Site icon Vistara News

Raja Marga Column: ಹದಿಹರೆಯದವರ ಭಾವನಾ ಸ್ಫೋಟ ಹ್ಯಾಂಡಲ್ ಮಾಡೋದು ಹೇಗೆ?

Adolescent age problems parenting tips

ಹಿಂದಿನ ಕಾಲದಲ್ಲಿ ಸಣ್ಣ ಮಕ್ಕಳನ್ನು ನೋಡಿಕೊಳ್ಳುವುದು ಬಹಳ ಕಷ್ಟ ಎಂಬ ಅಭಿಪ್ರಾಯ ಇತ್ತು. ಆದರೆ ಈಗ ಪರಿಸ್ಥಿತಿ ಉಲ್ಟಾ ಆಗಿದೆ. ತಮ್ಮ ಮಕ್ಕಳು ಹದಿಹರೆಯವನ್ನು (Adolescent age) ಪ್ರವೇಶ ಮಾಡಿದರು ಅಂದರೆ ಸಾಕು, ಹೆತ್ತವರ ಒತ್ತಡ ಜಾಸ್ತಿ ಆಗುತ್ತದೆ. ಅದರಲ್ಲಿಯೂ 12-14 ವಯಸ್ಸಿನ ಮಕ್ಕಳನ್ನು ಹ್ಯಾಂಡಲ್ ಮಾಡೋದು ತುಂಬಾ ದೊಡ್ಡ ಸವಾಲು. ಇದು ಗೊಂದಲ, ಒತ್ತಡ, ಭಾವ ಸ್ಫೋಟ (Emotional outburst) ಮತ್ತು ಆಕರ್ಷಣೆ ಇವುಗಳ ಒಟ್ಟು ಪಾಕ ಆಗಿರುತ್ತದೆ. ಇದನ್ನು ಸರಿಯಾಗಿ ನಿರ್ವಹಣೆ ಮಾಡಲು ಹೆತ್ತವರಿಗೆ ಜ್ಞಾನಕ್ಕಿಂತ ಕಾಮನ್ ಸೆನ್ಸ್ (Common sense) ಸಾಕು. ನನ್ನ ಅನುಭವದ ಮಂಥನ ನಡೆಸಿ ಹದಿಹರೆಯದ ನಿರ್ವಹಣೆ (Managing adolescent children) ಮಾಡಲು ಹೆತ್ತವರಿಗೆ ಈ ಟಿಪ್ಸ್ (Tips to parents) ನೀಡುತ್ತಿದ್ದೇನೆ (Raja Marga Column).

1. ಆ ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಅವರ ಅಭಿಪ್ರಾಯಗಳನ್ನು ಗೌರವಿಸಿ.
2. ಈ ವಯಸ್ಸಿನ ಮಕ್ಕಳು ಸ್ವಾತಂತ್ರ್ಯ ಮತ್ತು ಖಾಸಗಿತನ ಇಷ್ಟ ಪಡುತ್ತಾರೆ. ಅಪ್ಪ, ಅಮ್ಮ ಅಥವಾ ಬೇರೆ ಯಾರಾದರೂ ಅವರ ಖಾಸಗಿ ವಲಯದಲ್ಲಿ ಮೂಗು ತೂರಿಸುವುದು ಅವರಿಗೆ ಇಷ್ಟ ಆಗೋದಿಲ್ಲ.
3. ಹೆತ್ತವರು ಕಡಿಮೆ ಮಾತಾಡಿ ಹೆಚ್ಚು ಆಲಿಸುವಿಕೆ ಮಾಡಿದರೆ ಒಳ್ಳೇದು. ನನ್ನ ಮಾತುಗಳನ್ನು ಹೆತ್ತವರು ತಾಳ್ಮೆಯಿಂದ ಆಲಿಸುತ್ತ ಇದ್ದಾರೆ ಅನ್ನೋದು ಆ ವಯಸ್ಸಿನ ಮಕ್ಕಳಿಗೆ ತುಂಬಾ ಖುಷಿ ಕೊಡುತ್ತದೆ.
4. ಸುತ್ತಿ ಬಳಸಿ ಮಾತಾಡುವುದು ಅವರಿಗೆ ಇಷ್ಟ ಆಗೋದಿಲ್ಲ. ಏನಿದ್ದರೂ ನೇರ ಮಾತು ಅವರಿಗೆ ಇಷ್ಟ.
5. ಅವರಿಗೆ ಪ್ರೀಚಿಂಗ್ ಇಷ್ಟ ಆಗೋದಿಲ್ಲ. ಏನಿದ್ದರೂ ಅವರಿಗೆ ಪ್ರಾಕ್ಟೀಸ್ ಇಷ್ಟ ಆಗುತ್ತದೆ.

