2021ರ ಟೋಕಿಯೋ ಒಲಿಂಪಿಕ್ಸ್ (Tokio olympics 2021) ಭಾರತಕ್ಕೆ ನಿರೀಕ್ಷೆ ಮಾಡಿರುವಷ್ಟು ಪದಕಗಳನ್ನು ತಂದುಕೊಡದೆ ಮುಗಿದು ಹೋಗಿರಬಹುದು. ಭಾರತ ಗೆದ್ದದ್ದು ಒಂದು ಚಿನ್ನ, ಎರಡು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳನ್ನು. ಭಾರತಕ್ಕೆ ಸಿಕ್ಕಿದ್ದು 48ನೆಯ ಸ್ಥಾನ (India got 48th place). ಆದರೆ ಒಬ್ಬ ವ್ಯಕ್ತಿತ್ವ ವಿಕಸನದ ತರಬೇತುದಾರ ಆಗಿರುವ ನನಗೆ ಆ ಒಲಿಂಪಿಕ್ಸ್ ನೂರಾರು ಸ್ಫೂರ್ತಿದಾಯಕ ವ್ಯಕ್ತಿತ್ವಗಳನ್ನು (Motivational Personalities) ಹಾಗೂ ಯಶೋಗಾಥೆಗಳನ್ನು (Success story) ಪರಿಚಯ ಮಾಡಿಕೊಟ್ಟು ಸ್ಮರಣೀಯ ಆಯಿತು. ಆ ಪಟ್ಟಿಯಲ್ಲಿ ಅತ್ಯಂತ ಹೆಚ್ಚು ಸ್ಫೂರ್ತಿ ನೀಡಿದ್ದು ರಾಣಿ ರಾಂಪಾಲ್ (Rani Rampal). ಕಂಚಿನ ಪದಕವನ್ನು ಕೂದಲೆಳೆಯ ಅಂತರದಲ್ಲಿ ಮಿಸ್ ಮಾಡಿಕೊಂಡ ಭಾರತದ ಮಹಿಳಾ ಹಾಕಿ ತಂಡದ ಕ್ಯಾಪ್ಟನ್ (Captain of Indian hockey team)!
ಆಕೆಯ ಮನೆಯಲ್ಲಿ ಗಡಿಯಾರ ಕೂಡ ಇರಲಿಲ್ಲ!
ಆಕೆ ಹರ್ಯಾಣ ರಾಜ್ಯದ ಕುರುಕ್ಷೇತ್ರ ಜಿಲ್ಲೆಯ ಒಂದು ಸಣ್ಣ ಊರಿನವಳು. ಹದಿನೆಂಟು ದಿನ ಮಹಾಭಾರತದ ಯುದ್ಧ ನಡೆದ ಅದೇ ರಣಭೂಮಿಯಿಂದ ಮೇಲೆದ್ದು ಬಂದವಳು! ಆದ್ದರಿಂದ ಹೋರಾಟ ಅವಳ ರಕ್ತದಲ್ಲಿ ಬಂದಿರಬೇಕು!
ಅವಳಿಗೆ ಬಾಲ್ಯದಲ್ಲಿ ಜೊತೆಯಾಗಿ ಇದ್ದದ್ದು ತೀವ್ರವಾದ ಬಡತನ ಮತ್ತು ಅಪ್ಪ, ಅಮ್ಮನ ಪ್ರೀತಿ ಮಾತ್ರ! ಆಕೆ ಬೆಳಗ್ಗೆ ಬೇಗ ಎದ್ದು ನಾಲ್ಕು ಗಂಟೆಗೆ ಅಕಾಡೆಮಿ ತಲುಪಿ ಹಾಕಿ ಅಭ್ಯಾಸವನ್ನು ಆರಂಭ ಮಾಡಬೇಕಾಗಿತ್ತು. ಆದ್ರೆ ಅವಳ ಮನೆಯಲ್ಲಿ ಸಮಯವನ್ನು ತೋರಿಸುವ ಒಂದೇ ಒಂದು ಗಡಿಯಾರ ಇರಲಿಲ್ಲ!
