Raja Marga Column : ಇತ್ತೀಚೆಗೆ ಹಲವು ವಾರ್ಷಿಕೋತ್ಸವ ಕಾರ್ಯಕ್ರಮಗಳಲ್ಲಿ (Annual School day) ಅತಿಥಿಯಾಗಿ ಭಾಗವಹಿಸಿದ ಸಂದರ್ಭ ನಾನು ಗಮನಿಸಿದ ಸಂಗತಿಗಳು ಇವು! ಸಣ್ಣ ಮಕ್ಕಳಿಗೆ ಭಾಷಣಗಳು ಬೇಡ! ಅವರಿಗೆ ಬಹುಮಾನಗಳು ಕೂಡ ಬೇಡ! ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಟ್ಟರೂ ಒಂದೇ! ಅವರಿಗೆ ಬೇಕಾದದ್ದು ಗಮ್ಮತ್ತು, ಗೆಳೆತನ, ಖುಷಿ ಮತ್ತು ಸ್ವಾತಂತ್ರ್ಯ ಮಾತ್ರ! ಅವರನ್ನು ಹಿಡಿದು ಕೂರಿಸಿ ಬಲವಂತದ ಮಾಘ ಸ್ನಾನ ಎಂಬಂತೆ ಈ ಬಹುಮಾನ ಹೀಗೇ ತೆಗೆದುಕೋ, ಹೀಗೇ ನಮಸ್ಕಾರ ಮಾಡು, ಹೀಗೇ ಫೋಟೊಗೆ ಪೋಸ್ ಕೊಟ್ಟು ಹಲ್ಲು ಕಿರಿದು ನಿಲ್ಲು ಎಂದರೆ ಮಕ್ಕಳಿಗೆ ಅದರಷ್ಟು ಕಿರಿಕಿರಿ ಬೇರೆ ಯಾವುದೂ ಇಲ್ಲ!
ಈ ಪ್ರಶಸ್ತಿ, ಬಹುಮಾನ, ಚಪ್ಪಾಳೆ, ಪೋಸ್ ಕೊಡುವುದು ಎಲ್ಲವೂ ಬೇಕಾದದ್ದು ಪೋಷಕರಿಗೆ ಹೊರತು ಮಕ್ಕಳಿಗೆ ಅಲ್ಲ! ಅದೆಲ್ಲವೂ ಅವರ ಪ್ರೆಸ್ಟೀಜ್, ಅಂತಸ್ತು, ಇಗೋ ಸಂತೃಪ್ತಿಯ ಭಾಗವೇ ಹೊರತು ಮಕ್ಕಳದ್ದು ಅಲ್ಲವೇ ಅಲ್ಲ! ಮಕ್ಕಳಿಗೆ ಅದ್ಯಾವುದೂ ಬೇಡ.
Raja Marga Column : ತರಹೇವಾರಿ ಸ್ಪರ್ಧೆಗಳು!
ಶಾಲಾ ಮಟ್ಟದಲ್ಲಿ ನಾವು ಮಾಡುವ ಸ್ಪರ್ಧೆಗಳು ಭಿನ್ನ ಭಿನ್ನವಾಗಿವೆ. 12 ವರ್ಷಗಳವರೆಗೆ ಮಕ್ಕಳಿಗೆ ಯಾವ ಸ್ಪರ್ಧೆಯನ್ನೂ ಮಾಡಬಾರದು, ಮಾಡಿದರೆ ಎಲ್ಲ ಮಕ್ಕಳಿಗೂ ಬಹುಮಾನಗಳನ್ನು ಕೊಡಿ ಎಂದು ಗುಡುಗಿದ್ದರು ಶಿವರಾಮ ಕಾರಂತರು! ಅವರಿದ್ದರೆ ಈ ಪ್ರತಿಭಾ ಕಾರಂಜಿ ಮಾಡಲು ಬಿಡುತ್ತಿರಲಿಲ್ಲ. ನಾವು ಮಾಡುವ ಸ್ಪರ್ಧೆಗಳಲ್ಲಿ ಮಕ್ಕಳ ನಿಜವಾದ ಪ್ರತಿಭೆಯನ್ನು ಉದ್ದೀಪನ ಮಾಡುವ ಸ್ಪರ್ಧೆಗಳು ಎಷ್ಟು? ಒಮ್ಮೆ ಯೋಚಿಸಿ. ಯಾರೋ ಬರೆದುಕೊಟ್ಟದ್ದನ್ನು ಹಾಗೇ ಬಂದು ಗಿಳಿಪಾಠ ಹೇಳುವ ಮಕ್ಕಳ ಭಾಷಣ ಸ್ಪರ್ಧೆ, ಯಾರೋ ಬರೆದು ಕೊಟ್ಟ ಪ್ರಬಂಧವನ್ನು ಒಂದಕ್ಷರ ಆಚೀಚೆ ಮಾಡದೆ ಒಂದೇ ಉಸಿರಿಗೆ ಬರೆದು ಮುಗಿಸುವ ಪ್ರಬಂಧ ಸ್ಪರ್ಧೆ, ಒಂದಿಷ್ಟು ಅಂಶ ನೆನಪಿಟ್ಟುಕೊಂಡು ಹಾಗೇ ಹಿಂದೆ ಒಪ್ಪಿಸುವ ರಸಪ್ರಶ್ನೆ ಸ್ಪರ್ಧೆ… ಹೀಗೆ ಯೋಚನೆ ಮಾಡುತ್ತಾ ಹೋದಾಗ ಶಿಕ್ಷಕನಾದ ನನಗೇ ಪಾಪ ಪ್ರಜ್ಞೆ ಕಾಡುತ್ತದೆ!
