ಈ ಜಗತ್ತನ್ನು ಆಳುವ ಒಂದು ಅತೀಂದ್ರಿಯವಾದ ಶಕ್ತಿ (Super Natural power) ಇದೆ ಎಂದು ನನಗೆ ಕನ್ವಿನ್ಸ್ ಆಗಿದೆ, ಅದನ್ನು ಯಾವ ಹೆಸರಿನಿಂದ ಬೇಕಾದರೂ ಕರೆಯಿರಿ ಎಂದವನು ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ (Albert Einstein).
‘ದೇವರಲ್ಲಿ ವಿಶ್ವಾಸವು ಮಾನವನ ಜೀವನಕ್ಕೆ ಅರ್ಥವನ್ನೂ ಉದ್ದೇಶವನ್ನೂ ನೀಡುತ್ತದೆ’ ಎಂದವನು ಖ್ಯಾತ ಲೇಖಕ ಮತ್ತು ಚಿಂತಕ ಬಿಲ್ ಬ್ರೌನ್‌ಫೀಲ್ಡ್ (Bill Brownfield).
ಈ ಜಗತ್ತನ್ನು ಆಳುವ ಒಂದು ಅತೀಂದ್ರಿಯ ಶಕ್ತಿ ಇದೆ ಎಂದು ನನಗೆ ಯಾವಾಗಲೋ ಅರ್ಥ ಆಗಿದೆ. ಆ ಶಕ್ತಿ ನಮ್ಮ ಯೋಚನೆ, ಕಲ್ಪನೆ ಮತ್ತು ತರ್ಕಗಳನ್ನು ಮೀರಿದ್ದು ಎಂದು ನನಗೆ ಅರ್ಥ ಆಗಿದೆ. ಆ ದೇವರನ್ನು ನಾವು ಈಶ್ವರ, ಕೃಷ್ಣ, ವಿಷ್ಣು, ಪಾರ್ವತಿ, ಗಣಪತಿ, ಜೀಸಸ್, ಅಲ್ಲಾ… ಹೀಗೆ ಯಾವ ಹೆಸರಿನಿಂದ ಬೇಕಾದರೂ ಕರೆಯಬಹುದು. ನಮ್ಮ ಹಿರಿಯರು ದೇವರಿಗಾಗಿ ಗುಡಿ, ಚರ್ಚ್, ಮಸೀದಿಗಳನ್ನು ಕಟ್ಟಿ ದೇವರನ್ನು ಆರಾಧನೆ ಮಾಡಿದರು. ಪೂಜೆ, ಭಜನೆ, ಪ್ರಾರ್ಥನೆ, ಯಜ್ಞ, ಯಾಗ, ನಮಾಝ್ ಮೊದಲಾದವುಗಳ ಮೂಲಕ ದೇವರನ್ನು (Existence of God) ಒಲಿಸಿಕೊಳ್ಳುವ ಪ್ರಯತ್ನ ಮಾಡಿದರು.
ಕೋಟಿ ಕೋಟಿ ನಕ್ಷತ್ರಗಳನ್ನು ನಿಯಂತ್ರಿಸುವ ಶಕ್ತಿ ಯಾವುದದು?
ಬ್ರಹ್ಮಾಂಡದಲ್ಲಿ ಕೋಟಿ ಕೋಟಿ ಸಂಖ್ಯೆಯ ನಕ್ಷತ್ರಗಳು ಇವೆ. ಕೆಲವು ಎಷ್ಟು ದೂರದಲ್ಲಿವೆ ಎಂದರೆ ಅವುಗಳಿಂದ ಹೊರಟ ಬೆಳಕು ಇನ್ನೂ ಭೂಮಿಗೆ ತಲುಪಿಲ್ಲ. ತಲುಪಲು ಇನ್ನೂ ಹಲವು ಮಿಲಿಯನ್ ವರ್ಷಗಳು ಬೇಕು.
ಈ ಜಗತ್ತು, ನಕ್ಷತ್ರ ಮಂಡಲ, ಗ್ಯಾಲಕ್ಸಿ, ಸೌರವ್ಯೂಹ, ಭೂಮಿ ಇತ್ಯಾದಿ ಗ್ರಹಗಳು….ಇವುಗಳೆಲ್ಲ ತಮ್ಮ ತಮ್ಮ ಕಕ್ಷೆಯಲ್ಲಿ ತಿರುಗುತ್ತಾ ಯಾವುದೋ ಒಂದು ಗುರುತ್ವದ ಆಕರ್ಷಣೆಗೆ ಬದ್ಧವಾಗಿ ನಿರಂತರವಾಗಿ ಚಲಿಸುವುದು ಹೇಗೆ ಸಾಧ್ಯವಾಗುತ್ತದೆ? ಉತ್ತರ ಗೊತ್ತಿಲ್ಲ.
