Site icon Vistara News

Raja Marga Column : ನಾನೇನೂ ಅಲ್ಲ, ರಾಮ ನೀನೇ ಎಲ್ಲ; ನಿರಹಂಕಾರ ಮೆರೆದ ಮಂದಿರ ಲೋಕಾರ್ಪಣೆ

Narendra Modi Rama lalla

ಶ್ರೀರಾಮಚಂದ್ರನ ಮಂದಿರದ ಲೋಕಾರ್ಪಣೆಯ (Rama Mandir Inauguration) ಕಾರ್ಯಕ್ರಮದಲ್ಲಿ (ಜನವರಿ 22, 2024) ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಮಾತುಗಳು ನಮಗೆ ನಿಜಕ್ಕೂ ಸ್ಫೂರ್ತಿ ಕೊಟ್ಟವು. ಅವರ ಭಾಷಣದಲ್ಲಿ ಎಲ್ಲಿಯೂ ಅಹಂಕಾರದ ಸ್ಪರ್ಶ ಇರಲಿಲ್ಲ. ‘ನಾನು ಮಾಡಿದೆ, ನಮ್ಮ ಸರಕಾರ ಮಾಡಿತು, ಎಲ್ಲವನ್ನೂ ನಾವು ಮಾಡಿದೆವು’ ಎಂಬ ಅರ್ಥದ ಮಾತುಗಳು ಒಂದೂ ಇರಲಿಲ್ಲ. ‘ರಾಮಚಂದ್ರನು ಎಲ್ಲವನ್ನೂ ಅವನಿಗೆ ಬೇಕಾದ ಹಾಗೆ ಮಾಡಿಸಿ ಕೊಂಡಿದ್ದಾನೆ’ ಎಂಬ ನಿರಹಂಕಾರ ಭಾವ (No Egoistic). ಇದು ಭಾರತದ ಇತಿಹಾಸದ ಸುವರ್ಣ ಅಕ್ಷರದಲ್ಲಿ ಬರೆಯಬೇಕಾದ ದಿನ ಎಂಬ ರೋಮಾಂಚನ ಇತ್ತು. ಮಂದಿರದ ಸಾಕ್ಷಾತ್ಕಾರಕ್ಕಾಗಿ ಬಲಿದಾನಗೈದ ರಾಮನ ಅಭಿಮಾನಿಗಳ ಬಗ್ಗೆ ಕೃತಜ್ಞತೆ ಇತ್ತು. ಐದು ಶತಮಾನಗಳ ಒಂದು ಆಗ್ರಹದ ಹೋರಾಟ ಒಂದು ತಾರ್ಕಿಕ ಗುರಿ ಮುಟ್ಟಿತಲ್ಲ ಎಂಬ ಸಾರ್ಥಕತೆಯ ಭಾವ ಇತ್ತು. ಮುಂದಿನ ದಿನಗಳಲ್ಲಿ ರಾಮನೇ ಎಲ್ಲರನ್ನೂ ಕೈಹಿಡಿದು ಮುನ್ನಡೆಸುತ್ತಾನೆ ಎಂಬ ಭರವಸೆ ಇತ್ತು. ರಾಮ ಕೇವಲ ಹಿಂದೂಗಳಿಗೆ ಮಾತ್ರವಲ್ಲ, ಎಲ್ಲರಿಗೂ ಸಂಬಂಧಪಟ್ಟವನು ಎಂಬ ಉದಾರತೆ ಇತ್ತು (Raja Marga Column).

