ಶಿಕ್ಷಣ ಕ್ಷೇತ್ರಕ್ಕೆ ಭಾರತದ ಮಹೋನ್ನತ ಕೊಡುಗೆ ಗುರುಕುಲ ಪದ್ಧತಿ (ಭಾಗ-3)
ನಾಡಿನ ಸಮಸ್ತ ಗುರುಗಳಿಗೆ ಶಿಕ್ಷಕರ ದಿನಾಚರಣೆಯ (Teachers day) ಶುಭಾಶಯಗಳು. ‘ಒಂದಕ್ಷರ ಕಲಿಸಿದಾತನೂ ಗುರು’ ಎಂದು ನಂಬಿಕೊಂಡು ಬಂದವರಿಗೆ ಭಾರತದಲ್ಲಿ ಹೆಜ್ಜೆ ಹೆಜ್ಜೆಗೂ ಮಹಾ ಗುರುಗಳು ದೊರೆಯುತ್ತ ಹೋಗುತ್ತಾರೆ. ಗುರುಶಿಷ್ಯರ (Teacher- student relationship) ಸಂಬಂಧಕ್ಕೆ ಭಾರತವು ದೊಡ್ಡ ಕೀರ್ತಿಯನ್ನು ಪಡೆದಿದೆ. ಅದಕ್ಕೆ ಪೂರಕವಾದ ಒಂದು ಅದ್ಭುತವಾದ ಕಥೆಯು ನಮ್ಮ ಪುರಾಣಗಳಲ್ಲಿ (ರಾಜ ಮಾರ್ಗ ಅಂಕಣ) ದೊರೆಯುತ್ತದೆ.
ಪಾಂಚಾಲದ ಆರುಣಿಯ ಕಥೆ
ಪಂಚಾಲದ ಆರುಣಿಯು ಒಬ್ಬ ಗುರುವಿನ ಆಶ್ರಮದಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದನು. ಆತನಿಗೆ ಗುರುಗಳು ಎಂದರೆ ದೇವರಿಗಿಂತ ಹೆಚ್ಚು. ಗುರು ಏನೇ ಹೇಳಿದರೂ ಅದನ್ನು ಚಾಚೂ ತಪ್ಪದೇ ಪಾಲಿಸುವುದು ಆತನ ನಿಷ್ಠೆ.
ಒಮ್ಮೆ ಏನಾಯಿತು ಅಂದರೆ ಒಂದು ವರ್ಷ ಗುರುಗಳು ಗದ್ದೆಯಲ್ಲಿ ಬೇಸಾಯ ಮಾಡಿದ್ದರು. ಗದ್ದೆಯಲ್ಲಿ ಬಂಗಾರದ ಬೆಳೆಯು ಬಂದು ತಲೆದೂಗಿ ನಿಂತಿತ್ತು. ಎತ್ತ ನೋಡಿದರೂ ಹಸಿರು ಮತ್ತು ಹಸಿರು ಕಣ್ಣಿಗೆ ರಾಚುತ್ತಿತ್ತು.
ಒಂದು ದಿನ ಏನಾಯಿತು ಅಂದರೆ ಭಾರೀ ಜೋರು ಮಳೆಯು ಸುರಿಯತೊಡಗಿತು. ಹಗಲು ಕಳೆದು ರಾತ್ರಿ ಬಂದರೂ ಮಳೆಯು ನಿಲ್ಲಲಿಲ್ಲ. ಗುರುಗಳಿಗೆ ಆತಂಕ ಆರಂಭ ಆಯಿತು. ಅವರು ತಮ್ಮ ಶಿಷ್ಯ ಆರುಣಿಯನ್ನು ಕರೆದು ಗದ್ದೆಯ ಕಡೆ ಹೋಗಿ ‘ಬೆಳೆ ಏನಾಗಿದೆ ನೋಡಿಕೊಂಡು ಬಾ’ ಎಂದು ಹೇಳಿದರು. ಒಂದರೆ ಕ್ಷಣ ಕೂಡ ವಿಳಂಬ ಮಾಡದೆ ಆತನು ಗದ್ದೆಯ ಕಡೆ ಹೊರಟನು. ಅಲ್ಲಿಗೆ ಆತ ಬಂದು ತಲುಪಿದಾಗ ಗದ್ದೆಯ ಬೆಳೆಯು ಪ್ರವಾಹದಲ್ಲಿ ಮುಳುಗಿ ಹೋಗಿತ್ತು. ಗದ್ದೆಯ ಬದು ಒಂದು ಕಡೆ ಒಡೆದು ಹೋಗಿ ಕೆಂಪು ಕೆಂಪು ನೀರು ಬೆಳೆಗಳನ್ನು ಕಿತ್ತುಕೊಂಡು ಹೊರಗೆ ಧಾವಿಸುತ್ತಿತ್ತು. ಆತನಿಗೆ ಏನು ಮಾಡಬೇಕು ಎಂದು ತಕ್ಷಣ ಗೊತ್ತಾಗಲಿಲ್ಲ. ಎಷ್ಟು ಪ್ರಯತ್ನ ಮಾಡಿದರೂ ಒಡೆದು ಹೋದ ಗದ್ದೆಯ ಬದುವನ್ನು ಸರಿ ಮಾಡಲು ಆಗಲೇ ಇಲ್ಲ. ಕೊನೆಗೆ ಏನೂ ತೋಚದೇ ಆರುಣಿಯು ಆ ಒಡೆದು ಹೋದ ಬದುವಿಗೆ ಅಡ್ಡಲಾಗಿ ಮಲಗಿಬಿಟ್ಟನು!
