Site icon Vistara News

Raja Marga Column : ಎಷ್ಟೊಂದು ಕಷ್ಟ ಆ ಜೀವಕ್ಕೆ; ಲೀಲಮ್ಮನಿಗೆ ಸ್ವರ್ಗದಲ್ಲಾದರೂ ಸುಖ ಸಿಗಲಿ!

Raja Marga Leelavathi amma

ತನ್ನ ಪ್ರತಿಭೆಯಿಂದ 50 ವರ್ಷ ಕನ್ನಡ ಸಿನಿಮಾ ರಂಗವನ್ನು ಶ್ರೀಮಂತ ಮಾಡಿದ ಲೀಲಾವತಿ (Actress Leelavathi) ಅಮ್ಮ ನಿನ್ನೆ (ಡಿಸೆಂಬರ್ 8) ನಮ್ಮನ್ನು ಅಗಲಿದ್ದಾರೆ. ಅದರಿಂದ ಅವರ ಮಗ ವಿನೋದ್ ರಾಜ್ (Actor Vinod raj) ಮಾತ್ರ ಅನಾಥರಾದದ್ದು ಅಲ್ಲ, ಇಂದು ಕನ್ನಡ ಸಿನಿಮಾ ರಂಗವೇ ಅನಾಥವಾಗಿದೆ (Actress Leelavathi No more). ಅವರು ಬಿಟ್ಟುಹೋದ ಶೂನ್ಯವನ್ನು ತುಂಬುವ ಇನ್ನೊಬ್ಬ ಕಲಾವಿದೆ ಸದ್ಯಕ್ಕೆ ಯಾರೂ ಕನ್ನಡದಲ್ಲಿ ಇಲ್ಲ (Raja Marga Column).

ಲೀಲಾವತಿ ಅಮ್ಮನ ಬವಣೆಯ ಬಾಲ್ಯ

ಅವರದ್ದು ಒಂಥರಾ ಗೊತ್ತುಗುರಿ ಇಲ್ಲದ ಬದುಕು. ಇಡೀ ಬದುಕಿನಲ್ಲಿ ಆಕೆಗೆ ನೋವು ಮತ್ತು ನೋವು ಮಾತ್ರ ದೊರೆತದ್ದು. ಹುಟ್ಟಿದ್ದು ಕರಾವಳಿ ಕರ್ನಾಟಕದ ಬೆಳ್ತಂಗಡಿಯಲ್ಲಿ. ಕಲಿತದ್ದು ಕೇವಲ ಎರಡನೇ ಕ್ಲಾಸು. ಒಮ್ಮೆ ಬಾಲ್ಯದಲ್ಲಿ ಬಿಸಿ ಎಣ್ಣೆಯ ಬಾಣಲೆಯಲ್ಲಿ ಕಾಲು ಬಿದ್ದು ಎರಡು ತಿಂಗಳು ನೋವು ಪಟ್ಟು ಮಲಗಿದರು. ಅಲ್ಲಿಗೆ ಶಾಲೆಯ ಆಸೆಗೆ ಕಲ್ಲು ಬಿತ್ತು. ಒಂಬತ್ತನೇ ವಯಸ್ಸಿಗೆ ಅಪ್ಪ, ಅಮ್ಮ ಇಬ್ಬರೂ ತೀರಿಹೋದರು. ಬೇರೆಯವರ ಮನೆಯಲ್ಲಿ ಮುಸುರೆ ತಿಕ್ಕಿ, ಚಾಕರಿ ಮಾಡಿ ಆಕೆ ತನ್ನ ಬಾಲ್ಯವನ್ನು ಕಳೆದರು. ಒಮ್ಮೆ ಟೆಂಟ್ ಥಿಯೇಟರ್‌ನಲ್ಲಿ ನೆಲದ ಮೇಲೆ ಕೂತು ‘ಚಂದ್ರಲೇಖ ‘ ಎಂಬ ಸಿನಿಮಾ ನೋಡಿದ್ದೇ ಅವರಿಗೆ ತಾನೂ ನಟಿ ಆಗಬೇಕು ಅನ್ನುವ ಕನಸು ಆರಂಭ ಆಯಿತು. ಆ ಕನಸು ಅವರನ್ನು ಮಲಗಲು ಬಿಡಲಿಲ್ಲ.

