Site icon Vistara News

Raja Marga Column : ಹತ್ಯಾರೋಂ ಕಾ ಜವಾಬ್‌… ಶಾಸ್ತ್ರೀಜಿ ಗುಡುಗಿಗೆ ಪಾಕಿಸ್ತಾನ ನಡುಗಿತ್ತು!

Lal bahadur Shastri

ʻಹತ್ಯಾರೊನ್ ಕಾ ಜವಾಬ್ ಹತ್ಯಾರೋನ್ ಸೇ ದೇಂಗೆ!ʼ
1965ರ ಆಗಸ್ಟ್ 15ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಿಂತು ದೇಶದ ಎರಡನೇ ಪ್ರಧಾನ ಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು (Lal Bahadur Shastri) ಮೇಲಿನ ವಾಕ್ಯಗಳನ್ನು ಗಟ್ಟಿಯಾಗಿ ಹೇಳಿ ಗುಡುಗಿದಾಗ ಅನುಮಾನ ಪಟ್ಟವರೇ ಹೆಚ್ಚು! ಅದುವರೆಗೆ ಭಾರತೀಯರು ಶಾಸ್ತ್ರೀಜಿಯವರ ಸಜ್ಜನಿಕೆ ಮತ್ತು ವಿದ್ವತ್ತನ್ನು ಮಾತ್ರ ನೋಡಿದ್ದರು!

ಆದರೆ ಶಾಸ್ತ್ರೀಜಿಯವರು ತಾನು ‘ವಜ್ರಕ್ಕಿಂತಲೂ ಕಠಿಣ, ಕುಸುಮಕ್ಕಿಂತ ಮೃದು’ ಎಂದು ಸಾಬೀತು ಮಾಡುವ ಒಂದು ಸಂದರ್ಭವು ಹದಿನೈದು ದಿನಗಳ ಒಳಗೆ ಬಂದೇ ಬಿಟ್ಟಿತ್ತು!

ಆಗಸ್ಟ್ 31ನೇ ತಾರೀಕು ಮಧ್ಯಾಹ್ನ ಶಾಸ್ತ್ರೀಜಿಯವರು ಮನೆಗೆ ಊಟಕ್ಕೆ ಬಂದಿದ್ದರು. ಅವರ ಹೆಂಡತಿ ಲಲಿತಾ ಶಾಸ್ತ್ರಿ ಗಂಡನಿಗೆ ಊಟ ಬಡಿಸಿ ಉಪಚಾರವನ್ನು ಆರಂಭ ಮಾಡಿದ್ದರು. ಅದೇ ಹೊತ್ತಿಗೆ ಓಡಿ ಬಂದ ಅವರ ಆಪ್ತ ಕಾರ್ಯದರ್ಶಿ ಅವರ ಕಿವಿಯಲ್ಲಿ ಏನೋ ಉಸುರಿದನು. ಶಾಸ್ತ್ರೀ ತಮ್ಮ ಊಟವನ್ನು ಅರ್ಧಕ್ಕೆ ನಿಲ್ಲಿಸಿ ಕಾರ್ ಹತ್ತಿ ತಮ್ಮ ಕಚೇರಿಗೆ (10, ಜನಪಥ್ ರಸ್ತೆ) ದೌಡಾಯಿಸಿದರು!

ಭಾರತ ಪಾಕ್ ಯುದ್ಧದ ಕಾರ್ಮೋಡ!

ಆಗಲೇ ಮೂರೂ ಸೇನೆಗಳ ಮುಖ್ಯಸ್ಥರು ಅಲ್ಲಿ ಸೇರಿ ಪ್ರಧಾನಿಯವರ (Prime Minister of India) ದಾರಿಯನ್ನು ಕಾಯುತ್ತಿದ್ದರು. ಪಾಕಿಸ್ತಾನ್ ಆಗಲೇ ಭಾರತದ ಮೇಲೆ ಯುದ್ದ ಸಾರಿತ್ತು (Indo pak war)! ಅದು ಯಾರೂ ನಿರೀಕ್ಷೆ ಮಾಡದೇ ಇದ್ದ ಯುದ್ಧ ಆಗಿತ್ತು! ಜಮ್ಮುವಿನ ಚಾಂಭ್ ಪ್ರಾಂತ್ಯದಲ್ಲಿ ತನ್ನ ನೂರಕ್ಕೂ ಅಧಿಕ ಸಂಖ್ಯೆಯ ಯುದ್ಧ ಟ್ಯಾಂಕ್‌ಗಳ ಜೊತೆಗೆ ಪಾಕಿಸ್ತಾನವು ಭಾರತದ ಗಡಿಯ ಒಳಗೆ ಬಂದಾಗಿತ್ತು!

