Site icon Vistara News

Raja Marga Column : ಗೀತೆ ಶಾಂತಿ ಮಂತ್ರವಲ್ಲ, ಕ್ಷಾತ್ರ ಮಂತ್ರ; ಜಗತ್ತಿನ ಬೆಸ್ಟ್‌ ಕೌನ್ಸೆಲಿಂಗ್!

Geethopadesha Raja Marga

ಗೀತಾಚಾರ್ಯನಾದ ಶ್ರೀ ಕೃಷ್ಣನು (Geethacharya Shreekrishna) ಅರ್ಜುನನಿಗೆ ಭಗವದ್ಗೀತೆಯನ್ನು (Bhagavadgeethe) ಉಪದೇಶ ಮಾಡಿ 5160 ವರ್ಷಗಳು ಸಂದು ಹೋದವು. ಇಂದು ಮೋಕ್ಷದಾ ಏಕಾದಶಿ. ಶ್ರೀ ಕೃಷ್ಣ ದೇವರು ನರನಾದ ಅರ್ಜುನನಿಗೆ ಗೀತೋಪದೇಶ (Geethopadesha) ಮಾಡಿದ ಘಟನೆ ನಡೆದ ದಿನ ಇಂದು. (Raja Marga Column) ತನ್ನಿಮಿತ್ತ ಇಂದು ಗೀತಾ ಜಯಂತಿ (Geetha Jayanti).

ಗೀತೆಯ ಹಿನ್ನೆಲೆ ಏನು?

ಕುರುಕ್ಷೇತ್ರ ಯುದ್ಧ ಆರಂಭ ಆಗಲು ಕೆಲವೇ ಕ್ಷಣಗಳು ಬಾಕಿ ಇದ್ದವು. ಒಟ್ಟು 18 ಅಕ್ಷೋಹಿಣಿ ಸೈನ್ಯವು ಸಂಪೂರ್ಣ ಸನ್ನದ್ಧವಾಗಿ ಖಡಾಖಡಿ ಯುದ್ಧಕ್ಕೆ ಸಿದ್ಧವಾಗುತ್ತಿತ್ತು. ಅದೇ ಹೊತ್ತಿಗೆ ಪಾಂಡವರ ಸೇನೆಯಲ್ಲಿ ಒಂದರೆ ಕ್ಷಣ ತಲ್ಲಣ. ಯಾಕೆಂದರೆ ಸೇನಾ ಪ್ರಮುಖನಾದ ಅರ್ಜುನ ಮೋಹಕ್ಕೆ ಒಳಗಾಗಿದ್ದ. ಎದುರಾಳಿ ಸೇನೆಯಲ್ಲಿ ತನ್ನ ಅಜ್ಜ, ತನ್ನ ದಾಯಾದಿಗಳು, ತನ್ನ ಗುರುಗಳು ಇವರನ್ನೆಲ್ಲ ಕಂಡ ಅರ್ಜುನ ಹತಾಶೆಯಿಂದ ಶಸ್ತ್ರ ಸನ್ಯಾಸ ಮಾಡಿ ರಥದಿಂದ ಕೆಳಗೆ ಇಳಿದಿದ್ದ. ಒಂದು ತುಂಡು ಭೂಮಿಗಾಗಿ ಈ ಯುದ್ಧವನ್ನು ಮಾಡಬೇಕಾ? ಎಂಬುದು ಅವನ ಮನದಲ್ಲಿ ಮೂಡಿದ ಜಿಜ್ಞಾಸೆ. ಒಂದು ಯುದ್ಧವು ಸಾವಿರಾರು ಸೈನಿಕರ ರಕ್ತ ಕುಡಿಯಲು ಕಾರಣ ಆಗುತ್ತದೆಯಲ್ಲ ಎಂಬ ನೋವು. ಈ ಮನಸ್ಥಿತಿಯಿಂದ ಅವನನ್ನು ಯುದ್ಧಕ್ಕೆ ಉನ್ಮುಕ್ತ ಮಾಡಲು ಶ್ರೀ ಕೃಷ್ಣ ದೇವರು ಮಾಡಿದ ಪ್ರಯತ್ನವೇ ಗೀತೋಪದೇಶ. ದೇವ ವಾಣಿಯಾದ ಭಗವದ್ಗೀತೆ ಹುಟ್ಟಿದ್ದು ಯುದ್ಧಭೂಮಿಯಾದ ಕುರುಕ್ಷೇತ್ರದಲ್ಲಿ. ಯುದ್ಧ ಆರಂಭ ಆಗುವ ಸ್ವಲ್ಪ ಮೊದಲು.