ನನಗೊಂದು ಅವಕಾಶ ಕೊಡಿ, ಒಂದು ಹೊತ್ತಿನ ಊಟ ಕೊಡಿ!

ಆಗ ಕರಾವಳಿಯಲ್ಲಿ ತುಳು ಸಿನಿಮಾಗಳು ಆರಂಭ ಆಗಿದ್ದವು. ವರ್ಷಕ್ಕೆ ಒಂದು ಅಥವಾ ಎರಡು ಸಿನಿಮಾ ಬಿಡುಗಡೆ ಆಗುತ್ತಿದ್ದವು. ಅದೂ ಕಪ್ಪು ಬಿಳುಪು ಸಿನಿಮಾಗಳು. ಸಿನಿಮಾದಲ್ಲಿ ಅಭಿನಯದ ಹುಚ್ಚು ಅಂಟಿಸಿಕೊಂಡು ಆಕೆ ತುಳು ಸಿನಿಮಾಗಳ ನಿರ್ಮಾಪಕರ ಮನೆಗಳಿಗೆ ಅಲೆದರು. ಅವರ ಪರವಾಗಿ ಮಾತಾಡುವವರು ಯಾರೂ ಇರಲಿಲ್ಲ. ‘ನನಗೊಂದು ಅವಕಾಶ ಕೊಡಿ, ಒಂದು ಹೊತ್ತಿನ ಊಟ ಕೊಡಿ ‘ ಎಂದು ಕೇಳಿಕೊಂಡು ಹದಿನಾಲ್ಕು ವರ್ಷದ ಒಬ್ಬಳು ಚಂದವಾದ ಹುಡುಗಿ ಅಲೆದಾಡಬೇಕಾದ ಅನಿವಾರ್ಯತೆ ಊಹೆ ಮಾಡಿದರೆ ನೀವು ಖಂಡಿತ ಬೆಚ್ಚಿ ಬೀಳುತ್ತೀರಿ. ಹುಡುಗಿಯರು ಸಿನಿಮಾದಲ್ಲಿ ಅಭಿನಯ ಮಾಡುವುದೇ ತಪ್ಪು ಎಂದು ಅಭಿಪ್ರಾಯ ಇದ್ದ ಕಾಲ ಅದು. ಅಂತಹ ಸನ್ನಿವೇಶದಲ್ಲಿ ಲೀಲಾವತಿ (ಅವರ ಮೊದಲ ಹೆಸರು ಲೀಲಾ ಕಿರಣ್) ನಾನು ಯಾವ ಪಾತ್ರವಾದರೂ ಮಾಡಲು ಸಿದ್ಧ ಎಂದು ಘೋಷಣೆ ಮಾಡಿದ್ದರು. ಅದರ ಪರಿಣಾಮವಾಗಿ ಸಾವಿರೊಡೊರ್ತಿ ಸಾವಿತ್ರಿ, ದಾರೆದ ಬುಡೆದಿ, ಬಿಸತ್ತಿ ಬಾಬು ಮೊದಲಾದ ತುಳು ಸಿನಿಮಾಗಳಲ್ಲಿ ಆಕೆ ಮುಖ್ಯಪಾತ್ರಗಳನ್ನು ಮಾಡಿದ್ದರು.

