Site icon Vistara News

Raja Marga Column: ಸಚಿನ್ ‘ಟೆನ್ನಿಸ್ ಎಲ್ಬೋ’ ಗೆದ್ದದ್ದು ಚಿಕಿತ್ಸೆಯಿಂದ ಅಲ್ಲ, ಮತ್ತೆ ಹೇಗೆ?

Sachin Tendulkar Tennis Elbow

‘ಗಾಡ್ ಆಫ್ ಕ್ರಿಕೆಟ್’ ಎಂದು ಎಲ್ಲರಿಂದ ಕರೆಸಿಕೊಂಡ ಸಚಿನ್ ತೆಂಡೂಲ್ಕರ್ (Sachin Tendulkar) 24 ವರ್ಷ ಭಾರತಕ್ಕಾಗಿ ಆಡಿದ್ದು, ಶತಕಗಳ ಶತಕವನ್ನು ಪೂರ್ತಿ ಮಾಡಿದ್ದು, ಕ್ರಿಕೆಟಿನ ಎಲ್ಲ ದಾಖಲೆಗಳನ್ನು ಮುರಿದು ಹೊಸ ದಾಖಲೆ ಬರೆದದ್ದು ನಮಗೆ ಗೊತ್ತೇ ಇದೆ. ಅದೇ ಸಚಿನ್ ಸಾಧನೆಯ ಉತ್ತುಂಗದಲ್ಲಿ ಇದ್ದಾಗ ಸಂಭವಿಸಿದ ಒಂದು ತೀವ್ರವಾದ ದೈಹಿಕ ನೋವು, ಅದನ್ನು ಆತ ಗೆದ್ದ ರೀತಿ ಅದು ಕೂಡಾ ಅದ್ಭುತವೇ ಆಗಿದೆ (Raja Marga Column).
ಅದು ಟೆನ್ನಿಸ್ ಎಲ್ಬೋ (Tennis Elbow) ಎಂಬ ಮಹಾ ನೋವಿನ ಸಮಸ್ಯೆ!
ಆ ಕಾಯಿಲೆ ಬಂತು ಅಂದರೆ ಒಬ್ಬ ಕ್ರಿಕೆಟ್ ಆಟಗಾರನ ಕ್ರಿಕೆಟ್ ಜೀವನ ಮುಗಿದೇ ಹೋಯಿತು ಅನ್ನೋದು ವೈದ್ಯಕೀಯ ವಿಜ್ಞಾನದ ಸತ್ಯ. ಅದೇ ಕಾಯಿಲೆಯು ಸಚಿನ್ ಬಲಗೈ ಮೊಣಗಂಟಿಗೆ ಅಮರಿತ್ತು. ಒಂದು ಕ್ರಿಕೆಟ್ ಬಾಲನ್ನು ಎತ್ತಲು ಸಾಧ್ಯವಾಗದೆ ಸಚಿನ್ ನೋವಿನಲ್ಲಿ ನರಳಿದರು. ಎದುರಿನ ವ್ಯಕ್ತಿಗೆ ಶೇಕ್ ಹ್ಯಾಂಡ್ ಮಾಡಲು ಕೂಡ ಆಗದ ಪರಿಸ್ಥಿತಿ. ದೇಶದಾದ್ಯಂತ ಕ್ರಿಕೆಟ್ ಪ್ರೇಮಿಗಳಿಗೆ ಸಿಡಿಲು ಬಡಿದ ಅನುಭವ. ನಮ್ಮ ಕ್ರಿಕೆಟ್ ದೇವರು ಇನ್ನು ಮುಂದೆ ಆಡುವುದಿಲ್ಲವಂತೆ ಎಂಬ ಸುದ್ದಿ ಭಾರತೀಯರಿಗೆ ತುಂಬಾ ನೋವು ಕೊಟ್ಟಿತ್ತು. ಹಲವು ಕಡೆ ಯುವಕರು ಆತ್ಮಹತ್ಯೆ ಮಾಡಿಕೊಂಡ ಸುದ್ದಿಗಳು ಬಂದವು.

