Site icon Vistara News

Raja Marga Column : ಜೇಸಿಐ ಜಗತ್ತಿನ ಅತಿ ದೊಡ್ಡ ವ್ಯಕ್ತಿತ್ವ ವಿಕಸನ ತರಬೇತಿ ಸಂಸ್ಥೆ

JCI day

ನನ್ನನ್ನು ಕಾಲೇಜು ದಿನಗಳಲ್ಲಿ ನೋಡಿದವರು ಈಗ ನನ್ನಲ್ಲಿ ಸಾವಿರಾರು ಪಾಸಿಟಿವ್ ಬದಲಾವಣೆಗಳು ಆಗಿರುವುದನ್ನು ಗಮನಿಸುತ್ತಾರೆ. ಮತ್ತು ಆ ಬದಲಾವಣೆಗೆ ಕಾರಣಗಳು ಏನು? ಎಂದು ಕೇಳುತ್ತಾರೆ. ನನ್ನ ಆತ್ಮವಿಶ್ವಾಸದ ಮಟ್ಟ ಹೆಚ್ಚಾಗಿರುವುದು, ನನ್ನ ಮಾತುಗಳು ಹೆಚ್ಚು ಪ್ರಬುದ್ಧವಾಗಿರುವುದು, ನನ್ನ ಸಂವಹನ ಕೌಶಲಗಳು ಹರಿತವಾಗಿರುವುದು, ನನ್ನ ಪ್ರೆಸೆಂಟೇಷನ್ ಕೌಶಲಗಳು ತುಂಬಾ ಡೆವಲಪ್ ಆಗಿರುವುದನ್ನು ಗಮನಿಸಿ ಮೆಚ್ಚುಗೆಯ ಮಾತುಗಳನ್ನು ಹೇಳುತ್ತಾರೆ. ಆಗೆಲ್ಲ ನನಗೆ ಥಟ್ಟನೆ ನೆನಪಾಗುವುದು ನನಗೆ ತರಬೇತು (Raja Marga column) ನೀಡಿ, ಬೆಳೆಸಿರುವ ಸಂಸ್ಥೆ. ಅದು ಖಂಡಿತವಾಗಿ ಜೇಸಿಐ (ಜ್ಯೂನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌- Junior Chamber International- JCI). ಅದು ಜಗತ್ತಿನ ಅತೀ ದೊಡ್ಡ ವ್ಯಕ್ತಿತ್ವ ವಿಕಸನ ಸಂಸ್ಥೆ (Worlds biggest personal development Training institute)

1915 ಅಕ್ಟೋಬರ್ 13, ಸೈಂಟ್ ಲೂಯಿ, ಅಮೆರಿಕಾ

ಅಮೆರಿಕದ ಒಬ್ಬ ಸಮಾಜಸೇವಕ, ಉದ್ಯಮಿ ಹೆನ್ರಿ ಗಿಸೆನಬಿಯರ್ (Henry Giessenbier Jr.)  ಈ ಸಂಸ್ಥೆಯ ಸ್ಥಾಪಕರು. ತನ್ನ 32 ಜನ ಗೆಳೆಯರ ಜೊತೆ ಸೇರಿ ಒಂದು ವಿಶ್ವ ಶಾಂತಿಯನ್ನು ಪ್ರಮೋಟ್ ಮಾಡುವ ಒಂದು ಸಂಸ್ಥೆ ಅವರು ಉದ್ಘಾಟನೆ ಮಾಡಿದರು. ಆಗಷ್ಟೇ ಮೊದಲ ವಿಶ್ವಸಮರ ಸ್ಫೋಟಕ್ಕೆ ಕ್ಷಣಗಣನೆ ಆಗುತ್ತಿತ್ತು. ಇಡೀ ಜಗತ್ತು ಬೆಂಕಿಯ ಮೇಲೆ ಕೂತ ಹಾಗೆ ಚಡಪಡಿಸುತ್ತಿತ್ತು. ಅದನ್ನು ಹೇಗಾದರೂ ತಪ್ಪಿಸಬೇಕು ಎಂದು ಆ 32 ಯುವಕರು ಆಸೆ ಪಟ್ಟಿದ್ದರು. ಅದಕ್ಕೆ ಅವರು ಆರಿಸಿಕೊಂಡ ಮಾಧ್ಯಮ ಅಂದರೆ ನಾಯಕತ್ವ ತರಬೇತು (Leadership Training) ಮತ್ತು ವ್ಯಕ್ತಿತ್ವ ವಿಕಸನ (Individual Development). ಆರಂಭದಲ್ಲಿ ಅದರ ಹೆಸರು ಯಂಗ್ ಮೆನ್ಸ್ ಪ್ರೋಗ್ರೆಸಿವ್ ಅಸೋಸಿಯೇಶನ್ (YMCA) ಎಂದಾಗಿತ್ತು. ನಂತರ ಕ್ರಮೇಣ ಈ ಸಂಸ್ಥೆಯು ಜಾಗತಿಕ ಮಟ್ಟಕ್ಕೆ ಬೆಳೆಯಿತು. ತನ್ನ ಹೆಸರನ್ನು ಜೇಸಿಐ ಎಂದು ಬದಲಾವಣೆ ಮಾಡಿಕೊಂಡಿತು. ತನ್ನದೇ ಸಂವಿಧಾನವನ್ನು ಅಭಿವೃದ್ದಿ ಪಡಿಸಿತು.

