Site icon Vistara News

Raja Marga Column: ಚುಟುಕು ಕ್ರಿಕೆಟಿನ ‘ಕಪ್ಪು ವಜ್ರ’ ನಿಕೋಲಸ್ ಪೂರನ್

Nicholas pooran

ಮೊಹಮದ್ ಶಮಿ (Mohammed Shami) ಎಂಬ ಅದ್ಭುತ ಕ್ರಿಕೆಟರ್ ಬಗ್ಗೆ ನಾನು ನಿನ್ನೆ (ನವೆಂಬರ್‌ 16, 2023) ಬರೆದ ಲೇಖನವನ್ನು ಓದಿ ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇವತ್ತು ಇನ್ನೊಬ್ಬ ಸ್ಟಾರ್ ಕ್ರಿಕೆಟರ್‌ನ ಹೋರಾಟದ ಬದುಕಿನ ಬಗ್ಗೆ ನಾನು ಬರೆಯಬೇಕು. ಆತ ಇಂದು ದೌರ್ಭಾಗ್ಯದ ಮೂಟೆಯೇ ಆಗಿರುವ ವೆಸ್ಟ್ ಇಂಡೀಸ್ ತಂಡದ (West indies team) ಸ್ಟಾರ್ ಬ್ಯಾಟರ್, ಪಾರ್ಟ್ ಟೈಮ್ ಕ್ಯಾಪ್ಟನ್, ಅನೂಹ್ಯ ಬೌಲರ್, ವಿಕೆಟ್ ಕೀಪರ್, ಅಕ್ರೋಬ್ಯಾಟಿಕ್ ಸ್ಕಿಲ್ ಇರುವ ಫೀಲ್ಡರ್…. ಹೀಗೆ ಎಲ್ಲವೂ! ಕಳೆದ ಹಲವಾರು ವರ್ಷಗಳಿಂದ ಐಪಿಎಲ್ ಕ್ರಿಕೆಟ್ ನೋಡುತ್ತಿರುವ ನೀವು ಆತನ ಅದ್ಭುತ ಪರ್ಫಾರ್ಮೆನ್ಸ್ ಖಂಡಿತವಾಗಿ ನೋಡಿರುತ್ತೀರಿ. (Raja Marga Column)

ನಿಕೋಲಸ್ ಪೂರನ್: ಚುಟುಕು ಕ್ರಿಕೆಟಿನ ಕಪ್ಪು ವಜ್ರ
(Nicholas pooran: The Black Diamond)

ತನ್ನ ಸಾಹಸಿಕ ಆಕ್ರೊಬ್ಯಾಟಿಕ್ ಫೀಲ್ಡಿಂಗ್ ಸಾಮರ್ಥ್ಯದ ಮೂಲಕ, ಬ್ಯಾಟಿಂಗ್‌ನಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಯ ಮೂಲಕ, ಅದ್ಭುತವಾದ ಹೀರೋಯಿಕ್ ಇನ್ನಿಂಗ್ಸ್‌ಗಳ ಮೂಲಕ ಆತನು ಜಗತ್ತಿನ ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದು ಖಂಡಿತವಾಗಿಯೂ ಸುಳ್ಳಲ್ಲ. ಆತನ ಫೀಲ್ಡಿಂಗ್‌ ಬಗ್ಗೆ ಸಚಿನ್ ಹೇಳಿದ ಮಾತುಗಳು ನನಗೆ ನೆನಪಿವೆ – ಇಂತಹ ಸಾಹಸವನ್ನು ನಾನು ಇದುವರೆಗೆ ಕ್ರಿಕೆಟ್ ಕಣದಲ್ಲಿ ನೋಡಿದ್ದೇ ಇಲ್ಲ!

