1947 ಆಗಸ್ಟ್ 15ರ ಸ್ವಾತಂತ್ರ್ಯ ಪಡೆಯುವ ಸವಾಲಿನಷ್ಟೆ ದೊಡ್ಡ ಸವಾಲು ಎಂದರೆ ಭಾರತದ ಒಳಗೆ ಸ್ವತಂತ್ರವಾಗಿ ಹಾರಾಡುತ್ತಿದ್ದ 565 ಸಂಸ್ಥಾನಗಳನ್ನು ಭಾರತದ ಒಳಗೆ ಸೇರಿಸುವುದು! ಆ ಸವಾಲನ್ನು ಉತ್ತರಿಸಲು ಎಲ್ಲರಿಂದ ‘ಉಕ್ಕಿನ ಮನುಷ್ಯ’ (Iron Man of India) ಎಂದು ಕರೆಯಲ್ಪಡುತ್ತಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್ (Sardar Vallabhabhai Patel) ಅವರಿಗಿಂತ ಹೆಚ್ಚು ಶಕ್ತಿಶಾಲಿಯು ಯಾರಿದ್ದಾರೆ? ಅವರು ಸ್ವತಂತ್ರ ಭಾರತದ ಮೊತ್ತ ಮೊದಲ ಗೃಹಮಂತ್ರಿ (First Home minister of Independent India) ಆಗಿ ಮಾಡಿದ ಕೆಲಸ ಅದು ಅದ್ಭುತವೇ ಆಗಿದೆ! (ರಾಜ ಮಾರ್ಗ ಅಂಕಣ)
ಅದು ತುಂಬಾನೇ ಸವಾಲಿನ ಕೆಲಸವಾಗಿತ್ತು
ಶತ ಶತಮಾನಗಳಿಂದ ಅರಸೊತ್ತಿಗೆಯನ್ನು ಅನುಭವಿಸುತ್ತಿದ್ದ ಅರಸರನ್ನು ಭಾರತದ ಆಡಳಿತದ ಕೊಡೆಯ ಅಡಿಯಲ್ಲಿ ತರುವುದಕ್ಕೆ ಸರ್ದಾರ್ ಪಟೇಲರು ಸಾಮ, ದಾನ, ಬೇಧ, ದಂಡ…….. ಹೀಗೆ ಸಾಧ್ಯವಾದ ಎಲ್ಲ ಪ್ರಯೋಗಗಳನ್ನು ಮಾಡಬೇಕಾಯಿತು.
ಇನ್ನೂ ಒಂದು ದೊಡ್ಡ ಸಮಸ್ಯೆ ಎಂದರೆ ಆಗಸ್ಟ್ 15ರಂದು ಭಾರತಕ್ಕೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ದೊರೆತಿರಲಿಲ್ಲ. ಈಸ್ಟ್ ಇಂಡಿಯಾ ಕಂಪೆನಿ ಭಾರತದಲ್ಲಿಯೇ ಇತ್ತು. ಆಗ ಭಾರತವನ್ನು ರಿಪಬ್ಲಿಕ್ ಕಂಟ್ರಿ ಎಂದು ಕರೆಯದೇ ಡೊಮಿನಿಯನ್ ರಿಪಬ್ಲಿಕ್ ಎಂದು ಕರೆಯಲಾಗುತ್ತಿತ್ತು. 1950ರವರೆಗೆ ಅದೇ ಸ್ಥಿತಿ ಮುಂದುವರಿದಿತ್ತು. ಸ್ಥಳೀಯ ಸಂಸ್ಥಾನಗಳಿಗೆ ಭಾರತಕ್ಕೆ ಹೋಗುವುದೋ ಅಥವಾ ಪಾಕಿಸ್ತಾನಕ್ಕೆ ಹೋಗುವುದೋ ಎಂಬ ಗೊಂದಲ ಇತ್ತು.
ಪಟೇಲರು ಸ್ವತಃ ಅಖಾಡಕ್ಕೆ ಇಳಿದರು
ಆರಂಭದಲ್ಲಿ ಸ್ವತಃ ಪಟೇಲರು ಆ ಅರಸರ ಜೊತೆಗೆ ನೇರ ಮಾತುಕತೆಗೆ ಇಳಿದರು. ಮೊದಮೊದಲು ಒಂದಿಷ್ಟು ಹಠ ಹಿಡಿದ ಹೆಚ್ಚಿನ ರಾಜರು ಮುಂದೆ ಭಾರತದ ಅಧೀನಕ್ಕೆ ಬರಲು ಷರತ್ತು ಇಲ್ಲದೆ ಒಪ್ಪಿದರು. ಗ್ವಾಲಿಯರ್, ಬರೋಡ, ಬಿಕಾನೇರ್ ಅವರಿಂದ ಆರಂಭವಾದ ಮಾತುಕತೆ ಮುಂದೆ ಸಾಲು ಸಾಲು ಇತರ ಮಹಾರಾಜರ ಸೇರ್ಪಡೆಯೊಂದಿಗೆ ಯಶಸ್ವೀ ಆಗಿ ಮುಂದುವರೆಯಿತು.