ಇಡೀ ಭಾರತದ ಹೃದಯದ ಭಾವ ಹಾಗೇ ಇತ್ತು

ಐದು ಶತಮಾನಗಳ ಹೋರಾಟದ ನಂತರ ಹಿಂದೂಗಳಿಗೆ ದೊರೆತದ್ದು ಈ ರಾಮ ಜನ್ಮಭೂಮಿ. ಅದಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಸಾವಿರಾರು ಹಿಂದೂ ಹೋರಾಟಗಾರರು, ಕರಸೇವಕರು ಇಂದು ಸ್ಮರಿಸಲ್ಪಟ್ಟರು. ಅವರ ಮನೆಗಳಿಗೆ ರಾಮ ಮಂದಿರದ ಲೋಕಾರ್ಪಣೆಯ ಆಮಂತ್ರಣ ಮತ್ತು ಮಂತ್ರಾಕ್ಷತೆಗಳು ಬಂದಾಗ ಅವರ ನಿಕಟ ಸಂಬಂಧಿಗಳು ಅನುಭವಿಸಿದ ಅನುಭೂತಿಗೆ ಬೆಲೆ ಕಟ್ಟಲು ಸಾಧ್ಯವೇ ಇರಲಿಲ್ಲ. 1990ರ ಇಸವಿಯ ಕರಸೇವೆಯಲ್ಲಿ ಪಾಲುಗೊಂಡು ಹುತಾತ್ಮರಾದ ಕೋಲ್ಕತ್ತಾದ ಕೊಠಾರಿ ಸೋದರರ ಮನೆಗೆ ಅಯೋಧ್ಯೆಯ ಮಂತ್ರಾಕ್ಷತೆ ಬಂದಾಗ ಅವರ ಅಕ್ಕ ಜೋರಾಗಿ ಕಣ್ಣೀರು ಹಾಕಿದ್ದು ಮಾತ್ರವಲ್ಲ ತನ್ನ ಸೋದರರ ಫೋಟೋಗಳ ಮುಂದೆ ಆ ಆಮಂತ್ರಣವನ್ನು ಇಟ್ಟು ಫೋಟೋ ತೆಗೆದುಕೊಂಡು ಶೇರ್ ಮಾಡಿಕೊಂಡರು ಎಂಬಲ್ಲಿಗೆ ಅದು ಭುವನದ ಭಾಗ್ಯವೇ ಆಗಿತ್ತು.

ಮುಗಿಲು ಮುಟ್ಟಿದ ಸಂಭ್ರಮ

ಒಬ್ಬ ಅಜ್ಜಿಯು ರಾಮಮಂದಿರ ಲೋಕಾರ್ಪಣೆ ಆಗುವ ತನಕ ಊಟ ಮಾಡುವುದಿಲ್ಲ ಎಂದು ಸಂಕಲ್ಪ ಮಾಡಿದ್ದು 32 ವರ್ಷಗಳ ನಂತರ ನಿನ್ನೆ ಊಟ ಮಾಡಿದರು ಎನ್ನುವುದು ಎಷ್ಟೊಂದು ಅದ್ಭುತ. ಮತ್ತೊಂದು ಕಡೆಯಲ್ಲಿ ರಾಮ ಮಂದಿರದ ಉದ್ಘಾಟನೆ ಆಗುವ ತನಕ ಚಪ್ಪಲಿ ಹಾಕುವುದಿಲ್ಲ ಎಂದು ಒಬ್ಬ ಮುದುಕನ ಸಂಕಲ್ಪ. ಅವರು ನಿನ್ನೆ ಚಪ್ಪಲಿ ಹಾಕಿಕೊಂಡು ಸಂಭ್ರಮ ಪಟ್ಟರು. ಮತ್ತೊಬ್ಬಳು ಮುದುಕಿ ರಾಮನನ್ನು ನೋಡಬೇಕು ಎಂದು ಹತ್ತಾರು ಕಿಲೋಮೀಟರ್ ನಡೆದು ಕೊಂಡು ಬಂದು ನಿನ್ನೆಯ ದಿನ ರಾಮನ ದರ್ಶನ ಪಡೆದರು. ಮತ್ತೊಬ್ಬರು ಭಿಕ್ಷುಕಿ ತನ್ನ ಇಡೀ ಬದುಕಿನ ಸಂಪಾದನೆಯ ಎಲ್ಲ ಚಿಲ್ಲರೆ ಹಣವನ್ನು ಒಟ್ಟು ಮಾಡಿ ತಂದು ರಾಮನಿಗೆ ಅರ್ಪಣೆ ಮಾಡಿ ನಿನ್ನೆ ಕಣ್ಣೀರು ಸುರಿಸಿದ್ದಾರೆ. ಮತ್ತೊಬ್ಬರು ತನ್ನ ಮೂವತ್ತೆರಡು ವರ್ಷಗಳ ಮೌನ ವೃತವನ್ನು ಮುರಿದು ಖುಷಿ ಪಟ್ಟಿದ್ದಾರೆ. ಇಡೀ ದಿನ ಭಾರತದ ಬೇರೆ ಬೇರೆ ಕಡೆಗಳಲ್ಲಿ ಹುಟ್ಟಿದ ಹಲವು ಗಂಡು ಮಕ್ಕಳು ರಾಮ ಎಂಬ ಹೆಸರು ಪಡೆದುಕೊಂಡಿದ್ದಾರೆ. ಹೆಣ್ಣು ಮಕ್ಕಳು ಸೀತೆ, ಅಯೋಧ್ಯಾ, ಜಾನಕಿ ಮೊದಲಾದ ಹೆಸರು ಪಡೆದಿದ್ದಾರೆ. ಮುಂಬೈಯ ಒಂದು ಆಸ್ಪತ್ರೆಯಲ್ಲಿ ಮಂದಿರದ ಮುಹೂರ್ತಕ್ಕೆ ಹುಟ್ಟಿದ ಒಂದು ಗಂಡು ಮಗುವನ್ನು ಆಸ್ಪತ್ರೆಯ ಸಿಬ್ಬಂದಿ ರಾಮಚಂದ್ರ ಎಂದು ಕರೆದು ಪ್ರೀತಿಯ ಮಳೆ ಸುರಿಸಿದ್ದಾರೆ. ಇದಲ್ಲವೇ ಭುವನದ ಭಾಗ್ಯ?

