Site icon Vistara News

Raja Marga Column : ನೀವು ಜ್ಯೂಲಿ ನೋಡಿದ್ದೀರಾ? ಇದು KGFಗೂ ಮೊದಲು ಬಾಲಿವುಡ್‌ನ ಅಹಂ ಮುರಿದ ಸಿನಿಮಾ

Julie film Lakshmi

1975ರ ವರ್ಷ ಹಲವು ಕಾರಣಕ್ಕೆ ನಮ್ಮ ನೆನಪಲ್ಲಿ ಗಟ್ಟಿ ಹೆಜ್ಜೆಗುರುತು ಮೂಡಿಸಿತ್ತು. ದೇಶದಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ (Indira Gandhi) ತುರ್ತು ಪರಿಸ್ಥಿತಿ ಘೋಷಣೆ (Emergency 1975) ಮಾಡಿದ್ದರು. ಅದೇ ವರ್ಷ ಶತಮಾನದ ಸಿನಿಮಾಗಳಾದ ಶೋಲೆ (Sholay Movie), ದೀವಾರ್ (Deewar Movie), ಧರ್ಮಾತ್ಮಾ (Dharmatma Movie), ಮಿಲಿ (Mili Movie), ಆಂಧಿ (Aandhi Movie) ಮೊದಲಾದವುಗಳು ಬಿಡುಗಡೆ ಆಗಿದ್ದವು. ಶೋಲೆ ಸಿನಿಮಾದ ‘ಮೇರೆ ಪಾಸ್ ಮಾ ಹೈ’ (Mere paas Maa hai) ಸಂಭಾಷಣೆ ಪ್ರತೀ ಒಬ್ಬರ ಬಾಯಲ್ಲಿ ಇತ್ತು. ಅದೇ ವರ್ಷ ಬಿಡುಗಡೆ ಆದ ಒಂದು ಹಿಂದಿ ಸಿನಿಮಾ ದಕ್ಷಿಣ ಭಾರತದ ಪ್ರತಿಭೆಗಳಿಂದ ಕೂಡಿದ್ದು ಆ ಕಾಲಕ್ಕೆ ಭಾರಿ ದೊಡ್ಡ ಕ್ರಾಂತಿ ಮಾಡಿತ್ತು (Raja Marga Column). ಒಂದು ರೀತಿಯಲ್ಲಿ ಉತ್ತರ ಭಾರತದ ಪಾರಮ್ಯಕ್ಕೆ (North Indian Dominance) ಸವಾಲು ಎಸೆದಿತ್ತು. ಆ ಸಿನಿಮಾವೇ ಜ್ಯೂಲಿ (Julie Cinema).

ಜ್ಯೂಲಿಯನ್ನು ಶತಮಾನದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದು ಎಂದು ಕರೆಯಲಾಗಿತ್ತು!

1975ರ ಏಪ್ರಿಲ್ 18ರಂದು ಬಾಲಿವುಡನಲ್ಲಿ ರಿಲೀಸ್ ಆದ ಈ ಚಿತ್ರ ಬಾಕ್ಸ್ ಆಫೀಸಿನಲ್ಲಿ ಉಂಟುಮಾಡಿದ ಧಮಾಕಾ ಅದು ಅದ್ಭುತವೇ ಆಗಿತ್ತು. ಆ ಸಿನಿಮಾದ ನಾಯಕ, ನಾಯಕಿ, ಕಥೆಯನ್ನು ಬರೆದವರು, ನಿರ್ದೇಶಕರು, ನಿರ್ಮಾಪಕರು ಮತ್ತು ಹೆಚ್ಚಿನ ಸಹನಟರು ದಕ್ಷಿಣ ಭಾರತದವರೇ ಆಗಿದ್ದರು. ತಾವೇ ಶ್ರೇಷ್ಠ ಎಂಬ ಉತ್ತರ ಭಾರತದ ಧಿಮಾಕಿಗೆ ಉತ್ತರ ಕೊಟ್ಟ ಹಾಗೆ ಈ ಚಿತ್ರ ಬಂದಿತ್ತು. ಆ ಕಾಲಕ್ಕೆ ದಿಟ್ಟ ಎನಿಸುವ ಕಥೆ, ಸರಳವಾದ ನಿರೂಪಣೆ, ಲಕ್ಷ್ಮೀ (Julie Lakshmi) ಅವರ ಬೋಲ್ಡ್ ಆದ ಅಭಿನಯ, ಇವತ್ತಿಗೂ ನೆನಪಲ್ಲಿ ಉಳಿದಿರುವ ಪದ್ಯಗಳು ಆ ಸಿನಿಮಾವನ್ನು ಗೆಲ್ಲಿಸಿದವು.

