Site icon Vistara News

Raja Marga Column : ನಮ್ಮ ಕನ್ನಡ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಗಳು ಯಾಕೆ ಹೀಗೆ?

School day Function in Kannada Schools

ಪ್ರತೀ ಮಗುವೂ ಒಂದಲ್ಲ ಒಂದು ಪ್ರತಿಭೆಗಳನ್ನು ಪಡೆದುಕೊಂಡು ಈ ಜಗತ್ತಿಗೆ ಬಂದಿರುತ್ತದೆ. ಕೆಲವು ಮಕ್ಕಳಂತೂ ಹಲವು ಪ್ರತಿಭೆಗಳ ಎರಕವೇ ಆಗಿರುತ್ತಾರೆ. ಅಂತಹ ಮಕ್ಕಳ ಪ್ರತಿಭೆಗಳನ್ನು ಶಿಕ್ಷಕರು ಗುರುತಿಸಿ ಅವುಗಳನ್ನು ಸಾರ್ವಜನಿಕ ವೇದಿಕೆಯಲ್ಲಿ (Public Stage) ಕ್ಯಾನ್ವಾಸ್ ಮಾಡುವ ಉದ್ದೇಶ ಹೊಂದಿರುವ ಉತ್ಸವವೇ ಶಾಲಾ ವಾರ್ಷಿಕೋತ್ಸವ (School day function). ಅದರ ಜೊತೆಗೆ ಶಾಲೆಗಳ ಇಮೇಜ್ ಹೆಚ್ಚು ಮಾಡುವ ಉದ್ದೇಶ ಖಂಡಿತವಾಗಿ ಇದೆ. ಕನ್ನಡ ಸಂಸ್ಕೃತಿಯ (Kannada Culture) ಪರಿಚಯ ಮತ್ತು ಪ್ರಸಾರ ಕೂಡ ಆಗಬೇಕು. ಆದರೆ ಇಂದಿನ ಕನ್ನಡ ಶಾಲಾ ವಾರ್ಷಿಕೋತ್ಸವಗಳು (School day of Kannada Schools) ಆ ಉದ್ದೇಶಗಳನ್ನು ಈಡೇರಿಸುತ್ತಿವೆಯಾ? (Raja Marga Column).

ಸರಕಾರಿ ಶಾಲೆಗಳಲ್ಲಿ ಪ್ರೋಟೋಕಾಲ್ ತೊಂದರೆ

ಆಮಂತ್ರಣ ಪತ್ರಿಕೆ ಮುಖ್ಯ ಶಿಕ್ಷಕರು ಮುದ್ರಿಸಲು ಹೊರಟಾಗಲೇ ಎದುರಾಗುವ ಮೊದಲ ಸಮಸ್ಯೆ ಎಂದರೆ ಪ್ರೋಟೋಕಾಲ್ ಸಮಸ್ಯೆ. ಶಾಸಕರು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಎಲ್ಲರನ್ನೂ ಫಿಟ್ ಮಾಡಿ ಆಮಂತ್ರಣ ಪತ್ರಿಕೆಯು ಪ್ರಿಂಟ್ ಆಗಿ ಬರುವಷ್ಟರಲ್ಲಿ ಹೆಡ್ ಮಾಸ್ಟರ್ ಸುಸ್ತು ಹೊಡೆಯುತ್ತಾರೆ. ವಾರಾಂತ್ಯದ ದಿನ ಆದರೆ ಶಾಸಕರಿಗೆ ಹತ್ತಾರು ವಾರ್ಷಿಕೋತ್ಸವಗಳು. ಅವರು ಎಲ್ಲಿಗೆಂದು ಹೋಗುವುದು? ಹೋಗುವ ಆಸೆ ಇದ್ದರೂ ಸಮಯಕ್ಕೆ ಸರಿಯಾಗಿ ತಲುಪುವುದು ಹೇಗೆ?

