ಭಾರತೀಯ ಸಿನಿಮಾರಂಗದ (Indian cinema) ಇತಿಹಾಸದಲ್ಲಿಯೇ ಅತ್ಯಂತ ಅಪರೂಪದ ಹಿಂದಿ ಸಿನಿಮಾ ಪಾ (Movie Paa)! ಅಮಿತಾಭ್ ಬಚ್ಚನ್ (Amitabh Bachchan) ಎಂಬ ಮಹಾನಟನ ಪ್ರಯೋಗಶೀಲತೆ (Trying New one), ಬದ್ಧತೆ (Committment of Amitabh) ಮತ್ತು ಸೃಜನಶೀಲ ಅಭಿನಯಕ್ಕೆ (Creative acting) ಸಾಕ್ಷಿ ಈ ಪಾ ಸಿನಿಮಾ! ಅದು ರೂಪುಗೊಂಡ ಕತೆಯೇ ಆ ಸಿನಿಮಾದ ಕತೆಗಿಂತ ಹೆಚ್ಚು ರೋಚಕವಾಗಿದೆ!
ಪಾ ಸಿನಿಮಾ ರೂಪುಗೊಂಡ ಕತೆಯನ್ನು ಆ ಸಿನಿಮಾದ ನಿರ್ದೇಶಕ ಬಾಲ್ಕಿ ಆರ್. (Balki R) ಅವರ ಮಾತುಗಳಲ್ಲಿ ಕೇಳುತ್ತಾ ಮುಂದೆ ಹೋಗೋಣ…
ನಾನು 1996ರಲ್ಲಿ ಬಿಡುಗಡೆಯಾದ ಹಾಲಿವುಡ್ ರೋಚಕ ಸಿನಿಮಾ ‘ಜಾಕ್’ (Hollywood film Jack) ನೋಡಿ ಮೆಚ್ಚಿದ್ದೆ .ಆ ಸಿನಿಮಾವು ನನ್ನ ಮಸ್ತಿಷ್ಕದಲ್ಲಿ ಗಟ್ಟಿಯಾಗಿ ಕೂತು ಬಿಟ್ಟಿತ್ತು. ಅದನ್ನು ಹಿಂದಿ ಭಾಷೆಯಲ್ಲಿ ಮರುನಿರ್ಮಾಣ ಮಾಡಬೇಕು ಎಂಬ ತುಡಿತ ಹೆಚ್ಚಾಯಿತು. ಅದಕ್ಕಾಗಿ ಎರಡು ವರ್ಷಗಳ ಕಾಲ ಸಮಯ ತೆಗೆದುಕೊಂಡು ಕತೆ ಮತ್ತು ಚಿತ್ರಕತೆ ಬರೆದು ಮುಗಿಸಿದ್ದೆ.
ಅದರ ಕತೆಯನ್ನು ಚುಟುಕಾಗಿ ನಿಮಗೆ ನಾನು ಹೇಳಬೇಕು. ಅದರಲ್ಲಿ ಔರೋ ಎಂಬ ಬುದ್ಧಿವಂತ ಹುಡುಗನ ಪಾತ್ರ ಬರುತ್ತದೆ. ಆತನಿಗೆ ಹದಿಮೂರು ವರ್ಷದ ಪ್ರಾಯದಲ್ಲಿ ‘ಪ್ರೋಜೇರಿಯಾ’ (genetic disorder called progeria) ಎಂಬ ವಿಚಿತ್ರವಾದ ಕಾಯಿಲೆಯು ಬಂದಿರುತ್ತದೆ. ಅದು ಬಾಲ್ಯದಲ್ಲಿಯೇ ವೃದ್ಧಾಪ್ಯ ಅಮರುವ (Aging in childhood) ವಿಚಿತ್ರವಾದ ಕಾಯಿಲೆ! ಹತ್ತು ಲಕ್ಷ ಮಂದಿಯಲ್ಲಿ ಒಬ್ಬರಿಗೆ ಮಾತ್ರ ಬರುವ ಕಾಯಿಲೆ ಅದು! ಒಂದು ಕಡೆ ಮುದಿತನದ ಸಮಸ್ಯೆ ಆದರೆ ಮತ್ತೊಂದೆಡೆ ದೊಡ್ಡ ತಲೆ, ಸಣ್ಣ ಕೈ ಕಾಲು, ಉಬ್ಬಿದ ದವಡೆ, ಕೀರಲು ಸ್ವರ…..ಹೀಗೆಲ್ಲ ವಿಚಿತ್ರವಾದ ದೈಹಿಕ ಸಮಸ್ಯೆಗಳು!