‘ಭಾರತದ ಪ್ರಧಾನಿ ದುರ್ಬಲ’ ಎಂದು ಪಾಕ್ ಮುಖ್ಯಸ್ಥರಾದ ಆಯೂಬ್ ಖಾನ್ (Pakistan Prime Minister Ayub Khan) ಅವರ ಲೆಕ್ಕಾಚಾರ ಆಗಿತ್ತು! ಅದರ ಜೊತೆಗೆ ಚೀನಾ ಮತ್ತು ಅಮೆರಿಕ ದೇಶಗಳು ಪಾಕ್ ಪರವಾಗಿ ನಿಂತು ಬಿಟ್ಟಿದ್ದವು! ಎರಡನೇ ವಿಶ್ವಸಮರದ ನಂತರ ಅದು ಅತೀ ದೊಡ್ಡ ಸಂಘರ್ಷ ಆಗುವ ಅಪಾಯ ಇತ್ತು!

ಗುಡುಗಿದರು ಲಾಲ್ ಬಹಾದ್ದೂರ್ ಶಾಸ್ತ್ರಿ!

ಶಾಸ್ತ್ರೀಜಿ ತನ್ನ ಮೂರೂ ಸೇನೆಗಳ ಮುಖ್ಯಸ್ಥರಿಗೆ ಒಂದೇ ಉಸಿರಿನಲ್ಲಿ ಆದೇಶ ನೀಡಿದರು! ಕೇವಲ ಐದೇ ನಿಮಿಷದಲ್ಲಿ ಶಾಸ್ತ್ರೀಜಿ ದಿಟ್ಟ ನಿರ್ಧಾರ ತೆಗೆದುಕೊಂಡಾಗಿತ್ತು! ಜಮ್ಮುವಿನ ಚಾಂಭ್ ಪ್ರಾಂತ್ಯವನ್ನು ಉಳಿಸಿಕೊಳ್ಳುವುದು ಕಷ್ಟ ಅಂದರು ಸೇನಾ ಮುಖ್ಯಸ್ಥರು. ಇನ್ನು ಕೆಲವೇ ಘಂಟೆಗಳಲ್ಲಿ ಇಡೀ ಕಾಶ್ಮೀರವೇ ಭಾರತದ ಜೊತೆಗೆ ಸಂಪರ್ಕ ಕಡಿದುಕೊಳ್ಳುವ ಅಪಾಯ ಇದೆ ಅಂದರು ಸೇನಾ ಮುಖ್ಯಸ್ಥರು!

ಪ್ರಧಾನಿ ಶಾಸ್ತ್ರೀಜಿ ಆಗ ಮತ್ತೆ ಗುಡುಗಿದರು! ಅವರ ಹುಬ್ಬುಗಳು ಗಂಟಿಕ್ಕಿದವು. ಧ್ವನಿಯು ಗಡುಸಾಯಿತು.

“ಹೇಡಿಗಳ ಹಾಗೆ ಮಾತಾಡಬೇಡಿ! ಇಡೀ ಭಾರತವು ನಿಮ್ಮ ಜೊತೆಗೆ ಇದೆ. ಲಾಹೋರನ್ನು ಮೊದಲು ವಶ ಪಡಿಸಿಕೊಳ್ಳಿ!” ಎಂದರು. ಕೆಲವೇ ಕ್ಷಣಗಳಲ್ಲಿ ಯುದ್ಧದ ಘೋಷಣೆ ಮಾಡಿ ವಾರ್ ರೂಮ್ ಸೇರಿದರು. ಊಟ, ತಿಂಡಿ, ನಿದ್ರೆ, ವಿಶ್ರಾಂತಿ ಎಲ್ಲವನ್ನೂ ಮರೆತರು! ಪ್ರತೀ ಗಂಟೆಗೆ ಒಮ್ಮೆ ತನಗೆ ಯುದ್ದದ ವರದಿ ಕೊಡಬೇಕು ಎಂದು ಆದೇಶ ನೀಡಿದ್ದರು!

ಮೊದಮೊದಲು ಪಾಕ್ ಕೈ ಮೇಲಾಯಿತು!

ಅವರ ಹತ್ತಿರ ಅಮೆರಿಕವು ನೀಡಿದ ಆತ್ಯಾಧುನಿಕ ಎಂ – 48 ಪ್ಯಾಟೆನ್ ಟ್ಯಾಂಕ್‌ಗಳು ಇದ್ದವು. ಪಾಕಿಸ್ತಾನವು ಎರಡು ಸೇನಾ ತುಕಡಿಗಳನ್ನು ತೆಗೆದುಕೊಂಡು ಬಂದಿದ್ದರೆ ಭಾರತದ ಹತ್ತಿರ ಒಂದೇ ಸೇನಾ ತುಕಡಿ ಇತ್ತು!