6. ಪ್ರತಿಯೊಬ್ಬ ಹದಿಹರೆಯದ ಮಗು ಕೂಡ ಅನನ್ಯ ಆಗಿರುತ್ತದೆ. ಬೇರೆ ಯಾರ ಜೊತೆಗೂ ಅವರನ್ನು ಹೋಲಿಕೆ ಮಾಡೋದು ಅವರಿಗೆ ಇಷ್ಟ ಆಗೋದೇ ಇಲ್ಲ.
7. ಅವರು ಸಹಜವಾದ ಪ್ರೀತಿಗೆ ಮಾತ್ರ ಬಗ್ಗುತ್ತಾರೆ. ಮುಖವಾಡದ ಪ್ರೀತಿಗೆ ಅಲ್ಲ.
8. ಅವರು ಯಾಕೆ ಮತ್ತು ಹೇಗೆ ಎಂಬ ಪ್ರಶ್ನೆಗಳನ್ನು ಹೆಚ್ಚು ಕೇಳುತ್ತಾರೆ. ಕುತೂಹಲ ಅವರ ಟ್ರೇಡ್ ಮಾರ್ಕ್.
9. ಸಣ್ಣ ಪುಟ್ಟ ಜವಾಬ್ದಾರಿ ಕೊಟ್ಟರೆ ಅದನ್ನು ಅವರು ತುಂಬಾ ಚೆನ್ನಾಗಿ ಅದನ್ನು ಪೂರ್ತಿ ಮಾಡುತ್ತಾರೆ.
10. ಟೀಮ್ ವರ್ಕ್ ಅಂದರೆ ಅವರಿಗೆ ಪ್ರಾಣ. ಆ ಟೀಂಗಳಲ್ಲಿ ಹುಡುಗ, ಹುಡುಗಿ ಇಬ್ಬರೂ ಇದ್ದರೆ ಫಲಿತಾಂಶ ಇನ್ನೂ ಅದ್ಭುತ ಆಗಿರುತ್ತದೆ.

11. ಕ್ಷಣ ಕ್ಷಣದ ಭಾವನಾ ಸ್ಫೋಟ ಅವರಲ್ಲಿ ಎದ್ದು ಕಾಣುವ ಅಂಶ. ಆಗೆಲ್ಲ ತಾಳ್ಮೆ ವಹಿಸಬೇಕಾದದ್ದು ಖಂಡಿತ ಹೆತ್ತವರೇ!
12. ಅವರು ಎಲ್ಲ ಕಡೆಯಲ್ಲಿ ಫೋಕಸ್ ಆಗಿರಲು ಆಸೆ ಪಡುತ್ತಾರೆ. ಎಲ್ಲಿ ಹೋದರೂ ಅವರೇ ಆಕರ್ಷಣೆಯ ಕೇಂದ್ರ ಆಗಿರಬೇಕು ಅನ್ನೋದು ಅವರ ಮರ್ಜಿ.
13. ದಿನದ ಹೆಚ್ಚು ಹೊತ್ತು ಅವರು ಕನ್ನಡಿಯ ಮುಂದೆ ಕಳೆದರೆ ಅವರನ್ನು ಆಕ್ಷೇಪ ಮಾಡಲು ಹೋಗಬೇಡಿ. ಏಕೆಂದರೆ ಆ ವಯಸ್ಸಲ್ಲಿ ಪ್ರತೀ ಒಬ್ಬರೂ ತಮ್ಮ ಐಡೆಂಟಿಟಿ ಹುಡುಕುತ್ತಾರೆ.
14. ಹುಡುಗರಿಗೆ ಹುಡುಗಿಯರ ಕಡೆಗೆ, ಹುಡುಗಿಯರಿಗೆ ಹುಡುಗರ ಕಡೆಗೆ ಆಕರ್ಷಣೆ ಸಹಜ. ಅದು ಸೃಷ್ಟಿ ನಿಯಮ. ಈ ವಿಷಯದಲ್ಲಿ ಸಣ್ಣ ಗೈಡೆನ್ಸ್ ಬೇಕು.
15. ಈ ವಯಸ್ಸಿನ ಮಕ್ಕಳು ತಪ್ಪು ಮಾಡುತ್ತಾ ಕಲಿಯಲು ಇಷ್ಟ ಪಡುತ್ತಾರೆ. ಅವರಿಗೆ ತಪ್ಪಿತಸ್ಥ ಮನೋಭಾವ ಅಂಟಿಕೊಳ್ಳುವುದು ಹೆಚ್ಚು. ಅದರಿಂದ ಹೊರಬರಲು ಆಗದೆ ಅವರು ಒದ್ದಾಡುವುದು ಹೆಚ್ಚು. ಆಗ ಹೆತ್ತವರು ಸಣ್ಣ ನೈತಿಕ ಬೆಂಬಲ ಕೊಟ್ಟರೆ ಬೇಗ ಎದ್ದು ಬರುತ್ತಾರೆ.

