ಎಷ್ಟೋ ಜನರು ನಾನು ಅವರ ಹಾಗೆ ಇಲ್ಲ, ಇವರ ಹಾಗೆ ಯಾಕಿಲ್ಲ? ಎಂದೆಲ್ಲ ಕೊರಗುವುದನ್ನು ನಾನು ನೋಡಿದ್ದೇನೆ. ನಾವು ಯಾರ್ಯಾರ ಹಾಗೆ ಯಾಕಿರಬೇಕು? ನಾವು ನಾವೇ ಆಗಿರುವುದೇ ನಮ್ಮ ಸೃಜನಶೀಲತೆ (Creativity) ಅಲ್ಲವೇ? (Raja Marga Column)
ಅವಳಿ ಮಕ್ಕಳೂ ಭಿನ್ನವಾಗಿ ಇರುತ್ತವೆ!
ಒಂದೇ ತಂದೆ ತಾಯಿಯಲ್ಲಿ ಜನಿಸಿದ ಅವಳಿಯ ಮಕ್ಕಳು ಕೂಡ ಸಾಕಷ್ಟು ಭಿನ್ನತೆ (Difference in twins) ಹೊಂದಿರುತ್ತವೆ. ಆ ಭಿನ್ನತೆಗಳು ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಭಿನ್ನತೆಗಳು ಆಗಿರಬಹುದು.
ಆ ಅವಳಿ ಮಕ್ಕಳು ಕೂಡ ಒಂದೇ ಸನ್ನಿವೇಶಕ್ಕೆ ಬೇರೆ ಬೇರೆ ರೀತಿಯಲ್ಲಿ ವರ್ತಿಸುತ್ತಾರೆ ಅನ್ನೋದು ವೈಜ್ಞಾನಿಕವಾಗಿ ಸಾಬೀತಾಗಿದೆ. ನಾವು ಅವರ ಜೊತೆ ಸ್ವಲ್ಪ ಹೊತ್ತು ಕಳೆದರೆ ಆ ಮಕ್ಕಳಲ್ಲಿ ಇರುವ ದೈಹಿಕ, ಮಾನಸಿಕ, ಭಾವನಾತ್ಮಕ ಭಿನ್ನತೆಗಳನ್ನು ಪತ್ತೆ ಹಚ್ಚಬಹುದು. ಮುಂದೆ ಆ ಮಕ್ಕಳು ಬೆಳೆಯುತ್ತ ಹೋದ ಹಾಗೆ ಪರಿಸರದ ಪ್ರಭಾವದಿಂದ ಈ ಭಿನ್ನತೆಗಳು ಜಾಸ್ತಿ ಆಗುತ್ತಾ ಹೋಗುತ್ತವೆ. ನಮ್ಮ ಯೋಚನೆಗಳು ನಮ್ಮನ್ನು ರೂಪಿಸುತ್ತವೆ ಎಂದು ನಾನು ಹಲವು ಬಾರಿ ಹೇಳಿದ್ದೇನೆ. ಪ್ರತಿಯೊಬ್ಬರ ಯೋಚನೆ ಒಂದು ಸನ್ನಿವೇಶದಲ್ಲಿ ಒಂದೇ ರೀತಿ ಇರಲು ಸಾಧ್ಯವೇ ಇಲ್ಲ.
ಅವರವರ ಭಾವ, ಅವರವರ ಗ್ರಹಿಕೆ!
