Site icon Vistara News

Raja Marga Column : ಸತ್ಯ ಮತ್ತು ಸುಳ್ಳು; ಯಾವುದನ್ನು ಹೇಳಲೂ ಗಟ್ಸ್ ಬೇಕು?

Satyameva Jayate Raja Marga

‘ಸತ್ಯಮೇವ ಜಯತೇ’ (Sathyameva Jayathe)- ಇದು ನಮ್ಮ ದೇಶದ ಘೋಷ ವಾಕ್ಯ. ಅದನ್ನು ಮಂಡೂಕ ಉಪನಿಷತ್‌ನಿಂದ (Mandooka Upanisath) ಆರಿಸಿಕೊಳ್ಳಲಾಗಿದೆ. ಅದು ಪೂರ್ಣವಾಕ್ಯ ಅಲ್ಲ. ಅದರ ಪೂರ್ಣ ಪಾಠ – ಸತ್ಯಮೇವ ಜಯತೇ, ನಾನೃತಮ್ ಎಂದಿದೆ. ಅದರ ಅರ್ಥ ಸತ್ಯವೇ ಗೆಲ್ಲುತ್ತದೆ. ಸುಳ್ಳು ಅಲ್ಲ ಎಂದಾಗಿದೆ. ಭಾರತದ ಎಲ್ಲ ಪುರಾಣಗಳು, ಎಲ್ಲ ಮಹಾಕಾವ್ಯಗಳು, ಎಲ್ಲ ಉಪನಿಷತ್ತುಗಳು, ಎಲ್ಲ ಸಾಹಿತ್ಯಗಳು ಎಲ್ಲವನ್ನೂ ಮಥಿಸಿ ಕೊನೆಗೆ ಪಡೆದ ಬೆಣ್ಣೆಯನ್ನು ಸತ್ಯ ಎಂದು ನಮ್ಮ ಪೂರ್ವಜರು ಕರೆದರು. ನಮ್ಮ ದೇಶದ ಎಲ್ಲ ಪುರಾಣಗಳು ನಿಂತಿರುವುದು ಸತ್ಯ ಎಂಬ ಗಟ್ಟಿಯಾದ ನೆಲೆಗಟ್ಟಿನ ಮೇಲೆ. ಸತ್ಯವೃತಕ್ಕಾಗಿ ಎಲ್ಲವನ್ನೂ ಕಳೆದುಕೊಂಡ ಹರಿಶ್ಚಂದ್ರ ನಮಗೆ ಆದರ್ಶ ಆಗಿದ್ದಾನೆ. ಸತ್ಯ ಮಾತಿಗೆ ತಪ್ಪಿ ನಡೆಯಲಾರೆ ಎಂದು ಹೇಳಿದ ಪುಣ್ಯ ಕೋಟಿಯು ನಮಗೆ ದೇವತೆ ಆದಳು (Raja Marga Column).

ಗಾಂಧೀಜಿಯವರ ಹೋರಾಟದ ಒಂದು ಆಯುಧ ಅದು ಸತ್ಯ

ಗಾಂಧೀಜಿಯವರು ತಮ್ಮ ಸ್ವಾತಂತ್ರ್ಯದ ಹೋರಾಟವನ್ನು ಸಂಘಟನೆ ಮಾಡಿದ್ದು ಸತ್ಯ, ಅಹಿಂಸೆ, ತ್ಯಾಗ ಮೊದಲಾದ ಭಾರತೀಯ ಮೌಲ್ಯಗಳ ಮೇಲೆ. ಅದರಲ್ಲಿಯೂ ಗಾಂಧೀಜಿಯವರ ಹೋರಾಟದ ಪುಟ ಪುಟಗಳಲ್ಲಿ ನಮಗೆ ಗೋಚರ ಆದದ್ದು ಅದೇ ಸತ್ಯನಿಷ್ಠೆ. ಅದಕ್ಕಾಗಿ ಗಾಂಧೀಜಿಯವರ ಆತ್ಮಚರಿತ್ರೆಯ ಪುಸ್ತಕದ ಹೆಸರು – My Experiments with truth (ಸತ್ಯಾನ್ವೇಷಣೆ). ಸತ್ಯವು ಭಾರತದ ಅತೀ ಶ್ರೇಷ್ಠ ದಾರ್ಶನಿಕ ಮೌಲ್ಯ ಎಂದು ಗಾಂಧೀಜಿ ಹೇಳಿದ್ದಾರೆ.

