Site icon Vistara News

Raja Marga Column : ಹಲೋ ಅಮಿತ್‌, ನಿನಗೆ ನೆನಪಿದೆಯಾ? ; ಅಮಿತಾಬ್‌ಗೊಂದು ಪ್ರೇಮಪತ್ರ

Amitabh Bachchan 81st Birthday

ಹಲೋ ಅಮಿತ್,
ಬಾಲ್ಯದಿಂದಲೂ ನಿನ್ನ ಪ್ರತಿಯೊಂದು ಸಿನಿಮಾ ನೋಡುತ್ತ, ನಿನ್ನ ಬಗ್ಗೆ ಅಭಿಮಾನ ಪಡುತ್ತಾ ಬಂದ ನನಗೆ ನಿನ್ನನ್ನು ಏಕ ವಚನದಲ್ಲಿ ಕರೆಯುವಷ್ಟು ಸಲಿಗೆ ಖಂಡಿತ ಇದೆ ಅಲ್ವಾ?

ಅಮಿತ್ (Amitabh Bachchan), ನೋಡುತ್ತಾ ನೋಡುತ್ತಾ 81 ತುಂಬಿತು (Amitabh 81st Birthday) ನಿನಗೆ. ನಿನ್ನ ಕಾಲದಲ್ಲಿ ನಾವು ಬದುಕಿದ್ದೇವೆ ಅನ್ನೋದೇ ನಮಗೆ ಖುಷಿ. ಭಾರತೀಯ ಸಿನಿಮಾರಂಗದಲ್ಲಿ ನಿನ್ನಷ್ಟು ಎತ್ತರ ಏರಿದವರು ಬೇರೆ ಯಾರೂ ಇಲ್ಲ. ಅದಕ್ಕಾಗಿ ನಿನಗೆ ಅಭಿನಂದನೆ ಸಲ್ಲಬೇಕು (Raja Marga Column).

ಹಾಯ್ ಶೆಹನ್‌ಶಾ,
ನಿನಗೆ ಇದು ನೆನಪಿದೆಯಾ?

ಡಿಗ್ರಿ ಪರೀಕ್ಷೆಯಲ್ಲಿ ಫೇಲ್ ಆದದ್ದು! ಮುಂಬೈಯ ಚೌಪಾಟಿ ಬೀಚಿನ ಮರಳಿನ ಮೇಲೆ ಇಡೀ ರಾತ್ರಿ ಮಲಗಿ ನಕ್ಷತ್ರ ಎಣಿಸಿದ್ದು! ನಿನಗೂ ಅದರಲ್ಲಿ ಒಂದು ಸ್ಟಾರ್ ಆಗಬೇಕು ಎಂಬ ಕನಸು ಟ್ರಿಗರ್ ಆದದ್ದು!

ಆಕಾಶವಾಣಿಯಲ್ಲಿ ವಾರ್ತೆ ಓದಲು ಹೋಗಿ ಧ್ವನಿಯಲ್ಲಿ ಸ್ಪಷ್ಟತೆ ಇಲ್ಲ ಎಂದು ರಿಜೆಕ್ಟ್ ಆದದ್ದು! ಇಂದು ನಿನ್ನ ಅದೇ ಧ್ವನಿ ಕೋಟಿ ಬೆಲೆಗೆ ಇನ್ಶುರೆನ್ಸ್ ಆದದ್ದು ಗ್ರೇಟ್ ಅಲ್ವಾ? ಯಶಸ್ಸಿಗೆ ಒಂದು ಅದ್ಭುತ ಮಾದರಿ ನೀನು.