Bhagavadgeetha books

ಭಗವದ್ಗೀತೆಯ ವಿಸ್ತಾರ ಮತ್ತು ಆಳ

ಭಗವದ್ಗೀತೆಯ ಒಟ್ಟು ಶ್ಲೋಕಗಳ ಸಂಖ್ಯೆ 700. ಒಟ್ಟು 18 ಅಧ್ಯಾಯಗಳ ಗ್ರಂಥ ಅದು. ಮಹಾಭಾರತದ ಭೀಷ್ಮ ಪರ್ವದ 23ನೇ ಅಧ್ಯಾಯದಿಂದ ಆರಂಭ ಮಾಡಿ 40ನೆ ಅಧ್ಯಾಯದವರೆಗೆ ವಿಸ್ತಾರ ಆದದ್ದು ಭಗವದ್ಗೀತೆ. ಅದು ಆರಂಭ ಆಗುವುದು ಅರ್ಜುನನ ತುಮುಲದಿಂದ. ಅದಕ್ಕೂ ಮೊದಲು ಧೃತರಾಷ್ಟ್ರ ಮತ್ತು ಸಂಜಯರ ಸಂಭಾಷಣೆ ಬರುತ್ತದೆ. ದಿವ್ಯ ದೃಷ್ಟಿಯಿಂದ ಅರಸನಿಗೆ ಯುದ್ಧದ ಸನ್ನಿವೇಶಗಳ ವೀಕ್ಷಕ ವಿವರಣೆ ಕೊಡಲು ಅರಮನೆಯಲ್ಲಿ ಕುಳಿತಿದ್ದ ಸಂಜಯ ಎರಡು ಸೇನೆಗಳ ನಡುವೆ ಏನೆಲ್ಲ ನಡೆಯುತ್ತಿದೆ ಎಂದು ಹೇಳುವ ಸಂದರ್ಭ ಗೀತೋಪದೇಶದ ವಿವರಣೆ ಕೂಡ ಬರುತ್ತದೆ.

ಅರ್ಜುನನ ನಿರಾಶೆಯನ್ನು ತೆಗೆದು ಭರವಸೆಯನ್ನು ತುಂಬಲು ಶ್ರೀಕೃಷ್ಣ ದೇವರು ಅಳವಡಿಸಿಕೊಂಡ ತಂತ್ರ ಎಂದರೆ ಅದೊಂದು ಅದ್ಭುತವಾದ ಕೌನ್ಸೆಲಿಂಗ್! ಅದೊಂದು ಅದ್ಭುತವಾದ ವಿಕಸನದ ಕಾರ್ಯಾಗಾರ! ಅದೊಂದು
ಪ್ರೇರಣಾದಾಯಕ ಮಾತುಗಳ ಅಮೋಘ ವೃಷ್ಟಿ! ನೀನು ನಿನ್ನ ಕರ್ತವ್ಯವನ್ನು ಮಾತ್ರ ಮಾಡು, ಬೇರೆಲ್ಲ ನಾನು ನೋಡಿಕೊಳ್ಳುವೆ ಎಂದು ಹೇಳುವ ಭರವಸೆಯ ಮಾತು! ಅರ್ಜುನನಿಗೆ ನಾನು ನಿನ್ನ ಬಾವ ಮಾತ್ರ ಅಲ್ಲ, ಸಾರಥಿ ಮಾತ್ರ ಅಲ್ಲ, ನಾನು ದೇವರು ಎಂದು ತೆರೆದು ತೋರಿಸುವ ವಿಶ್ವರೂಪ!

ಅದರಿಂದಾಗಿ ಭಗವದ್ಗೀತೆ ಕೇವಲ ಅರ್ಜುನನಿಗೆ ಮಾತ್ರ ಉಪದೇಶ ಆದುದಲ್ಲ, ಅದು ಸಮಸ್ತ ಮಾನವ ಕುಲಕ್ಕೆ ಭಗವಂತ ನೀಡಿದ ಧರ್ಮೋಪದೇಶ ಎಂದು ನಾವು ಅರ್ಥ ಮಾಡಿಕೊಂಡರೆ ಅದು ಭಗವಂತನ ವಾಣಿ. ಅದರಿಂದಾಗಿ ಭಗವದ್ಗೀತೆಯು ಹಿಂದೂಗಳ ಪವಿತ್ರ ಗ್ರಂಥ.