16. ಹೆತ್ತವರ, ಶಿಕ್ಷಕರ ಮೆಚ್ಚುಗೆ ಮಾತುಗಳು ಅವರಿಗೆ ಸೂಪರ್ ಟಾನಿಕ್ ಆಗಿರುತ್ತವೆ. ಟೀಕೆ ಅವರು ಬೇಗ ಜೀರ್ಣ ಮಾಡಿಕೊಳ್ಳುವುದಿಲ್ಲ.
17. ಚಟುವಟಿಕೆ ಆಧಾರಿತವಾಗಿ ಅವರು ಹೆಚ್ಚು ಕಲಿಯುತ್ತಾರೆ. ಪಾಸೀವ್ ಲರ್ನಿಂಗ್ ಅವರಿಗೆ ಜಿಗುಪ್ಸೆ ತರುತ್ತದೆ.
18. ಹಣಕಾಸು ನಿರ್ವಹಣೆಯಲ್ಲಿ ಈ ವಯಸ್ಸಿನ ಗೆಳೆಯರು ತುಂಬಾ ವೀಕು ಕಣ್ರೀ.
19. ಈ ವಯಸ್ಸಿನವರು ಕೀಳರಿಮೆ ಅಥವಾ ಮೇಲರಿಮೆಗಳಿಂದ ಬಳಲುತ್ತಾರೆ. ಇಲ್ಲಿ ಅವರಿಗೆ ಮೆಂಟರಿಂಗ್ ಬೇಕು.
20. ಈ ವಯಸ್ಸಿನವರಿಗೆ ಲೈಂಗಿಕತೆಯ ಬಗ್ಗೆ ಹೆಚ್ಚು ಕುತೂಹಲ ಮತ್ತು ಗೊಂದಲ ಇರುತ್ತದೆ. ಇಲ್ಲಿ ಕೂಡ ಗೈಡೆನ್ಸ್ ಬೇಕು.

21. ತಮ್ಮ ಮಕ್ಕಳನ್ನು ಎಷ್ಟು ನಂಬಬೇಕು ಮತ್ತು ಎಷ್ಟು ಮಾತ್ರ ನಂಬಬೇಕು ಎಂಬುದನ್ನು ಹೆತ್ತವರು ತಮ್ಮ ವಿವೇಚನೆಗೆ ಬಿಡುವುದು ಒಳ್ಳೆಯದು. ಮಕ್ಕಳ ಬ್ಯಾಗ್, ವ್ಯಾನಿಟಿ ಬ್ಯಾಗ್ ಪದೇಪದೆ ಚೆಕ್ ಮಾಡುವುದು ಅತ್ಯಂತ ಅಪಾಯಕಾರಿ ಆಗಬಹುದು.
22. ಹದಿಹರೆಯದ ಮಕ್ಕಳು ವೈಜ್ಞಾನಿಕವಾದ ಸಂಗತಿಗಳನ್ನು ಮಾತ್ರ ಒಪ್ಪಿಕೊಳ್ಳುತ್ತಾರೆ. ಮೌಢ್ಯಗಳನ್ನು ಅವರು ಒಪ್ಪಿಕೊಳ್ಳುವುದೇ ಇಲ್ಲ.
23. ಇವರು ಹೆಚ್ಚು ಕ್ರಿಯೇಟಿವ್ ಆಗಿರುತ್ತಾರೆ. ಅವರಿಗೆ ಯಾಂತ್ರಿಕ ಕೆಲಸ, ಬಾಯಿಪಾಠ ಮಾಡಿಸುವುದು ಇತ್ಯಾದಿ ಮಾಡಬೇಡಿ.
24. ನಾವು ನಿನಗಾಗಿ ತ್ಯಾಗ ಮಾಡ್ತಾ ಇದ್ದೇವೆ, ಕಷ್ಟ ಪಡುತ್ತಾ ಇದ್ದೇವೆ ಎನ್ನುವುದನ್ನು ಅವರಿಗೆ ಪದೇಪದೆ ಹೇಳುತ್ತಾ ಹೋಗಬೇಡಿ. ಅವರ ವೀಕ್ಷಣಾ ಸಾಮರ್ಥ್ಯ ಅದ್ಭುತವೇ ಆಗಿರುತ್ತದೆ. ಅವರಿಗೆ ಎಲ್ಲವೂ ಅರ್ಥ ಆಗುತ್ತದೆ.
25. ಹೆತ್ತವರು ತಮ್ಮ ಹದಿಹರೆಯದ ಮಕ್ಕಳಿಗೆ ಪದೇಪದೆ ಹೇಳಬೇಕಾದ ಮಾತುಗಳು – ನನಗೆ ನಿಮ್ಮ ಮೇಲೆ ಭರವಸೆ ಇದೆ. ನೀನು ಖಂಡಿತವಾಗಿ ಗೆದ್ದು ಬರುತ್ತೀಯಾ!

