ಈ ವರ್ಷ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು (National Film Awards 2023) ಘೋಷಣೆ ಆದಾಗ ಒಂದು ಪ್ರಶಸ್ತಿಯ ಮೇಲೆ ಎಲ್ಲರಿಗೂ ಭಾರೀ ಕುತೂಹಲ ಇತ್ತು. ಅದು ಅತ್ಯುತ್ತಮ ನಟ ಪ್ರಶಸ್ತಿ (Best actor award). ‘ಜೈ ಭೀಮ್’ ಚಿತ್ರದ ನಟನೆಗಾಗಿ ತಮಿಳು ನಟ ಸೂರ್ಯ, ‘ಆರ್‌ಆರ್‌ಆರ್’ ಚಿತ್ರದಲ್ಲಿನ ಅಭಿನಯಕ್ಕಾಗಿ ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್, ‘ಕರ್ಣನ್’ ಚಿತ್ರದಲ್ಲಿನ ಆಕ್ಟಿಂಗ್‌ಗಾಗಿ ಧನುಷ್, ‘ಪುಷ್ಪ: ದಿ ರೈಸ್’ (Pushpa: The Rise) ಚಿತ್ರದಲ್ಲಿನ ಅಭಿನಯಕ್ಕಾಗಿ ಅಲ್ಲು ಅರ್ಜುನ್, ‘ಮಾನಾಡು’ ಚಿತ್ರಕ್ಕಾಗಿ ಸಿಲಂಬರಸನ್, ‘ಸರ್ಪಟ್ಟಾ’ ಚಿತ್ರಕ್ಕಾಗಿ ಆರ್ಯ ಹಾಗೂ ‘ನಾಯಟ್ಟು’ ಚಿತ್ರಕ್ಕಾಗಿ ಜೋಜು ಜಾರ್ಚ್ ‘ಅತ್ಯುತ್ತಮ ನಟ’ ಪ್ರಶಸ್ತಿಗಾಗಿ ನಾಮಿನೇಟ್ ಆಗಿದ್ದರು. ಆದರೆ ಅವರೆಲ್ಲರನ್ನೂ ಹಿಂದೆ ಹಾಕಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Stylish Star Allu Arjun) ಆ ರಾಷ್ಟ್ರಪ್ರಶಸ್ತಿಯನ್ನು ಗೆದ್ದಾಗ ಎಲ್ಲರೂ ಆತನ ಪ್ರತಿಭೆಯ ಬಗ್ಗೆ ಭಾರೀ ಖುಷಿಯ ಮಳೆಯನ್ನು ಸುರಿದರು. ಕೆಲವರು ವಿರೋಧ ವ್ಯಕ್ತಪಡಿಸಿದರು. ‘ ಆದರೆ, ಪುಷ್ಪ -ದ ರೈಸ್’ ಸಿನಿಮಾದ ಅಲ್ಲು ಅಭಿನಯಕ್ಕೆ ಪ್ರೇಕ್ಷಕರು ಫಿದಾ (ರಾಜ ಮಾರ್ಗ ಅಂಕಣ) ಆಗಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಹಿಂದೆ ನೂರಾರು ಜನ ನಟರು ಈವರೆಗೆ ಅತ್ಯುತ್ತಮ ನಟ ಪ್ರಶಸ್ತಿಗೆ ಅರ್ಹತೆ ಹೊಂದಿದವರು ಇದ್ದರು. ನಿರೀಕ್ಷೆ ಬೆಟ್ಟದಷ್ಟು ಇತ್ತು. ಎನ್ ಟಿ ರಾಮರಾವ್, ಅಕ್ಕಿನೇನಿ ನಾಗೇಶ್ವರ ರಾವ್, ಶೋಭನ ಬಾಬು, ನಾಗಾರ್ಜುನ, ಚಿರಂಜೀವಿ, ಪವನ್ ಕಲ್ಯಾಣ್ ಇವರೆಲ್ಲರೂ ಅದ್ಭುತ ನಟರಾಗಿ ಕೀರ್ತಿ ಪಡೆದಿದ್ದರೂ ಅವರ್ಯಾರಿಗೂ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ದೊರೆತಿರಲಿಲ್ಲ! ಆ ಪ್ರಶಸ್ತಿ ಪಡೆದ ಮೊದಲ ನಟ ಅಂದರೆ ಅದು ಅಲ್ಲು ಅರ್ಜುನ್. 2003ರಲ್ಲಿ ಗಂಗೋತ್ರಿ ಸಿನಿಮಾದಲ್ಲಿ ಹೀರೋ ಆಗುವ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ಆತ ಮುಂದೆ ಒಂದರ ಹಿಂದೆ ಒಂದು ಸೂಪರ್ ಹಿಟ್ ಸಿನೆಮಾ ಮಾಡುತ್ತಾ ಮುಂದುವರೆದರು. ಇದೀಗ ತೆಲುಗು ಇಂಡಸ್ಟ್ರಿಯಲ್ಲಿ 20 ವರ್ಷ ಕಳೆದಿರುವ ಆತನಿಗೆ ಅತ್ಯಂತ ಅರ್ಹವಾಗಿ ರಾಷ್ಟ್ರ ಪ್ರಶಸ್ತಿಯು ಬಂದಿದೆ.
