Site icon Vistara News

Raja Marga Column : ಕನ್ನಡ ಶಾಲೆಗಳೆಂಬ ಭೂಲೋಕದ ಸ್ವರ್ಗಗಳು!

Kannada School Children

ನಾನು ಪ್ರಾಥಮಿಕ ಶಿಕ್ಷಣ (Primary Education) ಪಡೆದದ್ದು ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ (Kannada Medium School) ಅನ್ನೋದನ್ನು ಮೊದಲಾಗಿ ಹೆಮ್ಮೆಯಿಂದ ಹೇಳುತ್ತೇನೆ. ನಾನು ಓದಿದ್ದು ಕಾರ್ಕಳ ತಾಲೂಕಿನ ಕಾಬೆಟ್ಟು ಶಾಲೆಯಲ್ಲಿ. ನಾನು ಕಲಿಯುವಾಗ (1970-77) ನನ್ನ ಪ್ರಾಥಮಿಕ ಶಾಲೆಯಲ್ಲಿ (Primary School) 500+ ಮಕ್ಕಳು ಇದ್ದರು. ಒಂದು ಡಜನ್ ಅತ್ಯದ್ಭುತವಾದ ಶಿಕ್ಷಕರು ಇದ್ದರು. ಶಾಲೆಯಲ್ಲಿ ಎಲ್ಲ ಸಮುದಾಯದ ಮಕ್ಕಳು ಇದ್ದರೂ ಎಲ್ಲರೂ ಕನ್ನಡದಲ್ಲಿ ಮಾತಾಡುತ್ತಿದ್ದರು. ಈಗ ಸರಕಾರವು ಶಾಲೆಯಲ್ಲಿ ಕೊಡುವ ಯಾವ ಉಚಿತ ಸೌಲಭ್ಯವೂ ಆಗ ಇರಲಿಲ್ಲ. ಓದುವ, ಬರೆಯುವ ಪುಸ್ತಕಗಳು, ಯೂನಿಫಾರ್ಮ್, ಮಧ್ಯಾಹ್ನದ ಬಿಸಿ ಊಟ, ಬ್ಯಾಗ್ ಯಾವುದೂ ಉಚಿತ ಇರಲಿಲ್ಲ. ಆದರೆ ಅತ್ಯುತ್ತಮ ಶಿಕ್ಷಕರು ಇದ್ದ ಕಾರಣ ಆ ಉಚಿತಗಳ ಬಗ್ಗೆ ಯಾರೂ ಆಸೆ ಪಡುತ್ತಿರಲಿಲ್ಲ. (Raja Marga Column)

ಜಾನೇ ಕಹಾನ್ ಗಯೇ ಓ ದಿನ್..

ಮಧ್ಯಾಹ್ನ ಎಲ್ಲರೂ ಮನೆಯಿಂದ ಬುತ್ತಿ ಊಟ ತೆಗೆದುಕೊಂಡು ಬರುವುದು ಅಭ್ಯಾಸ. ಹತ್ತಿರ ಮನೆ ಇದ್ದವರು ಓಡಿ ಹೋಗಿ ಮನೆಯಲ್ಲಿ ಊಟ ಮಾಡಿ ಬರುತ್ತಿದ್ದರು. ಒಬ್ಬರ ಬುತ್ತಿಯಲ್ಲಿ ಒಬ್ಬರು ಕೈ ಹಾಕಿ ಕಿತ್ತಾಡಿ ತಿಂದರೆ ಆ ಊಟ ಜೀರ್ಣ ಆಗುತ್ತಿತ್ತು. ನಮ್ಮ ಶಾಲೆಯ ಒಬ್ಬೊಬ್ಬ ಶಿಕ್ಷಕರೂ ಒಂದೊಂದು ಮೌಲ್ಯವೇ ಆಗಿದ್ದರು. ಮಧ್ಯಾಹ್ನ ಊಟ ತಾರದ ಮಕ್ಕಳಿಗೆ ಟೀಚರ್ ತಮ್ಮ ಬುತ್ತಿಯಿಂದ ಕೈ ತುತ್ತು ಕೊಟ್ಟು ಊಟ ಮಾಡಿಸುತ್ತಿದ್ದರು! ಶಾಲೆಯಲ್ಲಿ ಪ್ರತೀ ಶುಕ್ರವಾರ ಭಜನೆ ಇತ್ತು. ಎಲ್ಲ ಸಮುದಾಯದ ಮಕ್ಕಳೂ ಭಜನೆಗೆ ಭಕ್ತಿಯಿಂದ ಕುಳಿತುಕೊಂಡು ಭಜನೆ ಹಾಡುತಿದ್ದರು. ವರ್ಷಕ್ಕೊಮ್ಮೆ ಶಾರದಾ ಪೂಜೆ ಇದ್ದೇ ಇರುತ್ತಿತ್ತು.

