Site icon Vistara News

Raja Marga Column : ನಿಮಗೆ KVG ಗೊತ್ತಾ? ಕಲಿತಿದ್ದು 8ನೇ ಕ್ಲಾಸ್‌, ಕಟ್ಟಿದ್ದು ಮೆಡಿಕಲ್‌ ಕಾಲೇಜು!

Kurunji Venkataramana Gowda

ಒಂದು ಕಾಲದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಅತ್ಯಂತ ಹಿಂದುಳಿದ ತಾಲೂಕು ಎಂದರೆ ಅದು ಸುಳ್ಯ (Sullia Taluk) ಎಂಬ ಮಾತಿತ್ತು. ಆದರೆ ಇಂದು ಅದೇ ತಾಲೂಕಿನಲ್ಲಿ ಎಲ್ಲವೂ ಇದೆ. ಎಲ್ಲಾ ವಿಧವಾದ ಶಿಕ್ಷಣ ಸಂಸ್ಥೆಗಳು (Education Institutes) ಇವೆ. ಇದಕ್ಕೆ ಕಾರಣ ಆದದ್ದು ಒಂದು ವ್ಯಕ್ತಿಯ ಹೋರಾಟ ಮತ್ತು ದೂರದೃಷ್ಟಿ ಅಂದರೆ ನಾವು, ನೀವು ನಂಬುವುದು ಕಷ್ಟ. ಅದರಲ್ಲೂ ಆ ಸಂಸ್ಥೆಗಳ ಸ್ಥಾಪಕರು ಬಡತನದ ಕಾರಣಕ್ಕೆ ಎಂಟನೇ ತರಗತಿಯ ತನಕ ಮಾತ್ರ ಕಲಿತವರು ಅಂದರೆ ನಂಬುವುದು ಇನ್ನೂ ಕಷ್ಟ ಆಗಬಹುದು. ಸುಳ್ಯದ ನೆಲದಲ್ಲಿ ಈ ಅದ್ಭುತ ನಡೆದೇ ಹೋಗಿದೆ (Raja Marga Column). ಆ ಪುಣ್ಯಪುರುಷನ ಹೆಸರು ಡಾ. ಕುರುಂಜಿ ವೆಂಕಟರಮಣ ಗೌಡ (Kurunji Venkataramana Gowda).

ಕುರುಂಜಿ ವೆಂಕಟರಮಣ ಗೌಡರು ಕೃಷಿಯ ಹಿನ್ನೆಲೆಯಿಂದ ಬಂದವರು. ರಕ್ತ ಬಿಸಿ ಇದ್ದಾಗ ತೋಟಕ್ಕೆ ಬೆವರು ಬಸಿದು ಸಮೃದ್ಧ ಅಡಿಕೆ ತೋಟ ಮಾಡಿದವರು. ಅದರ ಜೊತೆಗೆ ಕಾಳು ಮೆಣಸು, ವೀಳ್ಯದ ಎಲೆ, ತೆಂಗಿನ ತೋಟ ಎಲ್ಲವನ್ನೂ ಮಾಡಿದರು. ಆ ಕೃಷಿಯಿಂದ ವರ್ಷಕ್ಕೆ ಒಂದು ಕೋಟಿ ರೂಪಾಯಿ ಆದಾಯ ಪಡೆಯುವಷ್ಟು ಮಟ್ಟಕ್ಕೆ ಬಂದರು. ಬಟ್ಟೆ ಅಂಗಡಿ ಇತ್ಯಾದಿ ಮಾಡಿದರು.

ಆಗ ತಾನು ಓದಿಲ್ಲ, ತನ್ನೂರಿನ ಹುಡುಗರಿಗೆ ಕಾಲೇಜು ಶಿಕ್ಷಣ ದೊರೆಯುತ್ತಿಲ್ಲ ಎಂಬ ಕೊರಗು ಅವರಿಗೆ ಇತ್ತು. ಅದಕ್ಕಾಗಿ ಅವರು ಧೈರ್ಯವಾಗಿ ಎಪ್ಪತ್ತರ ದಶಕದಲ್ಲಿ ಸುಳ್ಯದಲ್ಲಿ ನೆಹರೂ ಸ್ಮಾರಕ ಕಾಲೇಜು (Nehru Memorial College) ಆರಂಭ ಮಾಡಿದರು. ಎಲ್ಲ ಕಡೆಗಳಲ್ಲಿ ಆದ ಹಾಗೆ ಇಲ್ಲಿ ಕೂಡ ಶಿಕ್ಷಕರ ಕೊರತೆ, ಊರವರ ಪ್ರತಿರೋಧ, ವಿದ್ಯಾರ್ಥಿಗಳ ನಿರಾಸಕ್ತಿ ಅವರನ್ನು ಕಾಡಿದ್ದವು. ಆದರೆ ಸಣ್ಣ ಪುಟ್ಟ ಸವಾಲುಗಳಿಗೆ ಅಂಜುವ ಬಡಪೆಟ್ಟಿಗೆ ಅವರದ್ದು ಆಗಿರಲಿಲ್ಲ. ಮುಂದೆ ಇಟ್ಟ ಹೆಜ್ಜೆ ಅವರು ಹಿಂದೆ ಇಟ್ಟವರೆ ಅಲ್ಲ. ಬೆಂಗಳೂರಿಗೆ ವಿಧಾನಸೌಧಕ್ಕೆ ಹೋಗಿ ಸಚಿವರ ಮುಂದೆ ಕೂತು ಇಲಾಖೆಗಳಿಂದ ವಿವಿಧ ಸಂಸ್ಥೆಗಳಿಗೆ ಅನುಮತಿ ಪಡೆದುಕೊಂಡು ಬರುವ ತಾಕತ್ತು ಅವರಿಗೆ ಇತ್ತು.

