Site icon Vistara News

Raja Marga Column : ಅಸ್ಮಿತಾಯ್: ಕೊಂಕಣಿ ಭಾಷೆ, ಸಂಸ್ಕೃತಿ, ಸಂಪ್ರದಾಯಗಳ ವಿರಾಟ್ ಕ್ಯಾನ್ವಾಸ್

Osmitoy Konkani cinema

ಸುಮಾರು ವರ್ಷಗಳ ನಂತರ ಒಂದು ಸಿನಿಮಾ ನನ್ನನ್ನು ಹಿಡಿದು ಅಲ್ಲಾಡಿಸಿ ಬಿಟ್ಟಿತ್ತು. ಸೆ. 15ಸಿನಿಮಾ ನೋಡಿ ಬಂದು ಹಲವು ದಿನ ಆದರೂ ಅದರ ಹ್ಯಾಂಗ್ ಓವರಿನಿಂದ ಹೊರಗೆ ಬರಲು ನನಗೆ ಸಾಧ್ಯವೇ ಆಗಲಿಲ್ಲ ಅಂದರೆ ಆ ಸಿನಿಮಾ ಅದ್ಭುತವೇ ಹೌದು. ಭಾರತದ ಒಂದು ಅತ್ಯಂತ ಶ್ರೀಮಂತ ಭಾಷೆಯ ಸಾಂಸ್ಕೃತಿಕ ಶ್ರೀಮಂತಿಕೆ, ಜಾನಪದ, ಸಂಗೀತ ಮತ್ತು ಸಂಪ್ರದಾಯಗಳನ್ನು ಇಷ್ಟೊಂದು ಶ್ರೀಮಂತವಾಗಿ ಶೋಕೇಸ್ ಮಾಡಿರುವ ‌ʻಅಸ್ಮಿತಾಯ್‌ʼ (Osmitay – In search of Konkani Identity) ಒಂದು ಮ್ಯಾಗ್ನಮಾಪಸ್ ಸಿನಿಮಾ ಖಂಡಿತ ಹೌದು (Raja Marga Column).

ಕೊಂಕಣಿ ಭಾಷೆಯು ಯಾಕೆ ಅಷ್ಟೊಂದು ಶ್ರೀಮಂತ ?

ಗೋಪಾಲಕೃಷ್ಣ ಪೈ (Gopalakrishna Pai) ಅವರ ‘ಸ್ವಪ್ನ ಸಾರಸ್ವತ’ ಕಾದಂಬರಿ (Swapna Saraswata Novel) ನಾನು ಓದಿದ್ದೆ. ಸಾವಿರಾರು ವರ್ಷಗಳ ಹಿಂದೆ ಸರಸ್ವತಿ ನದಿ ತೀರದಲ್ಲಿ ಉಗಮವಾದ ಈ ಪ್ರಾಕೃತ ಭಾಷೆಯು ಅದರ ಉತ್ಪನ್ನವೇ ಆಗಿರುವ ಶ್ರೀಮಂತವಾದ ಸಂಸ್ಕೃತಿ, ಜಾನಪದ, ಸಾಹಿತ್ಯ, ಕಲೆ, ಸಂಗೀತ, ಸಂಪ್ರದಾಯಗಳನ್ನು ಹುಟ್ಟು ಹಾಕಿತ್ತು. ಆದರೆ ಆಗ ನಡೆದ ಭೂಕಂಪದಿಂದ ಸರಸ್ವತಿ ನದಿಯು ಭೂಮಿಯ ಒಡಲನ್ನು ಸೇರಿ ಅದೃಶ್ಯವಾಯಿತು. ಆಗ ಹಸಿವು, ಬಾಯಾರಿಕೆ, ಉದ್ಯೋಗ, ಬದುಕು ಅರಸಿಕೊಂಡು ಕೊಂಕಣಿ ಸಮುದಾಯವು (Konkani Community) ಒಂದು ಮಹಾ ವಲಸೆಗೆ (Mass Exodus) ಹೊರಟಿತು. ಅವರು ದಕ್ಷಿಣಾಭಿಮುಖವಾಗಿ ಹೊರಟು ಭಾರತದ ಅಲ್ಲಲ್ಲಿ ನೆಲೆ ನಿಂತರು. ಅದರಲ್ಲಿ ಬಹಳ ದೊಡ್ಡ ಸಂಖ್ಯೆಯ ಕೊಂಕಣಿಗರು ಬಂದು ನೆಲೆಸಿದ್ದು ಗೋವಾದಲ್ಲಿ (Goa State). ಅಲ್ಲಿ ಬೇರೆ ಬೇರೆ ಉದ್ಯೋಗವನ್ನು ಮಾಡುತ್ತ, ದೇವಸ್ಥಾನಗಳನ್ನು ಕಟ್ಟುತ್ತಾ ಕೊಂಕಣಿ ಸಂಸ್ಕೃತಿಯನ್ನು ಹರಡುತ್ತ ನೆಲೆ ನಿಂತವರು ಅವರು.