ಆಲದ ಮರದ ಬುಡದ ಬಯಲು ತರಗತಿಗಳು

ದಿನಕ್ಕೊಮ್ಮೆ ಶಿಕ್ಷಕರು ಮಕ್ಕಳನ್ನು ಶಾಲೆಯ ಹೊರಗಿರುವ ಅಶ್ವತ್ಥ ವೃಕ್ಷದ ಬುಡದಲ್ಲಿ ಇರುವ ಕಟ್ಟೆಯ ಮೇಲೆ ಕೂರಿಸಿ ಪಾಠವನ್ನು ಮಾಡುತ್ತಿದ್ದರು. ಅದು ವಿದ್ಯಾರ್ಥಿಗಳಿಗೆ ನಿಜವಾದ ಜೀವನ ಪಾಠ ಆಗಿತ್ತು. ಶಿಕ್ಷಣ ಅನ್ನುವುದು ಆಗ ಪರೀಕ್ಷೆಗೆ ತಯಾರಿ ಆಗಿರಲಿಲ್ಲ. ಅದು ಬದುಕಿಗೇ ಸಿದ್ಧತೆ ಆಗಿರುತ್ತಿತ್ತು. ಶಿಕ್ಷಕರು ತಪ್ಪಿಯೂ ತರಗತಿಯಲ್ಲಿ ಪರೀಕ್ಷೆಗಳ ಬಗ್ಗೆ ಮಾತಾಡುತ್ತಿರಲಿಲ್ಲ. ಪರೀಕ್ಷೆಯಲ್ಲಿ ಎಷ್ಟು ಅಂಕ ಬಂದರೂ ಹೆತ್ತವರು ಪ್ರಗತಿ ಪತ್ರದಲ್ಲಿ ಕಣ್ಣು ಮುಚ್ಚಿ ಸಹಿ ಮಾಡುತ್ತಿದ್ದರು. ಶಾಲೆಯಲ್ಲಿ ಅವನು ಫಸ್ಟ್, ಇವನು ಸೆಕೆಂಡ್ ಎಂದು ಯಾರೂ ಮಾತಾಡಿದ್ದು ನನಗೆ ಗೊತ್ತೇ ಇರಲಿಲ್ಲ.

ವರ್ಷಕ್ಕೊಮ್ಮೆ ನಡೆಯುವ ವಾರ್ಷಿಕೋತ್ಸವ ಅದು ಅದ್ಭುತ. ಅದು ಇಡೀ ಊರಿನ ಉತ್ಸವ ಆಗಿತ್ತು. ರಾತ್ರಿ ಇಡೀ ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳು. ಪೂರ್ವ ವಿದ್ಯಾರ್ಥಿಗಳ ಸಾಮಾಜಿಕ ನಾಟಕ. ಅದಕ್ಕಾಗಿ ಕನಿಷ್ಠ ಒಂದೂವರೆ ತಿಂಗಳ ರಿಹರ್ಸಲ್ ಇದ್ದೇ ಇರುತ್ತಿತ್ತು. ಏಳು ವರ್ಷಗಳ ಕಾಲ ಏಳು ಪಾತ್ರಗಳು ನಮ್ಮೊಳಗೆ ಇಳಿಯುತ್ತ ಹೋಗಿದ್ದವು. ಲವನಿಂದ ಆರಂಭ ಮಾಡಿ ಸತ್ಯ ಹರಿಶ್ಚಂದ್ರನವರೆಗೆ!

