಾದ ಅಧ್ಯಕ್ಷ ಆಗಿದ್ದ ಬಿಲ್ ಕ್ಲಿಂಟನ್ ತನ್ನ ಅಧ್ಯಕ್ಷಾವಧಿಯಲ್ಲಿ ಒಂದು ಲೈಂಗಿಕ ಶೋಷಣೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಮೋನಿಕಾ ಲೆವೆನ್ ಸ್ಕೀ ಎಂಬ ಸುಂದರವಾದ ಯುವತಿ ಅಮೆರಿಕಾದ ಅಧ್ಯಕ್ಷರ ಮೇಲೆ ಅತ್ಯಾಚಾರದ ಕೇಸ್ ಹಾಕಿದ್ದಳು ಮತ್ತು ಅದು ಸಾಬೀತು ಕೂಡ ಆಯಿತು. ಆಗ ಬಿಲ್ ಕ್ಲಿಂಟನ್ ಅಮೆರಿಕನ್ ಟಿವಿಯ ಕ್ಯಾಮೆರಾದ ಮುಂದೆ ಬಂದು ‘ಅಮೆರಿಕಾದ ನಾಗರಿಕರೇ, ನನ್ನನ್ನು ಕ್ಷಮಿಸಿ!’ ಎಂದು ಅಳಲು ಆರಂಭ ಮಾಡುತ್ತಾರೆ. ಆಗ ಒಬ್ಬಳು ಮಹಿಳೆ ಆತನ ಪಕ್ಕ ನಿಂತು ತಲೆ ಸವರುತ್ತಾ ‘ಅಳಬೇಡ ಬಿಲ್ ‘ಎಂದು ಕಣ್ಣೀರು ಒರೆಸುತ್ತಾ ಆತನನ್ನು ಪುಟ್ಟ ಮಗುವಿನಂತೆ ಸಮಾಧಾನ ಮಾಡುತ್ತಿದ್ದಳು. ಆಕೆ ಬೇರೆ ಯಾರೂ ಅಲ್ಲ. ಬಿಲ್ ಕ್ಲಿಂಟನ್ ಹೆಂಡತಿ ಹಿಲರಿ ಕ್ಲಿಂಟನ್! ಗಂಡನ ತಪ್ಪನ್ನು ಕ್ಷಮಿಸಿ ಆತನ ಬಿಕ್ಕಟ್ಟಿನ ಸಂದರ್ಭದಲ್ಲಿ ಆತನ ಜೊತೆಗೆ ನಿಂತ ಹಿಲರಿ ಕ್ಲಿಂಟನ್ ನನಗೆ ಅಂದು ದೇವತೆಯಾಗಿ ಕಂಡು ಬಂದಿದ್ದಳು.
ದ್ವೇಷಕ್ಕೆ ಕೊನೆಯೇ ಇಲ್ಲ!
ರಷ್ಯನ್ ಲೇಖನ ಲಿಯೋ ಟಾಲ್‌ಸ್ಟಾಯ್ ಬರೆದ A Spark niglected burns the house ಎಂಬ ಕತೆಯು ನಮಗೆ ಇಂಗ್ಲಿಷ್ ಪಠ್ಯಪುಸ್ತಕದ ಭಾಗವಾಗಿತ್ತು. ಒಂದು ಸಣ್ಣ ಹಳ್ಳಿಯಲ್ಲಿ ಅನ್ಯೋನ್ಯವಾಗಿದ್ದ ಅಕ್ಕಪಕ್ಕದ ಎರಡು ಮನೆಯವರ ಮಧ್ಯೆ ಉಂಟಾದ ಒಂದು ಸಣ್ಣ ಕೋಳಿ ಮೊಟ್ಟೆಯ ಜಗಳ ಹೇಗೆ ಮುಂದೆ ಬೆಳೆದು ಕಾಡ್ಗಿಚ್ಚಿನ ಹಾಗೆ ಹರಡಿ ಇಡೀ ಗ್ರಾಮವನ್ನು ಸುಟ್ಟಿತ್ತು ಎಂದು ತಿಳಿಸುವ ಕಥೆ ಅದು.