ಬಾಲ್ಯದಿಂದ ಅಪ್ಪನ ಮುಖ ನೋಡದ ಔರೋ ತನ್ನ ಅಮ್ಮ (ವಿದ್ಯಾ ಬಾಲನ್-vidya Balan)ನನ್ನು ನನ್ನ ಅಪ್ಪ ಯಾರು ಎಂದು ದಿನವೂ ಕೇಳುತ್ತಾನೆ. ಅಮ್ಮ ಏನೇನೋ ಕಾರಣ ಹೇಳಿ ಗೋಡೆಯ ಮೇಲೆ ದೀಪ ಇಡುತ್ತಾಳೆ.
ಮುಂದೆ ಔರೋ ಕಲಿಯುತ್ತಿರುವ ಶಾಲೆಗೆ ಅವನ ಅಪ್ಪ ವಾರ್ಷಿಕೋತ್ಸವಕ್ಕೆ ಅತಿಥಿಯಾಗಿ ಬರುತ್ತಾನೆ. ಅಲ್ಲಿ ತನ್ನ ಪ್ರತಿಭೆಯ ಮೂಲಕ ಬಹುಮಾನ ಗೆದ್ದ ಔರೋ ಮತ್ತು ಅಪ್ಪನ ಗೆಳೆತನ ಬೆಳೆಯುತ್ತದೆ. ಮುಂದೇನಾಗುತ್ತದೆ ಎಂದು ಸಿನಿಮಾ ನೋಡಿ ನೀವು ಹೇಳಬೇಕು.
ನಾನು ಚಿತ್ರಕತೆಯನ್ನು ಬರೆಯುವಾಗ ಅಪ್ಪನ ಪಾತ್ರವನ್ನು ಅಮಿತಾಭ್ ಮಾಡಬೇಕು, ಮಗ ಔರೋ ಪಾತ್ರ ಅವರ ಮಗ ಅಭಿಷೇಕ್ ಬಚ್ಚನ್ (Abhishek Bachchan) ಮಾಡಲಿ ಎಂದು ಮನಸಲ್ಲಿ ಇಟ್ಟುಕೊಂಡು ಬರೆದಿದ್ದೆ. ಒಂದು ಫೈನ್ ಡೇ ನಾನು ಅವರ ಮನೆಗೆ ಹೋಗಿ ಕಾಲಿಂಗ್ ಬೆಲ್ ಒತ್ತಿದೆ.
ಅಂದು ಅಪ್ಪ, ಮಗ ಇಬ್ಬರೂ ಮನೆಯಲ್ಲಿಯೇ ಇದ್ದರು. ಇಬ್ಬರನ್ನೂ ಕೂರಿಸಿ ಇಡೀ ಸಿನಿಮಾದ ಕಥೆಯನ್ನು ಹೇಳಿದೆ. ಇಬ್ಬರೂ ಕೇಳಿದರು. ಅಪ್ಪನ ಪಾತ್ರ ಅಮಿತಾಬ್ ಮಾಡಲಿ ಎಂದೆ. ಮಗ ಅಭಿಷೇಕ್ ಕೂಡ ಪ್ರತಿಭಾವಂತ. ಅವರು ಔರೋ ಪಾತ್ರ ಮಾಡಲಿ ಎಂದೆ.
ಆಗ ಅಭಿಷೇಕ್ ಕಣ್ಣಲ್ಲಿ ಒಂದಷ್ಟು ಗೊಂದಲವು ನನಗೆ ಕಂಡಿತು. ಅವರು ಒಂದೆರಡು ಪ್ರಶ್ನೆ ಕೇಳಿ ಅಪ್ಪನ ಮುಖ ನೋಡುತ್ತಾ ಕೂತ. ಅವರ ಮನಸಿನ ಭಾವನೆ ಅಮಿತಾಭ್‌ಗೆ ಅರ್ಥ ಆಯ್ತು ಅಂತ ನನಗೆ ಅನ್ನಿಸಿತು.
ಅಮಿತಾಭ್ ತನ್ನ ಮಗನನ್ನು ಒಂದು ಕ್ಷಣ ಮನೆಯ ಒಳಗೆ ಕರೆದುಕೊಂಡು ಹೋಗಿ ಹಿಂದೆ ಬಂದರು. ಅವರಿಬ್ಬರೂ ಮಾತಾಡಿ ಒಂದು ನಿರ್ಧಾರಕ್ಕೆ ಬಂದ ಹಾಗೆ ನನಗೆ ಅನ್ನಿಸಿತು.
ಬಂದವರೇ ಅಮಿತಾಭ್ “ಬಾಲ್ಕೀ, ನಿಮಗೆ ಅಭ್ಯಂತರ ಇಲ್ಲಾಂದ್ರೆ ನಾನು ಔರೋ ಪಾತ್ರ ಮಾಡ್ತೇನೆ. ಅಭಿಷೇಕ್ ಅಪ್ಪನ ಪಾತ್ರ ಮಾಡಲಿ!” ಎಂದರು. ನಾನು ನಿಜವಾಗಿಯೂ ಬೆಚ್ಚಿ ಬಿದ್ದೆ! ಯಾಕೆಂದ್ರೆ ಅಂತಹ ಪ್ರಯೋಗ ಭಾರತೀಯ ಸಿನಿಮಾ ರಂಗದಲ್ಲಿ ಎಂದಿಗೂ ಆಗಿರಲಿಲ್ಲ!
ಆಗ ಅಮಿತಾಭ್ ಬಚ್ಚನ್ ಅವರ ವಯಸ್ಸು 67! ಅಂತಹ ಪ್ರಾಯದಲ್ಲಿ 13 ವರ್ಷದ ಹುಡುಗನ ಪಾತ್ರ ಮಾಡುವುದು ಅಂದರೆ..? ಅದು ಕೂಡ ಪ್ರೋಜೇರಿಯ ಸಂತ್ರಸ್ತ ಹುಡುಗನ ಪಾತ್ರ! ಅಲ್ಲದೆ ಅಪ್ಪ ಮಗನ ಪಾತ್ರ ಮಾಡುವುದು, ಮಗ ಅಪ್ಪನ ಪಾತ್ರ ಮಾಡುವುದು…….ಇದು ಹಿಂದೆ ಎಂದೂ ಆಗಿರಲಿಲ್ಲ!
ನನ್ನ ಮೌನ ಅಮಿತಾಭ್ ಅವರಿಗೆ ಅರ್ಥ ಆಯಿತು. ಅವರು “ಬಾಲ್ಕೀ. ನೀವೇನೂ ಆತಂಕ ಮಾಡಬೇಡಿ. ಎಲ್ಲವನ್ನೂ ನಾನು ಮೇನೇಜ್ ಮಾಡುತ್ತೇನೆ. ನನಗೆ ಪಾತ್ರಕ್ಕೆ ಸಿದ್ಧತೆ ಮಾಡಿಕೊಳ್ಳಲು ಮೂರು ತಿಂಗಳ ಸಮಯ ಬೇಕು. ನೀವು ಶೂಟಿಂಗ್ ರೆಡಿ ಮಾಡಿ. ನಾವಿಬ್ಬರೂ ಬರುತ್ತೇವೆ!” ಎಂದು ಕೈಮುಗಿದು ಕಳುಹಿಸಿದರು.