ನ ಹೀ ಜ್ಞಾನೇನ ಸದೃಶಂ

ಭಗವಂತನ ಮಾತುಗಳು ಆರಂಭ ಆಗುವುದೇ ಒಂದು ಜ್ಞಾನ ಸತ್ರದಿಂದ. ಅರ್ಜುನನ ಮನಸ್ಸಿನ ಅಂಧಕಾರವನ್ನು ಹೋಗಲಾಡಿಸಲು ಜ್ಞಾನದ ಬೆಳಕು ಬೇಕಾಗಿತ್ತು. ಅದಕ್ಕಾಗಿ ದೇವರು ಆತ್ಮ ಮತ್ತು ಪರಮಾತ್ಮರ ಅನುಸಂಧಾನದ ಜ್ಞಾನವನ್ನು ಅರ್ಜುನನಿಗೆ ಮಾಡಿಸುತ್ತಾನೆ. ಆತ್ಮವು ಅವಿನಾಶಿ. ಅದಕ್ಕೆ ಹುಟ್ಟು, ಸಾವುಗಳಿಲ್ಲ. ದೇಹ ನಶ್ವರ. ಆತ್ಮವು ಒಂದು ಜೀವದಿಂದ ಇನ್ನೊಂದು ಜೀವದ ಕಡೆಗೆ ಹರಿದುಹೋಗುತ್ತದೆ. ಆತ್ಮವು ಜನನ ಮರಣಗಳ ವ್ಯಾಪ್ತಿಯನ್ನು ಮೀರಿದ್ದು ಎಂದು ಹೇಳುತ್ತ ಭಗವಂತನು ಪರೋಕ್ಷವಾಗಿ ಅರ್ಜುನನಿಗೆ ನಿನ್ನ ದಾಯಾದಿ, ಗುರು ಮತ್ತು ಅಜ್ಜ ಮೊದಲಾದವರ ಸಾವಿಗೆ ನೀನು ಕಾರಣ ಆಗೋದಿಲ್ಲ ಎಂಬ ಜ್ಞಾನವನ್ನು ಮೂಡಿಸುತ್ತಾನೆ.

Bhagavadgeetha books

ಯೋಗಃ ಕರ್ಮಸ್ಯು ಕೌಶಲಮ್

ಭಗವದ್ಗೀತೆಯ ಆತ್ಮ ಎಂದರೆ ಕರ್ಮ ಯೋಗವೇ ಆಗಿದೆ. ನೀನು ನಿನ್ನ ಕರ್ಮವನ್ನು ಮಾತ್ರ ಮಾಡು, ಫಲಿತಾಂಶವನ್ನು ದೇವರಿಗೆ ಬಿಟ್ಟು ಬಿಡು ಎಂದದ್ದು ಕರ್ಮ ಯೋಗದ ಸಾರ. ನಿನಗೆ ಕರ್ಮದಲ್ಲಿ ಮಾತ್ರ ಹಕ್ಕು ಇದೆ. ಫಲಿತಾಂಶವು ನಿನ್ನ ಕೈಯಲ್ಲಿಲ್ಲ ಅನ್ನುವುದು ಸಾರಾಂಶ. ಆ ಕರ್ಮ ಮತ್ತು ಕೌಶಲಗಳ ಸಂಯೋಜನೆಯೇ ಯೋಗ. ಯುದ್ಧ ಮಾಡುವುದು ಕ್ಷತ್ರಿಯನಾದ ನಿನ್ನ ಕರ್ತವ್ಯ. ಯುದ್ಧದಿಂದ ನಿರಸನ ಹೊಂದುವುದು ಹೇಡಿತನ. ನಾನು ಯುದ್ಧವನ್ನು ಗೆದ್ದಾಗಿದೆ. ನೀನು ನಿಮಿತ್ತ ಮಾತ್ರ. (ನೀನಲ್ಲವಾದರೆ ಬೇರೆ ಯಾರಿಂದಲಾದರೂ ನಾನು ಯುದ್ಧ ಮಾಡಿಸಿ ಗೆಲುವನ್ನು ಪಡೆಯುತ್ತೇನೆ ಎನ್ನುವ ಭಾವ).

ಈ ಕರ್ಮ ಯೋಗ ಮುಂದೆ ಜಗತ್ತಿನಾದ್ಯಂತ ಭಗವದ್ಗೀತೆಯ ಮೂಲಕ ತಲುಪಿತು. ಅದೇ ರೀತಿ ಭಕ್ತಿ ಯೋಗ, ಧ್ಯಾನ ಯೋಗ ಮತ್ತು ಜ್ಞಾನ ಯೋಗಗಳು ಭಗವಂತನ ವಾಣಿಯ ಇತರ ಆಯಾಮಗಳು.

ಇದನ್ನೂ ಓದಿ : Raja Marga Column : ನಿಜಕ್ಕೂ ದೇವರಿದ್ದಾನಾ? ಇಲ್ಲದೆ ಇದ್ದರೆ ಈ ಜಗತ್ತು ಉಳಿತಿತ್ತಾ?

