Site icon Vistara News

ರಾಜ ಮಾರ್ಗ ಅಂಕಣ: ನಾಯಬ್ ಸುಬೇದಾರ್ ನೀರಜ್ ಚೋಪ್ರಾ: ಭಾರತೀಯ ಕ್ರೀಡಾ ಕ್ಷೇತ್ರ ಅಪ್ಪಟ ಚಿನ್ನ

Neeraj Chopra

ಒಂದೇ ವಾರದಲ್ಲಿ ಇಷ್ಟೊಂದು ಸರಣಿ ಭಾವೋದ್ವೇಗವನ್ನು ಭಾರತೀಯರು ಎಂದಿಗೂ ಅನುಭವಿಸಿದ ಉದಾಹರಣೆ ಇಲ್ಲ!

ಆಗಸ್ಟ್ 23ರಂದು ಚಂದ್ರಯಾನ 3 (Chandrayaan 3) ಯಶಸ್ಸು, ಎರಡೇ ದಿನಗಳಲ್ಲಿ ತಮಿಳುನಾಡಿನ 18ರ ಹರೆಯದ ಪ್ರಗ್ಯಾನಂದ (Rameshbabu Praggnanandhaa) ವಿಶ್ವ ಚೆಸ್ ಕೂಟದಲ್ಲಿ ರನ್ನರ್ ಅಪ್ ಆದದ್ದು, ವಾರದ ಕೊನೆಯ ದಿನ ನೀರಜ್ ಚೋಪ್ರಾ (Neeraj Chopra) ಇತಿಹಾಸ ನಿರ್ಮಾಣ ಮಾಡಿದ್ದು…. ಇವೆಲ್ಲವೂ ಕನಸೋ, ನನಸೋ ನಮಗೆ ಇನ್ನೂ ಜೀರ್ಣ ಮಾಡಿಕೊಳ್ಳುವುದು ತುಸು ಕಷ್ಟ!

ಅದರಲ್ಲೂ ಈ 25 ವರ್ಷದ ಸೈನಿಕ ನೀರಜ್ ಚೋಪ್ರಾ ನಮಗೆ ಈ ವಾರಾಂತ್ಯದಲ್ಲಿ ತಂದುಕೊಟ್ಟ ರೋಮಾಂಚನ ಇದೆಯಲ್ಲ (ರಾಜ ಮಾರ್ಗ ಅಂಕಣ) ಅದು ಭಾವೋದ್ವೇಗದ ಶಿಖರ.

ಆಗಸ್ಟ್ 27, 2023 ಭಾರತೀಯ ಕಾಲಮಾನ ಮಧ್ಯರಾತ್ರಿ
ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್ ಕೂಟ – ಬುಡಾಪೆಸ್ಟ್

ನೀರಜ್ ಚೋಪ್ರಾ ಅಂದು ಮಾಡಿದ್ದು ಇತಿಹಾಸ. ಜಾವೆಲಿನನ್ನು ಒಂದು ನಿರ್ದಿಷ್ಟ ಕೋನದಲ್ಲಿ ತೆರೆದು 88.17 ಮೀಟರ್ ದೂರಕ್ಕೆ ಎಸೆದು ನಿಂತಾಗಲೇ ಚಿನ್ನದ ಸೂಚನೆ ಸಿಕ್ಕಿತ್ತು. ನಗುವು ಮಾಸದ ಅವರ ಮುಖದಲ್ಲಿ ಒತ್ತಡದ ಒಂದೇ ಒಂದು ಎಳೆ ಇರಲಿಲ್ಲ. ವಿಶ್ವ ಅಥ್ಲೆಟಿಕ್ ಕೂಟದಲ್ಲಿ ಭಾರತದ ಹೆಸರು ಚಿನ್ನದ ಪದಕದ ಜೊತೆಗೆ ಮೊದಲ ಬಾರಿಗೆ ಕೇಳಿಬಂದದ್ದು, ಆತ ವಿಜಯದ ವೇದಿಕೆಯ ಮೇಲೆ ನಿಂತಾಗ ತ್ರಿವರ್ಣ ಧ್ವಜವು ಆ ಕ್ರೀಡಾಗ್ರಾಮದಲ್ಲಿ ಎತ್ತರಕ್ಕೆ ಹಾರಿದ್ದು, ರಾಷ್ಟ್ರಗೀತೆ ಜನಗಣಮನ ಅನುರಣನ ಆದದ್ದು…ಎಲ್ಲವೂ ಮೊದಲ ಬಾರಿಗೆ ನಡೆದ ಘಟನೆಗಳು.

