Site icon Vistara News

Raja Marga Column : ಗೋ ಗೋ ಗೋವಾ!; ಒಂದು ಕಾಲದ ಕುಡುಕರ ರಾಜ್ಯ ಈಗ ಸಾಂಸ್ಕೃತಿಕ ರಾಜಧಾನಿ ಆಗಿದ್ದು ಹೇಗೆ?

Goa Beach

ಸ್ವತಂತ್ರ ಭಾರತದ 25ನೇ ರಾಜ್ಯ ಗೋವಾ (Goa State) ಒಂದು ಕಾಲದಲ್ಲಿ ಕುಡುಕರ ರಾಜ್ಯ (Drunkards state) ಎಂದೇ ಅಪಕೀರ್ತಿ ಪಡೆದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆ ರಾಜ್ಯವು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಬೆಳೆದಿರುವ ರೀತಿ ನೋಡಿದಾಗ ನನಗೆ ಖಂಡಿತ ವಿಸ್ಮಯ (Goa Now a Cultural Capital) ಮೂಡುತ್ತದೆ. ಗೋವಾ ರಾಜ್ಯದಿಂದ ನಾವು ಕಲಿಯುವುದು ತುಂಬಾ ಇದೆ (Raja Marga Column).

ಪೋರ್ಚುಗೀಸರ ಕೈಲಿ ನಲುಗಿದ ಗೋವಾ

ಒಂದು ಕಾಲದಲ್ಲಿ ಗೋಮಾಂತಕ ಎಂದು ಕರೆಸಿಕೊಂಡ ಈ ರಾಜ್ಯವು ನೂರಕ್ಕೆ ನೂರರಷ್ಟು ಹಿಂದೂ ರಾಜ್ಯವೇ ಆಗಿತ್ತು. ಕದಂಬ ಅರಸರ ಆಳ್ವಿಕೆಗೆ ಒಳಪಟ್ಟಿತ್ತು. ಆದರೆ ಯಾವಾಗ ಭಾರತಕ್ಕೆ ವಾಸ್ಕೋ ಡ ಗಾಮಾನ ಆಗಮನ ಆಯಿತೋ ಗೋವಾದ ಚಿತ್ರಣವೇ ಬದಲಾಗಿ ಹೋಯ್ತು. ಗೋವಾ ಪೋರ್ಚುಗೀಸರ ಅತೀ ದೊಡ್ಡ ವಸಾಹತು ಆಯಿತು. ಬಲವಂತದ ಮತಾಂತರಗಳು ನಡೆದವು. ಹಿಂದೂ ದೇವಾಲಯಗಳ ಮೇಲೆ ದಾಳಿಗಳು ನಡೆದವು. ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆದವು. ಈ ಶ್ರೀಮಂತ ರಾಜ್ಯವನ್ನು ಬರೋಬ್ಬರಿ 456 ವರ್ಷಗಳ ಕಾಲ ಪೋರ್ಚುಗೀಸರು ಆಳಿದರು. ಆ ವಿದೇಶಿ ಸಂಸ್ಕೃತಿಯು ಗೋವಾದ ಶ್ರೀಮಂತ ಸಂಸ್ಕೃತಿಯನ್ನು ಹೊಸಕಿ ಹಾಕಿತು. ಗೋವಾದ ಜನರು ಪೋರ್ಚುಗೀಸರ ವಿಲಾಸಿ ಜೀವನಕ್ಕೆ ಶರಣಾದರು. ಕುಡಿತ, ಜೂಜು, ವ್ಯಭಿಚಾರ ಎಲ್ಲವೂ ತಾಂಡವ ಆಡಿದವು.