1969ರಲ್ಲಿ ತೆಗೆಸಿದ ಮೊದಲ ಫೋಟೊ ಶೂಟ್‌ ಭಾವಚಿತ್ರ

ಮತ್ತೆ ಟಿವಿಯಲ್ಲಿ ವಾರ್ತೆಯನ್ನು ಓದಲು ಹೋಗಿ ರಿಜೆಕ್ಟ್ ಆದದ್ದು! ನಿನ್ನ ಮುಖದಲ್ಲಿ ಭಾವನೆಗಳೇ ಇಲ್ಲ, ಅದು ಫೋಟೊಜೆನಿಕ್ ಅಲ್ಲ ಎಂದು ಟಿವಿಯ ಮಂದಿ ಅಪಮಾನ ಮಾಡಿದ್ದು. ಇಂದು ಅದೇ ಮುಖವನ್ನು ಹೊತ್ತುಕೊಂಡು ನೀನು ಹೇಗೋ ಸೂಪರ್ ಸ್ಟಾರ್ ಆದದ್ದು? ಅದು ಹೇಗೋ ಸಾಧ್ಯ ಆಯ್ತು ನಿನಗೆ?

ಹಾಯ್ ಬಿಗ್ ಬಿ ನಿನಗೆ ಇದು ನೆನಪಿದೆಯಾ?

‘ಸಾತ್ ಹಿಂದೂಸ್ಥಾನಿ’ ಯಿಂದ ಆರಂಭಿಸಿ ನಿನ್ನ ಮೊದಲ ಏಳು ಸಿನಿಮಾಗಳು ಫ್ಲಾಪ್ ಆದದ್ದು? ನಿನ್ನನ್ನು ರಾಜೇಶ್ ಖನ್ನಾ ಜೊತೆ ಹೋಲಿಸಿ ನಿನಗೆ ಡ್ಯಾನ್ಸ್ ಬರೋದಿಲ್ಲ, ರೋಮಾನ್ಸ್ ಮಾಡಲು ಬರೋದಿಲ್ಲ ಎಂದೆಲ್ಲ ಸಿನಿಮಾ ಮಂದಿ ಅಪಮಾನ ಮಾಡಿದ್ದು? ನಿನ್ನೊಳಗೆ ಹೆಪ್ಪುಗಟ್ಟಿದ ಅಷ್ಟೂ ಆಕ್ರೋಶವನ್ನು ‘ಜಂಝೀರ್’ ಸಿನಿಮಾದ ಮೂಲಕ ಹೊರಹಾಕಿದ್ದು! ಆಂಗ್ರಿ ಯಂಗ್ ಮ್ಯಾನ್ ಎಂದು ಕೀರ್ತಿ ಪಡೆದದ್ದು! ನಿನ್ನೊಳಗೆ ಅಷ್ಟೊಂದು ಬೆಂಕಿ ಇತ್ತು ಎಂದು ನಿನಗೆ ಗೊತ್ತಿತ್ತಾ ಅಮಿತ್?

ಝಂಝೀರ್‌ ಸಿನಿಮಾದಲ್ಲಿ

ನೀನು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಿ 50 ವರ್ಷ ಪೂರ್ತಿ ಆಯ್ತು. ಇವತ್ತಿಗೂ ನಿನ್ನ ಚರಿಷ್ಮಾ, ನಿನ್ನ ಟ್ಯಾಲೆಂಟ್, ನಿನ್ನ ಉತ್ಸಾಹ ಒಂದಿಷ್ಟೂ ಕುಗ್ಗಿಲ್ಲ ಕಣೋ. ಅದು ಹೇಗೋ?

ಹಾಯ್ ಚಾಂಪ್, ನಿನಗೆ ಇದು ನೆನಪಿದೆಯಾ?

