1948 ಆಗಸ್ಟ್ 14, ಇಂಗ್ಲೆಂಡ್ ಆ್ಯಶಸ್ ಸರಣಿಯ (Ashes Series 1948) ಕೊನೆಯ ಟೆಸ್ಟ್ ಪಂದ್ಯ ಅದು. ಹಲವು ಕಾರಣಕ್ಕೆ ಆ ಪಂದ್ಯವು ಸ್ಮರಣೀಯ ಆಗಿದೆ. ಆಸ್ಟ್ರೇಲಿಯಾದ ಕ್ರಿಕೆಟ್ ಲೆಜೆಂಡ್ ಡಾನ್ ಬ್ರಾಡ್ಮನ್ (Don Bradman) ಅವರ ಕೊನೆಯ ಟೆಸ್ಟ್ ಪಂದ್ಯ ಅದಾಗಿತ್ತು. ಆಗಲೇ ವಿಶ್ವ ದಾಖಲೆಯ ಇನಿಂಗ್ಸ್‌ಗಳನ್ನು ಆಡಿದ್ದ ಡಾನ್ ಬ್ರಾಡ್ಮನ್ ಆಗ ಜನಪ್ರಿಯತೆಯ ತುತ್ತತುದಿಯಲ್ಲಿ ಇದ್ದರು. ಆ ಇನ್ನಿಂಗ್ಸ್‌ನಲ್ಲಿ ಅವರು ಕೇವಲ ನಾಲ್ಕು ರನ್ ಹೊಡೆದರೆ ಅವರ ಟೆಸ್ಟ್ ಬ್ಯಾಟಿಂಗ್ ಸರಾಸರಿ (Test Batting Average) ನೂರು ಆಗುತ್ತಿತ್ತು. ಅವರ ಹಿಂದಿನ ಬ್ಯಾಟಿಂಗ್ ವೈಭವವನ್ನು ನೋಡಿದವರಿಗೆ ಆ ನಾಲ್ಕು ರನ್ ಅಸಾಧ್ಯವೇ ಆಗಿರಲಿಲ್ಲ. ಆದರೆ ಬ್ಯಾಟಿಂಗಿಗೆ ಇಳಿದ ಬ್ರಾಡ್ಮನ್ ಎರಡನೇ ಎಸೆತಕ್ಕೆ ಔಟ್ ಆದಾಗ ಖಾತೆಯನ್ನೇ ತೆರೆದಿರಲಿಲ್ಲ! ಅಲ್ಲಿಗೆ ಅವರ ಬ್ಯಾಟಿಂಗ್ ಸರಾಸರಿ 99.94ರ ಎತ್ತರಕ್ಕೆ ನಿಂತು ಬಿಟ್ಟಿತ್ತು! (Raja Marga Column)
ಪರಿಪೂರ್ಣತೆ ಸಾಧ್ಯವೇ ಇಲ್ಲ!
ಕ್ರಿಕೆಟ್ ಅಥವಾ ಯಾವುದೇ ಆಟದ ಸೌಂದರ್ಯ ಅಡಗಿರುವುದು ಅದರ ಅಪರಿಪೂರ್ಣತೆಯಲ್ಲಿ ಎಂದರೆ ನಿಮಗೆ ಆಶ್ಚರ್ಯ ಆಗಬಹುದು. ಏಷ್ಟೋ ತಪ್ಪು ನಿರ್ಣಯಗಳು ನಮಗೆ ಅರಿವಿಲ್ಲದಂತೆ ನಮ್ಮ ಬದುಕಿನ ಸೌಂದರ್ಯವನ್ನು ಹೆಚ್ಚಿಸುತ್ತವೆ.
ಉದಾಹರಣೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ನಿರ್ಣಾಯಕ ಘಟ್ಟದಲ್ಲಿ ನೂರಾರು ಟಿವಿ ಕ್ಯಾಮೆರಾ ಹಾಗೂ ಲಕ್ಷಾಂತರ ಪ್ರೇಕ್ಷಕರ ಮುಂದೆ ಒಬ್ಬ ಪರಿಣತ ಅಂಪಾಯರ್ ತಪ್ಪು ತೀರ್ಮಾನ ನೀಡುತ್ತಾನೆ. ಆಗ ಡಿ ಆರ್ ಎಸ್ ಮುಗಿದು ಹೋಗಿರುತ್ತದೆ. ಅದು ತಪ್ಪು ತೀರ್ಮಾನ ಎಂದು ಫೀಲ್ಡರ್‌ಗಳು , ವೀಕ್ಷಕ ವಿವರಣೆಗಾರರು, ಮೈದಾನದ ವೀಕ್ಷಕರು ಬೊಬ್ಬೆ ಹೊಡೆದು ಕಿರುಚಿದರೂ ಯಾವ ಪರಿಣಾಮವೂ ಆಗುವುದಿಲ್ಲ. ಆ ತಪ್ಪು ತೀರ್ಮಾನದ ಪರಿಣಾಮವಾಗಿ ಬಲಿಷ್ಠ ತಂಡವು ಅನ್ಯಾಯವಾಗಿ ಸೋಲನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಮತ್ತು ಅಂತಹ ತಪ್ಪುಗಳೇ ಕ್ರಿಕೆಟ್ ಆಟದ ಸೌಂದರ್ಯಕ್ಕೆ ಕಾರಣ ಆಗುತ್ತವೆ.
ಎಂತಹ ಪರಿಪೂರ್ಣ ಸಂಗೀತ ಕಲಾವಿದರಾದರೂ ಯಾವುದಾದರೂ ಒಂದು ಬಿಂದುವಿನಲ್ಲಿ ಅಪಶ್ರುತಿಯನ್ನು ನುಡಿಸಿಯೇ ನುಡಿಸಿರುತ್ತಾನೆ. ಎಷ್ಟೋ ಬಾರಿ ಆ ಎಡವಟ್ಟು ಆತನಿಗೆ ಮಾತ್ರ ಗೊತ್ತಿರುತ್ತದೆ!
ಆ ಒಂದು ಶೇಕಡಾ ತಪ್ಪು…
ವ್ಯಕ್ತಿ ಎಷ್ಟು ಬಲಿಷ್ಠನಾದರೂ ಆತನು ಮಾಡುವ ಒಂದು ಎಡವಟ್ಟು ಆತನನ್ನು ಪಾತಾಳಕ್ಕೆ ತಳ್ಳಬಹುದು ಅಥವಾ ಆ ತಪ್ಪು ಯಾರ ಗಮನಕ್ಕೂ ಬಾರದೆ ಹಾಗೆ ಅಡಗಿ ಹೋಗಬಹುದು. ಜಗತ್ತಿನ ಮಹಾ ಮಹಾ ಲೆಜೆಂಡ್‌ಗಳ ಬದುಕನ್ನು ಅಧ್ಯಯನ ಮಾಡಿದಾಗ ನನಗೆ ಅರ್ಥ ಆಗುವುದು ಏನೆಂದರೆ ಪ್ರತಿಯೊಬ್ಬರ ಬದುಕೂ ಒಂದಲ್ಲ ಒಂದು ಎಡವಟ್ಟಿನಿಂದ ಕೂಡಿರುತ್ತದೆ. ಆ ಎಡವಟ್ಟು ಒಂದು ದೃಷ್ಟಿ ಬೊಟ್ಟಿನಂತೆ ಅವರ ಬದುಕಿನ ಸೌಂದರ್ಯವನ್ನು ಹೆಚ್ಚು ಮಾಡಿರಬಹುದು.
