Site icon Vistara News

Raja Marga Column : ರಾಮ ಮಂದಿರ ಹೋರಾಟದ ಪ್ರಾತಃಸ್ಮರಣೀಯ ಹೆಸರು ಪೇಜಾವರ ಶ್ರೀ!

Pejavara Shri Ayodhya

ಶತಮಾನದ ಪರಿವ್ರಾಜಕ ಸಂತ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯನ್ನು (Shri Vishweshatheertha swameeji Pejavar Matt) ಅಯೋಧ್ಯೆಯ ರಾಮ ಜನ್ಮಭೂಮಿ ಹೋರಾಟ ಸಮಿತಿ (Rama Janmabhumi) ಮತ್ತು ಹಿಂದೂಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅದಕ್ಕೆ ಕಾರಣ ಅವರು ರಾಮ ಜನ್ಮಭೂಮಿ ಹೋರಾಟಕ್ಕೆ ನೀಡಿದ ದಿಟ್ಟ ನಾಯಕತ್ವ ಮತ್ತು ಮಾರ್ಗದರ್ಶನ. ವಿಶ್ವಹಿಂದೂ ಪರಿಷದ್ 1984ರಲ್ಲಿ ಅಯೋಧ್ಯೆಯ ವಿಷಯವನ್ನು ಎತ್ತಿಕೊಂಡು ‘ಮಂದಿರವಲ್ಲೇ ಕಟ್ಟುವೆವು’ (Mandiravalle Kattuvevu) ಎಂದು ಕರೆ ನೀಡಿತ್ತು. ಆಗ ಸರಯೂ ನದಿಯ ನೀರಿನಲ್ಲಿ ಮುಳುಗಿ 10,000 ಹಿಂದೂ ಕಾರ್ಯಕರ್ತರು ಆ ಸಂಕಲ್ಪವನ್ನು ತೆಗೆದುಕೊಂಡಾಗ ಮುಂದೆ ನಿಂತು ಮಾರ್ಗದರ್ಶನ ಮಾಡಿದವರು ಇದೇ ಸ್ವಾಮೀಜಿ. ಅಯೋಧ್ಯೆ ರಾಮಜನ್ಮಭೂಮಿ ಹೋರಾಟದಲ್ಲಿ ಅದೊಂದು ಮಹತ್ವದ ಹೆಜ್ಜೆ ಆಗಿತ್ತು. ಏಕೆಂದರೆ ರಾಮಮಂದಿರದ ಸ್ಥಾಪನೆಗೆ ಅಂದು ದೇಶದಲ್ಲಿ ಯಾವುದೇ ಪೂರಕ ವಾತಾವರಣ ಇರಲಿಲ್ಲ. ನ್ಯಾಯಾಂಗದ ತೀರ್ಪು ಕ್ಷಿಪ್ರವಾಗಿ ಬರುವ ಸೂಚನೆಯೇ ಇರಲಿಲ್ಲ. (Raja Marga Column)

ಸಂತರ ‘ಧರ್ಮ ಸಂಸದ್ ‘ ದಿಟ್ಟ ನಿರ್ಧಾರ

ಮುಂದೆ ದೆಹಲಿಯ ವಿಜ್ಞಾನ ಭವನದಲ್ಲಿ ಶ್ರೇಷ್ಠ ಸಂತರ ಮತ್ತು ಸ್ವಾಮೀಜಿಗಳ ‘ಧರ್ಮ ಸಂಸದ್’ ನಡೆದಾಗ ಅಯೋಧ್ಯೆಯ ರಾಮ ಮಂದಿರದ ಪರವಾಗಿ ಗಟ್ಟಿಯಾಗಿ ಮಾತನಾಡಿದವರು ಇದೇ ಸ್ವಾಮೀಜಿಗಳು. ಉಡುಪಿಯಲ್ಲಿ ಕೂಡ ಅವರ ನೇತೃತ್ವದಲ್ಲಿ ‘ಧರ್ಮ ಸಂಸದ್’ ನಡೆದು ಅದು ಅತ್ಯಂತ ಯಶಸ್ವೀ ಆಯಿತು. ‘ಅಯೋಧ್ಯೆಯಲ್ಲಿ ಇಲ್ಲವಾದರೆ ಬೇರೆಲ್ಲೂ ರಾಮಮಂದಿರ ಬೇಡ’ ಅಂದವರು ಪೇಜಾವರ ಶ್ರೀಗಳು.