ನಿನ್ನ ಶೋಲೆ, ನಿನ್ನ ದೀವಾರ್, ನಿನ್ನ ಬಾಗ್ ಬನ್, ನಿನ್ನ ಸತ್ತೆ ಪೆ ಸತ್ತಾ, ನಿನ್ನ ಮೋಹಬ್ಬತೆ, ನಿನ್ನ ಅಂಧಾ ಕಾನೂನ್, ನಿನ್ನ ನಮಕ್ ಹಲಾಲ್, ನಿನ್ನ ಸಿಲ್ ಸಿಲಾ, ನಿನ್ನ ಕಭೀ ಕಭೀ, ನಿನ್ನ ಡಾನ್, ನಿನ್ನ ಮುಕದ್ದರ್ ಕಾ ಸಿಕಂದರ್, ನಿನ್ನ ಸೂರ್ಯ ವಂಶ, ನಿನ್ನ ಶರಾಬೀ….ಆ ರೀತಿಯ ನಿನ್ನ ಪಾತ್ರಗಳನ್ನು ಬೇರೆ ಯಾರೂ ಮಾಡಲು ಸಾಧ್ಯವೇ ಇಲ್ಲ ಎಂದು ನಾನು ಕಾಲೇಜಿನಲ್ಲಿ ಬೆಟ್ ಕಟ್ಟುತ್ತಿದ್ದೆ! ಚೀನೀ ಕಮ್, ಪಾ, ಪಿಂಕ್, ಪಿಕೂ ಮೊದಲಾದ ಸಿನಿಮಾಗಳ ಪ್ರಯೋಗಾತ್ಮಕ ಪಾತ್ರಗಳಲ್ಲಿ ಕೂಡ ನೀನು ಅದ್ಭುತ ಕಣೋ!

ಅಮಿತಾಬ್‌ ಬಚ್ಚನ್‌ ಪಾ ಚಿತ್ರದಲ್ಲಿ

ಒಟ್ಟು 200 ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನೀನು ಮಿಂಚಿದ್ದು, ಭಾರತೀಯ ಸಿನಿಮಾ ರಂಗವನ್ನು ಬೆಳೆಸಿದ್ದನ್ನು ನಾವು ಹೇಗೋ ಮರೆಯೋದು? ನೀನು ಮಾಡುವ ಪ್ರತೀ ಒಂದು ಪಾತ್ರಕ್ಕೂ ನೀನು ಮಾಡುವ ತಯಾರಿ, ನಿನ್ನ ಸ್ಟ್ರಾಂಗ್ ಆದ ಕನ್ವಿನ್ಸ್ ಮಾಡುವ ಧ್ವನಿ, ಪಾತ್ರದಿಂದ ಪಾತ್ರಕ್ಕೆ ಬದಲಾಗುವ ನಿನ್ನ ಬಾಡಿ ಲಾಂಗ್ವೇಜ್, ಯಾವುದೇ ಪಾತ್ರವನ್ನು ಸಲೀಸಾಗಿ ನಿಭಾಯಿಸುವ ನಿನ್ನ ಪ್ರತಿಭೆ…ನಿನಗೆ ನೀನೇ ಸಾಟಿ ಅಮಿತ್. ಭಗವಂತ ನಿನ್ನನ್ನು ಕೇವಲ ಅಭಿನಯ ಮಾಡಲು ಈ ಭೂಮಿಗೆ ತಂದಿರಬೇಕು.

ಹಾಯ್ ಸೂಪರ್ ಮ್ಯಾನ್ , ನಿನಗೆ ಇದು ನೆನಪಿದೆಯಾ?

1983ರಲ್ಲಿ ಬೆಂಗಳೂರಿನಲ್ಲಿ ‘ಕೂಲಿ’ ಸಿನಿಮಾ ಶೂಟಿಂಗ್ ಹೊತ್ತಿನಲ್ಲಿ ಕಬ್ಬಿಣದ ಕುರ್ಚಿಯ ಮೇಲೆ ಬಿದ್ದು ಹೊಟ್ಟೆಯ ಒಳಗೆ ಬ್ಲೀಡಿಂಗ್ ಸ್ಟಾರ್ಟ್ ಆದದ್ದು? ನೀನು ತೀವ್ರ ಅಸ್ತಮಾದಿಂದ ಒದ್ದಾಡಿದ್ದು? ವೈದ್ಯರು ತಲೆಯ ಮೇಲೆ ಕೈ ಇಟ್ಟು ನಿರಾಸೆಯಿಂದ ಕುಳಿತಿದ್ದು, ನಿನಗಾಗಿ ದೇಶದಾದ್ಯಂತ ಜನರು ಪ್ರಾರ್ಥನೆ ಮಾಡಿದ್ದು, ನಿನ್ನ ಹೆಸರಲ್ಲಿ ಹೋಮಗಳನ್ನು ಮಾಡಿದ್ದು? ನಿನ್ನ ಇಚ್ಛಾ ಶಕ್ತಿಯು ನಿನ್ನನ್ನು ಗೆಲ್ಲಿಸಿದ್ದು, ಜನರ ಪ್ರಾರ್ಥನೆ ನಿನಗೆ ಮತ್ತೆ ಶಕ್ತಿ ತುಂಬಿದ್ದು, ನೀನು ಮತ್ತೆ ಬೌನ್ಸ್ ಬ್ಯಾಕ್ ಮಾಡಿದ್ದು ನೆನಪಿದೆಯಾ?

