Site icon Vistara News

Raja Marga Column : ಅಂದು ಕಪಿಲ್ ದೇವ್ ಮೈಯಲ್ಲಿ ಆವೇಶ ಬಂದಿತ್ತು‌, ಥೇಟ್ ಕಾಂತಾರ ಸ್ಟೈಲಲ್ಲಿ!

Kapil dev in 1983 World Cup

ಮೊನ್ನೆ ವಿಶ್ವಕಪ್ ಕೊನೆಯ ಲೀಗ್ ಪಂದ್ಯದಲ್ಲಿ (ICC World Cup 2023) ಅಫಘಾನಿಸ್ತಾನ ವಿರುದ್ಧ (Australia Vs Afghanistan) ಗ್ಲೆನ್ ಮ್ಯಾಕ್ಸ್‌ವೆಲ್‌ (Glen Maxwell) ಮೈಯಲ್ಲಿ ಆವೇಶ ಬಂದ ಹಾಗೆ ಬ್ಯಾಟ್ ಬೀಸಿ ಡಬಲ್ ಸೆಂಚುರಿ ಬಾರಿಸಿದಾಗ ಮನಸ್ಸು ಬೇಡ ಬೇಡ ಅಂದರೂ 1983ರಷ್ಟು ಹಿಂದಕ್ಕೆ ಓಡಿತು. ಅಂದು ಭಾರತದ ಕಪ್ತಾನ ಕಪಿಲ್‌ ದೇವ್ (Kapil dev) ಅವರ ವೀರೋಚಿತ ಇನ್ನಿಂಗ್ಸ್ ಕೂಡಾ ಇದೇ ರೀತಿ ಇತ್ತು. ಭಾರತ 1983ರ ಏಕದಿನದ ವಿಶ್ವಕಪ್ (ICC World cup 1983) ಗೆದ್ದದ್ದು, ಕಪಿಲ್ ಹುಡುಗರು ಇಂಗ್ಲೆಂಡ್ ನೆಲದಲ್ಲಿ ಬಲಿಷ್ಠ ವಿಂಡೀಸನ್ನು ಗೆದ್ದು ಚಾಂಪಿಯನ್ ಆದದ್ದು ನಮಗೆಲ್ಲ ಗೊತ್ತಿದೆ. ಆದರೆ ಅದೇ ಕೂಟದಲ್ಲಿ ನಡೆದಿದ್ದ ರೋಮಾಂಚಕ ಭಾರತ ಮತ್ತು ಜಿಂಬಾಬ್ವೆ (India Vs Zimbabve) ಪಂದ್ಯದ ಬಗ್ಗೆ ನಾನಿಂದು ಬರೆಯಬೇಕು (Raja Marga Column),.

ಅಂದು 1983ರ ಜೂನ್ 18!

ಇಂಗ್ಲೆಂಡಿನ ವಿಸ್ತಾರವಾದ ಹಸಿರು ಹುಲ್ಲಿನ ಟನ್ ಬ್ರಿಜ್ ಕ್ರಿಕೆಟ್ ಮೈದಾನ. ಭಾರತ ವರ್ಸಸ್ ಜಿಂಬಾಬ್ವೆ ನಿರ್ಣಾಯಕ ಪಂದ್ಯ. ಭಾರತಕ್ಕೆ ಗೆಲ್ಲಲೇಬೇಕಾದ ಪಂದ್ಯ ಅದು. ಜಿಂಬಾಬ್ವೆ ಕೂಡ ಸಾಕಷ್ಟು ಬಲಿಷ್ಠ ಆಗಿಯೇ ಇತ್ತು. ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡಿತು. ಯಾರಿಗೂ ಈ ಪಂದ್ಯದ ಮೇಲೆ ಕುತೂಹಲ ಇಲ್ಲದ ಕಾರಣ ಗ್ರೌಂಡ್‌ನಲ್ಲಿ 4000 ಪ್ರೇಕ್ಷಕರು ಮಾತ್ರ ಇದ್ದರು!

ಭಾರತ ಒಂಬತ್ತು ರನ್ನಿಗೆ ನಾಲ್ಕು ವಿಕೆಟ್ ಪತನ!

ಆರಂಭಿಕ ಸುನೀಲ್ ಗವಾಸ್ಕರ್ ಸೊನ್ನೆ, ಶ್ರೀಕಾಂತ್ ಸೊನ್ನೆ, ಮೊಹಿಂದರ್ ಅಮರನಾಥ್ ಐದು, ಸಂದೀಪ್ ಪಾಟೀಲ್ ಒಂದು ರನ್ ಗಳಿಸಿ ಔಟ್! ಅಲ್ಲಿಗೆ ಭಾರತ 9 ರನ್ನಿಗೆ ನಾಲ್ಕು ವಿಕೆಟ್ ಪತನ ಆಗಿತ್ತು! ಆಗ ಭಾರತದ ಕಪ್ತಾನ ಕಪಿಲ್ ದೇವ್ ಭಾರವಾದ ಹೆಜ್ಜೆ ಹಾಕುತ್ತ ಕ್ರೀಸಿಗೆ ಬಂದಿದ್ದರು. ಮತ್ತೆ ಎಂಟು ರನ್ ಸೇರಿಸುವಾಗ ಯಶಪಾಲ್ ಶರ್ಮಾ ಔಟ್! ಅಲ್ಲಿಗೆ ಭಾರತ 17ಕ್ಕೆ 5!

ಭಾರತ ತಲೆ ಎತ್ತುವ ಯಾವ ಸನ್ನಿವೇಶವೂ ಆಗ ಇರಲಿಲ್ಲ. ಮೈದಾನದ ಪ್ರೇಕ್ಷಕರು ಒಬ್ಬೊಬ್ಬರೇ ಜಾಗ ಖಾಲಿ ಮಾಡ್ತಾ ಇದ್ದರು. ಆ ಪಂದ್ಯದಲ್ಲಿ ಯಾವುದೇ ಸ್ವಾರಸ್ಯವು ಆಗ ಉಳಿದಿರಲಿಲ್ಲ. ಜಿಂಬಾಬ್ವೆಯ ವೇಗದ ಬೌಲರ್‌ಗಳಾದ ಪೀಟರ್ ರಾಸನ್ ಮತ್ತು ಕೆವಿನ್ ಕರನ್ ಆಗಲೇ ತುಂಬಾ ಘಾತಕವಾಗಿ ಎರಗಿದ್ದರು! ಭಾರತ ಆ ಮ್ಯಾಚ್ ಸೋತಿದ್ದರೆ ಆಗಲೇ ಗಂಟು ಮೂಟೆ ಕಟ್ಟಿ ಭಾರತಕ್ಕೆ ಹಿಂದೆ ಬರಬೇಕಾಗಿತ್ತು.

ಆದರೆ ಕಪಿಲದೇವ್ ತಲೆಯಲ್ಲಿ ಬೇರೆಯೇ ಸಮೀಕರಣ ಓಡುತ್ತಿತ್ತು!

ಅರ್ಧ ಬ್ಯಾಟಿಂಗ್ ಬ್ಯಾಟರಿ ಆಗಲೇ ಪೆವಿಲಿಯನ್ ಸೇರಿ ಆಗಿತ್ತು. ಆದರೆ ಆಗ ಕಪಿಲ್ ದೇವ್ ತಲೆಯಲ್ಲಿ ಬೇರೆಯೇ ಸಮೀಕರಣ ಓಡುತ್ತಿತ್ತು. ಹೇಳಿ ಕೇಳಿ ಆತ ಒಬ್ಬ ಹುಟ್ಟು ಹೋರಾಟಗಾರ. ಶ್ರೇಷ್ಠ ಆಲ್ರೌಂಡರ್. ರೋಜರ್ ಬಿನ್ನಿ ಜೊತೆಗೆ ಒಂದೊಂದೇ ರನ್ ಕಲೆ ಹಾಕುತ್ತ ಕಪಿಲ್ ನೆಲ ಕಚ್ಚಿ ಆಡಲು ಆರಂಭ ಮಾಡಿಯಾಗಿತ್ತು. ಬಿನ್ನಿ ಜೊತೆಗೆ ಕಪಿಲ್ ಆರನೇ ವಿಕೇಟಿಗೆ ಕಲೆ ಹಾಕಿದ್ದು ಬೆಲೆ ಬಾಳುವ 60 ರನ್‌ಗಳನ್ನು. ಅಲ್ಲಿಗೆ ಬಿನ್ನಿ ಕೂಡ ಔಟ್.

