21 ವರ್ಷಗಳಿಂದ ಉಸಿರುಗಟ್ಟಿಸುವ ವೀಲ್ ಚೇರ್ ಮೇಲಿನ ಪರಾವಲಂಬನೆಯ ಬದುಕು! ಎದೆಯ ಕೆಳಗಿನ ದೇಹದ ಭಾಗ ಪೂರ್ತಿಯಾಗಿ ಜೀವರಹಿತ! ಮಲ, ಮೂತ್ರಗಳ ವಿಸರ್ಜನೆಯ ಮೇಲೆ ನಿಯಂತ್ರಣವೂ ಇಲ್ಲ! ಮನೆಯಲ್ಲಿ ಇರುವ ಒಬ್ಬಳು ಮಗಳು ಅಪಘಾತಕ್ಕೆ ಒಳಗಾಗಿ ದೇಹದ ಎಡಭಾಗ ಪೂರ್ತಿ ವಿಕಲತೆಯಿಂದ ಹಾಸಿಗೆಯಲ್ಲಿ ಮಲಗಿದ್ದಾಳೆ! (Raja Marga Column). ಇಷ್ಟೆಲ್ಲಾ ಕ್ಲಿಷ್ಟ ಸಮಸ್ಯೆಗಳ ನಡುವೆ ಇರುವ ಒಬ್ಬಳು ಹೆಣ್ಣು ಮಗಳು ವಿಶ್ವಮಟ್ಟದ ಪಾರಾ ಒಲಿಂಪಿಕ್ಸ್ (world Para Olympics) ಕೂಟದಲ್ಲಿ ಒಂದು ಪದಕವನ್ನು ಗೆಲ್ಲುವ ಕನಸನ್ನು ಕಾಣುವುದು ಸಾಧ್ಯವೇ? ಅದರ ಬಗ್ಗೆ ಯೋಚನೆ ಕೂಡ ಮಾಡಲು ಸಾಧ್ಯವೇ?
ಆದರೆ ಭಾರತದ ಅತಿ ಶ್ರೇಷ್ಠ ಪಾರಾ ಅಥ್ಲೀಟ್ ದೀಪಾ ಮಲಿಕ್ (Deepa Malik) ಅದನ್ನು ದಿಟ್ಟ ಹೋರಾಟದ ಮೂಲಕ ಸಾಧಿಸಿ ತೋರಿಸಿದ್ದಾರೆ. ಆಕೆಯ ಬದುಕು, ಛಲ ಮತ್ತು ಅನನ್ಯ ಹೋರಾಟ ನಿಜವಾಗಿಯೂ ಗ್ರೇಟ್!
ದೀಪಾ ಹುಟ್ಟು ಹೋರಾಟಗಾರ್ತಿ!
ದೀಪಾ ಹುಟ್ಟಿದ್ದು ಹರಿಯಾಣದಲ್ಲಿ 1970ರ ಸೆಪ್ಟೆಂಬರ್ 30ರಂದು. ತಂದೆ, ಅಣ್ಣ ಎಲ್ಲರೂ ಸೈನಿಕರು. ಕೈ ಹಿಡಿದ ಪತಿ ಬಿಕ್ರಂ ಮಲಿಕ್ ಕಾರ್ಗಿಲ್ ಯೋಧರು. ಬಾಲ್ಯದಿಂದ ಕ್ರೀಡೆ ಮತ್ತು ಬೈಕ್ ಸವಾರಿ ಅವರ ಕ್ರೇಜ್. ಯಾವ ಸಾಹಸವನ್ನು ಮಾಡಲು ಕೂಡ ಹಿಂಜರಿಯುವ ಹುಡುಗಿಯೇ ಅಲ್ಲ. ಮದುವೆಯ ನಂತರ ಬಹಳ ಪ್ರೀತಿ ಮಾಡುವ ಗಂಡನ ಪೂರ್ಣ ಪ್ರಮಾಣದ ಬೆಂಬಲ ಅವರ ಸಾಹಸಗಳಿಗೆ ದೊರೆತಿತ್ತು. ಆದರೆ ಅವರ ಬದುಕಿನಲ್ಲಿ ಎರಡು ಅಪಘಾತಗಳು ನಡೆದು ಹೋದವು. ಅವುಗಳು ಅವರ ಬದುಕಿನ ಕರಾಳ ಅಧ್ಯಾಯಗಳು!
