Site icon Vistara News

ರಾಜ ಮಾರ್ಗ ಅಂಕಣ| ಧೀರೂಭಾಯಿ ಅಂಬಾನಿ ಮಾನವೀಯ ಮುಖಗಳು, ಜವಾನನಿಗೂ ಬಹುವಚನದ ಗೌರವ

Dhirubhai Ambani

ಭಾರತದ ಉದ್ಯಮರಂಗದ ಉನ್ನತಿಯಲ್ಲಿ ಧೀರೂಭಾಯಿ ಅಂಬಾನಿ ಅವರ ಕೊಡುಗೆ ಭಾರಿ ದೊಡ್ಡದು. ರಿಲಯನ್ಸ್ ಕಂಪೆನಿಯ ಮೂಲಕ ಆರಂಭವಾದ ಅವರ ಯಶೋಗಾಥೆಯು ಮುಂದೆ ತ್ರಿವಿಕ್ರಮ ರೂಪದಲ್ಲಿ ಬೆಳೆದು ಅವರು ಬಹು ದೊಡ್ಡ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ್ದರು.

ಅವರು ತನ್ನ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಜೊತೆ ಹೊಂದಿದ್ದ ಮಧುರ ಸಂಬಂಧಗಳ ಬಗ್ಗೆ ನೂರಾರು ನಿದರ್ಶನಗಳು ದೊರೆಯುತ್ತವೆ. ಅವರು ತನ್ನ ಕಂಪೆನಿಗಳ ಎಲ್ಲ ಹಿರಿಯ, ಕಿರಿಯ ನೌಕರರನ್ನು ಪೂರ್ಣ ಹೆಸರಿನಿಂದ ಕರೆಯುತ್ತಿದ್ದರು. ಒಬ್ಬ ಪಿಯೋನ್, ಜವಾನನನ್ನು ಕೂಡ ಬಹುವಚನದಿಂದ ಕರೆಯುತ್ತಿದ್ದರು. ಯಾರನ್ನೂ ನೌಕರ ಎಂದು ಕರೆಯದೆ ನನ್ನ ‘ಸಕ್ಸಸ್ ಪಾಲುದಾರರು’ ಎಂದೇ ಕರೆಯುತ್ತಿದ್ದರು!

ಒಮ್ಮೆ ಅವರ ಜೊತೆ ಕೆಲಸ ಮಾಡುತ್ತಿದ್ದ ಅವರ ಆಪ್ತ ಸಹಾಯಕ ಯಾವುದೋ ಒಂದು ವಿಷಯಕ್ಕೆ ಧೀರೂಭಾಯಿ ಅವರ ಜೊತೆ ಸಿಟ್ಟು ಮಾಡಿಕೊಂಡರು. ಮನಸ್ತಾಪ ದೊಡ್ಡದಾಯಿತು. ಅವರು ರಾಜೀನಾಮೆಯನ್ನು ಕೊಟ್ಟು ಅವರ ಊರಿಗೆ ಹೋದರು. ಅವರನ್ನು ತಡೆಯುವ ಭಾರೀ ಪ್ರಯತ್ನವನ್ನು ಧೀರೂಭಾಯಿ ಮಾಡಿದರು. ಆದರೆ ಆ ಆಪ್ತ ಸಹಾಯಕರು ಕೇಳದೆ ಹೋಗಿಯೇ ಬಿಟ್ಟರು.