ಅದೂ ಎಂತಹ ಚಿನ್ನ ಅಂತೀರಿ?

ವಿಶ್ವ ಅಥ್ಲೆಟಿಕ್ ಕೂಟದ ಇತಿಹಾಸದಲ್ಲಿ ಭಾರತಕ್ಕೆ ದೊರೆತ ಮೊದಲ ಚಿನ್ನ ಅನ್ನುವಾಗ ಡಬಲ್ ರೋಮಾಂಚನ ಭಾರತೀಯರಿಗೆ. ಈ ನೀರಜ್ ಚೋಪ್ರಾ 2016ರಿಂದ ಭಾರತಕ್ಕೆ ಚಿನ್ನ ಗೆಲ್ಲುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ.

2020 ಟೋಕಿಯೋ ಒಲಿಂಪಿಕ್ ಕೂಟದಲ್ಲಿ ಕೂಡ ಚಿನ್ನ!

1896ರಲ್ಲಿ ಆಧುನಿಕ ಒಲಿಂಪಿಕ್ಸ್ ಆರಂಭ ಆದ ನಂತರದಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಮೊದಲ ವೈಯಕ್ತಿಕ ಚಿನ್ನ ಸಿಗಲು 125 ವರ್ಷ ಅಂದರೆ 2020ರ ಟೋಕಿಯೋ ಒಲಿಂಪಿಕ್ ವರೆಗೆ ಕಾಯಬೇಕಾಯಿತು. ಅದಕ್ಕೆ ನೀರಜ್‌ ಚೋಪ್ರಾನೇ ಬರಬೇಕಾಯಿತು.

ಹಾಕಿಯಲ್ಲಿ ಭಾರತವು 8 ಬಾರಿ ಚಿನ್ನವನ್ನು ಗೆದ್ದದ್ದನ್ನು ಹೊರತುಪಡಿಸಿದರೆ ಭಾರತಕ್ಕೆ ಒಲಿಂಪಿಕ್ ಕೂಟದಲ್ಲಿ ದೊರೆತ ಕೇವಲ ಎರಡನೇ ವೈಯಕ್ತಿಕ ಚಿನ್ನದ ಪದಕ ಅದಾಗಿತ್ತು. ಹಾಗೆ ಕೂಡ ಆ ಪದಕವು ಭಾರೀ ಪ್ರೆಶಿಯಸ್! ಅಭಿನವ್ ಬಿಂದ್ರಾ 2008ರಲ್ಲಿ ಶೂಟಿಂಗ್‌ನಲ್ಲಿ ಚಿನ್ನದ ಪದಕ ಪಡೆದ ನಂತರ ಭಾರತಕ್ಕೆ ದೊರೆತ ಕೇವಲ ಎರಡನೇ ಚಿನ್ನ! ಪಡೆದವರು ಇದೇ ನೀರಜ್ ಚೋಪ್ರಾ

ನೀರಜ್ ಚೋಪ್ರ ಒಬ್ಬ ಸೈನಿಕ

ಅವರೊಬ್ಬ ಸೈನಿಕ ಅನ್ನುವುದು added pride. ನೀರಜ್ ಚೋಪ್ರಾ ಹರ್ಯಾಣ ರಾಜ್ಯದ ಪಾಣಿಪತ್ ಜಿಲ್ಲೆಯ ಒಂದು ಸಣ್ಣದಾದ ಗ್ರಾಮದಿಂದ ಬಂದವರು. DAV ಕಾಲೇಜಿನಲ್ಲಿ ಓದುತ್ತಿರುವಾಗ ಉತ್ತಮ ಕ್ರೀಡಾಪಟು ಆಗಿ ರೂಪುಗೊಂಡರು. ಅವರ ಕ್ರೀಡಾ ಸಾಧನೆ ಗಮನಿಸಿ ಭಾರತೀಯ ಸೇನೆ ಅವರನ್ನು ನೇರ ನೇಮಕ ಮಾಡಿಕೊಂಡಿತ್ತು. ಅವರೀಗ ನಾಯಬ್ ಸುಬೇದಾರ್ (JCO) ಹುದ್ದೆಗೆ ಏರಿದ್ದಾರೆ. ಹಾಗೆಯೇ ಅವರಿಗೆ ಸೇನೆಯಲ್ಲಿ ಈಗಾಗಲೇ ಪರಮ ವಿಶಿಷ್ಟ ಸೇವಾ ಮೆಡಲ್ ಮತ್ತು ವಿಶಿಷ್ಟ ಸೇವಾ ಮೆಡಲ್‌ಗಳು ದೊರೆತಿವೆ.

