Site icon Vistara News

ರಾಜ ಮಾರ್ಗ ಅಂಕಣ : ವೇಶ್ಯಾವೃತ್ತಿ ಅಪರಾಧವಲ್ಲ, ಅವರು ಸೆಕ್ಸ್‌ ವರ್ಕರ್‌ಗಳು; ಅವರ ಕೆಲಸ ಅವರು ಮಾಡಲಿ ಬಿಡಿ!

Sex workers

ಕಳೆದ ವರ್ಷ ಸುಪ್ರೀಂಕೋರ್ಟು ವೇಶ್ಯಾವೃತ್ತಿಯ (Prostitution) ಬಗ್ಗೆ ನೀಡಿರುವ ಒಂದು ತೀರ್ಪು ಹಲವು ಕಾರಣಕ್ಕೆ ಪ್ರಮುಖವಾಗಿದೆ ಮತ್ತು ಹೆಚ್ಚು ಮಾನವೀಯ ಅಂತಃಕರಣದಿಂದ ಕೂಡಿದೆ. ವೇಶ್ಯಾವೃತ್ತಿಯನ್ನು ‘ಕಾನೂನುಬದ್ಧ’ (Sex work is not offence) ಎಂದು ತೀರ್ಪನ್ನು ನೀಡಿದ ನಮ್ಮ ಸುಪ್ರೀಂ ಕೋರ್ಟು (Supreme court) ಲೈಂಗಿಕ ಕಾರ್ಯಕರ್ತೆಯರ (Sex Workers) ದೀರ್ಘಕಾಲದ ಬೇಡಿಕೆಗೆ ಅಸ್ತು ಎಂದಿತ್ತು. ಇನ್ನು ಭಯ ಇಲ್ಲದೆ ತಮ್ಮ ವೃತ್ತಿಯನ್ನು ನಡೆಸಬಹುದು ಎಂಬ ನೆಮ್ಮದಿಯು ಆ ವೃತ್ತಿಯನ್ನು ಬಹಳ ವರ್ಷಗಳಿಂದ ನಡೆಸುತ್ತಿರುವ ನಮ್ಮ ಸಹೋದರಿಯರಲ್ಲಿ ಈಗ ಕಂಡುಬಂದಿದೆ. ಅದೊಂದು ಐತಿಹಾಸಿಕವಾದ ತೀರ್ಪು ಆಗಿದ್ದು ಇದರಿಂದ ಲೈಂಗಿಕ ವೃತ್ತಿಯಲ್ಲಿ ತೊಡಗಿರುವ ನಮ್ಮ ದೇಶದ ಬಹು ದೊಡ್ಡ ಸಂಖ್ಯೆಯ ಮಹಿಳೆಯರಿಗೆ ಒಂದು ಹಂತದ ರಿಲೀಫ್ ಸಿಕ್ಕಿದೆ (ರಾಜ ಮಾರ್ಗ ಅಂಕಣ).

ವೇಶ್ಯಾವೃತ್ತಿ ಕೂಡ ಒಂದು ವೃತ್ತಿ!

ಇತಿಹಾಸದಲ್ಲಿ ಕೂಡ ಅದಕ್ಕೆ ರಾಜಮುದ್ರೆಯ ಅಂಕಿತ ಇತ್ತು! ವಿಜಯನಗರದ ಅರಸರ ಕಾಲದಲ್ಲಿ ವೇಶ್ಯಾವೃತ್ತಿಯು ಶಾಸನಾತ್ಮಕ ಒಪ್ಪಿಗೆ ಪಡೆದಿತ್ತು ಅನ್ನುತ್ತದೆ ಇತಿಹಾಸ. ಹಾಗೆಯೇ ಹೆಚ್ಚು ಕಡಿಮೆ ಎಲ್ಲ ರಾಜವಂಶಗಳ ಕಾಲದಲ್ಲಿ ಕೂಡ ರಾಜನರ್ತಕಿಯರು, ವಾರಾಂಗನೆಯರು ಮತ್ತು ವೇಶ್ಯೆಯರು ಇದ್ದರು. ಎಲ್ಲ ನಗರಗಳ ವ್ಯಾಪ್ತಿಯಲ್ಲಿಯೂ ವೇಶ್ಯೆಯರದ್ದೆ ಆದ ವಿಶಾಲ ವಾಡೆಗಳು ಇರುತ್ತಿದ್ದವು.