ಮಗಳು ಬೈಕ್ ಅಪಘಾತದಲ್ಲಿ ಪಾರಾಲೈಸ್ ಆದರು
ಮೊದಲ ಆಘಾತ ನಡೆದದ್ದು ಅವರ ಪುಟ್ಟ ಮಗಳು ದೇವಿಕಾ ಬೈಕ್ ಅಪಘಾತಕ್ಕೆ ಒಳಗಾದಾಗ. ಮಗಳ ತಲೆಗೆ ಪೆಟ್ಟಾಗಿತ್ತು. ದೇಹದ ಎಡಭಾಗವು ಪೂರ್ತಿಯಾಗಿ ಪಾರಾಲೈಸ್ ಆಗಿತ್ತು. ಅದಕ್ಕೆ ವೈದ್ಯಕೀಯದ ಭಾಷೆಯಲ್ಲಿ ‘ಹೆಮಿ ಪ್ಲೆಜಿಯಾ ‘ಎಂದು ಹೆಸರು. ಅದರಿಂದಾಗಿ ದೀಪಾ ಮಲ್ಲಿಕ್ ತನ್ನ ಸಾಹಸದ ಪ್ಯಾಶನ್‌ಗಳನ್ನು ಮರೆತು ಮಗಳ ಆರೈಕೆ ಮತ್ತು ಶುಶ್ರೂಷೆಯಲ್ಲಿ ಮುಳುಗಿಬಿಟ್ಟರು.
ದೀಪಾ ಬದುಕಿನಲ್ಲಿ ಎರಡನೆಯ ಆಘಾತ ನಡೆದೇ ಬಿಟ್ಟಿತು!
ಮುಂದೆ 1999ರ ಕಾರ್ಗಿಲ್ ಯುದ್ದವು ಆರಂಭ ಆದಾಗ ಪತಿ ಬಿಕ್ರಂ ಮಲಿಕ್ ಭಾರತೀಯ ಸೇನೆಯ ಯೋಧನಾಗಿ ರಣಭೂಮಿಯಲ್ಲಿ ಇದ್ದರು. ಪತ್ನಿಗೆ ಅವರ ಸಂಪರ್ಕವು ಸಾಧ್ಯವೇ ಇರಲಿಲ್ಲ. ಅದೇ ಹೊತ್ತಿಗೆ ದೀಪಾ ಬದುಕಿನಲ್ಲಿ ಎರಡನೇ ಬಿರುಗಾಳಿ ಬೀಸಿತು. ಸುಮಾರು ದಿನಗಳಿಂದ ಅವರ ಬೆನ್ನು ಮೂಳೆಯ ನೋವು ಕಾಡುತ್ತಿತ್ತು. ಪರೀಕ್ಷೆ ಮಾಡಲು ಹೋದಾಗ ವೈದ್ಯರು ಹೇಳಿದ್ದಿಷ್ಟು – ನಿಮ್ಮ ಬೆನ್ನು ಮೂಳೆಯಲ್ಲಿ ಒಂದು ಅಪಾಯಕಾರಿ ಗಡ್ಡೆ ಬೆಳೆದಿದೆ. ಆಪರೇಷನ್ ಮಾಡದೆ ಹಾಗೆ ಬಿಟ್ಟರೆ ಸಾವು ಖಂಡಿತ. ಆಪರೇಷನ್ ಮಾಡಿದರೆ ನಿಮ್ಮ ದೇಹದ ಒಂದು ಭಾಗ ಪಾರಾಲೈಸ್ ಆಗುವುದು ಖಂಡಿತ! ಆಯ್ಕೆ ನಿಮ್ಮದು!
