Site icon Vistara News

Raja Marga Column : ಸಂಗೀತವೇ ನನ್ನ ಧರ್ಮ ಎಂದವರು ಗಾನ ಗಂಧರ್ವ ಯೇಸುದಾಸ್

Raja Marga Column KJ Yesudas

Raja Marga Column : ಕೊಟ್ಟಸ್ಸೆರಿ ಜೋಸೆಫ್‌ ಯೇಸುದಾಸ್ (KJ Yesudas) ಹುಟ್ಟಿದ್ದು ಕೊಚ್ಚಿಯಲ್ಲಿ. 1940ರ ಜನವರಿ 10ರಂದು. ಅವರಿಗೆ ಈಗ ಎಂಬತ್ತ ಮೂರು ತುಂಬಿತು ಅಂದರೆ ನಂಬೋದು ಕಷ್ಟ. ಅವರು ಈಗಲೂ ದಿನಕ್ಕೆ ನಾಲ್ಕು ಘಂಟೆ ರಿಯಾಝ್ ಮಾಡ್ತಾರೆ ಅಂದರೆ ಅದು ಅದ್ಭುತ. ಅವರು ಹಾಡಿದ ಹಾಡುಗಳ ಸಂಖ್ಯೆ (Indian singer Yesudas) 50,000 ದಾಟಿದೆ ಅನ್ನೋದು ಒಂದು ವಿಶ್ವ ದಾಖಲೆ (World record number of Songs). ಭಾರತದ ಎಲ್ಲ ಭಾಷೆಗಳಲ್ಲೂ ಹಾಡಿರುವ ಅವರು ಅರೇಬಿಕ್, ಇಂಗ್ಲಿಷ್‌, ಲ್ಯಾಟಿನ್, ರಷ್ಯನ್ ಮೊದಲಾದ ಭಾಷೆಗಳ ಹಾಡುಗಳಿಗೂ ದನಿಯಾಗಿದ್ದಾರೆ.

ಅವರ ಬದುಕಿನ ಕೆಲವು ಮಹತ್ವದ ಸಂಗತಿಗಳು ನಮಗೆ ತುಂಬಾ ಸ್ಫೂರ್ತಿ ಕೊಡಬಲ್ಲವು. ಅವುಗಳಲ್ಲಿ ಕೆಲವನ್ನು ಇಲ್ಲಿ ಹೆಮ್ಮೆಯಿಂದ ದಾಖಲಿಸುತ್ತಿದ್ದೇನೆ.

1. ಶಾಸ್ತ್ರೀಯ ಸಂಗೀತ ಕಲಿಯಲು ಅಕಾಡೆಮಿ ಸೇರಿದ ಅವರು ದುಡ್ಡಿನ ಕೊರತೆಯಿಂದ ಅದನ್ನು ಪೂರ್ತಿ ಮಾಡಲು ಸಾಧ್ಯವಾಗಲಿಲ್ಲ. ಆಕಾಶವಾಣಿ ನಡೆಸಿದ ಸಂಗೀತ ಪರೀಕ್ಷೆಯಲ್ಲಿ ಅವರು ಫೇಲ್ ಆದರು.

2. ಅವರಿಗೆ ಭಗವಂತನ ದಾಸ ಎಂಬ ಅರ್ಥದಲ್ಲಿ ಅವರ ಅಪ್ಪ ಯೇಸುದಾಸ ಎಂದು ನಾಮಕರಣ ಮಾಡಿದ್ದರು. ಹಾಗೆ ಎಲ್ಲ ಧರ್ಮಗಳ ಎಲ್ಲೆ ಮೀರಿ ಅವರು ಬೆಳೆದರು. ಅವರು ಎಲ್ಲ ಹಿಂದೂ ದೇವರ ಹಾಡುಗಳನ್ನು ಹಾಡಿ ಅವುಗಳನ್ನು ಅಮರತ್ವಕ್ಕೆ ಏರಿಸಿದ್ದಾರೆ. ಮುಂದೆ ಹಿನ್ನೆಲೆ ಗಾಯಕರಾಗಿ ಬಂದ ನಂತರ ಅವರ ಹೆಸರನ್ನು ಬದಲಾಯಿಸಲು ಅವರಿಗೆ ತುಂಬಾ ಜನ ಸಲಹೆ ನೀಡಿದರು. ಆದರೆ ಯೇಸುದಾಸ್ ಒಪ್ಪಲೇ ಇಲ್ಲ.