ಇಂಗ್ಲೆಂಡಿನಲ್ಲಿ ನಡೆಯಿತು ಸಂಕೀರ್ಣ ಶಸ್ತ್ರಚಿಕಿತ್ಸೆ

ಸಚಿನ್ ಇಂಗ್ಲೆಂಡಿಗೆ ಹೋಗಿ ಸಂಕೀರ್ಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಬಂದರು. ಅದು ತೀವ್ರ ಯಾತನಾಮಯ ಸರ್ಜರಿ. ವೈದ್ಯರು ಇನ್ನು ಕ್ರಿಕೆಟ್ ಆಡುವುದು ಬೇಡ ಎಂಬ ಸಲಹೆ ಕೊಟ್ಟರು. ಸಚಿನ್ ಅದಕ್ಕೆ ಏನೂ ಹೇಳಲಿಲ್ಲ. ಭಾರತಕ್ಕೆ ಮರಳಿದ ನಂತರ ರಿಹ್ಯಾಬಿಲಿಟೇಷನ್‌ ದಿನಗಳು ಇನ್ನಷ್ಟು ಯಾತನಾಮಯ ಆಗಿದ್ದವು. ತುಂಬಾ ಶಕ್ತಿಶಾಲಿ ಆಗಿದ್ದ ವ್ಯಕ್ತಿಯೊಬ್ಬ ಸುಮ್ಮನೆ ಮಲಗಿ ವಿಶ್ರಾಂತಿ ಪಡೆಯಬೇಕು ಎಂದರೆ ಹೇಗೆ? ಸಚಿನ್ ಪೂರ್ತಿಯಾಗಿ ಬಸವಳಿದು ಹೋದ ದಿನಗಳು ಅವು.

ಬೆಂಗಳೂರಿನಲ್ಲಿ ಕಠಿಣ ತರಬೇತು ಆರಂಭ

ರಿಹ್ಯಾಬಿಲಿಟೇಷನ್ ಅವಧಿಯು ಮುಗಿಯುವುದನ್ನೆ ಕಾಯುತ್ತಿದ್ದ ಸಚಿನ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಬಂದರು. ಅವರ ಒಳಗಿನ ಬೆಂಕಿ ಅವರನ್ನು ಬೆಳಗ್ಗೆ ಆರು ಘಂಟೆಗೆ ಮೈದಾನಕ್ಕೆ ಕರೆದುಕೊಂಡು ಬರುತ್ತಿತ್ತು. ಸಚಿನ್ ಮೊದಲಿಗಿಂತ ಹೆಚ್ಚು ಭಾರವಾದ ಬ್ಯಾಟ್ ಹಿಡಿದು ಆಡಲು ಆರಂಭ ಮಾಡಿದರು. ಆ ತರಬೇತು ಹೇಗಿತ್ತು ಅಂದರೆ ಅಲ್ಲಿದ್ದ ಹುಡುಗರು ಎರಡು ಬಕೆಟ್ ಚೆಂಡು ತಂದು ಆತನ ಮುಂದೆ ಇಡುತ್ತಿದ್ದರು. ಸಚಿನ್ ಬಾಲನ್ನು ಎತ್ತಿಕೊಂಡು ಎಡಗೈಯಲ್ಲಿ ತೂರೋದು, ಬಲಗೈಯಲ್ಲಿ ಭಾರವಾದ ಬ್ಯಾಟ್ ಮೂಲಕ ಆ ಬಾಲನ್ನು ಎತ್ತಿ
ಹೊಡೆಯುವುದು ಮಾಡುತ್ತಿದ್ದರು. ಇದು ತುಂಬಾ ಕಠಿಣವಾದ ತರಬೇತು. ಒಂದು ಘಂಟೆ ಸಚಿನ್ ಇದನ್ನು ಪೂರ್ತಿ ಮಾಡುವಾಗ ಬೆವೆತು ಚಂಡಿ ಆಗುತ್ತಿದ್ದರು. ನಂತರ ಒಳಗೆ ಹೋಗಿ ಟೀ ಶರ್ಟ್ ಬದಲಾಯಿಸಿ ಸಚಿನ್ ಮತ್ತೆ ಮೈದಾನಕ್ಕೆ ಬರುತ್ತಿದ್ದರು.