ನಾನಿನ್ನೂ ಶಾಕ್ ನಿಂದ ಹೊರ ಬಂದಿರಲಿಲ್ಲ. ಮನೆಗೆ ಬಂದು ಮತ್ತೆ ಮೂರು ತಿಂಗಳು ತೆಗೆದುಕೊಂಡು ಚಿತ್ರಕಥೆಯನ್ನು ಹಲವು ಬಾರಿ ಟ್ರಿಮ್ ಮಾಡಿದೆ. ಅಮಿತಾಭ್ ಮಾಡುವ ಔರೋ ಪಾತ್ರವು ನನಗೆ ಹಗಲು ರಾತ್ರಿ ಕಣ್ಣ ಮುಂದೆ ಬರಲು ಆಗಲೇ ಆರಂಭ ಆಗಿತ್ತು.
ಅಮಿತಾಭ್ ಆ ಮೂರು ತಿಂಗಳ ಕಾಲ ಹತ್ತಾರು ವೈದ್ಯರನ್ನು ಸಂಪರ್ಕಿಸಿ ಪ್ರೊಜೇರಿಯ ಬಗ್ಗೆ, ಅದರ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳುತ್ತ ಹೋದರು. ಆ ಕಾಯಿಲೆಯು ಇರುವ ಮಕ್ಕಳನ್ನು, ಅವರ ಕುಟುಂಬಗಳನ್ನು ಭೇಟಿ ಮಾಡಿ ಬಂದರು. ಅವರ ಒಳಗೆ ಕೂಡ ಆ ಔರೋ ಪಾತ್ರವು ಆಗಲೇ ಇಳಿಯಲು ಆರಂಭ ಆಗಿತ್ತು!
ಇದನ್ನೂ ಓದಿ : Raja Marga Column : ಹೆಣ್ಮಕ್ಕಳು ಶಾಲೆಗೆ ಹೋಗೋದೇ ಕಷ್ಟ ಎಂಬ ಕಾಲದಲ್ಲೇ ಆಕೆ ಒಂದಲ್ಲ, ಎರಡು ನೊಬೆಲ್ ಗೆದ್ದರು!
2009ರ ಒಂದು ಶುಭ ಮುಹೂರ್ತದಲ್ಲಿ ಪಾ ಸಿನೆಮಾದ ಶೂಟಿಂಗ್ ಆರಂಭ ಆಗಿತ್ತು. ಅಮಿತಾಭ್ ಅವರ ವಿಶೇಷ ಮೇಕಪ್‌ಗಾಗಿ ಕ್ರಿಶ್ಚಿಯನ್ ಟಿನ್ಲೆ ಮತ್ತು ಡೊಮಿನಿ ಲಿನ್ ಎಂಬ ಇಬ್ಬರು ವಿದೇಶದ ಮೇಕಪ್ ಕಲಾವಿದರು ಬಂದರು. ಔರೋ ಪಾತ್ರದ ಮೇಕಪ್ ತುಂಬಾ ಸಂಕೀರ್ಣ ಆಗಿತ್ತು.
ದೊಡ್ಡ ಮಂಡೆ ರಚನೆ ಮಾಡಲು ಎಂಟರಿಂದ ಹತ್ತು ಒದ್ದೆ ಮಣ್ಣಿನ ಹೆಂಟೆಗಳನ್ನು ಅಮಿತಾಬ್ ತಲೆಗೆ ಮೆತ್ತುತ್ತಿದ್ದರು. ಅದರಲ್ಲಿ ಉಸಿರಾಟ ಮಾಡಲು ಎರಡು ರಂಧ್ರಗಳು ಮಾತ್ರ ಇರುತ್ತಿದ್ದವು. ಹಣೆ, ಮುಖ, ಕೆನ್ನೆ, ತುಟಿಗಳಿಗೆ ದಪ್ಪವಾದ ಬಟ್ಟೆಗಳ ಲೇಪನ! ಅದರ ಮೇಲೆ ದಪ್ಪವಾದ ಬಣ್ಣಗಳು. ಪಾತ್ರಕ್ಕಾಗಿ ಕಾಲು, ಕೈ, ಎದೆಯ ಮೇಲಿನ ಕೂದಲನ್ನು ಕೂಡ ಕೆರೆದು ತೆಗೆದಿದ್ದರು.
