Raja Marga Column : ಮತ್ತೆ ಫೆಬ್ರವರಿ 14 ಬಂದಿದೆ. ನಿಜವಾದ ಪ್ರೀತಿಯ ಅನುಭೂತಿಯಲ್ಲಿ ಮಿಂದೆದ್ದ ನೂರಾರು ಜೋಡಿಗಳಿಗೆ ಪ್ರೇಮಿಗಳ ದಿನದ ಶುಭಾಶಯಗಳು (Happy Valentines day). ಯುವ ಪ್ರೇಮಿಗಳ ನೂರಾರು ಬಿಸಿ ಉಸಿರುಗಳು, ಬಿಗಿಯಪ್ಪುಗೆಗಳು, ಭಾವುಕ ಪ್ರೊಪೋಸಲ್‌ಗಳು, ಮುಂದೆ ಬ್ರೇಕ್ ಅಪ್ ಆಗಿ ಮುಗಿದೇ ಹೋಗುವ ಕೆಲವು ಕ್ಷಣಿಕ ಪ್ರೀತಿಗಳು…. ಇವೆಲ್ಲದರ ನಡುವೆ ನನಗೆ ಅನ್ನಿಸಿದ ಕೆಲವು ಸಂಗತಿಗಳನ್ನು ಇಲ್ಲಿ ಬರೆದಿದ್ದೇನೆ. ಈ ದೃಶ್ಯಗಳು ನನ್ನ ಮುಂದೆ ಇರುವ ನಿಜವಾದ ಪ್ರೀತಿಯ ಪರಾಕಾಷ್ಠೆಗಳು. ಕೇವಲ ಹಸಿ ಬಿಸಿ ಪ್ರೀತಿಗಳೆ ನಿಜವಾದ ಪ್ರೀತಿ (Original Love) ಎಂದು ಭ್ರಮೆಯಲ್ಲಿ ಇರುವ ನನ್ನ ಯುವ ಗೆಳೆಯರಿಗೆ ಈ ಲೇಖನ ಅರ್ಪಣೆ.
Raja Marga Column : ದೃಶ್ಯ1. ರೋಹಿಡೇಕರ್ ಕುಟುಂಬ
ಖ್ಯಾತ ಶಿಕ್ಷಣ ತಜ್ಞ ರೋಹಿಡೇಕರ್ ತನ್ನ ಎಂಬತ್ತೈದನೆಯ ವಯಸ್ಸಿನಲ್ಲಿ ತಮ್ಮ ಪತ್ನಿಯನ್ನು ಕಳೆದುಕೊಂಡಿದ್ದರು.
ಅಂದಾಜು 60 ವರ್ಷಗಳ ಸಾರ್ಥಕ ದಾಂಪತ್ಯ ಅವರದ್ದು. ತನ್ನ ಹೆಂಡತಿಯ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ಆಗುವಾಗ ರೋಹಿಡೇಕರ್ ಸರ್ ದುಃಖವನ್ನು ತಡೆಯಲು ಆಗದೆ ಗಟ್ಟಿಯಾಗಿ ಅತ್ತುಬಿಟ್ಟರು. ಆಗ ಅವರ ಮಕ್ಕಳು ‘ಏನಪ್ಪ, 55 ವರ್ಷ ಜೊತೆಯಾಗಿ ಬದುಕಿದ್ದೀರಿ. ಮಕ್ಕಳು, ಮೊಮ್ಮಕ್ಕಳು ಎಲ್ಲವನ್ನೂ ಕಂಡಿದ್ದೀರಿ. ಮತ್ತೆ ಯಾಕೆ ಅಳುವುದು?’ ಎಂದು ತಮಾಷೆ ಮಾಡಿದ್ದರಂತೆ. ಆಗ ರೋಹಿಡೇಕರ್ ಸರ್ ‘ನನ್ನ ದುಃಖ ನಿಮಗೆ ಅರ್ಥ ಆಗಲು ಸಾಧ್ಯವೇ ಇಲ್ಲ. ನೀವು ನಿಮ್ಮ ಅಮ್ಮನನ್ನು ಕಳೆದುಕೊಂಡಿದ್ದೀರಿ. ನೀವು ಕಳೆದು ಹೋದ ಅಮ್ಮನನ್ನು ಬೇರೆ ಯಾವ ಹೆಂಗಸಿನಲ್ಲಿ ಕೂಡ ಕಾಣಬಹುದು. ಆದರೆ ನಾನು ಕಳೆದುಕೊಂಡದ್ದು ಹೆಂಡತಿಯನ್ನು. ಆಕೆಯನ್ನು ನಾನು ಬೇರೆ ಯಾವ ಹೆಂಗಸಿನಲ್ಲಿಯೂ ಹುಡುಕಲು ಸಾಧ್ಯವೇ ಇಲ್ಲ! ನನ್ನ ಹೆಂಡತಿ ಮತ್ತೆ ಬರಲು ಸಾಧ್ಯವೇ ಇಲ್ಲ.’ ಎಂದು ಗಟ್ಟಿಯಾಗಿ ಅಳಲು ಆರಂಭ ಮಾಡಿದ್ದರು.