ಭಾರತ 77ಕ್ಕೆ 6 ವಿಕೆಟ್ ಪತನ!

ರವಿಶಾಸ್ತ್ರಿ ಕ್ರೀಸಿಗೆ ಹಾಗೆ ಬಂದು ಹೀಗೆ ಹೋದರು. ಭಾರತ 78ಕ್ಕೆ 7 ವಿಕೆಟ್ ಬಿದ್ದಿತ್ತು. ಜಿಂಬಾಬ್ವೆ ಪಾಳಯದಲ್ಲಿ ಆಗಲೇ ಸೆಲೆಬ್ರೇಶನ್ ಆರಂಭ ಆಗಿತ್ತು. ಭಾರತೀಯ ಡ್ರೆಸ್ಸಿಂಗ್ ರೂಮಿನಲ್ಲಿ ನೀರವ ಮೌನ! ಆ ಮ್ಯಾಚ್ ಸೋತರೆ ಭಾರತ ವಿಶ್ವಕಪ್ ಆಸೆಯನ್ನು ಬಿಟ್ಟು ಭಾರತಕ್ಕೆ ಗಂಟುಮೂಟೆ ಕಟ್ಟಬೇಕಾಗಿತ್ತು. ಆಗ ಬ್ಯಾಟಿಂಗ್ ಕ್ರೀಸಿಗೆ ಬಂದ ಮದನ್ ಲಾಲ್ ನಿಧಾನಕ್ಕೆ 17 ರನ್ ಹೊಡೆದು ಔಟ್ ಆದರು. ಭಾರತ ಆಗಲೂ 140 ರನ್ನಿಗೆ ಎಂಟು ವಿಕೆಟ್ ಕಳೆದುಕೊಂಡು ಸಂಕಟದಲ್ಲಿ ಇತ್ತು!

ಆಗ ಕಪಿಲದೇವ್ ಮೈಯಲ್ಲಿ ಆವೇಶ ಬಂದಿತ್ತು!

ಭಾರತೀಯ ಕ್ರಿಕೆಟ್ ತಂಡ ಎಲ್ಲ ಭರವಸೆ ಕಳೆದುಕೊಂಡು ಇನ್ನೇನು ವಿಶ್ವಕಪ್ ಕೂಟದಿಂದ ಹೊರಬಿತ್ತು ಎನ್ನುವ ಮಾತುಗಳು ಎಲ್ಲೆಡೆ ಕೇಳಿಬಂದವು. ಆಗ ಕ್ರೀಸಿಗೆ ಬಂದವರು ವಿಕೆಟ್ ಕೀಪರ್ ಕಿರ್ಮಾನಿ. ಅವರು ಕರ್ನಾಟಕದವರು. ಆತ ಎಂದಿಗೂ ಬ್ಯಾಟಿಂಗ್ ಪರಿಣತಿಯನ್ನು ಹೊಂದಿದವರು ಅಲ್ಲ. ಆದರೆ ಕಿರ್ಮಾನಿ ಅಂದು ನಾಯಕನಿಗೆ ಒಂದೊಂದೇ ರನ್ ಕದಿಯುತ್ತ ಕೊಟ್ಟ ಸಾಥ್ ಇದೆಯಲ್ಲ ಅದು ಮೆಮೋರೆಬಲ್! ಒಂಬತ್ತನೇ ವಿಕೆಟಿಗೆ ಕಪಿಲ್ ಮತ್ತು ಕಿರ್ಮಾನಿ 126 ರನ್ ವಿಶ್ವದಾಖಲೆಯ ಜೊತೆಯಾಟ ಕಟ್ಟಿದರು. ಅದರಲ್ಲಿ ಕಿರ್ಮಾನಿ ಸ್ಕೋರ್ 24 ಮಾತ್ರ! ಉಳಿದೆಲ್ಲ ರನ್ ಸಿಡಿಸಿದ್ದು ಕಪಿಲ್ ಮತ್ತು ಕಪಿಲ್ ಮಾತ್ರ!