ಕನ್ನಡ ಸಿನಿಮಾಗಳಲ್ಲಿ ಅವಕಾಶ ಹುಡುಕಿಕೊಂಡು ಮೈಸೂರಿಗೆ

‘ಹಿಂದೂ ಯಾರಿಲ್ಲ. ಮುಂದೂ ಯಾರಿಲ್ಲ’ ಎಂದು ಹೇಳಿಕೊಂಡಿದ್ದ ಲೀಲಾವತಿ ಅಭಿನಯದ ಅವಕಾಶ ಹುಡುಕಿಕೊಂಡು ಮೈಸೂರಿಗೆ ಬಂದಿದ್ದರು. ಆಗ ಬದುಕಿಗೊಂದು ಆಸರೆ ಬೇಕಿತ್ತು. ಆಗ ಮಹಾನ್ ಕಲಾವಿದ ಆಗಿದ್ದ ಮಹಾಲಿಂಗ ಭಾಗವತರ್ ಅವರ ಪ್ರಸಿದ್ಧ ‘ಶ್ರೀ ಸಾಹಿತ್ಯ ಸಾಮ್ರಾಜ್ಯ ಡ್ರಾಮಾ ಕಂಪನಿ’ಯಲ್ಲಿ ಪಾತ್ರಗಳನ್ನು ಮಾಡುವ ಅವಕಾಶ ದೊರೆಯಿತು. ಅಭಿನಯ ಅವರ ರಕ್ತದಲ್ಲಿಯೇ ಬಂದಿತ್ತು ಅನ್ನಿಸುತ್ತದೆ. ಯಾವ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ಅವರು ಅಭಿನಯ ಮಾಡುತ್ತಿದ್ದರು. ತನ್ನ ಪಾತ್ರಗಳಲ್ಲಿ ತಲ್ಲೀನತೆ ಅವರಿಗೆ ಸಣ್ಣ ಪ್ರಾಯದಲ್ಲಿ ಸಾಧ್ಯವಾಗಿತ್ತು. ಮುಂದೆ ಸುಬ್ಬಯ್ಯ ನಾಯ್ಡು ಅವರ ಪರಿಚಯ ಆಗಿ ‘ಭಕ್ತ ಪ್ರಹ್ಲಾದ’ ಸಿನಿಮಾದಲ್ಲಿ ಒಂದು ಪಾತ್ರವು ದೊರೆಯಿತು. ಒಂದೊಂದು ಪಾತ್ರವನ್ನೂ ಆವಾಹನೆ ಮಾಡುವ ಶಕ್ತಿ ಅವರನ್ನು ಗೆಲ್ಲಿಸುತ್ತಾ ಹೋಯಿತು.

Leelavathi Hospital

ಅದೇ ಸಂದರ್ಭದಲ್ಲಿ ಮಹಾಲಿಂಗ ಭಾಗವತರ್ ಅವರನ್ನು ಮದುವೆ ಆದ ಲೀಲಾವತಿ ಆ ಮದುವೆಯನ್ನು ರಹಸ್ಯವಾಗಿ ಇಟ್ಟರು. ಆಗ ಹೆಚ್ಚಿನ ನಟಿಯರು ತಮ್ಮ ಬೇಡಿಕೆ ಉಳಿಸಿಕೊಳ್ಳಲು ಮದುವೆಯನ್ನು ಬಹಿರಂಗ ಮಾಡುತ್ತಿರಲಿಲ್ಲ. ಮುಂದೆ ಲೀಲಾವತಿ ಜೀವನದಲ್ಲಿ ಮಹಾಲಿಂಗ ಭಾಗವತರ್ ಅವರು ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದರು.