ಗಂಡ ಯುದ್ಧಭೂಮಿಯಲ್ಲಿ ಇದ್ದ ಕಾರಣ ಅವರ ಅಭಿಪ್ರಾಯವನ್ನು ಪಡೆಯುವುದು ಸಾಧ್ಯವೇ ಇರಲಿಲ್ಲ. ದೀಪಾ ಧೈರ್ಯವಾಗಿ ಆಪರೇಶನ್ ಮಾಡಿಸಿಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡರು. ಒಂದು ವಾರ ಬಿಟ್ಟು ಆಸ್ಪತ್ರೆಗೆ ಬರುವುದಾಗಿ ತಿಳಿಸಿದರು. ಅದಕ್ಕೆ ಅವರು ಕೊಟ್ಟ ಕಾರಣ ಅದ್ಭುತವಾಗಿ ಇತ್ತು – ಒಂದು ವಾರ ನಾನು ನನ್ನ ಕಾಲ ಮೇಲೆ ಸ್ವಾವಲಂಬಿ ಆಗಿ ಫೀಲ್ ಜೊತೆಗೆ ನಡೆಯಬೇಕು!
ಅತ್ಯಂತ ಯಾತನಾಮಯ ಶಸ್ತ್ರ ಚಿಕಿತ್ಸೆ ಅದು!
ನಂತರ ಒಬ್ಬರೇ ಆಸ್ಪತ್ರೆಗೆ ಬಂದು ಶಸ್ತ್ರಚಿಕಿತ್ಸೆಗೆ ಒಳಗಾದರು. ಅತ್ಯಂತ ಯಾತನಾಮಯ ಆದ ಶಸ್ತ್ರಚಿಕಿತ್ಸೆ ಅದು. 183 ಹೊಲಿಗೆಗಳನ್ನು ಹಾಕಿಸಿಕೊಂಡು ಆಕೆ ಕಣ್ಣು ತೆರೆದಾಗ ಅವರ ದೇಹದ ಎದೆಯ ಕೆಳಗಿನ ಭಾಗ ಪೂರ್ತಿ ಪಾರಾಲೈಸ್ ಆಗಿತ್ತು. ವೀಲ್ ಚೇರ್ ಬದುಕು ಅನಿವಾರ್ಯ ಆಗಿತ್ತು!
ಈ ಸ್ಥಿತಿಗೆ ‘ ಪಾರಾ ಪ್ಲೆಜಿಕ್ ‘ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯುತ್ತಾರೆ. ಅಂದರೆ ದೇಹದ ಅರ್ಧ ಭಾಗವು ನಿಯಂತ್ರಣ ಕಳೆದುಕೊಳ್ಳುವುದು ಮಾತ್ರವಲ್ಲ ಮಲ, ಮೂತ್ರಗಳ ಮೇಲೆ ಕೂಡ ನಿಯಂತ್ರಣಗಳು ತಪ್ಪಿ ಹೋಗುವುದು. ಒಂದು ಗ್ಲಾಸ್ ನೀರು ಕುಡಿಯಲು ಕೂಡ ಹಿಂದೆ ಮುಂದೆ ನೋಡಬೇಕಾದ ನೋವಿನ ಅನಿವಾರ್ಯತೆ! ಯಾವ ಆಹಾರ ಸೇವಿಸಲು ಕೂಡ ವೈದ್ಯರ ಅನುಮತಿಯನ್ನು ಪಡೆಯಬೇಕು! ಆದ್ದರಿಂದ ಪಾರಾಪ್ಲೆಜಿಕ್ ಸಮಸ್ಯೆ ಇದ್ದವರು ತಮ್ಮ ಮನೆಯಿಂದ ಹೊರಗೆ ಬರುವುದೇ ಇಲ್ಲ. ಆದರೆ ದೀಪಾ ಮಲಿಕ್ ಬೇರೆಯವರ ಹಾಗೆ ಯೋಚನೆ ಮಾಡಲೇ ಇಲ್ಲ!