ಮೈ ನಹೀಂ, ತೂ ಹಿ ರಾಮ್

ನಿನ್ನೆ ಕಂಡುಬಂದ ಅಷ್ಟೂ ದೃಶ್ಯಗಳು ಭಾರತೀಯರ ರಾಮ ಭಕ್ತಿಯ ಅನನ್ಯ ಅಭಿವ್ಯಕ್ತಿಗಳು. ಒಂದು ರೀತಿಯಲ್ಲಿ ಎಲ್ಲರೂ ಅನುಭವಿಸಿದ್ದು ಭಕ್ತಿಯ ಪರಾಕಾಷ್ಟೆಯನ್ನು. ನಿನ್ನೆಯ ದಿನ ಅಯೋಧ್ಯೆಯಲ್ಲಿ ಇದ್ದ ಅಷ್ಟೂ ಜನರ ತೀವ್ರ ಭಾವನೆಗಳಲ್ಲಿ ಇದ್ದದ್ದು ಒಂದೇ ಭಾವ – ಮೈ ನಹೀಂ. ತೂಹಿ ರಾಮ್ !

ರಾಮ್ ಲಲ್ಲಾನ ಮುಗ್ಧ ಮತ್ತು ಸೌಂದರ್ಯದ ಮೂರ್ತಿಯ ಮುಂದೆ ನಿಂತು, ಭಾರತದ ಪ್ರಧಾನಿ ಅದರ ಆಧಾರ ಶಿಲೆಗೆ ತಲೆಯನ್ನು ತಾಗಿಸಿ ದೀರ್ಘದಂಡ ನಮಸ್ಕಾರ ಮಾಡಿದರು ಅನ್ನೋದೇ ಭಾರತದ ಸಾಕ್ಷಿ ಪ್ರಜ್ಞೆ. ಟಿವಿಯ ಮುಂದೆ ಕುಳಿತು ಕೈ ಮುಗಿದು ಈ ಕಾರ್ಯಕ್ರಮವನ್ನು ನೋಡಿದ ಕೋಟ್ಯಾಂತರ ಮಂದಿಯ ಭಾವನೆಗಳೂ ಹಾಗೇ ಇದ್ದವು. ನಾವು ತ್ರೇತಾ ಯುಗದಲ್ಲಿ ಇದ್ದೇವೆ ಎನ್ನುವ ಫೀಲ್ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರಿಗೆ ಆರಂಭ ಆಗಿತ್ತು!

ಅಲ್ಲಿಗೆ ಭಾರತೀಯರಲ್ಲಿ ಇದ್ದ ಅಲ್ಪ ಸ್ವಲ್ಪ ಅಹಂಕಾರವನ್ನು ನೀಗಿಸಿದ ಕೀರ್ತಿಯು ರಾಮನಿಗೇ ಸಲ್ಲಬೇಕು. ರಾಮನಿಗೆ ಸಂಪೂರ್ಣ ಶರಣಾಗತಿಯ ತತ್ವ ಇಲ್ಲಿ ಗೆದ್ದಿತ್ತು.