ಕೆಲವು ಒಳ್ಳೆಯ ಶಾಸಕರು ನನ್ನನ್ನು ಕಾಯೋದು ಬೇಡ, ಮುಂದುವರಿಸಿ ಎಂದು ಹೇಳಿ ಉದಾರತೆ ತೋರುತ್ತಾರೆ. ಆದರೆ ಕೆಲವು ಶಾಸಕರು ತಾವು ಬಾರದೆ ಆರಂಭ ಮಾಡಬೇಡಿ ಎಂದು ಅಪ್ಪಣೆ ಕೊಡಿಸುತ್ತಾರೆ. ಅದರ ಜೊತೆ ಅವರ ಅಭಿಮಾನಿಗಳಿಗೆ ಶಾಸಕರು ಬಾರದೆ ಸಮಾಧಾನ ಆಗುವುದಿಲ್ಲ. ಇದರಿಂದಾಗಿ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭ ಆಗುವುದಿಲ್ಲ. ಆರಂಭ ಆದ ನಂತರ ಸಭಾ ಕಾರ್ಯಕ್ರಮ ಉದ್ದ ಆಗುತ್ತಾ ಹೋಗುತ್ತದೆ. ವೇದಿಕೆಯಲ್ಲಿ ಸ್ಥಾನ ಪಡೆದ ಎಲ್ಲ ಪಂಚಾಯತ್ ಸದಸ್ಯರೂ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರೂ ಮಾತಾಡಲು ಹಾತೊರೆಯುತ್ತಾರೆ. ದಾನಿಗಳಿಗೆ ಸನ್ಮಾನ, ಅವರ ಭಾಷಣಗಳು ಸಾಕಷ್ಟು ಸಮಯ ತಿನ್ನುತ್ತವೆ. ಶಾಲಾ ವರದಿ, ಸ್ವಸ್ತಿ ವಾಚನ, ಗುರು ವಂದನೆ ಇತ್ಯಾದಿ ಖಂಡಿತವಾಗಿ ಇರುತ್ತವೆ.

ಕಾರ್ಯಕ್ರಮದ ಅವಧಿ ದೀರ್ಘ ಆಗುತ್ತದೆ ಎಂಬ ಕಾರಣಕ್ಕೆ ಮಕ್ಕಳ ಬಹುಮಾನ ವಿತರಣೆಯ ಅಜೆಂಡಾ ಕಟ್ ಆಗುತ್ತದೆ. ಅದು ನಿಜವಾಗಿ ಮಕ್ಕಳಿಗೆ ರೋಮಾಂಚನ ಕೊಡುವ ಕಾರ್ಯಕ್ರಮ ಹೌದಲ್ಲ. ಒಬ್ಬ ಒಳ್ಳೆಯ ಸಾಹಿತಿ, ಕಲಾವಿದ, ಸಮಾಜ ಸೇವಕ ಇವರನ್ನು ಅತಿಥಿಯಾಗಿ ಕರೆದುತಂದು ಒಳ್ಳೆಯ ಮಾತುಗಳನ್ನು ಹೇಳಿಸಿದರೆ ಚಂದ ಆಗ್ತದೆ ಅಲ್ವಾ?

ದೀರ್ಘ ಅವಧಿಯ ಸಭಾ ಕಾರ್ಯಕ್ರಮಗಳು

ಯಾವುದೇ ಪ್ರೇಕ್ಷಕರ ತಾಳ್ಮೆಯ ಧಾರಣಾ ಸಾಮರ್ಥ್ಯವು ಒಂದೂವರೆ ಘಂಟೆ ಅಷ್ಟೇ. ಆದರೆ ಸಭಾ ಕಾರ್ಯಕ್ರಮಗಳ ಅವಧಿ ಮೂರು ಘಂಟೆಗಳನ್ನು ಮೀರಿ ಮುಂದೆ ಹೋದಾಗ ವೇದಿಕೆಯಲ್ಲಿ ಕುಳಿತ ಅತಿಥಿಗಳಿಗೆ ಅಸಿಡಿಟಿ ಆರಂಭ ಆಗಿರುತ್ತದೆ. ಮೇಕಪ್ ರೂಮಿನಲ್ಲಿ ಮೇಕಪ್ ಮಾಡಿ ಕೂತ ಪುಟ್ಟ ಪುಟ್ಟ ಮಕ್ಕಳು ಎಂಬ ದೇವರು ನಿದ್ದೆಗೆ ಜಾರಿರುತ್ತಾರೆ. ಯಕ್ಷಗಾನದ ದೊಡ್ಡ ದೊಡ್ಡ ಕಿರೀಟ ತೊಟ್ಟುಕೊಂಡು ಪುಟ್ಟ ಮಕ್ಕಳು ವಾಂತಿ ಮಾಡಿ ಸುಸ್ತಾಗಿ ವೇದಿಕೆಗೆ ಬರುವಾಗ ಹೈರಾಣ ಆಗಿರುತ್ತಾರೆ. ಅಲ್ಲಿಗೆ ಶಾಲಾ ವಾರ್ಷಿಕೋತ್ಸವದ ಯಾವ ಉದ್ದೇಶವು ಸಫಲ ಆಗಬಹುದು? ತಮ್ಮ ತಮ್ಮ ಮಕ್ಕಳ ಪ್ರತಿಭೆ ನೋಡಲು ಬಂದಿರುವ ಹೆತ್ತವರು ಕುತ್ತಿಗೆ ಉದ್ದ ಮಾಡಿಕೊಂಡು ಎಷ್ಟು ಹೊತ್ತು ಕಾಯಬೇಕು?