ಚಟ್ಟಕ್ಕಾರಿ ಮಲಯಾಳಂ ಸಿನಿಮಾದ ರಿಮೇಕ್ ಇದು

ಮಲಯಾಳಂ ಸಾಹಿತಿ ಪರಮೇಶ್ವರ ಮೆನನ್ ಬರೆದ ಕಾದಂಬರಿ ಚಟ್ಟಕ್ಕಾರಿ (Chattakkari Movie). ಅದನ್ನು ಸಿನಿಮಾಕ್ಕೆ ಅಳವಡಿಸಿ ಮಲಯಾಳಂನಲ್ಲಿ ನಿರ್ದೇಶನ ಮಾಡಿದವರು ಕೆ.ಎಸ್ ಸೇತುಮಾಧವನ್ (KS Sethumadhavan). ಅದು ಹಿಟ್ ಆದ ನಂತರ ಅದೇ ಸಿನಿಮಾವನ್ನು ಜ್ಯೂಲಿ ಎಂಬ ಹೆಸರಲ್ಲಿ ಹಿಂದಿಗೆ ರಿಮೇಕ್ ಮಾಡಿದವರು ಕೂಡ ಅದೇ ಸೇತುಮಾಧವನ್. ಚಿತ್ರಕತೆ ಬರೆದವರು ಅಲ್ಲೂರಿ ಚಕ್ರಪಾಣಿ ಅವರು. ಚಟ್ಟಕ್ಕಾರಿ ಸಿನಿಮಾದಲ್ಲಿ ನಾಯಕಿಯಾಗಿದ್ದ ಲಕ್ಷ್ಮಿ ಹಿಂದೀ ಸಿನಿಮಾದಲ್ಲಿಯು ಮಿಂಚಿದರು. ಅದು ಆಕೆಯ ಮೊದಲ ಹಿಂದಿ ಸಿನಿಮಾ (Lakshmis Firs Hindi Movie) ಆಗಿತ್ತು.

ಸಿನೆಮಾ ಸೂಪರ್ ಹಿಟ್ ಆಗಲು ಕಾರಣ ಏನು?

ಲಕ್ಷ್ಮಿ ಅವರ ಮುಗ್ಧ ಮತ್ತು ಸ್ನಿಗ್ಧ ಸೌಂದರ್ಯವೇ ಸಿನಿಮಾದ ಟ್ರಂಪ್ ಕಾರ್ಡ್. ಅವರಿಗೆ ಆಗ 23 ವರ್ಷ. ಆಗಲೇ ಅವರಿಗೆ ಮದುವೆ ಆಗಿ ಮೂರು ವರ್ಷದ ಮಗಳು ಐಶ್ವರ್ಯ ಇದ್ದಳು. ಆದರೆ ಆ ಸಿನಿಮಾದಲ್ಲಿ ಲಕ್ಷ್ಮಿ ತೋರಿದ ಗ್ಲಾಮರ್ ಲುಕ್, ಭಾವ ತೀವ್ರತೆಯ ಅಭಿನಯ ವೀಕ್ಷಕರ ಮನಸಿನಲ್ಲಿ ಭಾರೀ ಇಂಪ್ಯಾಕ್ಟ್ ಮಾಡಿದ್ದವು.

ಜೂಲಿ ಸಿನಿಮಾ ಆ ಕಾಲದ ಮಡಿವಂತಿಕೆಯನ್ನು ಧಿಕ್ಕರಿಸಿ ನಿಂತಿತ್ತು!

ಒಂದು ರೀತಿಯ ಮಡಿವಂತಿಕೆಯಲ್ಲಿ ಮುಳುಗಿದ್ದ ಸಿನಿಮಾರಂಗದಲ್ಲಿ ಲಕ್ಷ್ಮಿ ಅವರ ಮಾಡರ್ನ್ ಲುಕ್, ಬೋಲ್ಡ್ ಆದ ಅಭಿನಯ ಹುಚ್ಚು ಹಿಡಿಸಿದ್ದವು. ಮುಂದೆ ಲಕ್ಷ್ಮಿ ಅವರು ‘ಜ್ಯೂಲಿ ಲಕ್ಷ್ಮಿ’ ಎಂದೇ ತನ್ನ ಅಭಿಮಾನಿಗಳಿಂದ ಕರೆಯಲ್ಪಟ್ಟರು.