ರಾಮ ಜನಸಾಮಾನ್ಯರ ದೇವರು

ಶ್ರವಣ ಬೆಳಗೊಳದ ಗೊಮ್ಮಟೇಶ್ವರ ಮೂರ್ತಿಯನ್ನು ಕೆತ್ತಿಸಿದ ಚಾವುಂಡರಾಯರಿಗೆ ಅದರ ಪ್ರತಿಷ್ಠಾಪನೆ ಆದ ನಂತರ ಒಂದಷ್ಟು ಅಹಂಕಾರ ಬಂದಿತ್ತಂತೆ. ನಾನು ಮಾಡಿದೆ ಎನುವ ಅಹಂ ಅದು! ಮುಂದೆ ಮಸ್ತಕಾಭಿಷೇಕ ಆದಾಗ ಗೊಮ್ಮಟನ ಪ್ರತಿಮೆಗೆ ಎಷ್ಟು ಕೊಡಪಾನ ಹಾಲು ಸುರಿದರೂ ಗೊಮ್ಮಟನ ಮೈ ಒಂದಿಷ್ಟೂ ಒದ್ದೆ ಆಗಲಿಲ್ಲ. ಅದೇ ಹೊತ್ತಿಗೆ ಒಬ್ಬಳು ಮುದುಕಿ ಭಕ್ತಿಯಿಂದ ಒಂದು ಬೊಗಸೆ ಹಾಲು ತಂದು ಹಾಕಿದಾಗ ಅದು ಗೊಮ್ಮಟನ ಇಡೀ ದೇಹವನ್ನು ಒದ್ದೆ ಮಾಡಿತ್ತು ಎಂಬ ಕತೆಯು ನನಗೆ ಥಟ್ಟನೆ ನೆನಪಾಯಿತು. ಜಗತ್ತು ಇಡೀ ಭಗವಂತನ ಸೃಷ್ಟಿ ಎಂದು ನಮಗೆ ಅರಿವಿದ್ದಾಗ ದೇವರ ಮುಂದೆ ನಿಂತಾಗ ನಮಗೆ ಅಹಂ ಬರಬಾರದು. ನಿನ್ನೆ ಅಯೋಧ್ಯೆಯಲ್ಲಿ ನಾನು ಎಂಬ ಪ್ರಜ್ಞೆಯು ಸುಟ್ಟುಹೋಗಿತ್ತು.

ಇದನ್ನೂ ಓದಿ : Raja Marga column: ಮತ್ತೆ ಮನೆಗೆ ಮರಳಿದ ಶ್ರೀರಾಮ; ಈ ಕ್ಷಣಕ್ಕೆ ಸಾಕ್ಷಿಯಾಗುವ ನಾವೇ ಧನ್ಯ!

Rama lalla Ayodhya

ದೇವಶಿಲ್ಪಿಗೂ ಅಹಂ ಬರಲಿಲ್ಲ

ರಾಮಲಲ್ಲಾನ ಮೂರ್ತಿ ಸುಂದರವಾಗಿ ಕೆತ್ತಿದ ಅರುಣ ಯೋಗಿರಾಜ್ ನಿನ್ನೆ ಟಿವಿ ಕ್ಯಾಮೆರಾಗಳ ಮುಂದೆ ಅದೇ ಭಾವನೆಯ ಮಾತು ಹೇಳಿದ್ದರು – ರಾಮನ ಮೂರ್ತಿ ರಾಮನೇ ನನ್ನ ಕೈಯಿಂದ ಮಾಡಿಸಿದ್ದಾನೆ. ನನ್ನದು ಏನೂ ಇಲ್ಲ. ನಾನಿಂದು ಜಗತ್ತಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ಎಂದು!

ರಾಮ ಲಲ್ಲಾನ ಕಲ್ಲಿನ ಮೂರ್ತಿಯ ಮುಖದಲ್ಲಿ ಶಿಲ್ಪಿ ಕೆತ್ತಿದ ಮುಗ್ಧತೆ, ನಗು ಮುಖ, ಪ್ರಶಾಂತತೆ ಮತ್ತು ದೈವಿಕ ಭಾವ ಎಲ್ಲವೂ ನಿನ್ನೆಯ ಕಾರ್ಯಕ್ರಮ ನೋಡಿದವರಿಗೆ ಅಚ್ಚರಿಯನ್ನು ಮೂಡಿಸಿವೆ. ಕೆಲವರಿಗೆ ತಿರುಪತಿಯ ಶ್ರೀನಿವಾಸ, ಇನ್ನೂ ಕೆಲವರಿಗೆ ಉಡುಪಿಯ ಕೃಷ್ಣ ನೆನಪಾಗಿದ್ದಾನೆ. ಇದು ರಾಮನೇ ಶಿಲ್ಪಿಯ ಮೂಲಕ ಮಾಡಿಸಿದ್ದಾನೆ ಅನ್ನುವುದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ!

ಮುಂದಿನ ಸಾವಿರಾರು ವರ್ಷಗಳ ಕಾಲ ಅಯೋಧ್ಯೆಯು ಭಾರತದ ಮಹೋನ್ನತ ಪುಣ್ಯಕ್ಷೇತ್ರಗಳಲ್ಲಿ ಒಂದಾಗಲಿದೆ ಅನ್ನುವುದೇ ಭರತವಾಕ್ಯ. ಇನ್ನು ಮುಂದೆ ಅಯೋಧ್ಯೆಯು ಮತ್ತೆ ಯುದ್ಧವಿಲ್ಲದ ನಗರಿ ಆಗಲಿದೆ ಅನ್ನೋದು ಕೂಡ ಭರತವಾಕ್ಯ.

Exit mobile version