ಎಷ್ಟೋ ಬಾರಿ ನಮಗೆ ಅನ್ನಿಸಬಹುದು….

ಸತ್ಯಕ್ಕೆ ಎಷ್ಟೋ ಬಾರಿ ಹಿನ್ನಡೆ ಆದ ಹಾಗೆ ನಮಗೆ ಅನ್ನಿಸಬಹುದು. ಎಷ್ಟೋ ಬಾರಿ ಸತ್ಯದ ದಾರಿಯಲ್ಲಿ ಕಲ್ಲು ಮುಳ್ಳುಗಳೆ ಇವೆಯಲ್ಲ ಎಂದು ನಮಗೆ ಅನ್ನಿಸಬಹುದು. ಎಷ್ಟೋ ಬಾರಿ ಸುಳ್ಳು ಹೇಳಿ ಸಾಮ್ರಾಜ್ಯಗಳನ್ನು ಕಟ್ಟಬಹುದು. ಎಷ್ಟೋ ಬಾರಿ ಸುಳ್ಳು ಹೇಳಿ ಚುನಾವಣೆ ಗೆದ್ದು ಅಧಿಕಾರಕ್ಕೂ ಬರಬಹುದು. ಎಷ್ಟೋ ಬಾರಿ ಸತ್ಯವು ಕಹಿ ಅನುಭವ ನೀಡಬಹುದು. ಎಷ್ಟೋ ಬಾರಿ ಸತ್ಯವು ಸಂಬಂಧಗಳನ್ನು ಕೆಡಿಸಬಹುದು. ಎಷ್ಟೋ ಬಾರಿ ಸತ್ಯ ಹೇಳುವವರು ನೂರಾರು ಅಗ್ನಿ ಪರೀಕ್ಷೆಗಳನ್ನು ಎದುರಿಸಬಹುದು. ಎಷ್ಟೋ ಬಾರಿ ಆಕರ್ಷಕ ಸುಳ್ಳುಗಳು ಎಂಬ ಮೋಡವು ಸತ್ಯವೆಂಬ ಪ್ರಖರ ಸೂರ್ಯನನ್ನು ಮರೆ ಮಾಡಬಹುದು. ಎಷ್ಟೋ ಬಾರಿ ಸುಳ್ಳು ಸತ್ಯದ ಮೇಲೆ ಸವಾರಿ ಮಾಡಿದ ಹಾಗೆ ನಮಗೆ ಅನ್ನಿಸಬಹುದು. ಆದರೆ ಇವೆಲ್ಲವೂ ತಾತ್ಕಾಲಿಕ ಆದವುಗಳು. ಮೋಡಗಳು ಕಣ್ಮರೆಯಾದ ನಂತರ ಪ್ರಜ್ವಲಿಸುವುದು ಸೂರ್ಯನೇ. ಸುಳ್ಳುಗಳ ತಾತ್ಕಾಲಿಕ ಪೊರೆ ಕಳಚಿದಾಗ ಉಳಿಯುವುದು ಸತ್ಯ ಮತ್ತು ಸತ್ಯವೇ.

ಸುಳ್ಳು ಅಥವಾ ಸತ್ಯ – ಯಾವುದನ್ನೂ ಹೇಳಲು ಗಟ್ಸ್ ಬೇಕು?