ಇಂದು ದಿವಾಳಿತನದ ಅಂಚಿನಲ್ಲಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್‌ನ ಬಗ್ಗೆ ನಾನು ಏನು ಹೇಳಲಿ? ಒಂದು ಕಾಲದ ವಿಶ್ವ ಚಾಂಪಿಯನ್ ಟೀಮ್ ಈ ಬಾರಿ ವಿಶ್ವಕಪ್‌ಗೆ ಆಯ್ಕೆ ಆಗಿಲ್ಲ ಎನ್ನುವ ದುರಂತ ಕಣ್ಣ ಮುಂದೆ ಇದೆ. ಅಲ್ಲಿ ಪ್ರತಿಭೆಗಳಿಗೆ ಬೆಲೆಯೇ ಇಲ್ಲ. ಟೆಸ್ಟ್ ಪಂದ್ಯಗಳು ಇಲ್ಲವೇ ಇಲ್ಲ! ಇತ್ತೀಚಿನ ಯಾವ ಐಸಿಸಿ ಕೂಟದಲ್ಲಿ ಕೂಡ ಅವರ ಸಾಧನೆ ಇಲ್ಲ! ಅಲ್ಲಿ ಇರುವ ಸ್ಟಾರ್ ಆಟಗಾರರು ಬೇರೆ ದೇಶಗಳ ಲೀಗ್ ಪಂದ್ಯಾವಳಿಗಳನ್ನು ಹುಡುಕಿಕೊಂಡು ವಲಸೆ ಹೋಗುತ್ತಿದ್ದಾರೆ.

ಅವಕಾಶಗಳ ಹುಡುಕಾಟದಲ್ಲಿ ಮಹಾವಲಸೆ

ಇದರಿಂದಾಗಿ ತನ್ನ ಪ್ರತಿಭೆಗೆ ಬೆಂಬಲವು ದೊರೆಯದೆ ನಿಕೋಲಸ್ ಜಗತ್ತಿನ ಬೇರೆ ಬೇರೆ ದೇಶಗಳ ಚುಟುಕು ಕ್ರಿಕೆಟ್ ಲೀಗಗಳಲ್ಲಿ ಆಡಬೇಕಾದದ್ದು ನಿಜವಾಗಿಯು ದುರಂತ! ಆತ ನಿಜವಾಗಿಯೂ ತುಂಬಾನೇ ಪ್ರತಿಭಾವಂತ. ಟ್ರಿನಿಡಾಡ್ ಆತನ ಕರ್ಮಭೂಮಿ. ತನ್ನ ಬಾಲ್ಯದಿಂದಲೂ ಕ್ರಿಕೆಟ್ ಬಿಟ್ಟರೆ ಆತನಿಗೆ ಬೇರೆ ಜಗತ್ತು ಇಲ್ಲ. ಬ್ರಿಯಾನ್ ಲಾರಾ, ಕ್ರಿಸ್ ಗೇಲ್, ವಿವಿಯನ್ ರಿಚರ್ಡ್ಸ್ ಇವರ ಆಟವು ಅವನಿಗೆ ಪ್ರೇರಣೆ.

ಶಾಲೆಗೆ ಹೋಗುವುದನ್ನು ಮರೆತು ಹಗಲು ರಾತ್ರಿ ಎನ್ನದೆ ಕ್ರಿಕೆಟ್ ತರಬೇತಿಯಲ್ಲಿ ಮುಳುಗಿ ಬಿಡುತ್ತಿದ್ದ ನಿಕೋಲಸ್. ದಿನವೂ ಸಿಕ್ಕಾಪಟ್ಟೆ ಬೆವರು ಹರಿಸುತ್ತಿದ್ದ. ಲೆಫ್ಟ್ ಹ್ಯಾಂಡ್ ಬ್ಯಾಟ್ಸ್‌ಮ್ಯಾನ್ ಆಗಿದ್ದ ಆತ ರೈಟ್ ಹ್ಯಾಂಡ್ ಬೌಲರ್ ಕೂಡ ಆಗಿದ್ದ! ಆತನ ಆಕ್ರೊಬ್ಯಾಟಿಕ್ ಫೀಲ್ಡಿಂಗ್ ಅಂತೂ ಸೂಪರ್, ಅಮೇಜಿಂಗ್!

2013ರಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗಿನ ಮೂಲಕ ಕ್ರಿಕೆಟ್ ಜಗತ್ತಿಗೆ ಆತನ ಪ್ರವೇಶವು ಅದ್ಭುತ ರೀತಿಯಲ್ಲಿ ಆಗಿತ್ತು. ಮೊದಲ ಪಂದ್ಯದಲ್ಲಿಯೇ 24 ಎಸೆತಗಳಲ್ಲಿ 54 ರನ್ ಚಚ್ಚಿದ್ದ! ಆಗ ಅವನಿಗೆ ಕೇವಲ 16 ವರ್ಷ ಪ್ರಾಯ!