ಪೋರ್ಚುಗೀಸ್ ದಾಳಿ ಅವರನ್ನು ಮತ್ತೆ ಸಂತ್ರಸ್ತ ಮಾಡಿತ್ತು

16ನೆ ಶತಮಾನದಲ್ಲಿ ಗೋವಾ ಪೋರ್ಚುಗೀಸರ ದಾಳಿಗೆ ತುತ್ತಾಗಿ ಅವರ ವಸಾಹತು ಆಯಿತು. ಸಾಮೂಹಿಕ ಮತಾಂತರಗಳು, ಸಂಸ್ಕೃತಿ ನಾಶದ ಕೃತ್ಯಗಳು, ಹಿಂಸೆ, ರಕ್ತಪಾತಗಳು ನಿರಂತರ ನಡೆದವು. ಕೊಂಕಣಿ ಜನಾಂಗ, ಅವರ ನಂಬಿಕೆ, ಸಂಪ್ರದಾಯಗಳು ಮತ್ತೆ ತುಳಿತಕ್ಕೆ ಒಳಗಾದವು. ಮತಾಂತರಕ್ಕೆ ಒಪ್ಪದವರನ್ನು ಸಾವಿರಾರು ಜನರ ಮುಂದೆ ಬಹಿರಂಗವಾಗಿ ವಿಚಾರಣೆ ಮಾಡಿ (OPEN INQUISITION ) ಸುಟ್ಟು ಹಾಕುವ ಕೃತ್ಯಗಳು ದೊಡ್ಡ ಮಟ್ಟದಲ್ಲಿ ನಡೆದವು. ಆಗಲೂ ಕೊಂಕಣಿ ಸಮುದಾಯ ತಮ್ಮ ನಂಬಿಕೆ ಮತ್ತು ಭಾಷೆಯ ಮೇಲಿನ ಪ್ರೀತಿಗಳನ್ನು ಉಳಿಸಿಕೊಂಡು ಬಂದಿತ್ತು. ನಿರಂತರ ಅಲೆಮಾರಿ ಆದ ಮತ್ತು ದಾಳಿಗೆ ಒಳಗಾದ ಸಮುದಾಯದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾವಿರಾರು ಜನರು ಬಲಿದಾನ ಮಾಡಿದ ಉದಾಹರಣೆಗಳು ನಮಗೆ ಇತಿಹಾಸದಲ್ಲಿ ದೊರೆಯುತ್ತವೆ. ಭಾಷೆಯ ಮೇಲಿನ ಸರಣಿ ಆಘಾತಗಳನ್ನು ಆ ಭಾಷಿಗರು ಹೇಗೆ ಗೆದ್ದರು ಅನ್ನೋದು ಈಗ ಒಂದು ರೋಮಾಂಚಕ ಇತಿಹಾಸದ ಭಾಗ.

ಏನುಂಟು, ಏನಿಲ್ಲ ಈ ಅಸ್ಮಿತಾಯ್ ಸಿನಿಮಾದಲ್ಲಿ?