ಇಂದೋರ್ ಮತ್ತು ಜೋಧಪುರ್ ಭಾರತದ ಅಧೀನಕ್ಕೆ ಬರಲು ಕಷ್ಟವೇ ಆಗಲಿಲ್ಲ. ಆದರೆ ಜುನಾಘಡ್ ತುಂಬಾನೇ ಸವಾಲಾಯಿತು. ಅದರ ನವಾಬ ಮೊಹಬ್ಬತ್ ಖಾನ್ ತಾನು ಪಾಕಿಸ್ತಾನಕ್ಕೆ ಸೇರುವುದಾಗಿ ಘೋಷಣೆಯನ್ನು ಮಾಡಿದ್ದ! ಅವನನ್ನು ಬಿಟ್ಟರೆ ಮುಂದೆ ಹೈದರಾಬಾದ್ ಮತ್ತು ಕಾಶ್ಮೀರ ಕೂಡ ಕೈತಪ್ಪುತ್ತಿತ್ತು!
ಈ ಅಪಾಯವನ್ನು ಸಾಕಷ್ಟು ಮುಂಚಿತವಾಗಿ ಗ್ರಹಿಸಿದ ಸರ್ದಾರ್ ಪಟೇಲರು ಸೆಪ್ಟೆಂಬರ್ 24ರಂದು ಜುನಾಘಡದ ಒಳಗೆ ಸೇನಾ ತುಕಡಿಯನ್ನು ನುಗ್ಗಿಸಿದರು. ನವಾಬ ಕರಾಚಿಗೆ ತಲೆತಪ್ಪಿಸಿಕೊಂಡು ಓಡಿ ಹೋದ. ನವೆಂಬರ್ 9ರಂದು ಜುನಾಘಡವು ಭಾರತೀಯ ಸೇನೆಯ ವಶ ಆಯಿತು.
ನೀವು ಆತ್ಮಹತ್ಯೆಗೆ ನಿರ್ಧಾರ ಮಾಡಿದರೆ ನಾನೇನು ಮಾಡಲಿ?
ಮುಂದಿನ ಅತೀ ದೊಡ್ಡ ಸವಾಲು ಹೈದರಾಬಾದ್ ನಿಜಾಮ! ಪಟೇಲರ ಪ್ರಯತ್ನವು ಆರಂಭ ಆಯಿತು. ಅಕ್ಟೋಬರ್ ತಿಂಗಳಲ್ಲಿ ಹೈದರಾಬಾದ್ ನಿಜಾಮರ ಪ್ರತಿನಿಧಿ ಲಯೇಖ ಖಾನ್ ದೆಹಲಿಯಲ್ಲಿ ಪಟೇಲರನ್ನು ಭೇಟಿ ಆಗಿ ‘ನಾವು ಭಾರತಕ್ಕೆ ಸೇರುವ ಪ್ರಶ್ನೆಯೇ ಇಲ್ಲ. ಕಟ್ಟಕಡೆಯ ವ್ಯಕ್ತಿಯವರೆಗೆ ಸ್ವಾತಂತ್ರ್ಯಕ್ಕೆ ಹೋರಾಡುತ್ತೇವೆ!’ ಅಂದನು.
ಒಂದು ಕ್ಷಣ ಕೂಡ ಯೋಚನೆ ಮಾಡದೆ ಪಟೇಲರು ಒಂದೇ ಮಾತು ಹೇಳಿದರು – ‘ನೀವು ಆತ್ಮಹತ್ಯೆಯ ಮಾಡಲು ನಿರ್ಧಾರ ಮಾಡಿದ್ದರೆ ನಾನೇನು ಮಾಡಲಿ?’