ಗೀತೆಯು ಇಂದು ವಿಶ್ವವಾಣಿ

ಒಂದು ಹಂತದಲ್ಲಿ ಅರ್ಜುನನು ಯಾವ ಉಪದೇಶಕ್ಕೂ ಬಗ್ಗದೇ ಹೋದಾಗ ದೇವರು ಆತನಿಗೆ ಮಾತ್ರ ದಿವ್ಯ ದೃಷ್ಟಿಯನ್ನು ಕರುಣಿಸಿ ತನ್ನ ವಿಶ್ವರೂಪವನ್ನು ತೋರಿಸುತ್ತಾರೆ. ಭಗವಂತನ ವಿರಾಟ್ ರೂಪ ಅದು. ವಿಶ್ವರೂಪವನ್ನು ನೋಡಿದ ಅರ್ಜುನ ಸ್ಥಂಭೀಭೂತ ಆಗುತ್ತಾನೆ. ಅದೊಂದು ರೋಮಾಂಚಕ ಅನುಭೂತಿ. ಆತ ಕೊನೆಗೆ ಹೇಳಿದ್ದು – ಶ್ರೀ ಕೃಷ್ಣಾ, ಇನ್ನು ಮುಂದೆ ನನ್ನನ್ನು ಕುರುಡನಾಗಿ ಮಾಡಿಬಿಡು. ನಿನ್ನ ದಿವ್ಯ ರೂಪವನ್ನು ನೋಡಿದ ಕಣ್ಣುಗಳಿಂದ ನಾನು ಬೇರೇನೂ ನೋಡಲು ಆಸೆ ಪಡುವುದಿಲ್ಲ!

ಅಲ್ಲಿಂದ ನಂತರ ಅವನು ಯುದ್ಧಕ್ಕೆ ಮಾನಸಿಕವಾಗಿ ಸಿದ್ಧನಾಗುತ್ತಾನೆ. ‘ಗೀತೆಯು ಶಾಂತಿ ಮಂತ್ರವಲ್ಲ, ಅದು ಕ್ಷಾತ್ರ ಮಂತ್ರ’ ಎನ್ನುವುದು ಅದರ ಬಾಟಮ್ ಲೈನ್. ಆ ಕಾರಣಕ್ಕೆ ಅದು ವಿಶ್ವಮಾನ್ಯತೆ ಪಡೆಯಿತು.

Bhagavadgeetha books

ಇಂದು ಜಗತ್ತಿನ ಎಲ್ಲ ಭಾಷೆಗೂ ಭಗವದ್ಗೀತೆ ಅನುವಾದ ಆಗಿದೆ. ಜಗತ್ತಿನ ಎಲ್ಲ ಧರ್ಮ ವಿದ್ವಾಂಸರು ಗೀತೆಯನ್ನು ಅದ್ಭುತಾದ್ಭುತ ಎಂದು ಮೆಚ್ಚಿಕೊಂಡಿದ್ದಾರೆ. ಭಗವದ್ಗೀತೆಯ ತತ್ವಗಳ ಕುರಿತು ಸಾವಿರಾರು ಪುಸ್ತಕಗಳು ಜಗತ್ತಿನ ಎಲ್ಲ ಭಾಷೆಯಲ್ಲಿಯೂ ಬಂದಿವೆ. ಘೋರಕಪುರ ಗೀತಾ ಪ್ರೆಸ್ ಅಂತೂ ಗೀತೆಯ ಹೊಳಹುಗಳ ಬಗ್ಗೆ ನೂರಾರು ಗ್ರಂಥಗಳನ್ನೇ ಹೊರತಂದಿದೆ. ಈ ಕಾರಣಗಳಿಂದ ಭಗವದ್ಗೀತೆಯು ಜಾಗತಿಕ ಮಟ್ಟದ ಕೀರ್ತಿ ಪಡೆಯಿತು. ಸಾವಿರಾರು ವಿದೇಶಿ ವಿದ್ವಾಂಸರು ಭಾರತಕ್ಕೆ ಬಂದು ಗೀತೆಯನ್ನು ಅಧ್ಯಯನ ಮಾಡಿದರು. ಅದರಿಂದಾಗಿ ಭಗವಂತನ ವಾಣಿ ವಿಶ್ವವಾಣಿ ಆಯಿತು.

ಯೋಗಾಚಾರ್ಯ ಹಾಗೂ ಗೀತಾಚಾರ್ಯನಾದ ಶ್ರೀ ಕೃಷ್ಣ ದೇವರ ಕೃಪೆ ಮತ್ತು ಆಶೀರ್ವಾದಗಳು ನಮಗೆಲ್ಲರಿಗೂ ದೊರೆಯಲಿ.

Exit mobile version