Manohar Parikkar

1962ರಲ್ಲಿ ಗೋವಾ ಸ್ವತಂತ್ರ ಆಯಿತು

ಸ್ವಾತಂತ್ರ್ಯ ದೊರೆತು ಬ್ರಿಟಿಷರು ಭಾರತವನ್ನು ಬಿಟ್ಟು ಹೋದರೂ ಪೋರ್ಚುಗೀಸರು ಗೋವಾ ಬಿಟ್ಟು ಕದಲಲಿಲ್ಲ. ಆಗ ಸರ್ದಾರ್ ಪಟೇಲರ ತೀವ್ರ ಪ್ರಯತ್ನದಿಂದ ಗೋವಾ 1962ರಲ್ಲಿ ಸ್ವತಂತ್ರವಾಯಿತು. 1987ರಲ್ಲಿ ಭಾರತದ 25ನೇ ರಾಜ್ಯವಾಗಿ ಹೊರಹೊಮ್ಮಿತು. ಕೇವಲ ಎರಡು ಜಿಲ್ಲೆಗಳನ್ನು ಹೊಂದಿರುವ, ಎರಡು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಮತ್ತು 40 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪುಟ್ಟ ರಾಜ್ಯದ ವಿಸ್ತೀರ್ಣವು ಕೇವಲ 3702 ಚದರ ಕಿಲೋಮೀಟರ್. ಜನಸಂಖ್ಯೆ ಅಂದಾಜು 14,50,000 ಮಾತ್ರ. ಇಂದು ಗೋವಾ ಭಾರತದಲ್ಲಿಯೇ ಅತ್ಯಂತ ಸಣ್ಣ ರಾಜ್ಯ ಆಗಿದೆ.

1983ರಿಂದ ನಿರಂತರವಾಗಿ ಗೋವಾ ರಾಜ್ಯಕ್ಕೆ ವಿವಿಧ ಕಾರಣಗಳಿಗೆ ಭೇಟಿ ನೀಡುತ್ತಾ ಬಂದಿರುವ ನನಗೆ ಆ ಗುಬ್ಬಚ್ಚಿ ರಾಜ್ಯದಲ್ಲಿ ಆಗುತ್ತ ಇರುವ ಕ್ರಾಂತಿಕಾರಕ ಬದಲಾವಣೆಗಳು ನಿಜಕ್ಕೂ ವಿಸ್ಮಯ ಮೂಡಿಸುತ್ತವೆ.

Manohar Parikkar

ಕೊಂಕಣಿ ಭಾಷೆಯು ಅವರನ್ನು ಬೆಸೆದಿದೆ

ಗೋವಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ಮತ್ತು ಕ್ರಿಶ್ಚಿಯನ್ನರೂ ಇದ್ದಾರೆ. ಮುಸಲ್ಮಾನರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಅವರೆಲ್ಲರೂ ಕೊಂಕಣಿ ಭಾಷೆ ಮಾತಾಡುತ್ತಾರೆ. ಕೊಂಕಣಿ ಭಾಷೆಯನ್ನು ಪ್ರೀತಿ ಮಾಡುತ್ತಾರೆ. ಆ ಭಾಷೆಯನ್ನು ಅವರು ದೇವನಾಗರಿ ಲಿಪಿಯಲ್ಲಿ ಬರೆಯುತ್ತಾರೆ. ಕೊಂಕಣಿ ಸಾಹಿತ್ಯ, ಜಾನಪದ, ಸಂಸ್ಕೃತಿ ಎಲ್ಲವನ್ನೂ ಬೆಳೆಸಿದ್ದಾರೆ. ಗೋವಾ ಅಂದರೆ ಕೊಂಕಣಿ ಸಂಸ್ಕೃತಿ ಎನ್ನುವಷ್ಟರ ಮಟ್ಟಿಗೆ ಆ ರಾಜ್ಯವನ್ನು ಕೊಂಕಣಿ ಭಾಷೆ ಆವರಿಸಿಕೊಂಡು ಬಿಟ್ಟಿದೆ.