ಹೆನ್ರಿ ಗಿಸೆನಬಿಯರ್

18-40 ವರ್ಷದ ಯುವಕರ/ ಯುವತಿಯರ ಸಂಸ್ಥೆ

ಯಾವುದೇ ವ್ಯಕ್ತಿಯ ವಿಕಸನದ ತೀವ್ರತೆಯು 18-40 ವರ್ಷದ ಒಳಗೆ ಆಗುವ ಕಾರಣ ಹೆನ್ರಿ ಗಿಸೆನಬಿಯರ್ ಈ ಸಂಸ್ಥೆಯ ಸದಸ್ಯತ್ವವನ್ನು ಯುವಜನತೆಗೆ ಸೀಮಿತ ಮಾಡಿದರು. ಇದು ಸಂಸ್ಥೆಯ ನಿಜವಾದ ಬ್ಯೂಟಿ. ಜೇಸಿಐ ಸಂಸ್ಥೆಯು ನಡೆಸುವ ವ್ಯಕ್ತಿತ್ವ ವಿಕಸನದ ತರಬೇತು ಕಾರ್ಯಕ್ರಮಗಳು ಜನಪ್ರಿಯ ಆದವು. ಜೇಸಿಐ ಹೊಸ ಹೊಸ ನಾಯಕರನ್ನು ಸೃಷ್ಟಿ ಮಾಡಿತು. ಅಮೆರಿಕಾದ ಯಶಸ್ವೀ ಅಧ್ಯಕ್ಷರಾದ ಜಾನ್ ಎಫ್ ಕೆನೆಡಿ ಒಬ್ಬ ಜೇಸಿಐ ಸದಸ್ಯ ಆಗಿದ್ದರು. ಅವರು ಹೇಳಿದ ಮಾತು ಇಲ್ಲಿ ಉಲ್ಲೇಖ ಮಾಡಬೇಕು – ‘ನನಗೆ ಹಾರ್ವರ್ಡ್ ವಿವಿ ಶಿಕ್ಷಣ ನೀಡಿತು, ಆದರೆ ಜೇಸಿಐ ಬದುಕಿನ ಶಿಕ್ಷಣ ನೀಡಿತು’ ಎಂದು.

ಹೀಗೆ ಜೇಸಿಐ ತರಬೇತಿಗಳ ಶಕ್ತಿಯಿಂದ ಸಂಸ್ಥೆಯು 130+ ದೇಶಗಳಿಗೆ ಹರಡಿತು. ಹತ್ತು ಲಕ್ಷಕ್ಕೂ ಅಧಿಕ ಸಕ್ರಿಯ ಸದಸ್ಯರನ್ನು ಹೊಂದಿತು. ಅಮೆರಿಕಾದ ಮತ್ತೋರ್ವ ಯಶಸ್ವೀ ಅಧ್ಯಕ್ಷ ರೊನಾಲ್ಡ್ ರೇಗನ್, UNO ಸೆಕ್ರೆಟರಿ ಜನರಲ್ ಕೋಫಿ ಅನ್ನನ್ ಮೊದಲಾದವರು ಜೇಸಿಐ ಸಂಸ್ಥೆಯ ಸದಸ್ಯರಾಗಿ ಮುಂದೆ ಉನ್ನತ ಹುದ್ದೆ ಪಡೆದವರು. ಈ ಪಟ್ಟಿ ತುಂಬಾ ದೊಡ್ಡದಿದೆ.