ಅಂದು ಕಪಿಲ್ ಮೈಯಲ್ಲಿ ಕಾಂತಾರ ಶೈಲಿಯಲ್ಲಿ ಆವೇಶ ಬಂದಿತ್ತು! ಭಾರತೀಯ ಕಪ್ತಾನ ಅಂದು ವಸ್ತುಶಃ ರೌದ್ರಾವತಾರವನ್ನು ತಾಳಿದ್ದರು! ಮೈದಾನದ ಮೂಲೆ ಮೂಲೆಗೂ ಮನಮೋಹಕ ಆದ 16 ಬೌಂಡರಿಗಳು ಮತ್ತು ಸಿಡಿಲಿನ ಅಬ್ಬರದ ಆರು ಸಿಕ್ಸರ್‌ಗಳು! ಕಪಿಲ್ ಅಂದು ಹೊಡೆದದ್ದು ಅಜೇಯ 175 ರನ್! ಅದು ಕೂಡ 138 ಎಸೆತಗಳಲ್ಲಿ! ಆಗಿನ ಕಾಲಕ್ಕೆ ODI ಪಂದ್ಯದಲ್ಲಿ 175 ರನ್ ವಿಶ್ವದಾಖಲೆಯೇ ಆಗಿತ್ತು. ಅದರಲ್ಲಿ ಕೂಡ ಕಪಿಲ್ ತನ್ನ ಕೊನೆಯ 75 ರನ್ ಹೊಡೆದದ್ದು ಕೇವಲ 38 ಬಾಲ್‌ಗಳಲ್ಲಿ!

ಅದರಲ್ಲಿ ಒಂದೇ ಒಂದು ತಪ್ಪು ಹೊಡೆತ ಇರಲಿಲ್ಲ! ಒಂದೇ ಒಂದು ಜೀವದಾನ ಇರಲಿಲ್ಲ! ಅಂತಹ ವೀರೋಚಿತವಾದ ಇನ್ನಿಂಗ್ಸ್ ಏಕದಿನದ ಪಂದ್ಯಗಳಲ್ಲಿ ಅದುವರೆಗೆ ಎಲ್ಲೂ ದಾಖಲು ಆಗಿರಲಿಲ್ಲ.

ಕಪಿಲ್ ಮತ್ತು ಕಿರ್ಮಾನಿ ಇಬ್ಬರೂ ಔಟ್ ಆಗದೆ ಹಿಂದೆ ಬಂದಾಗ ಭಾರತ 266/8 ಸ್ಕೋರ್ ತಲುಪಿತ್ತು. ಜಿಂಬಾಬ್ವೆ 235 ರನ್ನುಗಳಿಗೆ ಆಲೌಟ್ ಆಗಿ ಭಾರತ ಆ ಪಂದ್ಯವನ್ನು 31 ರನ್ನುಗಳಿಂದ ಗೆದ್ದಿತ್ತು!

ಮುಂದೆ ಸೆಮಿಯಲ್ಲಿ ಭಾರತವು ಕ್ರಿಕೆಟ್ ಜನಕರಾದ ಇಂಗ್ಲೆಂಡ್ ತಂಡವನ್ನು ಸೋಲಿಸಿತು. ಫೈನಲ್ ಪಂದ್ಯದಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಫ್ರುಡೆನ್ಶಿಯಲ್ ಕಪ್ ಗೆದ್ದಿತು! ಅದು ಭಾರತ ಕ್ರಿಕೆಟ್ ತಂಡ ಗೆದ್ದ ಮೊತ್ತ ಮೊದಲ ವಿಶ್ವಕಪ್ ಆಗಿತ್ತು.

ಅಲ್ಲಿಂದ ಮುಂದೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ತುಂಬಾ ಶ್ರೀಮಂತ ಆಯಿತು. ಸಚಿನ್, ವಿರಾಟ್, ಧೋನಿ, ಯುವರಾಜ್, ರೋಹಿತ್ ಶರ್ಮ, ಸೆಹವಾಗ್, ಕುಂಬ್ಳೆ, ರಾಹುಲ್ ದ್ರಾವಿಡ್ ಮುಂತಾದ ಸ್ಟಾರ್ ಆಟಗಾರರು ಭಾರತದಲ್ಲಿ ಎದ್ದು ಬಂದರು! ಭಾರತದ ಕ್ರಿಕೆಟ್‌ನ ಚಹರೆಯೇ ಅದರಿಂದ ಬದಲಾಯಿತು.