ಹಳಿ ತಪ್ಪುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು

ವಾರ್ಷಿಕೋತ್ಸವದ ಪ್ರಧಾನ ಆಕರ್ಷಣೆ ಎಂದರೆ ಸಾಂಸ್ಕೃತಿಕ ಕಾರ್ಯಕ್ರಮಗಳು. ಜನ ಬರುವುದೇ ಅವುಗಳನ್ನು ನೋಡಲು. ಹೆತ್ತವರಿಗೆ ತಮ್ಮ ಮಕ್ಕಳನ್ನು ವೇದಿಕೆಯಲ್ಲಿ ನೋಡುವುದೇ ಒಂದು ಹಬ್ಬ. ಅದರ ಜೊತೆಗೆ ನಾಡಿನ ಸಾಂಸ್ಕೃತಿಕ ಪರಿಷೆಯನ್ನು ಪರಿಚಯ ಮಾಡಲು ಒಂದು ಒಳ್ಳೆಯ ಅವಕಾಶ ಇದು. ಆದರೆ ಈಗ ಆಗುತ್ತಿರುವುದು ಏನು?

ಮಕ್ಕಳ ಪ್ರತಿಭೆ ಎಂದರೆ ಬರೇ ನೃತ್ಯ, ನೃತ್ಯ ಮತ್ತು ನೃತ್ಯ ಎಂದಾಗಿದೆ. ಅನನ್ಯ ಸಾಂಸ್ಕೃತಿಕ ವೇದಿಕೆಗಳಾದ ಕನ್ನಡ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳನ್ನು ಪ್ರದರ್ಶನ ಮಾಡುವ ಶಾಲೆಗಳ ಸಂಖ್ಯೆ ಕಡಿಮೆ ಆಗಿದೆ. ಮೌಲ್ಯಗಳ ಅನಾವರಣ, ರಾಷ್ಟ್ರ ಪ್ರೇಮದ ಉದ್ದೀಪನ, ಪೌರಾಣಿಕ ಪಾತ್ರಗಳು, ಇತಿಹಾಸದ ಪರಿಚಯ, ಕೌಟುಂಬಿಕ ಮೌಲ್ಯಗಳು, ಹೃದಯ ಶ್ರೀಮಂತಿಕೆ ಬೆಳೆಸುವ ಕನ್ನಡ ನಾಟಕಗಳು ಇಂದು ಕನ್ನಡ ಶಾಲೆಗಳ ವಾರ್ಷಿಕೋತ್ಸವದ ವೇದಿಕೆಗಳಲ್ಲಿ ಕಡಿಮೆ ಆಗಿದೆ. ಕೇವಲ ಸೊಂಟ ತಿರುಗಿಸುವ ಹಾಡುಗಳು, ಶಬ್ದ ಮಾಲಿನ್ಯದ ರೀಮಿಕ್ಸ್ ನಂಬರುಗಳು, ಎದೆ ಬಡಿತವನ್ನು ಹೆಚ್ಚಿಸುವ ಪಾಶ್ಚಾತ್ಯ ಹಾಡುಗಳು ಇವಿಷ್ಟು ಮಾತ್ರ ಮಕ್ಕಳ ಪ್ರತಿಭೆ ಎಂದು ತಿಳಿದುಕೊಳ್ಳುವ ಹಾಗೆ ಆಗಿದೆ. ಮಕ್ಕಳ ಜಗಮಗಿಸುವ ಡ್ರೆಸ್ ಎಷ್ಟೋ ಕಡೆ ಗಿಡ್ಡ ಆಗ್ತಾ ಇವೆ. ಪೋಷಕರು ಅದನ್ನೇ ಪರಮ ಪ್ರಸಾದ ಎಂದು ಸ್ವೀಕರಿಸುವ ದೃಶ್ಯ ನಾನು ನೋಡುತ್ತಾ ಇದ್ದೇನೆ.