ಪ್ರತೀ ದಿನ ಮೇಕಪ್ ಮಾಡಲು ಕನಿಷ್ಠ ಐದು ಘಂಟೆ ಮತ್ತು ತೆಗೆಯಲು ಎರಡು ಘಂಟೆಗಳ ಅವಧಿ ಬೇಕಾಗುತ್ತಿತ್ತು! 67 ವರ್ಷದ ಅಮಿತಾಬ್ ರಾತ್ರಿ ಹನ್ನೊಂದು ಗಂಟೆಗೆ ಮೇಕಪ್ ಮಾಡಲು ಕೂತರೆ ಬೆಳಿಗ್ಗೆ ನಾಲ್ಕೈದು ಗಂಟೆಗೆ ಮೇಕಪ್ ಮುಗಿಯುವುದು. ನಂತರ ಶೂಟಿಂಗ್ ಆರಂಭ. ಮೇಕಪ್ ತೆಗೆಯುವ ತನಕ ಒಂದು ತೊಟ್ಟು ನೀರು ಕೂಡ ಕುಡಿಯುವ ಅವಕಾಶ ಇಲ್ಲ! ಮೈ, ಮುಖ ಎಲ್ಲ ಕಡೆಯೂ ವಿಪರೀತ ತುರಿಕೆ ಮತ್ತು ನವೆ. ಅಮಿತಾಭ್ ಆ ಕನಸಿನ ಪಾತ್ರಕ್ಕಾಗಿ ಎಲ್ಲವನ್ನೂ ಸಹಿಸಿಕೊಂಡರು. ನಗು, ನಗುತ್ತಾ ದಿನವೂ ಶೂಟಿಂಗ್‌ನಲ್ಲಿ ಭಾಗವಹಿಸಿದರು.
ಕೆಲವೊಮ್ಮೆ ನನಗೇ ಮುಜುಗರ ಆಗುತ್ತಿತ್ತು. ಭಾರತೀಯ ಸಿನಿಮಾ ರಂಗದ ಸೂಪರ್ ಸ್ಟಾರ್ ಒಬ್ಬ, ಆ ಪ್ರಾಯದಲ್ಲಿ, ಆ ರೀತಿಯ ಪ್ರಯೋಗಕ್ಕೆ ಒಳಗಾಗುವುದು ಅಂದರೆ….! ಅದು ಅಮಿತಾಬ್ ಬಚ್ಚನ್ ಅಸ್ತಮಾ ರೋಗಿ ಆಗಿದ್ದರು! ಆ ರೀತಿಯ ತಾಳ್ಮೆ ಮತ್ತು ಬದ್ಧತೆಗಳು ಕೇವಲ ಅವರಿಗೆ ಮಾತ್ರ ಸಾಧ್ಯ ಆಗುವಂತದ್ದು.
ಮುಂದೆ ಪಾ ಸಿನಿಮಾ 2009ರ ಡಿಸೆಂಬರ್ ತಿಂಗಳಲ್ಲಿ ಎಲ್ಲ ಕಡೆ ಬಿಡುಗಡೆ ಆಯಿತು. ವಿದೇಶದಲ್ಲಿ ಕೂಡ ಬಿಡುಗಡೆ ಆಯಿತು. ಅದು ನಾವು ನಿರೀಕ್ಷೆ ಮಾಡಿದ್ದಕ್ಕಿಂತ ದೊಡ್ಡ ಹಿಟ್ ಆಯಿತು! ಆ ಸಕ್ಸಸ್ ದೊರೆಯಲು ಪ್ರಮುಖ ಕಾರಣ ಅದು ಖಂಡಿತವಾಗಿಯೂ ಅಮಿತಾಭ್ ಬಚ್ಚನ್ ಅಭಿನಯ ಮತ್ತು ಲವಲವಿಕೆ. ಆ ನಟನ ಜೀವನೋತ್ಸಾಹ ನಿಜಕ್ಕೂ ಒಂದು ಮಿರಾಕಲ್!