ರಾತ್ರಿ ಇಡೀ ಮಳೆ ನಿಲ್ಲಲೇ ಇಲ್ಲ. ಚಳಿ ಗಾಳಿಯು ಬೀಸುತ್ತಾ ಇತ್ತು. ಆದರೂ ಆ ಚಳಿಗೆ ಒದ್ದೆಯಾಗಿ ನಡುಗುತ್ತ ಆರುಣಿಯು ಬೆಳಗ್ಗಿನ ವರೆಗೆ ಹಾಗೇ ಮಲಗಿದ್ದನು. ಬೆಳಿಗ್ಗೆ ಆತನನ್ನು ಹುಡುಕಿಕೊಂಡು ಬಂದ ಗುರುಗಳಿಗೆ ಆ ಶಿಷ್ಯನ ಕರುಣಾಜನಕ ಆದ ಸ್ಥಿತಿ ನೋಡಿ ಕಣ್ಣೀರು ಬಂತು. ಅವರು ಆತನನ್ನು ತಬ್ಬಿಕೊಂಡು ಸಂತೈಸಿದರು. ಆತನ ಮೈ ಒರಸಿದರು. ಆತನಿಗೆ ಆ ಸ್ಥಳದಲ್ಲಿ ಉದ್ಧಾಲಕ ಎಂದು ಹೆಸರು ಕೊಟ್ಟರು. ಆತನಿಗೆ ಸಕಲ ವೇದಗಳ ಜ್ಞಾನವನ್ನು ಧಾರೆ ಎರೆದರು. ಅದೇ ಉದ್ಧಾಲಕನು ಮುಂದೆ ದೊಡ್ಡ ವಿದ್ವಾಂಸನಾಗಿ ಋಷಿ ಪರಂಪರೆಯನ್ನು ಮುಂದುವರೆಸಿಕೊಂಡು ಹೋದನು. ನಮ್ಮ ಪುರಾಣಗಳಲ್ಲಿ ಇಂತಹ ಕಣ್ಣೀರು ತರಿಸುವ ಕಥೆಗಳು ನೂರಾರು ದೊರೆಯುತ್ತವೆ.
ಗುರುಗಳು ಮಾಡಿದ ಅರಳಿ ಮರದ ಬೀಜದ ಪರೀಕ್ಷೆ
ಒಂದು ಗುರುಕುಲದಲ್ಲಿ ಒಬ್ಬ ಗುರು ಮತ್ತು ಹತ್ತಾರು ಶಿಷ್ಯರು ಇದ್ದರು. ಅವರ ವಿದ್ಯಾಭ್ಯಾಸದ ಕೊನೆಯಲ್ಲಿ ಗುರುವು ತನ್ನ ಶಿಷ್ಯರಿಗೆ ಒಂದು ಪರೀಕ್ಷೆಯನ್ನು ಮಾಡುತ್ತಾರೆ. ಅವರೆಲ್ಲರ ಕೈಯ್ಯಲ್ಲಿ ಅರಳಿ ಮರದ ಬೀಜವನ್ನು ಕೊಟ್ಟು ಏನು ಕಾಣಿಸುತ್ತ ಇದೆ, ನೋಡಿ ಹೇಳಿ ಎಂದರು. ಎಲ್ಲ ಶಿಷ್ಯರೂ ಅರಳಿ ಮರದ ಬೀಜ ಮಾತ್ರ ಕಾಣುತ್ತಿದೆ ಅಂದರು. ಆಗ ಗುರುಗಳು ನಿಮ್ಮ ಶಿಕ್ಷಣ ಪೂರ್ತಿ ಆಗಿಲ್ಲ, ಇನ್ನೊಂದು ತಿಂಗಳು ಓದಿ ಎನ್ನುತ್ತಾರೆ. ಒಂದು ತಿಂಗಳು ಕಳೆದ ನಂತರ ಮತ್ತೆ ಗುರುಗಳು ಅದೇ ಅರಳಿ ಮರದ ಬೀಜವನ್ನು ಕೊಟ್ಟು ಏನು ಕಾಣಿಸುತ್ತ ಇದೆ? ಎಂದರು. ಆಗಲೂ ಶಿಷ್ಯರು ಅರಳಿ ಮರದ ಬೀಜ ಕಾಣುತ್ತಾ ಇದೆ ಎಂದರು. ಗುರುಗಳಿಗೆ ಸಮಾಧಾನ ಆಗಲಿಲ್ಲ. ಅವರು ಮತ್ತೊಂದು ತಿಂಗಳು ಓದಿಸಿದರು. ಮತ್ತೆ ಅದೇ ಪರೀಕ್ಷೆ ಮುಂದುವರೆಯಿತು. ಐದಾರು ತಿಂಗಳು ಪೂರ್ತಿ ಆದ ನಂತರ ಒಮ್ಮೆ ಎಲ್ಲ ಶಿಷ್ಯರೂ ಆ ಬೀಜವನ್ನು ನೋಡಿ ‘ಗುರುಗಳೆ, ಈಗ ಅರಳಿ ಮರದ ಬೀಜ ಕಾಣುತ್ತಾ ಇಲ್ಲ. ನಮ್ಮ ಕೈಯ್ಯಲ್ಲಿ ವಿಶಾಲ ಅಶ್ವತ್ಥ ವೃಕ್ಷವೇ ಕಾಣುತ್ತಿದೆ!’ ಎಂದು ಹೇಳಿದಾಗ ಗುರುಗಳು ಅವರನ್ನು ಉತ್ತೀರ್ಣ ಮಾಡಿ ಸಮಾಜಕ್ಕೆ ಹಿಂದೆ
ಕಳುಹಿಸಿಕೊಡುತ್ತಾರೆ.
ಇದನ್ನು ನಾವು ವಿಷನ್ ಎಂದು ಕರೆಯಬಹುದು. ಯಾವಾಗ ವಿದ್ಯಾರ್ಥಿಗಳಲ್ಲಿ ವಿಷನ್ ಪೂರ್ತಿಯಾಗಿ ಮೂಡಿತೋ ಆಗ ಶಿಕ್ಷಣವು ಪೂರ್ತಿ ಆಗಿದೆ ಎಂದು ಗುರುಗಳು ತೀರ್ಮಾನಕ್ಕೆ ಬರುತ್ತಿದ್ದರು.
ಗುರುಗಳು ಶಿಷ್ಯರಿಗೆ ಒಡ್ಡಿದ ಆಲಿಸುವ ಪರೀಕ್ಷೆ
ಇನ್ನೊಂದು ಗುರುಕುಲದಲ್ಲಿ ಶಿಕ್ಷಣದ ಕೊನೆಯ ಹಂತದಲ್ಲಿ ಒಂದು ಶ್ರೇಷ್ಠವಾದ ಪರೀಕ್ಷೆಯನ್ನು ಮಾಡಿದರು. ತನ್ನ ಎಲ್ಲ ಶಿಷ್ಯರನ್ನು ಕಾಡಿಗೆ ಕಳುಹಿಸಿ ನೀವು ಯಾವುದೆಲ್ಲ ಧ್ವನಿಗಳನ್ನು ಕೇಳುತ್ತೀರೋ ಅವುಗಳನ್ನು ಬಂದು ನನಗೆ ವರದಿ ಮಾಡಿ ಎಂದರು. ಅದೇ ರೀತಿಯಾಗಿ ಶಿಷ್ಯರು ಕಾಡಿಗೆ ಹೋದರು. ಸುಮಾರು ಧ್ವನಿಗಳನ್ನು ಆಲಿಸಿ ಬಂದು ಗುರುಗಳಿಗೆ ಹೀಗೆ ವರದಿ ಮಾಡಿದರು.