ಅಸ್ಮಿತಾಯ್ (IDENTITY-ಅಸ್ಮಿತೆ) ಒಂದು ಅದ್ಭುತವಾದ ಜರ್ನಿ. ಅಮೆರಿಕಾದಲ್ಲಿ ಹುಟ್ಟಿ ಅಲ್ಲಿಯೇ ಓದುತ್ತಿದ್ದ ವಿವೇಕ್ ಎಂಬ ಕೊಂಕಣಿ ಮೂಲದ ಹುಡುಗನಿಗೆ ಒಮ್ಮೆ ತುಂಬಾ ಅಪಮಾನವಾಗಿ ತನ್ನ ಮೂಲದ ಸಂಸ್ಕೃತಿಯನ್ನು ಹುಡುಕಲೇ ಬೇಕಾದ ಪ್ರಸಂಗ ಬರುತ್ತದೆ. ಅವನು ತನ್ನ ಹೆತ್ತವರ ಆಶಯದಂತೆ ಭಾರತಕ್ಕೆ, ಅಂದರೆ ಮಂಗಳೂರಿಗೆ ಬರುತ್ತಾನೆ. ಅಲ್ಲಿ ಅವನಿಗೆ ಸಮಾನ ಆಸಕ್ತಿಯ ಚಂದದ ಹುಡುಗಿ ಸುಷ್ಮಾ ದೊರೆಯುತ್ತಾಳೆ. ಅವರಿಬ್ಬರೂ ಕೊಂಕಣಿ ಸಂಸ್ಕೃತಿಯ ಮಹಾ ಆರಾಧಕ ಕಲಾವಿದ ಸಿಮಾವ್ ಪೆರಿಸ್ ಅವರಿಂದ ಮಾರ್ಗದರ್ಶನ ಪಡೆದು ತಮ್ಮ ಬೇರುಗಳನ್ನು ಹುಡುಕುತ್ತ ಗೋವಾ ತಲುಪುತ್ತಾರೆ. ಹೋಗುವ ದಾರಿಯಲ್ಲಿ ಮತ್ತು ಗೋವಾದಲ್ಲಿ ಅವರಿಗೆ ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯ ವಿಶ್ವರೂಪ ದರ್ಶನ ಆಗುತ್ತದೆ. ಕೊಂಕಣಿ ಭಾಷೆಯ ಸ್ವಾಭಿಮಾನಕ್ಕೆ ತಮ್ಮ ಪ್ರಾಣವನ್ನು ಬಲಿ ಕೊಟ್ಟ ಹಿರಿಯರ ತ್ಯಾಗದ ಕಥೆಗಳು, ಘಟನೆಗಳು ಅವರ ಮನವನ್ನು ಕಲಕುತ್ತವೆ. ಗೋವಾದ ಶ್ರೀಮಂತ ಕೊಂಕಣಿ ಸಂಸ್ಕೃತಿಯ ವಿರಾಟ್ ದರ್ಶನ ಆಗುತ್ತದೆ. ಕೊನೆಗೆ ಏನಾಯಿತು ಎಂದು ನೀವು ಈ ಎರಡೂವರೆ ಘಂಟೆಯ ಸಿನೆಮಾ ನೋಡಿ ಅರ್ಥ ಮಾಡಿಕೊಳ್ಳಬೇಕು.

ಆಸ್ಮಿತಾಯ್ – ಕೇವಲ ಒಂದು ಸಿನಿಮಾ ಅಲ್ಲ, ಅದೊಂದು ಫೀಲ್!

ಕೊಂಕಣಿ ಭಾಷೆಯ ಮತ್ತು ಸಾಂಸ್ಕೃತಿಕ ಪ್ರಸಾರದ ಪ್ರಮುಖ ಸಂಸ್ಥೆ ‘ಮಾಂಡ್ ಸೋಭಾಣ್’ (Mandd SoBhan) ಈ ಸಿನಿಮಾವನ್ನು ಪ್ರಸ್ತುತ ಪಡಿಸಿದೆ. ಆ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ಎರಿಕ್ ಓಜಾರಿಯೋ (Eric Ozario) ಈ ಸಿನಿಮಾದ ಕಥೆಯನ್ನು ಬರೆದಿದ್ದಾರೆ. ಒಂದು ದಶಕಕ್ಕೂ ಅಧಿಕ ವರ್ಷದ ಅವಧಿಯಲ್ಲಿ ಅವರು ಸಂಶೋಧನೆ ಮಾಡಿ ಬರೆದ ಕಥೆಯಿದು. ಚಿತ್ರಕಥೆ ಮತ್ತು ಸಂಭಾಷಣೆ ಜೋಯೆಲ್ ಪಿರೇರಾ ಬರೆದಿದ್ದಾರೆ. ಯುವ ನಿರ್ದೇಶಕ ವಿಲಾಸ್ ರತ್ನಾಕರ್ ಕ್ಷತ್ರಿಯ (Vilas Ratnakar Kshatriya) ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಲೂಯಿಸ್ ಪಿಂಟೋ (Luis Pinto) ಚಿತ್ರ ನಿರ್ಮಾಣ ಮಾಡಿದ್ದಾರೆ. ವಿವೇಕ್ ಮತ್ತು ಸುಷ್ಮಾ ಆಗಿ ಇಡೀ ಸಿನಿಮಾ ಆವರಿಸಿದ ಯುವ ಜೋಡಿ ಅಶ್ವಿನ್ ಡಿಕೊಸ್ಟಾ ಮತ್ತು ವೆನ್ಸಿಟಾ ಡಯಾಸ್ ತಮ್ಮ ಮುಗ್ಧ ಅಭಿನಯದ ಮೂಲಕ ನಮಗೆ ಮೋಡಿ ಮಾಡುತ್ತಾರೆ. ಕರಾವಳಿಯ ಮತ್ತು ಗೋವಾದ ಸುಮಾರು 500 ಜನ ಕಲಾವಿದರು ಈ ಸಿನಿಮಾದಲ್ಲಿ ಅಭಿನಯ ಮಾಡಿದ್ದು ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ಇಡೀ ಸಿನಿಮಾದ ಕಥೆಯನ್ನು ಲೀಡ್ ಮಾಡುವ ಹತ್ತಾರು ಅದ್ಭುತವಾದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಈ ಸಿನಿಮಾದ ಬಹಳ ದೊಡ್ಡ ಆಕರ್ಷಣೆ. ಈ ಸಂಗೀತದ ಹಿಂದೆ ಕೂಡ ಎರಿಕ್ ಓಜೋರಿಯೋ ಅವರ ಬಂಗಾರದ ಸ್ಪರ್ಶ ಇದೆ.