ಕೊಂಕಣಿ ನಾಟಕಗಳು ತುಂಬಿದ ಗೃಹದಲ್ಲಿ ಪ್ರದರ್ಶನಗೊಳ್ಳುತ್ತವೆ. ಅಲ್ಲಿ ತಯಾರಾದ ಕೊಂಕಣಿ ಸಿನಿಮಾಗಳು ವಿಶ್ವಮಾನ್ಯತೆ ಪಡೆದಿವೆ. ಅಲ್ಲಿನ ಹೆಚ್ಚಿನ ಶಾಲೆಗಳಲ್ಲಿ ಕೊಂಕಣಿ ಭಾಷೆಯೇ ಪ್ರಥಮ ಭಾಷೆ. ಕಿಶೋರಿ ಅಮೋನ್‌ಕರ್‌, ಪ್ರಭಾಕರ್ ಕಾರೇಕರ್, ಜಿತೇಂದ್ರ ಅಭಿಷೇಕಿ ಮೊದಲಾದ ಶ್ರೇಷ್ಟ ಸಂಗೀತ ಕಲಾವಿದರು ಆ ರಾಜ್ಯದ ಶ್ರೇಷ್ಠ ಸಾಂಸ್ಕೃತಿಕ ರಾಯಭಾರಿಗಳು ಆಗಿದ್ದಾರೆ. ಸಂಗೀತ, ಕೀರ್ತನ, ಅಭಂಗ ಕಾರ್ಯಕ್ರಮಗಳಿಗೆ ಜನರು ಕಿಕ್ಕಿರಿದು ಸೇರುತ್ತಾರೆ. ಕ್ರಿಸ್ಮಸ್ ಹಬ್ಬಕ್ಕೆ ಸೇರುವಷ್ಟೇ ಜನರು ಅಲ್ಲಿ ದಿಂಡಿ ಎಂಬ ನಗರ ಸಂಕೀರ್ತನ ಕಾರ್ಯಕ್ರಮಕ್ಕೆ ಸೇರುತ್ತಾರೆ!

Manohar Parikkar

ಗೋವಾ ಅಂದರೆ ಬೀಚ್ ಟೂರಿಸಂ

ಒಂದು ಕಾಲದಲ್ಲಿ ಗೋವಾದ ಬೀಚುಗಳು ಅಂದರೆ ಕುಡುಕರ, ವೇಶ್ಯೆಯರ, ಪಿಂಪ್‌ಗಳ ಜೂಜುಕೋರರ ತಾಣಗಳು ಆಗಿದ್ದವು. ಆದರೆ ಅಲ್ಲಿನ ಸರಕಾರಗಳ ಬಿಗಿ ನೀತಿಯಿಂದಾಗಿ ಪರಿಸ್ಥಿತಿ ತುಂಬಾ ಸುಧಾರಣೆ ಆಗಿದೆ. ವಾಟರ್ ಸ್ಪೋರ್ಟ್ಸ್, ವೈಭವದ ರೆಸ್ತುರಾಗಳು ತಲೆ ಎತ್ತಿವೆ. ಗೋವಾದ ಮಾಂಸಾಹಾರಿ ಖಾದ್ಯಗಳು ಭಾರೀ ಜನಪ್ರಿಯತೆ ಪಡೆದಿವೆ. ವಿದೇಶದ ಯಾತ್ರಿಕರು ಇಡೀ ವರ್ಷ ಗೋವಾ ಹುಡುಕಿಕೊಂಡು ಬರುತ್ತಿದ್ದಾರೆ.

ಅದೇ ರೀತಿ ಭಾರೀ ಶ್ರೀಮಂತವಾದ ಸಾರಸ್ವತ ದೇವಸ್ಥಾನಗಳು, ಪೋರ್ಚುಗೀಸರ ಅವಶೇಷಗಳಾದ ಅತೀ ವೈಭವದ ಚರ್ಚುಗಳು ಕೂಡ ಆಕರ್ಷಣೆಯ ತಾಣಗಳು ಆಗಿವೆ. ಟೆಂಪಲ್ ಟೂರಿಸಂ ತಂತ್ರಗಳನ್ನು ಯಾರಾದರೂ ಅವರಿಂದ ಕಲಿಯಬೇಕು. ಇದರಿಂದ ಗೋವಾ ಇಂದು ಭಾರತದಲ್ಲಿಯೇ ಅತೀ ಹೆಚ್ಚು ಜಿಡಿಪಿ ಹೊಂದಿರುವ ರಾಜ್ಯ ಆಗಿದೆ. ಅಲ್ಲಿನ ಜಿಡಿಪಿ ಭಾರತದ ಜಿಡಿಪಿಯ ಎರಡೂವರೆ ಪಟ್ಟು ಇದೆ!