ಮಗ ಅಭಿಷೇಕ್‌, ಸೊಸೆ ಐಶ್ವರ್ಯ, ಮೊಮ್ಮಗಳು ಆರಾಧ್ಯ ಜತೆ ಅಮಿತಾಬ್‌-ಜಯಾ ಬಚ್ಚನ್‌

ಹಲೋ ಲೆಜೆಂಡ್, ನಿನಗೆ ಅದು ನೆನಪಿದೆಯಾ?

ಅದೇ ರೀತಿ ಅದೇ ದಶಕದಲ್ಲಿ ನಿನ್ನದೇ ಸಿನಿಮಾ ನಿರ್ಮಾಣದ ಕಂಪೆನಿ (ABCL) ಮಾಡಿ ದುಡ್ಡು ಕಳೆದುಕೊಂಡದ್ದು? ಬೆಂಗಳೂರಿನಲ್ಲಿ ಸೌಂದರ್ಯ ಸ್ಪರ್ಧೆ ಮಾಡಿ ಕೈ ಸುಟ್ಟು ಕೊಂಡದ್ದು? ನಿನ್ನ ಸ್ವಂತ ಮನೆ ‘ಆರಾಧನಾ’ ಮಾರಿ ಹೆಂಡತಿ ಮಕ್ಕಳ ಜೊತೆ ಬೀದಿಗೆ ಬಂದದ್ದು? ಗೆಳೆಯ ರಾಜೀವ್ ಗಾಂಧಿ ಅವರ ಒತ್ತಾಯಕ್ಕೆ ಕಟ್ಟುಬಿದ್ದು ಲೋಕ ಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆದ್ದದ್ದು ಮತ್ತು ರಾಜಕೀಯದಲ್ಲಿ ಹೆಸರು ಕೆಡಿಸಿಕೊಂಡದ್ದು…… ?

ಆಗ ನೀನು ಸರಣಿ ಸೋಲಿನಿಂದ ಡಿಪ್ರೆಸ್ ಆಗಿ ಕೌನ್ಸೆಲಿಂಗ್ ಮಾಡಿಸಿಕೊಳ್ಳಲು ನಿನ್ನ ಅಪ್ಪನ ಫ್ರೆಂಡ್ ಆದ ಧೀರೂಭಾಯ್ ಅಂಬಾನಿ ಬಳಿಗೆ ಹೋಗಿ ಅವರ ಸಹಾಯ ಕೇಳಿದ್ದು?
ಆಗ ಧೀರೂಬಾಯಿ ಅಂಬಾನಿ ನಗುತ್ತಾ, ‘ಅಮಿತಾಭ್, ನೀನು ಯಾವುದನ್ನು ಚೆನ್ನಾಗಿ ಮಾಡುತ್ತೀಯೋ (ಆಕ್ಟಿಂಗ್) ಅದನ್ನು ಮಾತ್ರ ಮಾಡು, ಅದು ಬಿಟ್ಟು ಬೇರೇನೂ ಮಾಡಬೇಡ’ ಎಂದದ್ದು?