ಗಂಡನ ಬೆಂಬಲ ಪಡೆದು ದೀಪಾ ಮತ್ತೆ ಸಾಹಸಕ್ಕೆ ಇಳಿದರು!
1999ರ ಕಾರ್ಗಿಲ್ ಯುದ್ಧ ಗೆದ್ದು ಗಂಡ ಮನೆಗೆ ಬಂದಾಗ ಮನೆಯಲ್ಲಿ ಎರಡೆರಡು ಪಾರಾಲೈಸ್ ಆದ ನೊಂದ ಜೀವಗಳು! ಕಣ್ಣೀರು ಸುರಿಸುತ್ತ ಮಲಗಿದ ಹೆಂಡತಿ. ಆದರೆ ಬಿಕ್ರಂ ಸಿಂಗ್ ಒಬ್ಬ ದಿಟ್ಟ ಸೈನಿಕನಾಗಿ ಹೆಂಡತಿಗೆ ಧೈರ್ಯ ತುಂಬಿದರು. ಬದುಕಿನ ನೋವನ್ನು ಮರೆಯಲು ಅವರ ಬಾಲ್ಯದ ಕ್ರೀಡೆ ಮತ್ತು ಪ್ಯಾಶನ್‌ಗಳನ್ನು ಮುಂದುವರಿಸುವ ಸಲಹೆ ಕೊಟ್ಟರು. ತಾನು ಪೂರ್ತಿಯಾಗಿ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದರು. ಪತಿಯ ಪೂರ್ಣ ಪ್ರಮಾಣದ ಬೆಂಬಲ ಪಡೆದ ದೀಪಾ ಮಲಿಕ್ ಮತ್ತೆ ಕ್ರೀಡಾ ಜಗತ್ತನ್ನು ಪ್ರವೇಶ ಮಾಡಲು ದಿಟ್ಟ ನಿರ್ಧಾರ ಮಾಡಿದ್ದರು. ಧೈರ್ಯವಾಗಿ ಮನೆಯಿಂದ ಹೊರಗೆ ಕಾಲಿಟ್ಟರು.
ಮುಂದೆ ಆಕೆಯ ಮುಂದೆ ಇದ್ದದ್ದು ಹೋರಾಟದ ಬದುಕು!
ಬೈಕ್ ಮತ್ತು ಕಾರು ಓಡಿಸಲು ದೆಹಲಿಯ ಸ್ಪೈನಲ್ ಇಂಜುರಿ ಕೇಂದ್ರದಲ್ಲಿ ಒಂದೂವರೆ ವರ್ಷ ಕಠಿಣವಾದ ತರಬೇತು ಪಡೆದರು. ಈಜು ಕಲಿತರು. ಬೈಕ್ ಮತ್ತು ಕಾರಲ್ಲಿ ಹಲವು ಮಾರ್ಪಾಟು ಮಾಡಿಸಿದರು. ಡ್ರೈವಿಂಗ್ ಲೈಸೆನ್ಸ್ ಪಡೆಯಲು ಪಡಬಾರದ ಕಷ್ಟವನ್ನು ಪಟ್ಟರು. ಅದೆಲ್ಲವೂ ಹೋರಾಟದ ದಿನಗಳು. ಅರ್ಧ ದೇಹ ಮತ್ತು ಪೂರ್ಣ ಸ್ಥೈರ್ಯಗಳು ಅವರ ಬೆಂಬಲಕ್ಕೆ ನಿಂತಿದ್ದವು!