ಜೇಸಿಐ ವಿಶ್ವ ಸಂಸ್ಥೆಯ ಮಾನ್ಯತೆ ಪಡೆದಿದೆ

ವಿಶ್ವಸಂಸ್ಥೆಯ ದೀರ್ಘಕಾಲೀನ ಗುರಿಗಳಾದ ಬಡತನ ನಿರ್ಮೂಲನ, ಲಿಂಗ ಸಮಾನತೆ, ಗುಣಮಟ್ಟದ ಶಿಕ್ಷಣ, ಶುದ್ಧವಾದ ಕುಡಿಯುವ ನೀರು ಮತ್ತು ಸ್ವಚ್ಛತೆ, ಶೂನ್ಯ ಹಸಿವು, ಉತ್ತಮ ಆರೋಗ್ಯ…ಮೊದಲಾದ ಗುರಿಗಳ ಈಡೇರಿಕೆಯಲ್ಲಿ ಜೇಸಿಐ ಸಂಸ್ಥೆಯು ಜಾಗತಿಕವಾಗಿ ಶ್ರಮಿಸುತ್ತಿದೆ.

‘ಯುವಜನತೆಗೆ ಅಭಿವೃದ್ಧಿಯ ಅವಕಾಶಗಳನ್ನು ಒದಗಿಸುವ ಮೂಲಕ ಈ ಸಂಸ್ಥೆಯು ಅವರಲ್ಲಿ ಪಾಸಿಟಿವ್ ಆದ ಬದಲಾವಣೆಗಳನ್ನು ಕ್ರಿಯೇಟ್ ಮಾಡಿ ಅವರನ್ನು ಸಬಲೀಕರಣ ಮಾಡುತ್ತದೆ’ ಎನ್ನುವುದು ಈ ಸಂಸ್ಥೆಯ ಕ್ರಿಯಾ ವಾಕ್ಯ (ಮಿಷನ್) ಆಗಿದೆ. ಅದಕ್ಕಾಗಿ ಈ ಸಂಸ್ಥೆಯು ಕಳೆದ 108 ವರ್ಷಗಳಿಂದ ಶ್ರಮಿಸುತ್ತಾ ಬಂದಿದೆ.

ಜೇಸಿಐ ಸಂಸ್ಥೆಯು ಭಾರತಕ್ಕೂ ಬಂದಿತು

1949ರಲ್ಲಿ ಈ ಸಂಸ್ಥೆಯು ಭಾರತಕ್ಕೂ ಬಂದಿತು. ಸಿಗಂಡೆ ಮಾಪಾ ಎನ್ನುವ ಒಬ್ಬ ಫಿಲಿಫಿನ್ ಜೇಸಿ ಸದಸ್ಯ ಅದನ್ನು ಕೊಲ್ಕತ್ತಾ ನಗರದಲ್ಲಿ ಸ್ಥಾಪನೆ ಮಾಡಿದರು. ಮುಂದೆ ನಿಧಾನಕ್ಕೆ ತನ್ನ ರೆಕ್ಕೆಗಳನ್ನು ಚಾಚುತ್ತ ಈ ಸಂಸ್ಥೆಯು ಇಂದು ಭಾರತದ 23 ರಾಜ್ಯಗಳ ವ್ಯಾಪ್ತಿಗೆ ತಲುಪಿಯಾಗಿದೆ. ಮಾಧವ ರಾವ್ ಸಿಂಧಿಯಾ, ಪ್ರಮೋದ್ ಮಹಾಜನ್, ಅಶೋಕ್ ಗೆಹ್ಲೋಟ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮೊದಲಾದ ನಾಯಕರನ್ನು ಸಮಾಜಕ್ಕೆ ನೀಡಿದೆ.
Think globally, work locally ಎಂಬ ನಂಬಿಕೆಯ ಆಧಾರದಲ್ಲಿ ಕೆಲಸ ಮಾಡುವ ಸಾವಿರಾರು ಸ್ಥಳೀಯ ಕ್ರಿಯಾಶಾಲಿ ಘಟಕಗಳು (Local Organizations) ಜೇಸಿಐ ಸಂಸ್ಥೆಯಲ್ಲಿ ಇವೆ.