3. ಅವರು ಹಿಂದೂ ಅಲ್ಲ ಎಂಬ ಕಾರಣಕ್ಕೆ ಅವರಿಗೆ ಗುರುವಾಯೂರು ದೇವಸ್ಥಾನದ ಪ್ರವೇಶ ನಿರಾಕರಿಸಲಾಯಿತು. ಆದರೆ ಯೇಸುದಾಸ್ ದುಃಖ ಪಡಲಿಲ್ಲ. ಅವರು ಗುರುವಾಯೂರಿನ ಕೃಷ್ಣನ ನೂರಾರು ಗೀತೆಗಳನ್ನು ಹಾಡಿದ್ದಾರೆ.

Raja Marga Column KJ Yesudas Family

4. ಅವರು ಹಾಡಿದ ಅಯ್ಯಪ್ಪನ ‘ಹರಿವರಾಸನಂ’ ಗೀತೆಯು ತುಂಬಾ ಜನಪ್ರಿಯವಾದ ಗೀತೆ. ಪ್ರತೀ ದಿನ ರಾತ್ರಿ ಶಬರಿಮಲೆಯ ಅಯ್ಯಪ್ಪನ ಮಂದಿರ ಮುಚ್ಚುವಾಗ ಈಗಲೂ ಅದೇ ಹಾಡನ್ನು ನುಡಿಸುತ್ತಾರೆ.

Raja Marga Column KJ Yesudas Family

5. ಯೇಸುದಾಸ್ ಕೊಲ್ಲೂರು ಮೂಕಾಂಬಿಕೆಯ ಪರಮ ಭಕ್ತ. ಪ್ರತೀ ವರ್ಷವೂ ತನ್ನ ಹುಟ್ಟುಹಬ್ಬವನ್ನು ಆಚರಣೆ ಮಾಡಲು ಕೊಲ್ಲೂರಿಗೆ ಬರುವ ಅವರು ದೇವಿಗೆ ಸಂಗೀತ ಸೇವೆ ನೀಡುತ್ತಾರೆ.

6. 1971ರ ಇಂಡೋ ಪಾಕ್ ಯುದ್ಧದ ಸಮಯದಲ್ಲಿ ಅವರು ಕೇರಳದಾದ್ಯಂತ ಸಂಗೀತ ಕಛೇರಿ ನೀಡಿ ಅದರಿಂದ ಬಂದ ದುಡ್ಡನ್ನು ಪ್ರಧಾನ ಮಂತ್ರಿಗಳ ರಕ್ಷಣಾ ನಿಧಿಗೆ ಅರ್ಪಿಸಿದ್ದಾರೆ.

Raja Marga Column KJ Yesudas Family

7. ರಾಷ್ಟ್ರಮಟ್ಟದಲ್ಲಿ ಎಂಟು ಬಾರಿ ಅತ್ಯುತ್ತಮ ಗಾಯಕ ಪ್ರಶಸ್ತಿ ಪಡೆದ ಭಾರತೀಯ ಗಾಯಕ ಅವರು. ಬೇರೆ ಯಾರೂ ಈ ಸಾಧನೆ ಮಾಡಿಲ್ಲ. ಅದರಲ್ಲಿ ಐದು ಬಾರಿ ಮಲಯಾಳಂ, ಒಮ್ಮೆ ಹಿಂದಿ, ಒಮ್ಮೆ ತೆಲುಗು ಭಾಷೆಗಳ ಹಾಡಿಗಾಗಿ ಅವರಿಗೆ ರಾಷ್ಟ್ರಪ್ರಶಸ್ತಿ ಬಂದಿವೆ.

8. ಕೇರಳದ ಅತ್ಯುತ್ತಮ ಗಾಯಕ ಪ್ರಶಸ್ತಿಯನ್ನು 25 ಬಾರಿ ಅವರು ಪಡೆದಿದ್ದಾರೆ. ನನಗೆ ಇನ್ನು ಈ ಪ್ರಶಸ್ತಿ ಬೇಡ, ಬೇರೆಯವರನ್ನು ಪರಿಗಣಿಸಿ ಎಂದು ಅವರೇ ಹೇಳಿದ್ದಾರೆ.

9. ಅವರು ಹಿನ್ನೆಲೆ ಗಾಯಕನಾಗಿ ಐವತ್ತು ವರ್ಷ ತುಂಬಿದಾಗ ಎಸ್ ಪಿ ಬಾಲಸುಬ್ರಮಣ್ಯಂ ಅವರು ಪತ್ನಿ ಸಮೇತ ಅವರ ಪಾದ ಪೂಜೆ ಮಾಡಿ ಸುವರ್ಣಾಭಿಷೇಕ ಮಾಡಿ ಅವರನ್ನು ‘ಮಹಾ ಗುರು’ ಎಂದು ಕರೆದಿದ್ದರು.