ಎರಿಕ್‌ ಒಝಾರಿಯೊ

ಅಸ್ಮಿತಾಯ್ – ನನಗೆ ಯಾಕೆ ಇಷ್ಟ ಆಯ್ತು?

1. ಇಡೀ ಸಿನೆಮಾದಲ್ಲಿ ಪ್ರೀತಿ ಅಂಡರ್ ಕರೆಂಟ್ ಆಗಿದ್ದರೂ ವಿಜೃಂಭಿಸಿದ್ದು ಕೊಂಕಣಿ ಭಾಷೆಯ ಸಂಸ್ಕೃತಿ ಮತ್ತು ಪರಂಪರೆ.

2. ಕೊಂಕಣಿ ಭಾಷೆ ಮಾತಾಡುವ ಹದಿನೈದಕ್ಕೂ ಹೆಚ್ಚು ಸಮುದಾಯಗಳು ಇವೆ. ಅದರಲ್ಲಿ ಸಿದ್ದಿ, ಕುಡುಬಿ, ನವಾಯತ್, ಖಾರ್ವಿ, ಸಾರಸ್ವತ, ಗೌಡ ಸಾರಸ್ವತ ಮೊದಲಾದ ಸಮುದಾಯಗಳ ಸಾಂಪ್ರದಾಯಕ ಆಚರಣೆಗಳಿಗೆ ಇಲ್ಲಿ ಸ್ಪೇಸ್ ನೀಡಲಾಗಿದೆ.

3. ಗೋವಾದ ಜಾನಪದ ಬೆಸ್ತರ ನೃತ್ಯ, ಕೊಂಕಣಿ ನೃತ್ಯ ಮತ್ತು ಮದುವೆ ಗೀತೆಗಳು ಇಲ್ಲಿ ತುಂಬಾ ಶ್ರೀಮಂತವಾಗಿ ಪೋರ್ಟ್ರೇಟ್ ಆಗಿವೆ.

4. ಇಡೀ ಸಿನಿಮಾದ ಕಥೆಯನ್ನು ತನ್ನ ಬೆನ್ನ ಮೇಲೆ ಹೊತ್ತುಕೊಂಡು ಹೋಗುವ ಸಿಮಾವ್ ಪೆರಿಸ್ ಪಾತ್ರ ಅದ್ಭುತವಾಗಿ ಮೂಡಿ ಬಂದಿದೆ. ಅದನ್ನು ‘ಕೊಂಕಣಿ ಸಾಂಸ್ಕೃತಿಕ ರಾಯಭಾರಿ’ ಎಂದು ಎರಿಕ್ ಓಜೋರಿಯೋ ಕರೆಯುತ್ತಾರೆ.

ಇದನ್ನೂ ಓದಿ: Raja Marga Column : ಎಲ್ಲಿಯ ಸಂಗೀತ, ಎಲ್ಲಿಯ ಎಂಜಿನಿಯರ್; ಕಾಣದಾ ಕಡಲಿಗೆ ಹಂಬಲಿಸಿದ ಸಿ. ಅಶ್ವತ್ಥ್‌‌!