ಸ್ಪರ್ಧೆಯೇ ಇಲ್ಲದ ಮುಕ್ತವಾದ ಕಲಿಕೆಯ ವಾತಾವರಣ

ಒಬ್ಬ ಶಿಕ್ಷಕರೂ ಸಿಲೆಬಸ್ ಮುಗಿಸಲು ತೊಂದರೆ ಆಯ್ತು ಎಂದು ಗೊಣಗಿದ್ದು ನಮಗೆ ಗೊತ್ತೇ ಇಲ್ಲ! ಆದರೂ ಸಿಲೆಬಸ್ ಮುಗಿಯುತ್ತಿತ್ತು. ತರಗತಿಯಲ್ಲಿ ಫಸ್ಟ್ ಬರಬೇಕು ಎಂದು ಯಾವ ವಿದ್ಯಾರ್ಥಿಯೂ ರೇಸಿಗೆ ನಿಲ್ಲುತ್ತಿರಲಿಲ್ಲ. ವರ್ಷಕ್ಕೆ ನೂರಾರು ಸ್ಪರ್ಧೆಗಳು ನಡೆಯುತ್ತಿದ್ದವು. ಅಲ್ಲಿ ಕೂಡ ಭಾಗವಹಿಸುವುದೇ ಖುಷಿ. ಬಹುಮಾನದ ಬಗ್ಗೆ ಯಾರೂ ಯೋಚನೆ ಮಾಡಿದ್ದು ಇಲ್ಲ. ಶಾಲೆಗಳಲ್ಲಿ ಶ್ರೀಮಂತ ಮತ್ತು ಬಡವರ ಮಕ್ಕಳು ಎಲ್ಲರೂ ಇದ್ದರು. ಆದರೆ ಬೇಧ ಭಾವ ಇರಲಿಲ್ಲ. ಸಮಾನತೆಯೇ ಅಲ್ಲಿ ಮೂಲಮಂತ್ರ ಆಗಿತ್ತು.

ಶಾಲೆಗಳಲ್ಲಿ ಒಳ್ಳೆಯ ಕನ್ನಡ ಅಧ್ಯಾಪಕರು ಇದ್ದರು. ವಿದ್ಯಾರ್ಥಿಗಳು ದೇವರಾಣೆಗೂ ಯಾವುದನ್ನೂ ಬಾಯಿಪಾಠ ಮಾಡುತ್ತಿರಲಿಲ್ಲ. ಎಲ್ಲವನ್ನೂ ಶಿಕ್ಷಕರು ಅರ್ಥ ಮಾಡಿಸುತ್ತಿದ್ದರು. ಶಿಕ್ಷಕರೇ ಅಭಿನಯ ಮಾಡಿ ಪಾಠ ಮಾಡುವ ವ್ಯವಸ್ಥೆಯು ತುಂಬಾ ಚೆನ್ನಾಗಿತ್ತು. ಶಿಕ್ಷಕರ ಬಗ್ಗೆ ಗೌರವದ ಭಾವನೆ ಹೆಚ್ಚಿತ್ತು. ಶಿಕ್ಷಕರು ತರಗತಿಗೆ ಬರುವಾಗ ಬೆತ್ತವನ್ನು ತರುತ್ತಿದ್ದರು. ಆದರೆ ಹೊಡೆದದ್ದು ಕಡಿಮೆ. ಶಿಕ್ಷಕರು ಒಂದೆರಡು ಪೆಟ್ಟು ಕೊಟ್ಟರೂ ಹೆತ್ತವರು ಶಾಲೆಗೆ ಬಂದು ‘ಯಾಕೆ ಹೊಡೆದದ್ದು?’ ಎಂದು ಕೇಳುತ್ತಿರಲಿಲ್ಲ. ಶಿಕ್ಷಕರಿಗೆ ಹೆಚ್ಚು ದಾಖಲೆಗಳ ನಿರ್ವಹಣೆ ಇರಲಿಲ್ಲ. ತುಂಬಾ ಸುತ್ತೋಲೆ ಇರಲಿಲ್ಲ. ಇಲಾಖೆಗಳ ಟಾರ್ಗೆಟ್ ಇರಲಿಲ್ಲ. ಆದರೆ ವರ್ಷಕ್ಕೊಮ್ಮೆ ತಪಾಸಣೆ ಜೋರಿತ್ತು. ಶಿಕ್ಷಕರು ಆತಂಕ ಇಲ್ಲದೇ ನೆಮ್ಮದಿಯಿಂದ ಪಾಠ ಮಾಡುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಶಿಕ್ಷಕರಿಗೆ ಶಾಲೆಯೇ ದೇವಸ್ಥಾನ ಆಗಿತ್ತು. ನನ್ನ ಅಮ್ಮ ಅದೇ ಶಾಲೆಯಲ್ಲಿ ಟೀಚರ್ ಆಗಿದ್ದರು. ಕೇವಲ 15 ದಿನ ಹೆರಿಗೆ ರಜೆ ಹಾಕಿ 16ನೆ ದಿನ ಶಾಲೆಗೆ ಬಂದು ಪಾಠ ಮಾಡಿದವರು ಅವರು!