ಮಗಳನ್ನು ಬೇಗ ಎಬ್ಬಿಸಬೇಕು ಎಂಬ ತೀವ್ರ ಕಾಳಜಿಯಿಂದ ಅವಳ ಪ್ರೀತಿಯ ಅಮ್ಮ ಇಡೀ ರಾತ್ರಿ ಮಲಗುತ್ತಲೇ ಇರಲಿಲ್ಲ. ರಾತ್ರಿಯ ಆಕಾಶದಲ್ಲಿ ಚಂದ್ರ ಅಥವಾ ನಕ್ಷತ್ರಗಳ ಸ್ಥಾನವನ್ನು ಅಂದಾಜು ಮಾಡಿ ಸಮಯವನ್ನು ಲೆಕ್ಕ ಮಾಡುತ್ತಿದ್ದರು! ಅಮ್ಮ ಅವಳನ್ನು ಬೇಗ ಎಬ್ಬಿಸಿ ಟಿಫಿನ್ ಕಟ್ಟಿಕೊಟ್ಟು ಹಾಕಿ ಆಡಲು ಕಳುಹಿಸುತ್ತಿದ್ದರು! ಅಂತಹ ಹುಡುಗಿಯು ಜಿದ್ದಿಗೆ ಬಿದ್ದವಳ ಹಾಗೆ ಹಾಕಿ ಆಡುತ್ತಿದ್ದಳು.
ಮುರಿದ ಹಾಕ್ಕಿ ಸ್ಟಿಕ್ ಎತ್ತಿಕೊಂಡು ಆಡಲು ಆರಂಭ!
ಅವಳಿಗೆ ಹೊಸ ಹಾಕಿ ಸ್ಟಿಕನ್ನು ಕೊಡಿಸಲು ಅವಳ ಅಪ್ಪನ ಹತ್ತಿರ ದುಡ್ಡು ಇರಲಿಲ್ಲ. ಅಪ್ಪ ಮೈದಾನದ ಮೂಲೆಯಲ್ಲಿ ಯಾರೋ ಎಸೆದಿದ್ದ ಅರ್ಧ ಮುರಿದಿದ್ದ ಹಾಕಿ ಸ್ಟಿಕ್ ತಂದು ಮಗಳ ಕೈಯ್ಯಲ್ಲಿಟ್ಟು ‘ಇದರಿಂದ ಆಡು ಮಗಳೇ’ ಎಂದು ಹೇಳುತ್ತಿದ್ದರು! ಆದರೆ ಆಕೆ ತನ್ನ ಬಾಲ್ಯದಲ್ಲಿ ಸೌಲಭ್ಯಗಳ ಕೊರತೆಗಳ ಬಗ್ಗೆ ಗೊಣಗಿದ್ದು ಇಲ್ಲವೆ ಇಲ್ಲ!
ಅವಳ ಅಪ್ಪ ಗಾಡಿಯನ್ನು ಎಳೆದು ಪಡೆಯುತ್ತಿದ್ದ ದಿನದ ಸಂಪಾದನೆ ಎಂದರೆ ಹೆಚ್ಚು ಕಡಿಮೆ ಎಂಬತ್ತು ರೂಪಾಯಿ! ತಾಯಿ ಹತ್ತಾರು ಮನೆಗಳಲ್ಲಿ ಮುಸುರೆ ತಿಕ್ಕಿ ಸಂಪಾದನೆ ಮಾಡಿದ ದುಡ್ಡು ಕುಟುಂಬದ ಒಂದು ಹೊತ್ತಿನ ಊಟಕ್ಕೂ ಸಾಕಾಗುತ್ತಿರಲಿಲ್ಲ.
ಮನೆಯ ಆರ್ಥಿಕ ಸಮಸ್ಯೆಯನ್ನು ನೀಗಲು ಆಕೆ ಆರಿಸಿದ್ದು ಆಟವನ್ನು!
ಆಕೆಯ ಇಬ್ಬರು ಅಣ್ಣಂದಿರು ಸರಕಾರಿ ಶಾಲೆಗಳಿಗೆ ಹೋಗಿ ಕಲಿಯುತ್ತಾ ಇದ್ದರು. ಆದರೆ ರಾಣಿಗೆ ಬಡತನದ ಕಾರಣಕ್ಕೆ ಶಾಲೆ ದೂರವಾಯಿತು. ಪ್ರೈಮರಿಯ ಹಂತ ದಾಟುವುದು ಕೂಡ ಕಷ್ಟ ಆಯ್ತು. ಆರು ವರ್ಷದ ಹುಡುಗಿ ಮನೆಯ ಸಮಸ್ಯೆ ನೀಗಿಸಲು ಕನಸು ಕಟ್ಟಿ ಆರಿಸಿಕೊಂಡದ್ದು ಹಾಕಿ ಆಟವನ್ನು!