ಮುಂದೆ ಸೇನಾ ಕಾರ್ಯಾಚರಣೆ ಅನಿವಾರ್ಯವೆ ಆಯಿತು. ಲೆಫ್ಟಿನೆಂಟ್ ಜನರಲ್ ರಾಜೇಂದ್ರ ಸಿಂಹ ಮತ್ತು ಮೇಜರ್ ಜನರಲ್ ಜೆ.ಎನ್ ಚೌಧರಿ ನೇತೃತ್ವದಲ್ಲಿ ‘ಆಪರೇಶನ್ ಪೋಲೊ’ ಆರಂಭವಾಯಿತು. ಪಟೇಲರು ಸೈನ್ಯಕ್ಕೆ ಪೂರ್ತಿ ಸ್ವಾತಂತ್ರ್ಯವನ್ನು ಕೊಟ್ಟರು. ಭಾರತೀಯ ಸೇನೆಯು ಯಾವ ದಾಕ್ಷಿಣ್ಯವು ಇಲ್ಲದೆ ಹೈದರಾಬಾದ್ ನಿಜಾಮನ ಸೇನೆಯನ್ನು ಹೊಸಕಿಹಾಕಿತು! ಹೈದರಾಬಾದ್ ಸಂಸ್ಥಾನವು ಭಾರತದ ಸಾರ್ವಭೌಮತೆಗೆ ಸೇರ್ಪಡೆ ಆಯಿತು.
ಇನ್ನು ಉಳಿದದ್ದು ಕಾಶ್ಮೀರ ಮಾತ್ರ! ಅದನ್ನು ಭಾರತದ ಒಳಗೆ ತರಲು ಪಟೇಲರ ಬಳಿ ಅವರದ್ದೇ ಆದ ಸ್ಟ್ರಾಟಜಿ ಇತ್ತು. ಅದರ ಅರಸನಾದ ಹರಿ ಸಿಂಘನಿಗೆ ಭಾರತಕ್ಕೆ ಸೇರಲು ಮೂಗಿನ ತುದಿಯವರೆಗೆ ಆಸೆ ಇತ್ತು. ಆದರೆ ಕೆಲವರ ಹಟದಿಂದ ಅವನು ಸ್ವತಂತ್ರನಾಗಿ ಉಳಿಯಲು ತೀರ್ಮಾನ ಮಾಡಿದನು. ಬೇರೆ ಬೇರೆ ರಾಜಕೀಯ ಕಾರಣಕ್ಕೆ ಮತ್ತು ಕೆಲವು ಸ್ವಾರ್ಥಿಗಳ ಕೈವಾಡದಿಂದ ಪಟೇಲರಿಗೆ ಅದನ್ನು ಪೂರ್ತಿ ಮಾಡಲು ಆಗಲಿಲ್ಲ.
ಪಟೇಲರ ಅವಿರತ ಪ್ರಯತ್ನ ಹಾಗೂ ದಿಟ್ಟ ನಿರ್ಧಾರಗಳಿಂದ 560 ಪ್ರಾಂತ್ಯಗಳು ಭಾರತದ ಅಖಂಡತೆಯನ್ನು ಒಪ್ಪಿಕೊಂಡು ಭಾರತದ ಒಳಗೆ ಬಂದವು. ಐದು ಪ್ರಾಂತ್ಯಗಳು ಪಾಕಿಸ್ತಾನಕ್ಕೆ ಸೇರ್ಪಡೆಯಾದವು.
ಇದನ್ನೂ ಓದಿ: ರಾಜ ಮಾರ್ಗ ಅಂಕಣ : ವೇಶ್ಯಾವೃತ್ತಿ ಅಪರಾಧವಲ್ಲ, ಅವರು ಸೆಕ್ಸ್ ವರ್ಕರ್‌ಗಳು; ಅವರ ಕೆಲಸ ಅವರು ಮಾಡಲಿ ಬಿಡಿ!
ಪಟೇಲರನ್ನು ‘ಉಕ್ಕಿನ ಮನುಷ್ಯ’ ಎಂದು ಕರೆದದ್ದು ಸುಮ್ಮನೆ ಅಲ್ಲ !
ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಭಾರತದ ಮೊದಲ ಗೃಹ ಮಂತ್ರಿಯಾಗಿ ಸಲ್ಲಿಸಿದ ಸೇವೆಯನ್ನು ಭಾರತವು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಮರಣೋತ್ತರವಾಗಿ ಅವರಿಗೆ 1991ರಲ್ಲಿ ಭಾರತರತ್ನ ಪ್ರಶಸ್ತಿ ಕೊಟ್ಟು ಅವರನ್ನು ಭಾರತವು ಗೌರವಿಸಿತು.
ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ವ್ಯಕ್ತಿತ್ವವು ಅವರ ಪ್ರತಿಮೆ STATUE OF UNITY ಗಿಂತ ಎತ್ತರವಾದದ್ದು! ಆ ಪ್ರತಿಮೆಯು 182 ಮೀಟರ್ ಎತ್ತರ ಇದ್ದು ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆ ಆಗಿ ದಾಖಲೆಗೆ ಸೇರಿದೆ.