- ಯಾವುದಾದರೂ ಆಕಸ್ಮಿಕ ಅವಘಡ ಸಂಭವಿಸಿ ಸಾವಿರ ಮೈಲು ವೇಗದಲ್ಲಿ ಚಲಿಸುವ ಭೂಮಿಯು ಸಡನ್ ಆಗಿ ಬ್ರೇಕ್ ಹಾಕಿದರೆ ಏನಾಗಬಹುದು?
- ಭೂಮಿ ಮತ್ತು ಸೂರ್ಯನ ನಡುವೆ ಇರುವ ದೂರ ಸಡನ್ ಆಗಿ ಕಡಿಮೆ ಆಗಿ ಸೂರ್ಯ ಭೂಮಿಯನ್ನು ಆಪೋಶನ ತೆಗೆದುಕೊಂಡರೆ ಏನಾಗಬಹುದು?
- ಸೂರ್ಯನ ಗುರುತ್ವ ಶಕ್ತಿಗೆ ಸಿಲುಕಿ ಭೂಮಿಯ ಸಾಗರ ಮತ್ತು ನದಿಗಳು ಉಕ್ಕಿ ಹರಿದರೆ ಏನಾಗಬಹುದು?
- ಭೂಮಿಯ ಒಳಭಾಗದ ಬಿಸಿ ಶಿಲಾಪಾಕ (ಮ್ಯಾಗ್ಮಾ) ಯಾವುದೇ ಹೊತ್ತಿನಲ್ಲಿ ಭೂಮಿಯ ಚಿಪ್ಪನ್ನು ಒಡೆದು ಹೊರಗೆ ಬಂದರೆ ಏನಾದೀತು?
- ಭೂಮಿಯ ಹೊರಗಿನ ಚಿಪ್ಪು ಯಾವುದಾದರೂ ಒಳಗಿನ ಒತ್ತಡದಿಂದ ಒಮ್ಮೆ ಅದುರಿದರೆ ಏನಾಗಬಹುದು?
- ಭೂಮಿಯ ಕಕ್ಷೆಯ ಬಳಿ ಸಾಗಿ ಬರುವ ದೈತ್ಯ ಗಾತ್ರದ ಉಲ್ಕೆಯೊಂದು ಭೂಮಿಗೆ ಬಂದು ಅಪ್ಪಳಿಸಿದರೆ ಏನಾಗಬಹುದು?
- ಸಾವಿರ ಮೈಲು ವೇಗದಲ್ಲಿ ಚಲಿಸುವ ಭೂಮಿ ಒಮ್ಮೆ ಸ್ಕಿಡ್ ಆಗಿ ತನ್ನ ಕಕ್ಷೆಯಿಂದ ಹೊರಗೆ ಧಾವಿಸಿ ಶುಕ್ರ ಗ್ರಹಕ್ಕೋ ಅಥವಾ ಗುರು ಗ್ರಹಕ್ಕೋ ಡಿಕ್ಕಿ ಹೊಡೆದರೆ ಏನಾಗಬಹುದು?
ಇದ್ಯಾವುದೂ ಈವರೆಗೆ ನಡೆದಿಲ್ಲ ಎಂದರೆ ಭೂಮಿಯನ್ನು, ನಮ್ಮನ್ನು ಕಾಪಾಡುತ್ತಿರುವ ಶಕ್ತಿ ಯಾವುದು? ಅದನ್ನು ಯಾವ ಹೆಸರಿನಿಂದ ಕರೆಯಬಹುದು?
ಸಾವಿರಾರು ಖಗೋಳ ವಿಸ್ಮಯಗಳಿವೆ. ಅವುಗಳಿಗೆ ಯಾವ ಹೆಸರು?
ಎಷ್ಟೋ ಸಾವಿರ ವರ್ಷಗಳಿಂದ ಸೂರ್ಯ ಮತ್ತು ಅವುಗಳ ಸುತ್ತ ಸುತ್ತುವ ಗ್ರಹಗಳ ವೇಗವು ಒಂದಿಷ್ಟೂ ಕಡಿಮೆ ಅಥವಾ ಹೆಚ್ಚಾಗಿಲ್ಲ ಅಂದರೆ ಏನಾಶ್ಚರ್ಯ? ಭೂಮಿ ಅಥವಾ ಸೂರ್ಯ ಒಂದರೆ ಕ್ಷಣವೂ ವಿಶ್ರಾಂತಿಗಾಗಿ ನಿಂತಿಲ್ಲ ಅಂದರೆ ಅದು ಎಷ್ಟು ವಿಸ್ಮಯಕಾರಿ ! ಭೂಮಿಯ ಮೇಲೆ ಇರುವ ಸಾಗರಗಳು ಈವರೆಗೂ ಬತ್ತಿಹೋಗಿಲ್ಲ ಎಂದರೆ ಅದನ್ನು ಸಾಧಿಸುವ ಶಕ್ತಿ ಯಾವುದು?