2006ರಲ್ಲಿ ಕೌಲಾಲಂಪುರದಲ್ಲಿ ನಡೆದ ಈಜುವ ಸ್ಪರ್ಧೆಯಲ್ಲಿ ಅವರಿಗೆ ಮೊದಲ ಅಂತಾರಾಷ್ಟ್ರೀಯ ಪದಕವು ದೊರೆಯಿತು. 2008ರಲ್ಲಿ ಯಮುನಾ ನದಿಯ ಹರಿವಿಗೆ ವಿರುದ್ದವಾಗಿ ಒಂದು ಕಿಲೋಮೀಟರ್ ದೂರ ಈಜಿ ಅವರು ಲಿಮ್ಕಾ ದಾಖಲೆ ಬರೆದರು. ಅಂತಾರಾಷ್ಟ್ರೀಯ ಪದಕ ಗೆದ್ದ ಕೇವಲ ಭಾರತದ್ದೇ ಅಲ್ಲ ಇಡೀ ಜಗತ್ತಿನ ಮೊತ್ತ ಮೊದಲ ಪಾರಾಪ್ಲೆಜೀಕ್ ಕ್ರೀಡಾಪಟು ದೀಪಾ ಮಲಿಕ್ ಆಗಿದ್ದರು!
ನಂತರ ಅವರು ಹಿಂದೆ ಮುಂದೆ ನೋಡುವ ಪ್ರಸಂಗವೇ ಬರಲಿಲ್ಲ. ಅವರ ಗೆಲುವಿನ ಕೆಲವು ಹೆಜ್ಜೆಗಳು ಹೀಗಿವೆ.
ಎಲ್ಲವೂ ದಾಖಲೆ, ದಾಖಲೆ ಮತ್ತು ದಾಖಲೆ!
1) 2009ರಲ್ಲಿ ವಿಶೇಷವಾಗಿ ಮಾರ್ಪಾಡು ಮಾಡಿದ ಬೈಕನ್ನು 58 ಕಿಲೋಮೀಟರ್ ದೂರಕ್ಕೆ ನಿರಂತರ
ಓಡಿಸಿ ದಾಖಲೆ ಬರೆದರು.
2) ಅದೇ ವರ್ಷ ಜಗತ್ತಿನ ಅತೀ ಎತ್ತರದ ರೈಡ್ ಟು ಹಿಮಾಲಯ ಹೆಸರಿನ ಮೋಟಾರ್ ರ‍್ಯಾಲಿಯಲ್ಲಿ ನೇವಿಗೆಟರ್ ಆಗಿ ದೀಪಾ ಮಲಿಕ್ ಭಾಗವಹಿಸಿದರು. ಅದು ಮೈ ಕೊರೆಯುವ ಚಳಿಯಲ್ಲಿ ಎಂಟು ದಿನಗಳ ಸುದೀರ್ಘ ಕಾಲ ಸಾಗಿದ, 1700 ಕಿಲೋಮೀಟರ್ ಪ್ರಯಾಣದ, 18,000 ಅಡಿ ಎತ್ತರದ ದುರ್ಗಮ ರಸ್ತೆಗಳ ರಾಲಿ ಆಗಿತ್ತು. ಇದನ್ನು ಗೆದ್ದ ದೀಪಾ ಎರಡನೇ ಬಾರಿಗೆ ಲಿಮ್ಕಾ ಬುಕ್ ದಾಖಲೆಗೆ ಸೇರಿದರು!
3) ಮುಂದಿನ ವರ್ಷ ದೀಪಾ ಇನ್ನೊಂದು ಸಾಹಸಕ್ಕೆ ಮುಂದಾದರು. ಅದು 3,000 ಕಿಲೋಮೀಟರ್ ಪ್ರಯಾಣದ ಡಸರ್ಟ್ ಸ್ಟಾರ್ಮ್ ರ‍್ಯಾಲಿ. ಅದು ಕೂಡ ಮರುಭೂಮಿ ಸೀಳಿಕೊಂಡು ಹೋಗುವ ರಾಲಿ! ಅಲ್ಲೂ ಅವರ ಆತ್ಮವಿಶ್ವಾಸವು ಅವರನ್ನು ಗೆಲ್ಲಿಸಿತು!