Raja Marga Column : ದೃಶ್ಯ 2. ಐಪಿಎಸ್ ಅಧಿಕಾರಿ ಬದ್ರುದ್ದೀನ್ ಕುಟುಂಬ
ಬೆಂಗಳೂರಿನಲ್ಲಿ ಬದ್ರುದ್ದೀನ್ ಎಂಬ ಒಬ್ಬ ಐಪಿಎಸ್ ಅಧಿಕಾರಿ ಇದ್ದರು. ಅವರು ಪ್ರೀತಿ ಮದುವೆಯಾದದ್ದು ಸರಸ್ವತಿ ಎಂಬ ಒಬ್ಬ ಹಿಂದೂ ಹುಡುಗಿಯನ್ನು. ಸುಮಾರು ವರ್ಷ ಅವರು ಜೊತೆಯಾಗಿ ಅತ್ಯಂತ ಪ್ರೀತಿಯಿಂದ ಬದುಕಿದ್ದರು. ಒಮ್ಮೆ ಏನಾಯಿತು ಎಂದರೆ ಹೆಂಡತಿಗೆ ಯಾವುದೋ ಒಂದು ಜ್ವರ ಬಂದು ತುಂಬಾ ತೊಂದರೆ ಕೊಟ್ಟಿತು. ವೈದ್ಯರು ಕೊಟ್ಟ ಇಂಜೆಕ್ಷನ್ ಎಫೆಕ್ಟ್ ಆಗಿ ಹೆಂಡತಿಯ ಸೊಂಟದ ಕೆಳಗಿನ ಭಾಗ ಪೂರ್ತಿ ಪಾರಲೈಸ್ ಆಯ್ತು. ತುಂಬಾ ಕ್ರಿಯಾಶಾಲಿ ಆಗಿದ್ದ ಆಕೆ ಎಲ್ಲದಕ್ಕೂ ಪರಾವಲಂಬಿ ಆಗಬೇಕಾಯಿತು. ಆದರೆ ಗಂಡನ ಪ್ರೀತಿ ಒಂದಿಷ್ಟೂ ಕಡಿಮೆ ಆಗಿಲ್ಲ ಅನ್ನೋದು ಆಶ್ಚರ್ಯ.
ಅವರು ತಮ್ಮ ಹೆಂಡತಿಯನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ಎಲ್ಲ ಕಾರ್ಯಕ್ರಮಗಳಿಗೂ ಬರುತ್ತಿದ್ದರು. ಮದುವೆ ಮೊದಲಾದ ಕಾರ್ಯಕ್ರಮಗಳಿಗೂ ತನ್ನ ಹೆಂಡತಿಯನ್ನು ಎತ್ತಿಕೊಂಡೇ ಅವರು ಬರುತ್ತಿರುವ ದೃಶ್ಯ ನೂರಾರು ಮಂದಿಗೆ ಪ್ರೇರಣೆ ಕೊಡುತ್ತಿತ್ತು. ಅವರ ಪ್ರೀತಿಗೆ ಜಯವಾಗಲಿ.