ಕೈಯ್ಯಲ್ಲಿ ಆರ್ಧ ಮುರಿದ ಹಾಕಿ ಸ್ಟಿಕನ್ನು ಹಿಡಿದು ಈ ಆರು ವರ್ಷದ ಸಣಕಲು ಹುಡುಗಿ ಹಾಕಿ ಕೋಚ್ ಬಲದೇವ್ ಸಿಂಗ್ ಮುಂದೆ ನಿಂತಿದ್ದಳು. ಗಟ್ಟಿಯಾದ ಕನಸು ಮತ್ತು ಆತ್ಮವಿಶ್ವಾಸ ಮಾತ್ರ ಆಕೆಯ ಜೊತೆಗೆ ಇದ್ದವು.
ಕಾಲಿಗೆ ಶೂ ಇಲ್ಲದೆ ಹಾಕಿ ಆಡುತ್ತಿದ್ದ ಈ ದಿಟ್ಟ ಹುಡುಗಿಯು ತನ್ನ ಚೂಡಿದಾರದ ಶಾಲನ್ನು ಹೊಟ್ಟೆಗೆ ಬಿಗಿಯಾಗಿ ಕಟ್ಟಿ ಓಡುತ್ತಿದ್ದಳು. ಹದಿಹರೆಯದಲ್ಲಿ ಉಕ್ಕಿ ಬರುತ್ತಿದ್ದ ಹಸಿವೆ ತಡೆದುಕೊಳ್ಳಲು ಆ ಚೂಡಿದಾರದ ಶಾಲು ಅವಳಿಗೆ ಸಹಾಯ ಮಾಡುತ್ತಿತ್ತು!
ಐನೂರು ರೂಪಾಯಿ ಆಕೆಯ ಮೊದಲ ಸಂಪಾದನೆ!
ಮೊದಲ ಬಾರಿಗೆ ಹಾಕಿಯ ಟೂರ್ನಮೆಂಟ್ ಒಂದರಲ್ಲಿ ಐನೂರು ರೂಪಾಯಿ ಬಹುಮಾನ ಗೆದ್ದು ಖುಷಿಯಿಂದ ದುಡ್ಡನ್ನು ಅಪ್ಪನ ಕೈಯ್ಯಲ್ಲಿ ತಂದು ಕೊಟ್ಟು ಮಗಳು ಹೇಳಿದ್ದಳು – ಅಪ್ಪ, ನಿಮ್ಮನ್ನೆಲ್ಲ ಮುಂದೆ ದೊಡ್ಡ ಮನೆಯಲ್ಲಿ ಇಟ್ಟು ಸಾಕ್ತೀನಪ್ಪ!
ಅಪ್ಪ ಅಮ್ಮನ ಕಣ್ಣಲ್ಲಿ ಅವತ್ತು ಕಣ್ಣೀರು ಧಾರೆ ಧಾರೆಯಾಗಿ ಸುರಿದಿತ್ತು.
ಮುಂದೆ ಪ್ರಾಯಕ್ಕೆ ಬಂದ ಹುಡುಗಿಯು ಹೀಗೆಲ್ಲ ಗಿಡ್ಡ ಸ್ಕರ್ಟನ್ನು ಹಾಕಿಕೊಂಡು ಹಾಕಿ ಮೈದಾನದ ಉದ್ದಗಲದಲ್ಲಿ ಓಡಾಡುವಾಗ ಮತ್ತೆ ಸಂಬಂಧಿಕರ, ನೆರೆಮನೆಯವರ ಕಿರುಕುಳವು ಆರಂಭ ಆಯಿತು.
ಅಪ್ಪ ರಾಂಪಾಲ್ ಕಿವಿ ತೂತಾಗುವಷ್ಟು ರಾಶಿ ದೂರುಗಳು ಬಂದವು. ‘ಹೀಗೆಲ್ಲ ಮರ್ಯಾದೆ ಬಿಟ್ಟು ಆಡಿದರೆ ಮುಂದೆ ಯಾರು ನಿಮ್ಮ ಮಗಳನ್ನು ಮದುವೆ ಆಗ್ತಾರೆ? ಮಗಳು ಹೇಳಿದ ಹಾಗೆ ಕುಣಿಯಬೇಡ’ ಇತ್ಯಾದಿ ಮಾತುಗಳು!
ಆದರೆ ಮಗಳ ಪ್ರಚಂಡ ಹಟದ ಮುಂದೆ ಅಪ್ಪನಿಗೆ ಮಾತೇ ಬರುತ್ತಿರಲಿಲ್ಲ. ಮನೆಗೆ ಬಂದು ಮದುವೆಯ ವಿಷಯವನ್ನು ಮಗಳ ಮುಂದೆ ಪ್ರಸ್ತಾವ ಮಾಡಿದರೆ ಮಗಳು ಉರಿದು ಬೀಳ್ತಾ ಇದ್ದಳು!