ಅದರ ಪರಿಣಾಮವಾಗಿ ವರ್ಷಕ್ಕೆ ಒಂದೆರಡಾದರೂ ಹೊಸ ಶಿಕ್ಷಣ ಸಂಸ್ಥೆಗಳನ್ನು ಆರಂಭ ಮಾಡುತ್ತ ಮುನ್ನಡೆದರು. ಸುಳ್ಯ ತಾಲೂಕಿಗೆ ಯಾವುದೆಲ್ಲ ಶಿಕ್ಷಣ ಸಂಸ್ಥೆ ಬೇಕು ಎಂದವರಿಗೆ ಖಚಿತವಾಗಿ ಗೊತ್ತಿತ್ತು. ಮುಂದೆ ಅತೀ ದೊಡ್ಡ ಪದವಿಪೂರ್ವ ಕಾಲೇಜು, ಹಲವು ಹೈಸ್ಕೂಲುಗಳು, ಮಹಿಳೆಯರ ಪದವಿ ಕಾಲೇಜು, ಕಾನೂನು ಕಾಲೇಜು, ಡಿಪ್ಲೊಮಾ ಕಾಲೇಜು, ಐಟಿಐ ಕಾಲೇಜು, ತಾಂತ್ರಿಕ ಶಿಕ್ಷಣ ಕಾಲೇಜು, ಎಂಜಿನಿಯರಿಂಗ್ ಕಾಲೇಜು…. ಹೀಗೆ ಎಲ್ಲವನ್ನೂ ಮಾಡಿದರು.

Kurunji Venkataramana Gowda

ತನ್ನ ಊರಿನಲ್ಲಿ ಮೆಡಿಕಲ್ ಕಾಲೇಜು ಆರಂಭ ಮಾಡಿಯೇ ಬಿಟ್ಟರು!

ಸುಳ್ಯದಲ್ಲಿ ಸುಸಜ್ಜಿತ ಆಸ್ಪತ್ರೆಗಳು ಇರಲಿಲ್ಲ. ಜನರಿಗೆ ಆರೋಗ್ಯದ ಸಮಸ್ಯೆ ಬಂದಾಗ ದೂರದ ಪುತ್ತೂರು ಅಥವಾ ಮಂಗಳೂರಿಗೆ ಹೋಗಬೇಕಾಗಿತ್ತು. ಖರ್ಚು ದುಬಾರಿ ಆಗುತ್ತಿತ್ತು. ಇದನ್ನು ಮನಗಂಡ ಕುರುಂಜಿಯವರು ಮೊದಲು ಒಂದು ಸಣ್ಣ ಆಸ್ಪತ್ರೆ ಮಾಡಿದರು. ತನ್ನ ಮಕ್ಕಳನ್ನು ಮೆಡಿಕಲ್ ಓದಿಸಿದರು. ದೆಹಲಿಗೆ ಹೋಗಿ ಅನುಮತಿ ಪಡೆದುಕೊಂಡು ಬಂದು ಮೆಡಿಕಲ್ ಕಾಲೇಜು ಸ್ಥಾಪನೆ (KVG Medical College) ಮಾಡಿಯೇ ಬಿಟ್ಟರು! ಎಂಟನೇ ತರಗತಿಯ ತನಕ ಮಾತ್ರ ಓದಿದ್ದ ವ್ಯಕ್ತಿ ಒಬ್ಬ ಮೆಡಿಕಲ್ ಕಾಲೇಜು ಆರಂಭ ಮಾಡಿದ ಸಾಧನೆಯು ಸುಳ್ಯದ ಮಣ್ಣಿನಲ್ಲಿ ನಡೆದೇ ಹೋಯಿತು!