ಯಾವುದೇ ಒಬ್ಬ ಶಕ್ತಿಶಾಲಿ ಕ್ರಿಕೆಟರ್ ಕೂಡ ಪಂದ್ಯದ ನಿರ್ಣಾಯಕ ಹಂತದಲ್ಲಿ ಒಂದು ತಪ್ಪು ಹೊಡೆತಕ್ಕೆ ಮುಂದಾಗಿ ತನ್ನ ವಿಕೆಟ್ ಕಳೆದುಕೊಳ್ಳುತ್ತಾನೆ. 1987ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಖಂಡಿತವಾಗಿ ಗೆಲ್ಲುವ ಹಂತದಲ್ಲಿ ಇತ್ತು. ಆಗ ಚೆನ್ನಾಗಿ ಆಡುತ್ತಿದ್ದ ಬಲಿಷ್ಠ ಬ್ಯಾಟ್ಸ್‌ಮ್ಯಾನ್ ಮೈಕ್ ಗ್ಯಾಟಿಂಗ್ ಅವರು ಅಲನ್ ಬಾರ್ಡರ್ ಎಸೆತದಲ್ಲಿ ರಿವರ್ಸ್ ಸ್ವೀಪ್ ಹೊಡೆಯಲು ಹೋಗಿ ಔಟ್ ಆಗದೇ ಹೋಗಿದ್ದರೆ ಇಂಗ್ಲೆಂಡ್ ಖಂಡಿತವಾಗಿ ಗೆಲ್ಲುತ್ತಿತ್ತು. ಆ ತಪ್ಪು ಎಸೆತವು ದುಬಾರಿ ಆಗಿ ಇಂಗ್ಲೆಂಡ್ ಕೇವಲ ಏಳು ರನ್ನುಗಳಿಂದ ಸೋತು ಆಸ್ಟ್ರೇಲಿಯಾ ವಿಶ್ವಕಪ್ ಎತ್ತಿ ಹಿಡಿದದ್ದು ನಮಗೆ ಖಂಡಿತವಾಗಿ ನೆನಪಿದೆ. ಅತ್ಯಂತ ಪರಿಣತ ಬ್ಯಾಟರ್ ಮೈಕ್ ಗ್ಯಾಟಿಂಗ್ ಆ ರಿವರ್ಸ್ ಸ್ವೀಪ್ ಹೊಡೆಯಲು ಹೋದದ್ದು ಯಾಕೆ?
2023ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ವಿಕೆಟ್ ಮೇಲಿನಿಂದ ಹೋಗುತ್ತಿದ್ದ ಎಸೆತವನ್ನು ವಿಕೆಟ್ ಮೇಲೆ ಎಳೆದು ವಿರಾಟ್ ಕೊಹ್ಲಿ ಔಟ್ ಆಗದೇ ಹೋಗಿದ್ದರೆ…
ಅದುವರೆಗೆ ಎಂದಿಗೂ ಬೌಲಿಂಗ್ ಓಪನ್ ಮಾಡದ ಮೊಹಮದ್ ಶಮಿ ಕೈಗೆ ರೋಹಿತ್ ಶರ್ಮಾ ಓಪನಿಂಗ್ ಬೌಲಿಂಗ್ ಕೊಟ್ಟದ್ದು ಏಕೆ? ಟಿ 20 ಕ್ರಿಕೆಟಿನ ವಿಶ್ವದ ನಂಬರ್ ಒನ್ ಬ್ಯಾಟರ್ ಆದ ಸೂರ್ಯ ಕುಮಾರ್ ಯಾದವ್ ಡೆತ್ ಓವರುಗಳಲ್ಲಿ ತಡವರಿಸಿದ್ದು ಏಕೆ? ಇವುಗಳನ್ನೆಲ್ಲ ಈಗ ಕೂತು ರೇ ರೇ ರೇ …ಎಂದೆಲ್ಲ ಯೋಚನೆ ಮಾಡಿ ತಲೆ ಕೆಡಿಸುವುದರಿಂದ ಪಂದ್ಯದ ಫಲಿತಾಂಶ ಬದಲಾಗುವುದಿಲ್ಲ ಅಲ್ಲವೇ?