ಮಗಳ ಹಠ ಗೆದ್ದಿತು! ಮದುವೆ ಪ್ರಸ್ತಾವ ಮುರಿದು ಬಿತ್ತು!
ಆದರೂ ಒಮ್ಮೆ 14 ವರ್ಷದ ಹುಡುಗಿಗೆ ಒಂದು ಒಳ್ಳೆಯ ಮದುವೆಯ ಪ್ರಸ್ತಾಪವನ್ನು ತೆಗೆದುಕೊಂಡು ಅಪ್ಪ ಮನೆಗೆ ಬಂದಿದ್ದರು. ಮಗಳು ರಾಣಿ ಅಪ್ಪನ ಕೈ ಹಿಡಿದು ನಿಧಾನಕ್ಕೆ ಕುರ್ಚಿಯಲ್ಲಿ ಕೂರಿಸಿ ಕಣ್ಣಲ್ಲಿ ಕಣ್ಣಿಟ್ಟು ‘ಅಪ್ಪಾ. ನಾನು ನಿಮಗೆ ಭಾರ ಆಗಿದ್ದೇನಾ? ಯಾಕೆ ಅವಸರ ಮಾಡ್ತೀರಿ? ಮುಂದಿನ ವಾರ ರಷ್ಯಾದಲ್ಲಿ ನಡೆಯುವ ಚಾಂಪಿಯನ್ ಚಾಲೆಂಜರ್ ಟೂರ್ನಮೆಂಟಿಗೆ ನಾನು ಭಾರತದಿಂದ ಆಯ್ಕೆ ಆಗಿದ್ದೇನೆ. ಒಂದೊಮ್ಮೆ ಸೋತು ಹಿಂದೆ ಬಂದರೆ ನೀವು ತೋರಿಸಿದ ಹುಡುಗನನ್ನು ಮದುವೆ ಆಗುವೆ!’ ಎಂದಳು. ಅಪ್ಪ ಹೂಂ ಅಂದರು. ಆದರೆ ಮಗಳು ರಾಣಿ ಸೋಲಲು ಹುಟ್ಟಿದವಳೇ ಅಲ್ಲ! ಅಲ್ಲಿಗೆ ಮದುವೆ ಪ್ರಸ್ತಾವ ಮುರಿದು ಬಿತ್ತು!
ಮಗಳು ರಷ್ಯಾದಲ್ಲಿ ಜಯಭೇರಿ ಬಾರಿಸಿ ಮನೆಗೆ ಹಿಂದೆ ಬಂದಾಗ ಅಪ್ಪ ಮಾತು ಮರೆತರು! ಅಲ್ಲಿಗೆ ಮದುವೆಯ ಪ್ರಪೋಸಲ್ ಮರೆತು ಹೋಯಿತು!
ಮೊದಲ ಬಾರಿಗೆ 2010ರ ಹಾಕಿ ವಿಶ್ವಕಪ್ ಕೂಟದಲ್ಲಿ ಆಕೆ ಭಾಗವಹಿಸಿದಾಗ ಆಕೆಗೆ ಕೇವಲ 15 ವರ್ಷ! ಅಲ್ಲಿ ಏಳು ಗೋಲು ಬಾರಿಸಿದ ದಿಟ್ಟ ಹುಡುಗಿ ರಾಣಿ.
ಅಂತಹ ರಾಣಿ ರಾಂಪಾಲ್‌ಗೆ ಈಗ 28 ವರ್ಷ ತುಂಬಿದೆ. ಆಕೆ ಹಾಕಿ ಕ್ರೀಡಾಂಗಣದಲ್ಲಿ ಭಾರತದ ಬೆಸ್ಟ್ ಸ್ಟ್ರೈಕರ್. ಗೋಲು ಬಾರಿಸುವ ಒಂದು ಸಣ್ಣದಾದ ಅವಕಾಶ ಕೂಡ ಆಕೆ ಹಾಳು ಮಾಡುವುದೇ ಇಲ್ಲ! ಎರಡು ಹಾಕಿಯ ವಿಶ್ವಕಪ್, ಎರಡು ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಭಾರತದ ಹಾಕಿ ತಂಡದ ನಾಯಕಿ ಆಗಿ ಮುನ್ನಡೆಸಿದ ಅನುಭವವು ಆಕೆಗೆ ಇದೆ.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಮೊಬೈಲ್ ಮಾಯಾ ಜಾಲದಿಂದ ನಮ್ಮ ಮಕ್ಕಳನ್ನು ರಕ್ಷಿಸುವುದು ಹೇಗೆ?