ಯುದ್ಧ ರಂಗದಲ್ಲಿ ಲಾಲ್‌ ಬಹಾದೂರ್‌ ಶಾಸ್ತ್ರಿ

ಆದರೆ ಸೆಪ್ಟೆಂಬರ್ 11 ರಂದು ‘ಅಸಲ್ ಉತ್ತರ’ ಬಳಿ ನಡೆದ ಘನ ಘೋರವಾದ ಯುದ್ಧದಲ್ಲಿ ಭಾರತವು ಪಾಕಿಸ್ತಾನದ 97 ಟ್ಯಾಂಕ್‌ಗಳನ್ನು ತನ್ನ ವಶಕ್ಕೆ ಪಡೆಯಿತು! ಆಗ ಪಾಕ್ ಜನರಲ್ ಆಯೂಬ್ ಖಾನನಿಗೆ ಬೆವರಲು ಆರಂಭ ಆಯಿತು! ಶಾಸ್ತ್ರೀಜಿ ದುರ್ಬಲ ಪ್ರಧಾನಿ ಎಂದು ಲೆಕ್ಕ ಹಾಕಿದ್ದ ಆತನಿಗೆ ಶಾಸ್ತ್ರಿಯವರ ಇನ್ನೊಂದು ಮುಖ ಪರಿಚಯ ಆಗಿತ್ತು!

ಯಾರ ಬೆದರಿಕೆಗೂ ಶಾಸ್ತ್ರೀ ಬೆದರಲಿಲ್ಲ!

ಅದೇ ಹೊತ್ತಿಗೆ ಶಾಸ್ತ್ರೀಜಿಯವರು ಇನ್ನೊಂದು ದಾಳವನ್ನು ಎಸೆದರು. ವಿಶ್ವಸಂಸ್ಥೆಯ ಮೇಲೆ ಪ್ರಭಾವವನ್ನು ಬೀರಿ ಚೀನಾ ಈ ಯುದ್ಧದಲ್ಲಿ ಮೂಗು ತೂರಿಸದ ಹಾಗೆ ನೋಡಿಕೊಂಡರು. ಚೀನಾದ ಯಾವ ಬೆದರಿಕೆಗಳಿಗೂ ಭಾರತ ಬೆದರುವುದಿಲ್ಲ ಅಂದರು! ಅಲ್ಲಿಗೆ ಪಾಕಿಸ್ತಾನಕ್ಕೆ ಹರಿದು ಬರುತ್ತಿದ್ದ ಎಲ್ಲ ನೆರವುಗಳು ನಿಂತು ಹೋದವು.

ಭಾರತವು ಆ ಕದನವನ್ನು ಗೆದ್ದೇ ಬಿಟ್ಟಿತ್ತು!

ಭಾರತವು ಪಾಕಿಸ್ತಾನದ 152 ಟ್ಯಾಂಕ್‌ಗಳನ್ನು ನಾಶ ಮಾಡಿದಾಗ ಪಾಕ್ ಧರಾಶಾಹಿ ಆಗಿತ್ತು! ಅದೊಂದು ಮುಟ್ಟಿ ನೋಡುವ ಪೆಟ್ಟನ್ನು ಶಾಸ್ತ್ರೀಜಿ ಪಾಕಿಸ್ತಾನಕ್ಕೆ ಕೊಟ್ಟಿದ್ದರು! ಆಯೂಬ್ ಖಾನ್ ದರ್ಪಕ್ಕೆ ತನ್ನ ಬಹಾದ್ದೂರಿಕೆಯ ಮೂಲಕ ಶಾಸ್ತ್ರೀಜಿ ಭಾರೀ ದೊಡ್ಡ ಏಟು ಕೊಟ್ಟಿದ್ದರು. ಪಾಕ್ ಸೋತು ಸುಣ್ಣ ಆಯಿತು!

ಮುಂದೆ ತಾಶ್ಕೆಂಟ್ ಒಪ್ಪಂದದಲ್ಲಿ ಕೂಡ ಭಾರತದ ಕೈ ಮೇಲಾಯಿತು!

ಆಗ ಮಧ್ಯಪ್ರವೇಶ ಮಾಡಿದ ವಿಶ್ವ ಸಂಸ್ಥೆಯು ಸೆಪ್ಟೆಂಬರ್ 21ರಂದು ಎರಡು ರಾಷ್ಟ್ರಗಳ ನಡುವೆ ಕದನ ವಿರಾಮದ ಘೋಷಣೆ ಮಾಡಿತು. ಆದರೆ ಗೆದ್ದು ಬೀಗುತ್ತಿದ್ದ ಶಾಸ್ತ್ರೀಜಿ ಸುಮ್ಮನೆ ಬಿಟ್ಟುಕೊಡುವ ಆಸಾಮಿ ಅಲ್ಲವಲ್ಲ! ಇನ್ನೆಂದೂ ಪಾಕಿಸ್ತಾನ ಭಾರತದ ಮೇಲೆ ಆಕ್ರಮಣ ಮಾಡಿ ಕಿರುಕುಳ ಕೊಡಬಾರದಲ್ಲ! ಅದಕ್ಕೆ ಒಂದು ಅಂತಾರಾಷ್ಟ್ರೀಯ ಒಪ್ಪಂದದ ಅಗತ್ಯ ಇತ್ತು.