ಅಂಡರ್ 19 ವಿಶ್ವಕಪ್ ಮಿಂಚು

ಮುಂದೆ ಅಂಡರ್ 19 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ ಪರವಾಗಿ ಆಡಿ ಆರು ಪಂದ್ಯಗಳಲ್ಲಿ ಬರೋಬ್ಬರಿ 303 ರನ್ ಗುಡ್ಡೆ ಹಾಕಿದ್ದ ನಿಕೋಲಸ್! ಅದರ ಜೊತೆಗೆ ಆತ ವಿಕೆಟ್ ಕೀಪಿಂಗ್ ಕೂಡ ಮಾಡಿದ್ದ. ಆತನ ಸ್ಟ್ರೈಕ್ ರೇಟ್ 145ರ ಕೆಳಗೆ ಬಂದದ್ದೇ ಇಲ್ಲ! ಆಗಲೇ ಆತನ ಬದುಕಿನಲ್ಲಿ ಕರಾಳ ದಿನಗಳು ಬಂದವು.

ಆತನ ಬದುಕಿನ ಕರಾಳ ಅಧ್ಯಾಯ ಆರಂಭ

ಒಂದು ಸಂಜೆ ಕ್ರಿಕೆಟ್ ತರಬೇತು ಮುಗಿಸಿ ಕಾರ್ ಡ್ರೈವ್ ಮಾಡುತ್ತ ಮನೆ ಕಡೆ ಬರುವಾಗ ಭೀಕರವಾದ ಅಪಘಾತವು ನಡೆದುಹೋಯಿತು. ಎರಡೂ ಕಾಲುಗಳು ಹುಡಿ ಆದವು. ಬಲಗಾಲಿನ ಮೊಣಗಂಟು ಹುಡಿ ಆಗಿತ್ತು. ಕಾಲಿನ ಮತ್ತು ಕೈಗಳ ಬೆರಳುಗಳು ಜರ್ಜರಿತ ಆಗಿದ್ದವು. ಮತ್ತೆ ಪ್ರಜ್ಞೆಯು ಬಂದಾಗ ಎರಡೂ ಕಾಲುಗಳಿಗೆ ಬ್ಯಾಂಡೇಜು ಸುತ್ತಿ ಆತ ಆಸ್ಪತ್ರೆಯಲ್ಲಿ ಮಲಗಿದ್ದ! ಕಣ್ಣು ತೆರೆದು ಆತನು ವೈದ್ಯರಿಗೆ ಕೇಳಿದ ಮೊದಲ ಪ್ರಶ್ನೆ – ಡಾಕ್ಟರ್, ನಾನಿನ್ನು ಕ್ರಿಕೆಟ್ ಆಡಬಹುದಾ?

ವೈದ್ಯರು ಯಾವ ಭರವಸೆ ಕೂಡ ಕೊಡಲಿಲ್ಲ. ಆರು ತಿಂಗಳ ಕಾಲ ಆಸ್ಪತ್ರೆಯಲ್ಲಿ ನೋವು ನುಂಗುತ್ತಾ ಮಲಗಿದ್ದ! ಮತ್ತೆ ಆರು ತಿಂಗಳು ವೀಲ್ ಚೇರ್ ಮೇಲೆ ಉಸಿರು ಕಟ್ಟುವ ಪರಾವಲಂಬಿ ಬದುಕು! ಹಲವು ಶಸ್ತ್ರಚಿಕಿತ್ಸೆಗಳು ಮತ್ತು ಎಣೆಯಿಲ್ಲದ ನೋವು ನಿಕೋಲಸ್ ಎಂಬ ಅದ್ಭುತ ಹುಡುಗನ ಆತ್ಮವಿಶ್ವಾಸವನ್ನು ಕರಗಿಸಲಿಲ್ಲ ಎಂಬುದು ವಿಶ್ವ ಕ್ರಿಕೆಟಿನ ಅದೃಷ್ಟ ಎಂದೇ ಹೇಳಬಹುದು!