Manohar Parikkar

ಅದರ ಜೊತೆಗೆ ಹನ್ನೊಂದನೇ ಪ್ಲಾನಿಂಗ್ ಕಮೀಶನ್ ಸರ್ವೇ ಪ್ರಕಾರ ಗೋವಾ ಭಾರತದಲ್ಲಿಯೇ ಅತ್ಯಂತ ಸುರಕ್ಷಿತ ಮತ್ತು ವಾಸಿಸಲು ಯೋಗ್ಯವಾದ ರಾಜ್ಯ ಎಂಬ ಕೀರ್ತಿಗೆ ಪಾತ್ರವಾಗಿದೆ!

ಈ ಬದಲಾವಣೆ ರಾತ್ರಿ ಹಗಲಾಗುವ ಅವಧಿಯಲ್ಲಿ ಆಗಿರುವುದು ಅಲ್ಲ. ಇದರ ಹಿಂದೆ ಸರಕಾರಗಳ ಇಚ್ಛಾಶಕ್ತಿ ಮತ್ತು ಗೋವಾ ಜನರ ಸ್ವಾಭಿಮಾನದ ಹೋರಾಟಗಳು ಅಡಕವಾಗಿವೆ. ಮನೋಹರ್ ಪರಿಕ್ಕರ್, ದಿಗಂಬರ ಕಾಮತ್ ಮೊದಲಾದ ಮುಖ್ಯಮಂತ್ರಿಗಳು ಈ ರಾಜ್ಯದ ಚಿತ್ರಣವನ್ನು ಬದಲಾಯಿಸಿರುವ ಪ್ರಮುಖರು. ಅಲ್ಲಿ ಎಲ್ಲರ ಮನೆ ಮನಗಳಲ್ಲಿ ಪಾರಿಕ್ಕರ್ ಅವರ ನೆನಪು ಇದೆ.

ಗೋವಾದ ಜನರ ಕೋಮು ಸಾಮರಸ್ಯ

ಇವತ್ತು ಭಾರತದ ಯಾವುದೇ ರಾಜ್ಯವು ಗೋವಾದಿಂದ ಕಾಪಿ ಮಾಡಲು ಇರುವ ಅಂಶ ಅಂದರೆ ಅಲ್ಲಿನ ಕೋಮು ಸಾಮರಸ್ಯ. ಅಲ್ಲಿರುವ ಕ್ರಿಶ್ಚಿಯನ್ ಬಂಧುಗಳು ತಾವು ಮೂಲದಲ್ಲಿ ಹಿಂದೂಗಳೇ ಆಗಿದ್ದು ಪೋರ್ಚುಗೀಸರ ಬಲವಂತದ ಅಥವಾ ಆಮಿಷದ ಮತಾಂತರಕ್ಕೆ ಒಳಗಾದವರು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಹಿಂದೂಗಳೂ ಸೌಹಾರ್ದ ಬೇಕು ಅನ್ನುತ್ತಾರೆ. ಹಿಂದೂ ದೇವಾಲಯದ ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ಕ್ರಿಶ್ಚಿಯನ್ ಬಂಧುಗಳು ಬಂದು ದೇವಾಲಯಗಳಲ್ಲಿ ಹಣತೆ ಹಚ್ಚುತ್ತಾರೆ. ಸಮಾರಾಧನೆಯಲ್ಲಿ ಸಂಕೋಚ ಇಲ್ಲದೆ ಭಾಗವಹಿಸುತ್ತಾರೆ.