ದೃಶ್ಯ 3. ಪ್ರಣವ್ ಭಟ್ ಕುಟುಂಬ
ಆತ ಒಬ್ಬ ಯಶಸ್ವೀ ಅಧ್ಯಾಪಕ. ಸಾಂಪ್ರದಾಯಿಕವಾಗಿ ಮನೆಯವರು ಹುಡುಗಿ ನೋಡಿ ಅದ್ದೂರಿಯಾಗಿ ಮದುವೆ ಆದರು. ಆದರೆ ಮುಂದೆ ಅವರ ಕಥೆ ಕನ್ನಡದ ‘ಮಿಲನ’ ಸಿನಿಮಾದ ಕಥೆಯ ತರ ಆಗಿ ಹೋಯಿತು. ಮೊದಲ ರಾತ್ರಿ ಆ ಹುಡುಗಿ ಆವರ ಕಣ್ಣಲ್ಲಿ ಕಣ್ಣಿಟ್ಟು ‘ನನಗೆ ಬೇರೆ ಹುಡುಗನ ಮೇಲೆ ಪ್ರೀತಿ ಇದೆ. ನನಗೆ ಡೈವೋರ್ಸ್ ಕೊಡಿ!’ ಎಂದಾಗ ಅವರು ಭೂಮಿಗೆ ಇಳಿದು ಹೋದರು.
‘ನನ್ನ ಮಾತನ್ನು ಯಾರೂ ಕೇಳದೇ ನನಗೆ ಮದುವೆ ಮಾಡಿದ್ದಾರೆ. ನಾನು ನಿಮ್ಮ ಜೊತೆ ಸುಖವಾಗಿ ಬದುಕಲು ಸಾಧ್ಯವೇ ಇಲ್ಲ. ನನ್ನ ಅನಿವಾರ್ಯತೆಯನ್ನು ಅರ್ಥ ಮಾಡಿಕೊಳ್ಳಿ ‘ಎಂದು ಕೇಳಿದಾಗ ಅವರು ಏನು ಮಾಡಬೇಕು?
ಅವರು ಡೈವೋರ್ಸ್ ಕೊಟ್ಟರು. ಮುಂದೆ ಅವಳ ಮದುವೆಗೆ ಕೂಡ ಸಹಾಯ ಮಾಡಿದರು. ಹಾಗೆಯೇ ಮುಂದೆ ನಾಲ್ಕೈದು ವರ್ಷಗಳ ಕಾಲ ನಗುವಿನ ಮುಖವಾಡ ಹಾಕಿಕೊಂಡು ಓಡಾಡಿದರು. ಕೊನೆಗೆ ಗಟ್ಟಿಯಾದ ನಿರ್ಧಾರ ಮಾಡಿಕೊಂಡು ಒಬ್ಬ ವಿಧವೆಗೆ ಬಾಳು ಕೊಟ್ಟರು. ಅದು ಅಂತರ್ಜಾತೀಯ, ಅಂತರ್ ಧರ್ಮೀಯ ವಿವಾಹ ಆಗಿತ್ತು.
ಈಗ ಅವರ ಮನೆಯಲ್ಲಿ ಎರಡು ಪ್ರತ್ಯೇಕವಾದ ದೇವರ ಕೋಣೆಗಳು ಇವೆ. ಅವರ ಆರಾಧನಾ ಪದ್ಧತಿ ಬೇರೆ ಬೇರೆ ಇದೆ. ಆದರೆ ಅವರ ಪ್ರೀತಿ ಎಲ್ಲವನ್ನೂ ಗೆದ್ದು ನಿಂತಿದೆ.
ಆಕೆಗೆ ಒಬ್ಬ ಮಗಳು ಇದ್ದಾರೆ. ಆ ಮಗಳನ್ನು ಈ ಅಪ್ಪ ತುಂಬಾ ಪ್ರೀತಿಯಿಂದ ಸಾಕಿದ್ದಾರೆ. ಮಗಳು ಎಂದು ಜಂಬದಲ್ಲಿ ಕರೆಯುತ್ತಾರೆ. ಈಗ ಆಕೆ ಎಂಜಿನಿಯರಿಂಗ್ ಓದಿ ಕಾರ್ಪೊರೇಟ್ ಕಂಪೆನಿ ಜಾಬ್ ಸೇರಿದ್ದಾರೆ. ಅವಳಿಗೆ ಮದುವೆ ಮಾಡಲು ಆ ಶಿಕ್ಷಕರು ಬಹಳ ಪ್ರೀತಿಯಿಂದ ಪ್ರಪೋಸಲ್ ಹುಡುಕುತ್ತಿದ್ದಾರೆ.