ನಿನ್ನ ಬದುಕಿನಲ್ಲಿ ಬಂದ ಅಷ್ಟೆಲ್ಲ ಸಾಲು ಸಾಲು ಸೋಲುಗಳನ್ನು ಹ್ಯಾಗೋ ಸವಾಲುಗಳಾಗಿ ಗೆಲ್ಲುತ್ತಾ ಹೋದದ್ದು? ನೀನು ನಿಜವಾಗಿ ಗ್ರೇಟ್ ಅಮಿತ್.

ಹಲೋ ಐಕಾನ್ ಸ್ಟಾರ್, ನಿನಗೆ ನೆನಪಿದೆಯಾ?

ನಿನ್ನನ್ನು ಕೂರಿಸಿಕೊಂಡು ಒಂದು ಸಾಮಾನ್ಯ ಜ್ಞಾನದ ಒಂದು ಅದ್ಭುತ ರಿಯಾಲಿಟಿ ಶೋ ‘ಕೌನ್ ಬನೆಗಾ ಕರೋಡ್ ಪತಿ?’ ಸ್ಟಾರ್ಟ್ ಆದದ್ದು! ಓಹ್! ಅದೊಂದು ಅದ್ಭುತವಾದ ಅನುಭೂತಿ. ನೀನು ಪ್ರಶ್ನೆ ಕೇಳುವ ರೀತಿ, ನಿನ್ನ ಹಾಸ್ಯ ಪ್ರಜ್ಞೆ, ಎದುರು ಕೂರುವವರನ್ನು ಪ್ರೋತ್ಸಾಹಿಸುವ ರೀತಿ, ನಿನ್ನ ಶುದ್ಧವಾದ ನಗು…. ಎಲ್ಲವೂ ಮಾರ್ವೆಲಸ್ ಅಮಿತ್! ಅದೇ ರೀತಿಯ ಶೋ ಇನ್ನೂ ಹಲವರು ಮಾಡಿದರೂ ಅವರ್ಯಾರೂ ನಿನ್ನ ಮಟ್ಟಕ್ಕೆ ಬಂದಿಲ್ಲ ಅನ್ನೋದು ನಿನ್ನ ಪ್ರತಿಭೆಗೆ ಒಂದು ರುಜುವಾತು. ನೀನು ನಿಜವಾದ ಐಕಾನ್ ಅಮಿತ್.

‘ಕಂಪ್ಯೂಟರ್‌ಜೀ, ಲಾಕ್ ಕಿಯೆ ಜಾಯ್ ‘ ಎಂದು ಹೇಳುವ ನಿನ್ನ ಬೇಸ್ ವಾಯ್ಸ್ ಇಡೀ ಭಾರತದ ಡ್ರಾಯಿಂಗ್ ರೂಮನ್ನು ಅಲುಗಾಡಿಸಿದ್ದು ನಿಜವಾಗಿ ಒಂದು ಮಿರಾಕಲ್! ಅಮಿತ್, ನೀನು ಪ್ರತಿಭೆಯ ಪರ್ವತ ಕಣೋ!

ಹಲೋ ಲೆಜೆಂಡ್, ನಿನಗೆ ಇದು ನೆನಪಿದೆಯಾ?