ಕನ್ನಡದ ಜಾನಪದ ನೃತ್ಯಗಳಾದ ಕಂಗೀಲು, ಹಾಲಕ್ಕಿ, ಸುಗ್ಗಿ ನೃತ್ಯ, ಹೋಳಿ ನೃತ್ಯ, ವೀರಗಾಸೆ, ಕರಗ, ಇತ್ಯಾದಿ ನಮಗೆ ಕನ್ನಡ ಶಾಲೆಗಳ ವೇದಿಕೆಗಳಲ್ಲಿ ಕಡಿಮೆ ಕಾಣುತ್ತಿವೆ.

ಯಕ್ಷಗಾನವು ನಾಡಿನ ಹೆಮ್ಮೆಯ ಕಲೆ. ಅದಕ್ಕೊಂದು ವೇದಿಕೆ ಬೇಕು ಎಂದು ನನಗೆ ಅನ್ನಿಸುತ್ತದೆ. ಅದರ ಜೊತೆಗೆ ಶಾಸ್ತ್ರೀಯ ಭರತ ನಾಟ್ಯ, ಶಾಸ್ತ್ರೀಯ ಸಂಗೀತ, ಕನ್ನಡದ ಶ್ರೇಷ್ಟವಾದ ಭಾವಗೀತೆಗಳು, ಮಣ್ಣಿನ ವಾಸನೆ ಇರುವ ಜಾನಪದ ಗೀತೆಗಳು ಕನ್ನಡ ಶಾಲೆಯ ಉತ್ಸವಗಳ ವೇದಿಕೆಯಲ್ಲಿ ಇತ್ತೀಚೆಗೆ ಕಡಿಮೆ ಆಗುತ್ತಿವೆ. ಕನ್ನಡದ ಮಕ್ಕಳ ಏಕಪಾತ್ರಾಭಿನಯ, ಮೂಕಾಭಿನಯ, ಸ್ಕಿಟ್, ಸಮೂಹ ಗೀತೆಗಳು, ಪೈಂಟಿಂಗ್, ದಂಬೆಲ್ಸ್, ಕೋಲಾಟ, ಜಡೆ ಕೋಲಾಟ, ಕಂಸಾಳೆ, ಕವಾಯತು, ಯೋಗ ಪ್ರದರ್ಶನ, ವಿವಿಧ ಆತ್ಮರಕ್ಷಣೆಯ ಕಲೆಗಳು ಕನ್ನಡ ಶಾಲೆಗಳ ವಾರ್ಷಿಕೋತ್ಸವದ ವೇದಿಕೆಗಳಲ್ಲಿ ಇತ್ತೀಚೆಗೆ ಕಡಿಮೆ ಆಗುತ್ತಿವೆ. ಹಾಗಿರುವ ಮಕ್ಕಳಲ್ಲಿ ಕನ್ನಡ ಪ್ರೇಮ, ಸಂಸ್ಕೃತಿ ಪ್ರೇಮ ಹೆಚ್ಚುವುದು ಹೇಗೆ? ಮಕ್ಕಳೇ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆ ಮಾಡಿದರೆ ಒಳ್ಳೆಯದು.

ಇದನ್ನೂ ಓದಿ: Raja Marga Column : ಕನ್ನಡ ಶಾಲೆಗಳೆಂಬ ಭೂಲೋಕದ ಸ್ವರ್ಗಗಳು!

ಭರತ ವಾಕ್ಯ: ಕನ್ನಡ ಶಾಲೆಗಳ ವಾರ್ಷಿಕೋತ್ಸವ ಕಾರ್ಯಕ್ರಮವು ಕನ್ನಡ ಸಂಸ್ಕೃತಿ ಮತ್ತು ಮಕ್ಕಳ ಅದ್ಭುತ ಪ್ರತಿಭೆಗಳ ಎರಕವಾಗಬೇಕು. ಕನ್ನಡ ಶಾಲೆಗಳು ನಾಡಿಗೆ ಮಾದರಿ ಆಗಬೇಕು. ಇಂಗ್ಲೀಷ್ ಶಾಲೆಗಳ ಅನುಕರಣೆ ಆಗುವುದು ಬೇಡ ಎನ್ನುವುದೇ ಆಶಯ. ಏನಂತೀರಿ?

ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ ಮಾಡಿ

Exit mobile version