ಕಾಳಿದಾಸ, ಭಾಸ, ಭವಭೂತಿ, ಶೂದ್ರಕ ಮೊದಲಾದವರು ಬರೆದಿರುವ ಹಲವು ಪುರಾತನ ಸಂಸ್ಕೃತ ನಾಟಕಗಳಲ್ಲಿ ವೇಶ್ಯೆಯರ ಪಾತ್ರಗಳು ಬರುತ್ತವೆ. ಅವರು ಯಾವುದೇ ಸಂಕೋಚವನ್ನು ಮಾಡದೆ ತಾವು ವೇಶ್ಯೆಯರು ಎಂದು ಹೇಳಿಕೊಳ್ಳುತ್ತಾರೆ. ಶೂದ್ರಕ ಬರೆದ ಪ್ರಸಿದ್ಧ ನಾಟಕ ಮೃಚ್ಛಕಟಿಕ. ಅದರ ಕಥಾನಾಯಕಿ ವಸಂತಸೇನೆ ಒಬ್ಬಳು ವೇಶ್ಯೆ ಮತ್ತು ಅವಳನ್ನು ಪ್ರೀತಿಸಲು ಬರುವ ಅರಸನಿಗೆ ಅವಳು ವೇಶ್ಯೆ ಎಂದು ಗೊತ್ತಿರುತ್ತದೆ.

ಅವರಿಗೂ ಉನ್ನತ ಸಾಮಾಜಿಕ ಸ್ಥಾನಮಾನ!

ಅವರಿಗೆ ಉನ್ನತ ಸಾಮಾಜಿಕ ಸ್ಥಾನಮಾನಗಳು ಇದ್ದವು. ಅವರಿಗೆ ರಾಜಾಶ್ರಯವೂ ಇತ್ತು. ಕೌಟುಂಬಿಕ ಭದ್ರತೆಯೂ ಕೂಡ ಇತ್ತು. ವೇಶ್ಯೆಯ ಮಗಳು ವೇಶ್ಯೆಯರು ಆಗಬೇಕು ಎಂಬ ನಿಯಮವೂ ಇರಲಿಲ್ಲ. ವೇಶ್ಯೆಯರಿಗೂ ಕುಟುಂಬಗಳು ಇದ್ದವು! ವೇಶ್ಯಾವೃತ್ತಿಯು ಅವರವರ ಆಯ್ಕೆಯ ವೃತ್ತಿ ಆಗಿತ್ತು.

ಬಲವಂತದ ವೇಶ್ಯಾವೃತ್ತಿ ಸಲ್ಲದು

ಆದರೆ ಮುಂದೆ ಜಮೀನುದಾರಿಕೆಯ ದರ್ಪದ ಹಾಗೂ ದಬ್ಬಾಳಿಕೆಯ ಫಲವಾಗಿ ದೇವದಾಸಿ ಪದ್ದತಿ, ಬೆತ್ತಲೆ ಸೇವೆ ಮೊದಲಾದ ಬಲವಂತದ ತುಳಿತಕ್ಕೆ ದಾರಿ ಮಾಡಿಕೊಟ್ಟವು ಮತ್ತು ಅವರನ್ನು ಪರೋಕ್ಷ ವೇಶ್ಯಾವೃತ್ತಿಗೆ ದೂಡಿದವು.

ಸಣ್ಣ ಸಣ್ಣ ಪ್ರಾಯದ ಹುಡುಗಿಯರನ್ನು ಗೆಜ್ಜೆಪೂಜೆ ಮಾಡಿ ದೇವಾಲಯಗಳಿಗೆ ಹರಕೆ ಬಿಡುವ ನೆಪದಲ್ಲಿ ದೇವದಾಸಿಯ ಪದ್ಧತಿಯು ಆಚರಣೆಗೆ ಬಂದಿತು. ಅತ್ಯಂತ ಅಮಾನವೀಯ ಪದ್ಧತಿ ಇದು. .ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದಿಗೂ ದೇವದಾಸಿ ಹಾಗೂ ಬೆತ್ತಲೆ ಸೇವೆ ಪದ್ಧತಿಗಳ ಕೆಲವು ಅವಶೇಷಗಳು ಇವೆ. ಬಹು ಸಂಖ್ಯೆಯ ಲೈಂಗಿಕ ಸಂತ್ರಸ್ತರು ಈಗಲೂ ಇದ್ದಾರೆ.