ಪ್ರಿಯಂ ಬ್ರೂಯಾತ್, ಸತ್ಯಂ ಬ್ರುಯಾತ್, ನ ಬ್ರೂಯಾತ್ ಸತ್ಯಮಪ್ರಿಯಂ – ಎನ್ನುತ್ತದೆ ಮಹಾ ಭಾರತದ ವಾಕ್ಯ. ಪ್ರಿಯವಾದದ್ದನ್ನು ಹೇಳು, ಸತ್ಯವನ್ನು ಹೇಳು, ಆದರೆ ಅಪ್ರಿಯ ಸತ್ಯವನ್ನು ಹೇಳಬೇಡ ಎನ್ನುವುದು ಅದರ ಅರ್ಥ.

ಅರ್ಧ ಸತ್ಯ ಎನ್ನುವುದು ಸುಳ್ಳಿಗೆ ಸಮ. ಅಪ್ರಿಯ ಸತ್ಯವನ್ನು ಹೇಳುವುದರಿಂದ ಸಂಬಂಧಗಳು ಕೆಡಬಹುದು ಎಂಬ ಕಾರಣಕ್ಕೆ ಅದನ್ನು ನುಡಿಯಬೇಡ ಎಂದು ದ್ವಾಪರ ಯುಗದಲ್ಲಿ, ಅಂದರೆ ಮಹಾಭಾರತದ ಕಾಲದಲ್ಲಿ ಹೇಳಿರಬಹುದು. ಅದು ಆ ಕಾಲಕ್ಕೆ ಸರಿ ಇರಬಹುದು. ಆದರೆ ನನ್ನ ಅನುಭವಗಳ ಪ್ರಕಾರ ಪೂರ್ಣ ಸತ್ಯವನ್ನು ಹೇಳುವುದರಿಂದ ಸಂಬಂಧಗಳು ಸಾಯುವುದಿಲ್ಲ. ಸತ್ಯದ ಕಾರಣಕ್ಕೆ ಒಮ್ಮೆ ಮುನಿಸಿಕೊಂಡು ಹೋದವರು ನಿಮ್ಮ ಸತ್ಯದ ಅರಿವಾದ ಕೂಡಲೇ ಮತ್ತೆ ನಿಮ್ಮ ಬಳಿಗೆ ಬರುತ್ತಾರೆ. ಸುಳ್ಳು ಸಂಬಂಧಗಳನ್ನು ಕೆಡಿಸುತ್ತದೆ. ಸತ್ಯವು ಸಂಬಂಧಗಳನ್ನು ಉಳಿಸುತ್ತದೆ.

ಸತ್ಯ ಹೇಳಲು ತುಂಬಾ ಗಟ್ಸ್ ಬೇಕಾಗಿಲ್ಲ, ಆದರೆ ಸುಳ್ಳು ಹೇಳಲು ಬೇಕು

ನೀವೊಮ್ಮೆ ಪ್ರಾಕ್ಟಿಕಲ್ ಆಗಿ ಮಾಡಿ ನೋಡಿ. ಸತ್ಯವನ್ನು ನೇರವಾಗಿ ಹೇಳುತ್ತಾ ಹೋಗುವ ಅಭ್ಯಾಸ ಬೆಳೆಸಿಕೊಳ್ಳಿ. ಸಮಾಜದಲ್ಲಿ ನಿಮ್ಮ ಸ್ವೀಕಾರಾರ್ಹತೆ ಉಳಿಯುತ್ತದೆ. ನಿಮ್ಮ ಮೇಲೆ ಜನರ ನಂಬಿಕೆಯು ಹೆಚ್ಚುತ್ತದೆ. ಜನರು ನಿಮ್ಮನ್ನು ಒಬ್ಬ ಐಕಾನ್ ಆಗಿ ತೆಗೆದುಕೊಳ್ಳಲು ಆರಂಭ ಮಾಡುತ್ತಾರೆ.