ಒಂದು ತಲೆಮಾರಿಗೆ ಆರಂಭವಾದ ಸಣ್ಣ ಜಗಳ ಮುಂದೆ ದೊಡ್ಡ ದ್ವೇಷವಾಗಿ ಬೆಳೆಯುತ್ತ ಹೋಗಿ ಕೋರ್ಟ್‌ಗಳಲ್ಲಿಯೂ ವರ್ಷಾನುಗಟ್ಟಲೆ ಇತ್ಯರ್ಥ ಆಗದೇ ಹಲವು ತಲೆಮಾರುಗಳ ನೆಮ್ಮದಿಯನ್ನು ಕೆಡಿಸಿದ ಹಲವು ನಿದರ್ಶನಗಳನ್ನು ನಾನು ನೋಡಿದ್ದೇನೆ. ಅದು ಮುಗಿಯುವ ದ್ವೇಷ ಅಲ್ಲವೇ ಅಲ್ಲ. ಹಾಗೆ ದ್ವೇಷ ಸಾಧಿಸಿ ಉಳಿಯುವುದಾದರೂ ಏನು ಎಂಬ ಪ್ರಶ್ನೆಗೆ ಉತ್ತರ ಇಬ್ಬರಲ್ಲಿಯೂ ಇರುವುದಿಲ್ಲ.
ಇದನ್ನೂ ಓದಿ: Raja Marga Column : ಅನ್ನಕ್ಕಾಗಿ ಕಲ್ಲು ಒಡೆಯೋ ಕೆಲಸ ಮಾಡ್ತಿದ್ದ ಆಕೆ ಈಗ ಅಮೆರಿಕನ್ ಕಂಪನಿ ಸಿಇಓ!
ಕ್ಷಮೆ ಒಂದು ಶಕ್ತಿಶಾಲಿ ಆದ ಆಯುಧ
ನಿಮ್ಮ ಜೀವನದಲ್ಲಿ ಕೂಡ ನಿಮಗೆ ಸಾಯುವಷ್ಟು ನೋವುಗಳನ್ನು ಕೊಟ್ಟು ತುಂಬಾ ಜನರು ಬೆನ್ನು ಹಾಕಿ ಹೋಗಿರಬಹುದು. ಬೆನ್ನ ಹಿಂದೆ ಚೂರಿ ಹಾಕಿದ ಮಂದಿ ಕೂಡ ಹಲವರು ಇರಬಹುದು. ನಿಮ್ಮ ಎಲ್ಲಾ ಒಳ್ಳೆತನವನ್ನು ಹೀರಿ ನಿಮ್ಮನ್ನು ಖಾಲಿ ಮಾಡಿದವರೂ ಇರಬಹುದು. ಅವರು ನಿಮ್ಮ ಅತ್ಯುತ್ತಮ ಗೆಳೆಯರೂ, ಹತ್ತಿರದ ಸಂಬಂಧಿಗಳೂ ಆಗಿರಬಹುದು. ಎಲ್ಲರನ್ನೂ ದ್ವೇಷ ಮಾಡುತ್ತ ಮುಂದುವರಿದರೆ ಎಲ್ಲಿಯವರೆಗೆ ಹೋಗುತ್ತೀರಿ?
ಅದಕ್ಕಿಂತ ಅವರನ್ನು ಕ್ಷಮಿಸಿ ನಿಮ್ಮ ಭಾವಲೋಕದಿಂದ ಅವರನ್ನು ಕಿತ್ತುಹಾಕಿ ಮುಂದುವರೆಯುವುದು ಕ್ಷೇಮ. ಅದರಿಂದ ಅವರು ಬದಲಾದರೆ ಸಮಾಜಕ್ಕೆ ಲಾಭ. ಆಗದಿದ್ದರೆ ನಿಮಗಂತೂ ನಷ್ಟ ಇಲ್ಲ.
ಏಸು ಕ್ರಿಸ್ತ ತನ್ನನ್ನು ಶಿಲುಬೆಗೆ ಏರಿಸಿದ ವ್ಯಕ್ತಿಗಳ ಬಗ್ಗೆ ಹೇಳಿದ ಮಾತು – ದೇವರೇ, ಏನು ಮಾಡುತ್ತಿದ್ದಾರೆ ಎಂದವರು ಅರಿಯರು. ಅವರನ್ನು ಕ್ಷಮಿಸಿಬಿಡು! ಏಸು ಕ್ರಿಸ್ತ ದೇವರಾದದ್ದು ಇದೇ ಕಾರಣಕ್ಕೆ!