ಸಿನೆಮಾ ಹಿನ್ನೆಲೆಯ ಕುಟುಂಬ
ಅಲ್ಲು ಅರ್ಜುನ್ ಇಡೀ ಕುಟುಂಬ ಸಿನಿಮಾ ಇಂಡಸ್ಟ್ರಿಯಲ್ಲಿ ಇದೆ. ಅಜ್ಜ ಅಲ್ಲು ರಾಮಲಿಂಗಯ್ಯ ತೆಲುಗಿನ ಬಹಳ ದೊಡ್ಡ ಹಾಸ್ಯ ನಟ. 1000ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯ ಮಾಡಿದವರು. ಅಪ್ಪ ಅಲ್ಲು ಅರವಿಂದ್ ಖ್ಯಾತ ಸಿನಿಮಾ ನಿರ್ಮಾಪಕ. ಮಾವ ಚಿರಂಜೀವಿ ತೆಲುಗಿನ ಮೆಗಾ ಸ್ಟಾರ್. ಇನ್ನೊಬ್ಬ ಮಾವ ಪವನ್ ಕಲ್ಯಾಣ್ ತೆಲುಗಿನ ಮಹಾ ನಟ. ರಾಮ ಚರಣ್ ತೇಜ ಸಮೀಪದ ಕಸಿನ್.
ಇಷ್ಟೆಲ್ಲ ಪ್ರಭಾವ ಇದ್ದರೂ ಅಲ್ಲು ಅರ್ಜುನ್ ತನ್ನ ಸ್ವಂತ ಪ್ರತಿಭೆಯನ್ನು ಬಂಡವಾಳ ಮಾಡಿಕೊಂಡು ಸಿನಿಮಾ ರಂಗಕ್ಕೆ ಕಾಲಿಟ್ಟವರು. ಪ್ರತೀ ಪಾತ್ರಕ್ಕೂ ವಿಭಿನ್ನವಾಗಿ ಸಿದ್ಧತೆ ಮಾಡಿಕೊಳ್ಳುವ ಆತನಿಗೆ ಅದ್ಭುತವಾದ ಡ್ಯಾನ್ಸಿಂಗ್ ಟ್ಯಾಲೆಂಟ್ ಇದೆ. ಎಂತಹ ಕಠಿಣ ಹೆಜ್ಜೆಗಳನ್ನು ಲೀಲಾಜಾಲವಾಗಿ ಮಾಡಿ ತೋರಿಸುವ ಅವರ ಟ್ಯಾಲೆಂಟ್ ಅದು ಅದ್ಭುತ. ಸಿಟ್ಟು, ಹತಾಶೆ, ಪ್ರಣಯ, ಹಾಸ್ಯ, ದುಃಖ, ಖುಷಿ ಈ ಎಲ್ಲ ಭಾವನೆಗಳನ್ನು ಅತ್ಯಂತ ಸಹಜವಾಗಿ ಬಿಂಬಿಸುವ ಅಲ್ಲು ಅರ್ಜುನ್ ತನ್ನ ವಿಚಿತ್ರವಾದ ಮ್ಯಾನರಿಸಂಗಳಿಂದ ಸೂಪರ್ ಸ್ಟಾರ್ ಆದವರು. ದಕ್ಷಿಣ ಭಾರತದ ಹೀರೋಗಳ ಫಿಟ್ನೆಸ್ ಬಗ್ಗೆ ಕಿಂಡಲ್ ಮಾಡಿದ್ದ ಬಾಲಿವುಡ್ ಬಾದಶಾಗಳಿಗೆ ಉತ್ತರ ಕೊಡಲು ‘ದೇಶ ಮುದುರು’ ಸಿನೆಮಾದಲ್ಲಿ ಸಿಕ್ಸ್ ಪ್ಯಾಕ್ ಬಾಡಿ ಮೂಲಕ ಉತ್ತರ ಕೊಟ್ಟವರು ಆತ. ಆರ್ಯ 1 ಮತ್ತು ಆರ್ಯ 2 ಸಿನಿಮಾಗಳಲ್ಲಿ ಲವರ್ ಬಾಯ್ ಆಗಿ ಯುವಪ್ರೇಮಿಗಳ ಹೃದಯಕ್ಕೆ ಲಗ್ಗೆ ಹಾಕಿದವರು.
ರೇಸ್ ಗುರ್ರಂ, ಡಿಜೆ, ನಾ ಪೇರು ಸೂರ್ಯ, ಯೆವುಡು ಅವರನ್ನು ಸೂಪರ್ ಸ್ಟಾರ್ ಮಾಡಿದ ಸಿನೆಮಾಗಳು. ಅಪ್ಪ ಮಗನ ಇಗೋ ಸಂಘರ್ಷಕ್ಕೆ ಸಾಕ್ಷಿ ಆದ ‘ನಾ ಪೇರು ಸೂರ್ಯ’ ಅವರ ಜೀವನದ ಶ್ರೇಷ್ಟ ಸಿನೆಮಾ ಎಂದು ನನ್ನ ಭಾವನೆ. ಕ್ಷಣ ಕ್ಷಣಕ್ಕೆ ಸಿಟ್ಟು ಸ್ಫೋಟವಾಗಿ ಸಿಡಿಯುವ ಆ ಸೈನಿಕನ ಪಾತ್ರವನ್ನು ಬೇರೆ ಯಾರೂ ಮಾಡಲು ಸಾಧ್ಯವೇ ಇಲ್ಲ. ಮುಂಬೈ ಬಾಂಬ್ ಸ್ಫೋಟದ ಕಥೆ ಹೊಂದಿರುವ ‘ವೇದಂ’, ಲವರ್ ಬಾಯ್ ಇಮೇಜಿನ ‘ ಬನ್ನಿ’ ಸಿನಿಮಾಗಳು ಅವರನ್ನು ಇಡೀ ಭಾರತಕ್ಕೆ ಪರಿಚಯ ಮಾಡಿದವು.