4) ಮುಂದೆ ಅವರು ಶಾಟ್ ಪುಟ್ ಮತ್ತು ಜಾವೇಲಿನ್ ಥ್ರೋ ಮೇಲೆ ಗಮನವಿಟ್ಟರು. 2010ರ ಏಷಿಯನ್ ಪಾರಾ ಗೇಮ್ಸ್ ಚೀನಾದಲ್ಲಿ ನಡೆದಾಗ ಕಂಚಿನ ಪದಕ ಗೆದ್ದರು. ಮುಂದೆ 2011ರಲ್ಲಿ ನ್ಯೂಜಿಲ್ಯಾಂಡಲ್ಲಿ ಐಪಿಸಿ ವರ್ಲ್ಡ್ ಚಾಂಪಿಯನ್ಶಿಪ್ ಕೂಟದಲ್ಲಿ ಬೆಳ್ಳಿ ಪದಕವನ್ನು ಗೆದ್ದರು.
5) 2014ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಪಾರಾ ಏಷಿಯನ್ ಗೇಮ್ಸಲ್ಲಿ ಜಾವೇಲಿನ್ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದರು.
6) 2016ರ ರಿಯೋ ಪಾರಾ ಒಲಿಂಪಿಕ್ಸ್ ಕೂಟದಲ್ಲಿ ಶಾಟ್ ಪುಟ್ ಸ್ಪರ್ಧೆಯಲ್ಲಿ ಭಾಗವಹಿಸಲು ದೀಪಾ ಭಾರಿ ತಯಾರಿ ನಡೆಸಿದರು. ಆಗ ತೀವ್ರವಾದ ದೈಹಿಕ ತೊಂದರೆಗಳು ಎದುರಾದವು. ಪ್ರತೀ ಬಾರಿ ಶಾಟ್ ಪುಟ್ ಎಸೆದಾಗ ಮಲ ಅಥವಾ ಮೂತ್ರ ವಿಸರ್ಜನೆ ಆಗಿ ಡಯಪರ್ ಬದಲಾವಣೆ ಮಾಡುವುದು ಅನಿವಾರ್ಯ ಆಗಿತ್ತು. ಆದರೆ ದೀಪಾ ಮಲಿಕ್ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಅದರ ನಡುವೆ ಅವರ ಬೆನ್ನ ಹಿಂದೆ ನಡೆದ ಹಲವು ವಿಶ್ವಾಸದ್ರೋಹದ ಘಟನೆಗಳು, ಕೋರ್ಟು ಅಲೆದಾಟ ಅವರನ್ನು ಹಿಂಡಿ ಹಿಪ್ಪೆ ಮಾಡಿದವು. ಕ್ರೀಡೆಗೆ ಸಿದ್ಧತೆ ಮಾಡಬೇಕಾದ ಪೂರ್ತಿ ಹೊತ್ತು ಕೋರ್ಟ್ ಓಡಾಟದಲ್ಲಿ ಕಳೆದುಹೋಗಿತ್ತು. ದೀಪಾ ಕೋರ್ಟಲ್ಲಿ ಕೂಡ ತಮ್ಮ ಪರವಾದ ತೀರ್ಪನ್ನು ಪಡೆದರು ಮತ್ತು ರಿಯೋ ಪಾರಾ ಒಲಿಂಪಿಕ್ಸ್ ಸ್ಪರ್ಧೆಗೆ ಅರ್ಹತೆಯನ್ನು ಪಡೆದಿದ್ದರು.
2016ರ ಸೆಪ್ಟೆಂಬರ್ 14 ರಂದು ರಿಯೋದಲ್ಲಿ ವೀಲ್ ಚೇರ್ ಮೇಲೆ ಕುಳಿತು ತನ್ನ ದೇಹದ ಪೂರ್ಣವಾದ ಶಕ್ತಿಯನ್ನು ತನ್ನ ಭುಜಗಳಿಗೆ ಬಸಿದು 4.61 ಮೀಟರ್ ದಾಖಲೆಯ ದೂರಕ್ಕೆ ಆಕೆ ಶಾಟ್ ಪುಟ್‌ನ್ನು ಎಸೆದು ಬಿಟ್ಟಿದ್ದರು! ಆ ದಿನ ದೀಪಾ ಅವರಿಗೆ ದೊರೆತದ್ದು ಹೊಳೆವ ಬೆಳ್ಳಿಯ ಪದಕ! ಭಾರತದ ತ್ರಿವರ್ಣ ಧ್ವಜ ರಿಯೋದಲ್ಲಿ ಹಾರಿದಾಗ ದೀಪಾ ಕಣ್ಣೀರು ಸುರಿಸಿದರು.