ಅದೇ ಸುಳ್ಳು ಹೇಳಲು ಹೋಗಿ ತುಂಬಾ ದಿನ ಸೇಫ್ ಆಗಿರಲು ಸಾಧ್ಯವಿಲ್ಲ. ನಾವು ಹೇಳಿರುವುದು ಸುಳ್ಳು ಎಂದು ಅದರಷ್ಟಕ್ಕೆ ಸಾಬೀತಾಗಲು ತುಂಬಾ ದಿನ ಬೇಕಾಗಿಲ್ಲ. ಮುಂದೆ ನಾವು ಆ ಸುಳ್ಳು ಮುಚ್ಚಿ ಹಾಕಲು ಮತ್ತೆ ಮತ್ತೆ ಸುಳ್ಳು ಹೇಳಬೇಕಾಗಿ ಬರಬಹುದು. ರಸ್ತೆಯಲ್ಲಿ ಬೈಕಲ್ಲಿ ಹೋಗುವಾಗ ಸಣ್ಣ ಗುಂಡಿ ತಪ್ಪಿಸಲು ಹೋಗಿ ದೊಡ್ಡ ಗುಂಡಿಗೆ ಬಿದ್ದ ಹಾಗೆ ಅದು! ಸುಳ್ಳು ಹೇಳಿದ ನಂತರ ನಾವು ಯಾವುದನ್ನು ಗೆದ್ದರೂ ಆತ್ಮ ಸಾಕ್ಷಿಯನ್ನು ಗೆಲ್ಲಲು ಸಾಧ್ಯವಿಲ್ಲ. ನಾವು ಯಾರ ಹತ್ತಿರ ಸುಳ್ಳು ಹೇಳುತ್ತೇವೆಯೋ ಅವರ ಕಣ್ಣಲ್ಲಿ ಕಣ್ಣಿಟ್ಟು ಮಾತಾಡುವ ಸುಖವನ್ನು ಕಳೆದುಕೊಳ್ಳುತ್ತೇವೆ. ಸುಳ್ಳು ಹೇಳಿದವರು ಗಿಲ್ಟ್‌ನಿಂದ ಹೊರಬರುವುದು ಸಾಧ್ಯವೇ ಇಲ್ಲ. ಆ ಗಿಲ್ಟ್ ನಮ್ಮನ್ನು ಇಂಚಿಂಚೂ ಸಾಯಿಸುತ್ತದೆ ಮತ್ತು ನಮ್ಮ ಸಾಧನೆಗೆ ತುಂಬಾ ದೊಡ್ಡ ತಡೆ ಗೋಡೆ ಆಗುತ್ತದೆ.

ಸುಳ್ಳು ಹೇಳುವವರಿಗೆ ಮೆಮೊರಿ ಜಾಸ್ತಿ ಇರಬೇಕು – ಚೈನೀಸ್ ಗಾದೆ

ಸುಳ್ಳು ಹೇಳುತ್ತಾ ಹೋದಂತೆ ನಾವು ಯಾರ ಹತ್ತಿರ ಏನು ಸುಳ್ಳು ಹೇಳಿದ್ದೇವೆ ಎಂಬುದನ್ನು ನೆನಪು ಇಡುತ್ತಾ ಹೋಗಬೇಕು. ಯಾಕೆಂದರೆ ನಾವು ಇಂದಲ್ಲ ನಾಳೆ ಸಿಕ್ಕಿ ಹಾಕಿಕೊಳ್ಳುತ್ತೇವೆ ಎಂಬ ಪ್ರಜ್ಞೆ ನಮ್ಮ ಸುಪ್ತ ಮನಸಿನಲ್ಲಿ ಹೂತು ಹೋಗುತ್ತದೆ. ಇದರಿಂದ ಹೊರಬರಲು ನಾವು ಇನ್ನಷ್ಟು ಸುಳ್ಳುಗಳನ್ನು ಮತ್ತು ಸುಳ್ಳುಗಳನ್ನು ಹೇಳಬೇಕಾಗಬಹುದು. ಯಾರ ಹತ್ತಿರ ಏನು ಸುಳ್ಳು ಹೇಳಿದ್ದೇವೆ ಎಂದು ನೆನಪಿಡುತ್ತ ಹೋಗದಿದ್ದರೆ ನಾವು ಸಿಕ್ಕಿಹಾಕಿಕೊಳ್ಳುವುದು ಗ್ಯಾರಂಟಿ. ಆದ್ದರಿಂದ ಸುಳ್ಳು ಹೇಳುವವರಿಗೆ ಹೆಚ್ಚು ಮೆಮೊರಿ ಪವರ್ ಬೇಕು ಎನ್ನುತ್ತದೆ ಚೈನೀಸ್ ಗಾದೆ ಮಾತು.