Manohar Parikkar

ಹಿಂದೂಗಳೂ ಹಾಗೆ. ಕ್ರಿಸ್ಮಸ್ ಹಾಗೂ ಇತರ ಕ್ಯಾಥೋಲಿಕ್ ಹಬ್ಬಗಳ ಸಂದರ್ಭ ಚರ್ಚುಗಳಿಗೆ ಬಂದು ಕ್ಯಾಂಡಲ್ ಹಚ್ಚುತ್ತಾರೆ. ದೊಡ್ಡ ದೊಡ್ಡ ಚರ್ಚುಗಳಲ್ಲಿ ಪ್ರಾರ್ಥನೆ ಮಾಡುತ್ತಾರೆ. ಗೋವಾ ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಒಂದೇ ಒಂದು ಕೋಮು ಗಲಭೆ ಸಂಭವಿಸಿಲ್ಲ!

ಇದನ್ನೂ ಓದಿ : Raja Marga Column : ಸೋತೋರೆಲ್ಲ ಸಾಯೋ ಹಾಗಿದ್ದರೆ 13 ಚುನಾವಣೆ ಸೋತ ಅಬ್ರಹಾಂ ಲಿಂಕನ್‌ ಎಷ್ಟು ಬಾರಿ ಸಾಯ್ಬೇಕಿತ್ತು!

ಹೌದು, ಗೋವಾದವರು ಈಗಲೂ ಕುಡಿಯುತ್ತಾರೆ

ಗೋವಾದಲ್ಲಿ ಅತೀ ಹೆಚ್ಚು ಮದ್ಯದ ಉದ್ದಿಮೆಗಳು ಇವೆ. ಆದ್ದರಿಂದ ಮದ್ಯ ಅಲ್ಲಿ ತುಂಬಾ ಅಗ್ಗ. ಸ್ವಾಭಾವಿಕವಾಗಿ ಅಲ್ಲಿನ ಜನರು ಕುಡಿಯುತ್ತಾರೆ. ಆದರೆ ಕುಡಿದು ರಸ್ತೆಯಲ್ಲಿ ಬೀಳುವುದಿಲ್ಲ. ಸಂಜೆ ಕತ್ತಲು ತುಂಬಿದ ಕೂಡಲೇ ಅವರು ಮನೆಗೆ ಬಂದು ಕುಡಿದು ತಣ್ಣಗೆ ಮಲಗುತ್ತಾರೆ. ಗಲಭೆ, ಗಲಾಟೆ ಇಲ್ಲವೇ ಇಲ್ಲ.

ಮನೋಹರ್‌ ಪರಿಕ್ಕರ್‌

ಇನ್ನೊಂದು ವಿಶೇಷ ನಾನು ಗಮನಿಸಿದ್ದು. ಅಲ್ಲಿ 24 ಘಂಟೆ ಬೈಕ್ ಸರ್ವಿಸ್ ಇದೆ (Bike Taxi). ತಡರಾತ್ರಿ ಬಾರುಗಳಲ್ಲಿ ಕುಡಿದು ಕೆಂಪು ಕೆಂಪಾದ ಚಂದದ ಹುಡುಗಿಯರು ಆ ಬೈಕ್ ಟ್ಯಾಕ್ಸಿ ಇರುತ್ತಾರೆ. ಅವರು ಅತ್ಯಂತ ಸುರಕ್ಷಿತವಾಗಿ ಅವರ ಮನೆಗಳಿಗೆ ತಲುಪುತ್ತಾರೆ! ಹೌದು. ಗೋವಾ ರಾಜ್ಯವು ಅತ್ಯಂತ ಕಡಿಮೆ ಅತ್ಯಾಚಾರದ ಪ್ರಕರಣಗಳನ್ನು ಹೊಂದಿದೆ ಅನ್ನುವುದು ಅದರ ಹೆಗ್ಗಳಿಕೆ! ಗೋ ಗೋ ಗೋವಾ….!

Exit mobile version