ಉದಾಹರಣೆಗೆ ಗೀತಾ ಅಂದರೆ ಕೆಲವರಿಗೆ ಭಗವದ್ಗೀತೆಯು ನೆನಪಾಗಬಹುದು. ಇನ್ನೂ ಕೆಲವರಿಗೆ ಯಾರೋ ಹುಡುಗಿ ನೆನಪಾದರೆ, ಇನ್ನೂ ಕೆಲವರಿಗೆ ಭಾವಗೀತೆಯೋ, ಇನ್ನೂ ಕೆಲವರಿಗೆ ಸಿನಿಮಾ ಗೀತೆಯೋ, ಜಾನಪದ ಗೀತೆಯೋ… ಹಾಗೆಲ್ಲ ನೆನಪಾಗಬಹುದು. ಇನ್ನೂ ಕೆಲವರಿಗೆ ಸಿನಿಮಾ ನಟಿ ಗೀತಾ ನೆನಪಾಗಬಹುದು. ಅದಕ್ಕೆ ಕಾರಣವು ಅವರವರ ಗ್ರಹಿಕೆ! ನಮ್ಮಲ್ಲಿ ಇರುವ ಗ್ರಹಿಕೆಗಳು ಮುಖ್ಯವಾಗಿ ನಮ್ಮ ವ್ಯಕ್ತಿತ್ವಗಳನ್ನು ರೂಪಿಸುತ್ತದೆ. ಎಲ್ಲರ ಗ್ರಹಿಕೆಗಳು ಎಲ್ಲ ಕಾಲದಲ್ಲೂ ಒಂದೇ ರೀತಿ ಇರಲು ಸಾಧ್ಯವೇ ಇಲ್ಲ!
ಒಬ್ಬರ ಹಾಗೆ ಒಬ್ಬರು ಇದ್ದಿದ್ದರೆ ಪ್ರಪಂಚ ಏನಾಗುತ್ತಿತ್ತು?
1. ಚೀನಾದವರ ಹಾಗೆ ಎಲ್ಲರ ಮುಖಗಳು ಹೆಚ್ಚು ಕಡಿಮೆ ಒಂದೇ ರೀತಿ ಇರುವ ಸ್ಥಿತಿಯನ್ನು ನೀವು ಕಲ್ಪಿಸಿಕೊಳ್ಳಿ. ಆಗ ನಮಗೆ ಜನರನ್ನು ಗುರುತು ಮಾಡುವುದೇ ಕಷ್ಟ ಆಗುತ್ತಿತ್ತು.
2. ಒಂದು ಸಿನಿಮಾದಲ್ಲಿ ನಾನು ನೋಡಿದ ಹಾಗೆ ಅವಳಿ ಹುಡುಗರು ಅವಳಿ ಹುಡುಗಿಯರನ್ನು ಮದುವೆ ಆಗಿ ಒಂದೇ ಮನೆಯಲ್ಲಿ ವಾಸ ಆಗಿದ್ದರೆ ಏನೆಲ್ಲ ಅವಾಂತರಗಳು ಆಗ್ತಾ ಇದ್ದವು!
3. ಒಂದು ಕಂಪೆನಿಯಿಂದ ಹೊರಬರುವ ಎಲ್ಲ ಕಾರುಗಳು ಒಂದೇ ಬಣ್ಣ, ಒಂದೇ ವಿನ್ಯಾಸ, ಒಂದೇ ತಾಂತ್ರಿಕತೆ ಇದ್ದರೆ ನಮಗೆ ಹೆಚ್ಚು ಆಯ್ಕೆಗಳು ದೊರೆಯುತ್ತ ಇರಲಿಲ್ಲ!
4. ಒಂದು ಶಾಲೆಯಲ್ಲಿ ಎಲ್ಲ ಮಕ್ಕಳು ನೋಡಲು ಒಂದೇ ರೀತಿ ಇದ್ದರೆ, ಯೋಚನೆಗಳು ಕೂಡ ಒಂದೇ ರೀತಿ ಇದ್ದರೆ, ಅಕ್ಷರಗಳು ಒಂದೇ ರೀತಿ ಇದ್ದರೆ, ಅಂಕಗಳು ಒಂದೇ ರೀತಿ ಇದ್ದರೆ….. ಹೀಗೆ ಯೋಚನೆ ಮಾಡುತ್ತಾ ಹೋದರೆ ನೀವು ಖಂಡಿತ ಬೆಚ್ಚಿ ಬೀಳುತ್ತೀರಿ!
ಭಗವಂತನ ಸೃಷ್ಟಿಯಲ್ಲಿ ಅತ್ಯಂತ ಅದ್ಭುತ ಎಂದರೆ ಅದು ಭಿನ್ನತೆಯೇ ಆಗಿದೆ!