ಸಿನಿಮಾದಲ್ಲಿಯೂ ಒಳ್ಳೆಯ ಅವಕಾಶಗಳು ದೊರೆತವು. ಆದರೆ ಹಳ್ಳಿಯ ಹುಡುಗಿ ಲೀಲಾವತಿಗೆ ಅಭಿನಯ ಮಾತ್ರ ಗೊತ್ತಿತ್ತು. ವ್ಯವಹಾರ ಜ್ಞಾನ ಇರಲಿಲ್ಲ. ಅದರಿಂದಾಗಿ ಅವರು ಹಲವು ಬಾರಿ ಕೈ ಸುಟ್ಟುಕೊಂಡರು. ತುಂಬಾ ಜನ ಮೋಸ ಮಾಡಿದರು. ಆಗ ಕನ್ನಡ ಸಿನಿಮಾ ರಂಗದ ಚಟುವಟಿಕೆಗಳು ಮದ್ರಾಸಿನಲ್ಲಿ ನಡೆಯುತ್ತಿದ್ದ ಕಾರಣ ಆಕೆ ಅಲ್ಲಿಗೆ ಹೋಗಿ ಒಂದು ಬಾಡಿಗೆ ಮನೆ ಹಿಡಿದರು.

60 ವರ್ಷಗಳು – 650 ಶ್ರೇಷ್ಠ ಸಿನಿಮಾಗಳು

ನಾನಿಂದು ಅವರ ಸಿನಿಮಾಗಳ ಬಗ್ಗೆ ಹೆಚ್ಚು ಬರೆಯುವುದಿಲ್ಲ. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಸಿನಿಮಾಗಳಲ್ಲಿ ಸಾಟಿ ಇಲ್ಲದ ಕಲಾವಿದೆ ಆಗಿ ಮೆರೆದ ಲೀಲಾವತಿ ಭಾರೀ ಹೆಸರು ಪಡೆದರು. ದಕ್ಷಿಣ ಭಾರತದ ಎಲ್ಲ ಮಹಾನ್ ನಟರ ಜೊತೆ ಅಭಿನಯ ಮಾಡಿದ ಆಕೆ ಅದ್ಭುತ ನಟಿ ಆಗಿ ಮಿಂಚಿದರು. ಅತೀ ಹೆಚ್ಚು ನಟಿಸಿದ್ದು ಕನ್ನಡ ಸಿನಿಮಾಗಳಲ್ಲಿ. ಡಾಕ್ಟರ್ ರಾಜಕುಮಾರ್ ಜೊತೆಗೆ ಅವರದ್ದು ಅದ್ಭುತವಾದ ಕೆಮಿಸ್ಟ್ರಿ. ಈ ಜೋಡಿ ಮೋಡಿ ಮಾಡಿದ್ದು ಬರೋಬ್ಬರಿ 36 ಸಿನೆಮಾಗಳಲ್ಲಿ. ಭೂದಾನ, ಸಿಪಾಯಿ ರಾಮು, ಕಿತ್ತೂರು ಚೆನ್ನಮ್ಮ, ಭಾಗ್ಯ ದೇವತೆ, ಭಕ್ತ ಕುಂಬಾರ, ಉಪಾಸನೆ, ಬಿಳಿ ಹೆಂಡತಿ, ದೇವರ ಗುಡಿ, ಗಾಳಿ ಗೋಪುರ, ನಾಗರ ಹಾವು, ವೀರ ಕೇಸರಿ, ಕರುಣೆಯೇ ಕುಟುಂಬದ ಕಣ್ಣು ಇವುಗಳೆಲ್ಲ ಲೀಲಾವತಿ ಅವರ ಕ್ಲಾಸಿಕಲ್ ಸಿನಿಮಾಗಳು.

ರಾಜ್ – ಲೀಲಾವತಿ ಸೂಪರ್ ಜೋಡಿ

ಇಬ್ಬರೂ ಕಲಾವಿದರು ತಮ್ಮ ಪಾತ್ರಗಳಲ್ಲಿ ಮುಳುಗಿ ಅಭಿನಯ ಮಾಡುತ್ತಿದ್ದರೆ ಜನರು ಅವರನ್ನು ಗಂಡ ಹೆಂಡತಿ ಎಂದೇ ಕರೆಯಲು ಆರಂಭ ಮಾಡಿದರು. ಇದು ಲೀಲಾವತಿ ಅವರ ಗಮನಕ್ಕೂ ಬಂದಿತ್ತು. ಆದರೆ ಲೀಲಾವತಿ ಅದಕ್ಕೆ ರೆಸ್ಪಾನ್ಸ್ ಮಾಡಲು ಹೋಗಲಿಲ್ಲ. ರಾಜ್ ಕೂಡ ಲೀಲಾವತಿ ಅವರನ್ನು ಭಾರೀ ಇಷ್ಟ ಪಟ್ಟರು. ಲೀಲಾವತಿ ಅಮ್ಮ ರಾಜ್ ಅವರನ್ನು ಭಕ್ತಿಯಿಂದ ‘ದೊಡ್ಡೋರು’ ಎಂದೇ ಭಕ್ತಿಯಿಂದ ಕರೆಯುತ್ತಿದ್ದರು.