26. ಯಾವುದೇ ಸ್ಪರ್ಧೆಗೆ ಅವರು ಹೊರಟು ನಿಂತಾಗ ಹೆತ್ತವರು ಹೇಳಬೇಕಾದ ಮಾತು –
ಫಲಿತಾಂಶದ ಬಗ್ಗೆ ವರಿ ಮಾಡಬೇಡ. ನಿನ್ನ ಮ್ಯಾಕ್ಸಿಮಮ್ ಕೊಡಲು ಪ್ರಯತ್ನ ಮಾಡು.
27. ಪರೀಕ್ಷೆಗೆ ಹೊರಟಾಗ ನೀವು ನಿಮ್ಮ ಹದಿಹರೆಯದ ಮಗುವಿಗೆ ಮಾಡಬೇಕಾದ ಆಶೀರ್ವಾದ – ಪರೀಕ್ಷೆಗೆ ಚೆನ್ನಾಗಿ ಓದಿದ್ದೀಯ. ಚೆನ್ನಾಗಿ ಬರಿ. ನನ್ನ ಪ್ರೀತಿ ನೀನು ಪಡೆಯುವ ಅಂಕಗಳನ್ನು ಡಿಪೆಂಡ್ ಆಗಿಲ್ಲ!
28. ಮಕ್ಕಳಿಗೆ ಪಾಕೆಟ್ ಮನಿ ಎಷ್ಟು ಕೊಡಬೇಕು? ಹೇಗೆ ಕೊಡಬೇಕು? ನೀವೇ ನಿರ್ಧಾರ ಮಾಡಿ. ಆದರೆ ದುಡ್ಡಿನ ಲೆಕ್ಕ ಇಡುವುದನ್ನು ಖಂಡಿತ ಕಲಿಸಿ.
29. ನಿಮ್ಮ ಮಕ್ಕಳ ಓರಗೆಯ ಗೆಳೆಯರನ್ನು ಟೀಕೆ ಮಾಡುವುದು, ಬೈಯ್ಯುವುದು ಇತ್ಯಾದಿ ಖಂಡಿತವಾಗಿ ಮಾಡಬೇಡಿ.
30. ಒತ್ತಡ ಹಾಕುವುದರಿಂದ ಯಾವುದೇ ಮಗುವಿನ ನಿಜವಾದ ಸಾಮರ್ಥ್ಯ ಹೊರತರಲು ಸಾಧ್ಯವೇ ಇಲ್ಲ. ಸಹಜವಾದ ಮತ್ತು ಪ್ರೋತ್ಸಾಹದ ವಾತಾವರಣ ಮಾತ್ರ ಮಕ್ಕಳನ್ನು ಗೆಲ್ಲಿಸುತ್ತದೆ.

ಇದನ್ನೂ ಓದಿ : Raja Marga Column : ನರ್ಗೀಸ್‌ ಮೊಹಮ್ಮದಿ; ಜೈಲಿನಿಂದಲೇ ನೊಬೆಲ್‌ ಗೆದ್ದ ಬೆಂಕಿ ಚೆಂಡು

31. ಈ ವಯಸ್ಸಿನ ಮಕ್ಕಳು ಹೆಚ್ಚು ಭ್ರಮೆಯಲ್ಲಿ ತೇಲುತ್ತಾ ಇರುತ್ತಾರೆ. ಅವರಿಗೆ ವಾಸ್ತವದ ಪ್ರಜ್ಞೆ ನಾವೇ ಮಾಡಿಸಬೇಕು.
32. ಸುಂದರವಾದ ಕನಸು ಕಾಣುವುದು ಅವರ ಜನ್ಮ ಸಿದ್ಧ ಹಕ್ಕು. ಅವುಗಳನ್ನು ಬರೆದು ಇಡಲು ಹೇಳಿ.
33. ಈ ವಯಸ್ಸಿನ ಮಕ್ಕಳು ಹೆಚ್ಚು ಓದಬೇಕಾದದ್ದು ಆತ್ಮ ಚರಿತ್ರೆಯ ಪುಸ್ತಕಗಳನ್ನು. ಅವರಿಗೆ ಅಂತಹ ಪುಸ್ತಕಗಳನ್ನು ಕೊಟ್ಟು ಓದಲು ಪ್ರೋತ್ಸಾಹಿಸಿ.
ಸದ್ಯಕ್ಕೆ ಇಷ್ಟು ಸಾಕು. ಮುಂದೆ ಇನ್ನಷ್ಟು ಬರೆಯೋದಿದೆ.

Exit mobile version