ತೆಲುಗು ಚಿತ್ರರಂಗದಲ್ಲಿ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಸುಕುಮಾರ್ ಅವರ ಕಾಂಬಿನೇಶನ್‌ನ ಚಿತ್ರಗಳು ಎಂದಿಗೂ ಸೋಲು ಕಂಡದ್ದೇ ಇಲ್ಲ. ಆರ್ಯ, ಪುಷ್ಪ ಇದೇ ಕಾಂಬಿನೇಶನ್ ಚಿತ್ರಗಳು. ಅದರಲ್ಲಿಯೂ ಪುಷ್ಪ ಸಿನಿಮಾದಲ್ಲಿ ವಿಲನ್ ಛಾಯೆ ಇರುವ ರಕ್ತ ಚಂದನ ಮರಗಳ್ಳನ ಅಭಿನಯ ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಅಲ್ಲು ಅವರ ಕೆಂಡ ಕಾರುವ ಕಣ್ಣುಗಳು ಈ ಸಿನಿಮಾದ ಆಸ್ತಿ. ಅದರ ಪರಿಣಾಮವಾಗಿ ಘಟಾನುಘಟಿ ನಟರನ್ನು ಹಿಂದೆ ಹಾಕಿ ಅಲ್ಲು ಅರ್ಜುನ್ ಈ ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಾರೆ. 69 ವರ್ಷ ಇತಿಹಾಸ ಹೊಂದಿರುವ ತೆಲುಗು ಚಿತ್ರರಂಗದಲ್ಲಿ ಮೊದಲ ಬಾರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದು ಮಿಂಚಿದ್ದಾರೆ.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಪಟೇಲರನ್ನು ಉಕ್ಕಿನ ಮನುಷ್ಯ ಅಂದಿದ್ದು ಸುಮ್ನೆ ಅಲ್ಲ; ಅವರ ವ್ಯಕ್ತಿತ್ವ STATUE OF UNITYಗಿಂತಲೂ ಎತ್ತರ!
ಅಲ್ಲು ಅರ್ಜುನ್ ಪಾನ್ ಇಂಡಿಯಾ ಸ್ಟಾರ್
ಇಡೀ ಭಾರತದ ಎಲ್ಲ ರಾಜ್ಯಗಳಲ್ಲಿಯೂ ತನ್ನ ಅಭಿಮಾನಿಗಳನ್ನು ಹೊಂದಿರುವ ಏಕೈಕ ತೆಲುಗು ನಟ ಅಂದರೆ ಅದು ಅಲ್ಲು ಅರ್ಜುನ್. ಆತನ ಎಲ್ಲ ಸಿನಿಮಾಗಳು ಹಿಂದೀ, ತಮಿಳು, ಕನ್ನಡ, ಮಲಯಾಳಂ ಭಾಷೆಗೆ ಡಬ್ ಆಗಿ ಧೂಳೆಬ್ಬಿಸುತ್ತವೆ. ಮಲಯಾಳಂನಲ್ಲಿ ಮೋಹನ್ ಲಾಲ್ ಬಿಟ್ಟರೆ ಅತೀ ಹೆಚ್ಚು ಫ್ಯಾನ್ ಫಾಲೋಯಿಂಗ್ ಇರುವುದು ಇದೇ ಅಲ್ಲು ಅರ್ಜುನ್ ಅವರಿಗೆ.
ಪುಷ್ಪ ಸಿನಿಮಾದ ನಂತರ ಅವರಿಗೆ ಪಾನ್ ಪರಾಗ್ ಕಂಪೆನಿಯ ಹತ್ತು ಕೋಟಿಯ ಜಾಹೀರಾತು ಆಫರ್ ಬಂದಾಗ ನಿರಾಕರಣೆ ಮಾಡಿ ಗಟ್ಟಿಯಾಗಿ ನಿಂತವರು ಇದೇ ಅಲ್ಲು ಅರ್ಜುನ್. ವರ್ಷಕ್ಕೆ ಒಂದೆರಡು ಸಿನಿಮಾ ಮಾತ್ರ ಮಾಡುವ ಆತನ ಸಕ್ಸೆಸ್ ರೇಟ್ ಕೂಡ 90% ಇದೆ.
ಇದುವರೆಗೆ ಆರು ಫಿಲ್ಮ್ ಫೇರ್ ಪ್ರಶಸ್ತಿಗಳು, ಮೂರು ನಂದಿ ಪ್ರಶಸ್ತಿಗಳು (ತೆಲುಗಿನ ಅತ್ಯುತ್ತಮ ನಟನಿಗೆ ಕೊಡುವ ಪ್ರಶಸ್ತಿ) ಅವರ ಕಿರೀಟಕ್ಕೆ ಸೇರಿವೆ. ಇನ್ನಷ್ಟೂ ಸಾಧನೆ ಮಾಡುವ ಕಸುವು ಕೂಡ ಅವರಲ್ಲಿ ಇದೆ. ಶುಭವಾಗಲಿ ಸ್ಟೈಲಿಶ್ ಸ್ಟಾರ್.