Leelavathi Hospital

ರಾಜ್ ಲೀಲಾವತಿ ಜೋಡಿಯ ಒಂದು ಐತಿಹಾಸಿಕ ದಾಖಲೆ ಇದೆ. ಅದನ್ನು ಮುಂದೆ ಕೂಡ ಯಾರೂ ಮುರಿಯಲು ಸಾಧ್ಯವಿಲ್ಲ. ಅದೆಂದರೆ ಲೀಲಾವತಿ ಬೇರೆ ಬೇರೆ ಸಿನಿಮಾಗಳಲ್ಲಿ ಡಾಕ್ಟರ್ ರಾಜ್ ಪ್ರೇಯಸಿಯಾಗಿ, ಹೆಂಡತಿಯಾಗಿ, ಮಗಳಾಗಿ, ಅತ್ತಿಗೆಯಾಗಿ, ತಂಗಿಯಾಗಿ, ಅತ್ತೆಯಾಗಿ, ಸೊಸೆಯಾಗಿ, ಸೋದರತ್ತೆಯಾಗಿ, ಅಮ್ಮನಾಗಿ, ಅಜ್ಜಿಯಾಗಿ ಕೂಡ ಯಶಸ್ವಿಯಾಗಿ ನಟಿಸಿದ್ದು!

ಪೋಷಕ ಪಾತ್ರಗಳ ಕಡೆಗೆ….

ಹಣೆಯಲ್ಲಿ ಒಂದೊಂದೇ ನರೆಗೂದಲು ಕಾಣಿಸಲು ತೊಡಗಿದಾಗ ಲೀಲಾವತಿ ವಾಸ್ತವಕ್ಕೆ ಇಳಿದರು. ಪೋಷಕ ಪಾತ್ರಗಳನ್ನು ಬೊಗಸೆ ಬೊಗಸೆಯಾಗಿ ಪಡೆದರು. ಕನ್ನಡದಲ್ಲಿ ಪೋಷಕ ನಟಿಯಾಗಿ ಅವರಷ್ಟು ಯಶಸ್ವೀ ಆದ ಇನ್ನೊಬ್ಬ ಕಲಾವಿದೆ ನಮಗೆ ದೊರೆಯುವುದಿಲ್ಲ. ಅಜ್ಜಿ, ಅತ್ತೆ, ಅಮ್ಮ, ಅಕ್ಕ, ಅತ್ತಿಗೆ… ಹೀಗೆ ಯಾವ ಪಾತ್ರಕ್ಕೂ ಅವರು ಸೂಟ್ ಆಗ್ತಾ ಇದ್ದರು. ಗೆಜ್ಜೆ ಪೂಜೆ, ಸಿಪಾಯಿ ರಾಮು, ಡಾಕ್ಟರ್ ಕೃಷ್ಣ ಈ ಸಿನಿಮಾಗಳ ಅಭಿನಯಕ್ಕೆ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗಳು ಲಭಿಸಿವೆ. ಇಂದಿನ ರಾಮಾಯಣ, ಸ್ವಾತಿ ಮುತ್ತು, ನಾ ನಿನ್ನ ಮರೆಯಲಾರೆ, ಬಿಳಿ ಹೆಂಡ್ತಿ ಸಿನಿಮಾಗಳ ಅವರ ಅಭಿನಯ ನೋಡಿದರೆ ನಮಗೆ ಲೀಲಾವತಿ ಅಮ್ಮನ ಪ್ರತಿಭೆಯ ವಿಶ್ವರೂಪ ದರ್ಶನ ಆಗುತ್ತದೆ. ಆಕೆ ಮಹಾನ್ ಕಲಾವಿದೆ ಅನ್ನುವುದರಲ್ಲಿ ಎರಡನೇ ಮಾತೇ ಇಲ್ಲ.