ಅವರ ಬಲಿಷ್ಠ ರಟ್ಟೆಗಳನ್ನು ಗಮನಿಸಿದ ಒಬ್ಬ ಸೈನ್ಯದ ಅಧಿಕಾರಿ ಅವರಿಗೆ ಶಾಟ್‌ಪುಟ್‌ ಮತ್ತು ಜಾವೆಲಿನ್ ಅಭ್ಯಾಸ ಮಾಡಲು ಹೇಳಿದ್ದೇ ಆರಂಭ. ಒಬ್ಬ ಒಳ್ಳೆಯ ಕೋಚ್ ಮೂಲಕ ಜಾವೆಲಿನ್ ಎಸೆಯಲು ಅಂದೇ ಅವರು ಆರಂಭ ಮಾಡಿದ್ದರು.

ಹೊಳೆಯುವ ಕ್ರೀಡಾ ಸಾಧನೆ

ಇದು ನೀರಜ್ ಚೋಪ್ರಾ ಅವರು ಗೆದ್ದ ಮೊದಲಿನ ಅಂತಾರಾಷ್ಟ್ರೀಯ ಪದಕ ಏನಲ್ಲ!
ಅವರು ಗೆದ್ದಿದ್ದ 2016ರ ಸೌತ್ ಏಷಿಯನ್ ಕೂಟದ ಚಿನ್ನವು ಅವರ ಮೊದಲಿನದು!
ಅದೇ ವರ್ಷ ಅಂಡರ್ 20 ವಿಶ್ವ ಅಥ್ಲೆಟಿಕ್ ಚಿನ್ನ!
ಅದರ ನಂತರ 2017ರ ಏಷಿಯನ್ ಚಾಂಪಿಯನ್‌ಷಿಪ್‌ ಚಿನ್ನ!
ಮುಂದೆ 2017ರ ಕಾಮನ್ ವೆಲ್ತ್ ಗೇಮ್ಸ್ ಚಿನ್ನ,
ಅದರ ನಂತರ 2018ರ ಏಷಿಯನ್ ಗೇಮ್ಸ್ ಚಿನ್ನ,
ಅದಾದ ನಂತರ ಭಾರತವು ಹೆಮ್ಮೆ ಪಡುವ 2020ರ ಟೋಕಿಯೋ ಒಲಿಂಪಿಕ್ ಚಿನ್ನ,
ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ 2022ರ ವಿಶ್ವ ಅಥ್ಲೆಟಿಕ್ ಕೂಟದ ಬೆಳ್ಳಿ.
ಈ ಎಲ್ಲ ಸಾಧನೆಗಳಿಗೆ ಕಿರೀಟಸದೃಶವಾಗಿ ಈ ಬಾರಿ ವಿಶ್ವ ಅಥ್ಲೆಟಿಕ್ ಕೂಟದಲ್ಲಿ ಚಿನ್ನ–
ನೀರಜ್ ಚೋಪ್ರ ಇಲ್ಲಿಗೆ ನಿಂತು ಬಿಡುತ್ತಾರೆ ಎಂದು ನನಗಂತೂ ಅನ್ನಿಸುವುದಿಲ್ಲ.

ಇನ್ನೂ ಆಶ್ಚರ್ಯ ಎಂದರೆ ಅವರ ಜಾವೆಲಿನ್‌ನ ವೈಯಕ್ತಿಕ ದಾಖಲೆಯು ಇಂದಿಗೂ ವಿಶ್ವ ದಾಖಲೆ ಆಗಿಯೇ ಇದೆ (89.94 ಮೀಟರ್)! ಒಲಿಂಪಿಕ್ಸ್‌ನಲ್ಲಿ ಅವರು ಎಸೆದದ್ದು 87.58 ಮೀಟರ್. ಈ ಬಾರಿ ಎಸೆದದ್ದು 88.17 ಮೀಟರ್. ಅವರ ವೈಯಕ್ತಿಕ ದಾಖಲೆಯು ಇನ್ನೂ ಎತ್ತರ ಇದೆ ಎಂಬುದನ್ನು ಗಮನಿಸಿ. ಅವರ ಸಾಧನೆಯ ಹಸಿವು ಕೂಡ ಇನ್ನೂ ತೀವ್ರವಾಗಿದೆ.