ರಷ್ಯಾದ ತಾಶ್ಕೆಂಟ್‌ನಲ್ಲಿ ರಷ್ಯಾ ಅಧ್ಯಕ್ಷ ಅಲೆಕ್ಸಿ ಕೊಸಿಗಿನ್ ಮಧ್ಯಸ್ಥಿಕೆಯಲ್ಲಿ 1966 ಜನವರಿ 11ರಂದು ಭಾರತ ಪ್ರಧಾನಿ ಶಾಸ್ತ್ರೀಜಿ ಮತ್ತು ಪಾಕ್ ಮುಖ್ಯಸ್ಥ ಆಯುಬ್ ಖಾನ್ ನಡುವೆ ಐತಿಹಾಸಿಕ ತಾಶ್ಕೆಂಟ್ ಒಪ್ಪಂದಕ್ಕೆ ವೇದಿಕೆ ಸಿದ್ಧವಾಯಿತು.

“ಮುಂದೆಂದೂ ಬಲ ಪ್ರಯೋಗದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನವನ್ನು ಮಾಡುವುದಿಲ್ಲ ಎಂದು ನಮಗೆ ಪಾಕ್ ಲಿಖಿತ ಭರವಸೆ ನೀಡಬೇಕು” ಎಂದು ಶಾಸ್ತ್ರೀಜಿ ಪಟ್ಟು ಹಿಡಿದು ಕೂತರು. ಆಯುಬ್ ಖಾನ್ ಸುಲಭದಲ್ಲಿ ಒಪ್ಪದೇ ಹೋದಾಗ ಶಾಸ್ತ್ರೀಜಿ ಮತ್ತೆ ಗುಡುಗಿದರು! “ಹಾಗಾದರೆ ಒಪ್ಪಂದವೆ ಬೇಡ. ನನ್ನ ಮುಂದಿನ ಪ್ರಧಾನಿ ಬಂದ ನಂತರ ನೀವು ಒಪ್ಪಂದ ಮಾಡಿಕೊಳ್ಳಿ!” ಎಂದು ಎದ್ದರು. ಆಗ ಆಯೂಬ್ ಖಾನ್ ತಲೆ ತಗ್ಗಿಸಿ ಸಹಿಯನ್ನು ಮಾಡಲೇಬೇಕಾಯಿತು!

ಇದನ್ನು ಓದಿ : Raja Marga Column : ನ್ಯಾಚುರಲ್ ಐಸ್ ಕ್ರೀಂ; ಸಾಮಾನ್ಯ ಹಣ್ಣಿನ ವ್ಯಾಪಾರಿಯ ಮಗನ ಬ್ರ್ಯಾಂಡ್‌ ಸ್ಟೋರಿ

ಅಲ್ಲಿಯೇ ನಡೆಯಿತು ದುರಂತ!

ಆದರೆ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿಯನ್ನು ಮಾಡಿದ ಶಾಯಿಯು ಆರುವ ಮೊದಲೇ ಅದೇ ಮಧ್ಯರಾತ್ರಿ ಹೊತ್ತು, ಅಲ್ಲಿಯೇ ಶಾಸ್ತ್ರಿಯವರ ಉಸಿರು ನಿಂತು ಹೋಯಿತು. ಹೃದಯಾಘಾತ ಎಂದು ಶರಾ ಬರೆದರು ರಷ್ಯಾದ ವೈದ್ಯರು! ಅವರ ನೀಲಿಗಟ್ಟಿದ್ದ ಪಾರ್ಥಿವ ಶರೀರ ಭಾರತಕ್ಕೆ ಬಂದಿತು! ಮರಣೋತ್ತರ ಪರೀಕ್ಷೆ ಕೂಡ ಮಾಡದೆ ಶಾಸ್ತ್ರಿಯವರ ಅಂತ್ಯಕ್ರಿಯೆಯು ದೆಹಲಿಯಲ್ಲಿ ನಡೆದುಹೋಯಿತು! ಹಲವು ಅನುಮಾನಗಳು ಹಾಗೇ ಉಳಿದುಹೋದವು!

ಆದರೆ ಕೇವಲ 17 ತಿಂಗಳು ಭಾರತದ ಪ್ರಧಾನಿ ಆಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಇತಿಹಾಸ ನಿರ್ಮಿಸಿ ನಿರ್ಗಮಿಸಿದ್ದರು.

Exit mobile version