ಡಾರ್ವಿನನ ವಿಕಾಸವಾದದಲ್ಲಿ ಕೂಡ ಎದ್ದು ಕಾಣುವ ಭಿನ್ನತೆ!
ಚಾರ್ಲ್ಸ್ ಡಾರ್ವಿನ್ ತನ್ನ ವಿಕಾಸ ವಾದದಲ್ಲಿ ಸ್ಪಷ್ಟವಾಗಿ ಹೇಳಿರುವ ಪ್ರಕಾರ ಮೊದಲು ಜೀವಿಗಳ ನಡುವೆ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆದು ಮುಂದೆ ಸಮರ್ಥರ ಉಳಿವು ನಡೆಯುತ್ತದೆ. ವಿಕಾಸದ ಒಂದು ಹಂತದಲ್ಲಿ ತಮ್ಮ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ಎದುರಾದಾಗ ಜೀವಿಗಳು ಉಳಿಯಲು ಆರಿಸಿದ್ದು ಒಂದೇ ವಿಧಾನ. ಅದು ಆಗಿನ ಪರಿಸರಕ್ಕೆ ಹೊಂದಿಕೊಳ್ಳುವುದು! ಈ ಹೊಂದಾಣಿಕೆಯ ರೇಸಲ್ಲಿ ನಿಂತಾಗ ಸಮರ್ಥ ಜೀವಿಗಳು ಭಿನ್ನ ಭಿನ್ನವಾದ ದಾರಿಗಳ ಮೂಲಕವೆ ಗೆದ್ದವು. ಅಸಮರ್ಥರು ಅಳಿದು ಹೋದರು.
ಡಾರ್ವಿನ್ ಶಕ್ತಿಶಾಲಿ ಜೀವಿಗಳ ಉಳಿವು ಎಂದು ಎಲ್ಲೂ ಹೇಳಿದ್ದೇ ಇಲ್ಲ. ಆತ ಹೇಳಿದ್ದು ಸಮರ್ಥರ ಉಳಿವು ಎಂದು!
ಅದಕ್ಕಾಗಿ ಜಿರಾಫೆ ಅಂತಹ ಪ್ರಾಣಿಗಳ ಕುತ್ತಿಗೆಯು ಉದ್ದ ಆಯಿತು. ಕುದುರೆಗಳ ಗೊರಸು ಗಟ್ಟಿ ಆಯಿತು. ಒಂಟೆಗಳ ಕಣ್ಣಿನ ರೆಪ್ಪೆಗಳು ರಫ್ ಆದವು. ನೀರಿನ ಸಂಗ್ರಹಕ್ಕಾಗಿ ಒಂಟೆಯ ಬೆನ್ನಿನ ಮೇಲೆ ಡುಬ್ಬಾ ಉಂಟಾಯಿತು. ಬೇರೆ ಬೇರೆ ಪ್ರಾಣಿಗಳು ಬೇರೆ ಬೇರೆ ಮಾರ್ಪಾಡು ಮಾಡಿಕೊಂಡ ಕಾರಣ ಜೀವಿಗಳಲ್ಲಿ ಭಿನ್ನತೆಗಳು ಉಂಟಾಗುತ್ತ ಹೋದವು ಎಂದು ಹಲವು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.
ಈ ಅನನ್ಯತೆ, ಭಿನ್ನತೆಗಳು ನಮ್ಮ ಬಂಡವಾಳ ಆಗಬೇಕು!