ನಾಯಕತ್ವ ತರಬೇತು, ವ್ಯವಹಾರ ಅಭಿವೃದ್ದಿ, ಆಡಳಿತ, ಸಮುದಾಯ ಅಭಿವೃದ್ಧಿ ಮತ್ತು ಜಾಗತಿಕತೆ ಮೊದಲಾದ ಅವಕಾಶಗಳನ್ನು ಸಂಸ್ಥೆಯು ತನ್ನ ಸದಸ್ಯರಿಗೆ ನೀಡುತ್ತಿದೆ. ಪ್ರಾದೇಶಿಕ, ರಾಷ್ಟ್ರ ಮಟ್ಟ, ಏಷಿಯಾ ಮಟ್ಟ ಮತ್ತು ವಿಶ್ವಮಟ್ಟದ ಸಮ್ಮೇಳನಗಳು ಪ್ರತೀ ವರ್ಷವೂ ನಡೆಯುತ್ತಿದ್ದು ಆ ಸಮ್ಮೇಳನಗಳಲ್ಲಿ ಸಂಸ್ಥೆಯ ವಿಶ್ವರೂಪ ದರ್ಶನ ಆಗುತ್ತ ಬಂದಿದೆ.

ಜೇಸಿಐ ಫೌಂಡೇಶನ್ ಮತ್ತು ಜೇಸಿಐ ಭಾರತದ ಫೌಂಡೇಶನ್

ಜೇಸಿಐ ಜಾಗತಿಕ ಮತ್ತು ರಾಷ್ಟ್ರೀಯ ಸಂಸ್ಥೆಗಳು ತಮ್ಮದೇ ಹೆಮ್ಮೆಯ ಫೌಂಡೇಶನ್‌ಗಳನ್ನು ಹೊಂದಿದ್ದು ತನ್ನ ಸದಸ್ಯರಿಂದ ಮತ್ತು ದಾನಿಗಳಿಂದ ನಿಧಿಯನ್ನು ಸಂಗ್ರಹ ಮಾಡುತ್ತಿದ್ದು ಅದರ ಸಹಾಯದಿಂದ ಹಲವು ಸಮುದಾಯ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸುತ್ತಿದೆ. Need blood, call Jcs ಎನ್ನುವುದು ಒಂದು ಜನಪ್ರಿಯ ಕಾರ್ಯಕ್ರಮ. ವಿಶೇಷವಾಗಿ ಜೇಸಿಐ ಭಾರತದ ಫೌಂಡೇಶನ್ ಸಾವಿರಾರು ಪ್ರತಿಭಾವಂತ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಬೆಂಬಲಿಸುತ್ತ ಬಂದಿದೆ.

ಅಂಕಣಕಾರ ರಾಜೇಂದ್ರ ಭಟ್‌ ಅವರು ತರಬೇತಿ ನೀಡುತ್ತಿರುವುದು

ಜೇಸಿಐ ಧ್ಯೇಯವಾಕ್ಯ (ಜೇಸಿಐ ಕ್ರೀಡ್)

ಬಿಲ್ ಬ್ರೌನ್ ಫೀಲ್ಡ್ ಎಂಬಾತನು ಬರೆದ ಆರು ಸಾಲುಗಳ ಒಂದು ಧ್ಯೇಯವಾಕ್ಯವನ್ನು ಜೇಸಿಐ ಸಂಸ್ಥೆಯು ತನ್ನ CREED ಆಗಿ ಸ್ವೀಕಾರ ಮಾಡಿದೆ. ಅದರ ಆರು ಸಾಲುಗಳು ತುಂಬಾ ಅರ್ಥಪೂರ್ಣ ಆಗಿವೆ. ದೇವರಲ್ಲಿ ವಿಶ್ವಾಸವು ಮಾನವನ ಜೀವನಕ್ಕೆ ಅರ್ಥವನ್ನು ಮತ್ತು ಉದ್ದೇಶವನ್ನು ನೀಡುತ್ತದೆ ಎಂದು ಆ ಧ್ಯೇಯವಾಕ್ಯ ಆರಂಭವಾಗುತ್ತದೆ. ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ ಎನ್ನುವುದು ಅದರ ಪ್ರಮುಖ ವಾಕ್ಯ. ಭಾರತವು ನಂಬಿದ್ದ ವಸುದೈವ ಕುಟುಂಬಕಂ ಎಂಬ ಆಶಯವೂ ಆ ಪ್ರಾರ್ಥನೆಯಲ್ಲಿ ಇದೆ. ಜೇಸಿಐ ಸಂಸ್ಥೆಯ ಎಲ್ಲ ಕಾರ್ಯಕ್ರಮಗಳಲ್ಲಿ ಆ ಧ್ಯೇಯ ವಾಕ್ಯವನ್ನು ಜೇಸಿಐ ಸದಸ್ಯರು ಓದುತ್ತಾರೆ ಮತ್ತು ನಂಬುತ್ತಾರೆ.