ಅವರಿಗೆ ಸರಕಾರ ಆಧಾರ್ ಕಾರ್ಡ್, ರೇಶನ್ ಮೊದಲಾದ ಸೌಲಭ್ಯಗಳನ್ನು ಕೊಡುವ ವ್ಯವಸ್ಥೆ ಮಾಡಬೇಕಾಗಿದೆ. ಅಂತವರ ಮಕ್ಕಳಿಗೆ ಸರಕಾರವು ವಿಶೇಷವಾದ ಶಾಲೆಗಳನ್ನು ತೆರೆಯಬೇಕು ಎನ್ನುವುದು ಬಹುಕಾಲದ ಬೇಡಿಕೆ ಆಗಿದೆ. ಅಂತವರ ಮಕ್ಕಳು ಸಾಮಾನ್ಯ ಮಕ್ಕಳ ಶಾಲೆಗೆ ಹೋದರೆ ಅಪಮಾನ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ.

Red light area

ಹಲವು ದೇಶಗಳಲ್ಲಿ ಇದು ಕಾನೂನುಬದ್ಧ ವೃತ್ತಿ

ಹಲವು ಮುಂದುವರೆದ ಯುರೋಪ್ ದೇಶಗಳಲ್ಲಿ ಹಾಗೂ ಜಪಾನ್ ದೇಶದಲ್ಲಿ ಈ ಲೈಂಗಿಕ ವೃತ್ತಿಯು ಯಾವಾಗಲೋ ಕಾನೂನುಬದ್ಧವಾಗಿದೆ. ಅಲ್ಲಿ ಸರಕಾರವೇ ಅಂತಹವರಿಗೆ ಗುರುತು ಚೀಟಿಗಳನ್ನು ನೀಡಿದೆ. ಕಾಲ ಕಾಲಕ್ಕೆ ಅವರಿಗೆ ಆರೋಗ್ಯ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಅವರದ್ದೇ ಆದ ಬಲಿಷ್ಠವಾದ ಸಂಘಟನೆಗಳು ಇವೆ. ತಮ್ಮದೇ ಆದ ಹಕ್ಕುಗಳಿಗಾಗಿ ಬೀದಿಗೆ ಇಳಿದು ಹೋರಾಡಲು ಅವರು ಹಿಂದೆ ಮುಂದೆ ನೋಡುವುದಿಲ್ಲ. ಇಂತಹ ಕರ್ಮಚಾರಿಗಳು ತಾವು ವೇಶ್ಯೆ ಎಂದು ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ. ಅವರನ್ನು ಸಮಾಜವೂ ತುಂಬಾನೇ ಗೌರವಯುತವಾಗಿ ನಡೆಸಿಕೊಳ್ಳುತ್ತದೆ.

ಅವರನ್ನು ಮಾತಾಡಿಸಿದಾಗ….

‘ಒಬ್ಬ ಗಾಯಕ ತನ್ನ ಕಂಠವನ್ನು ಉಪಯೋಗ ಮಾಡಿ ದುಡ್ಡು ಸಂಪಾದನೆ ಮಾಡಿದ ಹಾಗೆ ನಾನು ನನ್ನ ದೇಹವನ್ನು ಉಪಯೋಗ ಮಾಡಿ ದುಡ್ಡು ಸಂಪಾದನೆ ಮಾಡುವೆ. ಅದರಲ್ಲಿ ತಪ್ಪೇನು?’ ಎಂದು ಒಬ್ಬ ವೇಶ್ಯೆಯು ಪ್ರಮುಖ ಮಾಧ್ಯಮದಲ್ಲಿ ಪ್ರಶ್ನೆ ಮಾಡಿದಾಗ ನಮಗೆ ಆ ವೃತ್ತಿ ತಪ್ಪು ಎಂದು ಅನ್ನಿಸುವುದೇ?

ಇನ್ನೊಬ್ಬಳು ವಿದೇಶೀ ಮಹಿಳೆ ‘ನನ್ನ ಹೆತ್ತವರು ತುಂಬಾ ಶ್ರೀಮಂತರು. ನನ್ನ ಹೆಸರಿನಲ್ಲಿ ಬೇಕಾದಷ್ಟು ಆಸ್ತಿ ಪಾಸ್ತಿ ಇದೆ. ಈ ವೃತ್ತಿ ನನ್ನ ಪ್ಯಾಶನ್. ನೂರಾರು ಗಂಡಸರು ನನ್ನ ಪ್ರೀತಿಯನ್ನು ಬಯಸಿ ನನ್ನ ಬಳಿ ಬರುತ್ತಾರೆ. ಅವರ ಸಮಸ್ಯೆ ಹೇಳಿಕೊಂಡು ಅಳುತ್ತಾರೆ. ನಾನು ನನ್ನ ಪ್ರೀತಿಯ ಮೂಲಕ ಅವರಿಗೆ ಸಾಂತ್ವನ ಕೊಡುತ್ತೇನೆ. ಅದರಿಂದಾಗಿ ನನ್ನದು ಅತೀ ದೊಡ್ಡ ಸಮಾಜಸೇವೆ’ ಎಂದು ಒಬ್ಬ ವೇಶ್ಯೆಯು ಬಹಿರಂಗವಾಗಿ ಹೇಳುವಾಗ ನೀವು ಅದನ್ನು ನಿರಾಕರಣೆ ಮಾಡಲು ಸಾಧ್ಯವೇ ಇಲ್ಲ.