ದೃಶ್ಯ 4- ಕಾಂಬ್ಳೆ ಕುಟುಂಬ
ಗಂಡ ಒಂದು ದೊಡ್ಡ ಕಾರ್ಪೊರೇಟ್ ಕಂಪೆನಿಯ ಬಹು ದೊಡ್ಡ ಅಧಿಕಾರಿ. ಹೆಸರಿನ ಮುಂದೆ ದೊಡ್ಡ ಡಿಗ್ರೀಗಳ ಮೆರವಣಿಗೆ ಇದೆ. ಅವರು ಮದುವೆ ಆದದ್ದು ತನ್ನ ಮಾವನ ಮಗಳನ್ನು. ಆಕೆ ಮದುವೆ ಆಗುವಾಗ ಕೇವಲ ಹೆಬ್ಬೆಟ್ಟು ! ಕಾಂಬ್ಳೆ ಸರ್ ಅವರಿಗೆ ಎಲ್ಲವೂ ಗೊತ್ತಿದ್ದರೂ ಪ್ರೀತಿ ಮಾಡಿ ಮದುವೆ ಆದರು. ಮುಂದೆ ಹೆಂಡತಿಯನ್ನು ಚೆನ್ನಾಗಿ ಓದಿಸುವ ಸಂಕಲ್ಪ ಮಾಡಿದರು. ಆಕೆಗೆ ಎಲ್ಲಿಯೂ ಕೀಳರಿಮೆ ಬಾರದ ಹಾಗೆ ನೋಡಿಕೊಂಡರು. ತಾವು ಹೋಗುವ ಎಲ್ಲ ಕಡೆಗೂ ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಿದ್ದರು. ಆಕೆಗೆ ಮನೆಯಲ್ಲಿಯೇ ಒಬ್ಬ ಶಿಕ್ಷಕಿಯನ್ನು ನೇಮಕ ಮಾಡಿ ಇಂಗ್ಲಿಷ್ ಮಾತನಾಡಲು ಕಲಿಸಿದರು. ಒಂದೊಂದೇ ಪರೀಕ್ಷೆಗಳನ್ನು ಬರೆಸಿದರು. ತಾವೇ ತರಬೇತು ಕೊಟ್ಟರು. ಸಂಗೀತ ಕ್ಲಾಸ್ ವ್ಯವಸ್ಥೆ ಮಾಡಿದರು. ಮೊನ್ನೆ ಮೊನ್ನೆ ಕಾಂಬ್ಳೆ ಹೆಂಡತಿ ಸ್ನಾತಕೋತ್ತರ ಪದವಿ ಪೂರ್ತಿ ಮಾಡಿದ ವರದಿ ಬಂದಿದೆ!
ಕಾಂಬ್ಳೆ ದಂಪತಿಗಳು ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿದ್ದಾರೆ. ಈಗ ಆಕೆ ಗಂಡನ ಆಫೀಸಿನಲ್ಲಿಯೇ ಒಳ್ಳೆಯ ಉದ್ಯೋಗ ಮಾಡುತ್ತಿದ್ದಾರೆ. ತುಂಬಾ ಅನ್ಯೋನ್ಯ ಆಗಿದ್ದಾರೆ.
ಇದನ್ನೂ ಓದಿ: Raja Marga Column : ಭಿಕ್ಷುಕ, ಚಿನ್ನದ ಬಟ್ಟಲು ಮತ್ತು ಮಾನಸಿಕ ಬಡತನ!