ಶಾಲೆಗೆ ದೊಡ್ಡ ಕ್ರೀಡಾಂಗಣ

ಶಾಲೆಗೆ ದೊಡ್ಡ ಕ್ರೀಡಾಂಗಣ ಇತ್ತು. ದಿನಕ್ಕೊಂದು ಆಟದ ಪೀರಿಯಡ್ ಇರುತ್ತಿತ್ತು. ಪರೀಕ್ಷೆಗಳ ದಿನಗಳಲ್ಲಿ ಕೂಡ ಮಕ್ಕಳು ಆಟ ಆಡ್ತಾ ಇದ್ದರು. ಶಾಲೆಯಲ್ಲಿ ದೊಡ್ಡ ಗ್ರಂಥಾಲಯ, ತರಕಾರಿ ತೋಟ, ವಿಜ್ಞಾನ ಲ್ಯಾಬ್ ಇರುತ್ತಿತ್ತು. ಶಿಕ್ಷಕರು ತುಂಬಾ ಓದುತ್ತಿದ್ದರು. ಅದರಿಂದಾಗಿ ಸಹಜವಾಗಿ ಮಕ್ಕಳು ಓದುತ್ತಿದ್ದರು. ವಿದ್ಯಾರ್ಥಿಗಳು ಯಾವುದನ್ನೂ ಬಾಯಿಪಾಠ ಮಾಡುತ್ತಿರಲಿಲ್ಲ. ಮಕ್ಕಳಿಗೆ ಸ್ವಂತ ಉತ್ತರ ಬರೆಯುವ ಶಕ್ತಿಯನ್ನು ಶಿಕ್ಷಕರು ತುಂಬುತ್ತಿದ್ದರು.

ಆಗಿನ ಶಾಲೆಗಳಲ್ಲಿ ಪಾಸ್ ಮತ್ತು ಫೇಲ್ ಇರುತ್ತಿತ್ತು. ಫೇಲ್ ಆದರೆ, ಅಥವಾ ಮಾರ್ಕ್ ಕಡಿಮೆ ಬಂದರೆ ಒಬ್ಬ ಹುಡುಗನೂ ದುಃಖ ಪಡುತ್ತಿರಲಿಲ್ಲ. ಆತ್ಮಹತ್ಯೆಯ ಮಾತೇ ಇಲ್ಲ.

ಹೃದಯವಂತ ಕನ್ನಡ ಶಾಲೆಗಳು

ಶಾಲೆಗಳು ಆಗ ನಮಗೆ ಕೇವಲ ನಾಲ್ಕು ಗೋಡೆಗಳ ಕಟ್ಟಡ ಆಗಿರಲಿಲ್ಲ. ಅದೊಂದು ಇಮೋಷನ್ ಆಗಿತ್ತು! ಈಗಲೂ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದವರಿಗೆ ಅದು ಇಮೋಶನ್ ಆಗಿದೆ.