ಉಕ್ಕಿ ಹರಿಯುವ ಅಮೇಜಾನ್ ಪ್ರೀತಿ

ಒಂದು ಆಂಗ್ಲೋ ಇಂಡಿಯನ್ ಕುಟುಂಬ ಮತ್ತು ಸಂಪ್ರದಾಯಸ್ಥ ಹಿಂದೂ ಕುಟುಂಬದ ನಡುವೆ ಹುಟ್ಟುವ ಅಂತರ್ಜಾತೀಯ ಪ್ರೀತಿ, ಅಮೇಜಾನ್ ನದಿಯ ಹಾಗೆ ಎಗ್ಗಿಲ್ಲದೆ ಹರಿಯುವ ಪ್ರೇಮ, ನಂಬಿದ ಹುಡುಗನಿಗೆ ಮದುವೆಯ ಮೊದಲೇ ಸಮರ್ಪಣೆ ಆಗಿ ಗರ್ಭ ಧರಿಸುವ ಹುಡುಗಿಯ ಮುಗ್ಧತೆ, ಆ ಮಗುವನ್ನು ಗರ್ಭದಲ್ಲಿ ಸಾಯಿಸದೇ ಹೆರುವ ಸಂಕಲ್ಪ, ಮುಂದೆ ಅನಾಥಾಶ್ರಮದಲ್ಲಿ ಆ ಮಗುವನ್ನು ಬಿಟ್ಟು ಬರುವ ಸಂದಿಗ್ಧತೆ ಎಲ್ಲವನ್ನೂ ಲಕ್ಷ್ಮಿ ತುಂಬಾ ಚೆನ್ನಾಗಿ ತೆರೆದು ತೋರಿದ್ದರು.

ಜ್ಯೂಲಿ ನಿರ್ದೇಶಕ ಸೇತುಮಾಧವನ್

ಒಂದು ಕಡೆ ತಾಯ್ತನದ ತುಡಿತವನ್ನು ಮೆಟ್ಟಿ ನಿಲ್ಲಲು ಆಗದೆ ಆಕೆ ಪಡುವ ವೇದನೆ, ಮತ್ತೊಂದು ಕಡೆ ಸಮಾಜವನ್ನು ಎದುರಿಸಲು ಆಗದೆ ಆಕೆ ಪಡುವ ಆತಂಕಗಳು, ಕೊನೆಯಲ್ಲಿ ಮನೆಯವರ ಬೆಂಬಲ ಪಡೆದು ಪ್ರೀತಿಯನ್ನು ಗೆಲ್ಲಿಸಲು ಆಕೆ ಮಾಡುವ ಹೋರಾಟ….ಎಲ್ಲವೂ ಆ ಸಿನೆಮಾದಲ್ಲಿ ಅದ್ಭುತವಾಗಿ ಡಿಪಿಕ್ಟ್ ಆಗಿದ್ದವು. ಆ ಸಿನಿಮಾದ ನಾಯಕನಾಗಿ ನಟಿಸಿದ ವಿಕ್ರಂ ಮಕಂದಾರ್ ಮೂಲತಃ ಹುಬ್ಬಳ್ಳಿಯವರು.

ಮುಂದೆ ನಿಜ ಜೀವನದಲ್ಲಿಯೂ ಲಕ್ಷ್ಮಿ ಅವರನ್ನು ಎರಡನೇ ಮದುವೆ ಆಗುತ್ತಾರೆ. ಲಕ್ಷ್ಮಿಯ ತಂಗಿ ಆಗಿ ನಟಿಸಿದ ಶ್ರೀದೇವಿ ಮುಂದೆ ಭಾರತದ ಸೂಪರ್ ಸ್ಟಾರ್ ಆದರು. ಆ ಸಿನಿಮಾ ಆಗುವಾಗ ಶ್ರೀದೇವಿಗೆ ಕೇವಲ ಹನ್ನೊಂದು ವರ್ಷ ಆಗಿತ್ತು.

ಜ್ಯೂಲಿ ಸಿನಿಮಾದ ಹೈಲೈಟ್ ಅದರ ಸಂಗೀತ

ಈಗಲೂ ಚಿರಂಜೀವಿ ಆಗಿರುವ ಈ ಸಿನಿಮಾದ ‘My heart is beeting’ ಹಾಡು ಆಗಿನ ಯುವಜನತೆಯ ಹಾರ್ಟ್ ಥ್ರೋಬ್ ಆಗಿತ್ತು. ಭೂಲ್ ಗಯಾ ಸಬ್ ಕುಚ್, ದಿಲ್ ಕ್ಯಾ ಕರೇ ಜಬ್ ಕಿಸೀಸೆ ಈ ಹಾಡುಗಳನ್ನು ಮರೆಯಲು ಸಾಧ್ಯವೇ ಇಲ್ಲ. ಈ ಸಿನಿಮಾಕ್ಕೆ ಸಂಗೀತ ನೀಡಿದವರು ರಾಜೇಶ್ ರೋಷನ್. ಆಗ ಅವರಿಗೆ ಕೇವಲ 19 ವರ್ಷ ಆಗಿತ್ತು! ಆನಂದ್ ಭಕ್ಷಿ ಬರೆದ ಅಷ್ಟೂ ಹಾಡುಗಳನ್ನು ಕಿಶೋರ್ ಕುಮಾರ್ ಮತ್ತು ಲತಾ ಮಂಗೇಶ್ಕರ್ ಅದ್ಭುತವಾಗಿ ಹಾಡಿದ್ದರು.

