Raja Marga Column: ವ್ಯಕ್ತಿಗಳ ನಡವಳಿಕೆಯ ಅಧ್ಯಯನ (Study of Human Behaviours) ತುಂಬಾ ಕುತೂಹಲಕಾರಿ. ಭೂಮಿಯಲ್ಲಿ ಶುದ್ಧ ರೂಪದಲ್ಲಿ ಸಿಗುವ ಮುಖ್ಯ ಲೋಹ ಎಂದರೆ ಅದು ಚಿನ್ನ. ಆದರೆ ಶುದ್ಧ ಚಿನ್ನದಿಂದ (Pure Gold) ಆಭರಣ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅದು ತುಂಬಾ ಮೃದು. ಅದಕ್ಕೆ ತಾಮ್ರವೆಂಬ ಕಠಿಣತೆಯನ್ನು ಸೇರಿಸಿದ ನಂತರ ಚಿನ್ನದ ಆಭರಣ (Golden Jewellery) ಮಾಡಬಹುದು.
ಹಾಗೆಯೇ ಕಬ್ಬಿಣವು ತುಂಬ ಕಠಿಣವಾದ ಲೋಹ. ಆದರೂ ಅದು ತುಕ್ಕು ಹಿಡಿದು ಹಾಳಾಗುತ್ತದೆ. ಅದನ್ನು ತಪ್ಪಿಸಲು ಮತ್ತು ಅದಕ್ಕೆ ಹೊಳಪು ಕೊಡಲು ಅದಕ್ಕೆ 3% ಕಾರ್ಬನ್ ಸೇರಿಸುತ್ತಾರೆ. ಆಗ ಅದು ಉಕ್ಕು (ಸ್ಟೀಲ್) ಆಗಿ ಪರಿವರ್ತನೆ ಆಗುತ್ತದೆ. ಅದು ಕಬ್ಬಿಣದ ಗುಣಮಟ್ಟವನ್ನು ಮತ್ತು ಬಾಳಿಕೆಯನ್ನು ಹೆಚ್ಚಿಸುತ್ತದೆ.
Raja Marga Column : ಅತಿಯಾದ ಮೃದುತ್ವ ಒಳ್ಳೆಯದಲ್ಲ
ನಮ್ಮ ಒಳ್ಳೆಯತನ, ಒಳ್ಳೆಯ ಭಾವನೆ ಹಾಗೂ ಸದಾಶಯಗಳನ್ನು ಯಾರು ಗೌರವಿಸುತ್ತಾರೆಯೋ ಅವರ ಜೊತೆ ನಾವು ಮೃದುವಾಗಿದ್ದರೆ ಸಾಕು. ಎಲ್ಲರ ಜೊತೆಗೆ ಒಳ್ಳೆಯವರಾಗಿ ಇರುವುದು ಇಂದಿನ ಕಾಲದಲ್ಲಿ ಸಾಧ್ಯವೇ ಇಲ್ಲ. ನೀವು ಎಲ್ಲರ ಬಗ್ಗೆ ಎಷ್ಟೇ ಸದಾಶಯ ಹೊಂದಿದ್ದರೂ ನಿಮ್ಮ ಬೆನ್ನ ಹಿಂದೆ ನಿಮ್ಮನ್ನು ಟೀಕೆ ಮಾಡುವವರು, ಖಂಡಿಸುವವರು ಇದ್ದೇ ಇರುತ್ತಾರೆ. ಮರ್ಯಾದಾ ಪುರುಷೋತ್ತಮ ಶ್ರೀರಾಮ ದೇವರನ್ನು ಕೂಡ ಜನ ಟೀಕೆ ಮಾಡದೆ ಬಿಡಲಿಲ್ಲ ಅಂದ ಮೇಲೆ ನಮ್ಮ, ನಿಮ್ಮಂತಹ ಜನ ಸಾಮಾನ್ಯರ ಪಾಡೇನು?