ಮಾಸಿದ ಗೋಡೆಗಳು, ಹರಿದು ಹೋದ ಚಲ್ಲಣ, ಕಿತ್ತುಹೋದ ಚಪ್ಪಲಿ, ಒಡೆದು ಹೋದ ಸ್ಲೇಟು, ಮುರಿದ ಕಡ್ಡಿಯ ಚೂರು….. ಇವ್ಯಾವುದೂ ಅಪಮಾನ ಎಂಬ ಭಾವನೆಯೇ ನಮಗೆ ಇರಲಿಲ್ಲ. ಶಿಕ್ಷಕರು ತಾರತಮ್ಯ ಮಾಡಿದ್ದು ನಮಗೆ ಗೊತ್ತೇ ಇರಲಿಲ್ಲ. ವಿದ್ಯಾರ್ಥಿಗಳು ಒಬ್ಬರಿಗೆ ಒಬ್ಬರು ಸಹಾಯ ಮಾಡುತ್ತಿದ್ದರು. ಹಂಚಿ ತಿನ್ನುವ ಬುದ್ಧಿ ಇತ್ತು. ಶಾಲೆಯಲ್ಲಿ ತರಕಾರಿ ಮತ್ತು ಹೂವಿನ ತೋಟವನ್ನು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸೇರಿ ಮಾಡಿದ್ದರು. ಮಕ್ಕಳಿಗೆ ಶಾಲೆಯ ಯಾವುದೇ ಕೆಲಸ ಮಾಡಲು ನಾಚಿಕೆ ಇರಲಿಲ್ಲ. ಹೆತ್ತವರು ಅದನ್ನು ಆಕ್ಷೇಪಣೆ ಮಾಡುತ್ತಲೇ ಇರಲಿಲ್ಲ.

ಶಾಲೆಯಲ್ಲಿ ಎಲ್ಲ ಮಕ್ಕಳೂ ಭಾಗವಹಿಸುವ ಅಸೆಂಬ್ಲಿ ದಿನವೂ ನಡೆಯುತ್ತಿತ್ತು. ‘ತಾಯಿ ಶಾರದೆ’ ಹಾಡಿನಿಂದ ಆರಂಭ. ನಾಡಗೀತೆ ಆಗ ಇರಲಿಲ್ಲ. ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯ. ಅದರ ನಡುವೆ ವಾರ್ತೆಗಳು, ಚಿಂತನ, ಹುಟ್ಟುಹಬ್ಬದ ಶುಭಾಶಯ ವಿನಿಮಯ, ದಿನಕ್ಕೊಂದು ಶಿಕ್ಷಕರ 3-5 ನಿಮಿಷ ಭಾಷಣ. ವಿದ್ಯಾರ್ಥಿಗಳು ಬಿಸಿಲಿಗೆ ನಿಂತು ಇದನ್ನೆಲ್ಲ ಕೇಳುತ್ತಿದ್ದರು. ಅಸೆಂಬ್ಲಿ ಅಂದರೆ ಎಲ್ಲರಿಗೂ ಖುಷಿ. ಯಾಕೆಂದರೆ ಅಲ್ಲಿ ಎಲ್ಲ ತರಗತಿಯ ವಿದ್ಯಾರ್ಥಿಗಳು ಸೇರುತ್ತಿದ್ದರು. ಶಿಕ್ಷಕರು ಶಿಕ್ಷೆ ಕೊಡದಿದ್ದರೂ ಶಾಲೆಯಲ್ಲಿ ಸಹಜ ಶಿಸ್ತು ಇರುತ್ತಿತ್ತು. ಸ್ವಚ್ಛತೆಯ ಬಗ್ಗೆ ಜಾಗೃತಿ ಮಕ್ಕಳಲ್ಲಿ ತುಂಬಾ ಇತ್ತು.

ಆಗಲೂ ಶಾಲಾಮಟ್ಟದ ವಿದ್ಯಾರ್ಥಿ ಸರಕಾರ ಇರುತ್ತಿತ್ತು. ಚುನಾವಣೆ ನಡೆಯುತ್ತಿತ್ತು. ಆದರೆ ಯೋಗ್ಯರು ಆರಿಸಿ ಬರುತ್ತಿದ್ದರು. ಯಾವ ರಾಜಕೀಯ ಪಕ್ಷಗಳು ಶಾಲೆಯ ಕ್ಯಾಂಪಸ್ ಒಳಗೆ ಬರುತ್ತಿರಲಿಲ್ಲ. ಈಗಿನ ಪ್ರೋಟೋಕಾಲ್ ತೊಂದರೆಗಳು ಆಗ ಇರಲಿಲ್ಲ.