ಲೀಲಾವತಿ ಅಮ್ಮನಿಗೆ ನೋವು ಕೊಡುವ ಘಟನೆಗಳು

ಎಂತಹ ಮಹಾನ್ ಕಲಾವಿದೆ ಆದರೂ ಲೀಲಾವತಿ ಅಮ್ಮನ ಬದುಕಿನ ಸಂಧ್ಯಾಕಾಲದಲ್ಲಿ ನೂರಾರು ನೋವು ಕೊಡುವ ಘಟನೆಗಳು ನಡೆದವು. ಅದರಲ್ಲಿಯೂ ತುಂಬಾ ನೋವು ಕೊಟ್ಟದ್ದು ರಾಜ್ ಲೀಲಾವತಿ ದಂಪತಿಗಳು ಎನ್ನುವ ಆಪಾದನೆ. ಆಕೆಯ ಮಗ ವಿನೋದ್ ರಾಜ್ ರಾಜಕುಮಾರ್ ಮಗ ಎನ್ನುವ ಸುದ್ದಿ ಹರಡಲು ತೊಡಗಿದಾಗ ಲೀಲಾವತಿ ಅಮ್ಮ ನಡುಗಿಹೋದರು. ಅದಕ್ಕೆ ಪೂರಕವಾಗಿ ರವಿ ಬೆಳಗೆರೆ ‘ರಾಜ್ ಲೀಲಾ ವಿನೋದ’ ಎಂಬ ಪುಸ್ತಕ ಬರೆದರು. ಆಗ ಬಹಿರಂಗವಾಗಿ ಬಂದು ಲೀಲಾವತಿ ಅಮ್ಮ ಸ್ಪಷ್ಟೀಕರಣ ಕೊಡಬೇಕಾದ ಅನಿವಾರ್ಯತೆ ಬಂದಿತು. ಆಕೆ ಕಣ್ಣೀರು ಹಾಕಿದ ನೂರಾರು ಘಟನೆಗಳು ನಡೆದವು.

Leelavathi Hospital

ಒಮ್ಮೆ ಏನಾಯಿತು ಅಂದರೆ ಪ್ರತೀ ವರ್ಷವೂ ಅಮ್ಮ ಮತ್ತು ಮಗ ತಿರುಪತಿಗೆ ಹೋಗಿ ಮುಡಿ ಕೊಟ್ಟು ಬರುವ ಸಂಪ್ರದಾಯ ಇತ್ತು. ಒಮ್ಮೆ ಹೋಗಿ ಮುಡಿ ಕೊಟ್ಟು ಹಿಂದೆ ಬರುವಾಗ ರಾಜ್ ಕುಮಾರ್ ತೀರಿಹೋದ ಸುದ್ದಿ ಬಂದು ತಾಯಿ ಮಗ ಬೆಂಗಳೂರಿಗೆ ಧಾವಿಸಿ ಬಂದರು. ಆದರೆ ರಾಜ್ ಅಭಿಮಾನಿಗಳು ಅವರಿಗೆ ರಾಜ್ ಅಂತಿಮ ದರ್ಶನದ ಅವಕಾಶ ನೀಡದೇ ಅಪಮಾನ ಮಾಡಿ ಕಳುಹಿಸಿದರು. ತಾಯಿ ಮತ್ತು ಮಗ ಇಬ್ಬರೂ ಕಣ್ಣೀರು ಹಾಕಿ ಹಿಂದೆ ಹೋದ ದಿನ ಅದು. ಲೀಲಾವತಿ ಅಮ್ಮ ಸಾಯುವತನಕ ಇಂತಹ ಹಲವು ಘಟನೆಗಳಿಂದ ಜರ್ಜರಿತ ಆಗಿದ್ದರು. ಒಬ್ಬ ಅಮ್ಮನಾಗಿ ವಿನೋದ್ ರಾಜ್ ಅವರನ್ನು ಸ್ಟಾರ್ ಮಾಡಲು ಪಡಬಾರದ ಪಾಡು ಪಟ್ಟರು. ಆತನೂ ಅಮ್ಮನ ಹಾಗೆ ಪ್ರತಿಭಾವಂತ. ಮಗನಿಗಾಗಿ ಸಿನಿಮಾ ನಿರ್ಮಾಣ ಮಾಡಿ ಆಕೆ ತುಂಬಾ ದುಡ್ಡು ಕಳೆದುಕೊಂಡರು.