ಸೂರ್ಯನಿಂದ ಭೂಮಿಗೆ ಇರುವ ದೂರ, ಅದರಿಂದ ಭೂಮಿಗೆ ತಲುಪುವ ಸೂರ್ಯನ ಉಷ್ಣ ಕಿರಣಗಳು, ಇವುಗಳಿಂದ ಉಂಟಾಗುವ ಭೂಮಿಯ ಸರಾಸರಿ ಉಷ್ಣತೆ ಎಲ್ಲವೂ ಮಾನವ ಮತ್ತು ಇತರ ಜೀವಿಗಳಿಗೆ ವಾಸ ಮಾಡಲು ಅತ್ಯಂತ ಯೋಗ್ಯ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಮನುಷ್ಯ ಉಸಿರಾಟ ಮಾಡಲು ಬೇಕಾಗುವ ಗಾಳಿ, ಭೂಮಿಯ ಮೇಲೆ ವಾತಾವರಣ ಹಿಡಿದಿಡುವ ಭೂಮಿಯ ಗುರುತ್ವ ಶಕ್ತಿ, ಮಳೆಯ ಪ್ರಮಾಣ ಎಲ್ಲವೂ ನಮ್ಮ ನಮ್ಮ ಬದುಕಿಗೆ ಅನುಕೂಲವಾಗಿದೆ. ಭೂಮಿಯ ಸರಾಸರಿ ಉಷ್ಣತೆಯು ಇನ್ನು ಕೆಲವು ಡಿಗ್ರಿಯಷ್ಟು ಹೆಚ್ಚಾಗಿದ್ದರೆ ಮನುಷ್ಯನ ದೇಹದೊಳಗಿನ ಚಯಾಪಚಯ ಕ್ರಿಯೆಗಳನ್ನು ಪೂರ್ತಿ ಮಾಡಲು ದೊಡ್ಡ ತೊಂದರೆ ಉಂಟಾಗುತ್ತಿತ್ತು. ಸೌರ ವ್ಯೂಹದ ಬೇರೆ ಯಾವ ಗ್ರಹದಲ್ಲಿಯೂ ಮನುಷ್ಯನ ಆವಾಸಕ್ಕೆ ಯೋಗ್ಯವಾದ ವಾತಾವರಣ ಮತ್ತು ನೀರು ಇಲ್ಲ ಎಂದು ಸದ್ಯಕ್ಕೆ ವಿದಿತವಾಗಿದೆ. ಅಂದರೆ ಭೂಮಿಯ ಮೇಲೆ ಮನುಷ್ಯನ ವಾಸಕ್ಕೆ ಅತ್ಯಂತ ಅನುಕೂಲಕರವಾದ ವಾತಾವರಣವನ್ನು ನಿರ್ಮಿಸಿ ಉಡುಗೊರೆಯಾಗಿ ಕೊಟ್ಟಿರುವ ಶಕ್ತಿ ಯಾವುದದು? ಅದರ ಹೆಸರೇನು?
ಜೀವರಾಶಿಯಲ್ಲಿ ಎಷ್ಟೊಂದು ಸಮನ್ವಯ? ಎಷ್ಟೊಂದು ಹೊಂದಾಣಿಕೆ?