ಟೀಕೆಗಳನ್ನು ಜೀರ್ಣ ಮಾಡಿಕೊಳ್ಳುವುದನ್ನು ಕಲಿಯಬೇಕು
ಒಂದು ಹಂತದವರೆಗೆ ಟೀಕೆಗಳನ್ನು ಜೀರ್ಣ ಮಾಡಿಕೊಳ್ಳುವುದು ನಿಮಗೆ ಕಷ್ಟ ಆಗಬಹುದು. ಯಾರೋ ಟೀಕೆ ಮಾಡಿದರು ಎಂದು ಮೂಲೆಯಲ್ಲಿ ಅಳುತ್ತ ಕೂರಬೇಡಿ. ನೀವು ಬೆಳೆಯುತ್ತಾ ಹೋದಂತೆ ಆ ಟೀಕೆಗಳನ್ನು ಅರಗಿಸಿಕೊಳ್ಳಲು ಕಲಿಯಲೇ ಬೇಕು. ಆ ಟೀಕೆಗಳಲ್ಲಿ ನಿಮ್ಮನ್ನು ತಿದ್ದಿಕೊಳ್ಳುವ ಅಂಶಗಳು ಇವೆಯಾ? ಎಂದು ಗಮನಿಸಿ ಅವುಗಳನ್ನು ಅಳವಡಿಸಿಕೊಂಡು ಮುಂದೆ ಹೋಗುತ್ತಾ ಇರಬೇಕು. ನಿಮ್ಮ ಬೆನ್ನ ಹಿಂದೆ ನಿಂತು ಬೈಯ್ಯುವ ಮಂದಿ ನಿಮ್ಮ ಮುಂದೆ ನಿಂತು ಟೀಕೆ ಮಾಡುವ ಧೈರ್ಯ ಹೊಂದಿಲ್ಲ ಎಂದು ನಿಮಗೆ ಅರ್ಥ ಆದರೆ ಸಾಕು. ಅವರು ಮಾಡುವ ಟೀಕೆಗಳು, ಬೈಗುಳ, ಬರೆಯುವ ಅನಾಮಧೇಯ ಪತ್ರಗಳು, ನಿಂದನೆಗಳು ನಿಮ್ಮ ಆತ್ಮಸಾಕ್ಷಿ ಸ್ಟ್ರಾಂಗ್ ಆಗಿರುವ ತನಕ ನಿಮ್ಮನ್ನು ಏನೂ ಮಾಡಲಾರವು ಎಂದು ನಿಮಗೆ ಗೊತ್ತಿರಲಿ.
ಅಂತವರ ಮುಂದೆ ನಿಂತು ನೀವು ‘ಹಾಗಲ್ಲ ಹೀಗೆ ‘ಎಂದು ಸಮರ್ಥನೆ ಮಾಡಲು ಹೋದರೆ ನಿಮ್ಮತನ ಕಳೆದುಕೊಳ್ಳುತ್ತೀರಿ. ಅಂತವರ ಮುಂದೆ ನೀವು ನಿಂತು ನಿಮ್ಮ ಒಳ್ಳೆಯತನವನ್ನು ಸಾಬೀತುಪಡಿಸುವ ಯಾವ ಕೆಲಸವನ್ನೂ ಮಾಡುವುದು ಬೇಡ. ಪ್ರತೀ ಬಾರಿಯೂ ನೀವು ಮಾಡದೇ ಇರುವ ತಪ್ಪಿಗೆ ನೀವೇ ಕ್ಷಮೆ ಕೇಳುವುದು ಒಳ್ಳೇದಲ್ಲ. ಸಂಬಂಧಗಳು ಉಳಿಯಬೇಕು ಹೌದು. ಆದರೆ ಆ ಕಾಳಜಿ ನಿಮ್ಮಲ್ಲಿ ಮಾತ್ರ ಇದ್ದರೆ ಪ್ರಯೋಜನ ಇಲ್ಲ. ಇಬ್ಬರಲ್ಲಿಯೂ ಸಂಬಂಧಗಳನ್ನು ಉಳಿಸುವ ಕಾಳಜಿ ಇದ್ದರೆ ಮಾತ್ರ ಸಂಬಂಧಗಳು ಉಳಿಯುತ್ತವೆ. ನೀವೊಬ್ಬರೇ ಹೆಣಗಬೇಕು ಎಂದಾದರೆ ಆ ಸಂಬಂಧಗಳಿಂದ ತಕ್ಷಣ ಹೊರಬನ್ನಿ. ಆ ಬಗ್ಗೆ ಯಾವ ವಿಷಾದವೂ ನಿಮ್ಮಲ್ಲಿ ಬೇಡ.
ಇದನ್ನೂ ಓದಿ : Raja Marga Column : ಅಪವಾದ ಎಲ್ಲರಿಗುಂಟು ಈ ಲೋಕದ ದೃಷ್ಟಿಯಲಿ; ಗೆಲ್ಲೋದು ಹೇಗೆ?