ಅವರು ಅವರ ಊರಿಗೆ ಹೋಗಿ ಬೇರೆ ಬೇರೆ ಬ್ಯುಸಿನೆಸ್‌ ಗಳನ್ನು ಮಾಡಿದರು. ಗಂಡ ಹೆಂಡತಿ ಸೇರಿ ಒಂದು ಕೈಗಾರಿಕೆ ಕೂಡ ಆರಂಭ ಮಾಡಿದರು. ಆದರೆ ದುರದೃಷ್ಟ ಅವರಿಗಿಂತ ಮುಂದೆ ಇತ್ತು. ಎಲ್ಲವೂ ಕೈಕೊಟ್ಟವು. ಬ್ಯಾಂಕ್ ಸಾಲ ಕೈ ಮೀರಿತು. ಸಾಲಗಾರರ ಉಪಟಳ ಹೆಚ್ಚಾಯಿತು. ಎಲ್ಲ ಉದ್ಯಮವೂ ನಷ್ಟವಾಗಿ ಆ ದಂಪತಿಗಳು ಅಕ್ಷರಶಃ ಬೀದಿಗೆ ಬಂದರು. ಬದುಕುವ ಎಲ್ಲ ದಾರಿಗಳೂ ಮುಚ್ಚಿಹೋಗಿದ್ದವು.

ಕೊನೆಯದಾಗಿ ಆ ಗಂಡ ಹೆಂಡತಿ ತಮ್ಮ ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡುತ್ತಾರೆ. ಮಾನಸಿಕವಾಗಿ ಸಾಯಲು ಸಿದ್ಧತೆ ನಡೆಸುತ್ತಾರೆ. ಮಕ್ಕಳನ್ನು ಕೂಡ ಸಾಯಿಸುವ ಯೋಚನೆ ಮಾಡುತ್ತಾರೆ. ಅವರಿಗೆ ಬೇರೆ ಯಾವ ದಾರಿ ಕೂಡ ಉಳಿದಿರಲಿಲ್ಲ. ಅದೊಂದು ದಿನ ಸಂಜೆ ಅವರ ಮನೆಯ ನಂಬರಿಗೆ ಒಂದು ಕಾಲ್ ಬಂದಿತು. ಆ ಕಡೆಯಿಂದ ಸ್ವತಃ ಧೀರೂಭಾಯಿ ಅಂಬಾನಿ ಮಾತಾಡುತ್ತಿದ್ದರು. ಅವರು ಹೇಳಿದ್ದು ಒಂದೇ ವಾಕ್ಯ – “ಮೈ ಡಿಯರ್ ಫ್ರೆಂಡ್, ಭರವಸೆ ಕಳೆದುಕೊಳ್ಳಬೇಡಿ. The doors are open. You can come back!”

ಆಶ್ಚರ್ಯ ಎಂದರೆ ಧೀರೂಭಾಯಿ ಅವರ ಸಹಾಯ ಕೇಳಿ ಅವರು ಎಂದೂ ಕಾಲ್ ಮಾಡಿರಲೇ ಇಲ್ಲ. ಆದರೂ ಅವರು ರಾಜೀನಾಮೆ ಕೊಟ್ಟು ಊರಿಗೆ ಹೋದ ಕ್ಷಣದಿಂದ ಅವರನ್ನು ಧೀರೂಭಾಯಿ ದೂರದಿಂದಲೇ ಗಮನಿಸುತ್ತಿದ್ದರು!

ಈ ಭರವಸೆಯ ಮಾತುಗಳು ಆ ಕುಟುಂಬದ ಕಣ್ಣುಗಳನ್ನು ಒದ್ದೆ ಮಾಡಿದ್ದವು. ಅವರು ಮತ್ತೆ ಧೀರೂಭಾಯಿ ಅವರ ಆಫೀಸಿಗೆ ಹೋಗಿ ಕ್ಷಮೆ ಕೇಳಿದರು, ಮತ್ತು ಅವರ ಕೊನೆಯ ಉಸಿರಿನವರೆಗೂ ಅವರ ಆಪ್ತ ಸಹಾಯಕರಾಗಿ ಮುಂದುವರಿದರು.

ಧೀರೂಭಾಯಿ ಅಂಬಾನಿ ಐಕಾನ್ ಆದದ್ದು ಸುಮ್ಮನೆ ಅಲ್ಲ!

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ನಾನು ಅವರ ವಿವೇಚನೆಗೆ ಬಿಟ್ಟಿದ್ದೇನೆ ಅಂದಿದ್ದರು ವಾಜಪೇಯಿ!

Exit mobile version