ನಮ್ಮ ಕ್ರಿಯೇಟಿವ್ ಸಾಮರ್ಥ್ಯಗಳು ಬೇರೆ ಬೇರೆ ಆದ ಕಾರಣ ಜಗತ್ತಿನಲ್ಲಿ ನಿರಂತರ ಸಂಶೋಧನೆಗಳು ನಡೆದವು. ಉದ್ದಿಮೆಗಳು ಬೆಳೆದವು. ಹೊಸ ಹೊಸ ಆವಿಷ್ಕಾರಗಳು ದೊರೆತವು. ಹೊಸ ಸಿನಿಮಾ, ಹೊಸ ಪುಸ್ತಕಗಳು, ಹೊಸ ಸಂಗೀತ, ಹೊಸ ನಾಟಕಗಳು, ಹೊಸ ಪೈಂಟಿಂಗ್, ಹೊಸ ವಿಡಿಯೋ, ಹೊಸ ಲೇಖಕರು……. ಹೀಗೆ ಹುಟ್ಟುತ್ತಾ ಹೋದರು. ಒಬ್ಬರಿಗಿಂತ ಒಬ್ಬರು ಭಿನ್ನವಾಗಿ ಯೋಚನೆ ಮಾಡಬೇಕಾದದ್ದು ಇಂದಿನ ಕಾಲದಲ್ಲಿ ಅನಿವಾರ್ಯ.
ಉದಾಹರಣೆಗೆ ಹಂಸಲೇಖ ಕೊಟ್ಟ ಮ್ಯೂಸಿಕ್‌ನ ಹಾಗೆ ಅಜನೀಶ್ ಲೋಕನಾಥ್ ಸಂಗೀತ ಕೊಡುತ್ತಾ ಹೋಗಿದ್ದರೆ ಇಂದು ಎಷ್ಟೋ ಮಧುರವಾದ ಹಾಡುಗಳು ನಮಗೆ ದೊರೆಯುತ್ತಲೆ ಇರಲಿಲ್ಲ! ಸಚಿನ್ ತೆಂಡೂಲ್ಕರ್ ಬ್ಯಾಟ್ ಮಾಡಿದ ರೀತಿ ಬ್ಯಾಟಿಂಗ್ ಮಾಡಿದ್ದರೆ ವಿರಾಟ್ ಕೊಹ್ಲಿ ಇಷ್ಟೊಂದು ಯಶಸ್ವೀ ಕ್ರಿಕೆಟರ್ ಆಗ್ತಾ ಇರಲಿಲ್ಲ!
ಜೀವನದಲ್ಲಿ ಸಕ್ಸಸ್ ಆಗಬೇಕು ಎಂದು ಹೊರಡುವವರು ಇಂದು ತಮ್ಮದೇ ಶೈಲಿಯನ್ನು ರೂಪಿಸಬೇಕಾದ ಅಗತ್ಯ ಇದೆ. ಇಂದು ರಾಜಕುಮಾರ್ ಶೈಲಿಯನ್ನು ಅನುಕರಣೆ ಮಾಡುವವರು ಜ್ಯೂನಿಯರ್ ರಾಜಕುಮಾರ್ ಆಗುತ್ತಾರೆ! ವಿಷ್ಣುವರ್ಧನ್ ಶೈಲಿಯನ್ನು ಅನುಕರಣೆ ಮಾಡುವವರು ಜ್ಯೂನಿಯರ್ ವಿಷ್ಣುವರ್ಧನ್ ಆಗುತ್ತಾರೆ ಹೊರತು ಒರಿಜಿನಲ್ ವಿಷ್ಣುವರ್ಧನ್ ಆಗುವುದಿಲ್ಲ!
ಯಾರೋ ನಿರ್ಮಿಸಿರುವ ರಾಜಮಾರ್ಗದಲ್ಲಿ ನಾವು ನಡೆಯುವುದಕ್ಕಿಂತ ನಾವೇ ಕಷ್ಟ ಪಟ್ಟು ನಿರ್ಮಿಸಿದ ನಮ್ಮ ಕಚ್ಚಾ ದಾರಿಯಲ್ಲಿ ನಡೆಯುವುದು ಹೆಚ್ಚು ಲಾಭದಾಯಕ!
ಇದನ್ನೂ ಓದಿ: Raja Marga Column : ಸತ್ಯ ಮತ್ತು ಸುಳ್ಳು; ಯಾವುದನ್ನು ಹೇಳಲೂ ಗಟ್ಸ್ ಬೇಕು?