ಜಾಗತಿಕ ಶ್ರೇಷ್ಠವಾದ ಸುದ್ದಿ ಮಾಧ್ಯಮ ಬಿಬಿಸಿ ನಿನ್ನನ್ನು ‘ಸ್ಟಾರ್ ಆಫ್ ದ ಮಿಲೇನಿಯಂ’ ಎಂಬ ಪ್ರಶಸ್ತಿ ಜೊತೆಗೆ ಗೌರವಿಸಿದ್ದು? ಅಮೆರಿಕಾದ ಪ್ರಮುಖ ಪತ್ರಿಕೆ ಟೈಮ್ಸ್ ನಿನ್ನನ್ನು ಬೆಳ್ಳಿ ಪರದೆಯ ಜಾದೂ ಎಂದು ಕರೆದದ್ದು….. ಇದರ ಹಿಂದೆ ನಿನ್ನ ಅಪಾರ ಪರಿಶ್ರಮ ಇದೆ. ಶ್ರದ್ಧೆ ಇದೆ. ಡೆಡಿಕೇಶನ್ ಇದೆ. ಸಿನಿಮಾ ರಂಗದ ಮಹಾನ್ ‘ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ ನಿನಗೆ ದೊರೆತದ್ದು, ಪದ್ಮ ಭೂಷಣ, ಪದ್ಮವಿಭೂಷಣ ಎಲ್ಲವೂ ನಿನಗೆ ದೊರೆತಾಗಿದೆ, ಭಾರತ ರತ್ನ ಒಂದು ಬಿಟ್ಟು! ಅದಕ್ಕೂ ನೀನು ಅರ್ಹತೆ ಹೊಂದಿದ್ದೀ. ಹಲವು ವಿದೇಶದ ಸಿನಿಮಾ ವೇದಿಕೆಗಳು ನಿನ್ನ ಸಿನಿಮಾಗಳನ್ನು ತೆರೆದು ತೋರಿಸಿ ಖುಷಿ ಪಟ್ಟದ್ದು, ನಿನ್ನ ಅಭಿಮಾನಿಗಳು ಜಗತ್ತಿನಾದ್ಯಂತ ನಿನ್ನನ್ನು ಆರಾಧನೆ ಮಾಡುವುದು…ಇದೆಲ್ಲ ನಿನ್ನ ಅಗಾಧ ಪ್ರತಿಭೆಗೆ ದೊರೆತ ಗೌರವ ಅಲ್ಲದೇ ಮತ್ತೇನು?

ಮಗಳು ನವ್ಯಾ ನಂದಾ ಕುಟುಂಬದ ಜತೆ

ಬಾಲ್ಯದಲ್ಲಿ ನೀನು ಹಲವು ಬಾರಿ ಅಪಮಾನ ಪಟ್ಟು ಸೋತು ಬಂದಾಗ ನಿನ್ನ ಅಮ್ಮ ತೇಜಿ ಬಚ್ಚನ್ ಹೇಳುತ್ತಿದ್ದ ಮಾತು ನಿನಗೆ ನೆನಪಿದೆಯಾ?: ‘ಅಮಿತ್, ನಿನ್ನ ಹತ್ತಿರ ಬೇಕಾದಷ್ಟು ಪವರ್ ಇದೆ. ಅದನ್ನು ಯೂಸ್ ಮಾಡ್ಕೋ. ಸೋತು ಬಂದ ನಿನ್ನ ಮುಖವನ್ನು ನನಗೆ ತೋರಿಸಬೇಡ. ನೀನು ಆರಂಭ ಮಾಡಿದ ಯುದ್ಧವನ್ನು ನೀನೇ ಗೆಲ್ಲಬೇಕು.’ ಎಂದು! ಅದನ್ನು ನೀನು ನಿಜ ಮಾಡಿ ತೋರಿಸಿದ್ದು ಗ್ರೇಟ್ ಅಲ್ವಾ? ‘ಅಪಮಾನ – ಅನುಮಾನ – ಸನ್ಮಾನ’ ಈ ಸಕ್ಸಸ್ ಮಂತ್ರಕ್ಕೆ ನೀನೇ ನನಗೆ ಒಂದು ಅನುಕರಣೀಯ ಮಾದರಿ.