ರಾಮನಿಗೆ ಇಡೀ ಭಾರತವನ್ನು ಬೆಸೆಯುವ ಶಕ್ತಿ ಇದೆ

ಚಿಕ್ಕಂದಿನಿಂದ ರಾಮನ ಕತೆಯನ್ನು ಕೇಳಿ ಬೆಳೆದ ಭಾರತೀಯರಿಗೆ ರಾಮ ಒಬ್ಬ ಆದರ್ಶ ಪುರುಷ. ಒಂದೊಮ್ಮೆ ಕೃಷ್ಣನ ಬಗ್ಗೆ ಒಡಕು ಸ್ವರ ಬಂದರೂ ಭಾರತೀಯರು ಸಹಿಸಿಯಾರು. ಆದರೆ ರಾಮನ ಬಗ್ಗೆ ಒಂದು ಕೆಟ್ಟ ಮಾತು ಭಾರತೀಯರು ಸಹಿಸಿಕೊಂಡ ಉದಾಹರಣೆ ಇಲ್ಲ. ಅಯೋಧ್ಯೆಯಿಂದ ಹೊರಟ ರಾಮ ಲಂಕೆಗೆ ಹೋದ ದಾರಿ, ಅವನು ಭೇಟಿಯಾದ ಸ್ಥಳಗಳು, ಅವನು ಕಟ್ಟಿದ ರಾಮಸೇತು ಎಲ್ಲವೂ ರಾಮನ ಬದುಕಿಗೆ ಐತಿಹಾಸಿಕ ಆಧಾರಗಳನ್ನು ಕೊಡುತ್ತವೆ. ಅವೆಲ್ಲವೂ ರಾಮನ ಕಾಲಮಾನಕ್ಕೆ ಮ್ಯಾಚ್ ಆಗುತ್ತವೆ. ರಾಮಸೇತು ನಿರ್ಮಾಣವಾಗಿ ಇಷ್ಟು ವರ್ಷ ಆದರೂ ಅದಿನ್ನೂ ಇದೆ. ಅದರ ಕಾರ್ಬನ್ ಡೇಟಿಂಗ್ ಪರೀಕ್ಷೆ ವಿಜ್ಞಾನಿಗಳು ನಡೆಸಿದಾಗ ಅದು ಕೂಡ ರಾಮಾಯಣದ ಕಾಲಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತದೆ ಅಂದಾಗ ರಾಮ ಕಾಲ್ಪನಿಕ ವ್ಯಕ್ತಿ ಹೇಗಾಗುತ್ತಾನೆ?

ಇದರ ಆಧಾರದ ಮೇಲೆ ಭಾರತದ ಸಂತರು ದೇಶದಾದ್ಯಂತ ಹಿಂದೂ ಸಮಾವೇಶಗಳನ್ನು ನಡೆಸುತ್ತಾರೆ. ಅಲ್ಲೆಲ್ಲ ಪೇಜಾವರ ಸ್ವಾಮೀಜಿಗಳು ಸಂತರ ಪ್ರತಿನಿಧಿಯಾಗಿ ಭಾಗವಹಿಸುತ್ತಾರೆ. ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಾರೆ.

ಸಂತರ ಒಮ್ಮತದ ಧ್ವನಿ ಅದು ಪೇಜಾವರ, ಅದು ರಾಮ ಮಂದಿರ

ಇಡೀ ಸಂತ ಮಂಡಳಿಯ ಒಗ್ಗಟ್ಟು ಕಾಪಾಡಿಕೊಳ್ಳಲು ಸಾಧ್ಯವಾದದ್ದು ಪೇಜಾವರ ಶ್ರೀಗಳಿಂದ. ವಿವಿಧ ಜಾತಿಗಳಲ್ಲಿ ಹರಡಿ ಹೋಗಿದ್ದ ಸ್ವಾಮೀಜಿಗಳನ್ನು ಅವರು ಕರೆದು ಮಾತಾಡಿ ಒಂದು ವೇದಿಕೆಗೆ ತರುತ್ತಾರೆ. ದಲಿತ ಸ್ವಾಮೀಜಿ ಎಂದು ತಮ್ಮನ್ನು ತಾವು ಕರೆಸಿಕೊಂಡವರನ್ನು ಕೂಡ ಅವರು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಸಭೆಗಳನ್ನು ಮಾಡುತ್ತಾರೆ. ಈ ಮಹಾ ಉದ್ದೇಶಕ್ಕಾಗಿ ಅವರು ದೇಶದಾದ್ಯಂತ ಸಂಚಾರ ಮಾಡಿದರು. ಪಾದಯಾತ್ರೆಗಳನ್ನು ಮಾಡಿದರು. ದಲಿತರ ಮನೆಗಳಿಗೆ ಭೇಟಿ ಕೊಟ್ಟರು. ಜನಜಾಗೃತಿ ಮೂಡಿಸಿದರು. ರಾಮನ ಹೆಸರಿನಲ್ಲಿ ಇಡೀ ಹಿಂದೂ ಸಮಾಜವನ್ನು ಬೆಸೆಯುವಲ್ಲಿ ಪೇಜಾವರ ಸ್ವಾಮೀಜಿಯವರ ಪಾತ್ರವನ್ನು ನಾವು ಮರೆಯಲು ಸಾಧ್ಯವೇ ಇಲ್ಲ.