5. ಗೋವಾದಲ್ಲಿ ಪೋರ್ಚುಗೀಸ್ ಹಿಂಸೆಗೆ ಬಲಿಯಾದ ಲಕ್ಷ್ಮಣ್ ಶಿರೋಡಿ ಪೈ ಮತ್ತು ಅವರದ್ದೇ ಕುಟುಂಬದ ಕೊಂಡಿ ಆದ ಶ್ರೀನಿವಾಸ್ ಶ್ರೀಧರ್ ಪೈ (ಶಿನೂ ಮಾಮ್) ಪಾತ್ರಗಳು ಜೀವಂತವಾಗಿ ಮೂಡಿವೆ.

6. ಕ್ಯಾಥೋಲಿಕ್ ಕ್ರೈಸ್ತ ಬಂಧುಗಳ ಸಾಂಪ್ರದಾಯಿಕ ಮದುವೆ, ರೋಸ್ ಮೊದಲಾದ ಆಚರಣೆಗಳನ್ನು ಹಾಗೆಯೇ ಡಿಪಿಕ್ಟ್ ಮಾಡಲಾಗಿದೆ. ಎಲ್ಲಿಯೂ ಆಧುನಿಕತೆಯ ಸ್ಪರ್ಶ ಇಲ್ಲ.

7. ಬಾಲರಾಜ್ ಅವರ ಕ್ಯಾಮೆರಾ ತೆರೆದು ತೋರಿಸಿದ ಒಳಾಂಗಣ ಮತ್ತು ಹೊರಾಂಗಣ ದೃಶ್ಯಗಳು ಅದ್ಭುತ. ಎಡಿಟಿಂಗ್ ವರ್ಕ್ ಕೂಡ ಕ್ಲಾಸ್. ಒಂದೇ ಒಂದು ದೃಶ್ಯವೂ ಕಳಪೆ ಇಲ್ಲ. ಎಲ್ಲ ಕಡೆಯಲ್ಲಿಯೂ ದೃಶ್ಯ ವೈಭವ ಕಣ್ಣಿಗೆ ರಾಚುತ್ತದೆ.

8. ನಾಯಕ, ನಾಯಕಿ ಆಗಿ ವಿವೇಕ್ ಮತ್ತು ಸುಷ್ಮಾ ಫುಲ್ ಮಾರ್ಕ್ ಪಡೆಯುತ್ತಾರೆ.

9. ಈ ರೀತಿಯ ಸಿನಿಮಾ ಪ್ರಾದೇಶಿಕ ಭಾಷೆಗಳಲ್ಲಿಯೇ ಹೊಸತು. ನಿರೂಪಣೆಯಲ್ಲಿ ವೇಗ ಮತ್ತು ಫ್ರೆಷ್ ಫೀಲ್ ಇದೆ.

೧೦. ಇದುವರೆಗೆ ಕೊಂಕಣಿ ಭಾಷೆಯಲ್ಲಿ 145 (ಕರ್ನಾಟಕ ಮತ್ತು ಗೋವಾ) ಸಿನಿಮಾಗಳು ಬಂದಿದ್ದು ಅಸ್ಮಿತಾಯ್ ಅತ್ಯಂತ ಮಧುರವಾದ ‘ಐಸ್ ಕ್ರೀಮ್ ತುದಿಯ ಚೆರಿ ‘ ಎಂಬ ಅಭಿಪ್ರಾಯಗಳು ವಿಮರ್ಶಾ ವಲಯದಲ್ಲಿ ಕೇಳಿ ಬರುತ್ತಿದ್ದು ಅದು ನೂರಕ್ಕೆ ನೂರರಷ್ಟು ನಿಜವಾಗಿದೆ. ಒಂದು ಡಾಕ್ಯುಮೆಂಟರಿ ಆಗಿ ಬಿಡುತ್ತಿದ್ದ ಈ ಸಿನಿಮಾವನ್ನು ಒಂದು ಮಾಸ್ಟರ್ ಪೀಸ್ ಆಗಿ ಪ್ರಸ್ತುತಿ ಮಾಡಿದ ಎಲ್ಲರಿಗೂ ನನ್ನ ಅಭಿನಂದನೆಗಳು.

ಭರತ ವಾಕ್ಯ: ಕೊಂಕಣಿ ಭಾಷೆಯನ್ನು ಪ್ರೀತಿಸುವ ಮತ್ತು ಗೌರವಿಸುವ ಎಲ್ಲರೂ ನೋಡಬೇಕಾದ ಸಿನಿಮಾ ಇದು.

Exit mobile version