ಮುಂದೆ ಅವರು ಆಸ್ಪತ್ರೆಯನ್ನು ವಿಸ್ತರಿಸಿದರು. ಅದರ ಬೆನ್ನಿಗೆ ಆಯುರ್ವೇದಿಕ್ ಕಾಲೇಜು, ನರ್ಸಿಂಗ್ ಕಾಲೇಜು, ಪಾರಾ ಮೆಡಿಕಲ್ ಕಾಲೇಜು ಎಲ್ಲವೂ ಸುಳ್ಯಕ್ಕೆ ಬಂದವು. ಒಂದು ಗ್ರಾಮಾಂತರ ವೈದ್ಯಕೀಯ ಸಂಸ್ಥೆಯ ಮೂಲಕ ವರ್ಷಕ್ಕೆ ಕನಿಷ್ಠ ಐನೂರು ಎಂಬಿಬಿಸ್ ವೈದ್ಯರು, ಆಯುರ್ವೇದಿಕ್ ವೈದ್ಯರು ಮತ್ತು ಸ್ನಾತಕೋತ್ತರ ವೈದ್ಯರು ಹೊರಬರುವುದು ಸಾಮಾನ್ಯ ಸಂಗತಿ ಅಲ್ಲ. ಅದನ್ನು ಮಾಡಿದವರು ಉನ್ನತ ಶಿಕ್ಷಣ ವಂಚಿತ ವ್ಯಕ್ತಿ ಅಂದರೆ ಅದನ್ನು ನಂಬಲು ಸಾಧ್ಯವೇ ಅಲ್ಲ.

ಮೂವತ್ತಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು, 8 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು!

ಶಿಕ್ಷಣ ಒಂದು ವ್ಯಾಪಾರ ಅಲ್ಲ, ಅದು ಒಂದು ಸೇವೆ ಎನ್ನುವ ನಂಬಿಕೆಯು ಅವರನ್ನು ಕೈ ಹಿಡಿದು ಮುನ್ನಡೆಸುತ್ತಾ ಹೋಯಿತು. ಕುರುಂಜಿ ವೆಂಕಟರಮಣ ಗೌಡರು ಮುಂದೆ ಮುಟ್ಟಿದ್ದು ಎಲ್ಲವೂ ಚಿನ್ನ ಆಗುತ್ತಾ ಹೋಯಿತು. ಅವರ ಅಧ್ಯಕ್ಷತೆಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಕೊಡೆಯ ಅಡಿಯಲ್ಲಿ ಒಟ್ಟು ಮೂವತ್ತು ಶಿಕ್ಷಣ ಸಂಸ್ಥೆಗಳು ತೆರೆದವು. ಹಲವು ಹೈಸ್ಕೂಲುಗಳು, ಕಾನೂನು ಮಹಾ ವಿದ್ಯಾಲಯ ಎಲ್ಲವೂ ಬಂದವು. ದೂರದ ಬೆಂಗಳೂರು, ಮಡಿಕೇರಿ, ಭಾಗಮಂಡಲ ಮೊದಲಾದ ಕಡೆಗಳಲ್ಲಿ ಕೂಡ ಅವರ ಶಿಕ್ಷಣ ಸಂಸ್ಥೆಗಳು ಆರಂಭವಾದವು. ಈಗ ಅವರ ವಿದ್ಯಾಸಂಸ್ಥೆಗಳಲ್ಲಿ ಅಂದಾಜು ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದಾರೆ. ಎರಡು ಸಾವಿರಕ್ಕಿಂತ ಅಧಿಕ ಸಿಬ್ಬಂದಿಗಳು ಇದ್ದಾರೆ. ಅವರ ಕಾರಣಕ್ಕೋಸ್ಕರ ಸುಳ್ಯದ ಪ್ರತೀ ಮನೆಯಲ್ಲಿ ಇಂದು ವಿದ್ಯಾವಂತರು ಇದ್ದಾರೆ. ತಾಲೂಕು ಇಂದು ಭಾರೀ ಬೆಳೆದಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕುರುಂಜಿ ಗೌಡರು ವಿದ್ಯಾರ್ಥಿ ವೇತನಗಳ ವ್ಯವಸ್ಥೆ ಮಾಡಿದ್ದಾರೆ. ಎಲ್ಲ ಕಾಲೇಜುಗಳಲ್ಲಿ ಸುಸಜ್ಜಿತ ಹಾಸ್ಟೆಲ್‌ಗಳು ಇವೆ. ಪರಿಣತ ಶಿಕ್ಷಕ ವೃಂದ ಇದೆ. ಸುಳ್ಯದ ಕೆವಿಜಿ ಆಸ್ಪತ್ರೆಯು ಇಂದು ಅತ್ಯಂತ ಆಧುನಿಕ ಆಗಿದೆ. ಒಂದು ತಾಲೂಕಿಗೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಏನೆಲ್ಲ ಬೇಕೋ ಅದೆಲ್ಲವನ್ನೂ ಅವರು ಪೂರ್ತಿ ಮಾಡಿದ್ದಾರೆ.