‘ನನಗೆ ಪಾತಿವೃತ್ಯದ ಪಾಠ ಹೇಳಬೇಡಿ. ನಾನು ಪತಿತೆ ಎಂದಾದರೆ ನನ್ನ ಬಳಿ ಬರುವ ಗಂಡಸರು ಗೃಹಸ್ಥರೇನು?’ ಎಂದು ಒಬ್ಬಳು ಪ್ರಶ್ನೆ ಮಾಡುವಾಗ ನಮಗೆ ಏನು ಉತ್ತರ ಕೊಡಲು ಸಾಧ್ಯ ಇದೆ?

‘ರೆಡ್ ಲೈಟ್ ಏರಿಯಾ’ಗಳ ಸಮಸ್ಯೆಗಳು

ಮುಂಬೈ, ಬೆಂಗಳೂರು, ಹೈದರಾಬಾದ್, ಚೆನ್ನೈ, ದೆಹಲಿ ಮೊದಲಾದ ಮಹಾನಗರಗಳಲ್ಲಿ ಇರುವ ರೆಡ್ ಲೈಟ್ ಏರಿಯಾಗಳು ಸಿನಿಮಾದಲ್ಲಿ ತೋರಿಸಿದ ಹಾಗೆ ಕಲರ್‌ಫುಲ್ ಆಗಿರುವುದಿಲ್ಲ. ತೀರಾ ಅನಾರೋಗ್ಯಕರ ವಾತಾವರಣದಲ್ಲಿ ಈ ಸಹೋದರಿಯರು ಉಸಿರುಗಟ್ಟಿ ಬದುಕುತ್ತಾರೆ.

ಕುಡಿದು ಬರುವವರು, ಲಂಪಟರು, ರೋಗಿಗಳು, ವಿಪರೀತ ಜಗಳಗಂಟರು, ವಿಕೃತ ಕಾಮಿಗಳು ಎಲ್ಲರನ್ನೂ ಖುಷಿ ಪಡಿಸುವ ಅವರ ಪಡಿಪಾಟಲು ಬಹು ಕಷ್ಟ. ಹಗಲು ರಾತ್ರಿ ಮೈ ಮರೆಯುವ ಹಾಗೆ ದುಡಿತ. ಮೈ ತುಂಬಾ ಆವರಿಸುವ ಯಾವ್ಯಾವುದೋ ಸಾಂಕ್ರಾಮಿಕ ಕಾಯಿಲೆಗಳು. ಅವರಿಗೆ ಕಾಲ ಕಾಲಕ್ಕೆ ಆರೋಗ್ಯ ಪರೀಕ್ಷೆ ಇಲ್ಲ. ಮಕ್ಕಳು ಹುಟ್ಟಿದರೆ ಆ ಮಗುವಿನ ಅಪ್ಪ ಯಾರು ಎಂದು ಗೊತ್ತಿರುವುದಿಲ್ಲ. ಆ ಮಗುವನ್ನು ಶಾಲೆಗೆ ಕಳುಹಿಸುವ ವ್ಯವಸ್ಥೆ ಇರುವುದಿಲ್ಲ.

ಅವರದ್ದು ನಿಗೂಢ, ಕತ್ತಲೆಯ ಬದುಕು!

ಅವರು ಮಾಡುತ್ತಿರುವ ವೃತ್ತಿಯು ಅವರ ಮನೆಯವರಿಗೆ ಗೊತ್ತಿರುವ ಸಾಧ್ಯತೆ ಇರುವುದಿಲ್ಲ. ಎಲ್ಲಕ್ಕಿಂತ ಕಷ್ಟ ಎಂದರೆ ಅವರು ದುಡಿದ ದುಡ್ಡಿನಲ್ಲಿ ಬಹುಪಾಲು ಮಧ್ಯವರ್ತಿಗಳು ಮತ್ತು ಘರ್‌ವಾಲಿಗಳು ತಿಂದು ಹಾಕುತ್ತಾರೆ. ಮೈ ಹರಡಿ ದುಡಿಯುವ ಮಂದಿಗೆ ಕೆಲವೊಮ್ಮೆ ಒಂದು ಹೊತ್ತಿನ ಊಟವೂ ದೊರೆಯುವುದಿಲ್ಲ!