ದೃಶ್ಯ 5. ಪ್ರವೀಣ್ ಕುಟುಂಬ
ಗಂಡ ಒಳ್ಳೆಯ ಉದ್ಯೋಗದಲ್ಲಿ ಇದ್ದವರು. ಹೆಂಡತಿ ಕೂಡ ವಿದ್ಯಾವಂತೆ. ಆದರೆ ಮುಂದೆ ಆಕೆಗೆ ಆರೋಗ್ಯ ಏರುಪೇರು ಆಗಿ ಎರಡೂ ಕಣ್ಣು ಕುರುಡಾಗಿ ಹೋಯಿತು. ಒಂದೆರಡು ವರ್ಷಗಳ ಒಳಗೆ ಕಿಡ್ನಿ ಡ್ಯಾಮೇಜ್ ಆಯಿತು. ಇನ್ನೂ ಹತ್ತಾರು ಆರೋಗ್ಯ ಸಮಸ್ಯೆಗಳು ಅಮರಿದವು. ಆಕೆ ಎಲ್ಲ ಕೆಲಸಗಳಿಗೂ ಬೇರೆಯವರನ್ನು ಅವಲಂಬನೆ ಮಾಡಬೇಕಾದ ಪ್ರಸಂಗ ಬಂದಾಗ ಗಂಡ ಕೆಲಸಕ್ಕೆ ರಾಜೀನಾಮೆ ಕೊಟ್ಟರು. ಆಸ್ಪತ್ರೆಯ ಬಿಲ್ ದೊಡ್ದದು ಬಂದ ಕಾರಣ ಅವರ ಉಳಿತಾಯದ ಎಲ್ಲ ದುಡ್ಡು ಖಾಲಿ ಆಯಿತು. ಕೇವಲ ಪೆನ್ಶನ್ ದುಡ್ಡು ಮಾತ್ರ ಕೈಗೆ ಬರುತ್ತಿತ್ತು.
ಇದನ್ನೂ ಓದಿ : Valentines Day: ಕೇಳಿ ಪ್ರೇಮಿಗಳೇ, ಇಲ್ಲಿದೆ ಗುಡ್‌ನ್ಯೂಸ್! ಈ ವಾರ ಪ್ರತಿದಿನವೂ ಪ್ರೇಮಿಗಳ ಹಬ್ಬವೇ!
ಇಷ್ಟೆಲ್ಲ ಆದರೂ ಪ್ರವೀಣ್ ಸರ್ ಅವರಿಗೆ ಹೆಂಡತಿಯ ಮೇಲೆ ಇರುವ ಪ್ರೀತಿ ಒಂದಿಂಚೂ ಕಡಿಮೆ ಆಗಲಿಲ್ಲ. ಒಂದಿಷ್ಟೂ ಗೊಣಗದೆ ಹೆಂಡತಿಯ ಸೇವೆಗೆ ನಿಂತರು. ಮನೆಯ ಎಲ್ಲ ಕೆಲಸವನ್ನೂ ಕಲಿತು ಮಾಡಿದರು. ಹೆಂಡತಿಯ ಎರಡೂ ಕಿಡ್ನಿ ಡ್ಯಾಮೇಜ್ ಆದಾಗ ತನ್ನದೇ ಒಂದು ಕಿಡ್ನಿ ದಾನ ಮಾಡಿದರು. ಮೊನ್ನೆ ಮೊನ್ನೆ ಹೆಂಡತಿಯನ್ನು ಕರೆದುಕೊಂಡು ಒಂದು ತಿಂಗಳ ವಿದೇಶದ ಯಾತ್ರೆ ಮುಗಿಸಿಕೊಂಡು ಬಂದರು.
‘ನನ್ನ ಎರಡನೇ ಹನಿಮೂನ್ ಮುಗಿಸಿಕೊಂಡು ಬಂದೆ ‘ಎಂದು ಸ್ಟೇಟಸ್ ಹಾಕಿದ್ದಾರೆ.
ಈ ಸಂಗತಿಗಳನ್ನು ನೋಡಿದಾಗ ನಿಮಗೆ ಹಸಿ ಬಿಸಿ ಪ್ರೀತಿ ಮಾತ್ರ ನಿಜವಾದ ಪ್ರೀತಿ ಅನ್ನಿಸುತ್ತಿದೆಯಾ?
Good morning 🖤🦋#ValentinesDay pic.twitter.com/JWGW96rWsE
— 🖤𝓳𝓪𝓪𝓷𝓾 (@itsmejaanu) February 14, 2024