ತರಬೇತು ಪಡೆದ ಪ್ರತಿಭೆಗಳು VS ತರಬೇತು ಇಲ್ಲದ ಪ್ರತಿಭೆಗಳು!
ಇನ್ನು ಸಂಗೀತ ಸ್ಪರ್ಧೆ, ನೃತ್ಯ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ ಮೊದಲಾದ ಸ್ಪರ್ಧೆಗಳಲ್ಲಿ ಮಕ್ಕಳ ಹೆತ್ತವರು ದುಡ್ಡು ಕೊಟ್ಟು ಖರೀದಿ ಮಾಡಿದ ತರಬೇತಿಯ ಪ್ರಭಾವ ಇರುತ್ತದೆ! ತರಬೇತು ಪಡೆದ ಮಕ್ಕಳ ಜೊತೆಗೆ ತರಬೇತು ಪಡೆಯದ ಹಳ್ಳಿಯ, ಬಡವರ ಮಕ್ಕಳು ಸ್ಪರ್ಧೆ ಮಾಡುವುದು ಹೇಗೆ? ಇದನ್ನೆಲ್ಲ ಗಮನಿಸಿದರೆ ಕಾರಂತರು ಹೇಳಿದ್ದನ್ನು ನೀವು ನಿಜ ಎಂದು ಒಪ್ಪಿಕೊಳ್ಳುತ್ತೀರಿ! ಸೋಲು, ಗೆಲುವಿನ ಪ್ರಜ್ಞೆ ಇಲ್ಲದ ಪ್ರಾಯದಲ್ಲಿ ಮಕ್ಕಳನ್ನು ಕಂಬಳದ ಕೋಣಗಳ ಹಾಗೆ, ರೇಸಿನ ಕುದುರೆಗಳ ಹಾಗೆ ಸ್ಪರ್ಧೆಗೆ ನಿಲ್ಲಿಸುವುದು ಎಷ್ಟು ಸರಿ? ಕೇವಲ ಲಿಖಿತ ಪರೀಕ್ಷೆಯ ಅಂಕಗಳ ಆಧಾರದಲ್ಲಿ ಒಂದು ಮಗುವನ್ನು ಬುದ್ದಿವಂತ, ದಡ್ಡ ಎಂದು ವರ್ಗೀಕರಣ ಮಾಡುವುದು ಎಷ್ಟು ಸರಿ? ಇದನ್ನು ಯಾವ ಮನಶ್ಶಾಸ್ತ್ರವೂ ಒಪ್ಪುವುದಿಲ್ಲ!
ಪ್ರತಿಭೆ ಎನ್ನುವುದು ಪ್ರದರ್ಶನಕ್ಕೆ ಸರಿ, ಖುಷಿಗೆ ಹೆಚ್ಚು ಸರಿ! ಆದರೆ ಸ್ಪರ್ಧೆಗೆ…..? ನೀವು, ನಾವೆಲ್ಲರೂ ಯೋಚನೆ ಮಾಡಬೇಕಾದ ಮಿಲಿಯನ್ ಡಾಲರ್ ಪ್ರಶ್ನೆ ಇದು!
ಹಾಗೆಂದು ನಾನು ಸ್ಪರ್ಧೆಗಳ ವಿರೋಧಿ ಎಂದು ದಯವಿಟ್ಟು ಭಾವಿಸಬೇಡಿ. ಮಕ್ಕಳ ಪ್ರತಿಭೆಗಳು ಸ್ಪರ್ಧೆಗಳ ಚೌಕಟ್ಟು ಮೀರಿದ್ದು ಎಂದು ಮಾತ್ರ ನನ್ನ ಅಭಿಪ್ರಾಯ!