‘ಗುರುಗಳೇ, ನಾವು ಸಿಂಹದ ಮತ್ತು ಹುಲಿಯ ಘರ್ಜನೆ ಕೇಳಿದೆವು. ಜಲಪಾತದ ಭೋರ್ಗರೆತ ಕೇಳಿದೆವು. ಕೋಗಿಲೆಯು ಹಾಡುವುದನ್ನು ಕೇಳಿದೆವು ‘ ಎಂದರು. ಗುರುಗಳಿಗೆ ಸಮಾಧಾನ ಆಗಲಿಲ್ಲ. ಅವರನ್ನು ಎರಡನೇ ಬಾರಿಗೆ ಕಾಡಿಗೆ ಕಳುಹಿಸಿ ಅದೇ ಟಾಸ್ಕ್ ಮತ್ತೆ ಕೊಟ್ಟರು. ಶಿಷ್ಯರು ಕಾಡಿಗೆ ಹೋಗಿ ಮತ್ತೆ ಹಲವು ಧ್ವನಿಗಳನ್ನು ಆಲಿಸಿ ಬಂದು ಹೀಗೆ ವರದಿ ಮಾಡಿದರು.
ಹಿಂದಿನ ಲೇಖನ : ರಾಜ ಮಾರ್ಗ ಅಂಕಣ : ನೀವು ನಂಬಲೇಬೇಕು! 7 ಸಾವಿರ ವರ್ಷದ ಹಿಂದೆಯೇ ಭಾರತದಲ್ಲಿ 7,32,000 ಗುರುಕುಲಗಳಿದ್ದವು!
‘ಗುರುಗಳೇ, ನಾವು ದುಂಬಿಗಳ ಝೇಂಕಾರ ಕೇಳಿದೆವು. ಗಾಳಿ ಬೀಸುವ ಧ್ವನಿ, ಕುದುರೆಗಳ ಖುರಪುಟದ ಹಕ್ಕಿಗಳು ರೆಕ್ಕೆ ಬಡಿಯುವ ಧ್ವನಿ ಕೇಳಿದೆವು’ ಎಂದರು. ಗುರುಗಳಿಗೆ ಸಮಾಧಾನ ಆಗಲೇ ಇಲ್ಲ. ಮತ್ತೆ ಅದೇ ಟಾಸ್ಕ್ ಮುಂದುವರಿಯಿತು. ಕೊನೆಗೆ ಶಿಷ್ಯರು ಕಾಡಿಗೆ ಹೋಗಿ ತಾವು ಆಲಿಸಿದ ಧ್ವನಿಗಳನ್ನು ಈ ರೀತಿ ವರದಿ ಮಾಡಿದರು.
ಹಿಂದಿನ ಲೇಖನ :ರಾಜ ಮಾರ್ಗ ಅಂಕಣ : ಗುರು ಅಂದರೆ ನಮ್ಮ Identity, ಯಾರ ಶಿಷ್ಯ ಅನ್ನೋದೇ ಒಂದು ಹೆಮ್ಮೆ
‘ಗುರುಗಳೇ, ನಾವು ಕಾಡಿಗೆ ಹೋದಾಗ ಹೂವೊಂದು ಸುಂದರವಾಗಿ ಅರಳುತ್ತಿತ್ತು. ನಾವು ಕಿವಿ ಕೊಟ್ಟೆವು. ಅಲ್ಲಿ ಪ್ರಣವದ ಓಂಕಾರ ಕೇಳಿಸಿತು. ಮುಂದೆ ಹೋದಾಗ ಸೂರ್ಯೋದಯ ಆಗುತ್ತಿತ್ತು. ನಾವು ಕಿವಿ ಕೊಟ್ಟೆವು. ಅಲ್ಲಿ ವಾಣಿಯ ವೀಣೆಯ ಝೇಂಕಾರ ಕೇಳಿದೆವು. ಮುಂದೆ ಹೋದಾಗ ನದಿಯ ನೀರು ನಿಧಾನವಾಗಿ ಹರಿಯುತ್ತಿತ್ತು. ನಾವು ಕಿವಿ ಕೊಟ್ಟೆವು. ಅಲ್ಲಿ ಗೆಜ್ಜೆಯ ಧ್ವನಿ ಕೇಳಿತು’ ಎಂದರು. ಗುರುಗಳು ಬೇರೆ ಯಾವ ಯೋಚನೆಯನ್ನೂ ಮಾಡದೇ ಅವರನ್ನು ಉತ್ತೀರ್ಣ ಮಾಡಿ ಸಮಾಜಕ್ಕೆ ಕಳುಹಿಸಿ ಕೊಟ್ಟರು!
ಇಂತಹ ಸೂಕ್ಷ್ಮ ಪರೀಕ್ಷೆಗಳ ಮೂಲಕ ಗುರು ತನ್ನ ವಿದ್ಯಾರ್ಥಿಗಳ ಒಳಗೆ ಅಡಗಿದ್ದ ಸುಪ್ತವಾದ ಶಕ್ತಿಗಳನ್ನು ಹೊರಗೆ ತರುತ್ತಿದ್ದರು.
(ಮುಂದುವರಿಯುತ್ತದೆ)