ಆದರೆ ನಾನು ಕೂತು ಯೋಚನೆ ಮಾಡುತ್ತೇನೆ. ಜಿಂಬಾಬ್ವೆ ವಿರುದ್ಧ ಕಪಿಲ್ ಆ ವೀರೋಚಿತ ಇನ್ನಿಂಗ್ಸನ್ನು ಆಡದೇ ಹೋಗಿದ್ದರೆ, ಭಾರತ ಆ ಪಂದ್ಯದಲ್ಲಿ ಸೋತಿದ್ದರೆ…?

ಇದನ್ನೂ ಓದಿ : Raja Marga Column : ಸಣ್ಣ ಸಣ್ಣ ಕಾರಣಕ್ಕೆ ಸಾಯಲು ಹೊರಡುವವರು ಮೊಹಮ್ಮದ್‌ ಶಮಿ ಕತೆ ಕೇಳಬೇಕು!

ಆದರೆ ಆ ಸಾಹಸಿಕ ಪಂದ್ಯದ ಟಿವಿ ಪ್ರಸಾರ ಆಗಲೇ ಇಲ್ಲ!

1983ರ ಹೊತ್ತಿಗೆ ಕ್ರಿಕೆಟ್ ಪಂದ್ಯಗಳ ಟಿವಿ ನೇರಪ್ರಸಾರ ಆರಂಭ ಆಗಿ ಆಗಿತ್ತು. ಆದರೆ ಭಾರತ ಜಿಂಬಾಬ್ವೆಯ ಈ ರೋಚಕ ಪಂದ್ಯ ನೇರಪ್ರಸಾರ ಆಗಲಿಲ್ಲ! ರೆಕಾರ್ಡಿಂಗ್ ಕೂಡ ಆಗಲೇ ಇಲ್ಲ!

ಏಕೆಂದರೆ ಆಗ ಸಮಾನಾಂತರ ಪಂದ್ಯಗಳು ಬೇರೆ ಬೇರೆ ಗ್ರೌಂಡ್‌ನಲ್ಲಿ ನಡೆಯುತ್ತಿದ್ದವು. ಟಿವಿ ಲೈವ್ ಮಾಡುವ ಏಜೆನ್ಸಿಗೆ ಅದೇ ಹೊತ್ತಿಗೆ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಪಂದ್ಯವು ಪ್ರಮುಖ ಎಂದು ಅನ್ನಿಸಿದ ಕಾರಣ ಟಿವಿಯ ಕ್ಯಾಮೆರಾಗಳು ಆ ಮೈದಾನಕ್ಕೆ ಹೋಗಿದ್ದವು! ಆದ್ದರಿಂದ ಈ ಪಂದ್ಯದ ವಿಡಿಯೋ ಕೂಡ ಈಗ ಲಭ್ಯ ಇಲ್ಲ!

ಅದೇ ಹೊತ್ತಿಗೆ ಬಿಬಿಸಿಯ ಸಿಬ್ಬಂದಿ ಮುಷ್ಕರ ಹೂಡಿದ್ದ ಕಾರಣ ಈ ಪಂದ್ಯದ ವೀಕ್ಷಕ ವಿವರಣೆ ಕೂಡ( ಕಾಮೆಂಟರಿ) ಇರಲಿಲ್ಲ! ಇದು ನಿಜವಾಗಿಯೂ ದುರಂತ. ಏನಿದ್ದರೂ ಕಪಿಲ್ ದೇವ್ ಆಡಿದ ಆ ಸ್ಮರಣೀಯವಾದ ಇನ್ನಿಂಗ್ಸನ್ನು ಮತ್ತು ಆ ರೋಮಾಂಚಕವಾದ ಪಂದ್ಯವನ್ನು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ!

ಆ ರೋಮಾಂಚಕ ಮ್ಯಾಚ್‌ನ ಸ್ಕೋರ್‌ ಕಾರ್ಡ್‌ ಇಲ್ಲಿದೆ

https://www.espncricinfo.com/series/prudential-world-cup-1983-60832/india-vs-zimbabwe-20th-match-65083/full-scorecard

Exit mobile version