ಅಂಥ ನಿಕೋಲಸ್ ಪೂರನ್ ಮತ್ತೆ ಒಂದೇ ವರ್ಷದೊಳಗೆ ಕ್ರಿಕೆಟ್ ಜಗತ್ತಿಗೆ ಮರಳಿದ್ದ! ತನ್ನ ಆಟದ ಕಸುವನ್ನು ಮತ್ತು ಶಕ್ತಿಯನ್ನು ಹೆಚ್ಚಿಸಿಕೊಂಡಿದ್ದ. ಕೆರಿಬಿಯನ್ ಲೀಗ್‌ನಲ್ಲಿ ಎಂಟು ಪಂದ್ಯಗಳಲ್ಲಿ 217 ರನ್ ಗಳಿಸಿದ. ಅದೇ ವರ್ಷ ಪಾಕಿಸ್ತಾನ ತಂಡದೊಂದಿಗೆ ವೆಸ್ಟ್ ಇಂಡೀಸ್ T20 ಪಂದ್ಯದಲ್ಲಿ ಮುಖಾಮುಖಿ ಆದಾಗ ಬಿರುಸಿನ ಆಟವಾಡಿದ. ಎಲ್ಲವೂ ಮುಗಿದು ಸೆಟ್ಲ್ ಆದ ಅನ್ನುವಾಗಲೇ ಇನ್ನೊಂದು ದುರಂತ ನಡೆಯಿತು.

ಉಸಿರುಕಟ್ಟಿದ ಕ್ರಿಕೆಟ್ ನಿಷೇಧ

ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡಿನ ಒಂದು ತೀರ್ಪಿನ ಫಲವಾಗಿ ಆತ 10 ತಿಂಗಳ ಅವಧಿಯ ದೀರ್ಘ ನಿಷೇಧ ಎದುರಿಸಬೇಕಾಯಿತು. ಅದಕ್ಕೆ ಕಾರಣ ದೇಸೀ ಕ್ರಿಕೆಟ್ ಸರಣಿಯು ನಡೆಯುತ್ತಿದ್ದ ಹೊತ್ತಲ್ಲಿ ಅದನ್ನು ನಿರ್ಲಕ್ಷ್ಯ ಮಾಡಿ ಬಾಂಗ್ಲಾ ದೇಶದ ಪ್ರೀಮಿಯರ್ ಲೀಗ್ ಆಡಲು ಹೋದದ್ದು! ಮತ್ತೆ ಹತ್ತು ತಿಂಗಳು ಅವನ ಕ್ರಿಕೆಟ್ ಭವಿಷ್ಯಕ್ಕೆ ಮಂಕು ಕವಿಯಿತು! ಒಬ್ಬ ಸ್ಟಾರ್ ಆಟಗಾರನಿಗೆ ಅದು ಸೆರೆಮನೆಗೆ ಸಮನಾದ ಶಿಕ್ಷೆ. ಆದರೆ ಇದಕ್ಕೆಲ್ಲ ಸೊಪ್ಪು ಹಾಕುವ ಬಡಪೆಟ್ಟಿಗೆ ಅವನದ್ದು ಅಲ್ಲವೇ ಅಲ್ಲ!

ನಿಕೋಲಸ್ ಒಂಥರಾ ಉಡಾಫೆ ಕ್ರಿಕೆಟರ್!

ಅಂತಹ ನಿಕೋಲಸ್ 2017ರಿಂದ ನಿರಂತರವಾಗಿ ಭಾರತಕ್ಕೆ ಬಂದು ಐಪಿಎಲ್ ಕ್ರಿಕೆಟ್ ಆಡಿದ್ದಾನೆ. ಮುಂಬೈ ಇಂಡಿಯನ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಹೈದರಾಬಾದ್ ತಂಡಗಳ ಪರವಾಗಿ ಆತನ ಆಟವು ಅದ್ಭುತವಾಗಿಯೇ ಇತ್ತು. 2023ರಲ್ಲಿ ಲಕ್ನೋ ಸೂಪರ್ ಜಯಂಟ್ಸ್ ಆತನನ್ನು 16ಕೋಟಿ ಕೊಟ್ಟು ಖರೀದಿ ಮಾಡಿದಾಗ ಎಲ್ಲರ ಹುಬ್ಬುಗಳು ಮೇಲೇರಿದ್ದವು!

ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಾಹಲ್, ಬೂಮ್ರಾ, ನಟರಾಜನ್, ರಶೀದ್ ಖಾನ್ ಮೊದಲಾದ ಸ್ಟಾರ್ ಬೌಲರ್‌ಗಳು ಕೂಡ ಅವನ ಬ್ಯಾಟಿನಿಂದ ಸಿಕ್ಸರ್ ಹೊಡೆಸಿಕೊಂಡಿದ್ದಾರೆ! ಆತನನ್ನು ‘ಮರಿ ಕ್ರಿಸ್ ಗೇಲ್’ ಎಂದು ಈಗಾಗಲೇ ಕ್ರಿಕೆಟ್ ಅಭಿಮಾನಿಗಳು ಕರೆಯಲು ಆರಂಭಿಸಿದ್ದಾರೆ.

ಇದನ್ನೂ ಓದಿ : Raja Marga Column : ಸಣ್ಣ ಸಣ್ಣ ಕಾರಣಕ್ಕೆ ಸಾಯಲು ಹೊರಡುವವರು ಮೊಹಮ್ಮದ್‌ ಶಮಿ ಕತೆ ಕೇಳಬೇಕು!

ಐಪಿಎಲ್‌ನಲ್ಲಿ ಸಂಜು ಸ್ಯಾಮ್ಸನ್‌ ಹೊಡೆದ ಸಿಕ್ಸರ್‌ನ್ನು ಸಿಂಗಲ್‌ ರನ್‌ ಆಗಿ ಪರಿವರ್ತಿಸಿದ ಅದ್ಭುತ ಫೀಲ್ಡಿಂಗ್‌.

ಅವನ ಕಣ್ಣು ಮತ್ತು ಕೈಗಳ ಅದ್ಭುತವಾದ ಹೊಂದಾಣಿಕೆ, ಅಸಾಧಾರಣವಾದ ವೇಗ, ವಿಕೆಟ್‌ಗಳ ನಡುವಿನ ಚುರುಕಿನ ಓಟ, ಹೊಡೆತಗಳ ಆಯ್ಕೆ, ಚುರುಕಿನ ಪಾದಗಳ ಚಲನೆ, ಪರ್ಫೆಕ್ಟ್ ಟೈಮಿಂಗ್, ಬ್ಯಾಟಿನ ಬೀಸು ಮತ್ತು ಟೆಕ್ನಿಕ್ ಮತ್ತು ಆತ್ಮವಿಶ್ವಾಸಗಳು ಅವನನ್ನು ಮಹೋನ್ನತವಾದ ಕ್ರಿಕೆಟ್ ಸ್ಟಾರ್‌ಗಳ ಸಾಲಿನಲ್ಲಿ ತಂದು ನಿಲ್ಲಿಸಿವೆ. ಆತ ಬ್ಯಾಟಿಂಗ್ ಮಾಡುವಾಗ ಆತನ ಕಣ್ಣಲ್ಲಿ ಒಂದಿಷ್ಟು ಭಯ ಕೂಡ ಕಂಡು ಬರುವುದಿಲ್ಲ. ಸೆಹವಾಗ್ ಹಾಗೆ ಮೊದಲ ಬಾಲಿಗೆ ಸಿಕ್ಸರ್ ಎತ್ತುವ ತಾಕತ್ತು ಮತ್ತು ಧೈರ್ಯ ಆತನಿಗೆ ಇದೆ. ನಿಕೋಲಸ್ ಕ್ರೀಸಿನಲ್ಲಿ ಇದ್ದಷ್ಟೂ ಹೊತ್ತು ಅವನು ತಂಡವನ್ನು ಸೋಲಲು ಬಿಡುವುದಿಲ್ಲ ಎನ್ನುವ ನಂಬಿಕೆ ಇದೆ.

ಗೆಳತಿ ಜತೆ ನಿಕೋಲಸ್‌ ಪೂರನ್

ಒಂಥರಾ ಉಡಾಫೆ ಕ್ರಿಕೆಟರ್ ಆತ! ಅವನ ಪ್ರತಿಭೆಯ ಬಗ್ಗೆ ಎರಡು ಮಾತಿಲ್ಲ. ಆದರೆ ಕೆಲವು ಬಾರಿ ಅನಿಶ್ಚಿತತೆಯು ಆತನ ಪ್ರತಿಭೆಯನ್ನು ಮಸುಕು ಮಾಡಿದ್ದು ಉಂಟು. ಆತನ ಬದುಕಿನ ಹೋರಾಟವು ಅದಕ್ಕಿಂತ ರೋಮಾಂಚಕ ಎಂದು ಖಂಡಿತವಾಗಿ ಹೇಳಬಹುದು.

ಈ ಲೇಖನದ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version