1992ರ ಡಿಸೆಂಬರ್ 6 ಸ್ವಾಮೀಜಿ ಅಲ್ಲಿಯೇ ಇದ್ದರು

ಮುಂದೆ 1992 ಡಿಸೆಂಬರ್ ಆರರಂದು ಅಯೋಧ್ಯೆಯಲ್ಲಿ ಸಾಮೂಹಿಕ ಕರಸೇವೆಗೆ ವಿಶ್ವ ಹಿಂದೂ ಪರಿಷತ್ ಕರೆ ನೀಡಿದಾಗ ಸೇರಿದವರು ಲಕ್ಷಾಂತರ ಕರಸೇವಕರು. ರಥಯಾತ್ರೆಯಲ್ಲಿ ಆಡ್ವಾಣಿ, ಉಮಾಭಾರತಿ, ಫೈಜಾಬಾದ್ ಸಂಸದರಾದ ವಿನಯ್ ಕತಿಯಾರ್, ಸಾಧ್ವಿ ಋತಂಬರಾ ಅಲ್ಲಿದ್ದರು. ಪೇಜಾವರ ಸ್ವಾಮೀಜಿಯವರ ನೇತೃತ್ವದಲ್ಲಿ ಕೇಸರಿ ಸೇನೆ ಅಲ್ಲಿಗೆ ತಲುಪಿತ್ತು. ಕಾರ್ಯಕರ್ತರ ಉತ್ಸಾಹ ಹೆಚ್ಚಾಗಿ ಅವರು ತಡೆ ಬೇಲಿಯನ್ನು ದಾಟಿ ವಿವಾದಿತ ಕಟ್ಟಡದ ಕಡೆಗೆ ಧಾವಿಸಿದಾಗ ಅದನ್ನು ತಡೆಯುವ ಎಲ್ಲ ಪ್ರಯತ್ನವನ್ನೂ ಆಡ್ವಾಣಿ, ಪೇಜಾವರ ಶ್ರೀಗಳು ಮಾಡಿದ್ದರು. ಆದರೆ ಕೆಲವೇ ಘಂಟೆಯಲ್ಲಿ ವಿವಾದಿತ ಕಟ್ಟಡವು ಧರಾಶಾಯಿ ಆಗಿತ್ತು. ಆಕಾಶದ ಎತ್ತರಕ್ಕೆ ಧೂಳಿನ ಮೋಡಗಳು ಎದ್ದಿದ್ದವು. ಪೇಜಾವರ ಶ್ರೀಗಳ ಆರ್ದ್ರ ಧ್ವನಿಯು ಸೇರಿದ ಲಕ್ಷಾಂತರ ಕಾರ್ಯಕರ್ತರ ‘ಜೈ ಶ್ರೀರಾಮ’ ಘೋಷದ ನಡುವೆ ಯಾರಿಗೂ ಕೇಳಿಸಲೇ ಇಲ್ಲ.

ಆ ಕ್ಷಣಕ್ಕೆ ಪೇಜಾವರ ಶ್ರೀಗಳಿಗೆ ಕರ್ತವ್ಯ ಪ್ರಜ್ಞೆ ಜಾಗೃತ ಆಗಿತ್ತು!