ಇಳಯರಾಜ ಸಂಗೀತ ಕೂಡ ಅದ್ಭುತವೇ ಆಗಿತ್ತು. ಇಡೀ ಸಿನಿಮಾದಲ್ಲಿ ಅಪ್ಪ ಮಗನ ಭಾವನಾತ್ಮಕ ಸಂಬಂಧದ ಅಂಡರ್ ಕರೆಂಟ್ ಇತ್ತು. ಇವೆಲ್ಲವೂ ಸಿನಿಮಾವನ್ನು ಭಾರಿ ಸಕ್ಸಸ್ ಮಾಡಿದವು.
ಈ ಸಿನಿಮಾದ ಅಭಿನಯಕ್ಕೆ ಅಮಿತಾಭ್ ಅವರಿಗೆ ಮೂರನೇ ಬಾರಿಗೆ ‘ಅತ್ಯುತ್ತಮ ನಟ’ ರಾಷ್ಟ್ರಪ್ರಶಸ್ತಿಯು ದೊರೆಯಿತು. ಹಾಗೆಯೇ ಐದನೇ ಫಿಲ್ಮ್ ಫೇರ್ ಅತ್ಯುನ್ನತ ನಟ ಪ್ರಶಸ್ತಿ ಕೂಡ ದೊರೆಯಿತು! ಅದು ಅಮಿತಾಭ್ ಬಚ್ಚನ್ ಅವರ ಬದ್ಧತೆ ಮತ್ತು ಪ್ರಯೋಗಶೀಲತೆಗೆ ದೊರೆತ ನಿಜವಾದ ಪ್ರಶಸ್ತಿ ಆಗಿತ್ತು!
ಈ ರೀತಿಯ ಸವಾಲು ಎದುರಿಸುವ ಶಕ್ತಿ ನಿಮಗೆ ಹೇಗೆ ಬಂತು? ಎಂದು ಪತ್ರಿಕೆಯವರು ಅಮಿತಾಬ್ ಅವರನ್ನು ಕೇಳಿದಾಗ ಅವರು ಕೊಟ್ಟ ಕಾರಣ ಅದ್ಭುತವೇ ಆಗಿತ್ತು.
“ನಾನು ಚಿಕ್ಕದಿರುವಾಗ ಒಮ್ಮೆ ನನ್ನ ಗೆಳೆಯರ ಕೈಯ್ಯಲ್ಲಿ ಪೆಟ್ಟು ತಿಂದು ಅಳುತ್ತಾ ಮನೆಗೆ ಬಂದಿದ್ದೆ. ಆಗ ಅಮ್ಮ ತೇಜಿ ಬಚ್ಚನ್ ನನಗೆ ಬೈದು ಒಂದು ಮಾತನ್ನು ಹೇಳಿದ್ದರು – ಮಗನೇ, ಇನ್ನು ಎಂದಿಗೂ ಅಳುತ್ತ ನನ್ನ ಮುಂದೆ ಬಂದು ನಿಲ್ಲಬೇಡ! ನೀನು ಆರಂಭ ಮಾಡಿದ ಯುದ್ಧವನ್ನು ನೀನೇ ಗೆಲ್ಲಬೇಕು ಎಂದು!”
ಪಾ ಸಿನಿಮಾದ ಮೂಲಕ ಅಮಿತಾಬ್ ಬಚ್ಚನ್ ಮತ್ತೆ ಕೀರ್ತಿಯ ಶಿಖರವನ್ನು ಏರಿದರು.