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಆಕೆ ಭಾರತೀಯ ತಂಡದ ನಾಯಕಿ
ಆದರೆ ಆಕೆಯ ಟೋಕಿಯೋ ಒಲಿಂಪಿಕ್ಸ್ ಹಾಕಿ ತಂಡದಲ್ಲಿ ಇದ್ದವರೆಲ್ಲರೂ ಸಮಸ್ಯೆಗಳ ಮೂಟೆಯನ್ನು ತಲೆಯ ಮೇಲೆ ಹೊತ್ತುಕೊಂಡು ಆಟ ಆಡಲು ಬಂದವರು. ವಂದನಾ ಕಟಾರಿಯ, ನಿಶಾ ವಾರ್ಸಿಯ, ನೇಹಾ ಗೋಯೆಲ್, ನಿಕ್ಕಿ ಪ್ರಧಾನ್ ಇವರೆಲ್ಲರೂ ತುಂಬ ಕಷ್ಟಗಳ ಮಧ್ಯೆ ಬೆಳೆದವರು. ತೀವ್ರವಾದ ಕೋರೋನಾ ಕಾರಣಕ್ಕೆ ಕೂಟದ ದಿನಾಂಕ ಒಂದು ವರ್ಷ ಮುಂದೆ ಹೋಗಿತ್ತು. ಸಾಲು ಸಾಲು ಸವಾಲಿನ ಪಂದ್ಯಗಳನ್ನು ಭಾರತದ ತಂಡವು ಆಡಬೇಕಾಯಿತು. ಆ ತಂಡದ ಸದಸ್ಯರು ಸಣ್ಣ ಸೋಲುಗಳಿಗೆ ಡಿಪ್ರೆಸ್ ಆಗ್ತಾ ಇದ್ದರು. ಆಗ ಇಡೀ ತಂಡದ ಹಿರಿಯಕ್ಕನಾಗಿ ಅವರಿಗೆಲ್ಲರಿಗೂ ಧೈರ್ಯ ತುಂಬಿಸಿ, ತನ್ನ ಆತ್ಮವಿಶ್ವಾಸವನ್ನು ಕೂಡ ಕಳೆದುಕೊಳ್ಳದೆ ಆಕೆ ಆಡಿದ ರೀತಿ ಇದೆಯಲ್ಲಾ ಅದು ನಿಜಕ್ಕೂ ಮಾರ್ವೆಲಸ್!
ಕಂಚಿನ ಪದಕದ ಪಂದ್ಯದಲ್ಲಿ ತಂಡ ಸೋತಾಗ ಇಡೀ ತಂಡ ಕಣ್ಣೀರ ಕೋಡಿ ಹರಿಸಿತು. ಆಗ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಫೋನ್ ಮಾಡಿ ಸಾಂತ್ವನ ಹೇಳಿದಾಗ ಕಣ್ಣೀರು ಒರೆಸಿಕೊಂಡು ರಾಣಿ ರಾಂಪಾಲ್ ಹೇಳಿದ ಮಾತು ಇನ್ನೂ ಕಿವಿಯಲ್ಲಿ ಇದೆ.
“ಮೋದಿಜಿ, ಈ ಬಾರಿ ನಾವು ಸೋತಿದ್ದೇವೆ. ಆದರೆ ಮುಂದೆ ಬೂದಿಯಿಂದ ಎದ್ದು ಬರುತ್ತೇವೆ. ಮುಂದಿನ ಒಲಿಂಪಿಕ್ಸ್ ಕೂಟದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ!”
ಆಕೆಗೆ ಈಗಾಗಲೆ ಅರ್ಜುನ ಪ್ರಶಸ್ತಿ, ಪದ್ಮಶ್ರೀ, ಖೇಲ್ ರತ್ನ ಪ್ರಶಸ್ತಿ ಎಲ್ಲವೂ ದೊರೆತಾಗಿದೆ. ರಾಯ್ ಬರೇಲಿಯಲ್ಲಿ ಒಂದು ಹಾಕಿ ಸ್ಟೇಡಿಯಂಗೆ ಆಕೆಯ ಹೆಸರು ಇಡಲಾಗಿದೆ. ಈ ಗೌರವ ಪಡೆದ ಭಾರತದ ಮೊಟ್ಟಮೊದಲ ಮಹಿಳಾ ಹಾಕಿ ಆಟಗಾರ್ತಿ ಆಕೆ.