ಅದು ಭಾರತವು ಪಾರಾ ಒಲಿಂಪಿಕ್ಸ್ ಕೂಟದಲ್ಲಿ ಗೆದ್ದ ಮೊದಲ ಪದಕ ಆಗಿತ್ತು ಮತ್ತು ಆ ಸಾಧನೆ ಮಾಡಿದ ಜಗತ್ತಿನ ಮೊದಲ ಪಾರಾಪ್ಲೆಜಿಕ್ ಕ್ರೀಡಾಪಟು ಆಗಿ ದೀಪಾ ಮಲಿಕ್ ಮೂಡಿ ಬಂದಿದ್ದರು! ಆಗ ಅವರಿಗೆ 46 ವರ್ಷ!
7) ಮುಂದೆ ಜಕಾರ್ತದಲ್ಲಿ ನಡೆದ ಏಷಿಯನ್ ಪಾರಾ ಗೇಮ್ಸ್ ಕೂಟದಲ್ಲಿ ಎರಡು ಕಂಚಿನ ಪದಕಗಳನ್ನು ಅವರು ಗೆದ್ದರು.
8) ಸತತ ಮೂರು ಏಷಿಯನ್ ಪಾರಾ ಕೂಟಗಳಲ್ಲಿ ಪದಕ ಗೆದ್ದ (2010, 2014, 2018) ಭಾರತದ ಮೊದಲ ಕ್ರೀಡಾಪಟು ಆಗಿದ್ದರು ದೀಪಾ ಮಲಿಕ್!
9) ಆಕೆ ಗೆದ್ದಿರುವ ಒಟ್ಟು ಪದಕಗಳ ಸಂಖ್ಯೆ 81. ಅದರಲ್ಲಿ 58 ಪದಕಗಳು ರಾಷ್ಟ್ರ ಮಟ್ಟದ್ದು ಮತ್ತು 23 ಪದಕಗಳು ಅಂತಾರಾಷ್ಟ್ರೀಯ ಮಟ್ಟದ್ದು!
10) ದೀಪಾ ಮಲಿಕ್ ಅವರಿಗೆ ರಾಷ್ಟ್ರಮಟ್ಟದ ಅತ್ಯುತ್ತಮ ಕ್ರೀಡಾಪಟುವಿಗೆ ನೀಡುವ ಅರ್ಜುನ ಪ್ರಶಸ್ತಿ ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎರಡೂ ಸಂದಿವೆ.
11) ಭಾರತ ಸರಕಾರವು ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದ್ದು ಅಂದಿನ ಇಡೀ ಕಾರ್ಯಕ್ರಮವು ಭಾವಪೂರ್ಣ ಆಗಿತ್ತು. ಆಕೆಯ ಕತೆಯನ್ನು ಅವರ ಬಾಯಿಂದಲೇ ಕೇಳಿ ಪ್ರಧಾನಿ ನರೇಂದ್ರ ಮೋದಿ ರೋಮಾಂಚನ ಪಟ್ಟಿದ್ದರು!
12) ದೀಪಾ ಅರ್ಧ ದೇಹದ ಪಾರಾಲೈಸ್ ಆದ ತನ್ನ ಮಗಳು ದೇವಿಕಾ ಅವರನ್ನು ಕೂಡ ಓರ್ವ ಭವಿಷ್ಯದ ಪಾರಾ ಅಥ್ಲೀಟ್ ಆಗಿ ರೂಪಿಸುತ್ತಿದ್ದಾರೆ!
ಈಗ ನೀವು ಹೇಳಿ. ದೀಪಾ ಮಲಿಕ್ ಬದುಕು ಸ್ಫೂರ್ತಿಯ ಚಿಲುಮೆ ಹೌದಾ?