ಭೂಮಿಯ ಮೇಲೆ ವಾಸವಾಗಿರುವ ಜೀವಿಗಳಲ್ಲಿ ಕೂಡ ಅದ್ಭುತವಾದ ಸಮನ್ವಯ ಇದೆ. ಉತ್ಪಾದಕ ಜೀವಿಗಳಾದ ಸಸ್ಯಗಳು, ಅವುಗಳನ್ನು ಅವಲಂಬನೆ ಮಾಡಿರುವ ಭಕ್ಷಕ ಜೀವಿಗಳು, ಅವುಗಳನ್ನು ತಿಂದು ಬದುಕುವ ಇನ್ನಷ್ಟು ಜೀವಿಗಳು…. ಹೀಗೆ ಅವುಗಳ ಆಹಾರ ಸರಪಣಿ ಕೂಡ ತುಂಬಾ ಕುತೂಹಲಕಾರಿ ಆಗಿದೆ. ಮನುಷ್ಯನ ಅತಿಕ್ರಮಣ ಇಲ್ಲ ಎಂದಾದರೆ ಈ ಆಹಾರ ಜಾಲ ಶಾಶ್ವತವಾಗಿ ಉಳಿಯುತ್ತದೆ. ಈ ಜೈವಿಕ ಪರಿಸರದ ನಿರ್ಮಾಪಕ ಯಾರು? ಭೂಮಿಯ ಮೇಲೆ ಬಹುಸಂಖ್ಯಾತ ಜೀವಿಗಳು ಕಡಿಮೆ ಅವಧಿಗೆ ಬದುಕುವುದು, ಅಲ್ಪಸಂಖ್ಯಾತ ಜೀವಿಗಳು ದೀರ್ಘ ಕಾಲ ಬದುಕುವುದು…ಈ ಜಾಣ ತೀರ್ಮಾನ ಮಾಡಿ ಪ್ರಕೃತಿಯ ಸಮತೋಲನವನ್ನು ಕಾಪಾಡುತ್ತಿರುವ ಆ ಶಕ್ತಿ ಯಾವುದು? ಅದರ ಹೆಸರೇನು?
ಇದನ್ನೂ ಓದಿ: Raja Marga Column : ಜಗತ್ತಿನಲ್ಲಿ ಯಾರೂ ಪರ್ಫೆಕ್ಟ್ ಅಲ್ಲ ಗುರು! ಬೇಕಾಗಿಯೂ ಇಲ್ಲ!
ಹೆಣ್ಣು ಗಂಡುಗಳ ಅಚ್ಚರಿಯ ಅನುಪಾತ
ಭೂಮಿಯ ಮೇಲೆ ಸೃಷ್ಟಿಯಾಗುವ ಹೆಣ್ಣು,ಗಂಡುಗಳ ಅನುಪಾತ ಬ್ಯಾಲೆನ್ಸ್ ಆಗಿದೆ. ನೂರು ಗಂಡು ಮಕ್ಕಳು ಹುಟ್ಟುವಾಗ ನೂರು ಹೆಣ್ಣು ಮಕ್ಕಳು ಹುಟ್ಟಲೇಬೇಕು. ಮನುಷ್ಯನ ಸ್ವಾರ್ಥವು ಈ ಅನುಪಾತವನ್ನು ಕೆಡಿಸೀತು ಹೊರತು ಪ್ರಕೃತಿಯು ಈ ಅನುಪಾತವನ್ನು ಇನ್ನೂ ಉಳಿಸಿಕೊಂಡು ಹೋಗುತ್ತಿದೆ. ಈ ನಿಯಂತ್ರಣ ಮತ್ತು ಸಮತೋಲನ ಸಾಧಿಸಿರುವುದು ಯಾರು?
ಮನುಷ್ಯನ ದುರಾಸೆಯಿಂದ ಭೂಮಿಯ ಮೇಲಿನ ಜನಸಂಖ್ಯೆ ವಿಪರೀತ ಹೆಚ್ಚಾದ ಸಂದರ್ಭ ಪ್ರಕೃತಿಯೇ ನಿರ್ಧಾರ ಕೈಗೊಂಡು ಯಾವುದಾದರೂ ಉತ್ಪಾತ, ಪ್ರವಾಹ, ಸುನಾಮಿ, ಭೂಕಂಪ ಅಥವಾ ಕೊರೋನಾದಂತಹ ಕಾಯಿಲೆ ಹರಡಿ ಜನಸಂಖ್ಯೆಯನ್ನು ನಿಯಂತ್ರಣ ಮಾಡುವ ಆ ಶಕ್ತಿ ಯಾವುದು? ಮಾನವನ ಸೊಕ್ಕನ್ನು ಮುರಿಯುವ ಆ ಶಕ್ತಿ ಯಾವುದು?
ಈ ರೀತಿ ಪ್ರಕೃತಿಯ ಸ್ವಯಂಭೂ ಶಕ್ತಿಯ ಸಾವಿರಾರು ನಿದರ್ಶನಗಳನ್ನು ಕೊಡಬಹುದು. ಆ ಸ್ವಯಂಭೂ ಶಕ್ತಿಯನ್ನು ನೀವು, ನಾವು ದೇವರೆಂದು ಕರೆಯುವುದು ಹೆಚ್ಚು ಸರಿ. ಏನಂತೀರಿ?