ಪರಿಪೂರ್ಣ ಬದುಕಿಗಿಂತ ಸಂತೃಪ್ತಿಯ ಬದುಕು ಹೆಚ್ಚು ಖುಷಿ ಕೊಡುತ್ತದೆ
ಎಷ್ಟೋ ಬಾರಿ ನಾವು ನಮ್ಮ ಸಾಧ್ಯತೆ, ಸಾಮರ್ಥ್ಯಗಳಿಗಿಂತ ನಮ್ಮ ಕೊರತೆಗಳ ಬಗ್ಗೆ ಹೆಚ್ಚು ಚಿಂತೆ ಮಾಡುತ್ತೇವೆ. ನಮ್ಮನ್ನು ಅತೀವವಾಗಿ ಪ್ರೀತಿಸುವ ಮಂದಿಗಿಂತ ನಮ್ಮನ್ನು ದ್ವೇಷ ಮಾಡುವ ಒಬ್ಬನೇ ವ್ಯಕ್ತಿಯ ಬಗ್ಗೆ ಯೋಚನೆ ಮಾಡುತ್ತಾ ನಿದ್ದೆ ಬಿಡುತ್ತೇವೆ. ನಮಗಿರುವ ನೂರಾರು ಸೌಕರ್ಯಗಳ ಬಗ್ಗೆ ಯೋಚನೆ ಮಾಡದೆ ಒಂದೆರಡು ಅನಾನುಕೂಲತೆಗಳ ಬಗ್ಗೆ ಯೋಚಿಸುತ್ತಾ ಡಿಪ್ರೆಸ್ ಆಗುತ್ತೇವೆ. ಅದಕ್ಕೆ ನಮ್ಮ ಹಿರಿಯರು ಪರಿಪೂರ್ಣ ಜೀವನವು ಕೇವಲ ಭ್ರಮೆ ಎಂದು ಹೇಳಿದರು. ಪರಿಪೂರ್ಣ ಬದುಕಿಗಿಂತ ನೆಮ್ಮದಿಯ ಬದುಕು ಹೆಚ್ಚು ಮೌಲ್ಯಯುತ ಎಂದು ಹೇಳಿದರು. ಸೋಲು ಮತ್ತು ಗೆಲುವನ್ನು ಸಮನಾಗಿ ಸ್ವೀಕಾರ ಮಾಡುವ ಸ್ಥಿತಪ್ರಜ್ಞ ಮನೋಭಾವ, ಬದುಕಿನಲ್ಲಿ ಆಗೋದೆಲ್ಲ ಒಳ್ಳೆದಕ್ಕೆ ಎಂಬ ಸಮಚಿತ್ತ, ಎಲ್ಲರನ್ನೂ ಪ್ರೀತಿಸುವ ಉದಾರತೆ ನಮಗೆ ನೆಮ್ಮದಿಯ ಬದುಕನ್ನು ಕಟ್ಟಿ ಕೊಡುತ್ತವೆ.
ಇದನ್ನೂ ಓದಿ: Raja Marga Column : ನಮ್ಮ ಕನ್ನಡ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳು ಯಾಕೆ ಹೀಗೆ?
ಪರಿಪೂರ್ಣ ಬದುಕು ಎಂದರೆ ಮರುಭೂಮಿಯ ಮರೀಚಿಕೆ (Mirage) ಇದ್ದ ಹಾಗೆ. ಎಷ್ಟು ದೂರಕ್ಕೆ ಪ್ರಯಾಣ ಮಾಡಿದರೂ ಅದು ನಮ್ಮ ಬಾಯಾರಿಕೆಯನ್ನು ತಣಿಸುವುದಿಲ್ಲ. ಅದಕ್ಕಿಂತ ನೆಮ್ಮದಿಯ ಬದುಕನ್ನು ಹುಡುಕುತ್ತಾ ಮುಂದಕ್ಕೆ ಹೋಗುವುದರಿಂದ ಮರುಭೂಮಿಯಲ್ಲಿಯೂ ಓಯಸಿಸ್ ದೊರೆಯಬಹುದು. ಏನಂತೀರಿ?
ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