ಅಸೂಯಾ ಲಕ್ಷ್ಮಿ ಎಲ್ಲ ಕಡೆಯಲ್ಲಿಯೂ ಇರುತ್ತಾಳೆ
ನಮಗೆ ಆದಿಲಕ್ಷ್ಮಿಯಿಂದ ಆರಂಭ ಮಾಡಿ ಧನಲಕ್ಷ್ಮಿಯವರೆಗೆ ಎಂಟು ಲಕ್ಷ್ಮಿಯರು ಗೊತ್ತು. ಆದರೆ ಈ ಒಂಬತ್ತನೇ ಲಕ್ಷ್ಮಿಯ ಹೆಸರು ‘ಅಸೂಯಾ ಲಕ್ಷ್ಮಿ’ ಎಂದು! ಆಕೆ ನಿಮ್ಮ ಸುತ್ತಮುತ್ತ ಎಲ್ಲ ಕಡೆಗಳಲ್ಲಿಯೂ ಇರುತ್ತಾಳೆ. ನಿಮ್ಮ ವ್ಯಕ್ತಿತ್ವ, ನಿಮ್ಮ ಸೌಂದರ್ಯ, ನಿಮ್ಮ ಆದಾಯ, ನಿಮ್ಮ ಪ್ರತಿಭೆ, ನಿಮ್ಮ ಜನಪ್ರಿಯತೆ ಇನ್ನೊಬ್ಬರ ಹೊಟ್ಟೆ ಕಿಚ್ಚಿಗೆ ಕಾರಣ ಆದರೆ ಅದಕ್ಕೆ ನೀವು ಹೊಣೆ ಅಲ್ಲವೇ ಅಲ್ಲ! ಅಸೂಯೆ ಹೊಂದಿರುವ ಪ್ರತಿಯೊಬ್ಬರ ಮಾತಿನಲ್ಲಿ ನಿಮ್ಮ ಬಗ್ಗೆ ತೀವ್ರವಾದ ಅಸಹನೆ, ಕೃತಕವಾದ ನಗು, ಅನಗತ್ಯವಾಗಿ ನಿಮ್ಮನ್ನು ಹೊಗಳುವ ಪ್ರವೃತ್ತಿ ಇದ್ದರೆ ಅದು ನಿಮಗೆ ತಕ್ಷಣ ಅರಿವಿಗೆ ಬರಬೇಕು. ಅಂತವರ ಬಗ್ಗೆ ತುಂಬಾ ಎಚ್ಚರ ಇರಬೇಕು. ಅಂತವರನ್ನು ನಿರ್ಲಕ್ಷ್ಯ ಮಾಡಿ ಮುಂದೆ ಹೋದರೆ ನಿಮ್ಮ ಮಾನಸಿಕ ನೆಮ್ಮದಿ ಉಳಿಯುತ್ತದೆ.
ನಿಮ್ಮ ಒಳ್ಳೆಯತನವನ್ನು ಗೌರವಿಸುವ ಮಂದಿ ನಿಮ್ಮವರು
ಅವರನ್ನು ನಿಮ್ಮ ಭಾವಕೋಶದ ಒಳಗೆ ಇರಿಸಿಕೊಳ್ಳುವುದು ನಿಮಗೆ ಶ್ರೇಯಸ್ಕರ. ಅವರ ಮಾತು, ಕೃತಿಯಲ್ಲಿ ಯಾವ ಕೃತಕತೆಯೂ ಇರುವುದಿಲ್ಲ. ಅದೇ ಹೊತ್ತಿಗೆ ನಿಮ್ಮ ಒಳ್ಳೆಯತನವನ್ನು ಯೂಸ್ ಮಾಡಿ ಬಿಸಾಡುವ ಮಂದಿಯ ಬಗ್ಗೆ ತೀವ್ರವಾದ ಎಚ್ಚರ ಇರಲಿ. ಅಂತವರಿಂದ ನೀವು ನೋವು ಪಡುತ್ತಾ ಇರುವ ಅಗತ್ಯವೇ ಇಲ್ಲ. ಆ ರೀತಿಯ ಸಂಬಂಧಗಳನ್ನು ನೀವು ಕಳಚಿಕೊಂಡರೆ ಯಾವ ದುಃಖವನ್ನು ಪಡಬೇಡಿ. ಏಕೆಂದರೆ ಪ್ರಪಂಚ ವಿಶಾಲವಾಗಿದೆ. ವ್ಯಕ್ತಿಗಳ ನಡವಳಿಕೆಗಳನ್ನು ಓದಲು ನೀವು ಬೇಗ ಕಲಿತಷ್ಟು ಒಳ್ಳೆಯದು.
ಹೂವಿಗಿಂತ ಮೃದು, ವಜ್ರಕ್ಕಿಂತ ಕಠಿಣ
ಇವೆರಡೂ ನಿಮ್ಮ ನಡವಳಿಕೆಯ ಭಾಗ ಆಗಿರಬೇಕು. ಎಲ್ಲಿ ಮೃದುವಾಗಬೇಕು, ಎಲ್ಲಿ ಕಠಿಣ ಆಗಬೇಕು ಎಂದು ನಿರ್ಧಾರ ಮಾಡುವವರು ನೀವೇ. ಯಾವ ಪ್ರತಿಫಲದ ಅಪೇಕ್ಷೆ ಇಲ್ಲದೇ ನಿಮ್ಮನ್ನು ಪ್ರೀತಿಸುವ ಮಂದಿ ಜಗತ್ತಿನ ಎಲ್ಲೆಡೆಯೂ ಇರುತ್ತಾರೆ. ಅವರನ್ನು ಎಷ್ಟು ಸಮಸ್ಯೆ ಎದುರಾದರೂ ಕಳೆದುಕೊಳ್ಳಬೇಡಿ. ನೇರವಾಗಿ ಮಾತಾಡುವ ಮಂದಿ ಯಾವಾಗಲೂ ನಿಮ್ಮನ್ನು ಬಿಟ್ಟು ಹೋಗುವುದಿಲ್ಲ ಅನ್ನುವುದೇ ಇಂದಿನ ಭರತವಾಕ್ಯ.
You’ll be called vindictive if you stand up for what’s right, selfish if you do what’s best for you, cruel for reacting to mistreatment, difficult for having strong boundaries, and crazy when they know you’re right. This is why it is truly important to know yourself.
— 🔮✨ (@TheOracleReadsU) February 26, 2024