ಕನ್ನಡ ಶಾಲೆಗಳಲ್ಲಿ ಉತ್ತಮವಾಗಿ ಪಾಠ ಮಾಡುವ ಇಂಗ್ಲಿಷ್ ಶಿಕ್ಷಕರು ಇರುತ್ತಿದ್ದರು. ಮಕ್ಕಳು ಕನ್ನಡದಷ್ಟೆ ಸುಲಭವಾಗಿ ಇಂಗ್ಲೀಷ್ ಭಾಷೆ ಮಾತಾಡುತ್ತಿದ್ದರು. ಶಿಕ್ಷಕರ ವರ್ಗಾವಣೆ ಈಗಿನಷ್ಟು ಜಟಿಲ ಆಗಿರಲಿಲ್ಲ. ಆದರೆ ಶಿಕ್ಷಕರು ಒಂದು ಶಾಲೆಯಲ್ಲಿ ಸೇರಿಕೊಂಡರೆ ಬೇರೆಡೆ ವರ್ಗಾವಣೆ ಕೇಳಿಕೊಂಡು ಹೋಗುತ್ತಿರಲಿಲ್ಲ. ಹಾಗೊಮ್ಮೆ ಶಿಕ್ಷಕರಿಗೆ ವರ್ಗಾವಣೆ ಆದರೆ ವಿದ್ಯಾರ್ಥಿಗಳು ಕಣ್ಣೀರು ಸುರಿಸಿ ಅವರನ್ನು ಕಳುಹಿಸಿಕೊಡುವ ದೃಶ್ಯಗಳು ಶಾಲೆಯಲ್ಲಿ ಸಾಮಾನ್ಯ ಆಗಿದ್ದವು. ವರ್ಷದ ಕೊನೆಗೆ ಸೆಂಡಾಫ್ ಕಾರ್ಯಕ್ರಮ ಬಂದಾಗ ಎಲ್ಲರೂ ಅಳುವುದು ಕಾಮನ್.

ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಣವು ವ್ಯಾಪಾರ ಆಗಿರಲಿಲ್ಲ

ವಿದ್ಯೆಯನ್ನು ಮಾರಬಾರದು ಎಂದರು ನಮ್ಮ ಹಿರಿಯರು. ಆದರೆ ಇಂದು ಶಿಕ್ಷಣವು ನಮ್ಮ ದೇಶದ ಅತೀ ದೊಡ್ಡ ವ್ಯಾಪಾರ ಅಂದರೆ ನೀವು ನಂಬಲೇ ಬೇಕು!
ಆಗಿನ ಶಿಕ್ಷಕರು ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತಲು ಯಾವಾಗಲೂ ಮುಂದೆ ಇರುತ್ತಿದ್ದರು. ಶಿಕ್ಷಕರಿಗೆ ಯಾವ ದುರಭ್ಯಾಸ ಇರಲಿಲ್ಲ. ಆಸಕ್ತಿ ಇದ್ದವರು ಮಾತ್ರ ಶಿಕ್ಷಕ ವೃತ್ತಿಗೆ ಬರುತ್ತಿದ್ದ ಕಾಲ ಅದು. ಯಾವ ಶಿಕ್ಷಕರೂ ಬೇರೆ ಬಿಸಿನೆಸ್ ಮಾಡ್ತಾ ಇರಲಿಲ್ಲ.

ಒತ್ತಡ ಇಲ್ಲದ ಸಂತಸದ ಕಲಿಕೆಗೆ ಪೂರಕವಾಗಿ ಏನೆಲ್ಲ ಬೇಕೋ ಅದನ್ನೆಲ್ಲ ಕನ್ನಡ ಶಾಲೆಗಳು ಖಾತರಿ ಮಾಡುತ್ತಿದ್ದವು. ಕನ್ನಡ ಶಾಲೆಗಳಲ್ಲಿ ಓದಿದವರು ಡಾಕ್ಟರ್, ಲೆಕ್ಚರರ್, ಎಂಜಿನಿಯರ್, ವಿಜ್ಞಾನಿ, ಉದ್ಯಮಿ, ಕಲಾವಿದ, ಶಿಕ್ಷಕ…. ಎಲ್ಲವೂ ಆಗುತ್ತಿದ್ದರು. ಈಗಲೂ ಆಗುತ್ತಿದ್ದಾರೆ.