Raja Marga Column KJ Yesudas Family

10. ಹಿಂದಿಯ ಸಂಗೀತ ನಿರ್ದೇಶಕ ರವೀಂದ್ರ ಜೈನ್ ಕುರುಡರು. ಅವರು ಅಸಂಖ್ಯಾತ ಹಾಡುಗಳನ್ನು ಯೇಸುದಾಸ್ ಮೂಲಕ ಹಾಡಿಸಿದ್ದಾರೆ. ‘ನನಗೆ ಕಣ್ಣು ಬಂದರೆ ನಾನು ಮೊದಲು ನೋಡಲು ಬಯಸುವುದು ಯೇಸುದಾಸ್ ಅವರನ್ನು’ ಎಂದವರು ಹೇಳಿದ್ದಾರೆ.

11. ಹಿಂದಿಯ ಸದ್ಮಾ ಸಿನಿಮಾದಲ್ಲಿ ಯೇಸುದಾಸ್ ಹಾಡಿದ ‘ಸೂರ್ ಮೈ ಅಖಿಯೋ ಮೇ’ ಭಾರತೀಯ ಸಿನಿಮಾ ರಂಗದ ಅತ್ಯುತ್ತಮ ಜೋಗುಳದ ಹಾಡು ಎಂದು ಕರೆಸಿಕೊಂಡಿದೆ. ಅದಕ್ಕೆ ಸಂಗೀತ ನೀಡಿದವರು ಇಳಯರಾಜ ಅವರು.

Raja Marga Column KJ Yesudas Family

12. ಅವರ ಒಂದು ಹುಟ್ಟಿದ ಹಬ್ಬದ ದಿನ ರಾತ್ರಿ ಚಂದ್ರಗ್ರಹಣ ಇದ್ದ ಕಾರಣ ದೇವಳದ ಬಾಗಿಲು ಇಡೀ ರಾತ್ರಿ ತೆರೆದಿತ್ತು. ಆ ಇಡೀ ರಾತ್ರಿ ದೇಗುಲದ ಒಳಗೆ ಕಳೆದ ಅವರು ಸಂಗೀತ, ಧ್ಯಾನ, ಸ್ತುತಿಗಳ ಮೂಲಕ ಕೊಲ್ಲೂರು ಮೂಕಾಂಬಿಕೆಯ ಸೇವೆ ಮಾಡಿದ್ದರು.

13. ಅವರ ಎಪ್ಪತ್ತನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು 70 ಸಹಗಾಯಕರ ಜೊತೆ ಸತತ ಒಂಬತ್ತು ದಿನ ನಡೆಸಿಕೊಟ್ಟ ಸರಸ್ವತಿ ಸಂಗೀತರಾಧನೆ ಒಂದು ಐತಿಹಾಸಿಕ ಕಾರ್ಯಕ್ರಮ ಆಗಿತ್ತು.

14. ಕೇರಳ ರಾಜ್ಯವು ಅವರನ್ನು ತನ್ನ ಸಾಂಸ್ಕೃತಿಕ ರಾಯಭಾರಿ ಆಗಿ ಸ್ವೀಕಾರ ಮಾಡಿದೆ. ಕೇರಳದ ಜನ ಇಂದಿಗೂ ಬೆಳಿಗ್ಗೆ ಎದ್ದು ಕೇಳುವುದು ಅವರ ಧ್ವನಿಯನ್ನು. ಮಲಗುವಾಗ ಮತ್ತೆ ಅದೇ ಧ್ವನಿಯನ್ನು ಕೇಳಿ ಮಲಗುತ್ತಾರೆ.

15. 2009ರ ಇಸವಿಯಲ್ಲಿ ಒಂದೇ ದಿನ ಅವರು ದಕ್ಷಿಣ ಭಾರತದ ಬೇರೆ ಬೇರೆ ಭಾಷೆಗಳ 16 ಹಾಡುಗಳನ್ನು ಚೆನ್ನೈನ ಎವಿಎಂ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ಮಾಡಿ ವಿಶ್ವದಾಖಲೆ ಮಾಡಿದರು.

Raja Marga Column KJ Yesudas Family

16. ಹಿಂದಿಯ ಅವರ ಶುದ್ಧವಾದ ಉಚ್ಚಾರಣೆಯಿಂದ ಅವರ ಎಲ್ಲ ಹಿಂದೀ ಹಾಡುಗಳು ಅತ್ಯಂತ ಜನಪ್ರಿಯ ಆಗಿವೆ ಮತ್ತು ಮಾಧುರ್ಯಪೂರ್ಣ ಆಗಿವೆ. ‘ಚಿತ್ ಚೋರ್’ ಸಿನೆಮಾದ ‘ಗೋರಿ ತೇರಾ ಗಾಂವ್ ಬಡಾ ಪ್ಯಾರಾ’ ಅವರಿಗೆ ರಾಷ್ಟ್ರಪ್ರಶಸ್ತಿಯನ್ನು ತಂದು ಕೊಟ್ಟ ಹಾಡು. ಅವರ ಸ್ಪಷ್ಟವಾದ ಉಚ್ಚಾರಕ್ಕೆ ಸಂಸ್ಕೃತ ಅಧ್ಯಯನ ಕಾರಣ ಎಂದವರು ಹೇಳಿದ್ದಾರೆ.