ಅನುಕರಣೆಯಿಂದ ಯಾರೂ ಬ್ರಾಂಡ್ ಆಗುವುದಿಲ್ಲ!
ಇತ್ತೀಚೆಗೆ ಕರಾವಳಿಯ ಒಬ್ಬರು ಪ್ರಸಿದ್ಧರಾದ ಆರ್ಕೆಸ್ಟ್ರಾ ಗಾಯಕರು ಸಿನಿಮಾದಲ್ಲಿ ಹಾಡಬೇಕು ಎಂಬ ಆಸೆಯಿಂದ ಬೆಂಗಳೂರಿನ ಪ್ರಸಿದ್ಧ ಸಿನಿಮಾದ ಸಂಗೀತ ನಿರ್ದೇಶಕರ ಮನೆಗೆ ಹೋಗಿ ಅವಕಾಶವನ್ನು ಕೇಳಿದ್ದರು. ಆಗ ಆ ಸಂಗೀತ ನಿರ್ದೇಶಕರು ಅದೇ ಗಾಯಕರ ಧ್ವನಿಯನ್ನು ಕಂಪ್ಯೂಟರ್‌ನಲ್ಲಿ ಹಾಕಿ ಅವರ ಧ್ವನಿಯಲ್ಲಿ ಸ್ವಂತಿಕೆಯು ಮಿಸ್ ಆಗಿರುವುದನ್ನು ತೋರಿಸಿದರು.
ಅವರು ಆ ಗಾಯಕನಿಗೆ ಹೇಳಿದ ಕಿವಿ ಮಾತು “ಹುಡುಗ, ನೀನು ಬೇರೆಯವರ ಧ್ವನಿಯಲ್ಲಿ ಹಾಡುತ್ತ ಹಾಡುತ್ತ ನಿಮ್ಮ ಧ್ವನಿಯನ್ನು ಕಳೆದುಕೊಂಡಿದ್ದೀರಿ. ನಿಮ್ಮ ಒಳಗೆ ಕುಮಾರ್ ಸಾನು, ಸೋನು ನಿಗಮ್ ಎಲ್ಲ ಇದ್ದಾರೆ. ನಿಮ್ಮ ಧ್ವನಿಯೇ ಇಲ್ಲವಲ್ಲ” ಅಂದರಂತೆ!
ನಾನೂ ಶಾಲೆಯಲ್ಲಿ, ಕಾಲೇಜಿನಲ್ಲಿ ಹಾಡುವಾಗ ಎಸ್ ಪಿ ಬಾಲಸುಬ್ರಮಣ್ಯಂ ಶೈಲಿಯಲ್ಲಿ ಹಾಡಲು ಪ್ರಯತ್ನವನ್ನು ಮಾಡುತ್ತಿದ್ದೆ. ಆಗ ಬಹುಮಾನಗಳು ಬರ್ತಾನೆ ಇರಲಿಲ್ಲ. ಮುಂದೆ ನನಗೆ ಎರಡು ಸತ್ಯಗಳು ಗೊತ್ತಾದವು. ಒಂದು ನಾನು ತಲೆ ಕೆಳಗೆ ಕಾಲು ಮೇಲೆ ಮಾಡಿದರೂ ಎಸ್ ಪಿ ಸರ್ ಶೈಲಿಯನ್ನು ಕಾಪಿ ಮಾಡಲು ಸಾಧ್ಯವೇ ಇಲ್ಲ ಎಂದು! ಇನ್ನೊಂದು ಸತ್ಯ ಕೂಡ ಗೊತ್ತಾಯಿತು ಏನೆಂದರೆ ಎಸ್‌ಪಿ ಸರ್ ತಲೆ ಕೆಳಗೆ ಕಾಲು ಮೇಲೆ ಮಾಡಿ ಹಾಡಿದರೂ ನನ್ನ ಹಾಗೆ ಹಾಡಲು ಆಗುವುದೇ ಇಲ್ಲ ಎಂದು!
ಆನಂತರ ನನಗೆ ಬಹುಮಾನಗಳು ದೊರೆಯಲು ಆರಂಭ ಆದವು!