ಇದನ್ನೂ ಓದಿ : Raja Marga Column : 13 ವರ್ಷದ ನನ್ನ ಮಗಳು ಒಮ್ಮಿಂದೊಮ್ಮೆಗೆ ಮಂಕಾಗಿದ್ದು ಯಾಕೆ?

ನೆಲಮಂಗಲದಲ್ಲಿ ಹಸಿರು ತೋಟ

ಮುಂದೆ ತಾಯಿ ಮಗ ಸೇರಿಕೊಂಡು ನೆಲಮಂಗಲ ತಾಲೂಕಿನ ಸೋಲದೇವನ ಹಳ್ಳಿ ಎಂಬ ಗ್ರಾಮದಲ್ಲಿ ಜಾಗವನ್ನು ಖರೀದಿ ಮಾಡಿ ಬೆವರು ಸುರಿಸಿ ಭಾರಿ ದೊಡ್ಡ ಹಸಿರು ತೋಟ ಮಾಡಿದರು. ಲೀಲಾವತಿ ಅಮ್ಮ ತನ್ನ ಸಂಪಾದನೆಯ ಎಲ್ಲ ದುಡ್ಡು ಅಲ್ಲಿ ಸುರಿದು ಬೆವರು ಬಸಿದಿದ್ದಾರೆ. ಬಡವರಿಗಾಗಿ ಒಂದು ಸಾರ್ವಜನಿಕ ಆಸ್ಪತ್ರೆ ಮಾಡಿದ್ದಾರೆ. ಇತ್ತೀಚೆಗೆ ಒಂದು ಪಶು ಆಸ್ಪತ್ರೆ ಮಾಡಿ ಸರಕಾರಕ್ಕೆ ಹಸ್ತಾಂತರ ಮಾಡಿದ್ದಾರೆ.

Leelavathi Hospital

ಅವರಿಗೆ ಡಾಕ್ಟರ್ ರಾಜಕುಮಾರ್ ಅವರ ಹೆಸರಿನ ಪ್ರಶಸ್ತಿ, ತುಮಕೂರು ವಿವಿಯಿಂದ ಗೌರವ ಡಾಕ್ಟರೇಟ್ ಎಲ್ಲವೂ ದೊರೆತಿದೆ. ಬದುಕಿನ ಎಲ್ಲ ಹಂತಗಳಲ್ಲಿಯೂ ನೋವು ಪಡುತ್ತಾ ಬಂದ ಲೀಲಾವತಿ ಅಮ್ಮ ಸ್ವರ್ಗದಲ್ಲಿ ಆದರೂ ಸುಖವಾಗಿರಲಿ ಅನ್ನುವುದೇ ಭರತವಾಕ್ಯ. ಅವರಿಗೆ ನಮ್ಮೆಲ್ಲರ ಶ್ರದ್ಧಾಂಜಲಿ ಅರ್ಪಣೆ ಆಗಲಿ.

Exit mobile version