ಮಕ್ಕಳು ಕಲಿಯಬೇಕಾದದ್ದು ಶುದ್ಧ ಸಂಗೀತ, ನೃತ್ಯ ಮತ್ತು ಸಾಹಿತ್ಯವನ್ನು!
ಮಕ್ಕಳ ಸಹಜ ಆಸಕ್ತಿಯನ್ನು ಗ್ರಹಿಸಿ ಅದಕ್ಕೆ ಬಾಲ್ಯದಲ್ಲಿ ಶುದ್ಧವಾದ ಮತ್ತು ಶಾಸ್ತ್ರೀಯವಾದ ಸಾಹಿತ್ಯ, ಸಂಗೀತ, ನೃತ್ಯ ಅಥವಾ ಕ್ರೀಡಾ ತರಬೇತಿಗೆ ಹೆತ್ತವರು ನಿಯೋಜನೆ ಮಾಡಬಹುದು. ಆದರೆ, ಅದು ಕೂಡ ಮಕ್ಕಳಿಗೆ ಹೊರೆ ಆಗದ ಹಾಗೆ ನೋಡಿಕೊಳ್ಳುವುದು ಹೆತ್ತವರ ಹೊಣೆ ಆಗಿರುತ್ತದೆ. ಆದರೆ ಮಕ್ಕಳ ನಿಜವಾದ ಪ್ರತಿಭೆಯನ್ನು ಒರೆ ಹಚ್ಚುವ ಕೌನ್ಸೆಲಿಂಗನಂತಹ ವ್ಯವಸ್ಥೆ ನಮ್ಮಲ್ಲಿ ಇನ್ನೂ ಡೆವಲಪ್ ಆಗಿಲ್ಲ! ಇದರಿಂದ ಮುಂದೆ ಹಲವು ಸಮಸ್ಯೆಗಳು ಉಂಟಾಗುತ್ತವೆ. ಯಾವ ತರಬೇತಿಯೂ ಮಕ್ಕಳಿಗೆ ಹೇರಿಕೆ ಆದರೆ ಅದು ಮುಂದೆ ಮಕ್ಕಳ ವ್ಯಕ್ತಿತ್ವದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ! ಮಕ್ಕಳು ಖುಷಿಯಿಂದ ಕಲಿಯುವ ವಾತಾವರಣವನ್ನು ಹೆತ್ತವರು ಮತ್ತು ಶಿಕ್ಷಕರು ಖಾತರಿ ಪಡಿಸಬೇಕು.
ಇನ್ನೊಂದು ಅಂಶವನ್ನು ಗಮನಿಸಿ. ಮಕ್ಕಳು ತನ್ನ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿ ಬಾಲ್ಯದಲ್ಲಿ ತರಬೇತು ಪಡೆಯಲು ಆರಂಭ ಮಾಡಿದರೂ ಮುಂದೆ ಹತ್ತನೇ ತರಗತಿ, ದ್ವಿತೀಯ ಪಿಯುಸಿ (ವಿಶೇಷವಾಗಿ ವಿಜ್ಞಾನ!) ಹಂತಕ್ಕೆ ಬರುವಾಗ ಹೆತ್ತವರೇ ಮಕ್ಕಳ ಸಾಂಸ್ಕೃತಿಕ ಕಲಿಕೆಗೆ ಬ್ರೇಕ್ ಹಾಕುತ್ತಾರೆ! ಇದರಿಂದ ಯಾವ ಕಲಿಕೆಯೂ ಪೂರ್ತಿ ಆಗುವುದಿಲ್ಲ! ಮಕ್ಕಳ ನಿಜವಾದ ಪ್ರತಿಭೆಗೆ ನ್ಯಾಯ ದೊರೆಯುವುದಿಲ್ಲ!
ಇದನ್ನೂ ಓದಿ : Child Artists : ಸೀರಿಯಲ್, ರಿಯಾಲಿಟಿ ಶೋದಲ್ಲಿ ಮಕ್ಕಳ ಅಭಿನಯ; ಡಿಸಿ ಅನುಮತಿ ಸಹಿತ ಹಲವು ಕಂಡಿಷನ್ಸ್
ಇನ್ನು ರಿಯಾಲಿಟಿ ಶೋ (Reality Show) ಎಂಬ ದೊಡ್ಡ ಮಾರುಕಟ್ಟೆ!