ಸಾಧಿಸುವ ಹಠ, ಆರ್ಥಿಕ ಶಿಸ್ತು ಮತ್ತು ದಣಿವು ಇಲ್ಲದ ದುಡಿಮೆ ಇವುಗಳು ಕುರುಂಜಿ ಅವರ ಬ್ರಾಂಡ್ ಕ್ವಾಲಿಟಿಗಳು. ಸುಳ್ಯದ ಇತರ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಅವರು ಫರ್ನೀಚರ್, ಪುಸ್ತಕ, ಕಪಾಟು, ಕುಡಿಯುವ ನೀರು ಇತ್ಯಾದಿಗಳ ಕೊಡುಗೆ ನೀಡುತ್ತಾ ಬಂದಿದ್ದಾರೆ. ಊರಿನ ಪ್ರಧಾನ ದೇವಸ್ಥಾನವಾದ ಚೆನ್ನಕೇಶವ ದೇವಸ್ಥಾನವನ್ನು ಬಹಳ ದೊಡ್ಡ ಕೊಡುಗೆ ನೀಡಿ ಜೀರ್ಣೋದ್ಧಾರ ಮಾಡಿದ್ದಾರೆ. ಹಲವು ಕಡೆ ಕಲ್ಯಾಣ ಮಂಟಪ ಹಾಗೂ ಸಮುದಾಯ ಭವನಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ.

ಅವರ ಸಾಧನೆಯನ್ನು ಗುರುತಿಸಿ ನೂರಾರು ಸಂಸ್ಥೆಗಳು ಅವರನ್ನು ಪ್ರಶಸ್ತಿ ನೀಡಿ ಗೌರವಿಸಿವೆ. ಸನ್ಮಾನ ಮಾಡಿವೆ. ಕರ್ನಾಟಕ ಸರಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಅಮೆರಿಕಾದ ಒಂದು ವಿವಿಯು ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ. ದೇವರು ಕೊಟ್ಟ ಅಪಾರ ಸಂಪತ್ತನ್ನು ಜಾಗರೂಕತೆಯಿಂದ ಖರ್ಚು ಮಾಡುವ ಮತ್ತು ಅದರ ಬಹು ದೊಡ್ಡ ಭಾಗವನ್ನು ಸಮಾಜದ ಅಭ್ಯುದಯಕ್ಕೆ ಖರ್ಚು ಮಾಡುವ ಅವರ ಗುಣ ಅವರನ್ನು ಲೆಜೆಂಡ್ ಆಗಿ ಮಾಡಿದೆ.

ಇದನ್ನೂ ಓದಿ : Raja Marga Column : ಥ್ಯಾಂಕ್ಸ್‌, ಆಲ್‌ ದಿ ಬೆಸ್ಟ್‌, ಸ್ಸಾರಿ ಎಂಬ ಮ್ಯಾಜಿಕ್‌ ಶಬ್ದಗಳು!

85 ವರ್ಷ ಪೂರ್ಣ ಆಯಸ್ಸು ಬದುಕಿ ನಿರ್ಗಮಿಸಿದ (2013) ಅವರನ್ನು ಅಳಿದು ಹೋದ ನಂತರವೂ ಜನರು ಮರೆತಿಲ್ಲ ಅನ್ನುವುದು ಸುಳ್ಯದ ಮೇರು ಸಂಸ್ಕೃತಿ. ಅವರ ಅಭಿಮಾನಿಗಳು ಸೇರಿ ಕಳೆದ 13 ವರ್ಷಗಳಿಂದ ಸುಳ್ಯದಲ್ಲಿ ಕುರುಂಜಿ ಉತ್ಸವದ ಮೂಲಕ ಅವರನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಅದು ಎರಡು ದಿನಗಳ ಉತ್ಸವ ಆಗಿದ್ದು ಪ್ರತೀ ವರ್ಷವೂ ಡಿಸೆಂಬರ್ 25/26ರಂದು ನಡೆಯುತ್ತಿದೆ. ಡಾಕ್ಟರ್ ಕುರುಂಜಿ ವೆಂಕಟರಮಣ ಗೌಡರು ಇಂದಿಗೂ ಜನರ ಮನಸಿನಲ್ಲಿ ಪ್ರತಿಷ್ಠಾಪನೆ ಆಗಿದ್ದಾರೆ ಅನ್ನುವುದೇ ಭರತ ವಾಕ್ಯ.

Exit mobile version