ಲಕ್ಷ್ಮಿ ಆ ಸಿನಿಮಾದ ಮೂಲಕ ಕೀರ್ತಿಯ ಶಿಖರವನ್ನು ಏರಿದರು. ಅವರು ಹಿಂದೀ ಸೇರಿದಂತೆ ಕನ್ನಡ, ಮಲಯಾಳಂ, ತೆಲುಗು, ತಮಿಳು ಭಾಷೆಗಳಲ್ಲಿಯೂ ನಟಿಸಿ ಪಂಚಭಾಷಾ ತಾರೆ ಎಂಬ ಕೀರ್ತಿ ಪಡೆದರು. ಆ ಎಲ್ಲ ಭಾಷೆಗಳಲ್ಲಿಯೂ ಆಕೆ ತನ್ನ ಸಂಭಾಷಣೆಯನ್ನು ತಾನೇ ಡಬ್ ಮಾಡಿದ್ದು ವಿಶೇಷ. ಅದೇ ರೀತಿ ಐದೂ ಭಾಷೆಗಳಲ್ಲಿಯೂ ಅತ್ಯುತ್ತಮ ನಟಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದ ಮೊದಲ ಮತ್ತು ಏಕೈಕ ನಟಿ ಎಂದರೆ ಅದು ಲಕ್ಷ್ಮಿ ಮಾತ್ರ! ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ದಕ್ಷಿಣ ಭಾರತದ ನಟಿ ಅದು ಲಕ್ಷ್ಮಿ.

ಆ ವರ್ಷದ ಫಿಲ್ಮ್ ಫೇರ್ ಪ್ರಶಸ್ತಿಗಳ ರೇಸಲ್ಲಿ ಶೋಲೆ ಮತ್ತು ಜೂಲಿ ಸಿನಿಮಾಗಳು ಭಾರೀ ಸ್ಪರ್ಧೆ ಮಾಡಿದವು. ಶೋಲೆ ಸಿನಿಮಾಕ್ಕೆ ಒಂದೇ ಪ್ರಶಸ್ತಿ ಬಂದರೆ ಜ್ಯೂಲಿಗೆ ಮೂರು ಪ್ರಶಸ್ತಿಗಳು ಬಂದು ಬಾಲಿವುಡ್ ಅಹಂ ಮುರಿದಿತ್ತು. ಲಕ್ಷ್ಮಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿಯು ಕೂಡ ದೊರಕಿತ್ತು.

ಇದನ್ನೂ ಓದಿ: Raja Marga Column : ಮೊದಲು ನಿಮ್ಮ ಹೃದಯವನ್ನು ನೀವು ಪ್ರೀತಿಸಿ, ಬೇರೆಯವರ ಹೃದಯ ಆಮೇಲೆ ನೋಡ್ಕೊಳೋಣ!

ನಾನು ಜನರ ಕಣ್ಣಲ್ಲಿ ಜ್ಯೂಲಿ ಆಗಿಯೇ ಇರಲು ಬಯಸುತ್ತೇನೆ!

2012ರಲ್ಲಿ ಸೇತು ಮಾಧವನ್ ಅವರ ಮಗ ಸಂತೋಷ್ ಅವರು ಜೂಲಿ ಸಿನಿಮಾವನ್ನು ಮರು ಸೃಷ್ಟಿ ಮಾಡಲು ಹೊರಟರು. ಆಗ ಲಕ್ಷ್ಮಿ ಅವರನ್ನು ಸಂಪರ್ಕ ಮಾಡಿ ಜ್ಯೂಲಿಯ ತಾಯಿಯ ಪಾತ್ರವನ್ನು ಅಭಿನಯಿಸಲು ಕೇಳಿಕೊಂಡರು. ಆಗ ಲಕ್ಷ್ಮಿ ಅದನ್ನು ನಿರಾಕರಿಸಿ ಹೇಳಿದ ಮಾತು – ನಾನು ಜನರ ಕಣ್ಣಲ್ಲಿ ಜ್ಯೂಲಿಯಾಗಿಯೇ ಇರಲು ಬಯಸುತ್ತೇನೆ!

Exit mobile version