ಇನ್ನು ಟಿವಿ ರಿಯಾಲಿಟಿ ಶೋಗಳ ಬಗ್ಗೆ ತುಂಬಾ ಸಲ ಬರೆದಿದ್ದೇನೆ. ಈ ಹಾಡುವ, ನೃತ್ಯ ಮಾಡುವ, ಅಭಿನಯಿಸುವ ರಿಯಾಲಿಟಿ ಶೋಗಳು ಮಕ್ಕಳಿಗೆ ಒಂದು ಹಂತಕ್ಕೆ ಜನಪ್ರಿಯತೆ ತಂದು ಕೊಟ್ಟ ಹಾಗೆ ನಮಗೆ ಅನ್ನಿಸುತ್ತದೆ! ಆದರೆ ಅದು ಮಕ್ಕಳ ಕಲಿಕೆಯ ಮೇಲೆ ಮುಂದೆ ಅಡ್ಡ ಪರಿಣಾಮವನ್ನು ಬೀರುತ್ತದೆ ಎಂದು ಹಲವು ಬಾರಿ ಸಾಬೀತು ಆಗಿದೆ. ಸಣ್ಣ ಪ್ರಾಯದಲ್ಲಿ ಮಕ್ಕಳನ್ನು ಮಾರುಕಟ್ಟೆಯ ಸರಕು ಮಾಡುವ, ಅವರನ್ನು ಸೂಪರ್ ಹೀರೊ ಮಾಡಿ ಕೂರಿಸುವ ವ್ಯವಸ್ಥೆ ಖಂಡಿತ ಒಳ್ಳೇದಲ್ಲ! ಬಾಲ್ಯದಲ್ಲಿ ಆತಿಯಾದ ಪ್ರಚಾರ, ಝಗಮಗಿಸುವ ವೇದಿಕೆ, ಥೈಲಿ ತುಂಬಾ ದುಡ್ಡು ದೊರೆಯಿತು ಎಂದಾದರೆ ಅಂತಹ ಮಕ್ಕಳು ದಾರಿ ತಪ್ಪಿದ ನೂರಾರು ಉದಾಹರಣೆಗಳು ಇವೆ! ಇನ್ನು ರಿಯಾಲಿಟಿ ಶೋನಲ್ಲಿ ಸೋತವರ ಕಣ್ಣೀರು ಕೂಡ ಟಿವಿ ವಾಹಿನಿಗಳಿಗೆ ಟಿ ಆರ್ ಪಿ ಆಗುವ ವಾಸ್ತವದ ಅರಿವು ನಮಗೆಲ್ಲರಿಗೂ ಆಗಿದೆ!
ಭರತ ವಾಕ್ಯ ಏನೆಂದರೆ..
ಮಕ್ಕಳ ನಿಜವಾದ ಪ್ರತಿಭೆಯನ್ನು ಸಪೋರ್ಟ್ ಮಾಡದ ಪೋಷಕರು ಎಷ್ಟು ಅಪರಾಧಿಗಳೊ, ಮಕ್ಕಳ ಪ್ರತಿಭೆಯನ್ನು ಮಾರಾಟದ ಸರಕು ಮಾಡಿಕೊಂಡು ತಮ್ಮ ಇಗೋ ತೃಪ್ತಿ ಮಾಡಿಕೊಳ್ಳುವ ಪೋಷಕರು ಅಷ್ಟೇ ಅಪರಾಧಿಗಳು!
ಮಕ್ಕಳಿಗೆ ನಾವು ಕೊಡಬಹುದಾಗಿರುವ ಅತ್ಯಂತ ಸರಳ ಮತ್ತು ಸುಂದರ ವಿಚಾರವೆಂದರೆ ಆತ್ಮೀಯತೆ ಮತ್ತು ಪ್ರೀತಿ. ಮಕ್ಕಳ ಜತೆಗೆ ನಾವು ಭಾವನಾತ್ಮಕವಾದ ಬಾಂಡಿಂಗ್ ಸೃಷ್ಟಿಸಿಕೊಂಡರೆ ಅದಕ್ಕಿಂತ ದೊಡ್ಡದು ಬೇರೇನೂ ಇಲ್ಲ.
Attachment is the deep emotional bond between a baby and the person who provides most of their care. It will develop as you respond to your baby’s needs in loving, sensitive and consistent ways. To find out more about attachment and how to foster it, visit https://t.co/nvXdK20IqP pic.twitter.com/GlwbJ5mdUh
— Caring for Kids (@CaringforKids) October 24, 2023