ಆ ಕ್ಷಣಕ್ಕೆ ಉರುಳಿ ಬಿದ್ದ ಕಟ್ಟಡದ ಕಡೆಗೆ ಪೇಜಾವರ ಶ್ರೀಗಳು ಬಿಟ್ಟ ಬಾಣದಂತೆ ಧಾವಿಸಿದ್ದರು. ಅವರನ್ನು ತಡೆಯಲು ಯಾರಿಗೂ ಸಾಧ್ಯವೇ ಆಗಲಿಲ್ಲ. ಅವರು ಹೋಗಿ ಹುಡುಕಿದ್ದು ಕಟ್ಟಡದ ಒಳಗಿದ್ದ ರಾಮ ಲಲ್ಲಾನ ಮೂರ್ತಿಯನ್ನು!

ಉರುಳಿ ಬಿದ್ದ ಇಟ್ಟಿಗೆಗಳ ನಡುವೆ ರಾಮ ಲಲ್ಲಾನ ಮೂರ್ತಿ ದೊರೆತ ಕೂಡಲೇ ಸ್ವಾಮೀಜಿ ಅದನ್ನು ಬಾಚಿ ತಬ್ಬಿಕೊಂಡರು. ಅವರ ಕಣ್ಣಿಂದ ಆನಂದ ಬಾಷ್ಪ ಸುರಿಯಲು ಆರಂಭವಾಗಿತ್ತು. ಅವರು, ಅವರ ಶಿಷ್ಯರು ಗಟ್ಟಿಯಾಗಿ ರಾಮ ರಕ್ಷಾ ಸ್ತೋತ್ರವನ್ನು ಪಠಿಸಲು ಆರಂಭ ಮಾಡಿದ್ದರು. ಕಳೆದು ಹೋಗಿದ್ದ ತುಂಬಾ ಅಮೂಲ್ಯವಾದ ಒಂದು
ಕೊಪ್ಪರಿಗೆಯನ್ನು ಮತ್ತೆ ಪಡೆದ ಖುಷಿ ಅವರ ಕಣ್ಣಲ್ಲಿ ತುಂಬಿತ್ತು.

ಮರುದಿನ ಬೆಳಿಗ್ಗೆ ಒಂದು ಒಳ್ಳೆಯ ಮುಹೂರ್ತದಲ್ಲಿ ಅದೇ ಕಟ್ಟಡದ ಒಂದು ಪಾರ್ಶ್ವದಲ್ಲಿ ಒಂದು ತಾತ್ಕಾಲಿಕ ಗುಡಿಯನ್ನು ಕಟ್ಟಿ ಅಲ್ಲಿ ರಾಮ ಲಲ್ಲಾನ ಮೂರ್ತಿಯನ್ನು ಸ್ಥಾಪನೆ ಮಾಡುವವರೆಗೂ ಅವರು ನಿದ್ದೆಯನ್ನೇ ಮಾಡಿರಲಿಲ್ಲ. ಒಂದು ತೊಟ್ಟು ನೀರೂ ಕುಡಿದಿರಲಿಲ್ಲ.

ಇದನ್ನೂ ಓದಿ : Raja Marga Column : ಭವ್ಯ ರಾಮ ಮಂದಿರದ ಅದ್ಭುತ ವಿನ್ಯಾಸಗಾರ ಚಂದ್ರಕಾಂತ ಸೋಮಪುರ

ಮುಂದೆ ಎಲ್ಲವೂ ಅವರ ಸಂಕಲ್ಪದಂತೆ ನಡೆದಿವೆ!

ಅಂತಹ ಪೇಜಾವರ ಶ್ರೀಗಳು 2019 ಡಿಸೆಂಬರ್ 29ರಂದು ನಮ್ಮನ್ನು ಆಗಲಿದರು. ಮುಂದೆ ನಡೆದ ಎಲ್ಲ ಘಟನೆಗಳು ಅವರ ಸಂಕಲ್ಪದಂತೆ ನಡೆದಿವೆ ಅನ್ನುವುದು ಭರತವಾಕ್ಯ. ಅಸಾಮಾನ್ಯ ತಪಶ್ಯಕ್ತಿ ಹೊಂದಿದ್ದ ಪೇಜಾವರ ಸ್ವಾಮೀಜಿಗಳು ಜನವರಿ 22ರಂದು ರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠೆ ಆಗುವಾಗ ಅಯೋಧ್ಯೆಯಲ್ಲಿ ಖಂಡಿತವಾಗಿ ಇರುತ್ತಾರೆ, ಆತ್ಮ ಶರೀರಿಯಾಗಿ!

Exit mobile version