ಇದನ್ನೂ ಓದಿ : Raja Marga Column : ಮನುಷ್ಯನ ಮೆದುಳಿಗೇ ಚಿಪ್ : ಬೇಕಾ ಇಂಥ ಸಂಶೋಧನೆ?

17. ಅವರ ಮೂವರು ಮಕ್ಕಳಲ್ಲಿ ಎರಡನೇ ಮಗ ವಿಜಯ್ ಮಾತ್ರ ಹಿನ್ನೆಲೆ ಗಾಯನದ ಕ್ಷೇತ್ರದಲ್ಲಿ ಇದ್ದಾರೆ. ಅವರು ಅಪ್ಪನ ಧ್ವನಿಯನ್ನು ಅನುಕರಣೆ ಮಾಡದೆ ಸ್ವಂತ ಶೈಲಿಯಲ್ಲಿ ಹಾಡುತ್ತಾರೆ.

Raja Marga Column KJ Yesudas Family

18, ಯೇಸುದಾಸ್ ಧ್ವನಿಯನ್ನು ಹಲವರು ಕಾಪಿ ಮಾಡಲು ಪ್ರಯತ್ನ ಪಟ್ಟರೂ ಅವರ್ಯಾರೂ ಯಶಸ್ವಿಯಾಗಿಲ್ಲ. ಅದು ಯಾರೂ ಕಾಪಿ ಮಾಡಲು ಆಗದ ಮಕಮಲ್ಲಿನ ಧ್ವನಿ ಆಗಿದೆ.

19. ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರು ‘ನಾನು ಮೂರನೇ ವಯಸ್ಸಿನಲ್ಲಿ ಯೇಸುದಾಸ್ ಅವರ ಹಾಡುಗಳನ್ನು ಕೇಳಲು ಆರಂಭ ಮಾಡಿದೆ. ಅವರು ವಿಶ್ವದ ಕೆಲವೇ ಶ್ರೇಷ್ಠ ಗಾಯಕರಲ್ಲಿ ಒಬ್ಬರು’ ಎಂದಿದ್ದಾರೆ.

20. 1962ರಲ್ಲಿ ಮಲಯಾಳಂ ಸಿನಿಮಾ ‘ ಭಾರ್ಯಾ ‘ ಮೂಲಕ ಹಾಡಲು ಆರಂಭ ಮಾಡಿದ
ಯೇಸುದಾಸ್ ಒಬ್ಬ ಹಿನ್ನೆಲೆ ಗಾಯಕನಾಗಿ 62 ವರ್ಷ ಪೂರ್ತಿ ಮಾಡಿದ್ದಾರೆ. ಜಗತ್ತಿನ ಯಾವುದೇ ಗಾಯಕ ಇಷ್ಟೊಂದು ದೀರ್ಘ ಅವಧಿಗೆ ಹಾಡಿದ ದಾಖಲೆ ನಮಗೆ ದೊರೆಯುವುದಿಲ್ಲ.

ಇದನ್ನೂ ಓದಿ : Raja Marga Column : ಫೈಟಿಂಗ್ ಸ್ಪಿರಿಟ್‌ಗೆ ಮತ್ತೊಂದು ಹೆಸರೇ ಕಗಿಸೊ ರಬಡ!

ಕೆಜೆ ಯೇಸುದಾಸ್‌ ಧ್ವನಿಯಲ್ಲಿ ಹರಿವಾಸನಂ… ಹಾಡು ಕೇಳಿ

ಭರತ ವಾಕ್ಯ

ಇಷ್ಟೆಲ್ಲ ಕಾರಣಗಳಿಗೂ ಮೀರಿ ಯೇಸುದಾಸ್ ಒಬ್ಬ ಸಂತ ಗಾಯಕ, ಗಂಧರ್ವ ಗಾಯಕ ಎಂಬ ಕಾರಣಕ್ಕೆ ನನಗೆ ಇಷ್ಟ ಆಗುತ್ತಾರೆ. ಸಂಗೀತವನ್ನು ಕಲಿಯಲು ನೂರು ಜನ್ಮ ಸಾಲದು, ನಾನಿನ್ನೂ ಸಂಗೀತದ ವಿದ್ಯಾರ್ಥಿ ಎಂದು ಅವರು ಮೊನ್ನೆ ಮೊನ್ನೆ ಹೇಳಿದ್ದು ನಿಜಕ್ಕೂ ಅದ್ಭುತವಾದ ಮಾತು.

Exit mobile version