ಜೇಸಿಐ ಸಂಸ್ಥೆಯ ತರಬೇತಿಗಳು ಹೇಗಿರುತ್ತವೆ?

ಜೇಸಿಐ ಸಂಸ್ಥೆಯು ನಡೆಸುವ ವ್ಯಕ್ತಿತ್ವ ವಿಕಸನದ ತರಬೇತಿಗಳು ತುಂಬಾ ಜನಪ್ರಿಯ ಆಗಿವೆ. ಜೇಸಿಐ ಸಂಸ್ಥೆಯು ಕಾರ್ಯಾಗಾರಗಳನ್ನು ಮಾಡಿ ತರಬೇತಿದಾರರನ್ನು ತೇರ್ಗಡೆ ಮಾಡುತ್ತದೆ. ಆ ತರಬೇತುದಾರರು ಸ್ಥಳೀಯ ಮಟ್ಟದಲ್ಲಿ, ವಲಯ, ರಾಜ್ಯ, ರಾಷ್ಟ್ರ ಹಾಗೂ ಜಾಗತಿಕ ಮಟ್ಟದಲ್ಲಿ ತರಬೇತಿಗಳನ್ನು ನಡೆಸುತ್ತಾರೆ. ಈ ತರಬೇತಿಗಳು ಚಟುವಟಿಕೆ ಆಧಾರಿತ ಆಗಿದ್ದು ಕಾರ್ಯಾಗಾರಗಳ ರೂಪದಲ್ಲಿ ಇರುತ್ತವೆ. ಪರಿಣಾಮಕಾರಿ ಭಾಷಣ ಕಲೆ, ಉದ್ಯಮಶೀಲತೆ, ಕ್ರಿಯಾಶೀಲ ನಾಯಕತ್ವ, ಸಂವಹನ ಕಲೆ, ಗುರಿ ನಿರ್ಧಾರ, ಮಾನವೀಯ ಸಂಬಂಧ, ಆಡಳಿತಾತ್ಮಕ ತರಬೇತಿ…. ಹೀಗೆ ಪಟ್ಟಿಯು ತುಂಬಾ ದೊಡ್ಡದಿದೆ. ಸಾವಿರಾರು ತರಬೇತಿಯ ವಿಷಯಗಳು ಡೆವಲಪ್ ಆಗಿವೆ. ಉತ್ತಮ ತರಬೇತುದಾರರ ಕೋಶ ಇದೆ.

ಅದರಲ್ಲಿಯೂ ವಿಶೇಷವಾಗಿ ಸಭಾಧ್ಯಕ್ಷತೆ ಮತ್ತು ಸಾಂವಿಧಾನಿಕ ನಡಾವಳಿ(CAPP) ಎಂಬ ತರಬೇತಿಯನ್ನು ಜೇಸಿಐ ಸಂಸ್ಥೆಯು ತನ್ನದೇ ಬ್ರಾಂಡ್ ಆಗಿ ಮಾಡಿಕೊಂಡಿದೆ. ಜೇಸಿಐ ಸಂಸ್ಥೆಯು ನಡೆಸುವ ಎಲ್ಲ ಕಾರ್ಯಕ್ರಮಗಳು, ಸಭೆಗಳು, ಸಮಾರಂಭಗಳು ಮತ್ತು ಸಮ್ಮೇಳನಗಳು ಈ CAPP ಆಧಾರಿತ ಆಗಿ ನಡೆಯುತ್ತವೆ.

ಇದನ್ನೂ ಓದಿ: Raja Marga Column:ಹಲೋ ಅಮಿತ್‌, ನಿನಗೆ ನೆನಪಿದೆಯಾ? ; ಅಮಿತಾಬ್‌ಗೊಂದು ಪ್ರೇಮಪತ್ರ

ಭರತ ವಾಕ್ಯ

1915ರಿಂದ ಜಗತ್ತಿನಲ್ಲಿ ಯುವ ಜನತೆಗೆ ಉತ್ತಮ ತರಬೇತು ನೀಡಿ ನಾಯಕತ್ವ ಮತ್ತು ಉತ್ತಮ ನಾಗರಿಕತೆಗಳನ್ನು ಬೆಳೆಸಲು ಶ್ರಮಿಸುತ್ತಿರುವ ಈ ಜೇಸಿಐ ಸಂಸ್ಥೆಗೆ ಇಂದು ಸ್ಥಾಪನಾ ದಿನದ ಶುಭಾಶಯಗಳನ್ನು ಹೇಳೋಣ. ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ.

Exit mobile version