ನಿಮ್ಮ ತಲೆಮಾರಿನ ಎಲ್ಲ ನಟರು ನಿವೃತ್ತಿ ಪಡೆದೋ, ಸೋತು ಹೋಗಿಯೋ ಸಿನಿಮಾ ರಂಗದಿಂದ ದೂರ ಆಗಿದ್ದಾರೆ. ಎಷ್ಟೋ ಜನರು ಈ ಜಗತ್ತನ್ನೆ ಬಿಟ್ಟು ಹೋಗಿದ್ದಾರೆ. ಹಾಗಿರುವಾಗ ನೀನು ಈಗಲೂ ಅದೇ ಉತ್ಸಾಹದಿಂದ, ಅದೇ ಪ್ರತಿಭೆಯಿಂದ ಬೆಳಗುವುದು ನಮಗೆ ಖಂಡಿತ ಸ್ಫೂರ್ತಿಯನ್ನು ನೀಡುತ್ತದೆ. ಅದು ಹೇಗೋ ಅಮಿತ್? ನಿನ್ನೆ ಮುಂದೆ ಬರಲಿರುವ ಗಣಪತ್ ಮತ್ತು ಕಲ್ಕಿ ಸಿನಿಮಾಗಳಿಗೆ ನಾವೆಲ್ಲ ಕಾದು ಕೂತಿದ್ದೇವೆ ಆಯ್ತಾ.

ತನ್ನ ಪಾಲಿನ ಶಕ್ತಿ ದೇವತೆ ಜಯಾ ಬಚ್ಚನ್‌ ಜತೆ ಅಮಿತಾಬ್‌

‘ಎಂಬತ್ತು ನೂರಾಗಲಿ’ ಅನ್ನೋದು ನಮ್ಮ ಪ್ರಾರ್ಥನೆ

ನಿನಗೆ ದೇವರು ಒಳ್ಳೆಯದನ್ನು ಮಾತ್ರ ಮಾಡಲಿ ಎಂಬ ದುವಾ ನಮ್ ಕಡೆಯಿಂದ.
ನಿನ್ನ ಬದುಕಿನ ಬಗ್ಗೆ ಹಲವಾರು ಪುಸ್ತಕಗಳು ಬಂದಿವೆ. ಅದರಲ್ಲಿ ನಿನ್ನ ಆತ್ಮಚರಿತ್ರೆಯ ಪುಸ್ತಕ – ‘ಅಮಿತಾಬ್ ಬಚ್ಚನ್, ದ ಲಿವಿಂಗ್ ಲೆಜೆಂಡ್’ ಎಷ್ಟು ಬಾರಿ ಓದಿದರೂ ಅದು ಹಳತು ಆಗುವುದೇ ಇಲ್ಲ !

ಇದನ್ನೂ ಓದಿ: ರಾಜ ಮಾರ್ಗ ಅಂಕಣ | ಅಪ್ಪ ಮಗನಾದ, ಮಗ ಅಪ್ಪನಾದ ಅಪರೂಪದ ಸಿನಿಮಾ ʻಪಾʼ: ಬಿಗ್‌ ಬಿ ಬದ್ಧತೆಯ ಸಾಕ್ಷ್ಯ ಚಿತ್ರ!

ಹಲೋ ಅಮಿತ್ – ಹ್ಯಾಪಿ ಬರ್ತ್ ಡೇ ಕಣೋ

ಇಂದು (ಅಕ್ಟೋಬರ್ 11) ನೆಟ್ ತುಂಬಾ ನಿನ್ನದೇ ಫೋಟೋಸ್! ನಮ್ಮೆಲ್ಲರ ಹೃದಯದ ತುಂಬಾ ನೀನೇ ಮತ್ತು ನೀನೇ! ನಿನ್ನ ಕುಟುಂಬದ ಸದಸ್ಯರನ್ನು ಹಗ್ ಮಾಡಿ ನೀನು ತೆಗೆದುಕೊಂಡ ಅಷ್ಟೂ ಫೋಟೊಗಳು ನಮ್ಮ ಖುಷಿಯನ್ನು ಹೆಚ್ಚು ಮಾಡಿವೆ. ನಿನ್ನ ಸ್ಫೂರ್ತಿ ದೇವತೆ ಜಯಾ ಬಚ್ಚನ್ ಮತ್ತು ನಿನ್ನ ಪ್ರೀತಿ ಚಿರಾಯು ಆಗಲಿ.
ಲವ್ ಯು ಆಲ್ವೇಸ್

ನಿನ್ನ ಉತ್ಕಟ ಅಭಿಮಾನಿ
ರಾಜೇಂದ್ರ ಭಟ್ ಕೆ.

Exit mobile version