ಅದರ ಜೊತೆ ಕೆಲವು ಲಂಪಟ ಪೊಲೀಸರ ಕಿರುಕುಳ, ಹಫ್ತಾ ವಸೂಲಿ, ಮೋಸ ಮಾಡುವ ಮಂದಿ ಇವುಗಳಿಂದ ಅವರು ಎದುರಿಸುವ ಸಮಸ್ಯೆಗೆ ಕೊನೆಯೇ ಇರುವುದಿಲ್ಲ. ಇದರಿಂದ ಹೊರಬರಲು ಆಗದೆ ಅವರು ವಿಲವಿಲ ಒದ್ದಾಡುತ್ತಾರೆ. ಹರೆಯ ಸರಿದು ಹೋದಂತೆ ಎದುರಾಗುವ ಅಭದ್ರತೆ ಮತ್ತು ಅತಂತ್ರತೆ ಇವುಗಳಿಂದ ನಲುಗುತ್ತ ಹೋಗುತ್ತಿರುವ ನಮ್ಮ ಸೋದರಿಯರಿಗೆ ಈ ಕೋರ್ಟ್ ಆದೇಶವು ಸ್ವಲ್ಪ ರಿಲೀಫ್ ಕೊಡಬಹುದು.

ಇದನ್ನೂ ಓದಿ: ರಾಜ ಮಾರ್ಗ ಅಂಕಣ : ರಾಕೆಟ್ರಿ ಎಂಬ ಅದ್ಭುತಕ್ಕೆ ರಾಷ್ಟ್ರಪ್ರಶಸ್ತಿ; ನಾವ್ಯಾಕೆ ಈ ಸಿನಿಮಾ ನೋಡಬೇಕು ಅಂದರೆ…?

ಸರಕಾರ ತಕ್ಷಣ ಮಾಡಬೇಕಾದದ್ದು ಏನು?

ಈ ಕೋರ್ಟು ಆದೇಶದ ಆಧಾರದ ಮೇಲೆ ವೇಶ್ಯಾವೃತ್ತಿಯು ಕಾನೂನುಬದ್ಧವಾದ ವೃತ್ತಿಯ ಸ್ಥಾನವನ್ನು ಪಡೆಯುತ್ತದೆ. ಸರಕಾರವು ಲೈಂಗಿಕ ಕರ್ಮಚಾರಿಗಳಿಗೆ ತಕ್ಷಣವೇ ಗುರುತುಪತ್ರಗಳನ್ನು ನೀಡಬೇಕು. ಘರ್‌ವಾಲಿ, ಮಧ್ಯವರ್ತಿ ಹಾಗೂ ಪೊಲೀಸರ ಕಿರುಕುಳಗಳು ತಕ್ಷಣ ನಿಲ್ಲಬೇಕು. ವೇಶ್ಯಾವೃತ್ತಿಯಲ್ಲಿ ಇರುವವರ ಮಕ್ಕಳ ಶಿಕ್ಷಣಕ್ಕೆ ಸರಕಾರವೇ ಮುಂದೆ ನಿಂತು ಉತ್ತಮ ಶಾಲೆಗಳನ್ನು ಕೂಡಲೇ ತೆರೆಯಬೇಕು.

ಅವರ ಆರೋಗ್ಯ ತಪಾಸಣೆಯು ನಿರಂತರ ನಡೆಯಬೇಕು. ಮುಂದೆ ಅವರಿಗೆ ಗ್ರಾಚ್ಯುಟಿ, ಇನ್ಶೂರೆನ್ಸ್‌ ಮೊದಲಾದ ಸೌಲಭ್ಯಗಳು ದೊರೆಯಬೇಕು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಸಮಾಜವು ಅವರನ್ನು ನೋಡುವ ದೃಷ್ಟಿಕೋನವೇ ಬದಲಾಗಬೇಕು. ಅವರ ಅಸ್ಮಿತೆ (ಐಡೆಂಟಿಟಿ)ಯನ್ನು ಗೌರವಿಸುವ ಕೆಲಸಗಳು ನಮ್ಮಿಂದ ಆಗಬೇಕು.

ಈ ಐತಿಹಾಸಿಕ ತೀರ್ಪು ನೀಡಿದ ನಮ್ಮ ಸುಪ್ರೀಂಕೋರ್ಟನ್ನು ಖಂಡಿತವಾಗಿಯೂ ಅಭಿನಂದನೆ ಮಾಡೋಣ. ಏನಂತೀರಿ?

Exit mobile version