ಹೃದಯ ಶ್ರೀಮಂತಿಕೆಯಲ್ಲಿ ಆಗಿನ ಕನ್ನಡ ಶಾಲೆಯ ವಿದ್ಯಾರ್ಥಿಗಳು ಸದಾ ಮುಂದೆ ಇರುತ್ತಿದ್ದರು. ಶಿಕ್ಷಕರಿಗೆ ಆಗ ಸಂಬಳ ಕಡಿಮೆ ಇರುತ್ತಿತ್ತು. ಆದರೆ ಸಮಾಜದಲ್ಲಿ ಗೌರವ ಹೆಚ್ಚಿತ್ತು. ಆದರೆ ಈಗ ಉಲ್ಟಾ ಆಗಿದೆ ಅಲ್ವಾ?

ಈಗೆಲ್ಲ ಕನ್ನಡ ಶಾಲೆಗಳು ಹಾಳಾಗಿವೆ ಎಂದು ಹೇಳುವುದು ಈ ಲೇಖನದ ಉದ್ದೇಶ ಅಲ್ಲ.

ಈಗಲೂ ಕನ್ನಡ ಶಾಲೆಗಳು ತುಂಬ ಚೆನ್ನಾಗಿವೆ. ತುಂಬಾ ಪರಿಣತ ಶಿಕ್ಷಕರನ್ನು ಸರಕಾರ ನೇಮಕ ಮಾಡಿದೆ. ಆದರೆ ಎಲ್ಲ ಶಾಲೆಗಳಲ್ಲಿ ಶಿಕ್ಷಕರ ಕೊರತೆಯು ಇದೆ. ತರಗತಿಗೊಬ್ಬ ಶಿಕ್ಷಕರ ನೇಮಕ ಆಗಬೇಕು ಅನ್ನುವುದು ಆಶಯ. ಒಂದು ಅದ್ಭುತವಾದ ದೇವಸ್ಥಾನ ಕಟ್ಟಿ ಗರ್ಭಗುಡಿಯಲ್ಲಿ ದೇವರನ್ನು ಸ್ಥಾಪನೆ ಮಾಡದಿದ್ದರೆ ಹೇಗೆ?

ಇದನ್ನೂ ಓದಿ: Raja Marga Column: ಸಚಿನ್ ‘ಟೆನ್ನಿಸ್ ಎಲ್ಬೋ’ ಗೆದ್ದದ್ದು ಚಿಕಿತ್ಸೆಯಿಂದ ಅಲ್ಲ, ಮತ್ತೆ ಹೇಗೆ?

ಉಳಿದಂತೆ ಸರಕಾರದ ಎಲ್ಲ ಉಚಿತ ಸೌಲಭ್ಯಗಳು ಮಕ್ಕಳಿಗೆ ದೊರೆಯುತ್ತಿವೆ. ಅವುಗಳು ವರ್ಷದ ಮೊದಲೇ ಸಿಕ್ಕಿದರೆ ತುಂಬ ಒಳ್ಳೆಯದು. ಇಂದು ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯು ಪಾತಾಳಕ್ಕೆ ಹೋಗಿದೆ. ಕೆಲವು ಮಾದರಿ ಶಾಲೆಗಳು ಇಂದಿಗೂ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿವೆ. ಅದಕ್ಕೆ ಶಿಕ್ಷಕರ ಪ್ರಭಾವ ಕಾರಣವೇ ಹೊರತು ಬೇರೆ ಏನೂ ಅಲ್ಲ.

ಸರಕಾರವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ತುಂಬಿದರೆ, ಇಂಗ್ಲಿಷ್ ಮಾಧ್ಯಮದ ಶಾಲೆಗಳ ಪರವಾಗಿರುವ ಹೆತ್ತವರ ಮೈಂಡ್‌ಸೆಟ್‌ ಕನ್ನಡ ಮಾಧ್ಯಮ ಶಾಲೆಗಳ ಪರವಾಗಿ ಬದಲಾದರೆ, ನಮ್ಮ ಕನ್ನಡದ ಶಾಲೆಗಳು ಖಂಡಿತವಾಗಿ ಭೂಲೋಕದ ಸ್ವರ್ಗವೇ ಆಗುತ್ತವೆ. ಏನಂತೀರಿ?

Exit mobile version