ಮೈದಾನದಲ್ಲಿ 20 ರೌಂಡ್ ಜಾಗ್ಗಿಂಗ್

ಆ ದೊಡ್ಡ ಮೈದಾನದ ಸುತ್ತ ಸಚಿನ್ ಅವರ ಜಾಗ್ಗಿಂಗ್ ಆರಂಭ ಆಗುತ್ತಿತ್ತು. ಸತತವಾಗಿ 20 ರೌಂಡ್ ಓಡದೇ ಸಚಿನ್ ಜಾಗ್ಗಿಂಗ್ ನಿಲ್ಲಿಸಿದ್ದೇ ಇಲ್ಲ. ಮಧ್ಯೆ ವಿಶ್ರಾಂತಿ ಕೂಡ ಪಡೆಯುತ್ತಿರಲಿಲ್ಲ.

ನಂತರ ಮತ್ತೆ ಒಳಗೆ ಬಂದು ಸಚಿನ್ ಸ್ನಾನ ಮಾಡಿ, ಉಪಾಹಾರ ಮುಗಿಸಿ ಗ್ರೌಂಡಿಗೆ ಬಂದರೆ ನೆಟ್ ಪ್ರಾಕ್ಟೀಸ್ ಆರಂಭ. ಅದೇ ಭಾರವಾದ ಬ್ಯಾಟ್ ಹಿಡಿದು ಸಚಿನ್ ಅಲ್ಲಿದ್ದ ಎಲ್ಲ ನೆಟ್ ಬೌಲರ್‌ಗಳ ಬಾಲ್ ಎದುರಿಸಿ ಆಡುತ್ತಿದ್ದರು. ಆ ನೆಟ್ ಪ್ರಾಕ್ಟೀಸ್ ಮಧ್ಯಾಹ್ನ 12 ಘಂಟೆಯವರೆಗೆ ನಿಲ್ಲುತ್ತಲೇ ಇರಲಿಲ್ಲ. ಏಕಾಗ್ರತೆಯಿಂದ ಪ್ರತೀ ಬಾಲ್ ಎದುರಿಸಿ ನಿಲ್ಲುವುದು, ತೀವ್ರವಾದ ಬಿಸಿಲಿಗೆ ಬೆವರು ಬಸಿಯುವುದು…ಇದ್ಯಾವುದೂ ಸುಲಭ ಅಲ್ಲ. ಭಾರತೀಯ ಕ್ರಿಕೆಟ್ ತಂಡಕ್ಕೆ ಮತ್ತೆ ಮರಳಬೇಕು ಎನ್ನುವ ತುಡಿತ, ತೀವ್ರವಾದ ಸಾಧನೆಯ ಹಸಿವು ಅವರನ್ನು ಪ್ರತೀ ದಿನವೂ ಮೈದಾನಕ್ಕೆ ಎಳೆದು ತರುತ್ತಿತ್ತು.

ಮಧ್ಯಾಹ್ನ ಒಂದಷ್ಟು ಹೊತ್ತು ವಿಶ್ರಾಂತಿ ತೆಗೆದುಕೊಂಡು ಸಂಜೆ ಮತ್ತೆ ನೆಟ್ ಪ್ರಾಕ್ಟೀಸ್ ಆರಂಭ. ಕತ್ತಲಾಗುವವರೆಗೂ ಸಚಿನ್ ಆಡುತ್ತಲೇ ಇರುತ್ತಿದ್ದರು. ಮಬ್ಬು ಕತ್ತಲಲ್ಲಿ ಆಡುವುದರಿಂದ ದೃಷ್ಟಿ ಸೂಕ್ಷ್ಮ ಆಗುತ್ತದೆ ಎನ್ನುವುದು ಅವರ ನಂಬಿಕೆ.

ರಾತ್ರಿ ಮಲಗುವ ಮೊದಲು ಲಗಾನ್, ಚಕ್ ದೇ ಇಂಡಿಯಾ, ಮೊದಲಾದ ಪ್ರೇರಣಾದಾಯಕ ಸಿನೆಮಾ ನೋಡಿ ಮಲಗುವುದು. ಮತ್ತೆ ಬೆಳಿಗ್ಗೆ ಬೇಗ ಎದ್ದು ಯೋಗ, ಧ್ಯಾನ ಮೊದಲಾದ ಚಟುವಟಿಕೆಗಳ ಮೂಲಕ ಮಾನಸಿಕವಾಗಿ ಬಲಿಷ್ಠ ಆಗುವುದು ನಿರಂತರ ನಡೆಯುತ್ತಿತ್ತು.