ಸುಳ್ಳು ಹೇಳುವುದರಿಂದ ನಮ್ಮ ಮಾನಸಿಕ ಒತ್ತಡ ಜಾಸ್ತಿ ಆಗುತ್ತದೆ. ಸುಳ್ಳು ಪತ್ತೆ ಮಾಡುವ ಯಂತ್ರವು ಕೆಲಸ ಮಾಡುವುದು ನಮ್ಮ ರಕ್ತದ ಒತ್ತಡದ ಆಧಾರದಲ್ಲಿ. ಸುಳ್ಳು ಹೇಳುವಾಗ ನಮ್ಮ ರಕ್ತದ ಒತ್ತಡವು ನಮಗೆ ಅರಿವೇ ಇಲ್ಲದ ಹಾಗೆ ಹೆಚ್ಚುವುದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಇದನ್ನೂ ಓದಿ: Raja Marga Column: ಆಶಾ ಭೋಸ್ಲೆಗೆ 90 ತುಂಬಿತು ಅಂದ್ರೆ ನಂಬೋರು ಯಾರು?

ಸತ್ಯವನ್ನು ಹೇಳುವುದರಿಂದ ಈ ಸಮಸ್ಯೆ ಇರುವುದಿಲ್ಲ. ಒಮ್ಮೆ ಸತ್ಯವನ್ನು ಗಟ್ಟಿಯಾಗಿ ಹೇಳಿದರೆ ಮುಗಿದುಹೋಯಿತು. ಮತ್ತೆ ಅದರ ಪರಿಣಾಮಗಳ ಬಗ್ಗೆ ನೀವು ಯೋಚನೆ ಮಾಡುವ ಅಗತ್ಯವೇ ಇರುವುದಿಲ್ಲ. ಅದರಲ್ಲಿಯೂ ನಿಮ್ಮ ಪ್ರೀತಿಪಾತ್ರರು, ನಿಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಂಡವರು ನಿಮ್ಮ ಕಟುವಾದ ಸತ್ಯವನ್ನು ಕೂಡ ಅಪ್ರಿಷಿಯೆಟ್ ಮಾಡುತ್ತಾರೆ. ಇಂದು ಜಗತ್ತು ನೇರವಾಗಿ ನುಡಿಯುವ ಮಂದಿಯನ್ನು ಹೆಚ್ಚು ನಂಬುತ್ತದೆ. ಗೋಡೆ ಮೇಲೆ ದೀಪ ಇಟ್ಟಂತೆ ಮಾತಾಡುವ ಮಂದಿಯನ್ನು ಅಲ್ಲ!

‘ಸೂರ್ಯ ಸೃಷ್ಟಿಯ ಕೇಂದ್ರ. ಭೂಮಿ ಅಲ್ಲ’ ಎಂದು ಜಗತ್ತಿಗೆ ಸತ್ಯವನ್ನೇ ಹೇಳಿದ ಸಾಕ್ರೆಟಿಸ್ ತಾನು ಸತ್ಯವನ್ನೇ ಹೇಳಿದ್ದೇನೆ ಎಂಬ ನಂಬಿಕೆಯಿಂದ ನಗು ನಗುತ್ತಾ ಆಗಿನ ಧರ್ಮಾಧಿಕಾರಿಗಳು ಕೊಟ್ಟ ವಿಷವನ್ನು ಕುಡಿದು ಈ ಜಗತ್ತಿನಿಂದ ನಿರ್ಗಮಿಸಿದ್ದು ಅದೇ ನಂಬಿಕೆಯಿಂದ!

Exit mobile version