ಜಾವೆಲಿನ್‌ ತ್ರೋದಲ್ಲಿ ಬೆಳ್ಳಿ ಗೆದ್ದ ಪಾಕಿಸ್ತಾನದ ಆಟಗಾರ ಅರ್ಷದ್‌ ನದೀಮ್‌ ಧ್ವಜವಿಲ್ಲದೆ ಬಂದಾಗ ಅವನನ್ನು ಕರೆದು ತನ್ನ ಜತೆ ನಿಲ್ಲಿಸಿಕೊಂಡದ್ದು ನೀರಜ್‌ ಚೋಪ್ರಾ. ಅರ್ಷದ್‌ ಕೂಡಾ ತುಂಬು ಸಂತೋಷದಿಂದ ಭಾರತದ ಧ್ವಜವನ್ನು ಹಿಡಿದು ನಿಂತಿದ್ದ. ಇದು ಕ್ರೀಡಾ ಸ್ಫೂರ್ತಿ

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಪ್ರಜ್ಞಾನಂದ ವಿಶ್ವವಿಜಯಕ್ಕೆ ಇನ್ನೊಂದೇ ಮೆಟ್ಟಿಲು; ಅಮ್ಮನೇ ಅವನ ಪಾಲಿಗೆ ದೇವರು

ಹಲವು ಪ್ರಶಸ್ತಿಗಳ ಸರದಾರ

ನೀರಜ್ ಚೋಪ್ರಾ ಅವರ ಕ್ರೀಡಾ ಸಾಧನೆಗೆ ಅರ್ಜುನ ಪ್ರಶಸ್ತಿ, ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳು ಈಗಾಗಲೇ ಅವರಿಗೆ ದೊರೆತಿವೆ. ಅವರಿಗೆ ಭಾರತರತ್ನ ಪ್ರಶಸ್ತಿಯೊಂದು ದೊರೆತರೆ ಆ ಪ್ರಶಸ್ತಿಯ ಮೌಲ್ಯವು ಹೆಚ್ಚಾಗುತ್ತದೆ ಅನ್ನುವುದು ಭಾರತೀಯರ ಅಭಿಪ್ರಾಯ.

ನೀರಜ್ ರಾಷ್ಟ್ರಪ್ರೇಮ

ನೀರಜ್ ಚೋಪ್ರ ಬುಡಾಪೆಸ್ಟ್ ಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದಾಗ ಒಬ್ಬಳು ವಿದೇಶಿ ಮಹಿಳೆ ಭಾರತದ ತ್ರಿವರ್ಣ ಧ್ವಜವನ್ನು ಮತ್ತು ಮಾರ್ಕರ್ ಪೆನ್ ತಂದುಕೊಟ್ಟು ಸಹಿ ಮಾಡುವಂತೆ ವಿನಂತಿ ಮಾಡಿಕೊಂಡಿದ್ದರು. ಆಗ ಅದು ನಮ್ಮ ದೇಶದ ಸಂಹಿತೆಗೆ ವಿರುದ್ಧ ಎಂದು ನಯವಾಗಿ ಹೇಳಿದ ನೀರಜ್ ಅವರ ಟೀ ಶರ್ಟ್ ಮೇಲೆ ಸಹಿ ಮಾಡಿದ್ದನ್ನು ನೋಡಿದಾಗ ಅವರ ಪ್ರಬುದ್ಧತೆ ಮತ್ತು ರಾಷ್ಟ್ರಪ್ರೇಮ ಎದ್ದುಕಾಣುತ್ತದೆ.

ಅಂತವರ ಬದುಕಿನ ಕತೆಗಳು ನಮ್ಮ ಪಠ್ಯಪುಸ್ತಕಗಳಲ್ಲಿ ಬಂದರೆ, ಅದನ್ನು ನಮ್ಮ ಮಕ್ಕಳು ಓದುವಂತಾದರೆ ಮುಂದೆ ಇನ್ನಷ್ಟು ಕ್ರೀಡೆಯ ಪ್ರತಿಭೆಗಳು ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಭಾರತಕ್ಕೆ ಪದಕಗಳನ್ನು ತರಬಹುದು. ಮುಂದಿನ ನೂರಾರು ವರ್ಷಗಳ ಕಾಲ ನಮ್ಮ ನೀರಜ್ ಚೋಪ್ರಾ ಭಾರತೀಯ ಕ್ರೀಡಾಕ್ಷೇತ್ರದ ದಿಕ್ಸೂಚಿ ಆಗಿ ನಿಲ್ಲುವುದು ಖಂಡಿತ. ಜೈ ಹಿಂದ್

Exit mobile version