ಅವರ ಅಭ್ಯಾಸದ ತೀವ್ರತೆ ನೋಡಿ ಅವರ ಫಿಸಿಯೋ ಎಷ್ಟೋ ಬಾರಿ ಬೆಚ್ಚಿ ಬೀಳುತ್ತಿದ್ದರು. ಹಲವು ತಿಂಗಳ ಕಾಲ ಈ ತಪಸ್ಸಿನ ಹಾಗೆ ತರಬೇತಿಯಲ್ಲಿ ಮುಳುಗಿದ್ದ ಸಚಿನ್ ಭಾರತೀಯ ಕ್ರಿಕೆಟ್ ತಂಡಕ್ಕೆ ಮರಳುವುದು ಕಷ್ಟ ಆಗಲಿಲ್ಲ.

ಇದನ್ನೂ ಓದಿ : Raja Marga Column : ನಿಮ್ಮ 10-14 ವಯಸ್ಸಿನ ಮಕ್ಕಳು ಓದಬೇಕಾದ ಪುಸ್ತಕಗಳು ಇವು!

ಅದೇ ಭಾರವಾದ ಬ್ಯಾಟ್, ಇನ್ನಷ್ಟು ಅಗ್ರೆಸ್ಸಿವ್ ಆದ ಸಚಿನ್!

ಟೆನ್ನಿಸ್ ಎಲ್ಬೋ ಕಾರಣಕ್ಕೆ ಸಚಿನ್ ಅವರ ಎರಡು ವರ್ಷಗಳ (2004-2006) ಕ್ರಿಕೆಟ್ ಜೀವನ ನಷ್ಟ ಆಗಿತ್ತು. ಮುಂದೆ
ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಮರಳಿದ ಸಚಿನ್ ಮೊದಲಿಗಿಂತ ಭಾರವಾದ ಬ್ಯಾಟ್ ಹಿಡಿದು ಬ್ಯಾಟಿಂಗ್ ಮಾಡಲು ತೊಡಗಿದರು. ಮೊದಲಿಗಿಂತ ಹೆಚ್ಚು ಆಕ್ರಮಣಕಾರಿ ಆಗಿತ್ತು ಅವರ ಆಟ. ಸಚಿನ್ ಅವರ ಹೆಚ್ಚಿನ ದಾಖಲೆಗಳು ಉಂಟಾದದ್ದು ಈ ಕಾಯಿಲೆಯನ್ನು ಗೆದ್ದ ನಂತರವೇ!

ಏಕದಿನ ಕ್ರಿಕೆಟನ ದ್ವಿಶತಕ ಅವರ ಬ್ಯಾಟಿನಿಂದ ಸ್ಫೋಟ ಆಯಿತು. ಆಗ ವೀಕ್ಷಕ ವಿವರಣೆ ಮಾಡುತ್ತಿದ್ದ ರವಿ ಶಾಸ್ತ್ರಿ ಅವರ ಮುಂದೆ ಮೈಕ್ ಹಿಡಿದು ಅದು ಹೇಗೆ ಸಾಧ್ಯ ಆಯಿತು ಎಂದು ಹೇಳಿದ್ದರು.

ಆಗ ಸಚಿನ್ ಹೇಳಿದ ಮಾತು ತುಂಬ ಮುಖ್ಯವಾದದ್ದು. ‘ನಾವು ಚೆನ್ನಾಗಿ ಆಡದೆ ಹೋದಾಗ ಜನರು ನಮ್ಮ ಕಡೆಗೆ ಕಲ್ಲು ಎಸೆಯುತ್ತಾರೆ. ನಾವು ಆ ಕಲ್ಲುಗಳನ್ನು ಎತ್ತಿಕೊಂಡು ನಮ್ಮ ಕನಸಿನ ಸೌಧವನ್ನು ಪೂರ್ತಿ ಮಾಡಬೇಕು!’ ಎಂದಿದ್ದರು. ಸಚಿನ್ ತೆಂಡೂಲ್ಕರ್ ಭಾರತರತ್ನ ಆದದ್ದು ಸುಮ್ಮನೆ ಅಲ್ಲ!

Exit mobile version